Tag: ಆಮ್ ಆದ್ಮಿ

  • ಎರಡೂವರೆ ದಶಕಗಳ ಬಳಿಕ ರಾಷ್ಟ್ರ ರಾಜಧಾನಿ ಚುಕ್ಕಾಣಿ ಹಿಡಿಯಲಿದಿಯಾ ಬಿಜೆಪಿ?

    ಎರಡೂವರೆ ದಶಕಗಳ ಬಳಿಕ ರಾಷ್ಟ್ರ ರಾಜಧಾನಿ ಚುಕ್ಕಾಣಿ ಹಿಡಿಯಲಿದಿಯಾ ಬಿಜೆಪಿ?

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚುನಾವಣಾ ಕಾವು ಜೋರಾಗಿದೆ. ದಿಲ್ಲಿ ಗದ್ದುಗೆ ಏರಲು ಆಮ್ ಆದ್ಮಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೊಟಿ ಶುರುವಾಗಿದೆ. ಮೇಲ್ನೊಟಕ್ಕೆ ಮೂರು ಪಕ್ಷಗಳು ಚುನಾವಣಾ ಕಣದಲ್ಲಿದ್ದರೂ ಆಪ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ.

    ಮತ್ತೊಮ್ಮೆ ಗದ್ದುಗೆ ಏರಲು ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಆಪ್ ಸಿದ್ದವಾಗಿದ್ದರೇ, ಇತ್ತ ಬಿಜೆಪಿ 27 ವರ್ಷಗಳ ಬಳಿಕ ಚುನಾವಣೆ ಗೆಲ್ಲಲು ತಂತ್ರ ರೂಪಿಸಿದೆ. ಈ ಬಾರಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಘೋಷಿಸದೇ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದೆ.

     1993ರಿಂದ ಇದುವರೆಗೆ ದೆಹಲಿ ವಿಧಾನಸಭೆಗೆ 6 ಚುನಾವಣೆಗಳು ನಡೆದಿದ್ದು, ಈ ಪೈಕಿ ಬಿಜೆಪಿ ಒಮ್ಮೆ ಮಾತ್ರ ಅಧಿಕಾರದ ಚುಕ್ಕಾಣಿ ಹಿಡಿದಿದೆ. 1993ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೆಹಲಿಯ ಎಲ್ಲಾ 70 ಕ್ಷೇತ್ರಗಳಲ್ಲೂ ಸ್ಪರ್ಧಿಸಿ 49 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. 1993ರ ಬಳಿಕ ದೆಹಲಿಯಲ್ಲಿ ಒಟ್ಟು 5 ಬಾರಿ ವಿಧಾನಸಭಾ ಚುನಾವಣೆ ನಡೆದಿದ್ದು, ಯಾವ ಚುನಾವಣೆಯಲ್ಲೂ ಬಿಜೆಪಿ ಇಷ್ಟೊಂದು ಸ್ಥಾನಗಳನ್ನು ಪಡೆದಿಲ್ಲ. 1993ರ ಚುನಾವಣೆಯಲ್ಲಿ ಬಿಜೆಪಿ ಸರ್ವಶ್ರೇಷ್ಠ ಸಾಧನೆ ಮಾಡಿತ್ತು.

