Tag: ಆರಣ್ಯ ಇಲಾಖೆ

  • ಜಂಬೂಸವಾರಿ ಮೊದಲೇ ಗಜಪಡೆಯ ಈಶ್ವರ ಆನೆ ಅರಣ್ಯಕ್ಕೆ ವಾಪಸ್

    ಜಂಬೂಸವಾರಿ ಮೊದಲೇ ಗಜಪಡೆಯ ಈಶ್ವರ ಆನೆ ಅರಣ್ಯಕ್ಕೆ ವಾಪಸ್

    ಮೈಸೂರು: ನಗರದ ವಾತಾವರಣಕ್ಕೆ ಹೊಂದಿಕೊಳ್ಳದ ಹಿನ್ನೆಲೆಯಲ್ಲಿ ಗಜಪಡೆಯ ಮೊದಲ ತಂಡದ ಸದಸ್ಯ ಈಶ್ವರ ಆನೆಯನ್ನು ಕಾಡಿಗೆ ಹಿಂದಕ್ಕೆ ಕಳುಹಿಸಲು ನಿರ್ಧರಿಸಿಲಾಗಿದೆ.

    ಇಂದು ನಡೆದ ದಸರಾ ಸಿದ್ಧತಾ ಸಭೆಯಲ್ಲಿ ಈಶ್ವರ ಆನೆ ಬಗ್ಗೆ ಸಚಿವ ಸೋಮಣ್ಣ ಆತಂಕ ವ್ಯಕ್ತಪಡಿಸಿದರು. ನಗರದ ವಾತಾವರಣಕ್ಕೆ ಈಶ್ವರ ಆನೆ ಹೊಂದಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆ ಅರಣ್ಯಾಧಿಕಾರಿಗಳ ಆನೆಯನ್ನು ವಾಪಸ್ ಕಾಡಿಗೆ ಬಿಡಲು ತೀರ್ಮಾನಿಸಿದ್ದಾರೆ. ಈಶ್ವರ ಆನೆ ಬದಲು ಗಜಪಡೆಗೆ ಪರ್ಯಾಯವಾಗಿ ಬೇರೆ ಆನೆ ತರಲು ಅರಣ್ಯಾಧಿಕಾರಿಗಳು ಚಿಂತನೆ ನಡೆಸಿದ್ದಾರೆ.

    ಈಶ್ವರ ಆನೆ ವಿಚಾರವಾಗಿ ಸಾರ್ವಜನಿಕರಿಂದ ದೂರು ಬರುತ್ತಿರುವುದರಿಂದ ಈ ಬಗ್ಗೆ ಸೋಮಣ್ಣ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇಂತಹ ದೂರುಗಳು ಬಂದಾಗ ನಾವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆನೆಯನ್ನು ಬದಲಾಯಿಸಲೇ ಬೇಕಾಗುತ್ತದೆ ಎಂದು ಡಿಸಿಎಫ್(ಅರಣ್ಯ ಉಪ ಸಂರಕ್ಷಣಾಧಿಕಾರಿ) ಅಲೆಕ್ಸಾಂಡರ್ ಅವರು ತಿಳಿಸಿದ್ದಾರೆ. ಭದ್ರತೆ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇದೇ ಮೊದಲ ಬಾರಿಗೆ ಈಶ್ವರ ಆನೆಯನ್ನು ದಸರಾ ಗಜಪಡೆಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ನಗರ ಪ್ರದೇಶದಲ್ಲಿ ಗಜಪಡೆ ತಾಲೀಮು ಆರಂಭಿಸಿದ ದಿನದಿಂದಲೂ ಈಶ್ವರ ಆನೆ ಗಾಬರಿಗೊಳ್ಳುತಿತ್ತು. ಆಗ ವೈದ್ಯರು ಹಾಗೂ ಅಧಿಕಾರಿಗಳು ದಿನ ಕಳೆಯುತ್ತಿದ್ದಂತೆ ಆನೆ ಈ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಪ್ರತಿದಿನ ತಾಲೀಮು ಮಾಡುತ್ತಿರುವಾಗಲೂ ಈಶ್ವರ ಆನೆ ನಗರದ ವಾತಾವರಣಕ್ಕೆ ಬೆಚ್ಚಿಬೀಳುತ್ತಿತ್ತು. ಹೊಸ ವಾತಾವರಣಕ್ಕೆ ಅದು ಹೊಂದಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಈಶ್ವರ ಆನೆಯನ್ನು ವಾಪಸ್ ಅರಣ್ಯಕ್ಕೆ ಕಳುಹಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

