Tag: ಆಪಲ್

  • ಆಪಲ್ ಹಿಂದಿಕ್ಕಿ ವಿಶ್ವದಲ್ಲೇ ನಂಬರ್ 2 ಪಟ್ಟಕ್ಕೆ ಏರಿದ ಕ್ಸಿಯೋಮಿ

    ಆಪಲ್ ಹಿಂದಿಕ್ಕಿ ವಿಶ್ವದಲ್ಲೇ ನಂಬರ್ 2 ಪಟ್ಟಕ್ಕೆ ಏರಿದ ಕ್ಸಿಯೋಮಿ

    – ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಐಫೋನ್ ಮಾರಾಟ ಕುಸಿತ
    – ಸ್ಯಾಮ್‍ಸಂಗ್ ಮೊದಲ ಸ್ಥಾನದಲ್ಲೇ ಮುಂದುವರಿಕೆ

    ಬೀಜಿಂಗ್:  ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಆಪಲ್ ಕಂಪನಿಯನ್ನು ಸೋಲಿಸಿ ನಂಬರ್ 2 ಪಟ್ಟಕ್ಕೆ ಕ್ಸಿಯೋಮಿ ಏರಿದೆ.

    Canalys ಸಂಸ್ಥೆ ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಈ ವರದಿಯನ್ನು ಪ್ರಕಟಿಸಿದೆ. 2ನೇ ತ್ರೈಮಾಸಿಕದಲ್ಲಿ ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆ ಶೇ. 12ರಷ್ಟು ಪ್ರಗತಿ ಸಾಧಿಸಿದೆ.

    ವಿಶ್ವದ ಮಾರುಕಟ್ಟೆಯಲ್ಲಿ ಆಪಲ್ ಶೇ.14ರಷ್ಟು ಪಾಲನ್ನು ಹೊಂದಿದ್ದರೆ, ಕ್ಸಿಯೋಮಿ ಶೇ.17ರಷ್ಟು ಪಾಲನ್ನು ಹೊಂದಿದೆ. ಸ್ಯಾಮ್‍ಸಂಗ್ ಶೇ.19ರಷ್ಟು ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

    ವರ್ಷದಿಂದ ವರ್ಷಕ್ಕೆ ಕ್ಸಿಯೋಮಿ ಮಾರುಕಟ್ಟೆ ಪಾಲು ಹೆಚ್ಚಾಗುತ್ತಿದೆ. ಕ್ಸಿಯೋಮಿ ಶೇ.83ರಷ್ಟು ಬೆಳವಣಿಗೆ ಸಾಧಿಸಿದರೆ ಸ್ಯಾಮ್‍ಸಂಗ್ ಶೇ.15, ಆಪಲ್ ಶೇ.1 ರಷ್ಟು ಪ್ರಗತಿ ಸಾಧಿಸಿದೆ. ಚೀನಾದ ಒಪ್ಪೋ ಮತ್ತು ವಿವೋ ಕಂಪನಿಗಳು ಕ್ರಮವಾಗಿ 4 ಮತ್ತು 5ನೇ ಸ್ಥಾನವನ್ನು ಪಡೆದುಕೊಂಡಿದೆ.

    ಕಡಿಮೆ ಬೆಲೆಯ ಮತ್ತು ಮಿಡ್ ರೇಂಜ್ ಫೋನ್ ಮಾರಾಟದಿಂದ ಕ್ಸಿಯೋಮಿ ಈ ಸಾಧನೆ ಮಾಡಿದೆ. ಎರಡನೇ ಸ್ಥಾನಕ್ಕೆ ಏರಿದ್ದರೂ ಆಪಲ್ ಫೋನ್ ಗಳಿಗೆ ಹೋಲಿಸಿದರೆ ಕ್ಸಿಯೋಮಿ ಫೋನ್ ಶೇ.75ರಷ್ಟು ಬೆಲೆ ಕಡಿಮೆಯಿದೆ.

    https://twitter.com/manukumarjain/status/1415897728706519041

    ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮಾರುಕಟ್ಟೆಯನ್ನು ಗುರಿಯಾಗಿಸಿ ಫೋನ್ ತಯಾರಿಸುತ್ತಿದ್ದ ಕ್ಸಿಯೋಮಿ ಈಗ ಯುರೋಪ್ ಮತ್ತು ಅಮೆರಿಕನ್ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಎಂಐ 11 ಆಲ್ಟ್ರಾ, ಎಂಐ ಮಿಕ್ಸ್ ಫೋಲ್ಡ್ ಫೋನ್ ಬಿಡುಗಡೆ ಮಾಡಿದೆ.

    ವಿಶ್ವದ ಸ್ಮಾರ್ಟ್‍ಫೋನ್ ಕಂಪನಿಗಳಲ್ಲಿ ಒಂದಾಗಿದ್ದ ಹುವಾವೇ ಮೇಲೆ ಅಮೆರಿಕ ನಿಷೇಧ ವಿಧಿಸಿದ್ದು ಕ್ಸಿಯೋಮಿಗೆ ವರದಾನವಾಗಿದೆ. ಸಾಫ್ಟ್ ವೇರ್ ಮತ್ತು ಚಿಪ್ ಪೂರೈಕೆಗೆ ತಡೆಯಾಗಿದ್ದರಿಂದ ಹುವಾವೇ ಸ್ಪರ್ಧೆಯಿಂದ ಹಿಂದೆ ಸರಿದರೆ ಕ್ಸಿಯೋಮಿ ನಿಧನವಾಗಿ ಬೆಳವಣಿಗೆಯಾಗಿ ಈಗ ವಿಶ್ವದ ಎರಡನೇ ದೊಡ್ಡ ಸ್ಮಾರ್ಟ್‍ಫೋನ್ ಕಂಪನಿಯಾಗಿ ಹೊರಹೊಮ್ಮಿದೆ. ಇದನ್ನೂ ಓದಿ: ಚೀನಾಗೆ ಸ್ಯಾಮ್‍ಸಂಗ್ ಶಾಕ್ – ನೋಯ್ಡಾಕ್ಕೆ ಡಿಸ್‍ಪ್ಲೇ ಘಟಕ ಸ್ಥಳಾಂತರ

    ಈ ವರ್ಷದ ಮಾರ್ಚ್ ನಲ್ಲಿ ಕ್ಸಿಯೋಮಿ ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ತೊಡಗುವುದಾಗಿ ಘೋಷಣೆ ಮಾಡಿತ್ತು. ಈ ಸಂಬಂಧ ಮುಂದಿನ 10 ವರ್ಷದಲ್ಲಿ 10 ಶತಕೋಟಿ ಡಾಲರ್ ಬಂಡವಾಳ ಹೂಡುವುದಾಗಿ ಹೇಳಿದೆ.

  • ವಿಶೇಷ ಬ್ಯಾಟರಿ ತಂತ್ರಜ್ಞಾನದೊಂದಿಗೆ 2024ಕ್ಕೆ ಬರಲಿದೆ ಆಪಲ್‌ ಕಾರು

    ವಿಶೇಷ ಬ್ಯಾಟರಿ ತಂತ್ರಜ್ಞಾನದೊಂದಿಗೆ 2024ಕ್ಕೆ ಬರಲಿದೆ ಆಪಲ್‌ ಕಾರು

    ಕ್ಯಾಲಿಫೋರ್ನಿಯಾ: ಗುಣಮಟ್ಟದ ಐಫೋನ್‌ ತಯಾರಿಸಿ ಸ್ಮಾರ್ಟ್‌ಫೋನ್‌ ಪ್ರಿಯರ ಮನಗೆದ್ದಿರುವ ಆಪಲ್‌ ಕಂಪನಿ ಈಗ ಅಟೋಮೊಬೈಲ್‌ ಕ್ಷೇತ್ರಕ್ಕೂ ಕಾಲಿಡಲು ಮುಂದಾಗುತ್ತಿದ್ದು, 2024ರ ವೇಳೆಗೆ ಕಾರನ್ನು ಬಿಡುಗಡೆ ಮಾಡಲು ಮುಂದಾಗಿದೆ.

    ಮುಂದಿನ ತಲೆಮಾರಿನ ವಿಶೇಷ ಬ್ಯಾಟರಿ ತಂತ್ರಜ್ಞಾನದೊಂದಿಗೆ ಈ ಕಾರನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದು ವರದಿಯಾಗಿದೆ.