    ಇದಾದ ಬಳಿಕ ಮೂರು ಅವಧಿ ಕಾಂಗ್ರೆಸ್ ದೆಹಲಿಯಲ್ಲಿ ಗಟ್ಟಿಯಾಗಿ ನೆಲೆಯೂರಿತ್ತು. ಶೀಲಾ ದೀಕ್ಷಿತ್ ಮುಖ್ಯಮಂತ್ರಿ ಆಗಿ 15 ವರ್ಷಗಳ ಆಡಳಿತ ನಡೆಸಿದ್ದರು. ಶೀಲಾ ಆಡಳಿತದ ಮುಂದೆ ಮಂಕಾಗಿದ್ದು ಬಿಜೆಪಿ 15 ವರ್ಷಗಳ ಕಾಲ ಅಧಿಕಾರ ಹಿಡಿಯಲು ಸಾಧ್ಯವಾಗಿರಲಿಲ್ಲ. 2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 31 ಸ್ಥಾನಗಳನ್ನ ಪಡೆದಿತ್ತು. ಆದರೆ ಬಹುಮತ ಸಾಬೀತುಪಡಿಸಲು ಇನ್ನೂ 4 ಶಾಸಕರ ಬೆಂಬಲ ಸಿಗದೆ ಅಧಿಕಾರದಿಂದ ದೂರ ಉಳಿದಿತ್ತು. ಕಾಂಗ್ರೆಸ್ ಆಪ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. 1998ರಲ್ಲಿ 15 ಸ್ಥಾನ, 2003ರಲ್ಲಿ 20 ಸ್ಥಾನ, 2008ರಲ್ಲಿ 23 ಸ್ಥಾನ ಹಾಗೂ 2015ರಲ್ಲಿ ಕೇವಲ 3 ಸ್ಥಾನ ಪಡೆಯುವಲ್ಲಿ ಮಾತ್ರ ಬಿಜೆಪಿ ಯಶಸ್ವಿಯಾಗಿತ್ತು.

    ಬಿಜೆಪಿ ಉತ್ಸಾಹಕ್ಕೆ ಕಾರಣವೇನು?
    ಈ ಬಾರಿಯ ಚುನಾವಣೆ ಬಿಜೆಪಿಗೆ ಬಹುಮುಖ್ಯವಾಗಿದ್ದು ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದೆ. ಬಿಜೆಪಿ ಈ ಉತ್ಸಾಹಕ್ಕೆ ಮತ್ತೊಂದು ಕಾರಣ ಮತ ಪ್ರಮಾಣ. ಕಳೆದ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಮತ್ತು ಹೆಚ್ಚು ವೋಟ್ ಶೇರ್ ನ್ನು ಪಡೆದಿತ್ತು. 2008ರಲ್ಲಿ ಶೇ. 36.3 ರಷ್ಟು, 2003ರಲ್ಲಿ ಶೇ. 35.2ರಷ್ಟು, 1998ರಲ್ಲಿ ಶೇ. 34.0, 2013ರಲ್ಲಿ ಶೇ. 33.3ರಷ್ಟು ಹಾಗೂ 2015ರಲ್ಲಿ ಶೇ. 32.3ರಷ್ಟು ಮತಗಳಿಕೆ ಮಾಡಿತ್ತು. ಅಲ್ಲದೆ 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಬಿಜೆಪಿ ಪತಾಕೆ ಹಾರಿಸಿತ್ತು.

    ಹೀಗಾಗಿ ಬಿಜೆಪಿ ಈ ಬಾರಿ ಹೆಚ್ಚು ಆಸಕ್ತಿ ಈ ಚುನಾವಣೆ ತೋರಿದ್ದು ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೊಂದಣಿ ಈ ಎರಡು ಕಾಯ್ದೆಗಳ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲದೆ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಬಳಸಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದು ಆಪ್ ಕೂಡ ಕೊಂಚ ಹೆಚ್ಚೇ ಪ್ರತಿಸ್ಪರ್ಧೆ ನೀಡಿದೆ. ಈ ಹೋರಾಟ ನಡುವೆ ಗೆಲುವು ಸಾಧಿಸುವ ಮೂಲಕ ದೆಹಲಿಯಲ್ಲಿ 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲಿಲ್ಲದ ಪ್ರಯತ್ನ ನಡೆಸಿದೆ.

  • ನಾನು ಜಿಲೇಬಿ ತಿನ್ನುವುದರಿಂದ ದೆಹಲಿಯಲ್ಲಿ ಮಾಲಿನ್ಯವಾದ್ರೆ ತ್ಯಜಿಸುತ್ತೇನೆ: ಗಂಭೀರ್

    ನಾನು ಜಿಲೇಬಿ ತಿನ್ನುವುದರಿಂದ ದೆಹಲಿಯಲ್ಲಿ ಮಾಲಿನ್ಯವಾದ್ರೆ ತ್ಯಜಿಸುತ್ತೇನೆ: ಗಂಭೀರ್

    ನವದೆಹಲಿ: ನಾನು ಜಿಲೇಬಿ ತಿನ್ನುವುದರಿಂದ ದೆಹಲಿಯಲ್ಲಿ ಮಾಲಿನ್ಯವಾದರೆ ಅದನ್ನು ತ್ಯಜಿಸುತ್ತೇನೆ ಎಂದು ದೆಹಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ವೈರಲ್ ಆಗಿರುವ ಫೋಟೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