    https://www.youtube.com/watch?v=ZSV-6_HpYQk

  • ಹಾಸನದಲ್ಲಿ ಆಪರೇಷನ್ ಎಲಿಫೆಂಟ್ ಆರಂಭ

    ಹಾಸನದಲ್ಲಿ ಆಪರೇಷನ್ ಎಲಿಫೆಂಟ್ ಆರಂಭ

    ಹಾಸನ: ಜಿಲ್ಲೆಯ ಅಡವಿಬಂಟೇನಹಳ್ಳಿಯಲ್ಲಿ ಕಾಡಿನಿಂದ ನಾಡಿಗೆ ಬಂದಿರುವ ಒಂಟಿ ಸಲಗವನ್ನು ಸೆರೆಹಿಡಿಯಲು ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆ ಆರಂಭವಾಗಿದೆ.

    ಹಾಸನ ನಗರ ಹಾಗೂ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಣಿಸಿಕೊಂಡ ಆನೆ ಅಲ್ಲಿನ ಜನರಿಗೆ ಆತಂಕ ಹುಟ್ಟಿಸಿತ್ತು. ಕಳೆದ ಒಂದು ತಿಂಗಳಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಒಂಟಿ ಸಲಗವನ್ನು ಸೆರೆಹಿಡಿದು ಕಾಡಿಗಟ್ಟಲು ಕಾರ್ಯಾಚರಣೆ ಆರಂಭವಾಗಿದೆ.

    ಸಲಗನ ಸೆರೆಗೆ ಅನುಮತಿ ಸಿಕ್ಕ ಕೂಡಲೇ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಪ್ರಾರಂಭ ಮಾಡಿದ್ದು, ಅಭಿಮನ್ಯು, ಕೃಷ್ಣ, ಅಜೇಯ, ವಿಕ್ರಂ ಮತ್ತು ಹರ್ಷ ಎಂಬ ಐದು ಸಾಕಾನೆಗಳೊಂದಿಗೆ ಇಲಾಖೆ ಸಿಬ್ಬಂದಿ ಸೇರಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸಾಕಾನೆಗಳನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ.

  • ಅರಣ್ಯ ಪ್ರದೇಶ ಗಡಿ ಭಾಗದಲ್ಲಿ ಆನೆಗಳು ಪ್ರತ್ಯಕ್ಷ- ಅಪಾರ ಬೆಳೆ ನಾಶ

    ಅರಣ್ಯ ಪ್ರದೇಶ ಗಡಿ ಭಾಗದಲ್ಲಿ ಆನೆಗಳು ಪ್ರತ್ಯಕ್ಷ- ಅಪಾರ ಬೆಳೆ ನಾಶ

    ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ಪ್ರದೇಶದಲ್ಲಿ ಮತ್ತೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಟೊಮಾಟೋ, ಪಪ್ಪಾಯ, ಬೀನ್ಸ್, ಭತ್ತ ಸೇರಿದಂತೆ ರೈತರ ಪಂಪು ಮೋಟಾರ್, ಗುಡಿಸಲುಗಳನ್ನು ಧ್ವಂಸ ಮಾಡಿವೆ.

    ಶುಕ್ರವಾರ ರಾತ್ರಿ ರೈತರ ತೋಟಗಳ ಮೇಲೆ ದಾಳಿ ಮಾಡಿರುವ 6 ಆನೆಗಳ ಹಿಂಡು ನೂರಾರು ಎಕರೆ ಪ್ರದೇಶದ ವಿವಿಧ ಬೆಳೆಗಳನ್ನು ನಾಶ ಮಾಡಿವೆ. ಪ್ರತಿ ವರ್ಷ ಕಾಡಾನೆ ಹಾವಳಿ ಹೆಚ್ಚಾಗುತ್ತಲಿದ್ದು, ಆಹಾರ-ನೀರು ಹರಸಿ ನಾಡಿನತ್ತ ಆನೆಗಳ ಹಿಂಡು ಹೆಜ್ಜೆ ಹಾಕುತ್ತಲಿವೆ. ಇದರಿಂದ ಅರಣ್ಯ ಪ್ರದೇಶದ ಗಡಿಭಾಗದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಜೊತೆಗೆ ಲಕ್ಷಾಂತರ ರೂಪಾಯಿ ಬೆಳೆಗಳನ್ನು ಕಳೆದುಕೊಳ್ಳುವಂತಾಗಿದೆ. ಇದರಿಂದ ರೈತರಿಗೆ ಪರಿಹಾರವೂ ಸಿಗದೆ, ರಕ್ಷಣೆಯೂ ಇಲ್ಲದಾಗಿದೆ.

