Tag: ಆಯುಷ್ಮಾನ್ ಭಾರತ್

  • ಆರೋಗ್ಯ , ಕ್ಷೇಮ ಕೇಂದ್ರ ನಿರ್ಮಾಣದಲ್ಲಿ ಕರ್ನಾಟಕ ಮುಂಚೂಣಿ:  ಡಾ.ಕೆ.ಸುಧಾಕರ್

    ಆರೋಗ್ಯ , ಕ್ಷೇಮ ಕೇಂದ್ರ ನಿರ್ಮಾಣದಲ್ಲಿ ಕರ್ನಾಟಕ ಮುಂಚೂಣಿ: ಡಾ.ಕೆ.ಸುಧಾಕರ್

    ಬೆಂಗಳೂರು: ಗ್ರಾಮೀಣ ಪ್ರದೇಶಗಳ ಜನರಿಗೆ ಪ್ರಾಥಮಿಕ ಹಂತದ ಆರೋಗ್ಯ ಸೇವೆ ನೀಡುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಈ ಯೋಜನೆಯ ಅನುಷ್ಠಾನದಲ್ಲಿ ಉತ್ತಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಂಡ ಈ ಯೋಜನೆಯಲ್ಲಿ, 2020-21 ನೇ ಸಾಲಿನಲ್ಲಿ ಕರ್ನಾಟಕ ಉತ್ತಮ ರಾಜ್ಯ ಎಂದೆನಿಸಿಕೊಂಡಿದೆ. ಉಪಕೇಂದ್ರಗಳ ವಿಭಾಗದಲ್ಲಿ 2,263 ಎಚ್‍ಡಬ್ಲ್ಯುಸಿ ಆರಂಭಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ಮಾರ್ಚ್ 31ರವರೆಗೆ, 3,300 ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ನಿಗದಿತ ಗುರಿಗಿಂತ 146% ರಷ್ಟು ಸಾಧನೆಯಾಗಿದೆ.

    2,096 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎಚ್‍ಡಬ್ಲ್ಯುಸಿ ಆಗಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದ್ದು, 2,168 ಪೂರ್ಣವಾಗಿದೆ. ಅಂದರೆ ನಿಗದಿತ ಗುರಿಗಿಂತ 103% ರಷ್ಟು ಸಾಧನೆಯಾಗಿದೆ. 294 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎಚ್‍ಡಬ್ಲ್ಯುಸಿ ಆಗಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದ್ದು, 364 ಕೇಂದ್ರ ರೂಪಿಸಲಾಗಿದೆ. ನಿಗದಿತ ಗುರಿಗಿಂತ 124% ರಷ್ಟು ಸಾಧನೆಯಾಗಿದೆ. ರಾಜ್ಯದಲ್ಲಿ ಒಟ್ಟಾರೆಯಾಗಿ 4,653 ಎಚ್‍ಡಬ್ಲ್ಯುಸಿ ಸ್ಥಾಪಿಸುವ ಗುರಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ಗುರಿಯನ್ನು ಮೀರಿ 5,832 ಕೇಂದ್ರಗಳನ್ನು ಆರಂಭಿಸಲಾಗಿದೆ. ಅಂದರೆ, ಒಟ್ಟಾರೆಯಾಗಿ 125% ರಷ್ಟು ಸಾಧನೆಯನ್ನು ರಾಜ್ಯ ಸರ್ಕಾರ ಮಾಡಿದೆ.

    ಜನಸಮುದಾಯಕ್ಕೆ ಸ್ಥಳೀಯ ಮಟ್ಟದಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಪ್ರಾಥಮಿಕ ಆರೋಗ್ಯ ಸೇವೆಯನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಎಲ್ಲ ಆರೋಗ್ಯ ಕೇಂದ್ರಗಳನ್ನು ಎಚ್‍ಡಬ್ಲ್ಯುಸಿ ಆಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಸೇವೆ ನೀಡುತ್ತಿರುವ 11,595 ಕೇಂದ್ರಗಳನ್ನು ಎಚ್‍ಡಬ್ಲ್ಯುಸಿ ಆಗಿ ಮೇಲ್ದರ್ಜೆಗೇರಿಸುವ ಗುರಿ ಇದೆ.

    ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಆರಂಭವಾಗಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಹದಿಹರೆಯದವರಿಗೆ ಆಪ್ತ ಸಮಾಲೋಚನೆ, ಸಾರ್ವಜನಿಕರಿಗೆ ಯೋಗ ಶಿಕ್ಷಣ ಶಿಬಿರಗಳು, ಅರ್ಹ ದಂಪತಿಗೆ ತಾತ್ಕಾಲಿಕ ಹಾಗೂ ಶಾಶ್ವತ ಗರ್ಭ ನಿರೋಧಕ ವಿಧಾನಗಳ ಸೇವೆ, ಕಣ್ಣು, ಮೂಗು, ಗಂಟಲು ಮತ್ತು ಬಾಯಿ ಸಂಬಂಧಿ ರೋಗಗಳಿಗೆ ತಪಾಸಣೆ, ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಅಗತ್ಯವಿದ್ದರೆ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಕಳುಹಿಸಿಕೊಡುವ ಸೌಲಭ್ಯಗಳಿವೆ.

    ಈ ಸಾಧನೆ ಕುರಿತು ಸಂತಸ ವ್ಯಕ್ತಪಡಿಸಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕರ್ನಾಟಕ ಇಡೀ ದೇಶದಲ್ಲಿಯೇ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಜನರು ದೂರದ ನಗರ ಪ್ರದೇಶಗಳಿಗೆ ಸಂಚರಿಸಿ ಆರೋಗ್ಯ ಸೇವೆ ಪಡೆಯುವ ಹೊರೆಯನ್ನು ತಪ್ಪಿಸಿ, ಸುಲಭವಾಗಿ ತಮ್ಮ ಮನೆಯ ಸಮೀಪದಲ್ಲೇ ಆರೋಗ್ಯ ಸೇವೆ ಪಡೆಯಬೇಕೆನ್ನುವುದು ನಮ್ಮ ಸರ್ಕಾರದ ಗುರಿ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಈ ನಿಟ್ಟಿನಲ್ಲಿ ಬಹಳ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಾಧನೆಗಾಗಿ ಶ್ರಮಿಸಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.

    ಈಗ ಆರೋಗ್ಯ ಕ್ಷೇತ್ರ ಕೋವಿಡ್ ನಿವಾರಿಸುವ ಕಡೆ ಹೆಚ್ಚು ಗಮನನೀಡಿದೆ. ಕೋವಿಡ್ ನಿಂದ ಆರ್ಥಿಕ ಸಂಕಷ್ಟವೂ ಉಂಟಾಗಿದೆ. ಇಷ್ಟಿದ್ದರೂ ರಾಜ್ಯದಲ್ಲಿ ಇತರೆ ಆರೋಗ್ಯ ಸೇವೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಯಾವುದೇ ಹಿನ್ನೆಡೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದ್ದಾರೆ.

  • ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಕೊರೊನಾ ಉಚಿತ ಚಿಕಿತ್ಸೆ ಕೊಡದಿದ್ದರೆ ಯೋಜನೆ ಯಾವ ಪುರುಷಾರ್ಥಕ್ಕೆ- ಎಚ್‍ಡಿಕೆ ಪ್ರಶ್ನೆ

    ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಕೊರೊನಾ ಉಚಿತ ಚಿಕಿತ್ಸೆ ಕೊಡದಿದ್ದರೆ ಯೋಜನೆ ಯಾವ ಪುರುಷಾರ್ಥಕ್ಕೆ- ಎಚ್‍ಡಿಕೆ ಪ್ರಶ್ನೆ

