Tag: ಆಯೋಧ್ಯೆ

  • ರಾಮ ಮಂದಿರ ನಿರ್ಮಾಣ ಕುರಿತು ಬಿಜೆಪಿ ಸುಗ್ರೀವಾಜ್ಞೆ ಹೊರಡಿಸಲಿ – ಓವೈಸಿ ಸವಾಲು

    ರಾಮ ಮಂದಿರ ನಿರ್ಮಾಣ ಕುರಿತು ಬಿಜೆಪಿ ಸುಗ್ರೀವಾಜ್ಞೆ ಹೊರಡಿಸಲಿ – ಓವೈಸಿ ಸವಾಲು

    ನವದೆಹಲಿ: ರಾಮಮಂದಿರ ನಿರ್ಮಾಣದ ಕುರಿತು ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಯಾಕೆ ಸುಗ್ರೀವಾಜ್ಞೆ ಹೊರಡಿಸಬಾರದು ಎಂದು ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.

    ಆಯೋಧ್ಯೆ ಕುರಿತು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಜನವರಿಗೆ ಮುಂದೂಡಿದ ಆದೇಶದ ಬಳಿಕ ಓವೈಸಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಪ್ರತಿ ಬಾರಿಯೂ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೆಸರು ಹೇಳುವ ಮೂಲಕ ಹೆದರಿಸುವ ಕಾರ್ಯ ಮಾಡುತ್ತಿದೆ ಎಂದು ದೂಷಿಸಿದರು.

    ಬಿಜೆಪಿ, ಆರ್‍ಎಸ್‍ಎಸ್ ಮತ್ತು ವಿಶ್ವ ಹಿಂದೂ ಪರಿಷತ್ ಗಳನ್ನು ಕಾರ್ಟೂನ್ ಪಾತ್ರಗಳಾದ ಟಾಮ್, ಡಿಕ್ ಮತ್ತು ಹ್ಯಾರಿಗೆ ಹೋಲಿಕೆ ಮಾಡಿರುವ ಓವೈಸಿ, ಸದ್ಯ ನೀವು ಅಧಿಕಾರದಲ್ಲಿದ್ದು, ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕುರಿತು ಸುಗ್ರೀವಾಜ್ಞೆ ಹೊರಡಿಸಿ ಎಂದು ಸವಾಲು ಎಸೆದರು.

    ಪ್ರತಿ 5 ವರ್ಷಕ್ಕೆ ಒಮ್ಮೆ ರಾಮಮಂದಿರ ಕುರಿತ ಈ ಪ್ರಕ್ರಿಯೆ ಸಾಮಾನ್ಯವಾಗಿದೆ. ಬಿಜೆಪಿ ರಾಮಮಂದಿರ ನಿರ್ಮಾಣ ಕುರಿತು ಇರುವ ಜನರ ಭಾವನೆಗಳನ್ನು ಕೇಂದ್ರಿಕರಿಸಲು ಪ್ರಯತ್ನಿಸುತ್ತಿದೆ. ಆದರೆ ರಾಮಮಂದಿರ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಮುನ್ನವೇ ಕಾಂಗ್ರೆಸ್ ಪಕ್ಷ ವಿವಾದದ ಕುರಿತು ಸ್ಪಷ್ಟ ನಿರ್ಣಯ ಕೈಗೊಂಡಿತ್ತು. ಸದ್ಯ ಎಲ್ಲರೂ ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯಬೇಕಿದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಪಿ ಚಿದಂಬರಂ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೋಕಸಭಾ ಚುನಾವಣೆಗೆ ಮೊದಲೇ ಆಯೋಧ್ಯೆ ತೀರ್ಪು ಬರೋದು ಅನುಮಾನ

    ಲೋಕಸಭಾ ಚುನಾವಣೆಗೆ ಮೊದಲೇ ಆಯೋಧ್ಯೆ ತೀರ್ಪು ಬರೋದು ಅನುಮಾನ

    ನವದೆಹಲಿ: ಲೋಕಸಭಾ ಚುನಾವಣೆಗೂ ಮುನ್ನವೇ ಆಯೋಧ್ಯೆ ಭೂ ವಿವಾದ ತೀರ್ಪು ಪ್ರಕಟವಾಗುವುದು ಅನುಮಾನವಾಗಿದೆ. 2010 ರಲ್ಲಿ ಅಯೋಧ್ಯೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿಗೆ ಮುಂದೂಡಿದೆ.

    ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಾಯ್, ನ್ಯಾ. ಎಸ್‍ಕೆ ಕೌಲ್, ಕೆಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ಅರ್ಜಿಯ ವಿಚಾರಣೆ ನಡೆಸಿತು. ನಮಗೆ ನಮ್ಮದೇ ಆದ ಆಧ್ಯತೆಗಳಿವೆ ಎಂದು ಎಂದು ತಿಳಿಸಿರುವ ಪೀಠ ಜನವರಿ, ಫೆಬ್ರವರಿ ಅಥವಾ ಮೇನಲ್ಲೂ ವಿಚಾರಣೆ ನಡೆಸಬಹುದಾಗಿದ್ದು, ಈ ವೇಳೆಯೇ ಅಯೋಧ್ಯೆ ಬಗ್ಗೆ ಪ್ರತಿನಿತ್ಯ ವಿಚಾರಣೆ ನಡೆಬೇಕೇ? ಬೇಡವೇ ಎನ್ನುವ ಬಗ್ಗೆ ತೀರ್ಮಾನ ಅಂದೇ ತೆಗೆದುಕೊಳ್ಳಲಿದೆ.