    ಪ್ರಮುಖವಾಗಿ ಜಿಲ್ಲೆಯ ಗಡಿ ಪ್ರದೇಶವಾದ ಬಂಗಾರಪೇಟೆ ತಾಲೂಕಿನ ಆಂಧ್ರ ಗಡಿಯ ಚಿಕ್ಕಕಳವಂಚಿ, ತೊಪ್ಪನಹಳ್ಳಿ, ಕದರಿನತ್ತ ಗ್ರಾಮಗಳ ಬಳಿ ಸುಮಾರು ಆರು ಆನೆಗಳ ಹಿಂಡು ಕಳೆದ 15 ದಿನಗಳಿಂದ ಬೀಡು ಬಿಟ್ಟಿವೆ. ರಾಮಕುಪ್ಪಂ ಹಾಗೂ ಕೃಷ್ಣಗಿರಿ ಅರಣ್ಯ ಪ್ರದೇಶದಿಂದ ಬಂದಿರುವ ಈ ಆನೆಗಳ ಹಿಂಡು ಕರ್ನಾಟಕದ ಗಡಿ ಭಾಗದ ಜನರ ನಿದ್ದೆಗೆಡಿಸಿವೆ.

    ಜಿಲ್ಲೆಯ ಗಡಿಭಾಗವಾದ ಕಾಮಸಮುದ್ರಂ ಪ್ರದೇಶ ಸುತ್ತಮುತ್ತ ಸಾವಿರಾರು ಹೆಕ್ಟೇರು ಅರಣ್ಯ ಪ್ರದೇಶವಿದೆ. ಈ ಅರಣ್ಯ ಪ್ರದೇಶ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ಅರಣ್ಯಕ್ಕೆ ಸಂಪರ್ಕ ಹೊಂದಿದೆ. ಹೀಗಾಗಿ ಈ ಭಾಗದಲ್ಲಿ ಇದೀಗ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಪ್ರತಿ ವರ್ಷ ನೂರಾರು ಆನೆಗಳು ಇಲ್ಲಿಗೆ ಆಹಾರ ನೀರಿಗಾಗಿ ವಲಸೆ ಬರುತ್ತಿದ್ದು, ಆನೆಗಳಿಂದಾಗಿ ರೈತರು ಬೆಳೆದ ಬೆಳೆಗಳ ಜೊತೆಗೆ ರೈತರು ಸಾವನ್ನಪ್ಪಿರುವ ಘಟನೆಗಳು ಸಂಭವಿಸಿದೆ.

    ಆನೆ ಹಿಂಡನ್ನು ಕಾಡಿಗಟ್ಟಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ, ಪಟಾಕಿ, ಸಿಡಿ ಮದ್ದುಗಳನ್ನು ಬಳಸಿಕೊಂಡು ಹಗಲು ರಾತ್ರಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಕಾಡಾನೆಗಳ ದಾಳಿಯಿಂದ ರೈತರು ಕಳೆದುಕೊಂಡ ನೂರಾರು ಎಕರೆ ಬೆಳೆಗೆ ಪರಿಹಾರ ನೀಡಿ, ಸರ್ಕಾರ ಸಹಾಯಹಸ್ತವನ್ನು ಚಾಚಬೇಕು. ಅಲ್ಲದೇ ಆನೆ ಕಾರಿಡಾರ್ ನಿರ್ಮಾಣ ಮಾಡಿ, ಈ ಭಾಗದ ಜನರಿಗೆ ನೆಮ್ಮದಿ ಕಲ್ಪಿಸಬೇಕಾಗಿದೆ ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.