    ಕಳೆದ ವಾರ ಭಾರತ-ಬಾಂಗ್ಲಾ ಟೆಸ್ಟ ಕ್ರಿಕೆಟ್ ವೇಳೆ ಗಂಭೀರ್ ಮಾಜಿ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷಣ್ ಅವರ ಜೊತೆ ಜಿಲೇಬಿ ತಿನ್ನುತ್ತಿರುವ ಫೋಟೋ ವೈರಲ್ ಆಗಿತ್ತು. ಈಗ ಈ ಫೋಟೋ ಬಗ್ಗೆ ಗಂಭೀರ್ ಸಮರ್ಥನೆ ನೀಡಿದ್ದಾರೆ. “ನಾನು ಜಿಲೇಬಿ ತಿನ್ನುವುದರಿಂದ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದರೆ ನಾನು ಶಾಶ್ವತವಾಗಿ ಜಿಲೇಬಿ ತಿನ್ನುವುದನ್ನು ಬಿಟ್ಟು ಬಿಡುತ್ತೇನೆ. 10 ನಿಮಿಷಗಳಲ್ಲಿ ನನ್ನನ್ನು ಟ್ರೋಲ್ ಮಾಡಲು ಶುರು ಮಾಡಿದ್ದೀರಿ, ಇದೇ ಪರಿಶ್ರಮವನ್ನು ಮಾಲಿನ್ಯ ಕಡಿಮೆ ಮಾಡಲು ಮಾಡಿದ್ದರೆ ನಾವು ಉಸಿರಾಡಬಹುದಿತ್ತು” ಎಂದು ಗಂಭೀರ್ ಹೇಳಿದ್ದಾರೆ.

    ನಾನು ಮಾಲಿನ್ಯಕ್ಕಾಗಿ 5 ತಿಂಗಳು ಕೆಲಸ ಮಾಡಿದ್ದೇನೆ. ನಾನು ಮಾಲಿನ್ಯಕ್ಕಾಗಿ ಸ್ಪ್ರಿಂಕ್ಲರ್ ಮಿಶೀನ್, ವಾಕ್ಯೂಂ ಕ್ಲೀನರ್ ಖರೀದಿಸಿದ್ದೇನೆ. ಮಾಲಿನ್ಯ ವಿಷಯವನ್ನು ನಾನು ಹಾಗೂ ದೆಹಲಿ ಜನತೆ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆದರೆ ಆಮ್ ಆದ್ಮಿ ಪಕ್ಷದವರು ಗಂಭೀರವಾಗಿ ತೆಗೆದುಕೊಂಡಿಲ್ಲ. ಮಾಲಿನ್ಯ ತಡೆಯಲು ಅವರು 5 ವರ್ಷದಲ್ಲಿ ಏನನ್ನೂ ಖರೀದಿಸಿದ್ದಾರೆ ಎಂದು ನೀವೇ ಅರವಿಂದ್ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿ ಎಂದು ಗಂಭೀರ್ ಗರಂ ಆದರು.

    ಸಭೆಯಲ್ಲಿ ಏಕೆ ಭಾಗವಹಿಸಲಿಲ್ಲ ಎಂದು ಪ್ರಶ್ನಿಸಿದಾಗ, ನಿಮಗೆ ಸಭೆ ಮುಖ್ಯನಾ? ನನ್ನ ಕೆಲಸ ಮುಖ್ಯವೇ? ನಾನು 5 ತಿಂಗಳಲ್ಲಿ ಮಾಡಿದ ಕೆಲಸವನ್ನು ಹೇಳಿದ್ದೇನೆ. ಹಾಗೆಯೇ ನೀವು 5 ವರ್ಷದಲ್ಲಿ ಅವರು ಮಾಡಿದ ಕೆಲಸವನ್ನು ಕೇಳಿ. 11 ರಂದು ಸಭೆ ಇದೆ ಎಂದು ನನಗೆ ಮೇಲ್ ಬಂದಾಗ ನನ್ನ ಕಾಂಟ್ರ್ಯಾಕ್ಟ್ ಇದೆ ಹಾಗೂ ನಾನು ಜನರಿಗೆ ಮನರಂಜನೆ ನೀಡಬೇಕು ಎಂದು ನಾನು ಅದೇ ದಿನ ಹೇಳಿದೆ. ಎಲ್ಲರೂ ಟ್ರೋಲ್ ಮಾಡುವುದನ್ನು ಬಿಟ್ಟು 5 ತಿಂಗಳು ನಾನು ಮಾಡಿದ ಕೆಲಸದ ಬಗ್ಗೆ ಮಾತನಾಡಿ ಎಂದರು.

    ಇತ್ತೀಚೆಗೆ ಗೌತಮ್ ಗಂಭೀರ್ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ನವದೆಹಲಿಯ ಐಟಿಒ ಇಲಾಖೆಯ ಗೋಡೆ ಹಾಗೂ ಮರಗಳ ಮೇಲೆ ಅಂಟಿಸಲಾಗಿತ್ತು. ಪೋಸ್ಟರ್ ನಲ್ಲಿ, “ನೀವು ಗೌತಮ್ ಗಂಭೀರ್ ಅವರನ್ನು ಎಲ್ಲಿಯಾದರೂ ನೋಡಿದ್ದೀರಾ. ಇವರು ಕೊನೆಯ ಬಾರಿಗೆ ಇಂದೋರ್‍ನಲ್ಲಿ ಜಿಲೇಬಿ ತಿನ್ನುವಾಗ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಇವರು ಕಾಣೆಯಾಗಿದ್ದಾರೆ. ಇಡೀ ದೆಹಲಿಯಲ್ಲಿ ಇವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ” ಎಂದು ಬರೆಯಲಾಗಿತ್ತು.

  • ಬಿಜೆಪಿ ಸಂಸದ ಗೌತಮ್ ಗಂಭೀರ್ ಕಾಣೆ!

    ಬಿಜೆಪಿ ಸಂಸದ ಗೌತಮ್ ಗಂಭೀರ್ ಕಾಣೆ!

    ನವದೆಹಲಿ: ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್ ನವದೆಹಲಿಯ ಐಟಿಒ ಇಲಾಖೆಯ ಗೋಡೆ ಹಾಗೂ ಮರಗಳ ಮೇಲೆ ಅಂಟಿಸಲಾಗಿದೆ.

    ಪೋಸ್ಟರ್ ನಲ್ಲಿ, “ನೀವು ಗೌತಮ್ ಗಂಭೀರ್ ಅವರನ್ನು ಎಲ್ಲಿಯಾದರೂ ನೋಡಿದ್ದೀರಾ. ಇವರು ಕೊನೆಯ ಬಾರಿಗೆ ಇಂದೋರ್ ನಲ್ಲಿ ಜಿಲೇಬಿ ತಿನ್ನುವಾಗ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಇವರು ಕಾಣೆಯಾಗಿದ್ದಾರೆ. ಇಡೀ ದೆಹಲಿಯಲ್ಲಿ ಇವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ” ಎಂದು ಬರೆಯಲಾಗಿದೆ.

    ಇತ್ತೀಚೆಗೆ ಮಾಲಿನ್ಯ ನಿಯಂತ್ರಣ ಬಗ್ಗೆ ಸಭೆಯೊಂದು ನಡೆಯಿತು. ಈ ಸಭೆಯಲ್ಲಿ ಗೌತಮ್ ಗಂಭೀರ್ ಭಾಗವಹಿಸಬೇಕಿತ್ತು. ಆದರೆ ಅವರು ಆ ದಿನ ಇಂದೋರ್ ನಲ್ಲಿ ಇದ್ದರು. ಅಲ್ಲಿ ಅವರು ಭಾರತ ಮತ್ತು ಬಾಂಗ್ಲಾದೇಶದ ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಕಾಮೆಂಟರಿ ನೀಡುತ್ತಿದ್ದರು.