    ಮೇಲ್ಮನವಿ ಅರ್ಜಿಗಳ ಶೀಘ್ರ ವಿಚಾರಣೆ ಸಾಧ್ಯವಿಲ್ಲ. ಆಯೋಧ್ಯೆ ಪ್ರಕರಣ ಜನರ ಭಾವನೆಗೆ ಸಂಬಂಧಿಸಿದ್ದು, ಈ ಕುರಿತು ತ್ವರಿತ ನಿರ್ಣಯ ಕೈಗೊಳ್ಳುವುದು ಕಷ್ಟಸಾಧ್ಯ ಎಂದು ಪೀಠ ಅಭಿಪ್ರಾಯ ಪಟ್ಟಿದೆ.

    ಒಂದು ವೇಳೆ ರಾಮ ಮಂದಿರ ಪರವಾಗಿ ತೀರ್ಪು ಬಂದರೆ ಆಯೋಧ್ಯೆ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಕನಸು ಕಂಡಿದ್ದ ಬಿಜೆಪಿ ಸುಪ್ರೀಂನ ಈ ಆದೇಶದಿಂದ ಭಾರೀ ಹಿನ್ನಡೆಯಾಗಿದೆ. ಈ ಹಿಂದೆ ಲೋಕಸಭೆ ಚುನಾವಣೆಗೂ ಮೊದಲೇ ಆಯೋಧ್ಯೆ ತೀರ್ಪು ಪ್ರಕಟ ಮಾಡುವುದು ಬೇಡ ಎಂದು ಕಾಂಗ್ರೆಸ್ ಮುಖಂಡ, ವಕೀಲ ಕಪಿಲ್ ಸಿಬಲ್ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ಈ ಹಿಂದೆ ಸುಪ್ರೀಂ ವಜಾಗೊಳಿಸಿತ್ತು.

    ನಮಾಜ್ ಮಾಡಲು ಮಸೀದಿಯೇ ಬೇಕಾಗಿಲ್ಲ ಎಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಪ್ರಕರಣವನ್ನೇ ಪ್ರಸ್ತಾಪಿಸಿದ ಅರ್ಜಿದಾರರು ಆಯೋಧ್ಯ ಪ್ರಕರಣವನ್ನು ಪ್ರತಿದಿನ ವಿಚಾರಣೆ ಮಾಡುವಂತೆ ವಾದ ಮಂಡಿಸಿದ್ದರು. ಅಲ್ಲದೇ ಈ ಅರ್ಜಿಗಳು ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಅವಧಿಯಲ್ಲೇ ಸಲ್ಲಿಕೆಯಾಗಿತ್ತು. ಆದರೆ ನಿವೃತ್ತಿಯ ಅಂಚಿನಲ್ಲಿದ್ದ ಕಾರಣ ಅವರು ಈ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಂಡಿರಲಿಲ್ಲ. ಹೀಗಾಗಿ ಈ ಅರ್ಜಿಯ ವಿಚಾರಣೆಯನ್ನು ರಂಜನ್ ಗೊಗಾಯ್ ತೆಗೆದುಕೊಂಡಿದ್ದರು.

    ದೀರ್ಘ ರಜೆ: ದೀಪಾವಳಿ, ಕಿಸ್ಮಸ್, ಹೊಸ ವರ್ಷದ ರಜೆ ಇರುವ ಕಾರಣ ಇಂದಿನಿಂದ ಆರಂಭಗೊಂಡು 2019ರ ಜನವರಿ 1ರ ವರೆಗೆ ಒಟ್ಟು 27 ದಿನ ಮಾತ್ರ ಕೋರ್ಟ್ ಕಲಾಪ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2019 ಲೋಕಸಭಾ ಚುನಾವಣೆ ವೇಳೆಗೆ ರಾಮಮಂದಿರ ನಿರ್ಮಾಣ ಆರಂಭ – ಶಾ ವಿರುದ್ಧ ಓವೈಸಿ ವಾಗ್ದಾಳಿ

    2019 ಲೋಕಸಭಾ ಚುನಾವಣೆ ವೇಳೆಗೆ ರಾಮಮಂದಿರ ನಿರ್ಮಾಣ ಆರಂಭ – ಶಾ ವಿರುದ್ಧ ಓವೈಸಿ ವಾಗ್ದಾಳಿ

    ಹೈದರಾಬಾದ್: 2019ರ ಲೋಕಾಸಭಾ ಚುನಾವಣೆ ವೇಳೆಗೆ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ ಮಾಡುವ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಈ ಹೇಳಿಕೆ ವಿರುದ್ಧ ಸದ್ಯ ಓವೈಸಿ ವಾಗ್ದಾಳಿ ನಡೆಸಿದ್ದು, 2019ರ ಬಳಿಕ ಈ ತೀರ್ಪು ನೀಡಲು ಹೇಳಿದೆ.

    ತೆಲಂಗಾಣ ಪ್ರವಾಸ ಕೈಗೊಂಡಿದ್ದ ಅಮಿತ್ ಶಾ ಅವರು, ಹೈದರಾಬಾದ್ ನಲ್ಲಿ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಹೇಳಿಕೆ ನೀಡಿದ್ದರು ಎಂದು ವರದಿಯಾಗಿತ್ತು. ಆದರೆ ಈ ಬಳಿಕ ಮಾಧ್ಯಮ ವರದಿಗಳನ್ನು ತಿರಸ್ಕರಿಸಿದ ಬಿಜೆಪಿ ಇಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ತಿಳಿಸಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿತ್ತು.

