Tag: ಆಮ್ ಆದ್ಮಿ ಪಾರ್ಟಿ

  • ಶಾಲಾ ಶುಲ್ಕ ಪಾವತಿ- ಸರ್ಕಾರದ ನೆರವಿಗೆ ಪೋಷಕರ ಆಗ್ರಹ

    ಶಾಲಾ ಶುಲ್ಕ ಪಾವತಿ- ಸರ್ಕಾರದ ನೆರವಿಗೆ ಪೋಷಕರ ಆಗ್ರಹ

    ಬೆಂಗಳೂರು: ಮಕ್ಕಳ ಶಾಲಾ ಶುಲ್ಕ ಪಾವತಿಸಲು ಸರ್ಕಾರ ಸಹಾಯ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿ ಆಯೋಜಿಸಿದ್ದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ನೂರಾರು ಪೋಷಕರು ಆಗ್ರಹಿಸಿದ್ದಾರೆ.

    ಕಳೆದ ಒಂದೂವರೆ ವರ್ಷಗಳಲ್ಲಿ ಲಾಕ್‍ಡೌನ್‍ನಿಂದಾಗಿ ಆದಾಯ ಹಾಗೂ ಉಳಿತಾಯವನ್ನು ಕಳೆದುಕೊಂಡು ಪೋಷಕರು ಸಂಕಷ್ಟದಲ್ಲಿದ್ದಾರೆ. ಈಗ ಸರ್ಕಾರವು ಅವರಿಗೆ ಸಹಾಯ ಮಾಡದಿದ್ದರೆ ಅನೇಕರಿಗೆ ತಮ್ಮ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡರು. ಪತಿ ಹಾಗೂ ತಂದೆಯನ್ನು ಕಳೆದುಕೊಂಡಿರುವ ನಾನು ಇಬ್ಬರು ಮಕ್ಕಳನ್ನು ಓದಿಸಲು ಹಲವು ಮನೆಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಲಾಕ್‍ಡೌನ್‍ನಿಂದಾಗಿ ನನಗೆ ಒಂದೂವರೆ ವರ್ಷ ಉದ್ಯೋಗವಿರಲಿಲ್ಲ. ನಾನು ಮಕ್ಕಳ ಶಾಲಾ ಶುಲ್ಕ ಪಾವತಿಸಲು ಹೇಗೆ ಸಾಧ್ಯ? ಎಂದು ಪೋಷಕರಾದ ಪವಿತ್ರ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಪ್ರಶ್ನಿಸಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನಸಭೆಯ ಮಾಜಿ ಸಭಾಧ್ಯಕ್ಷರಾದ ಕೆ.ಆರ್.ರಮೇಶ್ ಕುಮಾರ್, ಪೋಷಕರಿಗೆ ನೆರವಾಗಲು ಸರ್ಕಾರ ಏನನ್ನಾದರೂ ಮಾಡಲೇ ಬೇಕು. ದೀರ್ಘಾವಧಿಯಲ್ಲಿ, ಸರ್ಕಾರಿ ಶಾಲೆಗಳನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಇದನ್ನೂ ಓದಿ: ಬಸ್‍ನಲ್ಲಿ ನಿದ್ದೆ ಮಾಡುವ ಅಭ್ಯಾಸ ಇದೆಯೇ?- ಈ ಸುದ್ದಿ ಓದಿ

    ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮಾತನಾಡಿ, ಕಾನೂನಿನ ಪ್ರಕಾರ ಗುಣಮಟ್ಟದ ಹಾಗೂ ಉಚಿತ ಶಿಕ್ಷಣ ಪಡೆಯುವ ಹಕ್ಕನ್ನು ಮಕ್ಕಳು ಹೊಂದಿದ್ದಾರೆ. ಆದರೆ ಬಿಜೆಪಿ ಸರ್ಕಾರವು ಈ ಸಂಕಷ್ಟದ ಸಮಯದಲ್ಲಿ ಪೋಷಕರಿಗೆ ನೆರವಾಗಲು ನಿರ್ಲಕ್ಷ್ಯ ತೋರುತ್ತಿದೆ. ಅವರ ಬೇಡಿಕೆಗಳನ್ನು ಕೇಳಿ ನೆರವಾಗಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ:  ಮಳೆಗಾಗಿ ಭಕ್ತನಿಂದ ಆಂಜನೇಯನಿಗೆ ಪ್ರಾರ್ಥನೆ – ಹೂ ಪ್ರಸಾದ ನೀಡಿದ ಹನುಮಂತ

    ಬೆಂಗಳೂರು ನಗರದ ಎಎಪಿ ಅಧ್ಯಕ್ಷರಾದ ಮೋಹನ್ ದಾಸರಿ ಮಾತನಾಡಿ, ಇಲ್ಲಿ ಕೇಳಿಬಂದ ಪೋಷಕರ ಬೇಡಿಕೆಗಳನ್ನು ನಾವು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‍ರವರಿಗೆ ತಲುಪಿಸುತ್ತೇವೆ. ಹಾಗೂ ಶಾಲಾ ಶುಲ್ಕಕ್ಕೆ ಸಂಬಂಧಿಸಿ ಪೋಷಕರಿಗೆ ನೆರವಾಗುವಂತಹ ವಿಸ್ತೃತ ಯೋಜನೆಯನ್ನು ಶೀಘ್ರದಲ್ಲೇ ರೂಪಿಸಬೇಕು ಹಾಗೂ ಪರಿಣಾಮಕಾರಿಯಾದ ಶಾಲಾ ನಿರ್ವಹಣಾ ಸಮಿತಿಗಳನ್ನು ರಚಿಸಬೇಕೆಂದು ಆಗ್ರಹಿಸುತ್ತೇವೆ. ದೆಹಲಿಯ ಎಎಪಿ ಸರ್ಕಾರವು ಅಲ್ಲಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲೇ ಇಲ್ಲೂ ಕೂಡ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.

    ಪೋಷಕರ ಸಂಘಟನೆಗಳು, ಸಮನ್ವಯ ಸಮಿತಿ ಹಾಗೂ ವಾಯ್ಸ್ ಆಫ್ ಪೇರೆಂಟ್ಸ್ ಸಂಘಟನೆಗಳು ಸರ್ಕಾರವು ನೆರವು ನೀಡದಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದವು. ತಮಗೆ ಬೆಂಬಲವಾಗಿರುವ ಎಎಪಿಯನ್ನು ಪೋಷಕರು ಶ್ಲಾಘಿಸಿದರು.

  • ನಿಷ್ಕ್ರಿಯ ಮಹಿಳಾ ಆಯೋಗದ ವಜಾಗೆ ಎಎಪಿ ಆಗ್ರಹ

    ನಿಷ್ಕ್ರಿಯ ಮಹಿಳಾ ಆಯೋಗದ ವಜಾಗೆ ಎಎಪಿ ಆಗ್ರಹ

    ಬೆಂಗಳೂರು: ನಾಡಿನ ಮಹಿಳೆಯರ ರಕ್ಷಣೆಯಲ್ಲಿ ರಾಜ್ಯ ಮಹಿಳಾ ಆಯೋಗವು ಸಂಪೂರ್ಣ ವಿಫಲವಾಗಿದ್ದು, ಆಯೋಗದ ಈಗಿನ ಅಧ್ಯಕ್ಷರು ಹಾಗೂ ಸದಸ್ಯರನ್ನು ವಜಾ ಮಾಡಿ ನೂತನ ಆಯೋಗ ರಚಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.

    ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಎಪಿಯ ಮಹಿಳಾ ಘಟಕದ ಅಧ್ಯಕ್ಷರಾದ ಕುಶಲ ಸ್ವಾಮಿ, ‘ಮಹಿಳಾ ಆಯೋಗದ ಅಧ್ಯಕ್ಷರಾದ ಆರ್.ಪ್ರಮೀಳಾ ನಾಯ್ಡು ಹಾಗೂ ಸದಸ್ಯರು ಸರ್ಕಾರದ ಸೌಲಭ್ಯ ಪಡೆಯುವುದಕ್ಕೆ ಸೀಮಿತವಾಗಿದ್ದಾರೆ. ರಾಜ್ಯಾದ್ಯಂತ ಮಹಿಳೆಯರ ಮೇಲೆ ಕಿರುಕುಳ, ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕನಿಷ್ಠ ಸೌಜನ್ಯ ಕೂಡ ಆಯೋಗದ ಅಧ್ಯಕ್ಷರಿಗೆ ಇಲ್ಲ. ಪೊಲೀಸ್ ಇಲಾಖೆಯ ಮೇಲೆ ಹಿಡಿತ ಸಾಧಿಸುವುದರಲ್ಲಿ ಆಯೋಗ ವಿಫಲವಾಗಿದೆ. ರಾಜ್ಯದ ಜನತೆಗೆ ಆಯೋಗದ ಮೇಲೆ ವಿಶ್ವಾಸವೇ ಇಲ್ಲವಾಗಿದೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಎಲ್ಲಾ ಕ್ಷೇತ್ರದಲ್ಲೂ ಇಬ್ಬಿಬ್ಬರನ್ನು ಇಟ್ಟಿರ್ತಾರೆ: ಎಸ್.ಆರ್ ಶ್ರೀನಿವಾಸ್

    ಪ್ರಮೀಳಾ ನಾಯ್ಡುರವರು ಆಯೋಗದ ಅಧ್ಯಕ್ಷರೋ ಅಥವಾ ಬಿಜೆಪಿಯ ಏಜೆಂಟೋ ಎಂಬ ಅನುಮಾನ ಕಾಡುತ್ತಿದೆ. ಮಹಿಳಾ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೆ, ಪ್ರಕರಣಗಳು ಜನರ ಗಮನಕ್ಕೆ ಬಂದು ಸರ್ಕಾರದ ಮಾನ ಬೀದಿ ಪಾಲಾಗುತ್ತದೆ ಎಂಬ ಕಾರಣಕ್ಕೆ ಅವರು ನಿಷ್ಕ್ರಿಯರಾಗಿದ್ದಾರೆ. ರಾಜ್ಯದಲ್ಲಿ ಪ್ರತಿದಿನ ಸರಾಸರಿ ಒಂದಕ್ಕಿಂತ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಆಯೋಗ ನಿದ್ರಾವಸ್ಥೆಯಲ್ಲಿ ಇರುವುದು ಖಂಡನೀಯ. ಬಾಲ್ಯ ವಿವಾಹಗಳು ಎಗ್ಗಿಲ್ಲದೇ ನಡೆಯುತ್ತಿವೆ. ಕಾಟಾಚಾರಕ್ಕೆ ಎಫ್‍ಐಆರ್ ದಾಖಲಿಸಿಕೊಳ್ಳಲಾಗುತ್ತಿದೆಯೇ ಹೊರತು, ಆರೋಪಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಕೋಟ್ಯಾಂತರ ಅನುದಾನ, ನಾನಾ ಸೌಲಭ್ಯಗಳನ್ನು ಆಯೋಗಕ್ಕೆ ನೀಡಿ ದುಂದುವೆಚ್ಚ ಮಾಡುವ ಮಾಡಲು ಆಯೋಗವನ್ನು ವಜಾ ಮಾಡಿ, ಮಹಿಳೆಯರ ಬಗ್ಗೆ ಕಾಳಜಿ ಹೊಂದಿರುವ ದಿಟ್ಟ ಮಹಿಳೆಯ ನೇತೃತ್ವದಲ್ಲಿ ನೂತನ ಆಯೋಗ ರಚಿಸಲಿ ಎಂದು ಕುಶಲ ಸ್ವಾಮಿಯವರು ಒತ್ತಾಯಿಸಿದ್ದಾರೆ.

    ಆಮ್ ಆದ್ಮಿ ಪಾರ್ಟಿಯ ಮಹಿಳಾ ಮುಖಂಡರಾದ ಉಷಾ ಮೋಹನ್‍ರವರು ಮಾತನಾಡಿ, ‘ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‍ರವರ ಸರ್ಕಾರವು ಸ್ವಾತಿ ಮಾಲಿವಾಲ್ ಎಂಬ ದಿಟ್ಟ ಹೋರಾಟಗಾರ್ತಿಯನ್ನು ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದೆ. ಕಳೆದ ಐದು ವರ್ಷಗಳಲ್ಲಿ ಅವರ ನೇತೃತ್ವದಲ್ಲಿ 1,00,672 ಪ್ರಕರಣಗಳಿಗೆ ಸಂಬಂಧಿಸಿ 1,42,234 ಜನರ ವೈಯಕ್ತಿಕ ವಿಚಾರಣೆ ನಡೆದಿದೆ. ಸಹಾಯವಾಣಿಗೆ ಕರೆ ಮಾಡಿ ಕಷ್ಟ ಹೇಳಿಕೊಂಡ ದೆಹಲಿಯ 4.25 ಲಕ್ಷ ಮಹಿಳೆಯರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗಿದೆ. ದೆಹಲಿಯ ಮಹಿಳಾ ಆಯೋಗವು 250ಕ್ಕೂ ಶಿಫಾರಸ್ಸುಗಳು ಸರ್ಕಾರ ಹಾಗೂ ಪ್ರಾಧಿಕಾರಕ್ಕೆ ಕಳುಹಿಸಿದೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವ ಸ್ವಾತಿ ಮಾಲಿವಾಲ್‍ರವರನ್ನು ಇಡೀ ದೇಶವೇ ಕೊಂಡಾಡುತ್ತಿದೆ. ನಮ್ಮ ಕರ್ನಾಟಕದ ಮಹಿಳಾ ಆಯೋಗಕ್ಕೂ ಅಂತಹ ಅಧ್ಯಕ್ಷರ ಅಗತ್ಯವಿದೆ. ಮಹಿಳೆಯರ ಮೇಲೆ ದೌರ್ಜನ್ಯವಾದಾಗ ಜಾಣ ಕುರುಡು ತೋರುವ ಈಗಿನ ಅಧ್ಯಕ್ಷರಿಂದ ಮಹಿಳೆಯರಿಗೆ ಏನೂ ಉಪಯೋಗವಿಲ್ಲ. ಬಸವರಾಜ್ ಬೊಮ್ಮಾಯಿಯವರು ಈ ಬಗ್ಗೆ ಗಮನವಹಿಸಬೇಕು’ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಾಲ್ವರು ತೊಗರಿ ಕಳ್ಳರ ಬಂಧನ – 7.80 ಸಾವಿರ ಮೌಲ್ಯದ ತೊಗರಿ ಜಪ್ತಿ

  • ಬೆಲೆ ಏರಿಕೆ ವಿರುದ್ಧ ಆಮ್ ಆದ್ಮಿ ಪಕ್ಷದಿಂದ ಬೃಹತ್ ಪ್ರತಿಭಟನೆ

    ಬೆಲೆ ಏರಿಕೆ ವಿರುದ್ಧ ಆಮ್ ಆದ್ಮಿ ಪಕ್ಷದಿಂದ ಬೃಹತ್ ಪ್ರತಿಭಟನೆ

    ಬೆಂಗಳೂರು: ಬೆಲೆ ಏರಿಕೆ ವಿರೋಧಿಸಿ ಮಹದೇವಪುರ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿಯ ನೂರಾರು ಕಾರ್ಯಕರ್ತರು ಆಟೋ ರ್ಯಾಲಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಕ್ಷೇತ್ರದ ಅಧ್ಯಕ್ಷ ಅಶೋಕ್ ಮೃತ್ಯುಂಜಯ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಶೇ.60ಕ್ಕೂ ಹೆಚ್ಚು ಪೆಟ್ರೋಲ್, ಡೀಸೆಲ್ ಹಾಗೂ ತೈಲ ಬೆಲೆಗಳ ಮೇಲೆ ಅಬಕಾರಿ ಸುಂಕ, ವ್ಯಾಟ್ ಸುಂಕ ಹಾಗೂ ಇನ್ನಿತರ ಸೆಸ್‍ಗಳನ್ನು ವಿಧಿಸುವುದರ ಮೂಲಕ ದೇಶದ ಎಲ್ಲಾ ಪ್ರಜೆಗಳ ಜೇಬಿಗೆ ಕನ್ನ ಹಾಕುವ ಕೆಲಸಗಳನ್ನು ಮಾಡುತ್ತಿರುವುದು ಖಂಡನೀಯ ಎಂದರು. ಇದನ್ನೂ ಓದಿ:ಆನೇಕಲ್ ರೇವ್ ಪಾರ್ಟಿ ಪ್ರಕರಣ- 35 ಜನರ ಬಂಧನ

    ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ಮಾರುಕಟ್ಟೆ ವಿನಿಮಯ ದರ, ಅವಾಸ್ತವಿಕ ವಿಚಾರಗಳನ್ನು ಹೇಳುವುದರ ಮೂಲಕ ರಾಜ್ಯ ಹಾಗೂ ದೇಶದ ಪ್ರಜೆಗಳ ದಿಕ್ಕನ್ನು ತಪ್ಪಿಸಿ ಬೆಲೆ ಏರಿಸಿದೆ. ಜನತೆಯ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ:ಮತ್ತೆ ಒಂದಾಗಲಿರುವ ರಾಜಕುಮಾರ ಜೋಡಿ – ಸೆಟ್ಟೇರಲಿದೆ ಪುನೀತ್, ಸಂತೋಷ್ ಕಾಂಬಿನೇಷನ್‍ನ ಹೊಸ ಸಿನಿಮಾ

    ಇತ್ತೀಚೆಗೆ ವಿಧಾನ ಸಭೆಯಲ್ಲೂ ಬೆಲೆ ಏರಿಕೆಗಳ ಬಗ್ಗೆ ಚರ್ಚೆ ನಡೆದರೂ, ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ಇದುವರೆಗೂ ಯಾವುದೇ ತೆರಿಗೆಯನ್ನು ಇಳಿಸಿಲ್ಲ. ಈ ಕೂಡಲೇ ರಾಜ್ಯ ಸರ್ಕಾರ ಬೆಲೆ ಏರಿಕೆಯನ್ನು ಇಳಿಸದಿದ್ದರೆ ಆಮ್ ಆದ್ಮಿ ಪಾರ್ಟಿ ಕರ್ನಾಟಕ ರಾಜ್ಯದಾ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸಿದರು.

     

  • ಜನಾಶೀರ್ವಾದ ಬದಲು ಹೆಣಾಶೀರ್ವಾದ ಯಾತ್ರೆ ಮಾಡಲಿ: ಎಎಪಿ

    ಜನಾಶೀರ್ವಾದ ಬದಲು ಹೆಣಾಶೀರ್ವಾದ ಯಾತ್ರೆ ಮಾಡಲಿ: ಎಎಪಿ

    ಬೆಂಗಳೂರು: ರಾಜ್ಯದ ಸಾವಿರಾರು ಜನರು ಕೋವಿಡ್‍ಗೆ ಬಲಿಯಾಗುತ್ತಿದ್ದಾಗ ನೆರವಿಗೆ ಬಾರದೇ ಅವಿತು ಕುಳಿತು ಈಗ ದಿಢೀರ್ ಪ್ರತ್ಯಕ್ಷರಾಗಿರುವ ಬಿಜೆಪಿ ನಾಯಕರು ಜನಾಶೀರ್ವಾದ ಯಾತ್ರೆಯ ಬದಲು ಹೆಣಾಶೀರ್ವಾದ ಯಾತ್ರೆ ಮಾಡುವುದು ಸೂಕ್ತ ಎಂದು ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆಕ್ರೋಶ ವ್ಯಕ್ತಪಡಿಸಿದರು.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜಗದೀಶ್ ವಿ.ಸದಂ ಅವರು, ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸೋಂಕಿತರಿಗೆ ಬೆಡ್, ಆಕ್ಸಿಜನ್ ಕಲ್ಪಿಸುವುದನ್ನು ಸರ್ಕಾರ ನಿರ್ಲಕ್ಷಿಸಿತು. ಪರಿಣಾಮವಾಗಿ, ಮೂರು ಲಕ್ಷಕ್ಕೂ ಅಧಿಕ ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕೃತ ವಿರೋಧಪಕ್ಷ ಹೇಳುತ್ತಿದೆ. ರಾಜ್ಯ ಆರೋಗ್ಯ ಇಲಾಖೆಯ ಕೋವಿಡ್ ಬುಲೆಟಿನ್ ಪ್ರಕಾರ ಆಗಸ್ಟ್ 2ರ ತನಕ 36 ಸಾವಿರ ಜನರು ಮೃತಪಟ್ಟಿದ್ದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸಿರುವ ಡೆತ್ ಆಡಿಟ್‍ನಲ್ಲಿ ಆಗಸ್ಟ್ 2ರ ತನಕ ಕೇವಲ 14,371 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಈ ರೀತಿ ಒಂದೊಂದು ಕಡೆ ಒಂದೊಂದು ಅಂಕಿಅಂಶ ಹೇಳುತ್ತಿರುವುದನ್ನು ಗಮನಿಸಿದರೆ ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆ- ಕೃಷ್ಣ ಮಠಕ್ಕೆ ಭೇಟಿ

    ಸುತ್ತಮುತ್ತಲಿನ ಮನೆಗಳನ್ನು ಸಮೀಕ್ಷೆ ನಡೆಸಿದಾಗ ಹಾಗೂ ಮಾಧ್ಯಮಗಳ ವರದಿಗಳನ್ನು ಗಮನಿಸಿದಾಗ ಮೂರು ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿರುವ ಸುಳಿವು ಸಿಗುತ್ತಿದೆ. ಬಿಜೆಪಿ ನಾಯಕರು ಜನಾಶೀರ್ವಾದ ಹೆಸರಿನಲ್ಲಿ ಸುಳ್ಳುಗಳನ್ನು ಪ್ರಚಾರ ಮಾಡುವ ಬದಲು ಹೆಣಾಶೀರ್ವಾದ ಹೆಸರಿನಲ್ಲಿ ಸ್ಮಶಾನಕ್ಕೆ ಹೋಗಿ, ನಿಜಕ್ಕೂ ಕೋವಿಡ್‍ನಿಂದ ಮೃತಪಟ್ಟ ಎಷ್ಟು ಶವಗಳು ಅಲ್ಲಿಗೆ ಬಂದಿವೆ ಎಂದು ವಿಚಾರಿಸಲಿ ಎಂದು ವಾಗ್ದಾಳಿ ನಡೆಸಿದರು.

    ಕೇಂದ್ರ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ 20 ಎಸ್‍ಸಿ/ಎಸ್‍ಟಿ, 27 ಒಬಿಸಿ ಸಚಿವರಿದ್ದಾರೆ ಎಂದು ಬಿಜೆಪಿ ನಾಯಕರು ಬೀಗುತ್ತಿದ್ದಾರೆ. ಆದರೆ ಸತ್ಯವೇನೆಂದರೆ, ಅವರೆನ್ನಲ್ಲ ಕೇವಲ ನಾಮಕಾವಸ್ಥೆಗೆ ಸಚಿವರನ್ನಾಗಿ ಮಾಡಲಾಗಿದೆ. ಆ ಸಚಿವರ ಅಧಿಕಾರವನ್ನೆಲ್ಲಾ ಪ್ರಧಾನಿ ಮೋದಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಆ 47 ಸಚಿವರು ಸಣ್ಣ ಕಡತಕ್ಕೆ ಸಹಿ ಹಾಕಬೇಕಾದರೂ ಮೋದಿಯವರ ಅಪ್ಪಣೆ ಪಡೆಯಬೇಕಾಗಿದೆ. ಇನ್ನು ಅವರು ತಮ್ಮ ಸಮುದಾಯದ ಜನರ ಹಿತ ಕಾಪಾಡುವುದು ದೂರದ ಮಾತು. ಕಳೆದ ಏಳು ವರ್ಷಗಳಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗದವರಿಗೆ ಮೋದಿ ಏನು ಮಾಡಿದ್ದಾರೆ? ತೆಲಂಗಾಣ ಸರ್ಕಾರವು ಎಲ್ಲಾ ದಲಿತ ಕುಟುಂಬಗಳಿಗೆ 10 ಲಕ್ಷ ರೂಪಾಯಿ ನೀಡುವ ಯೋಜನೆ ಘೋಷಿಸಿದೆ. ಅಲ್ಲಿ ಸಾಧ್ಯವಾಗುವ ಇಂತಹ ಯೋಜನೆ ನಮ್ಮಲ್ಲಿ ಏಕೆ ಸಾಧ್ಯವಾಗುವುದಿಲ್ಲ? ಕರ್ನಾಟಕ ಸರ್ಕಾರಕ್ಕೂ ದಲಿತರ ಮೇಲೆ ಕಾಳಜಿ ಇದ್ದರೆ ಅಂತಹದೇ ಯೋಜನೆ ಘೋಷಿಸಲಿ ಎಂದು ಆಗ್ರಹಿಸಿದರು.

    ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರೂ. ಹಾಕುವಷ್ಟು ಹಣ ಸ್ವಿಸ್ ಬ್ಯಾಂಕ್‍ನಲ್ಲಿದ್ದು, ಅದನ್ನು ಭಾರತಕ್ಕೆ ತರುವುದಾಗಿ 2014ರಲ್ಲಿ ಬಿಜೆಪಿ ಹೇಳಿತ್ತು. ಇದನ್ನು ನಂಬಿ ಜನರು ಬಿಜೆಪಿಗೆ ಮತ ಚಲಾಯಿಸಿದ್ದರು. ಆದರೆ ಈಗ ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಮಾಡಲೂ ಕಷ್ಟಪಡುವಂತಹ ದುಃಸ್ಥಿತಿಗೆ ಜನರನ್ನು ಮೋದಿ ಸರ್ಕಾರ ತಂದಿದೆ. ಅಗತ್ಯ ವಸ್ತುಗಳ ಬೆಲೆ ದಿನದಿನಕ್ಕೆ ಏರುತ್ತಲೇ ಇದೆ. 80 ರೂಪಾಯಿಗೆ ಸಿಗುತ್ತಿದ್ದ ಅಡುಗೆ ಎಣ್ಣೆಯ ಬೆಲೆ 150 ರೂಪಾಯಿಗೂ ಅಧಿಕವಾಗಿದೆ. ಕಳೆದ ಕೆಲವು ವರ್ಷಗಳಿಂದ ಕಚ್ಚಾ ತೈಲದ ಬೆಲೆ ಕಡಿಮೆಯಾಗುತ್ತಿದ್ದರೂ ತೆರಿಗೆಯನ್ನು ಏರಿಸಿದ್ದರಿಂದ ಭಾರತೀಯರು ಪೆಟ್ರೋಲ್, ಡೀಸೆಲ್‍ಗೆ ದುಬಾರಿ ಬೆಲೆ ತೆರಬೇಕಾಗಿದೆ. ಪ್ರತಿ ಲೀಟರ್ ಪೆಟ್ರೋಲ್‍ಗೆ 9 ರೂ. ಇದ್ದ ಕೇಂದ್ರ ಸರ್ಕಾರದ ತೆರಿಗೆಯನ್ನು ಮೋದಿ ಸರ್ಕಾರ ಹಂತಹಂತವಾಗಿ 32 ರೂ.ಗೆ ಏರಿಕೆ ಮಾಡಿದೆ. ಕೇಂದ್ರ ಸರ್ಕಾರವು ಅಡುಗೆ ಅನಿಲ (ಎಲ್‍ಪಿಜಿ) ಸಿಲೆಂಡರ್ ಸಬ್ಸಿಡಿಯನ್ನು ರದ್ದುಪಡಿಸಿದ್ದರಿಂದ 450 ರೂಪಾಯಿಗೆ ಜನರಿಗೆ ಸಿಗುತ್ತಿದ್ದ ಸಿಲೆಂಡರ್‍ಗೆ ಈಗ 900 ರೂಪಾಯಿ ಕೊಡಬೇಕಾಗಿದೆ ಎಂದು ಬಿಜೆಪಿ ಸರ್ಕಾರವನ್ನು ಸದಂ ಅವರು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಸೆಪ್ಟೆಂಬರ್ 13 ರಿಂದ 10 ದಿನ ವಿಧಾನಮಂಡಲದ ಅಧಿವೇಶನ

    ನೋಟು ಬದಲಾವಣೆಯಿಂದ ದೇಶಕ್ಕೆ ಭಾರೀ ಲಾಭವಾಗುತ್ತದೆ, ಕಪ್ಪುಹಣವೇ ಇಲ್ಲವಾಗುತ್ತದೆ ಎಂದು ನಂಬಿದ ಜನರು ಅಂದು ಕಷ್ಟಗಳನ್ನು ಸಹಿಸಿಕೊಂಡರು. ಆದರೆ ನೋಟು ಬದಲಾವಣೆಯಿಂದ ಎಷ್ಟು ಕಪ್ಪುಹಣ ನಾಶವಾಗಿದೆ ಎಂಬ ಮಾಹಿತಿಯನ್ನು ಆರ್‍ಬಿಐ ಈವರೆಗೂ ನೀಡಿಲ್ಲ. ಚುನಾವಣೆ ಬಂತೆಂದರೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಸಾವಿರಾರು ರೂಪಾಯಿಯನ್ನು ಮನೆಮನೆಗೆ ಹಂಚುತ್ತವೆ. ಆಪರೇಷನ್ ಕಮಲದ ಹೆಸರಿನಲ್ಲಿ ಶಾಸಕರನ್ನು ಖರೀದಿಸಲು ನೂರಾರು ಕೋಟಿ ರೂಪಾಯಿಯನ್ನು ಬಿಜೆಪಿ ಖರ್ಚು ಮಾಡುತ್ತದೆ. ನೋಟು ಬದಲಾವಣೆ ಸಂಪೂರ್ಣ ವಿಫಲವಾಗಿದೆ ಎನ್ನುವುದನ್ನು ಇವೆಲ್ಲ ಸಾರಿ ಸಾರಿ ಹೇಳುತ್ತಿವೆ ಎಂದು ಹೇಳಿದರು.

    ಬಿಜೆಪಿಯ ದೇಶಪ್ರೇಮ, ಹಿಂದುತ್ವ ಕೇವಲ ಭಾಷಣಕ್ಕೆ ಹಾಗೂ ಗಲಭೆ ಸೃಷ್ಟಿಸುವುದಕ್ಕೆ ಸೀಮಿತ. ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಹೇಳಿದವರು ಹಿಂದುಳಿದ ರಾಷ್ಟ್ರ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಅಕ್ರಮ ವಲಸಿಗರ ಹಾವಳಿ ಹೆಚ್ಚುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಗಡಿಯಲ್ಲಿ ಈಗಲೂ ನಮ್ಮ ಯೋಧರು ಹುತಾತ್ಮರಾಗುತ್ತಿದ್ದರೂ ಸರ್ಜಿಕಲ್ ಸ್ಟ್ರೈಕ್ ಎಂಬ ಹಳೇ ಕಥೆಯನ್ನೇ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಗೋಶಾಲೆಗಳು ಅಕ್ರಮದ ಕೇಂದ್ರಬಿಂದುವಾಗಿದ್ದರೂ ಕೇಳುವವರು ಇಲ್ಲವಾಗಿದೆ. ಪಾಕಿಸ್ತಾನ ಸೇನೆಯಿಂದ ಬಂಧಿತರಾಗಿರುವ ಭಾರತದ ಪುತ್ರ ಕುಲಭೂಷಣ್ ಜಾಧವ್‍ರನ್ನು ಮರಳಿ ಕರೆತರುವುದರಲ್ಲೂ ಮೋದಿ ಸರ್ಕಾರ ವಿಫಲವಾಗಿದೆ. ಕೃಷಿ ಕಾಯಿದೆ, ಸಿಎಎ, ಎನ್‍ಆರ್‍ಸಿ ಮುಂತಾದವುಗಳಿಗೆ ತಿದ್ದುಪಡಿ ತಂದು ದೇಶದಲ್ಲಿ ಅಶಾಂತಿ ಸೃಷ್ಟಿಸಿದ್ದೇ ಕೇಂದ್ರ ಸರ್ಕಾರದ ಸಾಧನೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದಿದ್ದರಿಂದ ಎಪಿಎಂಸಿಗಳಲ್ಲಿ ವಹಿವಾಟು ಕಡಿಮೆಯಾಗಿ ಮುಚ್ಚಿಹೋಗಲಿದೆ. ನಂತರ ಖಾಸಗಿಯವರು ಎಪಿಎಂಸಿಯ ಸ್ಥಾನದಲ್ಲಿ ಬಂದು ರೈತರಿಗೆ ಕಿರುಕುಳ ನೀಡಲಿವೆ ಎಂದು ಸದಂ ಬೇಸರ ವ್ಯಕ್ತಪಡಿಸಿದರು.

    ಭಾರತದ ಬ್ಯಾಂಕ್‍ಗಳಿಗೆ ಸಾವಿರಾರು ಕೋಟಿ ವಂಚಿಸಿ ಪರಾರಿಯಾಗಿರುವ ನೀರವ್ ಮೋದಿ ಮತ್ತು ವಿಜಯ್ ಮಲ್ಯರನ್ನು ವಾಪಸ್ ಕರೆತರಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪ್ರತಿ ಚುನಾವಣೆ ಬಂದಾಗಲೂ ನೀರವ್ ಹಾಗೂ ಮಲ್ಯ ಕೆಲವೇ ದಿನಗಳಲ್ಲಿ ಬರುತ್ತಾರೆಂದು ಸುಳ್ಳು ಸುದ್ದಿಯನ್ನು ಬಿಜೆಪಿ ಹಬ್ಬಿಸುತ್ತದೆ. ಆದರೆ ಅವರು ಮಾತ್ರ ಭಾರತೀಯರ ದುಡ್ಡಿನಿಂದ ವಿದೇಶದಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಜಗದೀಶ್ ವಿ.ಸದಂ ಆಕ್ರೊಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಖೂಬಾ ಕಾರ್ಯಕ್ರಮದಲ್ಲಿ ನಾಡಬಂದೂಕು ಸಿಡಿಸಿದ ಪ್ರಕರಣ- ಮೂವರು ಕಾನ್‍ಸ್ಟೇಬಲ್‍ಗಳ ಅಮಾನತು

    ಆಮ್ ಆದ್ಮಿ ಪಾರ್ಟಿಯ ಕಚೇರಿ ಕಾರ್ಯದರ್ಶಿ ವೀಣಾ ಸೆರ್ರಾವ್‍ರವರು ಮಾತನಾಡಿ, ಜನಾಶೀರ್ವಾದ ಯಾತ್ರೆಯಲ್ಲಿ ಕೋವಿಡ್ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಲಾಗುತ್ತಿದೆ. ಜನರಿಗೆ ಮಾತ್ರ ಬಿಗಿ ನಿಯಮಗಳನ್ನು ಜಾರಿಗೆ ತಂದು, ಸಚಿವರು ಮಾತ್ರ ಸ್ವೇಚ್ಛಾಚಾರದಿಂದ ಸಾವಿರಾರು ಬೆಂಬಲಿಗರನ್ನು ಸೇರಿಸುವುದು ಎಷ್ಟು ಸರಿ? ರಾಜ್ಯದಲ್ಲಿ ಬಿಜೆಪಿ ಸಚಿವರಿಗೇ ಒಂದು ಕಾನೂನು, ಸಾಮಾನ್ಯ ಜನರಿಗೆ ಮತ್ತೊಂದು ಕಾನೂನು ಎಂಬಂತಾಗಿದೆ. ಈ ಬಗ್ಗೆ ಮಾಧ್ಯಮಗಳು ನಿರಂತರವಾಗಿ ವರದಿ ಮಾಡುತ್ತಿದ್ದರೂ ಸಚಿವರುಗಳು ತಮ್ಮ ನಡೆಯನ್ನು ಬದಲಿಸಿಕೊಳ್ಳದಿರುವುದು ದುರಂತ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸಂಭ್ರಮಿಸಿದಂತೆ ಯಾದಗಿರಿಯಲ್ಲಿ ಕೇಂದ್ರ ಸಚಿವ ಖೂಬಾ ಅಭಿಮಾನಿಗಳು ಬಂದೂಕಿನಿಂದ ಗುಂಡುಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ. ಸರ್ಕಾರಕ್ಕೆ ನೈತಿಕತೆ ಇದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.

  • ಬೊಮ್ಮಾಯಿ ನಿರ್ಲಕ್ಷ್ಯದಿಂದಲೇ ಅಪರಾಧ ಏರಿಕೆ : ಎಎಪಿ

    ಬೊಮ್ಮಾಯಿ ನಿರ್ಲಕ್ಷ್ಯದಿಂದಲೇ ಅಪರಾಧ ಏರಿಕೆ : ಎಎಪಿ

    ಬೆಂಗಳೂರು: ರಾಜ್ಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚಾಗಿದ್ದು, ಗೃಹ ಖಾತೆಯನ್ನು ನಿಭಾಯಿಸುವುದರಲ್ಲೇ ವಿಫಲರಾಗಿರುವ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಹುದ್ದೆಗೆ ನ್ಯಾಯ ಒದಗಿಸುವರೇ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಪ್ರಶ್ನಿಸಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಗದೀಶ್ ಸದಂರವರು, ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ವ್ಯಾಪಕವಾಗಿ ಏರಿಕೆಯಾಗುತ್ತಿವೆ. ಮಕ್ಕಳು ಮಹಿಳೆಯರು ಮಾತ್ರವಲ್ಲದೇ ಸಣ್ಣಪುಟ್ಟ ಜನಪ್ರತಿನಿಧಿಗಳು ಕೂಡ ಹೆದರಿಕೆಯಿಂದ ತಿರುಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್‍ಡೌನ್ ಬಳಿಕ ಅಪರಾಧ ಪ್ರಕರಣಗಳು ಶೇ.20ರಷ್ಟು ಹೆಚ್ಚಾಗಿದೆ ಎಂದು ಬಸವರಾಜ್ ಬೊಮ್ಮಾಯಿಯವರೇ 15 ದಿನಗಳ ಹಿಂದೆ ಒಪ್ಪಿಕೊಂಡಿದ್ದರು. ಆದರೂ ಅಪರಾಧಗಳಿಗೆ ಕಡಿವಾಣ ಹಾಕಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ತನಿಖೆ ನಡೆಸಬೇಕಾಗುತ್ತದೆ ಎಂಬ ಕಾರಣಕ್ಕೆ ಅನೇಕ ಠಾಣೆಗಳಲ್ಲಿ ಪೊಲೀಸರು ಎಫ್‍ಐಆರ್ ದಾಖಲಿಸಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಗಾಂಧಿ ಮಗ ಕುಡುಕನಾದ – ಸಿದ್ದರಾಮಯ್ಯನವರೇ, ನೀವು ಹೇಳಿದ್ದು ಯಾವ ಗಾಂಧಿ ಮಗನಿಗೆ?: ಕುಟುಕಿದ ಬಿಜೆಪಿ

    ಜೂನ್ ಒಂದೇ ತಿಂಗಳಿನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ 703 ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಕಳೆದ 35 ದಿನಗಳಲ್ಲಿ ಮಾಜಿ ಜನಪ್ರತಿನಿಧಿ, ಕೂಲಿ ಕಾರ್ಮಿಕ, ಗೃಹಿಣಿ, ಆಟೋ ಚಾಲಕರು ಸೇರಿದಂತೆ ಬೆಂಗಳೂರಿನ 8 ಮಂದಿಯ ಕೊಲೆಯಾಗಿದೆ. ಕಳೆದ ಏಳು ತಿಂಗಳಿನಲ್ಲಿ ರಾಜಧಾನಿಯಲ್ಲಿ 82 ಕೊಲೆ, 22 ಡಕಾಯಿತಿ, 87 ಸರಗಳ್ಳತನ, 219 ದರೋಡೆ, 304 ಲೈಂಗಿಕ ಕಿರುಕುಳ, 521 ಕಳವು ಪ್ರಕರಣ ದಾಖಲಾಗಿವೆ. ಪುಡಿ ರೌಡಿಗಳೂ ಕೂಡ ಕೊಲೆಯಂತಹ ಭೀಕರ ಅಪರಾಧ ಮಾಡುತ್ತಿದ್ದಾರೆ. ಪೊಲೀಸರೇ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅಪರಾಧಿಗಳು ರಾಜಾರೋಷವಾಗಿ ಹಾಗೂ ಜನಸಾಮಾನ್ಯರು ಹೆದರಿಕೆಯಿಂದ ಬದುಕುವಂತೆ ಮಾಡಿರುವುದೇ ಬೊಮ್ಮಾಯಿಯವರ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆಮ್ ಆದ್ಮಿ ಪಾರ್ಟಿ ಮುಖಂಡರಾದ ವಿಜಯ್ ಶಾಸ್ತ್ರಿಮಠ್‍ರವರು ಮಾತನಾಡಿ, ರಾಜ್ಯದಲ್ಲಿ ಸೈಬರ್ ಅಪರಾಧಗಳು ಕೂಡ ಹೆಚ್ಚಾಗುತ್ತಿದೆ. ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ತೆರೆದು, ಅವರ ಸ್ನೇಹಿತರಿಗೆಲ್ಲ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣ ಕೇಳುವ ದೊಡ್ಡ ಜಾಲವಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೇರಿದಂತೆ ರಾಜ್ಯದ ಲಕ್ಷಕ್ಕೂ ಅಧಿಕ ಸಾಮಾಜಿಕ ಜಾಲತಾಣ ಬಳಕೆದಾರರು ಇದರಿಂದ ತೊಂದರೆ ಅನುಭವಿಸಿದ್ದಾರೆ. ಆದರೆ ಪೊಲೀಸರು ಮಾತ್ರ ಇಂತಹ ಯಾವುದೇ ಪ್ರಕರಣವನ್ನು ಬೇಧಿಸಿಲ್ಲ. ಇದರಿಂದಾಗಿ ಜನರು ಸಾಮಾಜಿಕ ಜಾಲತಾಣಗಳಿಂದ ದೂರವಾಗುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಉನ್ನತ ಅಧಿಕಾರಿಗಳ ಸಭೆ ಕರೆದು, ಅಪರಾಧಗಳಿಗೆ ಕಡಿವಾಣ ಹಾಕುವ ಬಗ್ಗೆ ಗಂಭೀರವಾಗಿ ಚರ್ಚಿಸಬೇಕು. ಒಂದು ತಿಂಗಳೊಳಗೆ ಶೂನ್ಯ ಅಪರಾಧಗಳ ರಾಜ್ಯ ಎಂಬ ಖ್ಯಾತಿಗೆ ಕರ್ನಾಟಕ ಪಾತ್ರವಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

    ಸುದ್ದಿಗೋಷ್ಠಿಯಲ್ಲಿ ಎಎಪಿಯ ಮಹಿಳಾ ಮುಖಂಡರಾದ ಉಷಾ ಮೋಹನ್‍ರವರು ಉಪಸ್ಥಿತರಿದ್ದರು.

  • ಎಎಪಿಯಿಂದ ಫೀಸ್ ಇಳಿಸಿ – ಮಕ್ಕಳ ಭವಿಷ್ಯ ಉಳಿಸಿ ಅಭಿಯಾನಕ್ಕೆ ಚಾಲನೆ

    ಎಎಪಿಯಿಂದ ಫೀಸ್ ಇಳಿಸಿ – ಮಕ್ಕಳ ಭವಿಷ್ಯ ಉಳಿಸಿ ಅಭಿಯಾನಕ್ಕೆ ಚಾಲನೆ

    ಬೆಂಗಳೂರು: ರಾಜ್ಯದ ಶಿಕ್ಷಣ ಕ್ಷೇತ್ರ ಕುಲಗೆಟ್ಟು ಹೋಗುತ್ತಿದ್ದು ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಮಕ್ಕಳ ಭವಿಷ್ಯ ಅಪಾಯದಲ್ಲಿದೆ. ಕೊರೊನಾ ಸೋಂಕಿನ ಮಧ್ಯೆ ಪೋಷಕರು ಮಕ್ಕಳ ಫೀಸ್ ಭರಿಸಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ತಿಳಿಸಿದರು.

    ಆಮ್ ಆದ್ಮಿ ಪಾರ್ಟಿಯ ನಡೆಸುತ್ತಿರುವ “ಫೀಸ್ ಇಳಿಸಿ ಮಕ್ಕಳ ಭವಿಷ್ಯ ಉಳಿಸಿ” ರಾಜ್ಯವ್ಯಾಪಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡಿದ ಇವರು ಪೋಷಕರು ಮಕ್ಕಳ ಫೀಸ್ ಭರಿಸಲಾಗದೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೆ ಒಳಗಾಗಿದ್ದಾರೆ. ತಮ್ಮ ಉಳಿತಾಯದ ಹಣ, ಚಿನ್ನ ಎಲ್ಲವನ್ನೂ ಅಡಮಾನ ಇಟ್ಟು ಹಣ ಹೊಂದಿಸಿ ಫೀಸ್ ತುಂಬುತ್ತಿದ್ದಾರೆ. ಶಾಲೆಗಳು ಫೀಸ್ ಭರಿಸಲಾಗದ ಮಕ್ಕಳನ್ನು ಆನ್‍ಲೈನ್ ತರಗತಿಗಳಿಗೆ ಸೇರಿಸುತ್ತಿಲ್ಲ. ಜನತೆಯ ಜೀವ ಉಳಿಸಬೇಕಾದ ಸರ್ಕಾರ ಖಾಸಗಿ ಶಾಲೆಗಳ ಜೊತೆಗೆ ಕೈಜೋಡಿಸಿ ಪೋಷಕರ ಪ್ರಾಣ ಹಿಂಡುತ್ತಿದೆ. ಜನತೆಯ ಕಷ್ಟ ಆಲಿಸಲು ಆಗದ ತಾಳ್ಮೆ ಇಲ್ಲದ ಶಿಕ್ಷಣ ಸಚಿವರು ರಾಜೀನಾಮೆ ಕೊಟ್ಟು ಮನೆಗೆ ನಡೆಯಲಿ ಎಂದು ಟೀಕಿಸಿದರು. ಇದನ್ನೂ ಓದಿ: ಅಕ್ರಮ ಹಣ ಮಾಡಲು BDA ಅಧ್ಯಕ್ಷರಿಂದ ಹೊಸ ಹೊಸ ಯೋಜನೆ: ಆಪ್

    ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಸರ್ಕಾರಕ್ಕೆ ಕಣ್ಣಲ್ಲಿ ನೆತ್ತರಿಲ್ಲ. ಪೋಷಕರ ಕಷ್ಟಗಳು ಕಾಣುತ್ತಿಲ್ಲ. ಖಾಸಗಿ ಶಾಲೆಗಳ ಮಕ್ಕಳ ಪೋಷಕರು ಫೀಸ್ ಭರಿಸಲಾಗದೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೆ ಒಳಗಾಗಿದ್ದಾರೆ. ಹೀಗೆ ಮುಂದುವರಿದರೆ ರಾಜ್ಯದ ಶಿಕ್ಷಣ ಕ್ಷೇತ್ರದ ಭವಿಷ್ಯ ನೆಲಕ್ಕಚ್ಚಲಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳ ಫೀಸ್ ಬಗ್ಗೆ ಮೌನವಾಗಿದ್ದಾರೆ. ಇವರೇ ಈ ಸಂಸ್ಥೆಗಳ ಜೊತೆಗೆ ಕೈ ಜೋಡಿಸಿದ್ದಾರೆ. ಮಕ್ಕಳ ಕಷ್ಟಕ್ಕೆ ಬಾರದ ಶಿಕ್ಷಣ ಸಚಿವ ಇದ್ದು ಫಲವೇನು? ತಕ್ಷಣ ರಾಜೀನಾಮೆ ನೀಡಿ ಮನೆಗೆ ನಡೆಯಲಿ ಎಂದು ಮೋಹನ್ ದಾಸರಿ ಆಗ್ರಹಿಸಿದರು. ಇದನ್ನೂ ಓದಿ: ಬೆಡ್ ಬ್ಲಾಕಿಂಗ್ ದಂಧೆಯ ಪಾತ್ರಧಾರಿ ಸತೀಶ್ ರೆಡ್ಡಿ ಯನ್ನು ಕೂಡಲೇ ಬಂಧಿಸಿ – AAP ಆಗ್ರಹ

    ಅಭಿಯಾನದ ಅಂಗವಾಗಿ ಮನೆ ಮನೆ ಬೇಟಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ನೂರಾರು ಪೋಷಕರು ಮತ್ತು ಆಮ್ ಆದ್ಮಿ ಪಾರ್ಟಿಯ ನಾಯಕರು ಹಾಗೂ  ಕಾರ್ಯಕರ್ತರು ಭಾಗವಹಿಸಿದ್ದರು. ಅಭಿಯಾನವನ್ನು ಬೆಂಬಲಿಸಿ 7669100500 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಲು ಕರೆ ನೀಡಲಾಯಿತು. ಇದನ್ನೂ ಓದಿ: ಭ್ರಷ್ಟಾಚಾರಿಗಳ ಪರ ಸಿಎಂ ನಿಂತಿದ್ದಾರೆ: ಎಎಪಿ ಆರೋಪ

  • ವೈದ್ಯರಿಗೆ ತಕ್ಷಣ ವೇತನವನ್ನು ನೀಡಿ ಗೌರವಯುತವಾಗಿ ನಡೆದುಕೊಳ್ಳಿ: ಡಾ. ವಿಶ್ವನಾಥ್

    ವೈದ್ಯರಿಗೆ ತಕ್ಷಣ ವೇತನವನ್ನು ನೀಡಿ ಗೌರವಯುತವಾಗಿ ನಡೆದುಕೊಳ್ಳಿ: ಡಾ. ವಿಶ್ವನಾಥ್

    ಬೆಂಗಳೂರು: ಕರ್ನಾಟಕದ್ಯಾಂತ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿರುವ ವೈದ್ಯರಿಗೆ ನಾಲ್ಕು ತಿಂಗಳಿಂದ ವೇತನವನ್ನು ನೀಡದೆ ಕರ್ನಾಟಕದ ಸರ್ಕಾರ ಸತಾಯಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ವೇತನ ನೀಡದೆ ವೈದ್ಯರಿಗೆ ಹಿಂಸೆ ನೀಡುತ್ತಿರುವ ಸರ್ಕಾರದ ಈ ನಡೆ ಅಮಾನವೀಯ ಎಂದು ಆಮ್ ಆದ್ಮಿ ಪಾರ್ಟಿಯ ವೈದ್ಯಕೀಯ ಘಟಕದ ಅಧ್ಯಕ್ಷ ಮತ್ತು ವೈದ್ಯ ಡಾ. ವಿಶ್ವನಾಥ್ ಟೀಕಿಸಿದ್ದಾರೆ.

    ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಡಾ. ವಿಶ್ವನಾಥ್ ಅವರು, ಕರ್ನಾಟಕ ಅಸೋಸಿಯೇಷನ್ ಫಾರ್ ರೆಸಿಡೆಂಟ್ ಡಾಕ್ಟರ್ಸ್ ಈ ಕುರಿತು ಒಂದು ಪಟ್ಟಿಯನ್ನು ನೀಡಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ 16 ಆಸ್ಪತ್ರೆಗಳು ಮತ್ತು ಆರೋಗ್ಯ ಇಲಾಖೆ ಅಡಿಯಲ್ಲಿ ಬರುವ 53 ಆಸ್ಪತ್ರೆಗಳ ವೈದ್ಯರಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡಿಲ್ಲ. ಇವರು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಒಂದು ವಾರದ ಒಳಗೆ ವೇತನವನ್ನು ನೀಡುವುದಾಗಿ ಹೇಳಿಕೆ ನೀಡಿದ್ದರೂ ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು.