    ಬೆಂಗಳೂರು: ದೇಶದ ಜನತೆಗೆ ಉಚಿತ ಆರೋಗ್ಯ ಸೇವೆ ಒದಗಿಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ಕೊರೊನಾ ಚಿಕಿತ್ಸೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಆಯುಷ್ಮಾನ್ ಭಾರತ್ ಅಡಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯಲು ಅವಕಾಶ ಕೊಡಿ. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯ ಅಡಿಯಲ್ಲಿ ನಾಗರಿಕರಿಗೆ ಮಹಾಮಾರಿ ಕೊರೊನಾ ವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು. ಈ ಸಂಬಂಧ ಕೇಂದ್ರ ಸರ್ಕಾರ ತಕ್ಷಣವೇ ಆದೇಶ ಹೊರಡಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಬಿಪಿಎಲ್ ಕಾರ್ಡುದಾರರು ಆಯುಷ್ಮಾನ್ ಭಾರತ ಯೋಜನೆ ಅಡಿ 5 ಲಕ್ಷ ರೂಪಾಯಿಗಳವರೆಗೆ ಮಾರಣಾಂತಿಕ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಎಪಿಎಲ್ ಕಾರ್ಡ್ ದಾರರಿಗೆ ಗರಿಷ್ಠ 5 ಲಕ್ಷ ರೂ. ಗಳವರೆಗೆ ಶೇ.30ರಷ್ಟು ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ದಕ್ಕಲಿದೆ. ಯೋಜನೆ ವ್ಯಾಪ್ತಿಗೆ ಕೋವಿಡ್ ನ್ನೂ ಸೇರಿಸುವುದು ಅಗತ್ಯವಾಗಿದೆ ಎಂದಿದ್ದಾರೆ.

    ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಕೊರೊನಾ ಉಚಿತ ಚಿಕಿತ್ಸೆ ಕೊಡುವುದಿಲ್ಲವಾದರೆ ಈ ಯೋಜನೆ ಮತ್ತಿನ್ಯಾವ ಪುರುಷಾರ್ಥಕ್ಕೆ? ಕೇಂದ್ರ ಸರ್ಕಾರ ತಕ್ಷಣ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ತುರ್ತು ಅಗತ್ಯವಿದೆ. ದೇಶದ ಬಹುಸಂಖ್ಯಾತರ ಆಗ್ರಹ ಕೂಡ ಇದೇ ಆಗಿದೆ ಎಂದು ಒತ್ತಾಯಿಸಿದ್ದಾರೆ.

  • ಆಯುಷ್ಮಾನ್ ಭಾರತ್ ಯೋಜನೆ ಸದ್ಯಕ್ಕೆ ಕರ್ನಾಟಕಕ್ಕೆ ಒಳಪಡಲ್ಲ!

    ಆಯುಷ್ಮಾನ್ ಭಾರತ್ ಯೋಜನೆ ಸದ್ಯಕ್ಕೆ ಕರ್ನಾಟಕಕ್ಕೆ ಒಳಪಡಲ್ಲ!

    ಬೆಂಗಳೂರು: ಜಗತ್ತಿನ ಅತಿ ದೊಡ್ಡ ಆರೋಗ್ಯ ರಕ್ಷಾ ಯೋಜನೆ, ದೇಶದ 50 ಕೋಟಿ ಜನರಿಗೆ ತಲುಪಲಿರುವ `ಆಯುಷ್ಮಾನ್ ಭಾರತ್’ ಯೋಜನೆ ಕರ್ನಾಟಕದ ಜನತೆಯ ಕೈತಪ್ಪಿದ್ದು, ಈಗ ಅದನ್ನು ಅಳವಡಿಸಿಕೊಳ್ಳಲು ರಾಜ್ಯಸರ್ಕಾರ ಮುಂದಾಗಿದೆ.