    ತೆಲಂಗಾಣದಲ್ಲಿ ನಡೆದ ಪಕ್ಷದ ನಾಯಕರ ಸಭೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಅಮಿತ್ ಶಾ ಯಾವುದೇ ಹೇಳಿಕೆ ನೀಡಿಲ್ಲ. ಅಂತಹ ಅಜೆಂಡಾದ ಚಿಂತನೆಯೂ ನಮ್ಮಲ್ಲಿ ಇಲ್ಲ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದೆ.

    ಸದ್ಯ ಬಿಜೆಪಿ ಸ್ಪಷ್ಟನೆ ನಡುವೆಯೇ ರಾಮಮಂದಿರ ನಿರ್ಮಾಣ ಹೇಳಿಕೆ ಕುರಿತು ಅಸಮಾಧಾನ ಹೊರ ಹಾಕಿರುವ ಎಐಎಂಐಎಂ (ಆಲ್ ಇಂಡಿಯನ್ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ) ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿ, ಸದ್ಯ ರಾಮ ಮಂದಿರ ನಿರ್ಮಾಣದ ಪ್ರಕರಣ ವಿಚಾರಣೆ ಸುಪ್ರೀ ಕೋರ್ಟ್ ನಲ್ಲಿದ್ದು, ಅಮಿತ್ ಶಾ ಅವರು ಲೋಕಸಭಾ ಚುನಾವಣೆಗೂ ಮುನ್ನವೇ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ಅದ್ದರಿಂದ ನ್ಯಾಯೋಚಿತ ಚುನಾವಣೆ ನಡೆಸಲು ಪ್ರಕರಣದ ಕುರಿತ ತೀರ್ಪು ಲೋಕಸಭಾ ಚುನಾವಣೆಗೂ ಬಳಿಕ ಬಂದರೆ ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ.

    ಸದ್ಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಕಪಿಲ್ ಸಿಬಲ್ ಸೇರಿದಂತೆ ಹಲವು ಪಕ್ಷಗಳ ನಾಯಕರು ಸಹ ರಾಮ ಮಂದಿರ ಕುರಿತ ತೀರ್ಪು ಚುನಾವಣೆಯ ಬಳಿಕ ಪ್ರಕಟಗೊಂಡರೆ ಉತ್ತಮ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರ ನಡುವೆಯೇ ಮುಸ್ಲಿಂ ಶಿಯಾ ವಕ್ಫ್ ಬೋರ್ಡ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಬೇಕೇ ಹೊರತು ಮಸೀದಿ ಅಲ್ಲ, ರಾಮ ಮಂದಿರ ವಿವಾದವನ್ನು ಶಾಂತಿಯುವಾಗಿ ಬಗೆಹರಿಸಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಗೆ ಶುಕ್ರವಾರ ತಿಳಿಸಿದೆ.

  • ತಾಳ್ಮೆಯಿಂದಿರಿ, ಲೋಕಸಭಾ ಚುನಾವಣೆಯೊಳಗೆ ರಾಮಮಂದಿರ ನಿರ್ಮಾಣಕ್ಕೆ ಬದ್ಧ: ಯೋಗಿ ಆದಿತ್ಯನಾಥ್

    ತಾಳ್ಮೆಯಿಂದಿರಿ, ಲೋಕಸಭಾ ಚುನಾವಣೆಯೊಳಗೆ ರಾಮಮಂದಿರ ನಿರ್ಮಾಣಕ್ಕೆ ಬದ್ಧ: ಯೋಗಿ ಆದಿತ್ಯನಾಥ್

    ಲಕ್ನೋ: ಮುಂಬರುವ ಲೋಕಸಭಾ ಚುನಾವಣೆಯೊಳಗೆ ರಾಮಮಂದಿರ ನಿರ್ಮಾಣ ಮಾಡುವುದಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

    ಸೋಮವಾರ ಅಯೋಧ್ಯೆಯಲ್ಲಿ ನಡೆದ `ಸಂತ ಸಮ್ಮೇಳನದಲ್ಲಿ’ ಪಾಲ್ಗೊಂಡ ಅವರು, 2019ರ ಲೋಕಸಭಾ ಚುನಾವಣೆಯೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತದೆ. ನಾವು ಪ್ರಪಂಚದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ನ್ಯಾಯಾಂಗ, ಶಾಸಕಾಂಗ ತಮ್ಮದೇ ಆದ ಅಧಿಕಾರವನ್ನು ಹೊಂದಿವೆ. ಆದ್ದರಿಂದ ಇವುಗಳನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಚುನಾವಣೆಯೊಳಗೆ ರಾಮಮಂದಿರ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ. ಸಾಧು-ಸಂತರು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಡಿ ಎಂದು ಹೇಳಿದ್ದಾರೆ.

    ಮರ್ಯಾದಾ ಪುರುಷೋತ್ತಮ ಶ್ರೀರಾಮ ಬ್ರಹ್ಮಾಂಡದ ಒಡೆಯನಾಗಿದ್ದಾನೆ. ಅವನ ದಯೆಯಿಂದ ಅಯೋಧ್ಯೆಯಲ್ಲಿ ರಾಮಮಂದಿರ ಶತಸಿದ್ಧ. ಇದರ ಬಗ್ಗೆ ಯಾವುದೇ ಗೊಂದಲವಿಲ್ಲ. ಈ ಬಗ್ಗೆ ಸಾಧು-ಸಂತರಲ್ಲಿ ಅನುಮಾನವಿದ್ದು, ಪ್ರಪಂಚವು ಆಶಾವಾದದ ಮೇಲೆ ನಿಂತಿದೆ. ಆದ್ದರಿಂದ ಎಲ್ಲರೂ ಸ್ವಲ್ಪ ಸಮಯದವರೆಗೆ ತಾಳ್ಮೆ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸ ಪ್ರಕರಣ – ಅಡ್ವಾಣಿ, ಉಮಾಭಾರತಿ ಸೇರಿ 12 ಮಂದಿಗೆ ಜಾಮೀನು