    ಈ ನಡುವೆ ಗಂಭೀರ್ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಅವರ ಜೊತೆ ಜಿಲೇಬಿ ತಿನ್ನುತ್ತಿರುವ ಫೋಟೋ ವೈರಲ್ ಆಗಿತ್ತು. ಇದಾದ ಬಳಿಕ, ಮಾಲಿನ್ಯಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಭೆಗೆ ಗೈರಾದ ಕಾರಣ ಆಮ್ ಆದ್ಮಿ ಪಕ್ಷ ಗೌತಮ್ ವಿರುದ್ಧ ಕಿಡಿಕಾರಿತ್ತು.

    ಅಲ್ಲದೆ ಮಾಲೀನ್ಯದ ಬಗ್ಗೆ ರಾಜಕೀಯ ಬಂದಾಗ ಗೌರಮ್ ಗಂಭೀರ್ ಯಾವಾಗಲೂ ಮುಂದಿರುತ್ತಾರೆ. ಆದರೆ ಮಾಲೀನ್ಯವನ್ನು ನಿಭಾಯಿಸುವ ಕ್ರಮಗಳ ಚರ್ಚೆಯಲ್ಲಿ ಅವರು ಭಾಗವಹಿಸುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

  • ನಟ ಪ್ರಕಾಶ್ ರೈಯಿಂದ ಕೇಜ್ರೀವಾಲ್ ಭೇಟಿ..!

    ನಟ ಪ್ರಕಾಶ್ ರೈಯಿಂದ ಕೇಜ್ರೀವಾಲ್ ಭೇಟಿ..!

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸ್ಪಷ್ಟಪಡಿಸಿರುವ ಬಹುಭಾಷಾ ನಟ ಪ್ರಕಾಶ್ ರೈ ಅವರು ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಎಎಪಿ ಅಧ್ಯಕ್ಷ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರನ್ನು ಭೇಟಿಯಾಗಿದ್ದಾರೆ.

    ಈ ಭೇಟಿಯ ಫೋಟೋವನ್ನು ಅರವಿಂದ್ ಕೇಜ್ರೀವಾಲ್ ಹಾಗೂ ಪ್ರಕಾಶ್ ರೈ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಈ ನಾಯಕರು ಚರ್ಚೆ ನಡೆಸಿ, ಬಿಜೆಪಿ ವಿರುದ್ಧ ಮತ್ತೊಂದು ಅಲೆಯನ್ನು ಹುಟ್ಟು ಹಾಕಲಿದ್ದಾರೆ ಎಂದು ರಾಷ್ಟ್ರ ರಾಜಕಾರಣದಲ್ಲಿ ಇದೀಗ ತೀವ್ರ ಚರ್ಚೆಯಾಗುತ್ತಿದೆ.

    ಟ್ವೀಟ್‍ನಲ್ಲಿ ಏನಿದೆ?:
    ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರನ್ನು ಭೇಟಿ ಮಾಡಿದೆ. ರಾಜಕೀಯ ಮೊದಲ ಬಾರಿಗೆ ಪಾದಾರ್ಪನೆ ಮಾಡಿದ ನನಗೆ ಬೆಂಬಲ ನೀಡಲು ಮುಂದಾದ ಆಮ್ ಆದ್ಮಿ ಪಾರ್ಟಿಗೆ (ಎಎಪಿ) ಧನ್ಯವಾದಗಳು. ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದೇವೆ. ಸಮಸ್ಯೆಗಳ ಬಗ್ಗೆ ಅವರ ತಂಡ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಕೋರಿದ್ದೇನೆ. ಲೋಕಸಭಾ ಚುನಾವಣೆಗೆ ಬೆಂಗಳೂರು ಸೆಂಟರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಸಿಟಿಜನ್ಸ್ ವಾಯ್ಸ್ ಪಾರ್ಲಿಮೆಂಟ್‍ನಲ್ಲಿ ಸದ್ದು ಮಾಡಲಿದೆ ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