    ಕರ್ನಾಟಕ ಸರ್ಕಾರ ಕೊರೊನಾ ಸಂದರ್ಭದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಮಾಡುತ್ತಿರುವ ವೈದ್ಯರಿಗೆ ತಕ್ಷಣ ವೇತನವನ್ನು ನೀಡಬೇಕು. ದೆಹಲಿ ಸರ್ಕಾರ ನೀಡುವಂತೆ ಕರ್ನಾಟಕದಲ್ಲಿ ಕೊರೊನಾ ಸೇವೆಯಲ್ಲಿ ಮಡಿದ ವೈದ್ಯರಿಗೆ ಪರಿಹಾರ ನೀಡಿ. ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.  ಇದನ್ನೂ ಓದಿ: ನಿರ್ಮಾಪಕ ದಿಲೀಪ್ ಕುಮಾರ್ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆ

    ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಯನಗರ ಅಸೆಂಬ್ಲಿಯ ಅಧ್ಯಕ್ಷ ಮಂಜುನಾಥ್ ಆರ್ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರ, ಕೋವಿಡ್ ಸಂದರ್ಭದಲ್ಲಿ ಸೇವೆ ಮಾಡಿ ಮಡಿದ ವೈದ್ಯರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡುತ್ತಿದೆ. ಕರ್ನಾಟಕ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರಿಗೆ ಪಿಪಿಇ ಕಿಟ್ ಕೂಡ ನೀಡಿರಲಿಲ್ಲ. ಅಲ್ಲದೇ ವೇತನವನ್ನೇ ನೀಡದೆ ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದೆ ಟೀಕಿಸಿದರು.

    ಆಮ್ ಆದ್ಮಿ ಪಾರ್ಟಿಯ ಹಿರಿಯ ಮುಖಂಡ ಡಾ. ರಮೇಶ್ ಮಾತನಾಡಿ, ವೈದ್ಯರ ಕರ್ತವ್ಯದ ಮಧ್ಯೆ ಮೂಗು ತೋರಿಸದೆ ಅವರಿಗೆ ಗೌರವ ನೀಡಬೇಕು ಎಂದು ತಿಳಿಸಿದರು.

    ಆಸ್ಪತ್ರೆಗಳಲ್ಲಿ ವೈದ್ಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ರೋಗಿಗಳು, ಅವರ ಕುಟುಂಬಸ್ಥರು, ಸ್ಥಳೀಯ ರಾಜಕೀಯ ನಾಯಕರು ವೈದ್ಯರ ಮೇಲೆ ಕೆಲಸದ ಸಮಯದಲ್ಲಿ ನಡೆಸುತ್ತಿರುವ ಹಲ್ಲೆಗಳು ವರದಿಯಾಗುತ್ತಿವೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರಕಾರ 70% ವೈದ್ಯರು ಈ ಸಮಸ್ಯೆಗಳನ್ನು ಎದುರಿಸುತ್ತಾರೆ. ವೈದ್ಯರಿಗೆ ಗೌರವಯುತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡುವುದೆ ಅವರಿಗೆ ವೈದ್ಯರ ದಿನದಂದು ನೀಡುವ ಗೌರವ ಎಂದು ಕೆ ಆರ್ ಪುರಂ ನ ಆಮ್ ಆದ್ಮಿ ಪಾರ್ಟಿಯ ಉಸ್ತುವಾರಿ ಡಾ. ಕೇಶವ್ ಅಭಿಪ್ರಾಯಪಟ್ಟರು.

  • ಶ್ರೀ ವಸಿಷ್ಠ ಬ್ಯಾಂಕ್ ಕೇಸ್ ಆರೋಪಿಗಳನ್ನು ರವಿ ಸುಬ್ರಹ್ಮಣ್ಯ ರಕ್ಷಿಸುತ್ತಿದ್ದಾರೆ – ಆಪ್

    ಶ್ರೀ ವಸಿಷ್ಠ ಬ್ಯಾಂಕ್ ಕೇಸ್ ಆರೋಪಿಗಳನ್ನು ರವಿ ಸುಬ್ರಹ್ಮಣ್ಯ ರಕ್ಷಿಸುತ್ತಿದ್ದಾರೆ – ಆಪ್

    ಬೆಂಗಳೂರು: ಬೆಂಗಳೂರಿನ ಮುಖ್ಯ ಶಾಖೆಯನ್ನು ಹೊಂದಿರುವ ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಬಾಗಿಲು ಮುಚ್ಚಿರುವ ಸುದ್ದಿಗಳು ಕೇಳಿಬರುತ್ತಿವೆ. ಕೆಲವು ದಿನಗಳ ಹಿಂದೆ ಇದೇ ರೀತಿ ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉಂಡೆ ನಾಮ ತಿಕ್ಕಿ ಅವರ ಭವಿಷ್ಯಕ್ಕೆ ಕೊಡಲಿ ಏಟನ್ನು ಹಾಕಿದೆ. ಈ ಹಗರಣದಲ್ಲಿಯೂ ಹಿಂದಿನ ರಾಘವೇಂದ್ರ ಕೋ ಆಪರೆಟೀವ್ ಬ್ಯಾಂಕ್ ಹಗರಣದಲ್ಲಿ ಭಾಗಿಯಾಗಿದ್ದ ಬಸವನಗುಡಿ ಶಾಸಕ, ಪ್ರಭಾವಿ ಬಿಜೆಪಿ ಮುಖಂಡ ರವಿ ಸುಬ್ರಹ್ಮಣ್ಯ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ ಆರೋಪಿಸಿದ್ದಾರೆ.

    ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಳೆಯಲು ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರಿಗೆ ಜೀವನವೇ ಈಗ ಆಯೋಮಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನೆಮ್ಮದಿಯಿಂದ ಮನೆಯಲ್ಲಿ ಜೀವನ ಕಳೆಯಬೇಕಾಗಿದ್ದವರು, ಇಂದು ತಮ್ಮದೇ ಹಣಕ್ಕಾಗಿ ರಸ್ತೆಯಲ್ಲಿ ನಿಂತು ಬ್ಯಾಂಕ್ ನ ಎದುರು ಹಣಕ್ಕಾಗಿ ಅಂಗಾಲಚುವ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದರು.

    ನಂತರ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಅವರು, ಶ್ರೀ ವಸಿಷ್ಠ ಕೋ ಅಪರೇಟಿವ್ ಬ್ಯಾಂಕಿನ ಪ್ರಮುಖ ನಿರ್ದೇಶಕ ಕೆ.ಎನ್ ವೆಂಕಟನಾರಾಯಣ ಅನೇಕ ಬಿಜೆಪಿ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿದ್ದು, ಆತನು ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಅನೇಕ ಬಿಜೆಪಿ ಪಕ್ಷಕ್ಕೆ ಆಪ್ತವಾಗಿರುವ ಮತ್ತು ಒಟ್ಟಿಗೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ದೊರಕುತ್ತವೆ. ಮೇಲ್ನೋಟಕ್ಕೇ ಆತನಿಗೆ ಬಿಜೆಪಿ ಪ್ರಭಾವಿ ಮುಖಂಡರ ಕೃಪಾಕಟಾಕ್ಷ ಕಂಡುಬರುತ್ತದೆ. ಹೀಗಿರುವಾಗ ಪೊಲೀಸ್ ಅಥವಾ ಸಿಬಿಐ ತನಿಖೆಯಲ್ಲಿ ಬ್ಯಾಂಕ್ ನ ಸಹಸ್ರಾರು ಗ್ರಾಹಕರಿಗೆ ನ್ಯಾಯ ಸಿಗುವುದು ಅಸಂಭವ ಎಂದರು.

    ಈ ಪ್ರಕರಣದ ಕುರಿತಾಗಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕೆಂದು ಮತ್ತು ಆರೋಪಿಗಳ ಜೊತೆಗೆ ಬಿಜೆಪಿ ನಾಯಕರ ನಂಟಿನ ಬಗ್ಗೆಯೂ ಆಮೂಲಾಗ್ರ ತನಿಖೆ ನಡೆಸಿ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ. ಇದನ್ನೂ ಓದಿ: ಗೋವಾ- ಕರ್ನಾಟಕ ಗಡಿಯಲ್ಲಿ ನಿರ್ಬಂಧ : ನಿತ್ಯ ಉದ್ಯೋಗಕ್ಕೆ ತೆರಳುವವರಿಗೆ ಸಂಕಷ್ಟ

  • ಆಪ್‍ಗಿಂತ ಐದು ಪಟ್ಟು ಹೆಚ್ಚು ಸಬ್ಸಿಡಿ- ಬಿಜೆಪಿಗೆ ಕೇಜ್ರಿವಾಲ್ ತಿರುಗೇಟು

    ಆಪ್‍ಗಿಂತ ಐದು ಪಟ್ಟು ಹೆಚ್ಚು ಸಬ್ಸಿಡಿ- ಬಿಜೆಪಿಗೆ ಕೇಜ್ರಿವಾಲ್ ತಿರುಗೇಟು

    ನವದೆಹಲಿ: ಆಪ್ ಭದ್ರಕೋಟೆ ಎನಿಸಿಕೊಂಡಿರುವ ದೆಹಲಿಯನ್ನು ವಶಪಡಿಸಿಕೊಳ್ಳಲು ಬಿಜೆಪಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಆಮ್ ಆದ್ಮಿ ಸರ್ಕಾರಕ್ಕಿಂತ ಐದು ಪಟ್ಟು ಹೆಚ್ಚು ಸಬ್ಸಿಡಿ ನೀಡುವ ಭರವಸೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ಶೀಘ್ರದಲ್ಲೇ ಬಿಜೆಪಿ ‘ಸಂಕಲ್ಪ ಪತ್ರ’ ಹೆಸರಿನಲ್ಲಿ ಪ್ರಾಣಾಳಿಕೆ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಐದು ಪಟ್ಟು ಸಬ್ಸಿಡಿ ಹೆಚ್ಚಿಸುವ ಬಗ್ಗೆ ಪ್ರಣಾಳಿಕೆ ತಯಾರಿಕೆ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ.

    ಪ್ರಣಾಳಿಕೆ ತಯಾರಿಕೆ ನೇತೃತ್ವದ ಹೊತ್ತಿರುವ ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ, ನಾವು ಆಮ್ ಅದ್ಮಿ ಸರ್ಕಾರ ನೀಡಿರುವ ಸಬ್ಸಿಡಿಗಳನ್ನು ರದ್ದು ಪಡಿಸುವ ಯೋಚನೆ ಇಲ್ಲ. ಬದಲಿಗೆ ಸಬ್ಸಿಡಿಯನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಾಗಿದೆ ಎಂದಿದ್ದಾರೆ. 1731 ಅಕ್ರಮ ಕಾಲೋನಿಗಳನ್ನು ಕೇಂದ್ರ ಸರ್ಕಾರ ಸಕ್ರಮ ಮಾಡಿದ್ದು, ಸಿಎಎ ಮೂಲಕ ದೆಹಲಿಯ ಅಕ್ರಮ ನಿವಾಸಿಗರಿಗೆ ಪೌರತ್ವ ನೀಡಿದ್ದೇವೆ ಮತ್ತು ಅಕ್ರಮ ಕಾಲೋನಿಗಳನ್ನು ಸಕ್ರಮ ಮಾಡಿರುವುದು ಪ್ರಣಾಳಿಕೆಯಲ್ಲಿ ಸಮರ್ಥಿಸಿಕೊಳ್ಳಲಿದ್ದೇವೆ ಎಂದಿದ್ದಾರೆ.

    ದೆಹಲಿಯಲ್ಲಿ ಈಗಾಗಲೇ ಎಎಪಿ ಕುಡಿಯುವ ನೀರು, ವಿದ್ಯುತ್‍ಗೆ ಸಬ್ಸಿಡಿ ನೀಡಿದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಇದನ್ನು ಮುಂದುವರಿಸುವ ಜೊತೆಗೆ ಈ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಬಿಜೆಪಿ ಚಿಂತಿಸಿದೆ ಎನ್ನಲಾಗುತ್ತಿದೆ.

    ಇದಕ್ಕೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ‘ನಮ್ಮಕ್ಕಿಂತ ಐದು ಪಟ್ಟೇ’ ಎಂದು ವ್ಯಂಗ್ಯ ಮಾಡಿದ್ದಾರೆ. ಅಲ್ಲದೇ 200 ಯೂನಿಟ್‍ಗೆ ಹೆಚ್ಚು ಪಟ್ಟು ಎಂದರೆ 1000 ಯೂನಿಟ್? 20 ಸಾವಿರ ಲೀಟರ್ ಉಚಿತ ನೀರಿಗೆ ಐದು ಪಟ್ಟು ಎಂದರೆ ಒಂದು ಲಕ್ಷ ಲೀಟರ್ ನೀರು ಉಚಿತವಾಗಿ ನೀಡಲಾಗುವುದೇ ಎಂದಿದ್ದಾರೆ.

    ಬಿಜೆಪಿ ಈ ಹೇಳಿಕೆ ದೆಹಲಿಯ ಜನರನ್ನು ಗೇಲಿ ಮಾಡಿದಂತಿದೆ ಎಂದು ಟೀಕಿಸಿದ್ದಾರೆ. ಅಲ್ಲದೇ ದೆಹಲಿಗೂ ಮುನ್ನ ಬಿಜೆಪಿ ಆಡಳಿತ ರಾಜ್ಯದಲ್ಲಿ ಮೊದಲು ಸಬ್ಸಿಡಿ ಆರಂಭಿಸಿ ಎಂದು ಸವಾಲು ಹಾಕಿದ್ದಾರೆ.

     

  • ಜನವರಿ 20ರೊಳಗೆ ಪ್ರಣಾಳಿಕೆ ಬಿಡುಗಡೆ- 2015ಕ್ಕಿಂತ ಚಿಕ್ಕದಿರಲಿದೆ ಆಪ್ ಭರವಸೆ ಪಟ್ಟಿ

    ಜನವರಿ 20ರೊಳಗೆ ಪ್ರಣಾಳಿಕೆ ಬಿಡುಗಡೆ- 2015ಕ್ಕಿಂತ ಚಿಕ್ಕದಿರಲಿದೆ ಆಪ್ ಭರವಸೆ ಪಟ್ಟಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ಫೆಬ್ರವರಿ 8ರಂದು ಚುನಾವಣೆ ನಡೆಯಲಿದೆ. ಈಗಾಗಲೇ ಪ್ರಚಾರ ಕಾರ್ಯಗಳನ್ನು ಆರಂಭಿಸಿರುವ ಕಾಂಗ್ರೆಸ್, ಬಿಜೆಪಿ ಮತ್ತು ಆಮ್ ಆದ್ಮಿ ಪಾರ್ಟಿ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿವೆ.

    ಈ ನಡುವೆ ಎಎಪಿ ಪ್ರಣಾಳಿಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಜನವರಿ 15ರಿಂದ 20ರೊಳಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಎಎಪಿ ನಾಯಕಿ ಅತೀಶಿ ನೇತೃತ್ವದಲ್ಲಿ ಮೂವರು ಸದಸ್ಯರ ಸಮ್ಮುಖದಲ್ಲಿ ಪ್ರಣಾಳಿಕೆ ಸಿದ್ಧಪಡಿಸಲು ಸಿದ್ಧತೆ ಮಾಡಿಕೊಂಡಿದೆ. ಅಷ್ಟೇ ಅಲ್ಲದೆ ಎಎಪಿ ಜೊತೆಗೂಡಿರುವ ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕಿಶೋರ್ ಕೂಡ ಪ್ರಣಾಳಿಕೆ ತಯಾರಿಕೆಗೆ ಸಹಾಯ ಮಾಡಲಿದ್ದಾರೆ ಎನ್ನಲಾಗಿದೆ.

    ಕಳೆದ ಅವಧಿಯಂತೆ ಈ ಬಾರಿಯೂ ಅತ್ಯಂತ ಚಿಕ್ಕ ಪ್ರಣಾಳಿಕೆ ಬಿಡುಗಡೆ ಮಾಡಲು ಎಎಪಿ ಪ್ಲಾನ್ ಮಾಡಿಕೊಂಡಿದೆ. ಅತ್ಯಂತ ಹೆಚ್ಚು ದತ್ತಾಂಶದಿಂದ ಈ ಪ್ರಣಾಳಿಕೆ ಕೂಡಿರಲಿದೆ ಎಂದು ಮೂಲಗಳು ಹೇಳಿದ್ದು, ಕಳೆದ ಐದು ವರ್ಷಗಳಲ್ಲಿ ಆರೋಗ್ಯ, ಶಿಕ್ಷಣ, ಸಾರಿಗೆ, ಸಂಪರ್ಕ, ಸ್ವಚ್ಛತೆ ಸೇರಿ ವಿವಿಧ ಆಯಾಮಗಳಲ್ಲಿ ದೆಹಲಿಯನ್ನು ಹೇಗೆ ಅಭಿವೃದ್ಧಿ ಪಡಿಸಲಾಗಿದೆ ಎನ್ನುವುದನ್ನು ವಿವರಿಸಲಾಗುತ್ತದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಮನೆ ಮನೆ ಪ್ರಚಾರ ಹಾಗೂ ಟೌನ್ ಹಾಲ್‍ಗಳಲ್ಲಿ ನಡೆಸುತ್ತಿರುವ ಸಭೆಗಳಲ್ಲಿ ಈ ಬಗ್ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಸುಳಿವು ನೀಡಿದ್ದಾರೆ. ಕಡಿಮೆ ಪುಟಗಳಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುವುದರಿಂದ ಹೆಚ್ಚು ಜನರನ್ನು ಪರಿಣಾಮಕಾರಿಯಾಗಿ ತಲುಪಬಹುದು ಎನ್ನುವುದು ಎಎಪಿ ಪಕ್ಷದ ಲೆಕ್ಕಾಚಾರವಾಗಿದೆ.