    ಬಿಜೆಪಿಯ ಮಾಜಿ ಸಂಸದ ರಾಮ್ ವಿಲಾಸ್ ವೆಂದಾತಿಯವರು ಹೇಳಿದ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಮೊಗಲ್ ಚಕ್ರವರ್ತಿ ಬಾಬರನು ಯಾವುದೇ ಹಿಂದೂ ದೇವಾಲಯಗಳನ್ನು ಕೆಡವಲು ಯಾವ ನ್ಯಾಯಾಲಯಗಳ ಅಪ್ಪಣೆ ಕೇಳಿದ್ದಿಲ್ಲ. ಹೀಗಾಗಿ ನ್ಯಾಯಾಲಯದ ಅಪ್ಪಣೆ ಕೇಳದೆ 1992ರಲ್ಲಿ ಬಾಬ್ರಿ ಮಸೀದಿಯನ್ನು ಒಡೆದು ಹಾಕಲಾಗಿದೆ. ಅಲ್ಲದೇ ಸ್ಥಳದಲ್ಲಿ ಸಿಕ್ಕ ರಾಮನ ಮೂರ್ತಿಯಿಂದ ಪ್ರೇರೇಪಣೆಗೊಂಡು ಒಂದೇ ದಿನದಲ್ಲಿ ದೇವಾಲಯ ನಿರ್ಮಾಣಕ್ಕೆ ಮುಂದಾದ ವಿಚಾರವನ್ನು ಪ್ರಸ್ತಾಪಿಸಿದ್ರು. ಇದನ್ನೂ ಓದಿ: ಮೋದಿ ಸರ್ಕಾರದ ಅವಧಿ ಪೂರ್ಣವಾಗುವ ಮೊದಲೇ ರಾಮ ಮಂದಿರ ನಿರ್ಮಾಣ!

    ಇದೇ ವೇಳೆ ವಿಶ್ವ ಹಿಂದೂ ಪರಿಷತ್ ರಾಮ ಮಂದಿರ ನಿರ್ಮಾಣ ಕುರಿತು ಪ್ರಸ್ತಾಪಿಸಿ, ಮುಂದಿನ ಮೂರ್ನಾಲ್ಕು ತಿಂಗಳುಗಳಲ್ಲಿ ರಾಮ ಮಂದಿರ ವಿಚಾರವಾಗಿ ಸುಪ್ರೀಂ ಕೋರ್ಟ್ ಯಾವುದೇ ತೀರ್ಮಾನ ತೆಗೆದುಕೊಳ್ಳದಿದ್ದರೆ, ಭವಿಷ್ಯದ ಉಳಿವಿಗಾಗಿ ಮತ್ತೊಮ್ಮೆ ರಾಮಮಂದಿರ ನಿರ್ಮಾಣ ಚಳುವಳಿಯನ್ನು ಪ್ರಾರಂಭಿಸಬೇಕೆಂದು ಸಾಧು-ಸಂತರಿಗೆ ಕರೆ ನೀಡಿದ್ರು. ಇದೇ ಗುರುವಾರ ರಾಮಮಂದಿರ ಹಾಗೂ ಬಾಬ್ರಿ ಮಸೀದಿ ಪ್ರಕರಣಕ್ಕೆ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ಮುಂದುವರೆಯಲಿದೆ. ಈ ಮೊದಲು ನಡೆದ ವಿಚಾರಣೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಶಂಕೆ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ಮುಖಂಡರುಗಳಾದ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಹಾಗೂ ಇನ್ನೂ ಅನೇಕ ಮುಖಂಡರನ್ನು ಕೋರ್ಟ್ ವಿಚಾರಣೆ ನಡೆಸಿತ್ತು. ಇದನ್ನೂ ಓದಿ:ರಾಮಮಂದಿರ ಕಟ್ಟೋವರೆಗೂ ನಿದ್ರಿಸಬೇಡಿ, ನಾನೂ ನಿದ್ರಿಸಲ್ಲ- ಪೇಜಾವರ ಶ್ರೀ

  • ಮೋದಿ ಸರ್ಕಾರದ ಅವಧಿ ಪೂರ್ಣವಾಗುವ ಮೊದಲೇ ರಾಮ ಮಂದಿರ ನಿರ್ಮಾಣ!

    ಮೋದಿ ಸರ್ಕಾರದ ಅವಧಿ ಪೂರ್ಣವಾಗುವ ಮೊದಲೇ ರಾಮ ಮಂದಿರ ನಿರ್ಮಾಣ!

    ಉಡುಪಿ/ಮೈಸೂರು: ಮೋದಿ ಸರ್ಕಾರದ ಅವಧಿ ಮುಗಿಯುವ ಮೊದಲೇ ರಾಮಮಂದಿರ ನಿರ್ಮಾಣ ಮಾಡಬೇಕು ಎನ್ನುವ ನಿರ್ಣಯವನ್ನು ಧರ್ಮ ಸಂಸದ್ ನಲ್ಲಿ ಕೈಗೊಳ್ಳಲಾಗಿದೆ.

    ಆಯೋಧ್ಯೆಯಲ್ಲಿ ರಾಮಮಂದಿರಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗಿದೆ. ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಹೀಗಾಗಿ 2019 ರ ಒಳಗಡೆ ರಾಮಮಂದಿರ ನಿರ್ಮಾಣವಾಗಬೇಕು ಎನ್ನುವ ನಿರ್ಧಾರವನ್ನು ಈ ಧರ್ಮಸಂಸದ್ ನಲ್ಲಿ ಕೈಗೊಳ್ಳಲಾಗಿದೆ ಎಂದು ವಿಎಚ್‍ಪಿ ಮೂಲಗಳು ತಿಳಿಸಿವೆ.

    ರಾಮಮಂದಿರ ನಿರ್ಮಾಣವಾಗಲಿರುವುದರಿಂದಲೇ ಮುಂದಿನ ಧರ್ಮ ಸಂಸದ್ ಆಯೋಧ್ಯೆಯನ್ನು ನಡೆಸಲು ವಿಎಚ್‍ಪಿ ಈಗಾಗಲೇ ನಿಶ್ಚಯಿಸಿದೆ. ರಾಮಮಂದಿರಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾದ ಹಿನ್ನೆಲೆಯಲ್ಲಿ 2019 ರ ಒಳಗಡೆ ಮಂದಿರ ನಿರ್ಮಾಣವಾಗಬೇಕೆಂಬ ಅಭಿಪ್ರಾಯ ಈ ಧರ್ಮ ಸಂಸದ್‍ನಲ್ಲಿ ವ್ಯಕ್ತವಾಗಿದೆ.

    ಈಗಾಗಲೇ ಹೋರಾಟಗಳು ಪೂರ್ಣವಾಗಿದ್ದು, ಈಗ ಅಂತಿಮ ಹೋರಾಟದಲ್ಲಿ ಇದ್ದೇವೆ. ಇಂತಹ ಸಂದರ್ಭದಲ್ಲಿ ಜಾತಿ, ಮತದ ಭೇದ ಬಿಟ್ಟು, ಎಲ್ಲರೂ ಒಟ್ಟಾಗಿ ರಾಮನ ಸೈನಿಕರಾಗಿ ಮುಂದುವರಿಯಬೇಕು ಎಂದು ಚಿನ್ಮಯಾನಂದಜಿ ಮಹಾರಾಜ್ ತಿಳಿಸಿದ್ದರು.

    4 ತಿಂಗಳಿನಲ್ಲಿ ಪ್ರಕರಣ ಇತ್ಯರ್ಥ: ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ವಿರಾಟ್ ಹಿಂದೂಸ್ಥಾನ್ ಸಂಗಮ ಸಂಘಟನೆ ಶನಿವಾರ ಆಯೋಜಿಸಿದ್ದ ರಾಮಮಂದಿರ ಮುಂದಿನ ನಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಬಿಜೆಪಿ ಮುಖಂಡ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ಮುಂದಿನ 4 ತಿಂಗಳಲ್ಲಿ ಸುಪ್ರೀಂಕೋರ್ಟ್ ನಲ್ಲಿ ರಾಮಮಂದಿರ ಪ್ರಕರಣ ಇತ್ಯರ್ಥವಾಗಲಿದೆ ಎಂದು ಹೇಳಿದ್ದಾರೆ.

    ಮುಂದಿನ ದೀಪಾವಳಿ ವೇಳೆಗೆ ಸುಪ್ರೀಂಕೋರ್ಟ್ ಆದೇಶ ಬರಲಿದೆ. ಬಹುಶಃ ರಾಮಮಂದಿರ ನಿರ್ಮಾಣ ವಿಷಯವನ್ನು ದೀಪಾವಳಿಯಲ್ಲಿ ಆಚರಿಸಬಹುದು. ಜನವರಿ ಫೆಬ್ರವರಿಯಲ್ಲಿ ನ್ಯಾಯಾಲಯದಲ್ಲಿ ನಡೆಯುವ ನನ್ನ ವಾದ ಬರಿ ಉತ್ತರವಾಗುವುದಿಲ್ಲ. ರಾಮಮಂದಿರಕ್ಕಾಗಿ ಅದು ನನ್ನ ಬ್ರಹ್ಮಾಸ್ತ್ರ ಎಂದು ತಿಳಿಸಿದರು.

    ಅಯೋಧ್ಯೆಯಲ್ಲಿ 21 ಮಸೀದಿಗಳಿವೆ. ಅಲ್ಲಿಗೆ ಯಾರು ಸಹ ನಮಾಜ್ ಮಾಡಲು ಹೋಗುವುದೇ ಇಲ್ಲ. ಆದರೆ ರಾಮಮಂದಿರ ಇದ್ದ ಜಾಗದಲ್ಲಿ ಮಾತ್ರ ನಮಾಜ್‍ಗೆ ಹೋಗುತ್ತಾರೆ. ರಾಮಮಂದಿರ ಇದ್ದ ಜಾಗದಲ್ಲಿ ದೇವಾಲಯ ಇತ್ತು ಅಂತ ಸಾಕ್ಷಿಗಳೇ ಹೇಳಿವೆ. ದಾಖಲೆಗಳೇ ರಾಮಮಂದಿರವನ್ನು ಉಳಿಸಿಕೊಂಡಿದೆ ಎಂದು ಹೇಳಿದರು.

    ದೇವಾಲಯ ಹಾಗೂ ಮಸೀದಿ ಒಂದೇ ಅಲ್ಲ. ಮಸೀದಿಯಲ್ಲಿ ಮಾತ್ರ ನಮಾಜ್ ಮಾಡಬೇಕೆಂದಿಲ್ಲ. ನಮಾಜ್ ಅನ್ನು ಎಲ್ಲಿ ಬೇಕಾದರೂ ಮಾಡಬಹುದು. ಇಸ್ಲಾಮ್ ನಲ್ಲಿ ನಮಾಜ್‍ಗೆ ಕಡ್ಡಾಯ ಸ್ಥಳ ನಿಗದಿ ಮಾಡಿಲ್ಲ. ರಸ್ತೆ, ಏರ್ ಪೋರ್ಟ್, ಕೋಣೆ ಎಲ್ಲಿ ಬೇಕಾದರೂ ಮಾಡಬಹುದು. ಆದರೆ ದೇವರನ್ನ ಎಲ್ಲಿ ಬೇಕಾದರೂ ಪೂಜಿಸಲು ಆಗುವುದಿಲ್ಲ ಎಂದರು.

    ಈ ಕಾರ್ಯಕ್ರಮದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ, ಹಿಂದೂ ಮುಖಂಡ ಜಗದೀಶ್ ಶೆಟ್ಟಿ. ಮಾಜಿ ರಾಮದಾಸ್, ನಟಿ ಮಾಳವಿಕ ಭಾಗಿಯಾಗಿದ್ದರು.

     

     

     

     

  • ಧರ್ಮ ಸಂಸದ್ ನಲ್ಲಿ ರಾಮಮಂದಿರ ಬಗ್ಗೆ ಚರ್ಚೆ ಆಗುತ್ತಾ: ತೊಗಾಡಿಯಾ ಹೇಳಿದ್ದು ಹೀಗೆ

    ಧರ್ಮ ಸಂಸದ್ ನಲ್ಲಿ ರಾಮಮಂದಿರ ಬಗ್ಗೆ ಚರ್ಚೆ ಆಗುತ್ತಾ: ತೊಗಾಡಿಯಾ ಹೇಳಿದ್ದು ಹೀಗೆ

    ಮಂಗಳೂರು: ನಗರದಲ್ಲಿ ನಡೆಯಲಿರುವ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕುರಿತು ಚರ್ಚೆಯಾಗಲಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಪ್ರತಿಕ್ರಿಯಿಸಿದ್ದಾರೆ.

    ಮೂರು ದಿನಗಳ ಕಾಲ ನಡೆಯುವ ಉಡುಪಿ ಧರ್ಮಸಂಸತ್‍ನಲ್ಲಿ ಭಾಗವಹಿಸಲು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರವೀಣ್ ಭಾಯ್ ತೊಗಾಡಿಯಾ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಅಸ್ಪೃಶ್ಯತೆ, ಗೋ ರಕ್ಷಣೆ, ಗೋ ರಕ್ಷಣೆ ಕುರಿತ ಕಾನೂನು ಚರ್ಚೆಯಾಗಲಿದೆ. ಅಲ್ಲದೇ ರೈತರಿಗೆ ಪೂರಕ ಯೋಜನೆ ಕುರಿತ ವಿಷಯದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

    ಇದೇ ವೇಳೆ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಲಾಗುತ್ತಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ, ಆಯೋಧ್ಯಾ ರಾಮ ಮಂದಿರ ನಿರ್ಮಾಣ ವಿಚಾರದ ಬಗ್ಗೆ ಚರ್ಚೆ ನಡೆಯಲಿದೆ. ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಈ ಬಗ್ಗೆ ತಿಳಿಸಲಾಗುವುದು ಎಂದು ಉತ್ತರಿಸಿದರು.

    ಇದನ್ನೂ ಓದಿ: ಕೃಷ್ಣ ಮಠದ ಸಂಪ್ರದಾಯ ಉಲ್ಲಂಘನೆ ಮಾಡಿದ್ರಾ ಪೇಜಾವರ ಶ್ರೀ?

    ಇದೇ ವೇಳೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರ ಬಿಡುಗಡೆಯನ್ನು ನಿಷೇಧಿಸಬೇಕು ಎಂದು ಹೇಳಿದರು.

    ಇದನ್ನೂ ಓದಿ: ಏನಿದು ಧರ್ಮ ಸಂಸದ್? ಈ ಬಾರಿ ಏನು ಚರ್ಚೆ ಆಗುತ್ತೆ? ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ?

  • ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲು ಅಯೋಧ್ಯೆಗೆ ಹೊರಟ ಕೊಪ್ಪಳದ ಮುಸ್ಲಿಂ ಯುವಕ

    ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲು ಅಯೋಧ್ಯೆಗೆ ಹೊರಟ ಕೊಪ್ಪಳದ ಮುಸ್ಲಿಂ ಯುವಕ

    ಕೊಪ್ಪಳ: ಜಿಲ್ಲೆಯ ಮುಸ್ಲಿಂ ಯುವಕರೊಬ್ಬರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೈತಿಕ ಬೆಂಬಲ ನೀಡಿದ್ದು, ಸಾಂಕೇತಿಕವಾಗಿ ಒಂದು ಸಿಮೆಂಟ್ ಚೀಲ ನೀಡಲು ಅಯೋಧ್ಯೆಗೆ ಪ್ರಯಾಣ ಬೆಳೆಸುತ್ತಿದ್ದಾರೆ.

    ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದ ಆಟೋ ಚಾಲಕ ಶಂಶುದ್ದೀನ್ ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ನೀಡಲು ಹೊರಟ ಯುವಕ. ಈ ಸಂಬಂಧ ಕೊಪ್ಪಳದಿಂದ ಲಕ್ನೋಗೆ ಪ್ರಯಾಣ ಬೆಳೆಸಿದ್ದಾರೆ. ಶಂಶುದ್ದೀನ್ ಕಳೆದ ಕೆಲ ದಿನಗಳ ಹಿಂದೆ ತನ್ನ ಫೇಸ್‍ಬುಕ್‍ನಲ್ಲಿ ರಾಮಮಂದಿರ ಕಟ್ಟಲು ಒಂದು ಚೀಲ ಸಿಮೆಂಟ್ ಒಯ್ಯುತ್ತಿದ್ದೇನೆ ಎಂದು ಸ್ಟೇಟಸ್ ಹಾಕಿಕೊಂಡಿದ್ದರು. ಈ ವೇಳೆ ಶಂಶುದ್ದೀನ್ ಅವರಿಗೆ ಸಾಕಷ್ಟು ಬೆದರಿಕೆ ಕರೆ ಬಂದಿದ್ದವು ಎನ್ನಲಾಗಿದೆ.

    ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಶಂಶುದ್ದೀನ್ ಪ್ರವೃತ್ತಿಯಲ್ಲಿ ಸಿನಿಮಾ ಕಲಾವಿದ. ಬಿಡುಗಡೆ ಹಂತದಲ್ಲಿರುವ ಲಂಬಾಣಿ ಭಾಷೆಯ ಕೋವೆಲ್ ಮತ್ತು ನಟ ಲೂಸ್ ಮಾದ ನಟಿಸಿರುವ ಧೂಳಿಪಟ ಚಿತ್ರದಲ್ಲಿ ಶಂಶುದ್ದೀನ ಖಳನಾಯಕರಾಗಿ ಅಭಿನಯಿಸಿದ್ದಾರೆ. ಶಂಶುದ್ದೀನ್ ಅವರಿಗೆ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಹಿಂದೂ ಪರ ಸಂಘಟನೆ ಮುಖಂಡರು ಸನ್ಮಾನಿಸಿ, ಬೀಳ್ಕೊಟ್ಟಿದ್ದಾರೆ.

    ಕೊಪ್ಪಳದಿಂದ ಅಯೋಧ್ಯೆಗೆ ತೆರಳಿ ಅಲ್ಲಿಯೇ ಸಿಮೆಂಟ್ ನೀಡಲು ಶಂಶುದ್ದೀನ್ ನಿರ್ಧರಿಸಿದ್ದಾರೆ. ಭಾವೈಕ್ಯತೆ ಸಂಕೇತವಾಗಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಈ ನಿರ್ಧಾರವನ್ನು ಶಂಶುದ್ದೀನ್ ಮಾಡಿದ್ದಾರೆ.

     

  • ಬೆಂಗಳೂರು ಐಟಿ ಉದ್ಯಮಿಯ ಮೊಬೈಲ್ ನಂಬರ್‍ನಲ್ಲಿ ಆಯೋಧ್ಯೆ ಫೇಕ್ ವೆಬ್‍ಸೈಟ್ ಓಪನ್!

    ಬೆಂಗಳೂರು ಐಟಿ ಉದ್ಯಮಿಯ ಮೊಬೈಲ್ ನಂಬರ್‍ನಲ್ಲಿ ಆಯೋಧ್ಯೆ ಫೇಕ್ ವೆಬ್‍ಸೈಟ್ ಓಪನ್!

    ಲಕ್ನೋ: “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕಾ? ಮಸೀದಿ ನಿರ್ಮಾಣವಾಗಬೇಕಾ? ನಿಮ್ಮ ಅಭಿಪ್ರಾಯ ಏನು? www.ayodhya-issue.gov-up.in ವೆಬ್‍ಸೈಟ್‍ನಲ್ಲಿ ನೀವು ಅಭಿಪ್ರಾಯವನ್ನು ತಿಳಿಸಿ ಉತ್ತರಪ್ರದೇಶ ಸರ್ಕಾರಕ್ಕೆ ಸಹಕಾರ ನೀಡಿ” ಎನ್ನುವ ಸಂದೇಶ ನಿಮ್ಮ ವಾಟ್ಸಪ್‍ಗೆ ಬಂದಿದೆಯೇ?

    ಈ ರೀತಿಯ ಮೆಸೇಜ್ ನಿಮ್ಮ ವಾಟ್ಸಪ್‍ಗೆ ಬಂದಿದ್ದರೆ ದಯವಿಟ್ಟು ವೆಬ್‍ಸೈಟ್‍ಗೆ ಹೋಗಿ ನೀವು ಅಭಿಪ್ರಾಯವನ್ನು ದಾಖಲಿಸಬೇಡಿ. ಆಯೋಧ್ಯೆ ರಾಮಮಂದಿರ, ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಜನರಿಂದ ಅಭಿಪ್ರಾಯವನ್ನು ಸ್ವೀಕರಿಸಲು ಉತ್ತರಪ್ರದೇಶ ಸರ್ಕಾರ ಯಾವುದೇ ವೆಬ್‍ಸೈಟ್ ಆರಂಭಿಸಿಲ್ಲ. ಯಾರೋ ವ್ಯಕ್ತಿಗಳು ಈ ವೆಬ್‍ಸೈಟನ್ನು ಆರಂಭಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಆರಂಭಿಸಿದವರು ಯಾರು?
    ಈ ವೆಬ್‍ಸೈಟ್ ಯುಆರ್‍ಎಲ್ ಆಧಾರಿಸಿ ಪತ್ತೆ ಮಾಡಿದಾಗ ಈ ವೆಬ್‍ಸೈಟ್ ದೆಹಲಿಯ ತರುಣ್ ಚೌಧರಿಯ ಹೆಸರಿನಲ್ಲಿ ನೋಂದಣಿ ಆಗಿರುವುದು ಬೆಳಕಿಗೆ ಬಂದಿದೆ. ಆದರೆ ಈ ವೆಬ್‍ಸೈಟನ್ನು ಬೆಂಗಳೂರು ಮೂಲದ ಐಟಿ ಉದ್ಯಮಿಯವರ ಮೊಬೈಲ್ ನಂಬರ್ ನೀಡಿ ನೋಂದಣಿ ಮಾಡಲಾಗಿದೆ.

    ಉದ್ಯಮಿ ಅಕ್ತರ್ ಅಲಿಯವರ ಮೊಬೈಲ್ ನಂಬರನ್ನು ನೀಡಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೋ ದುಷ್ಕರ್ಮಿಗಳು ನನ್ನ ನಂಬರನ್ನು ಬಳಸಿ ಈ ವೆಬ್‍ಸೈಟನ್ನು ತೆರೆದಿದ್ದಾರೆ. ಈ ವಿಚಾರ ನನಗೆ ಈಗಷ್ಟೇ ತಿಳಿದಿದೆ. ಪೊಲೀಸರಿಗೆ ಈ ವಿಚಾರವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.

    ವೆಬ್‍ಸೈಟ್ ಬೆಳಕಿಗೆ ಬಂದಿದ್ದು ಯಾವಾಗ?
    ಭೂ ವಿವಾದವನ್ನು ಎರಡು ಪಾರ್ಟಿಗಳು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದ ಬಳಿಕ ಈ ವೆಬ್‍ಸೈಟ್ ಕುರಿತಾಗಿರುವ ಮೆಸೇಜ್ ವಾಟ್ಸಪ್ ನಲ್ಲಿ ಹರಿದಾಡಲು ಆರಂಭವಾಗಿತ್ತು.

    ವೆಬ್‍ಸೈಟಿನಲ್ಲಿದ್ದ ನಾಲ್ಕು ಪ್ರಶ್ನೆಗಳು
    ಅಯೋಧ್ಯೆಯಲ್ಲಿ ರಾಮಮಂದಿರವನ್ನೇ ನಿರ್ಮಿಸಿ, ಮಸೀದಿಯನ್ನು ಬೇರೆಡೆ ನಿರ್ಮಿಸಬೇಕು, ಎರಡನೇಯದು ರಾಮಮಂದಿರ ಮತ್ತು ಮಸೀದಿಯನ್ನು ಹತ್ತಿರದಲ್ಲೇ ನಿರ್ಮಿಸಬೇಕು, ಮೂರನೆಯದಾಗಿ ಮೂಲಸ್ಥಾನದಲ್ಲಿ ಬಾಬ್ರಿ ಮಸೀದಿ ನಿರ್ಮಿಸಿ, ಪಕ್ಕದಲ್ಲಿ ರಾಮಮಂದಿರ ನಿರ್ಮಿಸಬೇಕು. ನಾಲ್ಕನೆಯದಾಗಿ ಜನರ ಭಾವನೆಗಳನ್ನು ಆಧರಿಸಿ ಕಾನೂನು ಪ್ರಕಾರವಾಗಿ ಸುಪ್ರೀಂಕೋರ್ಟ್ ವಿವಾದ ಇತ್ಯರ್ಥಗೊಳಿಸಬೇಕು ಎನ್ನುವ ಪ್ರಶ್ನೆಯನ್ನು ಕೇಳಿ ಪೋಲ್ ಆಯ್ಕೆಯನ್ನು ನೀಡಲಾಗಿತ್ತು.

    ಜನ ನಂಬಿದ್ದು ಯಾಕೆ?
    ಈ ವೆಬ್‍ಸೈಟ್‍ನಲ್ಲಿರುವ ಮಾಹಿತಿಯ ಜೊತೆಗೆ ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಫೋಟೋವನ್ನು ಅಪ್ಲೋಡ್ ಮಾಡಲಾಗಿತ್ತು. ಹೀಗಾಗಿ ಉತ್ತರ ಪ್ರದೇಶ ಸರ್ಕಾರವೇ ಈ ವೆಬ್‍ಸೈಟನ್ನು ಆರಂಭಿಸಿದೆ ಎಂದು ಜನ ನಂಬಿದ್ದರು.

    ಇದು ಸರ್ಕಾರಿ ವೆಬ್‍ಸೈಟ್ ಎಂದು ತಿಳಿಯುವುದು ಹೇಗೆ?
    ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಬಹುತೇಕ ವೆಬ್‍ಸೈಟ್‍ಗಳನ್ನು ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್(ಎನ್‍ಐಸಿ) ಸಿದ್ಧಪಡಿಸುತ್ತದೆ. ಎನ್‍ಐಸಿ ಸಿದ್ಧಪಡಿಸಿ ವೆಬ್‍ಸೈಟ್‍ಗಳ ಯೂನಿಫಾರ್ಮ್ ರಿಸೋರ್ಸ್ ಲೋಕೆಟರ್(ಯುಆರ್‍ಎಲ್)ಗಳು www.pib.nic.in, www.kar.nic.in ಈ ರೀತಿ ಇರುತ್ತದೆ. ಆದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಎಲ್ಲ ವೆಬ್‍ಸೈಟ್‍ಗಳನ್ನು ಎನ್‍ಐಸಿಯೇ ಸಿದ್ಧಪಡಿಸುವುದಿಲ್ಲ. ಹೀಗಾಗಿ ಅವುಗಳ ಒಳಗಡೆ ಇರುವ ಮಾಹಿತಿ, ವೆಬ್‍ಸೈಟಿಗೆ ಲಿಂಕ್ ಆಗಿರುವ ಅಧಿಕೃತ ಸಾಮಾಜಿಕ ಜಾಲತಾಣಗಳನ್ನು ನೋಡಿದ ಬಳಿಕವಷ್ಟೇ ಇದು ಸರ್ಕಾರಿ ವೆಬ್‍ಸೈಟ್ ಎಂದು ಖಚಿತಪಡಿಸಿಕೊಳ್ಳಬಹುದು.