    ಪ್ರಕಾಶ್ ರೈ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿ, ಪ್ರಕಾಶ್ ರೈ ಅವರಂತಹ ವ್ಯಕ್ತಿಗಳು ಸಂಸತ್ತಿಗೆ ಬರಬೇಕು. ನಿಮ್ಮ ಭೇಟಿ ಸಂತಸ ತಂದಿದ್ದು, ಎಎಪಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ಜೊತೆಗೆ ನೀನು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯುತ್ತಿರುವುದನ್ನು ಒಪ್ಪುತ್ತೇನೆ ಹಾಗೂ ಬೆಂಬಲಿಸುತ್ತೇನೆ. ಸಂಸತ್ತಿಗೆ ಸ್ವತಂತ್ರ ಅಭ್ಯರ್ಥಿಗಳು ಹಾಗೂ ನಿಸ್ಪಕ್ಷಪಾತವಾಗಿ ಹೋರಾಡುವವರು ಬೇಕಾಗಿದ್ದಾರೆ ಎಂದು ರೀಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 7 ವರ್ಷ ಬಳಿಕ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ

    7 ವರ್ಷ ಬಳಿಕ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ

    ನವದೆಹಲಿ: ಯುಪಿಎ ಆಡಳಿತ ಅವಧಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿ ಸಾವಿರಾರು ಜನರು ಬೀದಿಗಿಳಿದು ಹೋರಾಟ ನಡೆಸುವಂತೆ ಮಾಡಿದ್ದ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ 7 ವರ್ಷಗಳ ಬಳಿಕ ಮತ್ತೆ ಸತ್ಯಾಗ್ರಹ ಆರಂಭಿಸಿದ್ದಾರೆ.

    ಅಂದು ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ವಿರುದ್ಧ ಹೋರಾಟ ಆರಂಭಿಸಿದ್ದ ಅಣ್ಣಾ ಹಜಾರೆ ಅವರು, ಇಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ರಾಮಲೀಲಾ ಮೈದಾನದಲ್ಲಿ ಹೋರಾಟ ಆರಂಭಿಸಿದ್ದಾರೆ.

    ಸತ್ಯಾಗ್ರಹ ಆರಂಭಿಸುವ ಮುನ್ನ ಅಣ್ಣಾ ಹಜಾರೆ ದೆಹಲಿಯಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಸಮರ್ಥ ಲೋಕ್‍ಪಾಲ್ ಜಾರಿ, ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ನೇಮಕ ಮತ್ತು ರೈತರ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ ನೀಡಿವುದು, ಸ್ವಾಮಿನಾಥನ್ ವರದಿ ಜಾರಿ ಅವರ ಪ್ರಮುಖ ಬೇಡಿಕೆಗಳಾಗಿವೆ. ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಬೃಹತ್ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿದೆ.

    ಈ ವೇಳೆ ಮಾತನಾಡಿದ ಅವರು, ಸತ್ಯಾಗ್ರಹದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಸಾವಿರರು ರೈತರು, ಹೋರಾಟಗಾರರನ್ನು ತಡೆಯಲು ಸರ್ಕಾರ ರೈಲ್ವೇ ಸೇವೆಯನ್ನು ಸ್ಥಗಿತಗೊಳಿಸಿರುವ ಕ್ರಮದ ವಿರುದ್ಧ ಕಿಡಿಕಾರಿದರು. ಅಲ್ಲದೇ ನೀವು ಅವರನ್ನು ಹಿಂಸೆಗೆ ತಳ್ಳಲು ಬಯಸುತ್ತೀರಿ. ಪೊಲೀಸರ ರಕ್ಷಣೆ ಬೇಡವೆಂದು ಹಲವು ಪತ್ರಗಳನ್ನು ಬರೆದಿದ್ದೇನೆ. ನಿಮ್ಮ ರಕ್ಷಣೆ ನನ್ನನ್ನು ಉಳಿಸುವುದಿಲ್ಲ. ಇಂತಹ ಸರ್ಕಾರದ ಮೋಸದ ವರ್ತನೆ ಮುಗಿಯುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ರು.

    2011ರಲ್ಲಿ ಅಣ್ಣಾ ಹಜಾರೆ ಆರಂಭಿಸಿದ್ದ `ಭ್ರಷ್ಟಾಚಾರ ವಿರೋಧಿ ಚಳುವಳಿ’ಗೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಭ್ರಷ್ಟಾಚಾರದ ಪ್ರಕರಣಗಳನ್ನು ತನಿಖೆ ಮಾಡಲು ಲೋಕ್‍ಪಾಲ್ ಸ್ಥಾಪಿಸಬೇಕೆಂದು ಒತ್ತಾಯಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅವರ ಈ ಬೇಡಿಕೆಯನ್ನು ಪೂರೈಸುತ್ತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಇದನ್ನು ಅಸಡ್ಡೆಗೊಳಿಸಿದಕ್ಕೆ ಹಜಾರೆ ಅವರು ಮತ್ತೆ ಉಪವಾಸ ಸತ್ಯಗ್ರಹವನ್ನು ಕೈಗೊಂಡಿದ್ದಾರೆ.

    ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ಪ್ರಧಾನಿಗಳಿಗೆ ಸುಮಾರು 30 ಪತ್ರ ಬರೆದಿದ್ದು, ಒಂದಕ್ಕೂ ಉತ್ತರ ಬಂದಿಲ್ಲ. ಮೋದಿಗೆ ಪ್ರಧಾನಮಂತ್ರಿಗಿರಿಯ ಅಹಂ ಇದೆ. ಅದಕ್ಕಾಗಿ ನನ್ನ ಪತ್ರಗಳಿಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದರು. ಮುಂದೆ ಹೋರಾಟ ಆರಂಭಿಸಲಿದ್ದು, ಇದು ಹಿಂದೆಂದೂ ನಡೆದಿರದಂತಹ ಬೃಹತ್ ಚಳವಳಿ ಆಗಿರಲಿದ್ದು, ಸರ್ಕಾರಕ್ಕೆ ಇದು ಎಚ್ಚರಿಕೆಯಾಗಲಿದೆ ಎಂದು ಹಜಾರೆ ಹೇಳಿದ್ರು.

    ನನ್ನ ಸಮಾವೇಶ ಮತ್ತು ಚಳವಳಿಗಳ ಮೂಲಕ ಓಟು ಗಳಿಸುವ ಉದ್ದೇಶ ನನಗಿಲ್ಲ. ಜನ ಲೋಕ್‍ಪಾಲ್‍ಗೆ ಬೃಹತ್ ಜಾಥಾ ನಡೆದಂತೆಯೇ, ರೈತರ ಸಮಸ್ಯೆಗಳ ಬಗ್ಗೆಯೂ ಅದೇ ರೀತಿ ಚಳವಳಿ ನಡೆಯುತ್ತದೆ ಎಂದು ಭಾವಿಸಿದ್ದೇನೆ ಎಂದು ಅವರು ಹೇಳಿದ್ದರು. ಸದ್ಯ ಲೋಕ್‍ಪಾಲ್ ಅನುಷ್ಠಾನ, ಲೋಕಾಯುಕ್ತ ನೇಮಕ, ರೈತರಿಗೆ 5 ಸಾವಿರ ರೂ. ಪಿಂಚಣಿ ಹಾಗೂ ರೈತರ ಬೆಳೆಗಳಿಗೆ ದರ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನ ಮುಂದಿಟ್ಟು ಅಣ್ಣಾ ಹಜಾರೆ ಹೋರಾಟಕ್ಕೆ ಮುಂದಾಗಿದ್ದಾರೆ.

    2011ರ ಪ್ರತಿಭಟನೆ ವೇಳೆ ಅಣ್ಣಾ ಹಾಜರೆ ಅವರ ಪರ ನಿಂತಿದ್ದ ಕೆಲ ನಾಯಕರು ಬಳಿಕ ಆಮ್ ಆದ್ಮಿ ರಾಜಕೀಯ ಪಕ್ಷ ಸ್ಥಾಪಿಸಿ ಅಧಿಕಾರ ಪಡೆದಿದ್ದರು. ಆದರೆ ಈ ಬಾರಿಯ ಚಳುವಳಿಯಲ್ಲಿ ಮತ್ತೊಬ್ಬ ಅರವಿಂದ ಕೇಜ್ರಿವಾಲ್ ಹುಟ್ಟಿ ಬಾರದೇ ಇದ್ದರೆ ಅಷ್ಟೇ ಸಾಕು ಎಂದು ಅಣ್ಣಾ ಹಜಾರೆ ಹೇಳಿದ್ದರು.