Tag: ಆಯುಷ್ ಕೋರ್ಸ್‌

  • ಯುಜಿ, ಪಿಜಿ ಆಯುಷ್: ಡಿ.23ರಿಂದ ಕೊನೆ ಸುತ್ತಿನ ಸೀಟು ಹಂಚಿಕೆ – ಕೆಇಎ

    ಯುಜಿ, ಪಿಜಿ ಆಯುಷ್: ಡಿ.23ರಿಂದ ಕೊನೆ ಸುತ್ತಿನ ಸೀಟು ಹಂಚಿಕೆ – ಕೆಇಎ

    ಬೆಂಗಳೂರು: ಪ್ರಸಕ್ತ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿಯ ಆಯುಷ್ ಕೋರ್ಸ್‌ಗಳ (AYUSH) ಪ್ರವೇಶಕ್ಕೆ ಕೊನೆ ಸುತ್ತಿನ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅವಕಾಶ ಕಲ್ಪಿಸಿದೆ. ಅರ್ಹ ಅಭ್ಯರ್ಥಿಗಳು ಡಿ.23ರಿಂದ ಕೋರ್ಸ್ ಶುಲ್ಕವನ್ನು ಮುಂಗಡವಾಗಿ ಪಾವತಿಸಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ತಿಳಿಸಿದ್ದಾರೆ.

    ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗ ಈ ಕೋರ್ಸ್‌ಗಳ ಪ್ರವೇಶಕ್ಕೆ ಡಿ.31ರವರೆಗೆ ಸಮಯ ನೀಡಿರುವ ಕಾರಣ ಹಂಚಿಕೆಯಾಗದೆ ಬಾಕಿ ಉಳಿದಿರುವ ಸೀಟುಗಳನ್ನು ಕೊನೆ ಸುತ್ತಿನಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಸದ್ಯ ಯುಜಿ ಆಯುಷ್‌ನಲ್ಲಿ 436 ಹಾಗೂ ಪಿಜಿ ಆಯುಷ್‌ನಲ್ಲಿ 201 ಸೀಟುಗಳು ಹಂಚಿಕೆಗೆ ಲಭ್ಯ ಇವೆ. ಇನ್ನೂ ಕೆಲವರು ಕಾಲೇಜುಗಳಿಗೆ ವರದಿ ಮಾಡಿಕೊಳ್ಳದಿದ್ದ ಪಕ್ಷದಲ್ಲಿ ಅಂತಹವರ ಸೀಟುಗಳನ್ನು ಕೂಡ ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ವೇಳಾಪಟ್ಟಿ: ಕೋರ್ಸ್ ಶುಲ್ಕ ಮುಂಗಡ ಪಾವತಿಗೆ ಡಿ.23ರಿಂದ 26ರವರೆಗೆ ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಸಿದವರು ಡಿ.24ರಿಂದ 26ರವರೆಗೆ ಆಯ್ಕೆ ದಾಖಲಿಸಬೇಕು. ಡಿ.26ರಂದು ಸಂಜೆ 6ಕ್ಕೆ ತಾತ್ಕಾಲಿಕ ಹಾಗೂ ಡಿ.27ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಡಿ.27ರಿಂದ 29ರವರೆಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು, ಡಿ.30ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಅವರು ಕೋರಿದ್ದಾರೆ.