Tag: ಆಯುರ್ವೇದ

  • ಕೊರೊನಾಗೆ ಪತಂಜಲಿ ಮದ್ದು – ಬಾಬಾ ರಾಮ್‍ದೇವ್ ಹೇಳಿಕೆಗೆ ವೈದ್ಯರು ಗರಂ

    ಕೊರೊನಾಗೆ ಪತಂಜಲಿ ಮದ್ದು – ಬಾಬಾ ರಾಮ್‍ದೇವ್ ಹೇಳಿಕೆಗೆ ವೈದ್ಯರು ಗರಂ

    ನವದೆಹಲಿ: ವಿಶ್ವಾದ್ಯಂತ ತನ್ನ ಕರಿನೆರಳು ಬೀರಿ ರಣಕೇಕೆ ಹಾಕುತ್ತಿರುವ ಕಿಲ್ಲರ್ ಕೊರೊನಾ ವೈರಸ್‍ಗೆ 8 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿಯಾಗಿದ್ದಾರೆ. ಆದರೆ ಕೊರೊನಾ ನಿವಾರಿಸಲು ಪತಂಜಲಿ ಸಂಸ್ಥೆಯ ಬಳಿ ಔಷಧಿ ಇದೆ ಎಂದು ಮಾತನಾಡಿ ಖ್ಯಾತ ಯೋಗ ಗುರು ಬಾಬಾ ರಾಮ್‍ದೇವ್ ವೈದ್ಯರ ಸಿಟ್ಟಿಗೆ ಕಾರಣವಾಗಿದ್ದಾರೆ.

    ಕಳೆದ ಹಲವು ತಿಂಗಳಿಂದ ಜಗತ್ತಿನ ಸುಮಾರು 173ಕ್ಕೂ ಅಧಿಕ ರಾಷ್ಟ್ರಗಳು, ಪ್ರಾಂತ್ಯಕ್ಕೆ ಕೊರೊನಾ ತಲೆನೋವಾಗಿದೆ. ಕೊರೊನಾ ವೈರಸ್ ರೋಗಕ್ಕೆ ಔಷಧಿ ಕಂಡುಹಿಡಿಯಲು ವಿಶ್ವಾದ್ಯಂತ ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದು, ಸೂಕ್ತ ಔಷಧಿಗಾಗಿ ವೈದ್ಯರು ಪರದಾಡುತ್ತಿದ್ದಾರೆ. ಈ ಮಧ್ಯೆ ಯೋಗ ಗುರು ಬಾಬಾ ರಾಮದೇವ್ ಅವರು ಕೊರೊನಾ ರೋಗಕ್ಕೆ ಆಯುರ್ವೇದದಲ್ಲಿ ಮದ್ದಿದೆ ಎಂದು ಹೇಳಿದ ಮಾತು ಭಾರಿ ಚರ್ಚೆಗೆ ಕಾರಣವಾಗಿದೆ.

    ಪತಂಜಲಿ ಸಂಸ್ಥೆಯ ಅಶ್ವಗಂಧ ಉತ್ಪನ್ನದ ಜಾಹಿರಾತಿನಲ್ಲಿ ಮಾತನಾಡಿರುವ ಬಾಬಾ, ಕೊರೊನಾ ವೈರಸ್ ಸೇರಿದಂತೆ ವಿವಿಧ ಮಾರಣಾಂತಿಕ ವೈರಸ್‍ಗಳಿಗೆ ಆಯುರ್ವೇದದಲ್ಲಿ ಔಷಧವಿದೆ ಎಂದಿದ್ದಾರೆ. ಕೊರೊನಾ ಸೋಂಕಿಗೆ ಅಶ್ವಗಂಧ ಮದ್ದು ಎಂಬುದು ವೈಜ್ಞಾನಿಕ ಸಂಶೋಧನೆಯಲ್ಲಿ ಸಾಬೀತಾಗಿದೆ. ಅಶ್ವಗಂಧ ಮಾನವನ ಪ್ರೋಟಿನ್ ಜೊತೆ ಕೊರೊನಾ ಪ್ರೋಟಿನ್ ಸಮ್ಮಿಲನಗೊಳ್ಳದಂತೆ ಕೆಲಸ ಮಾಡುತ್ತದೆ ಎಂದು ಹೇಳಿಕೊಂಡಿದ್ದರು.

    ಅಷ್ಟೇ ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗ ಮಾಡಿ ಎಂದು ಬಾಬಾ ರಾಮ್‍ದೇವ್ ಸಲಹೆ ನೀಡಿದ್ದಾರೆ. #YogaForCorona ಎಂದು ಹ್ಯಾಷ್‍ಟ್ಯಾಗ್ ಹಾಕಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

    ಬಾಬಾ ರಾಮ್‍ದೇವ್ ಅವರ ಹೇಳಿಕೆ ವೈದ್ಯರ ಕೆಂಗಣ್ಣಿಗೆ ಕಾರಣವಾಗಿದ್ದು, ಇಂಥಹ ಹೇಳಿಕೆಗಳು ಜನರಲ್ಲಿ ನಕಲಿ ಭದ್ರತಾ ಭಾವನೆ ಸೃಷ್ಟಿಸುತ್ತದೆ. ಹೆಚ್ಚು ಶಿಕ್ಷಿತರಲ್ಲದ ಜನರು ಇಂಥ ಜಾಹೀರಾತುಗಳನ್ನು ನಂಬುತ್ತಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಈ ರೀತಿ ಜಾಹೀರಾತುಗಳನ್ನು ಸರ್ಕಾರ ನಿಷೇಧಿಸಬೇಕು ಎಂದು ಕೆಲ ವೈದ್ಯರು ಕಿಡಿಕಾರಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಆಯುಶ್ ಇಲಾಖೆಯ ಸಲಹೆಗಾರ ಮನೋಜ್ ನೇಸರಿ ಅವರು, ಪತಂಜಲಿ ಸಂಸ್ಥೆಯ ಉತ್ಪನ್ನಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಆದರೆ, ಕೊರೊನಾ ಸೋಂಕು ನಿಗ್ರಹ ಸಾಧ್ಯವೆಂಬ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಯಾರಾದರು ದೂರು ಕೊಟ್ಟರೆ ಪರಿಶೀಲಿಸಲಾಗುತ್ತೆ ಎಂದಿದ್ದಾರೆ.

    ಒಟ್ಟು 173 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 2,18,455 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದಲ್ಲಿ 3,245 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 8,938 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 85,664 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಪ್ರಸ್ತುತ 1,23,853 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

    ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್‍ಗೆ ಈವರೆಗೆ 169 ಮಂದಿ ತುತ್ತಾಗಿದ್ದು, 14 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 152 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿ ಒಟ್ಟು 14 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನೆರೆಯ ಮಹಾರಾಷ್ಟ್ರದಲ್ಲಿ ಬುಧವಾರದವರೆಗೆ 44 ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ.

  • ಪ್ರತಿ ಜಿಲ್ಲೆಯಲ್ಲಿ ಒಂದು ಆಯುರ್ವೇದ ಆಸ್ಪತ್ರೆ  ಸ್ಥಾಪನೆ: ಮೋದಿ

    ಪ್ರತಿ ಜಿಲ್ಲೆಯಲ್ಲಿ ಒಂದು ಆಯುರ್ವೇದ ಆಸ್ಪತ್ರೆ ಸ್ಥಾಪನೆ: ಮೋದಿ

    ನವದೆಹಲಿ: ದೇಶದ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಆಯುರ್ವೇದ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ದೇಶದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಆಯುರ್ವೇದವು ಪುರಾತನ ಭಾರತೀಯ ಸಂಸ್ಕತಿಯ ಕೊಡುಗೆಯಾಗಿದ್ದು, ಮತ್ತೆ ಪ್ರಕೃತಿ ಚಿಕಿತ್ಸೆಯ ಕಡೆಗೆ ಸಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಆಯುರ್ವೇದ ಆಸ್ಪತ್ರೆ ಸ್ಥಾಪಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.

    ಖಾಸಗಿ ಸಂಸ್ಥೆಗಳು ಸಹ ಈ ಯೋಜನೆಯಲ್ಲಿ ಭಾಗವಹಿಸುವ ಅಗತ್ಯವಿದ್ದು, ಆಯುರ್ವೇದ ಮಹತ್ವವನ್ನು ಸಾರುವ ದೃಷ್ಟಿಯಿಂದ ತಮ್ಮ ಬದ್ಧತೆಯನ್ನು ತೋರ್ಪಡಿಸುವ ಅಗತ್ಯವಿದೆ ಎಂದರು.

    ದೇಶದಲ್ಲಿ ಕಳೆದ 30 ವರ್ಷಗಳಿಂದ ಐಟಿ ಕ್ರಾಂತಿಯನ್ನು ಕಂಡಿದ್ದೇವೆ. ಪ್ರಸ್ತುತ ಆಯುರ್ವೇದ ಅಡಿಯಲ್ಲಿ ಆರೋಗ್ಯ ಜಾಗೃತಿ ಕುರಿತ ಕ್ರಾಂತಿ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ದೇಶಾದ್ಯಂತ ಪ್ರತಿ ಜಿಲ್ಲೆಗೂ ಒಂದು ಆಯುರ್ವೇದ ಕೇಂದ್ರವನ್ನು ಸ್ಥಾಪಿಸಲು ಸಿದ್ಧವಿದೆ. ಈ ಕುರಿತು ಆಯುಷ್ ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

    ಪ್ರಪಂಚದಾದ್ಯಂತ ಎಲ್ಲರಿಗೂ ಆರೋಗ್ಯದ ಕುರಿತ ಜಾಗೃತಿ ಹೆಚ್ಚಳವಾಗುತ್ತಿದ್ದು, ಆಯುರ್ವೇದ ಚಿಕಿತ್ಸೆಯನ್ನು ಅಭಿವೃದ್ಧಿ ಪಡಿಸಲು ಉತ್ತಮ ಸಮಯವಿದು. ಮುಂದೆ ಆಯುರ್ವೇದ ವಿದ್ಯಾರ್ಥಿಗಳಿಗೆ ಈ ಕುರಿತು ಉತ್ತಮ ಪಠ್ಯವನ್ನು ಸಿದ್ಧಪಡಿಸಲಾಗುವುದು. ಅಲ್ಲದೇ ವಿಶ್ವ ವಿದ್ಯಾಲಯಗಳಲ್ಲಿ ಹೆಚ್ಚಿನ ಸೀಟುಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

    ಆಯುಷ್ ಮತ್ತು ಕೃಷಿ ಇಲಾಖೆಯ ರೈತರಿಗೆ ಔಷಧಿಯ ಸಸಿಗಳ ಬಗ್ಗೆ ಮಾಹಿತಿ ನೀಡಿ ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಆರ್ಯುವೇದ ಸಸಿಗಳನ್ನು ಬೆಳೆಯುವುದರ ಮೂಲಕ ರೈತರ ಆದಾಯವು ಹೆಚ್ಚಾಗುತ್ತದೆ. 2022ರ ವೇಳೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾಗುವ ಸಮಯದಲ್ಲಿ ರೈತರ ಆದಾಯ ದ್ವಿಗುಣವಾಗಲು ನಾನಾ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದು, ಇದರಲ್ಲಿ ಇದು ಒಂದು ಎಂದು ಮೋದಿ ಹೇಳಿದರು.

  • ಚಿಕ್ಕಮಗಳೂರಿನ ಕೊಪ್ಪದಲ್ಲಿ ಹಾಲಿವುಡ್ ಹೀರೋಯಿನ್‍ಗೆ ಆರ್ಯುವೇದ ಚಿಕಿತ್ಸೆ!

    ಚಿಕ್ಕಮಗಳೂರಿನ ಕೊಪ್ಪದಲ್ಲಿ ಹಾಲಿವುಡ್ ಹೀರೋಯಿನ್‍ಗೆ ಆರ್ಯುವೇದ ಚಿಕಿತ್ಸೆ!

    ಚಿಕ್ಕಮಗಳೂರು: ಆಸ್ಟ್ರೇಲಿಯಾ ದೇಶದ ಹಾಲಿವುಡ್ ಬೆಡಗಿ ಇಸಾಬೆಲ್ ಲೂಕಾಸ್ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಆರೋಗ್ಯನಿಕೇತನ ಆಯುರ್ವೇದಾಶ್ರಮಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇಸಾಬೆಲ್ ಹಾಲಿವುಡ್‍ನ ಹೆಸರಾಂತ ನಟಿ. ಹಾಲಿವುಡ್ ಚಿತ್ರಗಳೆಂದ್ರೆ ಆ್ಯಕ್ಷನ್, ಸ್ಟಂಟು, ಫೈಟ್‍ಗೇನು ಕೊರತೆ ಇರೋಲ್ಲ. ಸಿನಿಮಾಕ್ಕಾಗಿ ದೇಶ-ದೇಶ ಸುತ್ತಿದ್ದ ಇವರು ಮಾನಸಿಕ ಹಾಗೂ ದೈಹಿಕ ಖಿನ್ನತೆಗೆ ಒಳಗಾಗಿದ್ದರು. ತನ್ನ ದೇಹದ ಸ್ಥಿತಿಗತಿಯನ್ನ ಹತೋಟಿಗೆ ತಂದುಕೊಳ್ಳಲು ಇಸಾಬೆಲ್ ಆಯ್ಕೆ ಮಾಡಿಕೊಂಡ ಜಾಗ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಗ್ರಾಮದ ಆರೋಗ್ಯನಿಕೇತನ ಆಯುರ್ವೇದಾಶ್ರಮ. ಕಳೆದ ಮೂರು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಇಸಬೆಲ್ಲಾ ಇದೀಗ ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಟ್ರೇಲಿಯಾಕ್ಕೆ ಹಿಂದಿರುಗಲಿದ್ದಾರೆ.

    ಭಾರತದ ಆಯುರ್ವೇದ ಚಿಕಿತ್ಸೆಯಿಂದಾಗಿ ನಾನೂ ಮೊದಲಿನಂತಾಗಿ ಸಂತೋಷದಿಂದ ನನ್ನ ದೇಶಕ್ಕೆ ಹಿಂತಿರುಗುತ್ತಿದ್ದೇನೆ. “ಹ್ಯಾಟ್ಸಾಫ್ ಇಂಡಿಯಾ ಅಂಡ್ ಇಂಡಿಯನ್ ಮೆಡಿಸಿನ್” ಎಂದು ನಟಿ ಇಸಾಬೆಲ್ ಲೂಕಾಸ್ ಹೇಳುವ ಮೂಲಕ ಆಯುರ್ವೇದ ಚಿಕಿತ್ಸೆಯನ್ನು ಹೊಗಳಿದರು.

    ಕೊಪ್ಪಗೆ ಬಂದಿದ್ದು ಹೇಗೆ?
    ಟ್ರಾನ್ಸ್ ಫಾರ್ಮರ್, ರಿವೇಂಜ್ ಆಫ್ ದಿ ಫಾಲೆನ್, ಡೇ ಬ್ರೇಕರ್ಸ್, ದಿ ಫೆಸಿಪಿಕ್, ಡಸ್ ನಾಟ್ ಮೀ ಸೇರರಿದಂತೆ 20 ಕ್ಕೂ ಹೆಚ್ಚು ಹಾಳಿವುಡ್ ಸಿನಿಮಾಗಳಲ್ಲಿ ನಟಿಸಿರುವ ಇಸಾಬೆಲ್ ಹೋಂ ಆಂಡ್ ವೇ ಕಿರುತೆರೆ ದಾರಾವಾಹಿ ಹೆಸರು ತಂದುಕೊಟ್ಟಿತ್ತು. ಇಸಾಬೆಲ್ ಸ್ನೇಹಿತೆ ಪಾಪ್ ಗಾಯಕಿ ಜೂಲಿಯಾ ಸ್ಟೋನ್ ಮ್ಯಾಗ್ಜೇನ್ ಮೂಲಕ ಹರಿಹರಪುರದ ಆಯುರ್ವೇದಾಶ್ರಮದ ಬಗ್ಗೆ ಮಾಹಿತಿ ಪಡೆದುಕೊಂಡು, ಒಮ್ಮೆ ಇಲ್ಲಿಗೆ ಭೇಟಿ ನೀಡಿದ್ದರು. ನಂತರ ನಟಿ ಇಸಾಬೆಲ್ ಅವರಿಗೆ ಇಲ್ಲಿಗೆ ಹೋಗಿ ಚಿಕತ್ಸೆ ಪಡೆಯೋದಕ್ಕೆ ಸಲಹೆ ನೀಡಿದ್ದರು. ಈ ಸಲಹೆಯ ಹಿನ್ನೆಲೆಯಲ್ಲಿ ಇಸಾಬೆಲ್ ಕೊಪ್ಪಗೆ ಬಂದಿದ್ದರು.

    ವಿದೇಶಿಯರಿಗೆ ಚಿಕಿತ್ಸೆ:
    ಚಿಕ್ಕಮಗಳೂರು ಜಿಲ್ಲೆ ಕೊಪ್ಪಾದ ಆರೋಗ್ಯನಿಕೇತನ ಆಯುರ್ವೇದಾಶ್ರಮದಲ್ಲಿ ಸದ್ಯ 15ಕ್ಕೂ ಹೆಚ್ಚು ವಿದೇಶಿಗರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 10 ವರ್ಷದಿಂದ ಆಯುರ್ವೇದ ಚಿಕಿತ್ಸೆ ನಡೆಸುತ್ತಿರುವ ಈ ಆಶ್ರಮದಲ್ಲಿ ಈವರಗೆ ಮೂರು ಸಾವಿರಕ್ಕೂ ಅಧಿಕ ವಿದೇಶಿಗರು ಚಿಕಿತ್ಸೆ ಪಡೆದಿದ್ದು, ಈಗಲೂ ವಾರ್ಷಿಕ ನೂರಾರು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೆರಿಕ, ರಷ್ಯಾ, ಜಪಾನ್ ಸೇರಿದಂತೆ ನಾಲ್ಕೈದು ದೇಶದವರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದ ಆಯುರ್ವೇದ ಹಾಗೂ ಇಲ್ಲಿನ ಪಥ್ಯದ ಚಿಕಿತ್ಸೆಯಿಂದ ನಮ್ಮ ದೇಹದ ಆಂತರಿಕ ಹಾಗೂ ಬಾಹ್ಯ ಸ್ಥಿತಿಗತಿಗಳು ತುಂಬಾ ಬದಲಾಗಿದೆ ಎಂದು ಇಲ್ಲಿನ ಚಿಕಿತ್ಸೆ ಬಗ್ಗೆ ಹರ್ಷ ವ್ಯಕ್ತಪಡಿಸ್ತಾರೆ. ಜೊತೆಗೆ ಅಮೆರಿಕದ ಕೆಲ ವಿದ್ಯಾರ್ಥಿಗಳು ಇಲ್ಲಿನ ಆಯುರ್ವೇದದ ಚಿಕಿತ್ಸೆಯನ್ನು ಕಲಿಯುತ್ತಿದ್ದಾರೆ.