    ಈಗಾಗಲೇ ರಾಜ್ಯದಲ್ಲಿ ‘ಆರೋಗ್ಯ ಕರ್ನಾಟಕ’ ಯೋಜನೆ ಜಾರಿಯಲ್ಲಿದ್ದು, ಆಯುಷ್ಮಾನ್ ಭಾರತ್ ಯೋಜನೆಯೂ ಹೆಚ್ಚು ಕಡಿಮೆ ಇದೇ ರೀತಿ ಇದೆ. ಹೀಗಾಗಿ ಕೇಂದ್ರ ಸರ್ಕಾರದ ಯೋಜನೆಯ ಸಾಧಕ ಬಾಧಕಗಳನ್ನ ಅಧ್ಯಯನ ಮಾಡಲು ಸಮಯ ತೆಗೆದುಕೊಳುತ್ತೇವೆ ಎಂದು ರಾಜ್ಯ ಸರ್ಕಾರ ಪಟ್ಟು ಹಿಡಿದಿತ್ತು.

    ಈಗ ಕೇಂದ್ರ ಸರ್ಕಾರದ ಜತೆ ಒಪ್ಪಂದ ಮಾಡಿಕೊಳ್ಳಲು ರಾಜ್ಯ ಸರ್ಕಾರ ತನ್ನ ಪ್ರಕ್ರಿಯೆಯನ್ನು ಆರಂಭಿಸಿದೆ. ಎರಡು ಯೋಜನೆಗಳನ್ನು ವಿಲೀನಗೊಳಿಸಿದ ಬಳಿಕ ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಇನ್ನು ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಆಯುಷ್ಮಾನ್ ಭಾರತ್ ಅಂದ್ರೆ ಏನು?
    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2018ರ ಬಜೆಟ್‍ನಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಪ್ರಾಸ್ತಾಪಿಸಿತ್ತು. ಈ ಯೋಜನೆಯ ಮುಖ್ಯ ಉದ್ದೇಶ ದೇಶದ ಅರ್ಧದಷ್ಟು (50 ಕೋಟಿ) ಜನರಿಗೆ ಅನುಕೂಲವಾಗುವಂಥ ‘ಆರೋಗ್ಯ ವಿಮೆ’ ಹಾಗೂ ‘ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆ’ ಒಳಗೊಂಡ ‘ಆಯುಷ್ಮಾನ್ ಭಾರತ್ ಯೋಜನೆ’ ರೂಪಿಸಿದ್ದರು. ಅಮೆರಿಕದ ಒಬಾಮಾ ಕೇರ್ ಮಾದರಿಯಲ್ಲಿಯೇ ಈ ಯೋಜನೆಯನ್ನು ದೇಶದಲ್ಲಿ ಜಾರಿಗೆ ತರುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿತ್ತು. ಇದು ಜಗತ್ತಿನಲ್ಲಿ ಅತ್ಯಂತ ದೊಡ್ಡ ಆರೋಗ್ಯ ಯೋಜನೆಯಾಗಿದೆ. ಇದನ್ನೂ ಓದಿ: ಏನಿದು ಆಯುಷ್ಮಾನ್ ಭಾರತ್ ಯೋಜನೆ? ಯಾರಿಗೆ ವಿಮೆ ಸಿಗುತ್ತೆ? ಯಾವೆಲ್ಲಾ ರೋಗಗಳಿಗೆ ಚಿಕಿತ್ಸೆ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏನಿದು ಆಯುಷ್ಮಾನ್ ಭಾರತ್ ಯೋಜನೆ? ಯಾರಿಗೆ ವಿಮೆ ಸಿಗುತ್ತೆ? ಯಾವೆಲ್ಲಾ ರೋಗಗಳಿಗೆ ಚಿಕಿತ್ಸೆ?

    ಏನಿದು ಆಯುಷ್ಮಾನ್ ಭಾರತ್ ಯೋಜನೆ? ಯಾರಿಗೆ ವಿಮೆ ಸಿಗುತ್ತೆ? ಯಾವೆಲ್ಲಾ ರೋಗಗಳಿಗೆ ಚಿಕಿತ್ಸೆ?

    ನವದೆಹಲಿ: 72ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅತಿದೊಡ್ಡ ಗಿಫ್ಟ್ ನೀಡಿದೆ. ಜಗತ್ತಿನ ಅತೀ ದೊಡ್ಡ ಆರೋಗ್ಯ ರಕ್ಷಾ ಯೋಜನೆ ‘ಆಯುಷ್ಮಾನ್ ಭಾರತ’ ಯೋಜನೆಯನ್ನು ಪ್ರಕಟಿಸಿದೆ.

    ದೆಹಲಿಯ ಕೆಂಪುಕೋಟೆ ಆವರಣದಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೇಶದ 50 ಕೋಟಿ ಮಂದಿಗೆ ಅನುಕೂಲವಾಗುವ ಆರೋಗ್ಯ ಯೋಜನೆಯನ್ನು ಘೋಷಿಸಿದ್ದಾರೆ.

    ಪಂಡಿತ್ ದೀನ್ ದಯಾಳು ಉಪಾಧ್ಯಾಯರ ಜನ್ಮದಿನವಾದ ಸೆಷ್ಟೆಂಬರ್ 25ರಂದು ಈ ಯೋಜನೆ ಆರಂಭವಾಗಲಿದ್ದು, ಕುಟುಂಬವೊಂದಕ್ಕೆ ವಾರ್ಷಿಕ ಐದು ಲಕ್ಷ ರೂಪಾಯಿಗಳ ಆರೋಗ್ಯ ಸೇವಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಮೊದಲ ಹಂತವಾಗಿ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಯನ್ನು ಜಾರಿಗೆ ತರಲಾಗುತ್ತದೆ.

    ಆದರೆ ಮೊದಲ ಹಂತದಲ್ಲಿ ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಂಜಾಬ್ ಹಾಗೂ ನವದೆಹಲಿ ರಾಜ್ಯಗಳು ಈ ಯೋಜನೆಗೆ ಒಳಪಡುವುದಿಲ್ಲ. ತದನಂತರ ಈ ರಾಜ್ಯಗಳು ಒಳಪಡಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಏನಿದು ಆಯುಷ್ಮಾನ್ ಭಾರತ್ ಯೋಜನೆ?
    10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ವಿಮೆ ಸಿಗಲಿದೆ. ಕುಟುಂಬವೊಂದಕ್ಕೆ ವಾರ್ಷಿಕ 5 ಲಕ್ಷವರೆಗೆ ಆಸ್ಪತ್ರೆ ಖರ್ಚು ಭರಿಸಲಾಗುತ್ತದೆ. ಮೊದಲ ಹಂತದಲ್ಲಿ ಛತ್ತೀಸ್‍ಗಢ, ತ್ರಿಪುರ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ 70-80 ಜಿಲ್ಲೆಗಳಲ್ಲಿ ಜಾರಿಯಾಗಲಿದೆ. ಈ ಆರೋಗ್ಯ ಯೋಜನೆಯಲ್ಲಿ 100 ಆಸ್ಪತ್ರೆಗಳಿರುತ್ತವೆ. ಮೊದಲಿಗೆ ಶಸ್ತ್ರಚಿಕಿತ್ಸೆ ಹಾಗೂ ಇತರೆ ವೈದ್ಯಕೀಯ ಚಿಕಿತ್ಸಾ ಸೇವೆ ಸಿಗುತ್ತದೆ. ವಿಮೆ ಪಡೆದ ದಿನದಿಂದಲೇ ಎಲ್ಲಾ ಪೂರ್ವ ನಿರ್ಧಾರಿತ ಕಾಯಿಲೆಗಳಿಗೂ ಚಿಕಿತ್ಸೆ ಸಿಗಲಿದೆ.

    ಯಾರಿಗೆ ವಿಮೆ ಸೌಲಭ್ಯ ಸಿಗಲಿದೆ?
    ಯೋಜನೆಯ ಸೌಲಭ್ಯಕ್ಕಾಗಿ ಪಡಿತರ ಚೀಟಿ ಇದ್ದರೆ ಸಾಕಾಗುತ್ತದೆ. ಈ ಯೋಜನೆಗೆ ಆಧಾರ್ ಕಾರ್ಡ್ ಕಡ್ಡಾಯ ಅಲ್ಲ. ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಚೀಟಿ ಇದ್ದರೂ ಸಾಕಾಗುತ್ತದೆ. ಕುಟುಂಬದ ಗಾತ್ರ ಮತ್ತು ವಯಸ್ಸಿಗೆ ಯಾವುದೇ ಮಿತಿ ಹೇರಿಲ್ಲ. ಖಾಸಗಿ ಅಥವಾ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಸೇವೆ. ಫಲಾನುಭವಿಗಳಿಗೆ ಆಸ್ಪತ್ರೆಗೆ ಸಂಚರಿಸಲು ನಿಗದಿತ ಪ್ರಯಾಣ ಭತ್ಯೆಯೂ ಒಳಗೊಂಡಿದೆ.

    `ಆಯಷ್ಮಾನ್ ಭಾರತ’ ಯಾರಿಗೆ ಅನ್ವಯ..?
    * ಜಾತಿ ಗಣತಿ/ಪಡಿತರ ಚೀಟಿ ಆಧಾರದ ಮೇಲೆ ಚಿಕಿತ್ಸೆ
    * ಒಂದು ಕೊಠಡಿಯಲ್ಲಿ ವಾಸಿಸುವ ಕುಟುಂಬಗಳು
    * ಎಸ್‍ಸಿ/ಎಸ್‍ಟಿ, ಬುಡಕಟ್ಟು ಸಮುದಾಯದವರು
    * ನಿರ್ವಸಿತರು, ಕೂಲಿ ಕಾರ್ಮಿಕರು, ಜೀತ ವಿಮುಕ್ತರು
    * ರದ್ದಿ ಆಯುವವರು, ಭಿಕ್ಷುಕರು, ಪೌರಕಾರ್ಮಿಕರು
    * ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಕುಸುರಿ ಕೆಲಸಗಾರರು
    * ಟೈಲರ್, ಪ್ಲಂಬರ್, ಸಾರಿಗೆ ನೌಕರರು, ರಿಕ್ಷಾವಾಲಾಗಳು
    * ಎಲೆಕ್ಟ್ರಿಷಿಯನ್, ಮೆಕಾನಿಕ್, ಹೆಲ್ಪರ್‍ಗಳು
    * ಚಿಕಿತ್ಸೆಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ
    * 10 ಕೋಟಿ ಕುಟುಂಬಗಳ 50 ಕೋಟಿ ಮಂದಿಗೆ ಪ್ರಯೋಜನ

    ಯಾವೆಲ್ಲಾ ರೋಗಗಳಿಗೆ ಚಿಕಿತ್ಸೆ?
    * ಧೀರ್ಘಕಾಲಿನ ರೋಗಗಳು
    * ಹೃದಯದ ಬೈಪಾಸ್ ಸರ್ಜರಿ
    * ಮಂಡಿ ಚಿಪ್ಪು ಅಳವಡಿಕೆ
    * ಆಸ್ಪತ್ರೆ ಸೇರುವ ಮೊದಲು/ನಂತರದ ವೆಚ್ಚ
    * ಕನಿಷ್ಟ 25 ಸಾವಿರ ರೂ. ಕ್ಲೈಂ
    * ಒಮ್ಮೆ ನೋಂದಣಿ ಮಾಡಿಕೊಂಡರೆ ದೇಶದ ಯಾವುದೇ ಚಿಕಿತ್ಸೆ ಪಡೆಯಬಹುದು

    ಈಗಾಗಲೇ ವೆಬ್‍ಸೈಟ್ ಆರಂಭಿಸಲಾಗಿದ್ದು ಮಾಹಿತಿಗಳು ಲಭ್ಯವಾಗಿಲ್ಲ. ಶೀಘ್ರವೇ ಈ ಯೋಜನೆಗೆ ಸಂಬಂಧಿಸಿದ ವಿವರಗಳನ್ನು ಪ್ರಕಟಿಸಲಾಗುವುದು ಬರೆಯಲಾಗಿದೆ:  www.abnhpm.gov.in/coming-soon

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv