ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯ ಮೂರು ಮಹಾನಗರ ಪಾಲಿಕೆ ಚುನಾವಣೆಯ ಮತಿ ಎಣಿಕೆ ಕಾರ್ಯ ಕೊನೆಯ ಹಂತ ತಲುಪಿದೆ. ಈಗಾಗಲೇ ಬಿಜೆಪಿ ಭಾರೀ ಬಹುಮತದತ್ತ ಹೆಜ್ಜೆ ಹಾಕುತ್ತಿದ್ದು, ಗೆಲುವು ಖಚಿತವಾಗಿದೆ. ಇನ್ನು ಕಾಂಗ್ರೆಸ್ ಆಡಳಿತ ಪಕ್ಷವಾದ ಆಮ್ ಆದ್ಮಿ ಪಾರ್ಟಿಯನ್ನ ಹಿಮ್ಮೆಟ್ಟಿಸಿ ಎರಡನೇ ಸ್ಥಾನದಲ್ಲಿದೆ. ಸದ್ಯದ ಮಾಹಿತಿಯ ಪ್ರಕಾರ 270 ಸೀಟ್‍ಗಳಲ್ಲಿ ಬಿಜೆಪಿ 181, ಕಾಂಗ್ರೆಸ್-31, ಆಪ್ – 46 ಹಾಗೂ ಇತರೆ-12 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.
ಬಿಜೆಪಿ ಬಹುಮತದತ್ತ ಹೆಜ್ಜೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಇದು ಮೋದಿ ಅಲೆ ಅಲ್ಲ, ಇವಿಎಂ ದೋಷ ಎಂದು ಆಪ್ ಮುಖಂಡರು ಕ್ಯಾತೆ ತೆಗೆದಿದ್ದಾರೆ.
ಕಳೆದ 14 ವರ್ಷಗಳಿಂದ ದೆಹಲಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದು, ಆಡಳಿತರೂಢ ಆಪ್‍ಗೆ ಭಾರೀ ಮುಖಭಂಗವಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿತ್ತು. ಈ ಸಮೀಕ್ಷೆ ಫಲಿತಾಂಶವೇ ನಿಜವಾದಲ್ಲಿ ಮುಂದೆ ಇವಿಎಂ ವಿರುದ್ಧ ಭಾರೀ ಹೋರಾಟ ನಡೆಸುವುದಾಗಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ತಿಳಿಸಿದ್ದರು.
ದೆಹಲಿಯಲ್ಲಿ ಮೂರು ಮಹಾನಗರ ಪಾಲಿಕೆಗಳಿದ್ದು, ಒಟ್ಟು 272 ವಾರ್ಡ್ ಗಳಿವೆ. 2012ರಲ್ಲಿ ಉತ್ತರ ದೆಹಲಿ ಮಹಾನಗರ ಪಾಲಿಕೆ, ದಕ್ಷಿಣ ಮಹಾನಗರ ಪಾಲಿಕೆ, ಪೂರ್ವ ದೆಹಲಿ ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಿದೆ. 2012ರ ಫಲಿತಾಂಶಲ್ಲಿ ಬಿಜೆಪಿ 138, ಕಾಂಗ್ರೆಸ್ 77, ಬಿಎಸ್‍ಪಿ 5ಸ್ಥಾನಗಳನ್ನು ಗೆದ್ದುಕೊಂಡಿತ್ತು.
2012 ಫಲಿತಾಂಶ:
ಉತ್ತರ ದೆಹಲಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 104 ಸ್ಥಾನಗಳಿದ್ದು, ಬಿಜೆಪಿ 59, ಕಾಂಗ್ರೆಸ್ 29, ಬಿಎಸ್‍ಪಿ 07, ಇತರೆ 09 ಸ್ಥಾನಗಳನ್ನು. ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 104 ವಾರ್ಡ್ ಗಳಿದ್ದು, ಬಿಜೆಪಿ 44, ಕಾಂಗ್ರೆಸ್ 29, ಬಿಎಸ್‍ಪಿ 05, ಇತರೆ 26 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಪೂರ್ವ ದೆಹಲಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 64 ವಾರ್ಡ್ ಗಳಿದ್ದು, ಬಿಜೆಪಿ 39, ಕಾಂಗ್ರೆಸ್ 19, ಬಿಎಸ್‍ಪಿ 03 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಚುನಾವಣೋತ್ತರ ಸಮೀಕ್ಷೆ ಏನು ಹೇಳಿತ್ತು?
ಉತ್ತರ ದೆಹಲಿ ಮಹಾನಗರ ಪಾಲಿಕೆ – ಒಟ್ಟು ಸ್ಥಾನಗಳು 104
ಇಂಡಿಯಾ ಟುಡೇ-ಆಕ್ಸಿಸ್ ಬಿಜೆಪಿ 78-84 ಸ್ಥಾನ, ಆಪ್ 8-12, ಕಾಂಗ್ರೆಸ್ 8-12 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದ್ದರೆ, ಎಬಿಪಿ ನ್ಯೂಸ್-ಸಿ ವೋಟರ್ ಬಿಜೆಪಿ 88, ಆಪ್ 06, ಕಾಂಗ್ರೆಸ್ 07 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿತ್ತು.
ದಕ್ಷಿಣ ದೆಹಲಿ ಮಹಾನಗರ ಪಾಲಿಕೆ – ಒಟ್ಟು ಸ್ಥಾನಗಳು 104
ಇಂಡಿಯಾ ಟುಡೇ-ಆಕ್ಸಿಸ್ ಬಿಜೆಪಿ 79-85, ಆಪ್ 9-13 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 7-11 ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದ್ದರೆ, ಎಬಿಪಿ ನ್ಯೂಸ್-ಸಿ ವೋಟರ್ ಬಿಜೆಪಿ 83, ಆಪ್ 09, ಕಾಂಗ್ರೆಸ್ 09 ವಾರ್ಡ್ ಗಳಲ್ಲಿ ಗೆಲ್ಲಲಿದೆ ಎಂದು ಹೇಳಿತ್ತು.
ಪೂರ್ವ ದೆಹಲಿ ಮಹಾನಗರ ಪಾಲಿಕೆ: 64
ಇಂಡಿಯಾ ಟುಡೇ-ಆಕ್ಸಿಸ್ ಬಿಜೆಪಿ 45-51, ಆಪ್ 6-10, ಕಾಂಗ್ರೆಸ್ 04-08 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದ್ದರೆ, ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆ ಬಿಜೆಪಿ 47, ಆಪ್ 09, ಕಾಂಗ್ರೆಸ್ 06 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿತ್ತು.
2015ರ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸ್ಥಾನ?
ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, ಆಮ್ ಆದ್ಮಿ ಪಾರ್ಟಿ 63, ಬಿಜೆಪಿ 03ರಲ್ಲಿ ಗೆದ್ದಿದ್ದಾರೆ, ಕಾಂಗ್ರೆಸ್ ಶೂನ್ಯ ಸಂಪಾದಿಸಿತ್ತು.
ಈಗ ಚುನಾವಣೆ ನಡೆದ್ರೆ ಎಷ್ಟು ಸ್ಥಾನ?
ಇಂಡಿಯಾ ಟುಡೇ-ಆಕ್ಸಿಸ್ ದೆಹಲಿ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ಈಗ ಚುನಾವಣೆ ನಡೆದರೆ, ಬಿಜೆಪಿ 56-62, ಆಪ್ 6-7, ಕಾಂಗ್ರೆಸ್ 4-7 ಸ್ಥಾನಗಳನ್ನು ಗಳಿಸಲಿದೆ ಎಂದು ತಿಳಿಸಿದೆ.
ಗಮನಿಸಬೇಕಾದ ವಿಚಾರಗಳು
– ಸರೈ ಪಿಪಾಲ್ ಥಲಾ ಮತ್ತು ಮೌಜ್‍ಪುರ್ ವಾರ್ಡ್‍ಗಳ ಅಭ್ಯರ್ಥಿಗಳು ನಿಧನರಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಲಾಗಿದೆ.
É- ಪ್ರಸ್ತುತ ಪೂರ್ವ ದೆಹಲಿ ಮೇಯರ್ ಸತ್ಯ ಶರ್ಮಾ, ದಕ್ಷಿಣ ದೆಹಲಿ ಪಾಲಿಕೆ ಮೇಯರ್ ಶ್ಯಾಮ್ ಶರ್ಮಾ, ಉತ್ತರ ದೆಹಲಿ ಮಹಾನಗರ ಪಾಲಿಕೆ ಮೇಯರ್ ಡಾ ಸಂಜೀವ್ ನಯ್ಯಾರ್ ಇದ್ದಾರೆ
– ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿ ದೆಹಲಿ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಬಿಜೆಪಿ-ಶಿರೋಮಣಿ ಅಕಾಲಿದಳದ ಮೈತ್ರಿ ಇದೆ.
– 267 ವಾರ್ಡ್‍ಗಳಲ್ಲಿ ಬಿಜೆಪಿ ಹೊಸ ಮುಖಗಳನ್ನು ಕಣಕ್ಕಿಳಿಸಿತ್ತು. ಯಾವ ಹಳೆಯ ಕಾರ್ಪೋರೇಟರ್‍ಗೂ ಟಿಕೆಟ್ ಕೊಟ್ಟಿಲ್ಲ
– ಆಮ್ ಆದ್ಮಿ ಪಾರ್ಟಿ ಶಾಸಕ ವೇದ್ ಪ್ರಕಾಶ್ ಬಿಜೆಪಿಗೆ ಹಾರಿದ್ದರು. ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ, ಮಾಜಿ ಸಚಿವ ಅರವಿಂದರ್ ಸಿಂಗ್ ಲವ್ಲಿ ಕೂಡಾ ಬಿಜೆಪಿ ಸೇರಿದ್ದರು.
– ಇದೇ ತಿಂಗಳು ನಡೆದ ಉಪ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ತನ್ನ ತೆಕ್ಕೆಯಲ್ಲಿದ್ದ ರಜೌರಿ ಗಾರ್ಡನ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಎದುರು ಸೋಲು ಅನುಭವಿಸಿತ್ತು.
– 2015ರ ಫೆಬ್ರವರಿಯಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಾರ್ಟಿ ಸರ್ಕಾರಕ್ಕೆ ದೆಹಲಿ ಜನತೆ ನೀಡುತ್ತಿರುವ ಮಧ್ಯಂತರ ತೀರ್ಪು ಇದಾಗಿದೆ.