    ಪ್ರಾಜೆಕ್ಟ್ ಟೈಟಾನ್ ಹೆಸರಿನಲ್ಲಿ ಆಪಲ್‌ ಕಾರು ನಿರ್ಮಾಣಕ್ಕೆ ಕೈ ಹಾಕಿದೆ. ಈ ಮೊದಲು ಬಾಬ್ ಮ್ಯಾನ್ಸ್ಫೀಲ್ಡ್ ಅವರು ಈ ಯೋಜನೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಗೂಗಲ್‌ ಕಂಪನಿಯಿಂದ ಬಂದಿರುವ ಜಾನ್‌ ಜಿಯಾನೆಡ್ರಿಯಾ ಕೈಗೆ ಯೋಜನೆ ಹಸ್ತಾಂತರವಾಗಿದೆ. ಈ ಹಿಂದೆ ಜಾನ್‌ ಗೂಗಲ್‌ ಸರ್ಚ್‌ ಮತ್ತು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು.

     

    ಆಪಲ್‌ ಸಿಇಒ ಟಿಮ್‌ ಕುಕ್‌ ಅವರು ಈ ಹಿಂದೆಯೇ ಕಾರು ಬಗ್ಗೆ ಪ್ರಸ್ತಾಪಿಸಿದ್ದರು. 2014ರಲ್ಲಿ ಯೋಜನೆ ಆರಂಭವಾಗಿತ್ತು. ಆದರೆ ನಿರೀಕ್ಷಿತ ಪ್ರಗತಿ ಕಂಡು ಬರಲಿಲ್ಲ. ಆಪಲ್‌ ಈಗ ಫಾಕ್ಸ್‌ಕಾನ್‌, ವಿಸ್ಟ್ರಾನ್‌ ಕಂಪನಿಗಳ ಜೊತೆ ಸೇರಿ ಹೇಗೆ ಐಫೋನ್‌ಗಳನ್ನು ತಯಾರಿಸುತ್ತದೋ ಅದೇ ರೀತಿಯಾಗಿ ಕಾರು ಉತ್ಪದನಾ ಕಂಪನಿಗಳ ಜೊತೆ ಸೇರಿ ಕಾರುಗಳನ್ನು ತಯಾರಿಸಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.

    ಈಗಿನ ಎಲೆಕ್ಟ್ರಿಕ್‌ ಕಾರುಗಳಲ್ಲಿ ಬ್ಯಾಟರಿ ಚಾರ್ಜಿಂಗ್‌ ಮಾಡುವುದೇ ಬಹಳ ಸವಾಲಿನ ಕೆಲಸ. ಚಾರ್ಜಿಂಗ್‌ ತಡವಾಗುವುದರ ಜೊತೆ ದೀರ್ಘಕಾಲ ಕಾರು ಚಲಸಲು ಬೇಕಾಗಿರುವ ಸಾಮರ್ಥ್ಯ ಈಗ ಇರುವ ಬ್ಯಾಟರಿಗಳಲ್ಲಿ ಇಲ್ಲ.  ಈ ಸಮಸ್ಯೆಗಳಿಗೆ ಪರಿಹಾರ ಹುಡುಕಿ  ಅತ್ಯುನ್ನತ ಗುಣಮಟ್ಟದ ಬ್ಯಾಟರಿಯನ್ನು ಅಭಿವೃದ್ದಿ ಪಡಿಸಲು ಆಪಲ್‌ ಮುಂದಾಗಿದೆ.

  • ಕೋಲಾರದ ಐಫೋನ್‌ ಘಟಕದಲ್ಲಿ ದಾಂಧಲೆ – ತನಿಖೆ ಆರಂಭಿಸಿದ ಆಪಲ್‌

    ಕೋಲಾರದ ಐಫೋನ್‌ ಘಟಕದಲ್ಲಿ ದಾಂಧಲೆ – ತನಿಖೆ ಆರಂಭಿಸಿದ ಆಪಲ್‌

    ನವದೆಹಲಿ: ಕೋಲಾರದ ನರಸಾಪುರ ಘಟಕದಲ್ಲಿರುವ ವಿಸ್ಟ್ರಾನ್‌ ಕಂಪನಿಯಲ್ಲಿ ನಡೆದ ಕಾರ್ಮಿಕರ ದಾಂಧಲೆ ಸಂಬಂಧ ಈಗ ಐಫೋನ್‌ ತಯಾರಕ ಆಪಲ್‌ ಕಂಪನಿ ತನಿಖೆ ನಡೆಸಲು ಮುಂದಾಗಿದೆ.

    ತನ್ನ ಪೂರೈಕೆದಾರರಿಗೂ ಹಲವು ಮಾರ್ಗಸೂಚಿಗಳನ್ನು ವಿಧಿಸಿ ಆಪಲ್‌ ಗುತ್ತಿಗೆ ನೀಡುತ್ತದೆ. ಈ ಮಾರ್ಗಸೂಚಿಯನ್ನು ತೈವಾನ್‌ ಮೂಲದ ವಿಸ್ಟ್ರಾನ್‌ ಕಂಪನಿ ಮುರಿದಿದ್ಯಾ ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ಅಮೆರಿಕದ ಆಪಲ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಓದಿದ ವಿದ್ಯಾರ್ಹತೆಗೂ ನೀಡುತ್ತಿರುವ ಸಂಬಳಕ್ಕೆ ಹೊಂದಿಕೆ ಆಗುತ್ತಿಲ್ಲ. ನಿಗದಿಯಾಗಿದ್ದ ಸಂಬಳಕ್ಕಿಂತ ಕಡಿಮೆ ಸಂಬಳ ನೀಡಿದ್ದು ಅಲ್ಲದೇ ಬೇಕಾಬಿಟ್ಟಿ ಕಡಿತಗೊಳಿಸಿದ್ದಾರೆ ಎಂದು ನೌಕರರು ಆರೋಪಿಸಿ ಡಿ.10 ರಂದು ದಾಂಧಲೆ ನಡೆಸಿದ್ದರು.

    ಕಾರ್ಮಿಕರ ಆರೋಪದ ಹಿನ್ನೆಲೆಯಲ್ಲಿ ಒಪ್ಪಿಕೊಂಡಿದ್ದಕ್ಕಿಂತ ಕಡಿಮೆ ವೇತನ ನೀಡಲಾಗಿತ್ತಾ ಹಾಗೂ ಹೆಚ್ಚುವರಿ ಅವಧಿಯ ಕೆಲಸವನ್ನು ಲೆಕ್ಕ ಹಾಕಿ ಸಂಬಳ ನೀಡಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.

    ಈ ಘಟನೆ ನಮಗೆ ಆಘಾತ ತಂದಿದೆ. ನಾವು ನಮ್ಮ ತಂಡದ ಮೂಲಕ ನರಸಾಪುರದಲ್ಲಿರುವ ವಿಸ್ಟ್ರಾನ್‌ನ ಘಟಕದ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದು, ಹೆಚ್ಚುವರಿ ಆಪಲ್ ತಂಡದ ಸದಸ್ಯರನ್ನು ಮತ್ತು ಲೆಕ್ಕ ಪರಿಶೋಧಕರನ್ನು ಘಟಕಕ್ಕೆ ರವಾನಿಸುತ್ತಿದ್ದೇವೆ. ನಮ್ಮ ತಂಡಗಳು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ ಎಂದು ಆಪಲ್‌ ತಿಳಿಸಿದೆ. ಇದನ್ನೂ ಓದಿ: ವಿಸ್ಟ್ರಾನ್ ಐಫೋನ್‌ ಘಟಕದಲ್ಲಿ ದಾಂಧಲೆ -‌ 7 ಸಾವಿರ ಕಾರ್ಮಿಕರ ವಿರುದ್ಧ ದೂರು, 149 ಮಂದಿ ಅರೆಸ್ಟ್‌

    ಭಾರತದಲ್ಲಿ ಫೋನ್‌ ತಯಾರಿಸುವುದರ ಜೊತೆಗೆ ವಿದೇಶಕ್ಕೆ ಫೋನ್‌ ರಫ್ತು ಮಾಡಲು ಐಫೋನ್‌ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿಸ್ಟ್ರಾನ್‌ ಕಂಪನಿ ಮೇಕ್‌ ಇನ್‌ ಇಂಡಿಯಾದ ಅಡಿ ಮತ್ತಷ್ಟು ಹಣವನ್ನು ಹೂಡಿಕೆ ಮಾಡಲು ಮುಂದಾಗಿದೆ.

    ಈ ಘಟನೆಯಿಂದ ವಿದೇಶಿ ಹೂಡಿಕೆಯ ಮೇಲೆ ಪೆಟ್ಟು ಬೀಳುವ ಸಾಧ್ಯತೆ ಇರುವ ಕಾರಣ ಕರ್ನಾಟಕ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದೆ.

