Tag: ಆಯುಧ ಪೂಜೆ

  • ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    ಹಿಂದೂಗಳ ಹಬ್ಬಗಳಲ್ಲಿ ನವರಾತ್ರಿಯೂ ಒಂದು. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಅವುಗಳಲ್ಲಿ ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಗೆ ಹೆಚ್ಚಿನ ಮಹತ್ವವಿದೆ.

    ಆಯುಧ ಪೂಜೆಯಂದು ಮನೆಯಲ್ಲಿ ಉಪಯೋಗಿಸುವ ಚೂರಿಯಿಂದ ಹಿಡಿದು ಎಲ್ಲಾ ವಿಧದ ಆಯುಧಗಳನ್ನು ಪೂಜಿಸಲಾಗುತ್ತಿದೆ. ಈ ದಿನ ಮನೆಯನ್ನು ಹೂಗಳಿಂದ ಅಲಂಕಾರ ಮಾಡಲಾಗುತ್ತಿದೆ. ಅಲ್ಲದೇ ಮನೆಯಲ್ಲಿರುವ ವಾಹನಗಳನ್ನು ತೊಳೆದು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತಿದೆ.

    ಆಯುಧ ಪೂಜೆಯ ಇತಿಹಾಸ:
    ದುರ್ಗಾ ದೇವಿಯು ಚಾಮುಂಡೇಶ್ವರಿಯ ರೂಪ ತಾಳಿ ಮಹಿಷಾಸುರನನ್ನು ಸಂಹರಿಸಿದಳು. ಆ ಸಂದರ್ಭದಲ್ಲಿ ದೇವಿ ಉಪಯೋಗಿಸಿದ ಆಯುಧಗಳನ್ನು ಮತ್ತೆ ಬಳಸದೆ ಬಿಸಾಡಿದಳು. ಆ ಆಯುಧಗಳನ್ನು ನಂತರ ಪೂಜಿಸಲಾಯಿತು. ಹಾಗಾಗಿಯೇ ನವರಾತ್ರಿಯ ನವಮಿಯ ದಿನ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ ಎಂಬ ಕಥೆಯಿರುವುದಾಗಿ ಪುರಾಣಗಳಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ನವರಾತ್ರಿಯ 8ನೇ ದಿನ ಮಹಾಗೌರಿಯ ಪೂಜೆ!

     ಆಯುಧ ಪೂಜೆಯ ಹಿಂದೆ ಮತ್ತೊಂದು ಪೌರಾಣಿಕ ಮಹತ್ವವೂ ಇದೆ. ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಬನ್ನಿಗಿಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯವನ್ನು ಸಾಧಿಸುತ್ತಾರೆ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಸಾಧಿಸಿದ ವಿಜಯದ ಕುರುಹಾಗಿ ಕೂಡ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ. ಇದನ್ನೂ ಓದಿ: 7ನೇ ದಿನ ಕಾಲರಾತ್ರಿಯನ್ನು ಪೂಜೆ ಮಾಡೋದು ಯಾಕೆ?

    ವಿಜಯದಶಮಿ ಹಬ್ಬದ ದ್ಯೋತಕವಾಗಿ ಮನೆಮನೆಗಳಲ್ಲಿ ನೆಂಟರಿಷ್ಟರು ಬನ್ನಿ ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸಂತಸಪಡುತ್ತಾರೆ. ಈ ಬನ್ನಿ ಬಂಗಾರಕ್ಕೆ ಸಮಾನವೆಂದು ಹಿಂದೂಗಳಲ್ಲಿ ನಂಬಿಕೆಯಿದೆ. ಬನ್ನಿ ತೆಗೆದುಕೊಂಡು ಬಂಗಾರದಂತಿರೋಣ ಎಂದು ಆಶಿಸುತ್ತಾರೆ. ಕಿರಿಯರು ಬನ್ನಿ ಸೊಪ್ಪನ್ನು ಹಿರಿಯರ ಕೈಗಿತ್ತು ಆಶೀರ್ವದಿಸಿ ಎಂದು ನಮಸ್ಕರಿಸುವುದು ವಿಜಯದಶಮಿಯ ಸಂಪ್ರದಾಯಗಳಲ್ಲಿ ಮುಖ್ಯವಾದುದು. ಪ್ರತಿಯೊಬ್ಬರ ಮನಸ್ಸಿನಲ್ಲಿ ಹುದುಗಿದ್ದ ಕಲ್ಮಶಗಳೆಲ್ಲ ತೊಳೆದು ಬಾಳು ಬಂಗಾರವಾಗಲಿ ಎಂಬುದು ಈ ಆಚರಣೆಯ ಆಶಯವಾಗಿದೆ. ಇದನ್ನೂ ಓದಿ: ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    ಪೂಜೆ ಹೇಗಿರಬೇಕು? ಅದಕ್ಕೆ ಅಗತ್ಯತೆಗಳು ಏನೇನು?
    1. ಮೊದಲು ನೀವು ಪೂಜೆ ಮಾಡುವ ಜಾಗವನ್ನು ಆಯ್ದುಕೊಳ್ಳಿ. ನಂತರ ಆಯುಧಗಳನ್ನು ಇಡಿ. ಅವುಗಳನ್ನು ಅಲ್ಲಿ ಪದೇ ಪದೇ ತೆಗೆದು ಜಾಗ ಬದಲಿಸಬಾರದು.
    2. ನೀವು ಪೂಜೆ ಮಾಡಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದು ದಿನನಿತ್ಯದ ಬಳಕೆಯ ವಸ್ತುವೂ ಆಗಿರಬಹುದು. ಸಂಗೀತಗಾರ ತನ್ನ ಸಂಗೀತ ವಾದ್ಯಗಳನ್ನು, ವಿದ್ಯಾರ್ಥಿಗಳು ತಮ್ಮ ಪಟ್ಟಿ-ಪುಸ್ತಕ ಮತ್ತು ಲೇಖನಿಯನ್ನು ಹೀಗೆ ನಿಮಗೆ ಅನುಕೂಲ ತಂದುಕೊಡುತ್ತಿರುವ ವಸ್ತುಗಳನ್ನು ಪೂಜಿಸಬಹುದು.
    3. ಪೂಜೆಗೆ ಆಯ್ಕೆ ಮಾಡಿಕೊಂಡ ವಸ್ತುಗಳನ್ನು ಪೂಜಿಸುವ ಮೊದಲು ಸ್ವಚ್ಛಗೊಳಿಸಿ ಇಡಲು ಮರೆಯಬಾರದು.

  • ರೋಲ್ಸ್‌ ರಾಯ್ಸ್‌, ಫೆರಾರಿ ಸೇರಿದಂತೆ ಐಷಾರಾಮಿ ಕಾರುಗಳಿಗೆ ಎಂಟಿಬಿ ಪೂಜೆ

    ರೋಲ್ಸ್‌ ರಾಯ್ಸ್‌, ಫೆರಾರಿ ಸೇರಿದಂತೆ ಐಷಾರಾಮಿ ಕಾರುಗಳಿಗೆ ಎಂಟಿಬಿ ಪೂಜೆ

    ಬೆಂಗಳೂರು: ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಎಂಟಿಬಿ ನಾಗರಾಜ್ ಮನೆಯಲ್ಲಿರುವ ಕಾರುಗಳಿಗೆ ಆಯುಧ ಪೂಜೆ ಮಾಡಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಮಹದೇವಪುರ ಬಳಿ ಇರುವ ಆಚಂದ್ರಾರ್ಕ ನಿಲಯದಲ್ಲಿ ರೋಲ್ಸ್ ರಾಯ್ಸ್, ಫೆರಾರಿ ಕಾರುಗಳಿಗೆ ಪೂಜೆಯನ್ನು ಮಾಡಲಾಯಿತು. ಆಯುಧ ಪೂಜೆಯಲ್ಲಿ ಎಂಟಿಬಿ ನಾಗರಾಜ್ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

    ರೋಲ್ಸ್ ರಾಯ್ಸ್ ಫ್ಯಾಂಟಮ್‌, ಫೆರಾರಿ, ಮರ್ಸಿಡಿಸ್ ಬೆಂಝ್, ಟೊಯೋಟಾ ಫಾರ್ಚುನರ್, ಇನ್ನೋವಾ ಸೇರಿದಂತೆ 8 ಐಷಾರಾಮಿ ಕಾರು, ತಮ್ಮ ಲೈಸೆನ್ಸ್ ಹೊಂದಿದ ಪಿಸ್ತೂಲ್ ಗೆ ಸಹ ಎಂಟಿಬಿ ನಾಗರಾಜ್ ಪೂಜೆ ಸಲ್ಲಿಸಿದರು.

    ಕಳೆದ ವರ್ಷ ಎಂಟಿಬಿ ನಾಗರಾಜ್ ಅವರು ವಿಶ್ವದ ದುಬಾರಿ ಸೆಡಾನ್‌ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಖರೀದಿಸಿದ್ದರು. ಮೂಲಬೆಲೆ ಹಾಗೂ ತೆರಿಗೆ ಸೇರಿದಂತೆ ಒಟ್ಟು 12.75 ಕೋಟಿ ರೂ. ಮೌಲ್ಯದ ಈ ಐಷಾರಾಮಿ ಕಾರು ಇಂಗ್ಲೆಂಡಿನಲ್ಲಿ ತಯಾರಾಗಿತ್ತು.

    ದುಬಾರಿ ಬೆಲೆಯ ಕಾರಿನ ಜೊತೆ ಎಂಟಿಬಿ ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದರು. ಬೆಂಗಳೂರಿನ ಬನಶಂಕರಿ ಆರ್ ಟಿಒ ಕೇಂದ್ರದಲ್ಲಿ ಕಾರು ನೊಂದಣಿಯಾಗಿದೆ. ಕೆಎ 59 ಎನ್ 888 ಸಂಖ್ಯೆಯನ್ನು ಎಂಟಿಬಿ ಪಡೆದುಕೊಂಡಿದ್ದಾರೆ.

    ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಳಿಕ ನಡೆದ ಹೊಸಕೋಟೆ ಉಪಚುನಾವಣೆಯಲ್ಲಿ ಎಂಟಿಬಿ ಸೋತಿದ್ದರು. ಕರ್ನಾಟಕಕ ಶ್ರೀಮಂತ ರಾಜಕಾರಣಿಯಾಗಿರುವ ಎಂಟಿಬಿ ಜೂನ್‌ನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ವೇಳೆ ನಾಮಪತ್ರ ಸಲ್ಲಿಸುವಾಗ ತನ್ನ ಬಳಿ 1,224 ಕೋಟಿ ಆಸ್ತಿ ಇದೆ ಎಂದು ಘೋಷಣೆ ಮಾಡಿದ್ದರು.

     

  • ಶಕ್ತಿ, ವ್ಯಾಪ್ತಿಯಲ್ಲಿ ಭಾರತ ಚೀನಾಕ್ಕಿಂತ ದೊಡ್ಡದಾಗಬೇಕು – ಮೋಹನ್ ಭಾಗವತ್ ಕರೆ

    ಶಕ್ತಿ, ವ್ಯಾಪ್ತಿಯಲ್ಲಿ ಭಾರತ ಚೀನಾಕ್ಕಿಂತ ದೊಡ್ಡದಾಗಬೇಕು – ಮೋಹನ್ ಭಾಗವತ್ ಕರೆ

    ಮುಂಬೈ: ಭಾರತ ಶಕ್ತಿ ಹಾಗೂ ವ್ಯಾಪ್ತಿಯಲ್ಲಿ ಚೀನಾಕ್ಕಿಂತ ದೊಡ್ಡದಾಗಿ ಬೆಳೆಯಬೇಕಿದೆ. ಚೀನಾ ವಿಸ್ತರಣಾ ವಾದದ ಕುರಿತು ಇಡೀ ಪ್ರಪಂಚಕ್ಕೆ ತಿಳಿದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.

    ಆರ್‍ಎಸ್‍ಎಸ್‍ನಿಂದ ಆಯುಧ ಪೂಜೆ ಹಾಗೂ ವಿಜಯದಶಮಿ ರ್ಯಾಲಿ ನಡೆಸಲಾಯಿತು. ಕೊರೊನಾ ಹಿನ್ನೆಲೆ ಈ ಬಾರಿಯ ರ್ಯಾಲಿಯಲ್ಲಿ ಕೇವಲ 50 ಜನ ಮಾತ್ರ ಸ್ವಯಂ ಸೇವಕರು ಭಾಗವಹಿಸಿದ್ದರು. ಆಯುಧ ಪೂಜೆ ಬಳಿಕ ಮಾತನಾಡಿದ ಮೋಹನ್ ಭಾಗವತ್, ಚೀನಾಗೆ ತಕ್ಕ ಉತ್ತರ ನೀಡಲು ಭಾರತದ ಸೇನೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸಜ್ಜುಗೊಳಿಸಬೇಕಿದೆ. ಭಾರತ ಮಾತ್ರವಲ್ಲ ಚೀನಾ ವಿರುದ್ಧ ಹಲವು ದೇಶಗಳು ತಿರುಗಿ ಬಿದ್ದಿವೆ ಎಂದು ತಿಳಿಸಿದರು.

    ಒಳನುಸುಳುವಿಕೆ ಕುರಿತು ಭಾರತದ ಪ್ರತ್ಯುತ್ತರ ಕಂಡು ಚೀನಾ ಆಘಾತಕ್ಕೊಳಗಾಗಿದೆ. ಹೀಗಾಗಿ ಭಾರತ ಶಕ್ತಿ ಹಾಗೂ ವ್ಯಾಪ್ತಿಯಲ್ಲಿ ಇನ್ನೂ ಬೃಹದಾಕಾರವಾಗಿ ಬೆಳೆಯಬೇಕಿದೆ. ಕೊರೊನಾ ಗಲಾಟೆ ನಡುವೆ ಚೀನಾ ನಮ್ಮ ಗಡಿಯನ್ನು ಆಕ್ರಮಿಸಿಕೊಳ್ಳುತ್ತಿದೆ. ಚೀನಾದ ವಿಸ್ತರಣಾ ಸ್ವರೂಪದ ಬಗ್ಗೆ ಜಗತ್ತಿಗೆ ತಿಳಿದಿದೆ. ಚೀನಾದ ವಿಸ್ತರಣಾವಾದಕ್ಕೆ ತೈವಾನ್ ಹಾಗೂ ವಿಯಟ್ನಾಂ ಉದಾಹರಣೆಯಾಗಿದೆ ಎಂದು ವಿವರಿಸಿದರು.

    ನಾವು ಎಲ್ಲರೊಂದಿಗೆ ಸ್ನೇಹವನ್ನು ಬಯಸುತ್ತೇವೆ. ಇದು ನಮ್ಮ ಸ್ವಭಾವ. ಆದರೆ ನಮ್ಮ ಶಾಂತಿ, ಸಂಯಮವನ್ನು ದೌರ್ಬಲ್ಯ ಎಂದು ತಪ್ಪಾಗಿ ಭಾವಿಸಿ ವಿವೇಚನಾ ರಹಿತ ಶಕ್ತಿಯಿಂದ ನಮ್ಮನ್ನು ವಿಘಟಿಸುವ ಅಥವಾ ದುರ್ಬಲಗೊಳಿಸುವ ಪ್ರಯತ್ನಗಳನ್ನು ನಾವು ಸಹಿಸುವುದಿಲ್ಲ. ನಮ್ಮ ವಿರೋಧಿಗಳು ಇದನ್ನು ಈಗಲೇ ತಿಳಿಯಬೇಕು ಎಂದು ಎಚ್ಚರಿಸಿದರು.

    ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಯಾವುದೇ ನಿರ್ದಿಷ್ಟ ಧರ್ಮಕ್ಕೆ ವಿರುದ್ಧವಾಗಿಲ್ಲ. ಕೆಲವರು ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಕಾಯ್ದೆ ಮೂಲಕ ಜನ ಸಂಖ್ಯೆಯನ್ನು ನಿರ್ಬಂಧಿಸಲಾಗುತ್ತಿದೆ ಎಂದು ತಪ್ಪಾಗಿ ಹೇಳುತ್ತಿದ್ದಾರೆ ಎಂದು ಸಿಎಎ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ವಿಷಯವನ್ನು ಚರ್ಚಿಸುವ ಮೊದಲು ಕೊರೊನಾ ವೈರಸ್ ಬಗ್ಗೆ ಗಮನಹರಿಸಿ, ಕೆಲವು ಜನರ ಮನಸ್ಸಿನಲ್ಲಿ ಮಾತ್ರ ಕೋಮು ಜ್ವಾಲೆ ಇದೆ. ಕೊರೊನಾ ವೈರಸ್ ಇತರ ವಿಷಯಗಳನ್ನು ಮರೆ ಮಾಡಿದೆ. ನಾವು ಕೊರೊನಾ ವೈರಸ್‍ಗೆ ಹೆದರಬೇಕಾಗಿಲ್ಲ. ಆದರೆ ಎಚ್ಚರಿಕೆಯಿಂದ ಇರಬೇಕು. ನಾವು ಜೀವಿಸುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಕೊರೊನಾ ವೈರಸ್ ಹರಡುತ್ತಿದೆ. ಆದರೆ ಸಾವಿನ ಸಂಖ್ಯೆ ತೀರಾ ಕಡಿಮೆ ಇದೆ. ಕೊರೊನಾ ವೈರಸ್‍ನಿಂದಾಗಿ ನಾವು ನೈರ್ಮಲ್ಯ, ಸ್ವಚ್ಛತೆ, ಪರಿಸರ, ಕುಟುಂಬದ ಮೌಲ್ಯ ಸೇರಿದಂತೆ ವಿವಿಧ ವಿಚಾರಗಳನ್ನು ಅರಿಯುವಂತಾಗಿದೆ ಎಂದು ಅವರು ತಿಳಿಸಿದರು.

    ಕೊರೊನಾ ನಿರುದ್ಯೋಗದ ಸವಾಲುಗಳನ್ನು ನೀಡಿದ್ದು, ಹಲವು ಜನ ಕೆಲಸ ಕಳೆದುಕೊಂಡಿದ್ದಾರೆ. ಕಾರ್ಮಿಕರು ಮತ್ತೆ ನಗರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಅವರಿಗೆ ಹೆಚ್ಚಿನ ಕೆಲಸ ಸಿಗುತ್ತಿಲ್ಲ. ಹೀಗಾಗಿ ವಿವಿಧ ಸ್ಥಳಗಳಲ್ಲಿ ಉದ್ಯೋಗ ಸೃಷ್ಟಿಯ ಸವಾಲುಗಳಿವೆ ಎಂದು ಅವರು ಹೇಳಿದರು.

  • ಕೊರೊನಾ ಮಧ್ಯೆ ಆಯುಧ ಪೂಜೆ ಸಂಭ್ರಮ – ಬೆಂಗಳೂರಲ್ಲಿ ಹಬ್ಬದ ಖರೀದಿ ಜೋರು

    ಕೊರೊನಾ ಮಧ್ಯೆ ಆಯುಧ ಪೂಜೆ ಸಂಭ್ರಮ – ಬೆಂಗಳೂರಲ್ಲಿ ಹಬ್ಬದ ಖರೀದಿ ಜೋರು

    ಬೆಂಗಳೂರು: ರಾಜ್ಯಾದ್ಯಂತ ಇಂದು ಆಯುಧ ಪೂಜೆಯ ಸಂಭ್ರಮ ಕಳೆಗಟ್ಟಿದೆ. ಕೊರೊನಾ ಮಧ್ಯೆ ಆಯುಧ ಪೂಜೆ ಆಚರಣೆ ಭರದಿಂದ ಸಾಗುತ್ತಿದೆ.

    ಆಯುಧ ಪೂಜೆಯ ಪ್ರಯುಕ್ತ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ನಲ್ಲಿ ಬೆಳ್ಳಂಬೆಳಗ್ಗೆ ಜನಜಾತ್ರೆ ಕಂಡುಬಂದಿದೆ. ಹೂ, ಹಣ್ಣು, ಬಾಳೆ ಕಂದು, ಬೂದಗುಂಬಳ ಖರೀದಿ ಭರಾಟೆ ಜೋರಾಗಿದೆ. ಸಾವಿರಾರು ಜನ ಒಟ್ಟಿಗೆ ಸೇರಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ. ಕಾಲಿಡಲು ಜಾಗವಿಲ್ಲದಷ್ಟು ಜನ ತುಂಬಿಕೊಂಡಿದ್ದು, ಹಬ್ಬದ ಹಿನ್ನಲೆಯಲ್ಲಿ ಹೂ ಹಣ್ಣು ಖರೀದಿಸಲು ಜನಸಾಗರವೇ ಮುಗಿಬಿದ್ದಿದೆ.

    ಕೊರೊನಾ ನಿಯಮಗಳು ಸಂಪೂರ್ಣ ಉಲ್ಲಂಘನೆಯಾಗಿವೆ. ಸಾಮಾಜಿಕ ಅಂತರವಿಲ್ಲದೇ ಜನ ವ್ಯಾಪಾರದಲ್ಲಿ ತಲ್ಲೀನರಾಗಿದ್ದು, ಕೊರೊನಾ ಸ್ಫೋಟವಾಗುವುದಕ್ಕೆ ಇದಕ್ಕಿಂತ ಒಳ್ಳೆಯ ಅವಕಾಶ ಮತ್ತೆ ಸಿಗಲಾರದು ಎನ್ನುವಂತಾಗಿದೆ.

    ಸರ್ಕಲ್ ಮಾರಮ್ಮ ದೇವಾಲಯದಲ್ಲಿ ಭಕ್ತಾದಿಗಳೇ ಪೂಜೆ ಸಲ್ಲಿಸುತ್ತಿದ್ದಾರೆ. ವಾಹನಗಳ ಪೂಜೆಯಿಂದ ಅರ್ಚಕರು ದೂರ ಉಳಿದಿದ್ದಾರೆ. ಸದಾ ವಾಹನಗಳ ಪೂಜೆಯಲ್ಲಿ ಬಿಸಿ ಇರುತ್ತಿದ್ದ ಅರ್ಚಕರು, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ನಾಪತ್ತೆಯಾಗಿದ್ದಾರೆ.

    ಬಿಜಿಎಸ್ ಫ್ಲೈ ಓವರ್ ಮೇಲೆ ವೆಹಿಕಲ್ ಪಾರ್ಕಿಂಗ್ ಮಾಡಲಾಗಿದೆ. ಕಿಲೋಮೀಟರ್ ವರೆಗೆ ಜನ ತಮ್ಮ ತಮ್ಮ ವಾಹನ ನಿಲುಗಡೆ ಮಾಡಿದ್ದಾರೆ. ಬಿಜಿಎಸ್ ಪ್ಲೈಓವರ್ ನ ಎರಡೂ ಬದಿಯಲ್ಲಿ ವೆಹಿಕಲ್ ಪಾರ್ಕಿಂಗ್ ಮಾಡಿ ಶಾಪಿಂಗ್ ಗೆ ಹೋಗಿರುವುದು ಕಂಡುಬಂದಿದೆ.

  • 11 ದುಬಾರಿ ಕಾರುಗಳಿಗೆ ಆಯುಧ ಪೂಜೆ ಸಲ್ಲಿಸಿದ ದಚ್ಚು

    11 ದುಬಾರಿ ಕಾರುಗಳಿಗೆ ಆಯುಧ ಪೂಜೆ ಸಲ್ಲಿಸಿದ ದಚ್ಚು

    – ಪುಟ್ಟ ಪೋರಿಯೊಂದಿಗೆ ಡಿಬಾಸ್ ಡ್ಯಾನ್ಸ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ದುಬಾರಿ ಕಾರುಗಳ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ದಿನ ತಡವಾಗಿ ಆಯುಧ ಪೂಜೆಯನ್ನು ಆಚರಿಸಿದ್ದಾರೆ. ಆರ್.ಆರ್. ನಗರದಲ್ಲಿರುವ ತೂಗುದೀಪ್ ಮನೆಯ ಮುಂದೆ ಕಾರುಗಳ ಪೂಜೆ ಮಾಡುವ ಮೂಲಕ ಅದ್ಧೂರಿ ಆಯುಧ ಪೂಜೆಯನ್ನು ನೆರವೇರಿಸಿದ್ದಾರೆ.

    ಒಂದು ದಿನತಡವಾದ್ರು ಲೆಟೇಸ್ಟಾಗಿ ಆಯುಧ ಪೂಜೆ ಮಾಡಿರುವ ದಾಸನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನವರಾತ್ರಿಯ ಆಯುಧ ಪೂಜೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ.

    ದರ್ಶನ್ ಬಿಎಂಡಬ್ಲು, ರೇಂಜ್ ರೋವರ್, ಜಾಗ್ವರ್, ಫಾಚ್ರ್ಯೂನರ್ ಕಾರುಗಳಿವೆ. ಅಷ್ಟೇ ಅಲ್ಲದೆ ಲ್ಯಾಂಬೋರ್ಗಿನಿನ ನ್ಯೂ ಎಡಿಷನ್, ಫೋರ್ಡ್ ಮಸ್ಟಂಗ್ ಸ್ಪೋಟ್ರ್ಸ್ ಕಾರ್ ಗಳನ್ನು ದಚ್ಚು ಹೊಂದಿದ್ದಾರೆ.

    ಕೀನ್ಯಾ ಪ್ರವಾಸ ಮುಗಿಸಿದ ಬಳಿಕ ದರ್ಶನ್ ರಾಬರ್ಟ್ ಚಿತ್ರದ ಶೂಟಿಂಗ್‍ಗಾಗಿ ಲಕ್ನೌಗೆ ತೆರಳಿದ್ದರು. ಮೊನ್ನೆಯಷ್ಟೇ ಬೆಂಗಳೂರಿಗೆ ವಾಪಸ್ಸಾಗಿದ್ದ ದಾಸ ಬಿಡುವಿಲ್ಲದಂತೆ ಶೂಟಿಂಗ್‍ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಯಾವುದೇ ಕಾರ್ ಖರೀದಿಸಿದರು ಮೊದಲು ಚಾಮುಂಡೇಶ್ವರಿ ಪಾದಕ್ಕೆರಗಿ ಪೂಜೆ ಮಾಡಿಸಿ ಬರುತ್ತಾರೆ. ಇದೀಗ ಚಾಮುಂಡೇಶ್ವರಿ ಅಂಬಾರಿ ಮೆರವಣಿಗೆಯ ಉತ್ಸವದ ದಿನ ಆಯುಧ ಪೂಜೆ ಮಾಡಿ ಸಂಭ್ರಮಿಸಿದ್ದಾರೆ.

    ಜೊತೆಗೆ ಇತ್ತೀಚೆಗೆ ರಿಲ್ಯಾಕ್ಸ್ ಮೂಡಿನಲ್ಲಿದ್ದಾಗ ದರ್ಶನ್ ತಮ್ಮದೇ ಅಭಿನಯದ ಚಕ್ರವರ್ತಿ ಸಿನಿಮಾದ ಒಂದು ಮಳೆ ಬಿಲ್ಲು ಒಂದು ಮಳೆ ಮೋಡ ಹಾಡಿಗೆ ಮಸ್ತಾಗೆ ಹೆಜ್ಜೆಹಾಕಿದ್ದಾರೆ. ಅದು ಪುಟಾಣಿ ಮಗುವಿನ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ದರ್ಶನ್ ಜೊತೆಗೆ ಸೃಜನ್ ಲೋಕೇಶ್ ಕೂಡ ಸಾಥ್ ನೀಡಿದ್ದಾರೆ. ಒಂದು ಕಡೆ ಚಾಲೆಂಜಿಂಗ್ ಸ್ಟಾರ್ ಕಾಸ್ಟ್ ಲೀ ಕಾರುಗಳನ್ನು ಒಟ್ಟಾಗಿ ಕಣ್ತುಂಬಿಕೊಳ್ಳುತ್ತಿರುವ ಅಭಿಮಾನಿಗಳು ಥ್ರಿಲ್ಲಾಗಿದ್ದು, ದಚ್ಚು ಸ್ಟೆಪ್ ನೋಡಿ ಫೀದಾ ಆಗುತ್ತಿದ್ದಾರೆ. ಲೈಕ್ಸ್ ಮೇಲೆ ಲೈಕ್ಸ್ ಕೊಡುತ್ತಿದ್ದಾರೆ.

  • ಕೆರೆಯಲ್ಲಿ ಸೈಕಲ್ ತೊಳೆದು, ಈಜಲು ಇಳಿದ ಮೂವರು ಬಾಲಕರು ನೀರುಪಾಲು

    ಕೆರೆಯಲ್ಲಿ ಸೈಕಲ್ ತೊಳೆದು, ಈಜಲು ಇಳಿದ ಮೂವರು ಬಾಲಕರು ನೀರುಪಾಲು

    ಚಿಕ್ಕಮಗಳೂರು: ಆಯುಧ ಪೂಜೆಯ ಹಿನ್ನೆಲೆ ಕೆರೆಯಲ್ಲಿ ತಮ್ಮ ಸೈಕಲ್‍ಗಳನ್ನು ತೊಳೆದು, ಬಳಿಕ ಈಜಲು ನೀರಿಗೆ ಇಳಿದಿದ್ದ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ಲಳ್ಳಿ ಗ್ರಾಮದಲ್ಲಿ ನಡೆದಿದೆ.

    ಹೌಸಿಂಗ್ ಬೋರ್ಡ್ ನಿವಾಸಿಗಳಾದ ಮುರುಳಿ(15), ಜೀವಿತ್(14), ಚಿರಾಗ್(15) ಮೃತ ದುರ್ದೈವಿಗಳು. ಸೋಮವಾರ ಆಯುಧ ಪೂಜೆ ಇದ್ದ ಕಾರಣಕ್ಕೆ ಸಂಜೆ ತಮ್ಮ ಸೈಕಲ್‍ಗಳನ್ನು ತೊಳೆಯಲೆಂದು ಬಿಳೇಕಲ್ಲಳ್ಳಿ ಗ್ರಾಮದ ಕಂಚಿಕಟ್ಟೆ ಕೆರೆ ಬಳಿ ಮೂವರು ಬಾಲಕರು ತೆರೆಳಿದ್ದರು. ಹೀಗೆ ಕೆರೆಯಲ್ಲಿ ಸೈಕಲ್ ತೊಳೆದ ಬಳಿಕ ಈಜಲು ಬಾಲಕರು ನೀರಿಗೆ ಇಳಿದಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ಈಜಲು ಕೆರೆಯಲ್ಲಿ ಇಳಿದಿದ್ದ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮುರುಳಿ, ಜೀವಿತ್ ಇಬ್ಬರ ಮೃತ ದೇಹಗಳು ಪತ್ತೆಯಾಗಿದ್ದು, ಚಿರಾಗ್ ಮೃತ ದೇಹಕ್ಕಾಗಿ ಸ್ಥಳದಲ್ಲಿ ಪೊಲೀಸ್ ಹಾಗೂ ಸ್ಥಳೀಯರಿಂದ ಶೋಧಕಾರ್ಯ ಮುಂದುವರಿದಿದೆ.

    ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶಸ್ತ್ರಾಸ್ತ್ರಗಳನ್ನಿಟ್ಟು ಆಯುಧ ಪೂಜೆ- 8 ಗಂಟೆ ಕಾಲ ಮುತ್ತಪ್ಪ ರೈಗೆ ಸಿಸಿಬಿ ಡ್ರಿಲ್..!

    ಶಸ್ತ್ರಾಸ್ತ್ರಗಳನ್ನಿಟ್ಟು ಆಯುಧ ಪೂಜೆ- 8 ಗಂಟೆ ಕಾಲ ಮುತ್ತಪ್ಪ ರೈಗೆ ಸಿಸಿಬಿ ಡ್ರಿಲ್..!

    – ಬಾಡಿಗಾರ್ಡ್ ಗಳ ಬಳಿಯಿದ್ದ ಗನ್‍ಗಳು ವಶಕ್ಕೆ

    ಬೆಂಗಳೂರು: ಆಯುಧಪೂಜೆ ವೇಳೆ ಶಸ್ತ್ರಾಸ್ತ್ರ ಇಟ್ಟು ಪೂಜೆ ಮಾಡಿದ್ದ ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಅವರು ಶನಿವಾರ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾದ್ರು. ಸುಮಾರು 8 ಗಂಟೆಗಳ ಕಾಲ ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಮುತ್ತಪ್ಪ ರೈ ವಿಚಾರಣೆ ನಡೀತು.

    ಮುತ್ತಪ್ಪ ರೈ ಹೊಂದಿದ್ದ ಶಸ್ತ್ರಾಸ್ತ್ರಗಳಿಗೆ ಸೂಕ್ತ ದಾಖಲೆಗಳು ಮತ್ತು ಲೈಸನ್ಸ್ ಅವಧಿ ಇದ್ದರಿಂದ ವಿಚಾರಣೆ ಬಳಿಕ ಅವರನ್ನ ಬಿಟ್ಟು ಕಳುಹಿಸಲಾಯ್ತು. ಆದ್ರೆ ಮುತ್ತಪ್ಪ ರೈಗೆ ಬೆಂಗಾವಲಿಗಿದ್ದ ಗನ್‍ಮನ್‍ಗಳ ಶಸ್ತ್ರಾಸ್ತ್ರಗಳ ಲೈಸನ್ಸ್ ಅವಧಿ ಮುಗಿದಿರೋದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಸಿಸಿಬಿ ಪೊಲೀಸರು ನೀಡಿದ ದೂರಿನ ಮೇರೆಗೆ ಕಾಟನ್‍ಪೇಟೆ ಪೊಲೀಸರು ಗನ್‍ಮನ್‍ಗಳನ್ನು ಒದಗಿಸಿದ್ದ ಖಾಸಗಿ ಸೆಕ್ಯೂರಿಟಿ ಏಜೆನ್ಸಿ ವಿರುದ್ಧ ಎನ್‍ಸಿಆರ್ ದಾಖಲಿಸಿದ್ದಾರೆ. ಅಲ್ಲದೆ ಮುತ್ತಪ್ಪ ರೈ ಅವರ ಐವರು ಗನ್‍ಮನ್‍ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ರು. ಜೊತೆಗೆ ಏಜೆನ್ಸಿ ಲೈಸೆನ್ಸ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಎನ್‍ಸಿಆರ್ ದಾಖಲಿಸಿ ಏಳು ಮಂದಿಗೆ ನೋಟಿಸ್ ನೀಡಿದ್ದಾರೆ. ಇದರ ಜೊತೆಗೆ 7 ಗನ್‍ಗಳನ್ನು ವಶಕ್ಕೆ ಪಡೆದು ಸೂಕ್ತ ದಾಖಲೆ ನೀಡಿ ಗನ್ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗನ್‍ಗಳನ್ನಿಟ್ಟು ಮುತ್ತಪ್ಪ ರೈಯಿಂದ ಆಯುಧ ಪೂಜೆ!

    ಗನ್‍ಗಳನ್ನಿಟ್ಟು ಮುತ್ತಪ್ಪ ರೈಯಿಂದ ಆಯುಧ ಪೂಜೆ!

    ಬೆಂಗಳೂರು: ನವರಾತ್ರಿ ಕೊನೆಯ ದಿನವಾದ ಇಂದು ದೇಶದೆಲ್ಲೆಡೆ ಆಯುಧಪೂಜೆಯ ಸಂಭ್ರಮ ಮನೆ ಮಾಡಿದ್ದು, ಜಯ ಕರ್ನಾಟಕ ಸಂಘಟನೆಯ ಮುಖ್ಯಸ್ಥ ಮುತ್ತಪ್ಪ ರೈ ಆಯುಧ ಪೂಜೆ ನಡೆಸಿದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

    ತಮ್ಮಲ್ಲಿದ್ದ ಕೋವಿ, ಮೆಷನ್ ಗನ್ ಗಳನ್ನು ಇಟ್ಟು ಮುತ್ತಪ್ಪ ರೈ ಪೂಜೆ ಸಲ್ಲಿಸಿದ್ದಾರೆ. ಪೂಜೆ ಸಲ್ಲಿಸುವ ವೇಳೆ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರು ಪೊಲೀಸರಿಗೆ ಪ್ರಶ್ನೆಗಳ ಸುರಿಮಳೆ ಕೇಳುತ್ತಿದ್ದಾರೆ.

    ಇಷ್ಟೊಂದು ಆಯುಧಗಳಿಗೆ ಸರ್ಕಾರದಿಂದ ಅನುಮತಿ ಇದೆಯೇ? ಪೊಲೀಸರ ಬಳಿ ಇವುಗಳಿಗೆ ದಾಖಲೆಗಳು ಇದ್ಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿಕೊಂಡಿರುವ ಅಲೋಕ್ ಕುಮಾರ್ ಅವರಿಗೆ ಜನ ಪ್ರಶ್ನೆ ಮಾಡುತ್ತಿದ್ದಾರೆ.

    ಈ ಪ್ರಶ್ನೆಗೆ ಕೆಲವರು ಮುತ್ತಪ್ಪ ರೈ ಗನ್ ಮ್ಯಾನ್‍ಗಳ ಆಯುಧವನ್ನು ಇಟ್ಟು ಪೂಜೆ ಮಾಡಿರಬಹುದು ಎಂದು ಉತ್ತರಿಸುತ್ತಿದ್ದಾರೆ. ಒಟ್ಟಿನಲ್ಲಿ ಮೂರು ಫೋಟೋಗಳು ಈಗ ಫುಲ್ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಿಂದೂಗಳಂತೆ ಆಯುಧ ಪೂಜೆ ಮಾಡಿ ಸಂಭ್ರಮಿಸಿದ ಮುಸ್ಲಿಮ್ ವ್ಯಕ್ತಿ!

    ಹಿಂದೂಗಳಂತೆ ಆಯುಧ ಪೂಜೆ ಮಾಡಿ ಸಂಭ್ರಮಿಸಿದ ಮುಸ್ಲಿಮ್ ವ್ಯಕ್ತಿ!

    ಚಿಕ್ಕಮಗಳೂರು: ನಾಡಿನೆಲ್ಲೆಡೆ ಇಂದು ದಸರಾ ಹಾಗೂ ಆಯುಧ ಪೂಜೆಯ ಸಂಭ್ರಮ. ಕಾಫಿನಾಡಿ ಚಿಕ್ಕಮಗಳೂರಿನಲ್ಲೂ ಜನಸಾಮಾನ್ಯರು ಸಂಭ್ರಮದಿಂದ ಆಯುಧ ಪೂಜೆಯನ್ನ ಆಚರಿಸಿದ್ದಾರೆ. ಆದರೆ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂಗಳಂತೆ ತನ್ನ ವಾಹನಗಳಿಗೆ ಆಯುಧ ಪೂಜೆ ಮಾಡಿರೋದು ಮಾತ್ರ ವಿಶೇಷವಾಗಿದೆ.

    ಎಸ್‍ಎಂಎಸ್ ಬಸ್ ಮಾಲೀಕರಾದ ಸಿರಾಜ್ ಹಿಂದೂಗಳಿಗೆ ಕಡಿಮೆ ಇಲ್ಲದಂತೆ ಆಯುಧ ಪೂಜೆಯನ್ನ ಆಚರಿಸಿದ್ದಾರೆ. ಹಿಂದು-ಮುಸ್ಲಿಂ ಎಂಬ ಭೇದ-ಭಾವವಿಲ್ಲ. ನಾವು ವಾಹನಗಳನ್ನ ಇಟ್ಟಿದ್ದೇವೆ. ಅನ್ನ ತಿನ್ನುತ್ತಿರೋದು ಅದರಲ್ಲೇ. ನಾವೆಲ್ಲರೂ ಒಂದೇ. ಭೂಮಿಯ ಮೇಲೆ ಇರುವುದು ಎರಡೇ ಜಾತಿ. ಒಂದು ಹೆಣ್ಣು, ಮತ್ತೊಂದು ಗಂಡು ಹಿಂದೂ ಮುಸ್ಲಿಂ ಎಂಬ ಭೇದ-ಭಾವ ಮಾಡೋದು ಕಿಡಿಗೇಡಿಗಳು ನಾವೆಲ್ಲರೂ ಒಂದೇ ಎಂದು ಹೇಳಿ ಅದ್ಧೂರಿಯಾಗಿ ಆಯುಧ ಪೂಜೆ ಆಚರಿಸಿದ್ದಾರೆ.

    ತನ್ನ ಬಸ್ಸುಗಳಿಗೆ ಚೆಂಡು ಹೂವಿನಿಂದ ಸಿಂಗಾರ ಮಾಡಿ, ಬಲೂನ್, ಬಾಳೆದಿಂಡು, ಮಾವಿನತೋರಣ ಕಟ್ಟಿ ಪೂಜೆ ಮಾಡಿ ಅಕ್ಕಪಕ್ಕದವರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಆಯುಧ ಪೂಜೆ ಮೊಟಕುಗೊಳಿಸಿ ಬೆಂಗ್ಳೂರಿಗೆ ಪ್ರಯಾಣಿಸಿದ್ರು ಪ್ರಮೋದಾದೇವಿ!

    ಆಯುಧ ಪೂಜೆ ಮೊಟಕುಗೊಳಿಸಿ ಬೆಂಗ್ಳೂರಿಗೆ ಪ್ರಯಾಣಿಸಿದ್ರು ಪ್ರಮೋದಾದೇವಿ!

    ಮೈಸೂರು: ಇಂದು ನಾಡಿನಾದ್ಯಂತ ಆಯುಧ ಪೂಜೆ ಹಬ್ಬವನ್ನು ಆಚರಿಸಲಾಗುತ್ತಿದೆ. ಆದರೆ ಇಂದು ಅರಮನೆಯಲ್ಲಿ ನಡೆಯುತ್ತಿದ್ದ ಪೂಜಾ ಕಾರ್ಯಕ್ರಮಗಳನ್ನು ರಾಜವಂಶಸ್ಥೆ ಪ್ರಮೋದಾದೇವಿ ಅವರು ಮೊಟಕುಗೊಳಿಸಿ ದಿಢೀರ್ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

    ರಾಜವಂಶಸ್ಥೆ ವಿಶಾಲಾಕ್ಷಿ ದೇವಿಯವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಿಂದ ದಿಢೀರ್ ಆಗಿ ಪ್ರಮೋದಾದೇವಿ ಅವರು ಬೆಂಗಳೂರಿಗೆ ಪ್ರಯಾಣ ಕೈಗೊಂಡಿದ್ದಾರೆ. ವಿಶಾಲಕ್ಷಿದೇವಿ ಅವರು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹೋದರಿಯಾಗಿದ್ದು, ಸಂಬಂಧದಲ್ಲಿ ಪ್ರಮೋದಾದೇವಿ ಒಡೆಯರ್ ಅವರಿಗೆ ನಾದಿನಿಯಾಗಬೇಕು. ಆದ್ದರಿಂದ ನಾದಿನಿ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಹೊರಟಿದ್ದಾರೆ.

    ವಿಶಾಲಾಕ್ಷಿ ದೇವಿಯವರಿಗೆ ತೀವ್ರ ಅನಾರೋಗ್ಯದ ವಿಚಾರ ತಿಳಿದು ಆಯುಧ ಪೂಜಾ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಪ್ರಮೋದಾದೇವಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿಯ ದಸರಾ ಆಚರಣೆಗಳಲ್ಲೂ ರಾಜಮನೆತನ ಸರಳತೆಯನ್ನು ಕಾಯ್ದುಕೊಂಡಿದೆ. ವಿಶಾಲಾಕ್ಷಿದೇವಿಯವರ ಅನಾರೋಗ್ಯದ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv