Tag: ಆಪಲ್

  • ಗೂಗಲ್, ಆಪಲ್, ಮೈಕ್ರೋಸಾಫ್ಟ್‌ಗಳಲ್ಲಿ ಶೀಘ್ರವೇ ಬರಲಿದೆ ಪಾಸ್‌ವರ್ಡ್ ಲೆಸ್ ಸೈನ್ ಇನ್ ಸೇವೆ

    ವಾಷಿಂಗ್ಟನ್: ಮೂರು ದೊಡ್ಡ ತಂತ್ರಜ್ಞಾನ ಕಂಪನಿಗಳಾದ ಗೂಗಲ್, ಆಪಲ್ ಹಾಗೂ ಮೈಕ್ರೋಸಾಫ್ಟ್ ಪಾಸ್‌ವರ್ಡ್ ಬಳಕೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲು ನಿರ್ಧರಿಸಿವೆ.

    ಹೌದು, ಇನ್ನು ಮುಂದೆ ಜನರು ತಮ್ಮ ಮೊಬೈಲ್, ಡೆಸ್ಕ್ ಟಾಪ್ ಹಾಗೂ ಬ್ರೌಸರ್ ಸಾಧನಗಳಲ್ಲಿ ಪಾಸ್‌ವರ್ಡ್ಗಳನ್ನು ನಮೂದಿಸುವ ಅಗತ್ಯವಿರುವುದಿಲ್ಲ. ಈ ಮೂರು ದೈತ್ಯ ತಂತ್ರಜ್ಞಾನ ಕಂಪನಿಗಳು ಒಟ್ಟಾಗಿ ಬಳಕೆದಾರರಿಗೆ ಪಾಸ್‌ವರ್ಡ್ ರಹಿತ ಸೇವೆ ನೀಡಲು ಮುಂದಾಗಿವೆ.

    ಆಪಲ್, ಗೂಗಲ್ ಹಾಗೂ ಮೈಕ್ರೋಸಾಫ್ಟ್ ಮೂಲಕ ಕಾರ್ಯನಿರ್ವಹಿಸುವ ಐಒಎಸ್, ಮ್ಯಾಕ್ ಒಎಸ್, ಆಂಡ್ರಾಯ್ಡ್, ವಿಂಡೋಸ್ ಬ್ರೌಸರ್‌ಗಳಾದ ಕ್ರೋಮ್, ಎಡ್ಜ್, ಸಫಾರಿ ಹಾಗೂ ಪ್ರಮುಖ ತಂತ್ರಜ್ಞಾನ ಸಾಧನಗಳ ಪ್ಲಾಟ್‌ಫಾರ್ಮ್ಗಳಿಗೆ ಪಾಸ್‌ವರ್ಡ್ ರಹಿತ ದೃಢೀಕರಣ ತರುವ ನಿಟ್ಟಿನಲ್ಲಿ ಈ 3 ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇದನ್ನೂ ಓದಿ: 2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    ಬಳಕೆದಾರರ ಆನ್‌ಲೈನ್ ಖಾತೆಗಳಿಗೆ ಸೈನ್ ಇನ್ ಮಾಡಲು ತಯಾರಾಗುತ್ತಿರುವ ಪಾಸ್‌ವರ್ಡ್ ರಹಿತ ಸೇವೆ, ಪಾಸ್‌ವರ್ಡ್ ಮೂಲಕ ಅನ್‌ಲಾಕ್ ಮಾಡುವುದಕ್ಕಿಂತಲೂ ಸುಲಭ ಹಾಗೂ ಸುರಕ್ಷಿತವಾಗಿರಲಿದೆ. ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಲು ನೀವು ಪಾಸ್‌ವರ್ಡ್, ಪಿನ್ ಅಥವಾ ಪ್ಯಾಟರ್ನ್ ಅನ್ನು ಬಳಸುತ್ತೀರಿ ಹಾಗೂ ಫೋನ್ ಅನ್ನು ಅನ್‌ಲಾಕ್ ಮಾಡಲು ಪ್ರತಿ ಬಾರಿಯೂ ಇದನ್ನೇ ಬಳಸುತ್ತೀರಿ. ನಿಮ್ಮ ಆನ್‌ಲೈನ್ ಖಾತೆಗಳಿಗೂ ಅನುಮತಿಸಲು ಇದೇ ಪ್ರಕ್ರಿಯೆಯನ್ನು ಬಳಸಿದರೆ ಆಯ್ತು. ಪಾಸ್‌ವರ್ಡ್ ನಮೂದಿಸುವ ಅಗತ್ಯ ಇರುವುದಿಲ್ಲ.

    ಈ 3 ಕಂಪನಿಗಳು ಕಾರ್ಯನಿರ್ವಹಿಸುತ್ತಿರುವ ಹೊಸ ಎಫ್‌ಐಡಿಒ(ಫಾಸ್ಟ್ ಐಡಿ ಆನ್‌ಲೈನ್) ಸೇವೆ ಸಹಾಯದಿಂದ ಪಾಸ್‌ವರ್ಡ್ ರಹಿತವಾಗಿ ಅನ್‌ಲಾಕ್ ಮಾಡಲು ಸಹಾಯವಾಗಲಿದೆ ಎಂದು ಕಂಪನಿಗಳು ತಿಳಿಸಿವೆ. ಇದನ್ನು ಪಾಸ್‌ಕೀ ಎಂತಲೂ ಕರೆಯಲಾಗುತ್ತಿದ್ದು, ಬಳಕೆದಾರರು ತಮ್ಮ ಮೊಬೈಲ್ ಹಾಗೂ ವೆಬ್‌ಸೈಟ್‌ಗಳಲ್ಲಿ ಪಾಸ್‌ವರ್ಡ್ ರಹಿತವಾಗಿ ಸೈನ್ ಇನ್ ಆಗಲು ಸಹಾಯವಾಗಲಿದೆ. ಇದನ್ನೂ ಓದಿ: ಭಾರತದಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕದ ಪಾವತಿಯನ್ನು ಸ್ಥಗಿತಗೊಳಿಸಿದ ಆಪಲ್

    ಪಾಸ್‌ಕೀ ಸಹಾಯದಿಂದ ಬಳಕೆದಾರರು ಇನ್ನು ಮುಂದೆ ತಮ್ಮ ಪಾಸ್‌ವರ್ಡ್ಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯ ಇರುವುದಿಲ್ಲ. ಕೆಲವರು ಪಾಸ್‌ವರ್ಡ್ಗಳನ್ನು ನೆನಪಿಟ್ಟುಕೊಳ್ಳಬೇಕೆಂಬ ಕಾರಣಕ್ಕೆ ತಮ್ಮ ಹಲವಾರು ಬೇರೆ ಬೇರೆ ರೀತಿಯ ಸಾಮಾಜಿಕ ಮಾಧ್ಯಮ ಅಕೌಂಟ್‌ಗಳಿಕೆ ಒಂದೇ ರೀತಿಯ ಪಾಸ್‌ವರ್ಡ್ ಬಳಸುತ್ತಾರೆ. ಈ ಕಾರಣದಿಂದ ಹ್ಯಾಕರ್‌ಗಳು ಸುಲಭವಾಗಿ ಬಳಕೆದಾರರ ಖಾತೆಗಳನ್ನು ಹ್ಯಾಕ್ ಮಾಡುತ್ತಾರೆ. ಆದರೆ ಪಾಸ್‌ಕೀ ಇಂತಹ ಅಪಾಯಗಳನ್ನು ಕಡಿಮೆ ಮಾಡುತ್ತದೆ ಎಂದು ಕಂಪನಿಗಳು ತಿಳಿಸಿವೆ.

    ಈ ಹೊಸ ಪಾಸ್‌ವರ್ಡ್ ರಹಿತ ದೃಢೀಕರಣ ವ್ಯವಸ್ಥೆಯನ್ನು ಆಪಲ್, ಗೂಗಲ್ ಹಾಗೂ ಮೈಕ್ರೋಸಾಫ್ಟ್ ಮುಂದಿನ ವರ್ಷ ಹೊರತರಲಿದೆ. ಒಂದುವೇಳೆ ನಿಮ್ಮ ಫೋನ್ ಅಥವಾ ಇತರ ಸಾಧನಗಳು ಕಳೆದು ಹೋದಲ್ಲಿ ಕ್ಲೌಡ್ ಬ್ಯಾಕ್‌ಅಪ್ ಮೂಲಕ ಪಾಸ್‌ಕೀಗಳನ್ನು ಹೊಸ ಸಾಧನಗಳಿಗೆ ಸಿಂಕ್ ಮಾಡಬಹುದು ಎಂದು ಗೂಗಲ್ ತಿಳಿಸಿದೆ.

  • ಭಾರತದಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕದ ಪಾವತಿಯನ್ನು ಸ್ಥಗಿತಗೊಳಿಸಿದ ಆಪಲ್

    ನವದೆಹಲಿ: ಆಪಲ್ ಭಾರತದಲ್ಲಿ ಆ್ಯಪ್ ಖರೀದಿಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವ ಆಯ್ಕೆಯನ್ನು ಸ್ಥಗಿತಗೊಳಿಸಿದೆ.

    ಆಪಲ್ ತನ್ನ ಚಂದಾದಾರರಿಗೆ ಆ್ಯಪ್ ಖರೀದಿಸಲು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳನ್ನು ಬಳಸುವ ಆಯ್ಕೆಯನ್ನು ಸ್ಥಗಿತಗೊಳಿಸಿದ್ದು, ಇದೀಗ ಬಳಕೆದಾರರು ತಮ್ಮ ಆಪಲ್ ಫಂಡ್‌ಗೆ ಹಣವನ್ನು ಸೇರಿಸುವ ಮೂಲಕ ಆ್ಯಪ್ ಖರೀದಿ ಸಾಧ್ಯವಾಗುತ್ತಿದೆ. ಆಪಲ್ ಫಂಡ್ ಪ್ರೀ ಪೇಯ್ಡ್ ಕಾರ್ಡ್ನಂತೆ ಉಪಯೋಗವಾಗಿದ್ದು, ಪ್ರತಿ ತಿಂಗಳು ಬಳಕೆದಾರರ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ಇದನ್ನೂ ಓದಿ: ವಾಣಿಜ್ಯ, ಸರ್ಕಾರಿ ಬಳಕೆದಾರರಿಗೆ ಟ್ವಿಟ್ಟರ್‌ನಲ್ಲಿ ಶುಲ್ಕ ಸಾಧ್ಯತೆ: ಮಸ್ಕ್

    ಐಫೋನ್ ಹಾಗೂ ಐಪ್ಯಾಡ್ ಬಳಕೆದಾರರಿಗೆ ಆಪಲ್ ಫಂಡ್ ಬಳಸಲು ಆಪಲ್ ಐಡಿ ರಚಿಸುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕಾಗಿ ಬಳಕೆದಾರರು ತಮ್ಮ ಬ್ಯಾಂಕ್ ವಿವರಗಳನ್ನು ನೀಡಬೇಕಾಗುತ್ತದೆ. ಬಳಕೆದಾರರು ಆ್ಯಪ್‌ಗಳನ್ನು ನವೀಕರಿಸಲು ಅಥವಾ ಖರೀದಿಸಲು ಬಯಸಿದರೆ, ಆಪಲ್ ಐಡಿ ಮೂಲಕ ವ್ಯವಹಾರ ನಡೆಯಲಿದೆ. ಇದನ್ನೂ ಓದಿ: ಮಣ್ಣಿನಲ್ಲಿ ಹಂಪಿ ಕಲಾಕೃತಿ ರಚಿಸಿದ ವಿದ್ಯಾರ್ಥಿ

    ಈ ಹಿಂದೆ ಆಪಲ್ ಡೆಬಿಟ್, ಕ್ರೆಡಿಟ್ ಹಾಗೂ ಯುಪಿಐ ಮೂಲಕ ಪಾವತಿಗೆ ಅವಕಾಶ ನೀಡಿತ್ತು. ಕಳೆದ ವರ್ಷ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಜಾರಿಗೊಳಿಸಿದ ಸ್ವಯಂ-ಡೆಬಿಟ್(ಆಟೋ-ಡೆಬಿಟ್) ನಿಯಮದ ಪರಿಣಾಮವಾಗಿ ಭಾರತೀಯ ಬಳಕೆದಾರರಿಗೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳ ಮೂಲಕ ಪಾವತಿಯ ಆಯ್ಕೆಯನ್ನು ತೆಗೆದುಹಾಕಲು ಆಪಲ್ ನಿರ್ಧರಿಸಿತು.

  • ಅಶ್ಲೀಲ ಫೊಟೋ ಬ್ಲರ್ – ಶೀಘ್ರವೇ ಎಲ್ಲ ಐಫೋನ್ ಬಳಕೆದಾರರಿಗೆ ಫೀಚರ್ ಲಭ್ಯ

    ಅಶ್ಲೀಲ ಫೊಟೋ ಬ್ಲರ್ – ಶೀಘ್ರವೇ ಎಲ್ಲ ಐಫೋನ್ ಬಳಕೆದಾರರಿಗೆ ಫೀಚರ್ ಲಭ್ಯ

    ವಾಷಿಂಗ್ಟನ್: ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ರವಾನೆಯಾಗುವ ಅಶ್ಲೀಲ ಫೋಟೋಗಳನ್ನು ಬ್ಲರ್ ಮಾಡುವಂತಹ ಫೀಚರ್ ಅನ್ನು ಆಪಲ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಹೊರ ತಂದಿತ್ತು. ಅಮೆರಿಕದಲ್ಲಿ ಮೊದಲಿಗೆ ಬಿಡುಗಡೆಯಾದ ಫೀಚರ್ ಅನ್ನು ಆಪಲ್ ಶೀಘ್ರವೇ ಜಾಗತಿಕ ಬಳಕೆದಾರರಿಗೂ ಲಭ್ಯವಾಗಿಸಲಿದೆ.

    ಈ ಫೀಚರ್ ಮೆಸೇಜಿಂಗ್ ಆಪ್‌ಗಳಲ್ಲಿ ರವಾನೆಯಾಗುವ ಅಶ್ಲೀಲ ಅಥವಾ ಆಘಾತಕಾರಿ ಫೋಟೋಗಳನ್ನು ನೇರವಾಗಿ ತೋರಿಸುವ ಬದಲು ಬ್ಲರ್ ಆಗಿ ತೋರಿಸಲಿದೆ. ಈ ಫೀಚರ್‌ನಲ್ಲಿ ಬ್ಲರ್ ಆಗಿರುವ ಫೊಟೋವನ್ನು ತೆರೆಯುವುದಕ್ಕೂ ಮೊದಲು ಅನುಮತಿ ಕೇಳಲಿದೆ. ಇದನ್ನೂ ಓದಿ: 100 ದಿನಗಳೊಳಗೆ 2 ಲಕ್ಷ ಚಂದಾದಾರರನ್ನು ಕಳೆದುಕೊಂಡ ನೆಟ್‌ಫ್ಲಿಕ್ಸ್

    ಇದು ಆಪ್ಟ್-ಇನ್ ಫೀಚರ್ ಆಗಿದ್ದು, ಅಶ್ಲೀಲ ಚಿತ್ರಗಳು ಪರದೆಯಲ್ಲಿ ಗೋಚರಿಸುವುದನ್ನು ತಡೆಯಲು ಬಳಸಬಹುದು. ಈ ಫೀಚರ್ ಮುಖ್ಯವಾಗಿ ಮಕ್ಕಳು ಫೋನ್ ಬಳಸುವಾಗ ಉಪಯುಕ್ತವಾಗಲಿದೆ. ಫೋಷಕರು ತಮ್ಮ ಮಕ್ಕಳ ಕೈಗೆ ಫೋನ್ ಕೊಡುವುದಕ್ಕೂ ಮೊದಲು ಈ ಫೀಚರ್ ಅನ್ನು ಸಕ್ರಿಯಗೊಳಿಸಬಹುದು.

    ದಿಸ್ ಫೋಟೋ ಕುಡ್ ಬೀ ಸೆನ್ಸಿಟಿವ್. ಆರ್ ಯು ಶುವರ್ ಯು ವಾಂಟು ವೀವ್(ಈ ಫೋಟೋ ಸೂಕ್ಷ್ಮವಾಗಿರಬಹುದು. ಆದರೂ ಇದನ್ನು ನೀವು ನೋಡಲು ಬಯಸುತ್ತೀರಾ) ಎಂಬ ಎಚ್ಚರಿಕೆಯನ್ನು ಫೀಚರ್ ನೀಡಲಿದೆ. ಈ ಸಂದೇಶವನ್ನು ಅನುಸರಿಸಿ ಆಪಲ್ ಅಶ್ಲೀಲ ಫೋಟೋ ಅರ್ಥವನ್ನು ಹಾಗೂ ಅದನ್ನು ಮಕ್ಕಳು ನೋಡುವುದು ಏಕೆ ಸೂಕ್ತವಲ್ಲ ಎಂಬುದನ್ನು ವಿವರಿಸಿದೆ. ಜೊತೆಗೆ ನಾಟ್ ನೌವ್(ಈಗ ಬೇಡ) ಐ ಆಮ್ ಶುವರ್(ಖಂಡಿತಾ ಬೇಕು) ಆಯ್ಕೆಯನ್ನು ನೀಡುತ್ತದೆ. ಇದನ್ನೂ ಓದಿ: ಹಿಜಬ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬಂದ ಖಾಸಗಿ ಕಾಲೇಜಿನ ಶಿಕ್ಷಕಿ

    ಆಪಲ್ ಇದೊಂದು ಕೇವಲ ಎಚ್ಚರಿಕಾ ಸಂದೇಶವಾಗಿ ಫೀಚರ್ ಅನ್ನು ತಂದಿದೆ. ಮಕ್ಕಳು ಐ ಆಮ್ ಶುವರ್ ಆಪ್ಶನ್ ಆಯ್ಕೆ ಮಾಡುವ ಮೂಲಕ ಫೊಟೋ ವೀಕ್ಷಿಸುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಪೋಷಕರು ಮಕ್ಕಳು ಮೊಬೈಲ್ ಬಳಕೆ ಮಾಡುತ್ತಿರುವುದರ ಬಗ್ಗೆ ಆದಷ್ಟು ಗಮನಹರಿಸುವುದು ಅಗತ್ಯ.

    ಆಪಲ್‌ನ ಈ ಫೀಚರ್ ಸದ್ಯ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಹಾಗೂ ನ್ಯೂಜಿಲೆಂಡ್‌ನಲ್ಲಿ ಲಭ್ಯವಿದೆ. ಶೀಘ್ರವೇ ಎಲ್ಲಾ ದೇಶಗಳಲ್ಲೂ ಈ ಫೀಚರ್ ಲಭ್ಯವಾಗಲಿದೆ ಎಂದು ಆಪಲ್ ತಿಳಿಸಿದೆ.

  • ಐಫೋನ್ 14 ಮಾರಾಟಕ್ಕೆ ಅಡ್ಡಿಯಾಗುತ್ತಿದೆ ಐಫೋನ್ 11

    ವಾಷಿಂಗ್ಟನ್: ಬಿಡುಗಡೆಯಾಗಿ ವರ್ಷಗಳಾದರೂ ಇಂದಿಗೂ ಬೇಡಿಕೆ ಇರುವ ಆಪಲ್ ಫೋನ್‌ಗಳಲ್ಲಿ ಐಫೋನ್ 11 ಕೂಡಾ ಒಂದು. ಇದರ ಮಾರಾಟ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೂ ಕಂಪನಿ ಹೊಸ ಆವೃತ್ತಿಯ ಬಿಡುಗಡೆಯೊಂದಿಗೆ ಈ ಆವೃತ್ತಿ ಸ್ಥಗಿತಗೊಳಿಸುವ ಸಾಧ್ಯತೆ ಇದೆ.

    ಐಫೋನ್ 11 ಬಿಡುಗಡೆಯಾಗಿ 2 ವರ್ಷಗಳಾಗಿವೆ. ಕಂಪನಿ ಇದೇ ವರ್ಷದ ಸಪ್ಟೆಂಬರ್‌ನಲ್ಲಿ ತನ್ನ ಹೊಸ ಐಫೋನ್ 14 ಬಿಡುಗಡೆಯ ಬಗ್ಗೆ ಯೋಚಿಸುತ್ತಿದೆ. ಕೆಲವು ವರದಿಗಳು ಐಫೋನ್ 11 ಐಫೋನ್ 14 ಮಾರಾಟಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಈ ಕಾರಣಕ್ಕೆ ಕಂಪನಿ ಶೀಘ್ರವೇ ಐಫೋನ್ 11 ಆವೃತ್ತಿಯ ತಯಾರಿಕೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: 6 ತಿಂಗಳ ಬಾಹ್ಯಾಕಾಶ ಯಾನ ಮುಗಿಸಿ ಬರಲಿದ್ದಾರೆ ಭಾರತೀಯ ಮೂಲದ ಗಗನಯಾತ್ರಿ

    ಐಫೋನ್ 14 ಬಿಡುಗಡೆಯಾಗುತ್ತಿದ್ದಂತೆ ಐಫೋನ್ 11 ತಯಾರಿಕೆಯಷ್ಟೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದರ ಅರ್ಥ ಐಫೋನ್ 11 ಆವೃತ್ತಿಯ ಸ್ಟಾಕ್ ಖಾಲಿಯಾಗುವವರೆಗೂ ಮಾರಾಟವಾಗಲಿದೆ. ಈ ವರ್ಷದ ಸಪ್ಟೆಂಬರ್‌ನಲ್ಲಿ ಐಫೋನ್ 14 ಬಿಡುಗಡೆಯಾಗುವ ಸಾಧ್ಯತೆ ಇದ್ದು, ಕಂಪನಿ ನಿರ್ದಿಷ್ಟ ದಿನಾಂಕವನ್ನು ತಿಳಿಸಿಲ್ಲ. ಇದನ್ನೂ ಓದಿ: ಒಂದೇ ಬಾರಿಗೆ 32 ಜನರಿಗೆ ವಾಯ್ಸ್ ಕಾಲ್ – ಹೀಗಿವೆ ವಾಟ್ಸಪ್‌ನ 4 ಹೊಸ ಫೀಚರ್ಸ್

     

  • ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್

    ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್

    ಮಾಸ್ಕೋ: ಆಪಲ್ ಕಂಪನಿ ರಷ್ಯಾದಲ್ಲಿ ಐಫೋನ್, ಐಪ್ಯಾಡ್, ಮ್ಯಾಕ್ ಹಾಗೂ ಇತರ ಹಾರ್ಡ್‍ವೇರ್ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿದೆ.

    ವಾರದ ಹಿಂದೆ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲು ಪ್ರಾರಂಭಿಸಿದಾಗಿನಿಂದ ಹಲವು ಕಂಪನಿಗಳು ಒಂದೊಂದಾಗಿಯೇ ರಷ್ಯಾದ ಕೈ ಬಿಡುತ್ತಿವೆ. ಆಪಲ್ ಹಿಂದೆ ರಷ್ಯಾದಲ್ಲಿ ಆಪಲ್ ಪೇಯನ್ನು ಸ್ಥಗಿತಗೊಳಿಸಿತ್ತು. ರಷ್ಯಾದ ಹೊರಗಿನ ದೇಶಗಳಲ್ಲಿ ಸ್ಪುಟ್ನಿಕ್ ಹಾಗೂ ಆರ್‌ಟಿ ನ್ಯೂಸ್‍ಗಳಂತಹ ಅಪ್ಲಿಕೇಶನ್‍ಗಳನ್ನೂ ಆಪ್ ಸ್ಟೋರ್‌ನಿಂದ ತೆಗೆದು ಹಾಕಲಾಗಿತ್ತು. ಇದೀಗ ಲೈವ್ ಟ್ರಾಫಿಕ್ ಅನ್ನು ನಿಷ್ಕ್ರಿಯಗೊಳಿಸುವ ಮೂಲಕ ಪರೋಕ್ಷವಾಗಿ ಉಕ್ರೇನ್‍ಗೆ ಬೆಂಬಲ ನೀಡುತ್ತಿದೆ. ಇದನ್ನೂ ಓದಿ: IGTV ಯನ್ನು ಮುಚ್ಚಲಿದೆ ಇನ್‍ಸ್ಟಾಗ್ರಾಮ್

    ಆಪಲ್ ರಷ್ಯಾದಲ್ಲಿ ಎಲ್ಲಾ ಆನ್‍ಲೈನ್ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದೆ. ಆಪಲ್‍ನ ರಷ್ಯನ್ ವೆಬ್‍ಸೈಟ್ ಕಾರ್ಯನಿರ್ವಹಿಸುತ್ತಿದ್ದರೂ ಆನ್‍ಲೈನ್ ಸ್ಟೋರ್ ಅನ್ನು ರಷ್ಯಾದಲ್ಲಿ ಮುಚ್ಚಲಾಗಿದೆ ಎಂದು ಆಪಲ್ ತಿಳಿಸಿದೆ. ಇದನ್ನೂ ಓದಿ: ಕಾಲಿಂದ ಕುಡಿಕೆಯೊದ್ದ ರಾಣಾ: ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ವಿರುದ್ಧ ದೂರು ದಾಖಲು

    ಆಪಲ್ ಕಳೆದ ವಾರದಿಂದ ರಷ್ಯಾಗೆ ರಫ್ತುಗಳನ್ನು ನಿಲ್ಲಿಸಿದೆ. ಉಕ್ರೇನ್ ಮೇಲೆ ನಡೆಯುತ್ತಿರುವ ದಾಳಿಗೆ ವಿರೋಧವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆಪಲ್ ತಿಳಿಸಿದೆ. ಆಪಲ್ ಮಾತ್ರವಲ್ಲದೇ ಗೂಗಲ್, ಮೆಟಾ, ಹಾಗೂ ನೆಟ್‍ಫ್ಲಿಕ್ಸ್ ನಂತಹ ದೈತ್ಯ ಟೆಕ್ ಕಂಪನಿಗಳು ರಷ್ಯಾದಲ್ಲಿ ತಮ್ಮ ಉತ್ಪನ್ನಗಳಿಗೆ ವಿವಿಧ ರೀತಿಯ ನಿರ್ಬಂಧಗಳನ್ನು ಹೇರಿವೆ.

  • ಇನ್ನು ಮುಂದೆ ಮಾಸ್ಕ್ ಹಾಕಿಕೊಂಡೇ ಐಫೋನ್ ಫೇಸ್ ಐಡಿ ಅನ್‍ಲಾಕ್ ಮಾಡ್ಬೋದು!

    ವಾಷಿಂಗ್ಟನ್: ನೀವು ಮಾಸ್ಕ್ ಧರಿಸಿರುವಾಗ ನಿಮ್ಮ ಫೋನ್ ಅನ್ನು ಫೇಸ್ ಐಡಿ ಮೂಲಕ ಅನ್‍ಲಾಕ್ ಮಾಡುವುದು ಇಲ್ಲಿಯವರೆಗೆ ಅಸಾಧ್ಯವಾಗಿತ್ತು. ಆದರೆ ಈಗ ಐಫೋನ್ ಹೊಸ ಫೀಚರ್ ಒಂದನ್ನು ಪರೀಕ್ಷಿಸುತ್ತಿದೆ. ಇದರ ಪ್ರಕಾರ ನೀವು ನಿಮ್ಮ ಮಾಸ್ಕ್ ಧರಿಸಿರುವಾಗಲೂ ಫೇಸ್ ಐಡಿಯಲ್ಲಿ ಫೋನ್ ಅನ್‍ಲಾಕ್ ಮಾಡಬಹುದು.

    ಈ ಹಿಂದೆ ಇದೇ ರೀತಿಯಾಗಿ ಐಫೋನ್ ಆಪಲ್ ವಾಚ್‍ನ ಮುಖಾಂತರ ಮಾಸ್ಕ್ ಧರಿಸಿಕೊಂಡೇ ಫೋನ್ ಅನ್‍ಲಾಕ್ ಮಾಡುವ ಫೀಚರ್ ತಂದಿತ್ತು. ಆದರೆ ಇದಕ್ಕೆ ಆಪಲ್ ವಾಚ್‍ನ ಅಗತ್ಯ ಬೀಳುತ್ತಿತ್ತು. ಕೇವಲ ಆಪಲ್ ವಾಚ್ ಹೊಂದಿದವರು ಮಾತ್ರವೇ ಈ ಫೀಚರ್ ಬಳಸಬಹುದಿತ್ತು. ಇದೀಗ ಆಪಲ್ ವಾಚ್‍ನ ಅಗತ್ಯ ಇಲ್ಲದೇ ಫೋನ್ ಅನ್ನು ಮಾಸ್ಕ್ ಧರಿಸಿಕೊಂಡೇ ಅನ್‍ಲಾಕ್ ಮಾಡಲು ಐಫೋನ್ ಸಾಧ್ಯವಾಗಿಸಲಿದೆ. ಇದನ್ನೂ ಓದಿ: ಏರ್‌ಟೆಲ್‌ನಲ್ಲಿ 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಗೂಗಲ್

    ಐಒಎಸ್ 15.4ರ ಬೀಟಾದಲ್ಲಿ ಈ ಫೀಚರ್ ಅನ್ನು ಪರೀಕ್ಷಿಸಬಹುದು. ಫೇಸ್ ಮಾಸ್ಕ್ ಧರಿಸಿಕೊಂಡೇ ನಿಮ್ಮ ಮುಖ ಪರಿಚಯವನ್ನು ಪತ್ತೆ ಹಚ್ಚುವಂತೆ ನಿಮ್ಮ ಐಫೋನ್ ಅನ್ನು ಹೊಂದಿಸಬಹುದು. ಇದಕ್ಕಾಗಿ ನೀವು ಫೋನ್‍ನ ಸೆಟ್ಟಿಂಗ್ಸ್‍ಗೆ ಹೋಗಿ ಫೇಸ್ ಐಡಿ ಹಾಗೂ ಪಾಸ್‍ಕೋಡ್ ಸೆಟ್ಟಿಂಗ್‍ನಲ್ಲಿ ಯೂಸ್ ಫೇಸ್ ಐಡಿ ವಿತ್ ಮಾಸ್ಕ್ ಆಯ್ಕೆಗೆ ಅನುಮತಿ ನೀಡಬೇಕು.

    ಇದರಲ್ಲಿ ಕೆಲವು ಎಚ್ಚರಿಕೆಗಳು ಇವೆ. ಫಾರ್ ಫುಲ್ ಫೇಸ್ ರೆಕೊಗ್ನಿಶನ್ ಓನ್ಲಿ ಆಯ್ಕೆಯಲ್ಲಿ ಮಾತ್ರವೇ ಫೇಸ್ ಐಡಿ ನಿಖರವಾಗಿ ಕಾರ್ಯ ನಿರ್ವಹಿಸುತ್ತದೆ. ನೀವು ಮಾಸ್ಕ್ ಹಾಕಿಕೊಂಡು ನಿಮ್ಮ ಫೇಸ್ ಐಡಿ ಭದ್ರತೆಯಿಂದ ಕಾರ್ಯ ನಿರ್ವಹಿಸುತ್ತದೆ ಎನ್ನಲಾಗುವುದಿಲ್ಲ. ಐಡಿ ವಿತ್ ಮಾಸ್ಕ್‍ನಲ್ಲಿ ಫೋನ್ ನಿಮ್ಮ ಕಣ್ಣಿನ ಸುತ್ತಲಿನ ಭಾಗವನ್ನು ಚೆನ್ನಾಗಿ ಗುರುತಿಸಬಹುದು. ಆದರೆ ಈ ಫೀಚರ್ ಕೇವಲ ಹೊಸ ಐಫೋನ್‍ಗಳಲ್ಲಿ ಮಾತ್ರವೇ ಲಭ್ಯವಾಗಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ

    ಕೊರೊನಾ ಹಾವಳಿ ಪ್ರಾರಂಭವಾದಾಗಿನಿಂದ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ. ಈ ನಿಯಮ 2 ವರ್ಷಗಳ ಹಿಂದೆ ಪ್ರಾರಂಭವಾಗಿದ್ದರೂ ಆಪಲ್ ಈ ಹೊಸ ಫೀಚರ್ ಬಗ್ಗೆ ಪರೀಕ್ಷೆ ನಡೆಸುತ್ತಿರುವ ಪ್ರಯತ್ನ ಮೊದಲನೆಯದ್ದೇ. ಆಪಲ್ ಕನ್ನಡಕ ಹಾಕಿಕೊಂಡು ಫೇಸ್ ಐಡಿ ಅನ್‍ಲಾಕ್ ಮಾಡುವ ವೈಶಿಷ್ಟ್ಯವನ್ನು ಸುಧಾರಿಸುತ್ತಿದೆ. ಆದರೆ ಸನ್‍ಗ್ಲಾಸ್ ನೊಂದಿಗೆ ಫೇಸ್ ಮಾಸ್ಕ್ ಬಳಸಿದಾಗ ಈ ಫೀಚರ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ಎಚ್ಚರಿಸಿದೆ.

  • ಆಪಲ್ ಉದ್ಯೋಗಿಗಳು ಆಫಿಸ್‌ಗೆ ಮರಳುವ ಪ್ಲ್ಯಾನ್ ಕ್ಯಾನ್ಸಲ್ – WFH ಮುಂದುವರಿಕೆ

    ಆಪಲ್ ಉದ್ಯೋಗಿಗಳು ಆಫಿಸ್‌ಗೆ ಮರಳುವ ಪ್ಲ್ಯಾನ್ ಕ್ಯಾನ್ಸಲ್ – WFH ಮುಂದುವರಿಕೆ

    ವಾಷಿಂಗ್ಟನ್: ಓಮಿಕ್ರಾನ್ ಕೇಸ್‌ಗಳು ಹೆಚ್ಚಿದಂತೆ ವಿಶ್ವವ್ಯಾಪಿ ಹೆಚ್ಚಿನ ಕಂಪನಿಗಳು ಆಫಿಸ್‌ಗೆ ಮರಳುವ ಯೋಜನೆಯನ್ನು ಮುಂದೂಡಿದೆ. ಈ ಪಟ್ಟಿಯಲ್ಲಿ ಆಪಲ್ ಕಂಪನಿಯೂ ಒಂದಾಗಿದ್ದು, ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ವಿಧಾನವನ್ನೇ ಮುಂದುವರಿಸಲಾಗುತ್ತಿದೆ.

    ಆಪಲ್ ಈ ಹಿಂದೆ ತನ್ನ ಉದ್ಯೋಗಿಗಳನ್ನು 2022ರ ಫೆಬ್ರವರಿ 1 ರಿಂದ ಆಫಿಸ್‌ಗೆ ಕರೆಸಿಕೊಳ್ಳುವ ಬಗ್ಗೆ ಯೋಜಿಸಿತ್ತು. ಆದರೆ ಕೋ‌ವಿಡ್-19 ರೂಪಾಂತರಿ ಓಮಿಕ್ರಾನ್ ವೈರಸ್‌ನ ಭೀತಿ ಎಲ್ಲೆಡೆ ಹೆಚ್ಚಾಗಿದ್ದು, ಈ ಗಡುವನ್ನು ಮುಂದಕ್ಕೆ ಹಾಕಲು ಯೋಜಿಸಿದೆ. ಇದನ್ನೂ ಓದಿ: ಜಪಾನ್‌ನ ಕ್ಲಿನಿಕ್‌ನಲ್ಲಿ ಅಗ್ನಿ ದುರಂತ – 27 ಜನರ ಸಾವು

    ಪ್ರಪಂಚದ ಎಲ್ಲಾ ಭಾಗಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಆಫಿಸ್‌ಗೆ ಕರೆಸಿಕೊಳ್ಳುವ ಯೋಜನೆಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆಪಲ್ ಕಂಪನಿಯ ಸಿಇಒ ಟಿಮ್ ಕುಕ್ ಉದ್ಯೋಗಿಗಳಿಗೆ ಇಮೇಲ್ ಮೂಲಕ ತಿಳಿಸಿದ್ದಾರೆ.

    ಆಪಲ್ ತನ್ನ ಎಲ್ಲಾ ಉದ್ಯೋಗಿಗಳಿಗೂ ವ್ಯಾಕ್ಸಿನೇಷನ್ ಹಾಗೂ ಬೂಸ್ಟರ್ ಡೋಸ್‌ಗಳನ್ನು ಪಡೆಯಲು ಪ್ರೋತ್ಸಾಹಿಸುತ್ತಿರುವುದರೊಂದಿಗೆ ವರ್ಕ್ ಫ್ರಮ್ ಹೋಮ್ ವಿಧಾನ ದಿಂದ ಉದ್ಯೋಗಿಗಳು ಹಾಗೂ ಅವರ ಸಮುದಾಯದವರು ಸುರಕ್ಷಿತವಾಗಿ ಇರಬಹುದು ಎಂದು ಹೇಳಿದೆ. ಇದನ್ನೂ ಓದಿ: ಮಗನ ಕೈ ಹಿಡಿದಿರುವ ವೀಡಿಯೋ ಶೇರ್ ಮಾಡಿದ ನುಸ್ರತ್ ಜಹಾನ್

    ಆಪಲ್ ಮಾತ್ರವಲ್ಲದೇ ಗೂಗಲ್, ಮೈಕ್ರೊಸಾಫ್ಟ್ಗಳಂತಹ ದೊಡ್ಡ ದೊಡ್ಡ ಟೆಕ್ ಕಂಪನಿಗಳು ಕೂಡಾ ಉದ್ಯೋಗಿಗಳನ್ನು ಆಪಿಸ್‌ಗೆ ಕರೆಸುವ ಯೋಜನೆಯನ್ನು ಸದ್ಯ ಕೈ ಬಿಟ್ಟಿದೆ.

  • ಎಲ್ಲ ಫೋನ್‍ಗಳಿಗೆ, ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಒಂದೇ ಚಾರ್ಜರ್

    ಎಲ್ಲ ಫೋನ್‍ಗಳಿಗೆ, ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಒಂದೇ ಚಾರ್ಜರ್

    – ಮಹತ್ವದ ನಿರ್ಧಾರ ಕೈಗೊಂಡ ಯುರೋಪಿಯನ್ ಯೂನಿಯನ್
    – ಇ-ವೇಸ್ಟ್ ತಪ್ಪಿಸಲು ನಿರ್ಧಾರ

    ಬ್ರಸೆಲ್ಸ್: ಅಂದುಕೊಂಡಂತೆ ನಡೆದರೆ ಎಲ್ಲ ಫೋನ್‍ಗಳಿಗೆ ಮತ್ತು ಎಲೆಕ್ಟ್ರಾನಿಕ್ಸ್ ಸಾಧನಗಳಿಗೆ ಇನ್ನು ಮುಂದೆ ಒಂದೇ ರೀತಿ ಚಾರ್ಜರ್ ಗಳನ್ನು ಬಳಕೆ ಮಾಡಬಹುದು.

    ಹೌದು. ಯುರೋಪಿಯನ್ ಯೂನಿಯನ್ ಎಲ್ಲ ಫೋನ್‍ಗಳಿಗೆ ಒಂದೇ ಮಾನದಂಡದ ಚಾರ್ಜರ್ ಬಳಸಬೇಕೆಂಬ ನಿಯಮವನ್ನು ಸಿದ್ಧಪಡಿಸಿದೆ. ಒಂದು ವೇಳೆ ಈ ನಿಯಮ ಜಾರಿಯಾದರೆ ಕಡ್ಡಾಯವಾಗಿ ಸ್ಮಾರ್ಟ್‍ಫೋನ್ ತಯಾರಕಾ ಕಂಪನಿಗಳು ಒಂದೇ ಮಾದರಿಯ ಚಾರ್ಜರ್ ಅನ್ನು ನೀಡಬೇಕಾಗುತ್ತದೆ.

     

    ಯಾಕೆ ಈ ನಿಯಮ?
    ಸದ್ಯ ಈಗ ಒಂದೊಂದು ಕಂಪನಿಗಳು ಒಂದೊಂದು ರೀತಿ ಚಾರ್ಜರ್ ಗಳೊಂದಿಗೆ ಮಾರುಕಟ್ಟೆಗೆ ಫೋನ್/ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಬಿಡುಗಡೆ ಮಾಡುತ್ತಿವೆ. ಒಂದು ಫೋನ್ ಹಳತಾದ ಬಳಿಕ ಮತ್ತೊಂದು ಫೋನ್ ಖರೀದಿಸಿದರೆ ಹಳೆಯ ಫೋನ್ ಚಾರ್ಜರ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ಇದು ಎಲೆಕ್ಟ್ರಾನಿಕ್ ವೇಸ್ಟ್ ಆಗುತ್ತದೆ.

    ಒಂದೇ ರೀತಿಯ ಚಾರ್ಜರ್ ಬಿಡುಗಡೆ ಮಾಡಿದರೆ ಖರ್ಚು ಕಡಿಮೆಯಾಗುತ್ತದೆ. ಗ್ರಾಹಕರಿಗೆ ಸ್ವಾತಂತ್ರ್ಯ ಜಾಸ್ತಿ ಸಿಗುತ್ತದೆ ಮತ್ತು ಇ-ವೇಸ್ಟ್ ತಪ್ಪಿಸಲು ಈ ನಿಯಮ ಜಾರಿಗೆ ತರಲು ಮುಂದಾಗಿದೆ.  ಇದನ್ನೂ ಓದಿ: ಆಪಲ್ ಉದ್ಯೋಗಿಗಳ ವಿರುದ್ಧ ಗರಂ – ಖಾರವಾದ ಪತ್ರ ಬರೆದು ಎಚ್ಚರಿಕೆ ನೀಡಿದ ಟಿಮ್ ಕುಕ್ 

    ಯುರೋಪಿಯನ್ ಯೂನಿಯನ್ ಪ್ರಸ್ತಾಪ ಮಾಡಿರುವ ನಿಯಮಗಳ ಪ್ರಕಾರ ಎಲ್ಲ ಕಂಪನಿಗಳು ಟೈಪ್ ಸಿ ಚಾರ್ಜರ್ ಗಳನ್ನೇ ನೀಡಬೇಕಾಗುತ್ತದೆ. ಫೋನಿಗಳಿಗೆ ಮಾತ್ರ ಅಲ್ಲ ಟ್ಯಾಬ್ಲೆಟ್, ಕ್ಯಾಮೆರಾ, ಹೆಡ್‍ಫೋನ್, ಪೋರ್ಟೆಬಲ್ ಸ್ಪೀಕರ್, ವಿಡಿಯೋ ಗೇಮ್ ಕನ್ಸೋಲ್ ಗಳಿಗೂ ಈ ನಿಯಮ ಅನ್ವಯವಾಗುತ್ತದೆ.

    ಇಯರ್ ಬಡ್ಸ್, ಸ್ಮಾರ್ಟ್ ವಾಚ್, ಫಿಟ್ ನೆಸ್ ಟ್ರ್ಯಾಕರ್ ಗಳ ಗಾತ್ರ ಸಣ್ಣದಾಗಿರುವುದರಿಂದ ತಾಂತ್ರಿಕ ಕಾರಣಗಳನ್ನು ನೀಡಿ ಈ ಸಾಧನಗಳನ್ನು ಕೈಬಿಡಲಾಗಿದೆ.

    2009ರಲ್ಲಿ 30ಕ್ಕೂ ಹೆಚ್ಚು ಮಾದರಿಯ ಚಾರ್ಜರ್ ಗಳು ಬಳಕೆಯಲ್ಲಿದ್ದವು. ಆದರೆ ಈಗ ಕಂಪನಿಗಳು ಯುಎಸ್‍ಬಿ ಸಿ, ಲೈಟ್ನಿಂಗ್ ಮತ್ತು ಯುಎಸ್‍ಬಿ ಮೈಕ್ರೋ-ಬಿ ಚಾರ್ಜರ್ ಗಳನ್ನು ನೀಡುತ್ತಿವೆ. ವೈರ್‍ಲೆಸ್ ಚಾರ್ಜರ್ ಗಳಿಗೆ ಯಾವುದೇ ಸಮಸ್ಯೆ ಇಲ್ಲ.

    ಜಾರಿ ಯಾವಾಗ?
    ಈ ನಿಯಮ ಈಗ ಸಿದ್ಧಗೊಂಡಿದ್ದು, ಯುರೋಪಿಯನ್ ಸಂಸತ್ತಿನಲ್ಲಿ ಅನುಮೋದನೆ ಪಡೆದ ಬಳಿಕ ಕಂಪನಿಗಳು ಜಾರಿ ಮಾಡಬೇಕಿದೆ. ವರದಿಗಳ ಪ್ರಕಾರ 2024ರ ವೇಳೆಗೆ ಇದು ಜಾರಿಯಾಗುವ ಸಾಧ್ಯತೆಯಿದೆ. ಶಾಸನ ಜಾರಿಯಾದರೆ ಯುಎಸ್‍ಬಿ-ಸಿ ಮಾದರಿಯ ಚಾರ್ಜಿಂಗ್ ಪೋರ್ಟ್ ಹೊರತು ಪಡಿಸಿ ಬೇರೆ ಯಾವುದೇ ಪೋರ್ಟ್ ಇರುವ ಫೋನುಗಳನ್ನು ಮಾರಾಟ ಮಾಡಿದರೆ ಅಕ್ರಮ ಮಾರಾಟ ಎಂದು ಪರಿಗಣಿಸಲಾಗುತ್ತದೆ.

    ಈ ನಿಯಮವನ್ನು ಆಪಲ್ ವಿರೋಧಿಸಿದ್ದು, ಇದು ಆವಿಷ್ಕಾರಕ್ಕೆ ಹಿನ್ನಡೆಯಾಗುತ್ತದೆ ಎಂದು ಹೇಳಿದೆ.

    ಆಂಡ್ರಾಯ್ಡ್ ಫೋನುಗಳ ಪೈಕಿ ಕೆಲವು ಈಗ ಯುಎಸ್‍ಬಿ ಮೈಕ್ರೋ ಬಿ ಪೋರ್ಟ್ ನಲ್ಲಿ ಬಿಡುಗಡೆಯಾಗಿದ್ದರೆ ಈಗಾಗಲೇ ಕೆಲವು ಕಂಪನಿಗಳು ಯುಎಸ್‍ಬಿ ಟೈಪ್ ಸಿನಲ್ಲಿ ಫೋನುಗಳನ್ನು ಬಿಡುಗಡೆ ಮಾಡಿವೆ.

  • ಆಪಲ್ ಉದ್ಯೋಗಿಗಳ ವಿರುದ್ಧ ಗರಂ – ಖಾರವಾದ ಪತ್ರ ಬರೆದು ಎಚ್ಚರಿಕೆ ನೀಡಿದ ಟಿಮ್ ಕುಕ್

    ಆಪಲ್ ಉದ್ಯೋಗಿಗಳ ವಿರುದ್ಧ ಗರಂ – ಖಾರವಾದ ಪತ್ರ ಬರೆದು ಎಚ್ಚರಿಕೆ ನೀಡಿದ ಟಿಮ್ ಕುಕ್

    ಕ್ಯಾಲಿಫೋರ್ನಿಯಾ: ಆಪಲ್ ಕಂಪನಿಯ ಸಿಇಒ ಟಿಮ್ ಕುಕ್ ಉದ್ಯೋಗಿಗಳ ವಿರುದ್ಧವೇ ಗರಂ ಆಗಿದ್ದಾರೆ.

    ಕಂಪನಿಯ ಆಂತರಿಕ ವಿಚಾರವನ್ನು ಸೋರಿಕೆ ಮಾಡಿದ್ದಕ್ಕೆ ಟಿಮ್ ಕುಕ್ ಉದ್ಯೋಗಿಗಳಿಗೆ ಇಮೇಲ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ. ನಮ್ಮ ಸಂಸ್ಥೆಯ ನಿಯಮವನ್ನು ಪಾಲಿಸುವವರು ಇಲ್ಲಿ ಇರಬಹುದು. ಇಷ್ಟ ಇಲ್ಲದವರು ಸಂಸ್ಥೆಯನ್ನು ತೊರೆಯಬಹುದು ಎಂದು ಖಾರವಾಗಿ ಬರೆದಿದ್ದಾರೆ.

    ಕಳೆದ ಶುಕ್ರವಾರ ಆಪಲ್ ಕಂಪನಿಯ ಆಂತರಿಕ ಸಭೆ ನಡೆದಿತ್ತು. ಈ ವೇಳೆ ಲಸಿಕೆ ಪಡೆದುಕೊಳ್ಳದ ಆಪಲ್ ಉದ್ಯೋಗಿಗಳು ಪ್ರತಿನಿತ್ಯ ಕೋವಿಡ್ 19 ಪರೀಕ್ಷೆ ತೆಗೆದುಕೊಳ್ಳಬೇಕು ಎಂದು ಹೇಳುತ್ತಿರುವ ಆಡಿಯೋ ಬಹಿರಂಗವಾಗಿತ್ತು. ಈ ಆಡಿಯೋ ಬಹಿರಂಗವಾದ ಬೆನ್ನಲ್ಲೇ ಟಿಮ್ ಕುಕ್ ಇಮೇಲ್ ಮಾಡಿ ಸಿಟ್ಟನ್ನು ಹೊರಹಾಕಿದ್ದಾರೆ.

    ಸಭೆಯ ವರದಿ ಸೋರಿಕೆಯಾಗಿದ್ದು ನನಗೆ ಬೇಸರ ತಂದಿದೆ. ಬಿಡುಗಡೆ ಮಾಡುವ ಮೊದಲೇ ಉತ್ಪನ್ನಗಳ ವಿವರಗಳು ಮಾಧ್ಯಮಗಳಲ್ಲಿ ಸೋರಿಕೆಯಾಗುತ್ತಿದೆ. ಸೋರಿಕೆ ಮಾಡುವವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ನಾವು ಸಹಿಸುವುದಿಲ್ಲ ಎನ್ನುವುದು ನಿಮಗೆ ತಿಳಿದಿರಬಹುದು ಎಂದಿದ್ದಾರೆ.  ಇದನ್ನೂ ಓದಿ: ಬೈಕ್‍ಗಳಲ್ಲಿ ಐಫೋನ್ ಬಳಸಬೇಡಿ – ಗ್ರಾಹಕರಿಗೆ ಆಪಲ್ ಎಚ್ಚರಿಕೆ 

    ಈ ತಿಂಗಳ ಆರಂಭದಲ್ಲಿ ಕಂಪನಿಯ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕೆ ಎಂಜಿನಿಯರಿಂಗ್ ವಿಭಾಗದ ಪ್ರೋಗ್ರಾಂ ಮ್ಯಾನೇಜರ್ ಆಶ್ಲೇ ಜಿವಿಕ್ ಅವರನ್ನು ವಜಾ ಮಾಡಿತ್ತು. ಆಶ್ಲೇ ಜಿವಿಕ್ ಕಂಪನಿಯಲ್ಲಿ ತಾರತಮ್ಯ ಮತ್ತು ಕಿರುಕುಳದ ಆರೋಪಗಳನ್ನು ಟ್ವೀಟ್ ಮಾಡಿದ್ದರು. ಕಳೆದ ತಿಂಗಳು, ಆಪಲ್ ಉದ್ಯೋಗಿಗಳ ಗುಂಪೊಂದು ಕಂಪನಿಯಿಂದ ತಮಗೆ ಆಗುತ್ತಿರುವ ನೋವನ್ನು ತೋಡಿಕೊಳ್ಳಲು AppleToo ಹೆಸರಿನಲ್ಲಿ ವೆಬ್‍ಸೈಟ್ ತೆರೆದಿತ್ತು.

    ಕಂಪನಿಯ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದವರ ವಿರುದ್ಧ ಈಗ ಆಪಲ್ ಜಾಗತಿಕ ಭದ್ರತಾ ತಂಡ ತನಿಖೆ ಆರಂಭಿಸಿದೆ ಎಂದು ವರದಿಯಾಗಿದೆ.

  • ಬೈಕ್‍ಗಳಲ್ಲಿ ಐಫೋನ್ ಬಳಸಬೇಡಿ – ಗ್ರಾಹಕರಿಗೆ ಆಪಲ್ ಎಚ್ಚರಿಕೆ

    ಬೈಕ್‍ಗಳಲ್ಲಿ ಐಫೋನ್ ಬಳಸಬೇಡಿ – ಗ್ರಾಹಕರಿಗೆ ಆಪಲ್ ಎಚ್ಚರಿಕೆ

    ಕ್ಯಾಲಿಫೋರ್ನಿಯಾ: ಬೈಕ್‍ಗಳಲ್ಲಿ ಐಫೋನ್‍ಗಳನ್ನು ಬಳಸಬೇಡಿ ಆಪಲ್ ಕಂಪನಿ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

    ಪ್ರಯಾಣದ ವೇಳೆ ನಿಖರವಾಗಿ ಜಾಗ ತಿಳಿಯಲು ಸವಾರರು ಹ್ಯಾಂಡಲ್ ನಲ್ಲಿ ಫೋನ್ ಇಡುವುದು ಸಾಮಾನ್ಯ. ಈ ರೀತಿ ಬಳಕೆ ಮಾಡಿ ಅತಿಯಾದ ಕಂಪನಕ್ಕೆ(ವೈಬ್ರೆಷನ್) ಐಫೋನ್ ಸದಾ ಸಿಲುಕುತ್ತಿದ್ದರೆ ಕ್ಯಾಮೆರಾಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಆಪಲ್ ಹೇಳಿದೆ.

    ಆಪಲ್ ಏನು ಹೇಳಿದೆ?
    ಹೊಸ ಐಫೋನ್ ಮಾದರಿಗಳಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ತಂತ್ರಜ್ಞಾನ ಮತ್ತು ಲೂಪ್ ಆಟೋಫೋಕಸ್ ಅನ್ನು ಬಳಸಲಾಗಿದೆ. ಫೋಟೋ, ವಿಡಿಯೋ ತೆಗೆಯುವ ವೇಳೆ ಕೈ ಶೇಕ್ ಆದರೂ, ಸರಿಯಾದ ಫ್ರೇಮ್ ಹೊಂದಿಸಲು ಸಾಧ್ಯವಾಗದೇ ಇದ್ದರೂ ಈ ತಂತ್ರಜ್ಞಾನದಿಂದ ಫೋಟೋ, ವಿಡಿಯೋಗಳು ಬಹಳ ಚೆನ್ನಾಗಿ ಮೂಡಿಬರುತ್ತದೆ.  ಇದನ್ನೂ ಓದಿ: ಈಗ ಬಿಡುಗಡೆಯಾಗಲ್ಲ, ದೀಪಾವಳಿಗೂ ಮೊದಲು ಬರಲಿದೆ ಜಿಯೋ ಫೋನ್

    ಐಫೋನ್‍ ಹೆಚ್ಚಾಗಿ ಗರಿಷ್ಠ ಕಂಪನಕ್ಕೆ ಸಿಲುಕಿದರೆ ಕ್ಯಾಮೆರಾಕ್ಕೆ ನೀಡಲಾಗಿರುವ ತಂತ್ರಜ್ಞಾನಕ್ಕೆ ಹಾನಿಯಾಗಿ ಫೋಟೋ, ವಿಡಿಯೋ ಮೇಲೆ ಪರಿಣಾಮ ಬೀರಬಹುದು. ಹೆಚ್ಚಿನ ಕಂಪನ ಹೊಂದಿರುವ ಗರಿಷ್ಠ ಸಿಸಿ ಸಾಮರ್ಥ್ಯದ ಮೋಟಾರ್ ಬೈಕ್, ಇತರ ಯಂತ್ರ, ವಾಹನಗಳಲ್ಲಿ ಅಳವಡಿಸಿದರೆ ಐಫೋನ್ ಕ್ಯಾಮೆರಾದ ವಿನ್ಯಾಸಕ್ಕೆ ಧಕ್ಕೆಯಾಗಬಹುದು.

    ಕಂಪನ ತಡೆಯುವ ಸ್ಟ್ಯಾಂಡ್, ಮೌಂಟ್ ಬಳಸುವುದರಿಂದ ಕ್ಯಾಮರಾಗೆ ಹಾನಿಯಾಗುವುದನ್ನು ತಡೆಯಬಹುದು ಎಂದು ಸಲಹೆಯನ್ನು ಆಪಲ್ ನೀಡಿದೆ. ಆದರೂ ಆದರೆ ದೀರ್ಘಾವಧಿಯ ಐಫೋನ್ ಸುರಕ್ಷತೆಗಾಗಿ ದ್ವಿಚಕ್ರ ವಾಹನದಲ್ಲಿ ಐಫೋನ್ ಅಳವಡಿಸದೇ ಇರುವುದು ಉತ್ತಮ ಎಂದು ಸಲಹೆ ನೀಡಿದೆ. ಇದನ್ನೂ ಓದಿ: ಬ್ರಾಡ್‍ಬ್ಯಾಂಡ್ ಉತ್ತೇಜಿಸಲು ಜನರಿಗೆ ಪ್ರತಿ ತಿಂಗಳು 200 ರೂ. ಕ್ಯಾಶ್‍ಬ್ಯಾಕ್ ನೀಡಿ – ಟ್ರಾಯ್ ಶಿಫಾರಸು