  • ವಿಸ್ಟ್ರಾನ್ ಐಫೋನ್‌ ಘಟಕದಲ್ಲಿ ದಾಂಧಲೆ  -‌ 7 ಸಾವಿರ ಕಾರ್ಮಿಕರ ವಿರುದ್ಧ ದೂರು, 149 ಮಂದಿ ಅರೆಸ್ಟ್‌

    ವಿಸ್ಟ್ರಾನ್ ಐಫೋನ್‌ ಘಟಕದಲ್ಲಿ ದಾಂಧಲೆ -‌ 7 ಸಾವಿರ ಕಾರ್ಮಿಕರ ವಿರುದ್ಧ ದೂರು, 149 ಮಂದಿ ಅರೆಸ್ಟ್‌

    – 5 ಸಾವಿರ ಕಾರ್ಮಿಕರು ಪ್ರಮುಖ ಆರೋಪಿಗಳು
    – 300ಕ್ಕೂ ಹೆಚ್ಚು ಮಂದಿ ವಶಕ್ಕೆ

    ಕೋಲಾರ : ಐಫೋನ್‌ ತಯಾರಕಾ ವಿಸ್ಟ್ರಾನ್ ಇನ್ಫೋಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿನ ದಾಂಧಲೆ ಪ್ರಕರಣ ಸಂಬಂಧ 7 ಸಾವಿರ ಕಾರ್ಮಿಕರ ವಿರುದ್ದ ಆಡಳಿತ ಮಂಡಳಿ ದೂರು ನೀಡಿದೆ.

    ಸುಮಾರು 300 ಕ್ಕೂ ಹೆಚ್ಚು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು 149 ಜನರನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಎಚ್.ಡಿ ಕ್ವಾಲಿಟಿ ಇರುವ ಸಿಸಿಟಿವಿ ಕ್ಯಾಮೆರಾ ಮತ್ತು ವಾಟ್ಸಪ್‌ ಚಾಟ್‌, ಕರೆಯನ್ನು ಆಧರಿಸಿ ಕೃತ್ಯ ಎಸಗಿದವರನ್ನ ಬಂಧಿಸಲಾಗುತ್ತಿದೆ.

    6 ಖಾಸಗಿ ಏಜೆನ್ಸಿಗಳ ಮೂಲಕ 8,490 ಕಾರ್ಮಿಕರನ್ನು ಗುತ್ತಿಗೆ ಕಾರ್ಮಿಕರು ಹಾಗೂ 1,343 ಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ವಿಸ್ಟ್ರಾನ್ ಕಂಪನಿ ನೇಮಿಸಿಕೊಂಡಿತ್ತು. ಈಗಾಗಲೇ ಕಂಪನಿ ಆಡಳಿತ ಮಂಡಳಿ, ಅಸಿಸ್ಟೆಂಟ್ ಮ್ಯಾನೇಜರ್ ವೇಮಗಲ್ ಪೊಲೀಸ್ ಠಾಣೆಯಲ್ಲಿ ಕಾರ್ಮಿಕರ ವಿರುದ್ದ ಪ್ರತ್ಯೇಕ ಮೂರು ಎಫ್‌ಐಅರ್ ದಾಖಲು ಮಾಡಿದ್ದಾರೆ.

    ಒಟ್ಟು 7 ಸಾವಿರ ಕಾರ್ಮಿಕರ ವಿರುದ್ದ ದೂರು ನೀಡಿದ್ದು, ಇದರಲ್ಲಿ 5 ಸಾವಿರ ಕಾರ್ಮಿಕರು ಪ್ರಮುಖ ಅರೋಪಿಗಳು ಅಂದರೆ ಎ-1 ಎಂದು, 2 ಸಾವಿರ ಕಾರ್ಮಿಕರು ಎ-2 ಅರೋಪಿಗಳೆಂದು ದೂರು ದಾಖಲಾಗಿದೆ.

    ಕಂಪನಿ ಉಪಕರಣ, ವಾಹನ, ಎಲೆಕ್ಟ್ರಾನಿಕ್ ಉಪಕರಣಗಳನ್ನ ಧ್ವಂಸ ಮಾಡಿದ್ದು, ಹತ್ತು ಕೋಟಿಯಷ್ಟು ಎಲೆಕ್ಟ್ರಾನಿಕ್ ಉಪಕರಣಗಳು ಕಳುವಾಗಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದು, ದಾಂಧಲೆ, ಆಸ್ತಿ ಪಾಸ್ತಿ ನಷ್ಟ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ದರೋಡೆ ಪ್ರಕರಣ ಸೇರಿ, ಐಪಿಸಿ ಸೆಕ್ಷನ್ 143, 147, 148, 149, 323, 395, 448, 435, 427, 504, 506 ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.

    ಕಂಪನಿಯಲ್ಲಿ ವೇತನ ನೀಡದ ಹಿನ್ನೆಲೆಯಲ್ಲಿ ಡಿ.10 ರಂದು ಕಾರ್ಮಿಕರು ದಾಂಧಲೆ ನಡೆಸಿ ಕಂಪನಿಯನ್ನ ಧ್ವಂಸ ಮಾಡಿದ್ದರು. ಈ ಸಂಬಂಧ ಇಲ್ಲಿಯವರೆಗೆ 149 ಕಾರ್ಮಿಕರನ್ನ ಪೊಲೀಸರು ಬಂಧಿಸಿದ್ದು, ದಾಂಧಲೆಯಿಂದ 437.70 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

    ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರ ಮಾಹಿತಿ ಕಂಪನಿ ಸಿಬ್ಬಂದಿಯಿಂದ ಸಿಕ್ಕಿದ್ದು, 10 ಪೊಲೀಸ್ ತಂಡಗಳಿಂದ ವಿಚಾರಣೆ ನಡೆಯುತ್ತಿದೆ. ಪ್ರಕರಣ ಈಗ ವಿಚಾರಣೆ ಹಂತದಲ್ಲಿದ್ದು, ದಾಂಧಲೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ.

    ಎರಡು ಮೂರು ತಿಂಗಳಲ್ಲಿ ಮತ್ತೆ ಕಂಪನಿ ಆರಂಭವಾಗಲಿದೆ. ಜಿಲ್ಲೆಯ ಎಲ್ಲಾ ಕೈಗಾರಿಕೆಗಳ ಮುಖ್ಯಸ್ಥರನ್ನ ಶಾಸಕರೊಂದಿಗೆ ಸಭೆ ಕರೆದು ಕಾರ್ಮಿಕರ ಸಮಸ್ಯೆಗಳನ್ನ ಪರಿಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ತಿಳಿಸಿದರು.

    ವಿಸ್ಟ್ರಾನ್ ಕಂಪನಿ ಕಾರ್ಮಿಕರ ವೇತನ ಪಾವತಿ ಮತ್ತು ಹಾಜರಾತಿ ದಾಖಲೆಪತ್ರ ನಿರ್ವಹಣೆಯಲ್ಲಿ ಉಂಟಾದ ಗೊಂದಲ, ಕಾರ್ಮಿಕರು ಹಾಗೂ ಆಡಳಿತ ವರ್ಗದವರ ನಡುವೆ ಬಾಂಧವ್ಯ ಹದೆಗೆಟ್ಟ ಹಿನ್ನೆಲೆಯಲ್ಲಿ ದಾಂಧಲೆ ನಡೆದಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.

  • ಹೊಸಕೋಟೆ ಬಳಿ ದೊಡ್ಡ ಗೋದಾಮು ತೆರೆಯಲಿದೆ ಐಫೋನ್‌ ತಯಾರಕ ವಿಸ್ಟರ್ನ್‌ ಕಂಪನಿ

    ಹೊಸಕೋಟೆ ಬಳಿ ದೊಡ್ಡ ಗೋದಾಮು ತೆರೆಯಲಿದೆ ಐಫೋನ್‌ ತಯಾರಕ ವಿಸ್ಟರ್ನ್‌ ಕಂಪನಿ

    ಬೆಂಗಳೂರು: ಆಪಲ್ ಐಫೋನ್ ತಯಾರಿಸುವ ತೈವಾನಿನ ವಿಸ್ಟರ್ನ್ ಕಂಪನಿ ಬೆಂಗಳೂರಿನ ಹೊಸಕೋಟೆ ಸಮೀಪ ದೊಡ್ಡ ಗೋದಾಮು ಸ್ಥಾಪಿಸಲು ಮುಂದಾಗಿದೆ.

    ವಿಸ್ಟರ್ನ್ ಕಂಪನಿ ಈಗಾಗಲೇ ಬೆಂಗಳೂರಿನ ಪೀಣ್ಯ ಮತ್ತು ಕೋಲಾರದ ನರಸಾಪುರದಲ್ಲಿ ಐಫೋನ್ ಜೋಡಣಾ ಘಟಕವನ್ನು ಸ್ಥಾಪಿಸಿದೆ. ಈಗ ತನ್ನ ಉತ್ಪನ್ನವನ್ನು ಸಂಗ್ರಹಿಸಲು ಹೊಸಕೋಟೆ ಬಳಿ ದೊಡ್ಡ ಗೋದಾಮು ಸ್ಥಾಪನೆಗೆ ಮುಂದಾಗಿದೆ.

    ಈ ಗೋದಾಮಿನಲ್ಲಿ 3 ಸಾವಿರ ಮಂದಿಗೆ ಉದ್ಯೋಗ ಸಿಗುವ ಸಾಧ್ಯತೆಯಿದೆ. ಗೋದಾಮು, ಜೋಡಣಾ ಘಟಕ ಸೇರಿ ಒಟ್ಟು 10 ಸಾವಿರ ಮಂದಿಗೆ ಉದ್ಯೋಗ ನೀಡಲು ವಿಸ್ಟರ್ನ್ ಕಂಪನಿ ಮುಂದಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ. ವಿಸ್ಟರ್ನ್ ಮತ್ತು ಆಪಲ್ ಕಂಪನಿ ಗೋದಾಮು ತೆರೆಯುವ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಬೆಂಗಳೂರಿನಲ್ಲಿ ದೊಡ್ಡ ಕಚೇರಿ ತೆರೆಯಲಿದೆ ಆಪಲ್‌

    ನರಾಸಪುರದಲ್ಲಿ 43 ಎಕ್ರೆ ಜಾಗದಲ್ಲಿ ಘಟಕ ತೆರೆದಿರುವ ವಿಸ್ಟರ್ನ್ 3 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ. ಈಗಾಗಲೇ ಕಂಪನಿ 1 ಸಾವಿರ ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದೆ.

    ಕೋವಿಡ್‌ 19 ಬಳಿಕ ಚೀನಾ ಅವಲಂಬನೆ ಕಡಿಮೆ ಮಾಡಿ ಬೇರೆ ದೇಶಗಳಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಕಂಪನಿಗಳು ಮುಂದಾಗುತ್ತಿವೆ. ಭಾರತ ಈಗ ವಿಶ್ವದ ಕಂಪನಿಗಳನ್ನು ಆಕರ್ಷಿಸುತ್ತಿವೆ. ಸರ್ಕಾರಗಳು ಮೂಲಸೌಕರ್ಯ ಅಭಿವೃದ್ಧಿ ಪಡಿಸಿ ಘಟಕ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದರೆ ಸಾವಿರಾರು ಮಂದಿಗೆ ಉದ್ಯೋಗ ಸಿಗಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಇದನ್ನೂ ಓದಿ: ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌ – ಐಫೋನ್‌ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್‌‌ ಹೂಡಿಕೆ

    ಆಪಲ್‌ ಕಂಪನಿ ಗುತ್ತಿಗೆ ನೀಡುತ್ತಿರುವ ಫಾಕ್ಸ್‌ಕನ್‌, ಪೆಗಟ್ರಾನ್‌ ಮತ್ತು ವಿಸ್ಟರ್ನ್‌ ಭಾರತದಲ್ಲಿ ಭಾರೀ ಹೂಡಿಕೆ ಮಾಡಲು ಮಂದಾಗಿದೆ. ಫಾಕ್ಸ್‌ಕನ್‌ ಕಂಪನಿ ಐಫೋನ್‌ ಎಕ್ಸ್‌ ಆರ್‌ ತಯಾರಿಸುವ ಶ್ರೀಪೆರಂಬದೂರು ಘಟಕ್ಕೆ 1 ಶತ ಕೋಟಿ ಡಾಲರ್‌ ಹ ಣವನ್ನುಹೂಡಿಕೆ ಮಾಡಲಿದ್ದರೆ , ಪೆಗಾಟ್ರನ್‌ ಕಂಪನಿ 150 ದಶಲಕ್ಷ ಡಾಲರ್‌ ಹಣವನ್ನು ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗುತ್ತಿದ್ದೇವೆ ಎಂದು ಹೇಳಿದೆ.

    ಆಪಲ್‌ ಕಂಪನಿಗೆ ಚಾರ್ಜರ್‌ ಪೊರೈಕೆ ಮಾಡುವ ಸಲ್‌ಕಾಂಪ್‌ ಕಂಪನಿ ಚೆನ್ನೈ ಎಸ್‌ಇಝಡ್‌ನಲ್ಲಿ ಮುಚ್ಚಲ್ಪಟ್ಟಿರುವ ನೋಕಿಯಾ ಘಟಕವನ್ನು ಖರೀದಿಸಿದ್ದು ಮುಂದಿನ 5 ವರ್ಷದಲ್ಲಿ 2 ಸಾವಿರ ಕೋಟಿ ರೂ. ಹಣವನ್ನು ಹೂಡಿಕೆ ಮಾಡಲಿದೆ.

    ಇತ್ತೀಚಿಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌, ಮುಂದಿನ 5 ವರ್ಷದಲ್ಲಿ 11 ಲಕ್ಷ ಕೋಟಿ ಹಣವನ್ನು ಭಾರತ ಮತ್ತು ವಿದೇಶದ ಕಂಪನಿಗಳು ದೇಶದಲ್ಲಿ ಹೂಡಿಕೆ ಮಾಡಲಿವೆ ಎಂದು ತಿಳಿಸಿದ್ದರು.

    ಭಾರತವನ್ನು ಮೊಬೈಲ್‌ ಉತ್ಪಾದನಾ ಹಬ್‌ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‌ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಮತ್ತು ವಿಶ್ವದ ಹಲವು ಕಂಪನಿಗಳು ಆಯ್ಕೆಯಾಗಿವೆ.  ಇದನ್ನೂ ಓದಿ: ದೇಶೀಯ ಫೋನ್‌ ತಯಾರಿಕಾ ಕಂಪನಿ ಖರೀದಿಗೆ ಮುಂದಾದ ಜಿಯೋ

  • ನೀವು ಫ್ರೆಶ್ ಅಂತ ತಿನ್ನೋ ಆಪಲ್ ಎಷ್ಟು ಹಳತಾಗಿರಬಹುದು ಗೊತ್ತೇ?

    ನೀವು ಫ್ರೆಶ್ ಅಂತ ತಿನ್ನೋ ಆಪಲ್ ಎಷ್ಟು ಹಳತಾಗಿರಬಹುದು ಗೊತ್ತೇ?

    ಗ ಎಲ್ಲೆಲ್ಲಿಯೂ ಮಾಲ್ ಸಂಸ್ಕೃತಿ ಹಬ್ಬಿಕೊಂಡಿದೆ. ಆಗ ತಾನೇ ಕೊಯ್ದ ಹಣ್ಣು ತರಕಾರಿ ಬೀದಿ ಬದಿಯಲ್ಲಿದ್ರೆ ಜನ ಅದ್ರತ್ತ ತಿರುಗಿಯೂ ನೋಡೋದಿಲ್ಲ. ದೊಡ್ಡ ದೊಡ್ಡ ಮಾಲ್‍ಗಳಲ್ಲಿ ಹಣ್ಣು ತರಕಾರಿ ಕೊಂಡರೇನೋ ಅಂಥವ್ರಿಗೆಲ್ಲ ಸಮಾಧಾನ. ಕಲಾತ್ಮಕವಾಗಿ ಜೋಡಿಸಿರುವ, ನಾನಾ ವ್ಯಾಪಾರೀ ಹಕೀಕತ್ತುಗಳಿಗೇ ಜನರ ಮನಸು ಸೋಲುತ್ತೆ. ಅಂಥಾ ಹೈಫೈ ಮಳಿಗೆಗಳಿಂದ ತಂದರೇನೇ ಹಣ್ಣು ಸೇರಿದಂತೆ ಎಲ್ಲವೂ ಫ್ರೆಶ್ ಆಗಿರುತ್ತೆಂಬ ನಂಬಿಕೆ ಹಲವರಲ್ಲಿದೆ.

    ಆದ್ರೆ ಈಗ ಹೊರ ಬಿದ್ದಿರೋ ಒಂದು ಸುದ್ದಿ ಅಂಥಾ ನಂಬಿಕೆಗಳನ್ನೆಲ್ಲ ಶುದ್ಧ ಭ್ರಮೆಯನ್ನಾಗಿಸಿದೆ. ಆರೋಗ್ಯ ಕಾಳಜಿ ಹೊಂದಿರುವವ ಪಾಲಿನ ಮೆಚ್ಚಿನ ಹಣ್ಣು ಆಪಲ್. ದಿನಾ ಒಂದು ಸೇಬು ತಿಂದರೆ ಅನಾರೋಗ್ಯದಿಂದ ದೂರ ಇರಬಹುದೆಂಬ ನಾಣ್ನುಡಿಯೇ ಇದೆ. ಅದರಲ್ಲಿ ಸತ್ಯವಿರೋದೂ ಹೌದು. ಪ್ರತಿಯೊಂದನ್ನೂ ಲಾಭಕ್ಕೆ ಬಳಸಿಕೊಳ್ಳೋ ವ್ಯಾಪಾರಿ ಬುದ್ಧಿ ಸೇಬನ್ನು ಬಿಡೋದುಂಟೇ? ಆದ್ದರಿಂದಲೇ ಆಪಲ್ ವ್ಯಾಪಾರಿಗಳು ತಾಜಾತನದ ವಿಚಾರದಲ್ಲಿ ಗ್ರಾಹಕರನ್ನು ಸಲೀಸಾಗಿ ಯಾಮಾರಿಸುತ್ತಿದ್ದಾರಂತೆ.

    ಸೇಬು ಸರ್ವ ಋತುಗಳಲ್ಲಿಯೂ ದುಬಾರಿ ಬೆಲೆ ಕಾಯ್ದಿಟ್ಟುಕೊಂಡಿರೋ ಹಣ್ಣು. ಅದೆಷ್ಟೇ ತಾಜಾ ಹಣ್ಣನ್ನ ತಂದ್ರೂ ದಿನ ಕಳೆಯೋದರೊಳಗದು ಮುರುಟಿಕೊಳ್ಳುತ್ತೆ. ಫ್ರಿಡ್ಜಲ್ಲಿಟ್ಟು ತಿನ್ನೋದೂ ಕೂಡಾ ಅಪಾಯಕಾರಿಯೇ ಅನ್ನೋ ನಂಬಿಕೆ ಹಲವರಲ್ಲಿದೆ. ಆದ್ರೆ ಮಾಲ್‍ಗಳಿಂದ ನೀವು ಕೊಂಡು ತರೋ ಸೇಬು ಒಂದು ವರ್ಷದಷ್ಟು ಹಳತಾಗಿರುತ್ತೆಂಬ ಸತ್ಯವನ್ನ ವರದಿಯೊಂದು ಬಯಲು ಮಾಡಿಬಿಟ್ಟಿದೆ.

    ವರ್ಷದ ಕೊನೆಯ ಹೊತ್ತಿಗೆ ಕುಯಿಲು ಮಾಡಿದ ಆಪಲ್‍ಗಳನ್ನ ವ್ಯಾಪಾರಿಗಳು ಖರೀದಿಸ್ತಾರೆ. ನಂತರ ಅದನ್ನ ಹಲವಾರು ಪ್ರಕ್ರಿಯೆಗಳಿಗೊಳಪಡಿಸಿ ಕೋಲ್ಡ್ ಸ್ಟೋರೇಜಿನಲ್ಲಿಡ್ತಾರೆ. ಆ ನಂತರದಲ್ಲಿ ಹೆಚ್ಚು ಕಾಸು ಬರೋ ಕಾಲ ನೋಡಿಕೊಂಡು ಮಾರುಕಟ್ಟೆಗೆ ಬಿಡ್ತಾರೆ. ನೀವು ಒಂದಲ್ಲ ಒಂದು ಸೀಜನ್ನಿನಲ್ಲಿ ಸಾಕಷ್ಟು ಹಳೇ ಆಪಲ್ ಅನ್ನು ತಿನ್ನದಿರಲು ಸಾಧ್ಯವೇ ಇಲ್ಲ. ಯಾಕಂದ್ರೆ ಮಾಲ್‍ಗಳಲ್ಲಿ ಹೊಳೆಯುತ್ತಾ ಕಣ್ಸೆಳೆಯೋ ಆಪಲ್‍ಗಳಲ್ಲಿ ಬಹುತೇಕವುಗಳು ಇಂಥಾ ಕೋಲ್ಡ್ ಸ್ಟೋರೇಜಿನ ಕೂಸುಗಳೇ. ಅವುಗಳನ್ನು ಕಿತ್ತು ಕಡಿಮೆಯೆಂದರೂ ಒಂದು ವರ್ಷ ಕಳೆದಿರುತ್ತೆ!

     

  • ಬೆಂಗಳೂರಿನಲ್ಲಿ ದೊಡ್ಡ ಕಚೇರಿ ತೆರೆಯಲಿದೆ ಆಪಲ್‌

    ಬೆಂಗಳೂರಿನಲ್ಲಿ ದೊಡ್ಡ ಕಚೇರಿ ತೆರೆಯಲಿದೆ ಆಪಲ್‌

    – 3.5 ಲಕ್ಷ ಚದರ ಅಡಿ ವಿಸ್ತೀರ್ಣದ ಆಫೀಸ್‌
    – ಭಾರತದಲ್ಲಿ ಉತ್ಪಾದನಾ ಘಟಕ ಆರಂಭ

    ಬೆಂಗಳೂರು: ಕೋವಿಡ್‌ 19 ನಂತರ ವಿಶ್ವದ ಯಾವ ದೇಶದಲ್ಲಿ ವಿದೇಶಿ ಹೂಡಿಕೆ ಜಾಸ್ತಿಯಾಗಲಿದೆ ಎಂಬ ಪ್ರಶ್ನೆಗೆ ಹಲವು ತಜ್ಞರು ನೀಡುವ ಉತ್ತರ ಭಾರತ. ಈ ಉತ್ತರಕ್ಕೆ ಪೂರಕ ಎಂಬಂತೆ ಈಗಾಗಲೇ ಗೂಗಲ್‌, ಫೇಸ್‌ಬುಕ್‌ ಕಂಪನಿಗಳು ದೇಶದಲ್ಲಿ ಹೂಡಿಕೆ ಮಾಡಿವೆ. ಈಗ ಐಫೋನ್‌ ತಯಾರಿಸುತ್ತಿರುವ ಆಪಲ್‌ ಕಂಪನಿ ಸಹ ಹೂಡಿಕೆ ಮಾಡಲು ಮುಂದಾಗಿದೆ. ಅದರಲ್ಲೂ ವಿಶೇಷ ಏನೆಂದರೆ ಬೆಂಗಳೂರಿನಲ್ಲಿ ದೊಡ್ಡ ಕಚೇರಿ ತೆರೆಯಲು ಆಪಲ್‌ ಮುಂದಾಗಿದೆ.

    ಹೌದು. ಆಪಲ್‌ ಕಂಪನಿ 3.5 ಲಕ್ಷ ಚದರ ಅಡಿ ವಿಸ್ತೀರ್ಣದ ಕಚೇರಿ ತೆರೆಯಲು ನಿರ್ಧರಿಸಿದೆ. ಜಾಗತಿಕ ಮಟ್ಟದಲ್ಲಿ ತನ್ನ ರಿಟೇಲ್‌ ವ್ಯವಹಾರವನ್ನು ವಿಸ್ತರಿಸುವ ಸಂಬಂಧ ಕಚೇರಿ ತೆರೆಯುವ ಯೋಜನೆಯನ್ನು ಆಪಲ್‌ ಹಾಕಿಕೊಂಡಿದೆ.

    ಕಚೇರಿ ತೆರೆಯುವ ಸಂಬಂಧ ಮಾತುಕತೆ ಆರಂಭಗೊಂಡಿದ್ದು ಶೀಘ್ರವೇ ಅಂತಿಮವಾಗಲಿದೆ ಎಂದು ವರದಿಯಾಗಿದೆ. ಬೆಂಗಳೂರಿನ ಪ್ರಿಸ್ಟೇಜ್‌ ಮಿನ್ಸ್ಕ್ ಸ್ಕ್ಯಾರ್‌ನಲ್ಲಿ ಆಪಲ್‌ ಕಚೇರಿ ಆರಂಭಗೊಳ್ಳುವ ನಿರೀಕ್ಷೆಯಿದೆ.

    ರಿಟೇಲ್‌ ವ್ಯವಹಾರದ ಜೊತೆಗೆ ಭಾರತದಲ್ಲಿ ಉತ್ಪಾದನಾ ಘಟಕ ಆರಂಭಿಸಲು ಆಪಲ್‌ ಮುಂದಾಗುತ್ತಿದೆ. ಆಪಲ್‌ ಕಂಪನಿಯ ಉನ್ನತ ದರ್ಜೆಯ ಐಫೋನ್‌ಗಳ ಜೋಡಣೆ ಕೆಲಸ ಚೆನ್ನೈನ ಫಾಕ್ಸ್‌ಕಾನ್‌ ಘಟಕದಲ್ಲಿ ಕಳೆದ ತಿಂಗಳಿನಿಂದ ಆರಂಭಗೊಂಡಿದೆ.

    ವಿಶ್ವದ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಆಪಲ್‌ ಶೇ.1ರಷ್ಟು ಪಾಲನ್ನು ಹೊಂದಿದೆ. ಆಪಲ್ ಉತ್ಪನ್ನಗಳು ವಿದೇಶದಿಂದ ಆಮದು ಆಗುತ್ತಿದ್ದು, ಆಮದು ಸುಂಕ ಜಾಸ್ತಿ ಇರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಐಫೋನ್ ಸೇರಿದಂತೆ ಇತರ ಉತ್ಪನ್ನಗಳ ಬೆಲೆ ಜಾಸ್ತಿಯಿದೆ. ಭಾರತದಲ್ಲಿ ಉತ್ಪಾದಿಸಿದರೆ ಆಮದು ಸುಂಕವೇ ಇರದ ಕಾರಣ ಐಫೋನ್ ಬೆಲೆ ಕಡಿಮೆಯಾಗಿ ಮಾರುಕಟ್ಟೆ ವಿಸ್ತರಣೆಯಾಗಬಹುದು ಎಂಬ ಲೆಕ್ಕಾಚಾರವನ್ನು ಆಪಲ್‌ ಹಾಕಿಕೊಂಡಿದೆ. ಇದನ್ನೂ ಓದಿ: ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌ – ಐಫೋನ್‌ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್‌‌ ಹೂಡಿಕೆ

    ಈಗಾಗಲೇ ಆಪಲ್‌ ಕಂಪನಿ ತೈವಾನ್‌‌ ಮೂಲದ ವಿಸ್ಟ್ರಾನ್ ಕಂಪನಿಯ ಮೂಲಕ ಬೆಂಗಳೂರಿನಲ್ಲಿ ಘಟಕವನ್ನು ಸ್ಥಾಪಿಸಿದೆ. 2017ರಲ್ಲಿ ಆರಂಭಗೊಂಡ ಈ ಘಟಕದಲ್ಲಿ ಐಫೋನ್‌ 6 ಎಸ್‌, 7 ಫೋನ್‌‌ಗಳ ಜೋಡಣೆಯಾಗುತ್ತಿದೆ. ಅಷ್ಟೇ ಅಲ್ಲದೇ ಐಫೋನ್ ಒಳಗಡೆ ಇರುವ ಪ್ರಿಂಟೆಡ್‌ ಸರ್ಕ್ಯೂಟ್ ಬೋರ್ಡ್ಸ್‌ಗಳನ್ನು ಜೋಡಣೆ ಮಾಡಲು ಮುಂದಾಗುತ್ತಿದೆ.

  • ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌ – ಐಫೋನ್‌ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್‌‌ ಹೂಡಿಕೆ

    ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌ – ಐಫೋನ್‌ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್‌‌ ಹೂಡಿಕೆ

    ಕ್ಯಾಲಿಫೋರ್ನಿಯಾ: ಗಲ್ವಾನ್‌ ಘರ್ಷಣೆಯ ಬಳಿಕ ಭಾರತ ಸರ್ಕಾರ ಚೀನಾದ 59 ಅಪ್ಲಿಕೇಶನ್‌‌ಗಳನ್ನು ನಿಷೇಧಿಸಿ ‘ಡಿಜಿಟಲ್‌ ಸ್ಟ್ರೈಕ್‌’ ಮಾಡುವ ಮೂಲಕ ಶಾಕ್‌ ನೀಡಿತ್ತು. ಈಗ ಕೊರೊನಾ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಸರಿಯಾಗಿ ಹಂಚಿಕೊಳ್ಳದ್ದಕ್ಕೆ ವಿಶ್ವದ ಕೆಂಗಣ್ಣಿಗೆ ಗುರಿಯಾದ ಹಿನ್ನೆಲೆಯಲ್ಲಿ ಅಮೆರಿಕದ ಕಂಪನಿಗಳು ಚೀನಾ ಮೇಲೆ ‘ಹಾರ್ಡ್‌ವೇರ್‍ ಸ್ಟ್ರೈಕ್‌’ ಮಾಡಲು ಆರಂಭಿಸಿವೆ.

    ಅಮೆರಿಕದ ಟ್ರಂಪ್‌ ಸರ್ಕಾರ ಮೊದಲಿನಿಂದಲೂ ವ್ಯಾಪಾರ ವಿಚಾರದಲ್ಲಿ ಚೀನಾ ವಿರುದ್ಧ ಕಿಡಿ ಕಾರುತ್ತಲೇ ಬಂದಿದೆ. ಈಗ ಕೊರೊನಾ ವೈರಸ್‌‌ ಸೃಷ್ಟಿಯಾದ ಬಳಿಕ ಗಲಾಟೆ ಮತ್ತಷ್ಟು ಜೋರಾಗಿದೆ. ಇದರ ಜೊತೆ ಯುರೋಪಿಯನ್‌ ಒಕ್ಕೂಟಗಳು ಸಹಾ ಚೀನಾ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಹಲವು ಬಹುರಾಷ್ಟ್ರೀಯ ಕಂಪನಿಗಳು ಚೀನಾದಲ್ಲಿ ಹೂಡಿಕೆ ಮಾಡುವ ಬದಲು ಬೇರೆ ದೇಶಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿವೆ.

    ಈ ನಿಟ್ಟಿನಲ್ಲಿ ಮೊದಲು ಎನ್ನುವಂತೆ ಆಪಲ್‌ ಐಫೋನ್‌ ತಯಾರಿಸುವ ಫಾಕ್ಸ್‌ಕಾನ್‌ ಕಂಪನಿ ತಮಿಳುನಾಡಿನಲ್ಲಿ 1 ಶತಕೋಟಿ ಡಾಲರ್‌ ಹೂಡಿಕೆ ಮಾಡಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.

    ಫಾಕ್ಸ್‌ಕಾನ್‌‌ ತೈವಾನ್‌ ಮೂಲದ ಕಂಪನಿಯಾಗಿದ್ದರೂ ಚೀನಾದ ಘಟಕದಲ್ಲಿ ಐಫೋನ್‌ಗಳನ್ನು ತಯಾರಿಸುತ್ತಿತ್ತು. ಈಗ ಚೀನಾ ಬಿಟ್ಟು ಹೊರ ದೇಶದಲ್ಲಿ ಘಟಕ ಸ್ಥಾಪನೆಗೆ ಹೂಡಿಕೆ ಮಾಡುತ್ತಿರುವುದಾಗಿ ತಿಳಿಸಿದೆ.

    ಈ ಸಂಬಂಧ ಮಾಧ್ಯಮಕ್ಕೆ ಫಾಕ್ಸ್‌‌‌ಕಂಪನಿಯ ಮೂಲವೊಂದು ಪ್ರತಿಕ್ರಿಯಿಸಿ, ಆಪಲ್‌ ಕಂಪನಿಯ ಬಲವಾದ ಬೇಡಿಕೆ ಹಿನ್ನೆಲೆಯಲ್ಲಿ ಚೀನಾದ ಬದಲು ಬೇರೆ ಕಡೆ ಐಫೋನ್‌ ಭಾಗಗಳ ಉತ್ಪಾದನೆಗೆ ಮುಂದಾಗುತ್ತಿದ್ದೇವೆ ಎಂದು ತಿಳಿಸಿದೆ.

    ಈ ವಿಚಾರದ ಬಗ್ಗೆ ಆಪಲ್‌, ಫಾಕ್ಸ್‌ಕಾನ್‌ ಕಂಪನಿಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮೂಲಗಳ ಪ್ರಕಾರ ಫಾಕ್ಸ್‌ಕಾನ್‌ ಕಂಪನಿ ಪ್ರಸ್ತುತ ಐಫೋನ್‌ ಎಕ್ಸ್‌ಆರ್‌ ಫೋನ್ ತಯಾರಿಸುತ್ತಿರುವ ಶ್ರೀಪೆರುಂಬುದೂರ್ ಪಟ್ಟಣದಲ್ಲಿರುವ ಘಟಕವನ್ನು ವಿಸ್ತರಣೆ ಮಾಡುವ ಸಂಬಂಧ ಹೂಡಿಕೆ ಮಾಡುತ್ತಿದೆ. ಅಷ್ಟೇ ಅಲ್ಲದೇ ಆಂಧ್ರಪ್ರದೇಶದಲ್ಲಿ ಘಟಕ ತೆರೆಯಲು ಫಾಕ್ಸ್‌ಕಾನ್‌ ಮುಂದಾಗಿದೆ. ಒಟ್ಟು 6 ಸಾವಿರ ಮಂದಿಗೆ ಇದರಿಂದ ಉದ್ಯೋಗ ಸಿಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಡಿಜಿಟಲ್‌ ಸ್ಟ್ರೈಕ್ ಬಳಿಕ‌ ಮತ್ತೊಂದು ಭಾರೀ ಹೊಡೆತ ನೀಡಲು ಭಾರತ ಸಿದ್ಧತೆ

    ಕಳೆದ ತಿಂಗಳು ತೈವಾನ್ ಮೂಲದ ಫಾಕ್ಸ್‌ಕಾನ್‌ ಕಂಪನಿಯ ಮುಖ್ಯಸ್ಥ ಲಿಯು ಯುಂಗ್‌ ಯಾವುದೇ ಮಾಹಿತಿ ನೀಡದೇ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದ್ದರು.

    ವಿಶ್ವದ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಆಪಲ್‌ ಶೇ.1ರಷ್ಟು ಪಾಲನ್ನು ಹೊಂದಿದೆ. ಆಪಲ್ ಉತ್ಪನ್ನಗಳು ವಿದೇಶದಿಂದ  ಆಮದು ಆಗುತ್ತಿದ್ದು, ಆಮದು ಸುಂಕ ಜಾಸ್ತಿ ಇರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಐಫೋನ್ ಸೇರಿದಂತೆ ಇತರ ಉತ್ಪನ್ನಗಳ ಬೆಲೆ ಜಾಸ್ತಿಯಿದೆ. ಭಾರತದಲ್ಲಿ ಉತ್ಪಾದಿಸಿದರೆ ಆಮದು ಸುಂಕವೇ ಇರದ ಕಾರಣ ಐಫೋನ್  ಬೆಲೆ ಕಡಿಮೆಯಾಗಿ ಮಾರುಕಟ್ಟೆ ವಿಸ್ತರಣೆಯಾಗಬಹುದು ಎಂಬ ಲೆಕ್ಕಾಚಾರವನ್ನು ಆಪಲ್‌ ಹಾಕಿಕೊಂಡಿದೆ.

    ಈಗಾಗಲೇ ಆಪಲ್‌ ಕಂಪನಿ ತೈವಾನ್‌‌ ಮೂಲದ ವಿಸ್ಟ್ರಾನ್ ಕಂಪನಿಯ ಮೂಲಕ ಬೆಂಗಳೂರಿನಲ್ಲಿ ಘಟಕವನ್ನು ಸ್ಥಾಪಿಸಿದೆ. 2017ರಲ್ಲಿ ಆರಂಭಗೊಂಡ ಈ ಘಟಕದಲ್ಲಿ ಐಫೋನ್‌ 6ಎಸ್‌, 7 ಫೋನ್‌‌ಗಳ ಜೋಡಣೆಯಾಗುತ್ತಿದೆ. ಅಷ್ಟೇ ಅಲ್ಲದೇ ಐಫೋನ್ ಒಳಗಡೆ ಇರುವ ಪ್ರಿಂಟೆಡ್‌ ಸರ್ಕ್ಯೂಟ್ ಬೋರ್ಡ್ಸ್‌ಗಳನ್ನು ಜೋಡಣೆ ಮಾಡಲು ಮುಂದಾಗುತ್ತಿದೆ.

  • ಅಮೆರಿಕದಲ್ಲಿ ಯಾರೂ ಮಾಡದ ಸಾಧನಗೈದ ಆಪಲ್‌ ಕಂಪನಿ

    ಅಮೆರಿಕದಲ್ಲಿ ಯಾರೂ ಮಾಡದ ಸಾಧನಗೈದ ಆಪಲ್‌ ಕಂಪನಿ

    ಕ್ಯಾಲಿಫೋರ್ನಿಯಾ: ಐಫೋನ್‌ ತಯಾರಕಾ, ಜಾಗತಿಕ ಐಟಿ ಕಂಪನಿ ಆಪಲ್‌ 1.5 ಟ್ರಿಲಿಯನ್‌(1.5 ಲಕ್ಷ ಕೋಟಿ) ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿದ ಅಮೆರಿಕದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಆಪ್‌ ಸ್ಟೋರ್‌ ಮಾರಾಟ, ಎಆರ್‌ಎಂ ಚಿಪ್‌ ಇರುವ ಮ್ಯಾಕ್‌ ಮತ್ತು 5ಜಿ ಐಫೋನ್‌ನಿಂದಾಗಿ ಆಪಲ್‌ ಷೇರು ಮೌಲ್ಯ ಏರಿಕೆಯಾಗಿದೆ. ಆಪಲ್‌ ಒಂದು ಷೇರಿನ ಬೆಲೆ 352 ಡಾಲರ್‌(26,700 ರೂ.) ಇರುವ ಕಾರಣ ಆಪಲ್‌ ಕಂಪನಿಯ ಮೌಲ್ಯ 1.53 ಟ್ರಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ.

    ಆಪಲ್‌ ಮೌಲ್ಯ ಪ್ರತಿ ವರ್ಷವೂ ಏರಿಕೆ ಆಗುತ್ತಿದ್ದು, ಇದೇ ರೀತಿ ಬೆಳವಣಿಗೆ ಸಾಧಿಸುತ್ತಾ ಹೋದರೆ ಮುಂದಿನ 4 ವರ್ಷದ ಒಳಗಡೆ 2 ಟ್ರಿಲಿಯನ್‌ ‌( 2 ಲಕ್ಷ ಕೋಟಿ)ಡಾಲರ್ನ್‌ ತಲುಪಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

    2018ರಲ್ಲಿ 1 ಟ್ರಿಲಿಯನ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿದ ಮೊದಲ ಅಮೆರಿಕದ ಕಂಪನಿ ಎಂಬ ಸಾಧನೆ ನಿರ್ಮಿಸಿತ್ತು.

    ಆಪಲ್‌ ವೇರೆಬಲ್‌ ಬಿಸಿನೆಸ್‌ನಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿದೆ. ಏರ್‌ಪಾಡ್‌ ಮತ್ತು ವಾಚ್‌ 60 ಶತಕೋಟಿ ಡಾಲರ್‌ ಬೆಳವಣಿಗೆ ಸಾಧಿಸಿದರೆ ಮುಂದಿನ 4 ವರ್ಷದಲ್ಲಿ ಸೇವಾ ಬಿಸಿನೆಸ್‌ 100 ಶತಕೋಟಿ ಡಾಲರ್‌ ತಲುಪಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಒಂದು ಕಡೆ ಕಂಪನಿಯ ಮೌಲ್ಯ ಹೆಚ್ಚಾಗುತ್ತಿದ್ದರೂ ಇನ್ನೊಂದು ಕಡೆಯಲ್ಲಿ ಆಪಲ್‌ ತನ್ನ ಷೇರನ್ನು ಖರೀದಿ ಮಾಡಬಹುದು ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಐಫೋನ್‌ ಮಾರುಕಟ್ಟೆ ಕುಸಿದರೂ ಆಪಲ್‌ ಕಂಪನಿಯ ಬೆಳವಣಿಗೆಗೆ ಯಾವುದೇ ಸಮಸ್ಯೆ ಆಗಲಿಲ್ಲ. ಈ ವರ್ಷ ಒಟ್ಟು ಶೇ.17ರಷ್ಟು ಪ್ರಗತಿ ಸಾಧಿಸಿದೆ. ಇಲ್ಲಿಯವರೆಗಿನ ಅತ್ಯುತ್ತಮ ಸಾಧನೆ ಇದಾಗಿದ್ದು, 13.3 ಶತಕೋಟಿ ಡಾಲರ್‌ ಆದಾಯವನ್ನು ಆಪಲ್‌ ಕಂಪನಿ ಗಳಿಸಿದೆ.

    ಆಪ್‌ ಸ್ಟೋರ್‌, ಆಪಲ್‌ ಮ್ಯೂಸಿಕ್‌, ವಿಡಿಯೋ, ಕ್ಲೌಡ್‌ ಸರ್ವಿಸ್‌, ಆಪ್‌ ಸ್ಟೋರ್‌ ಆಡ್‌ ಬಿಸಿನೆಸ್‌, ಆಪಲ್‌ ಕೇರ್‌, ಆಪಲ್‌ ಟಿವಿ ಪ್ಲಸ್‌, ಆಪಲ್‌ ನ್ಯೂಸ್‌ ಪ್ಲಸ್‌, ಆಪಲ್‌ ಕಾರ್ಡ್‌ನಂತ ಸೇವಾ ವಲಯದಿಂದ ಆಪಲ್‌ ಹೆಚ್ಚು ಆದಾಯಗಳಿಸಿದೆ.

    1976ರಲ್ಲಿ ಆಪಲ್‌ ಕಂಪನಿಯನ್ನು ಸ್ವೀವ್‌ ಜಾಬ್ಸ್‌ ಸ್ಥಾಪಿಸಿದ್ದರು. ಸದ್ಯ ಟಿಮ್‌ ಕುಕ್‌ ಕಂಪನಿಯ ಸಿಇಒ ಆಗಿ ಕಾರ್ಯವಿರ್ವಹಿಸುತ್ತಿದ್ದಾರೆ.

  • ಭಾರತದಲ್ಲಿ ಆಪಲ್‍ನಿಂದ 700 ಕೋಟಿ ಹೂಡಿಕೆ

    ಭಾರತದಲ್ಲಿ ಆಪಲ್‍ನಿಂದ 700 ಕೋಟಿ ಹೂಡಿಕೆ

    ನವದೆಹಲಿ: ಭಾರತದಲ್ಲಿ ಐಫೋನ್ ಮಾರುಕಟ್ಟೆಯನ್ನು ವಿಸ್ತರಿಸಲು ಆಪಲ್ 1 ಶತಕೋಟಿ ಡಾಲರ್(ಅಂದಾಜು 714 ಕೋಟಿ ರೂ.) ಹೂಡಿಕೆ ಮಾಡಲಿದೆ.

    ಚೀನಾಕ್ಕಿಂತ ಭಾರತದಲ್ಲಿ ಐಫೋನ್ ಗಳನ್ನು ಉತ್ಪಾದನೆ ಮಾಡಲು ಆಪಲ್ ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ತನ್ನ ಪಾಲುದಾರರ ಮೂಲಕ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದೆ ಎಂದು ವರದಿಯಾಗಿದೆ.

    ಅಮೆರಿಕ ಮತ್ತು ಚೀನಾದ ನಡುವೆ ಈಗ ವ್ಯಾಪಾರ ಸಮರ ಜೋರಾಗುತ್ತಿದೆ. ಹೀಗಾಗಿ ಭಾರತದಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನುವ ನಿರ್ಧಾರಕ್ಕೆ ಆಪಲ್ ಬಂದಿದ್ದು, ಭಾರತದಲ್ಲಿ ತಯಾರಾದ ಫೋನ್‍ಗಳನ್ನು ಇತರೇ ರಾಷ್ಟ್ರಗಳಿಗೆ ಮಾರಾಟ ಮಾಡಲು ಮುಂದಾಗುತ್ತಿದೆ.

    ಈ ಹಿಂದೆ ಆಪಲ್ ವಿಯೆಟ್ನಾಂ ಮತ್ತು ಭಾರತದಲ್ಲಿ ಹೂಡಿಕೆ ಮಾಡಲಿದೆ ಎಂದು ವರದಿಯಾಗಿತ್ತು. ಆದರೆ ಈಗ ಕ್ಯಾಲಿಫೋರ್ನಿಯಾ ಮೂಲದ ಆಪಲ್ ಕಂಪನಿ ಭಾರತದಲ್ಲಿ ಹೂಡಿಕೆಗೆ ಮುಂದಾಗಿದೆ.

    ಆಪಲ್ ಚೀನಾದಲ್ಲಿ ತೈವಾನ್ ಮೂಲದ ಫಾಕ್ಸ್ ಕಾನ್ ಕಂಪನಿಯಲ್ಲಿ ಐಫೋನ್ ಗಳನ್ನು ತಯಾರಿಸುತ್ತಿದೆ. ಸಾಫ್ಟ್ ವೇರ್ ಗಳನ್ನು ಆಪಲ್ ಕಂಪನಿಯೇ ಅಭಿವೃದ್ಧಿ ಪಡಿಸಿದ್ದರೂ ಫೋನಿನ ಭಾಗಗಳು ಫಾಕ್ಸ್ ಕಾನ್ ಕಂಪನಿಯಲ್ಲಿ ಜೋಡಣೆಯಾಗಿ ಐಫೋನ್ ತಯಾರಾಗಿ ಮಾರಾಟಗೊಳ್ಳುತ್ತಿದೆ.

    ಆಪಲ್ ಈಗಾಗಲೇ ವಿಸ್ಟರ್ನ್ ಕಂಪನಿಯ ಜೊತೆ ಬೆಂಗಳೂರು ಸಮೀಪದ ಪೀಣ್ಯದಲ್ಲಿ ಐಫೋನ್ ಉತ್ಪಾದನೆ ಮಾಡುತ್ತಿದೆ. ಈಗ ಚೆನ್ನೈನಲ್ಲಿ ಫಾಕ್ಸ್ ಕಾನ್ ಜೊತೆಗೂಡಿ ಮಾರುಕಟ್ಟೆ ವಿಸ್ತರಿಸಲು ಆಪಲ್ ಮುಂದಾಗುತ್ತಿದೆ ಎಂದು ಮೂಲಗಳನ್ನು ಆಧಾರಿಸಿ ವರದಿಯಾಗಿದೆ.

    ಮೇಕ್ ಇನ್ ಇಂಡಿಯಾದ ಬಳಿಕ ಸರ್ಕಾರ ಈಗ ಕಂಪನಿಗಳಿಗೆ ವಿದೇಶಕ್ಕೆ ರಫ್ತು ಮಾಡುವಂತೆ ಉತ್ತೇಜನ ನೀಡುತ್ತಿದೆ. ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ರವಿಶಂಕರ್ ಪ್ರಸಾದ್, ಆಪಲ್ ಈಗಾಗಲೇ ಭಾರತದಲ್ಲಿ ಐಫೋನ್ ಗಳನ್ನು ಉತ್ಪಾದನೆ ಮಾಡುತ್ತಿದೆ. ಈಗ ಬಿಡಿ ಭಾಗಗಳನ್ನು ಉತ್ಪಾದನೆ ಮಾಡುವುದರ ಜೊತೆಗೆ ವಿದೇಶಕ್ಕೆ ರಫ್ತು ಸಹ ಮಾಡುತ್ತಿದೆ. ಭಾರತದ ಸಾಧನೆ ಕಥೆಯನ್ನು ಪರಿಗಣಿಸಿದರೆ ಆಪಲ್ ಸಾಧನೆ ಉತ್ತಮವಾಗಿದೆ ಎಂದು ತಿಳಿಸಿದರು.

    ಆಪಲ್‍ಗೆ ಏನು ಲಾಭ?
    ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಾಗಿ 15 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ ಗಳು ಮಾರಾಟವಾಗುತ್ತದೆ. ಐಫೋನ್ ಗಳಿಗೆ ದುಬಾರಿ ದರ ಇರುವ ಪರಿಣಾಮ ಮಾರುಕಟ್ಟೆಯಲ್ಲಿ ಒನ್ ಪ್ಲಸ್, ಸ್ಯಾಮ್‍ಸಂಗ್ ಕಂಪನಿಗಳು ಭಾರೀ ಸ್ಪರ್ಧೆ ನೀಡುತ್ತಿದೆ. ಇದರ ಜೊತೆ ಶೇ.20 ಆಮದು ಸುಂಕ ಇರುವ ಕಾರಣ ಬೆಲೆ ಜಾಸ್ತಿಯಾಗಿ ಭಾರತದ ಮಾರುಕಟ್ಟೆಯಲ್ಲಿ ಐಫೋನ್ ಭಾರೀ ಸ್ಪರ್ಧೆಯನ್ನು ಎದುರಿಸುತ್ತಿದೆ.

    ವಿಶ್ವದಲ್ಲಿ ಚೀನಾ ಬಿಟ್ಟರೆ ಅತಿ ಹೆಚ್ಚು ಸ್ಮಾರ್ಟ್ ಫೋನ್ ಹೊಂದಿರುವ ದೇಶ ಭಾರತವಾಗಿದ್ದು ಇಲ್ಲಿನ ಮಾರುಕಟ್ಟೆಯನ್ನು ಕಳೆದುಕೊಂಡರೆ ಭವಿಷ್ಯದಲ್ಲಿ ನಮಗೆ ನಷ್ಟ ಎಂದು ತಿಳಿದಿರುವ ಆಪಲ್ ಈಗ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿದೆ.