Tag: ಆಯಿಲ್ ಟ್ಯಾಂಕರ್

  • ಕಾರಿಗೆ ಆಯಿಲ್ ಟ್ಯಾಂಕರ್ ಡಿಕ್ಕಿ – ಭೀಕರ ಅಪಘಾತಕ್ಕೆ 7 ಮಂದಿ ಬಲಿ

    ಕಾರಿಗೆ ಆಯಿಲ್ ಟ್ಯಾಂಕರ್ ಡಿಕ್ಕಿ – ಭೀಕರ ಅಪಘಾತಕ್ಕೆ 7 ಮಂದಿ ಬಲಿ

    ಲಕ್ನೋ: ಕಾರಿಗೆ ಆಯಿಲ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತಪಟ್ಟಿರುವ ಘಟನೆ ಮಂಗಳವಾರ ತಡರಾತ್ರಿ ಉತ್ತರ ಪ್ರದೇಶದ ಮಥುರಾದ ನೌಜೀಲ್ ಪೊಲೀಸ್ ಠಾಣೆಯ ಸಮೀಪ ನಡೆದಿದೆ.

    ಈ ಕುರಿತಂತೆ ಮಾತನಾಡಿದ ಮಥುರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಗ್ರೋವರ್, ಯಮುನಾ ಎಕ್ಸ್‍ಪ್ರೆಸ್ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕಾರಿಗೆ ಆಯಿಲ್ ಟ್ಯಾಂಕರ್ ಡಿಕ್ಕಿ ಹೊಡೆದದ್ದರಿಂದ ಇಬ್ಬರು ಮಹಿಳೆಯರು ಸೇರಿದಂತೆ 7 ಜನ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಆಯಿಲ್ ಟ್ಯಾಂಕರ್ ಆಗ್ರಾ ಕಡೆಗೆ ಚಲಿಸುತ್ತಿದ್ದಾಗ ಟ್ಯಾಂಕರ್ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮಧ್ಯದಲ್ಲಿ ಕಾರು ಬಂದಿದ್ದರಿಂದ ಆಯಿಲ್ ಟ್ಯಾಂಕರ್ ಕಾರಿಗೆ ಸಹ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದೀಗ ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಗೌರವ್ ಗ್ರೋವರ್ ತಿಳಿಸಿದ್ದಾರೆ ಹಾಗೂ ಮೃತಪಟ್ಟವರು ಶವವನ್ನು ಮರಣೋತ್ತರ ಪರೀಕ್ಷೆಗೆಂದು ಕಳುಹಿಸಲಾಗಿದೆ ಎಂದರು.

  • ವಿಡಿಯೋ: ಬೆಂಕಿಯಿಂದ ಧಗಧಗನೆ ಉರಿಯುತ್ತಿದ್ದ ಆಯಿಲ್ ಟ್ಯಾಂಕರನ್ನ ಬಂಕ್‍ನಿಂದ ದೂರ ಡ್ರೈವ್ ಮಾಡಿ ಜನರ ಪ್ರಾಣ ಉಳಿಸಿದ ಚಾಲಕ

    ವಿಡಿಯೋ: ಬೆಂಕಿಯಿಂದ ಧಗಧಗನೆ ಉರಿಯುತ್ತಿದ್ದ ಆಯಿಲ್ ಟ್ಯಾಂಕರನ್ನ ಬಂಕ್‍ನಿಂದ ದೂರ ಡ್ರೈವ್ ಮಾಡಿ ಜನರ ಪ್ರಾಣ ಉಳಿಸಿದ ಚಾಲಕ

    ಭೋಪಾಲ್: ಆಯಿಲ್ ಟ್ಯಾಂಕರ್ ನ ಚಾಲಕರೊಬ್ಬರು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಹಲವಾರು ಜನರ ಪ್ರಾಣ ಉಳಿಸಿದ ಘಟನೆ ಮಧ್ಯಪ್ರದೇಶದ ನರಸಿಂಗ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

    ತನ್ನ ಸುರಕ್ಷತೆಯನ್ನೇ ಲೆಕ್ಕಿಸದೇ ಚಾಲಕ ಸಾಜಿದ್, ಬೆಂಕಿ ಹೊತ್ತಿಕೊಂಡಿದ್ದ ಆಯಿಲ್ ಟ್ಯಾಂಕರನ್ನ ಪೆಟ್ರೋಲ್ ಬಂಕ್‍ನಿಂದ ದೂರಕ್ಕೆ ಡ್ರೈವ್ ಮಾಡಿಕೊಂಡು ಹೋಗಿದ್ದಾರೆ. ಪೆಟ್ರೋಲ್ ಬಂಕ್‍ನಲ್ಲಿ ಇಂಧನಕ್ಕಾಗಿ ಹಲವಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ತನ್ನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವನ್ನೇ ಸಾಜಿದ್ ತಪ್ಪಿಸಿದ್ದಾರೆ.

    ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ದೃಶ್ಯವನ್ನ ವಿಡಿಯೋ ಮಾಡಿದ್ದು, ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಆಯಿಲ್ ಟ್ಯಾಂಕರ್ ರಸ್ತೆಯಲ್ಲಿ ಬರೋದನ್ನ ನೋಡಿ ಜನ ಗಾಬರಿಗೊಂಡು ಓಡೋದನ್ನ ಕಾಣಬಹುದು. ಈ ವೇಳೆ ಬೈಕ್ ಸವಾರರು ರಸ್ತೆಬದಿ ಆಸರೆ ಪಡೆಯಲು ಯತ್ನಿಸಿದ್ದಾರೆ. ಅಗ್ನಿಶಾಮಕ ವಾಹನ ಬರುವವರೆಗೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

     

    ಟ್ಯಾಂಕರ್‍ಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಹೇಗಾದರೂ ಮಾಡಿ ಪೆಟ್ರೋಲ್ ಬಂಕ್‍ನ ಅಂಡರ್‍ಗ್ರೌಂಡ್ ದಾಸ್ತಾನಿನಿಂದ ಅದನ್ನು ದೂರ ಸರಿಸಬೇಕೆಂದು ಯೋಚಿಸಿದೆ. ಒಂದು ವೇಳೆ ದಾಸ್ತಾನು ಪ್ರದೇಶಕ್ಕೆ ಬೆಂಕಿ ಆವರಿಸಿದ್ದರೆ ಘೋರ ದುರಂತವೇ ಸಂಭವಿಸುತ್ತಿತ್ತು ಎಂದು ಸಾಜಿದ್ ಹೇಳಿದ್ದಾರೆ.

    ಸಾಜಿದ್ ಅವರಿಗೆ ಕೈ ಮೇಲೆ ಸುಟ್ಟ ಗಾಯಗಳಾಗಿದ್ದು, ನರಸಿಂಗ್‍ಪುರ್‍ನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟ್ಯಾಂಕರ್‍ಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎನ್ನುವುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

  • ವಿಡಿಯೋ: ಆಯಿಲ್ ಟ್ಯಾಂಕರ್ ಪಲ್ಟಿ- 20,000 ಲೀಟರ್ ಪೆಟ್ರೋಲ್ ರಸ್ತೆ ಪಾಲು

    ವಿಡಿಯೋ: ಆಯಿಲ್ ಟ್ಯಾಂಕರ್ ಪಲ್ಟಿ- 20,000 ಲೀಟರ್ ಪೆಟ್ರೋಲ್ ರಸ್ತೆ ಪಾಲು

    ನವದೆಹಲಿ: ಆಯಿಲ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಸುಮಾರು 20 ಸಾವಿರ ಲೀಟರ್‍ನಷ್ಟು ಪೆಟ್ರೋಲ್ ಕೆಳಗೆ ಚೆಲ್ಲಿ ರಸ್ತೆ ಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ.

    ಇಲ್ಲಿನ ಮೂಲ್‍ಚಂದ್ ಅಂಡರ್‍ಪಾಸ್ ಬಳಿ ಇಂದು ಬೆಳಿಗ್ಗೆ ಟ್ಯಾಂಕರ್ ಪಲ್ಟಿಯಾಗಿದೆ. ಈ ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದಾರೆಂದು ಎಎನ್‍ಐ ವರದಿ ಮಾಡಿದೆ. ಘಟನೆಯಿಂದಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಕಚೇರಿಗೆ ತೆರಳುತ್ತಿದ್ದವರು ಪರದಾಡುವಂತಾಗಿದೆ.

    ಸದ್ಯ ದೆಹಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಟ್ಯಾಂಕರನ್ನು ರಸ್ತೆಯಿಂದ ಸ್ಥಳಾಂತರಿಸುವ ಕಾರ್ಐ ಮಾಡುತ್ತಿದ್ದು, ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆಂದು ವರದಿಯಾಗಿದೆ.

    ಟ್ಯಾಂಕರ್‍ನ ಚಾಲಕ ಹಾಗೂ ಕ್ಲೀನರ್ ಗಾಯಗೊಂಡಿದ್ದಾರೆ. ರಸ್ತೆಗೆ ಚೆಲ್ಲಿದ ಪೆಟ್ರೋಲ್ ಈಗಿನ ಮಾರುಕಟ್ಟೆ ದರದ ಪ್ರಕಾರ ಅಂದಾಜು 13 ಲಕ್ಷ ಮೌಲ್ಯದ್ದಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

    https://www.youtube.com/watch?v=oUfdUuoghWA