Tag: ಆಪರೇಷನ್ ಕಮಲ

  • ರಾಕ್ಷಸ ರಾಜಕಾರಣ ಇತಿಶ್ರೀಯಾಗಿದೆ, ಸಾತ್ವಿಕ ರಾಜಕಾರಣ ಪ್ರಾರಂಭವಾಗಬೇಕಿದೆ – ವಿಶ್ವನಾಥ್

    ರಾಕ್ಷಸ ರಾಜಕಾರಣ ಇತಿಶ್ರೀಯಾಗಿದೆ, ಸಾತ್ವಿಕ ರಾಜಕಾರಣ ಪ್ರಾರಂಭವಾಗಬೇಕಿದೆ – ವಿಶ್ವನಾಥ್

    ಬೆಂಗಳೂರು: ರಾಜ್ಯದಲ್ಲಿನ ರಾಕ್ಷಸ ರಾಜಕಾರಣ ಇತಿಶ್ರೀಯಾಗಿದ್ದು, ಸಾತ್ವಿಕ ರಾಜಕಾರಣ ಪ್ರಾರಂಭವಾಗಬೇಕಿದೆ ಎಂದು ಎಚ್.ವಿಶ್ವನಾಥ್ ತಿಳಿಸಿದ್ದಾರೆ.

    ವಿಶ್ವಾಸ ಮತಯಾಚನೆ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸರ್ಕಾರ ಪತನವಾಗಿದೆ. ಸದ್ಯ ಪುಣೆಯಲ್ಲಿದ್ದೇವೆ, ನಮ್ಮ ಜೊತೆ ಬಂದಿರುವ ಎಲ್ಲ ಶಾಸಕರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಬಿಜೆಪಿ ಜೊತೆ ಸಾತ್ವಿಕ ರಾಜಕಾರಣ ಮಾಡುವ ಕುರಿತು ಹಾಗೂ ಸಾತ್ವಿಕ ವಾತಾವರಣ ಸೃಷ್ಟಿಸುವ ಕುರಿತು ಸಹ ಚರ್ಚಿಸಲಾಗುವುದು ತಿಳಿಸಿದರು.

    ನಮಗೆ ಕೈ ಕೊಟ್ಟು ಹೋದವರು ನಿಮಗೂ ಕೈ ಕೊಡುವುದಿಲ್ಲವೇ ಎಂದು ಸಿಎಂ ಸದನದಲ್ಲಿ ಬಿಜೆಪಿಗೆ ಕೇಳಿದ ಪ್ರಶ್ನೆ ಕುರಿತು ಉತ್ತರಿಸಿದ ಅವರು, ಹೇಳಿದವರೂ ಸಹ ಎಲ್ಲರಿಗೂ ಉದ್ದಕ್ಕೂ ಕೈ ಕೊಟ್ಟೇ ಬಂದವರು. ಸುಮ್ಮನೆ ಬಂದವರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನೀವು ಪಕ್ಷ ದ್ರೋಹದ ರೂವಾರಿ ಎನ್ನಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಪಕ್ಷ ದ್ರೋಹ ಮಾಡಿಲ್ಲ. ಶಾಸಕಾಂಗ ಪಕ್ಷದ ನಾಯಕರಿಗೆ ಹಾಗೂ ಸಿಎಂಗೆ ಈ ಹಿಂದೆಯೇ ತಿಳಿಸಿದ್ದೆ. ನಾನು ಡೀಸೆಂಟ್ ಹಾಕಿದ್ದೇನೆ ಡಿಫೆಕ್ಟ್ ಹಾಕಿಲ್ಲ. ನಾನು ಯಾವತ್ತೂ ಡಿಫೆಕ್ಟ್ ಮಾಡಿಲ್ಲ ಎಂದು ತಿಳಿಸಿದರು.

    ಇಷ್ಟು ವರ್ಷಗಳ ಕಾಲ ಪಕ್ಷದಲ್ಲಿದ್ದುಕೊಂಡು ಇಂತಹ ಪರಿಸ್ಥಿತಿಗೆ ತಂದರಲ್ಲ ಎಂಬ ಕೊರಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೊರಗುವವರು ನಾವಲ್ಲ. ಕುರ್ಚಿಗೆ ಅಂಟಿಕೊಂಡವರು. ನಾವು ಕುರ್ಚಿಗೆ ಅಂಟಿಕೊಂಡಿಲ್ಲ. ನಮಗೆ ಆ ರೀತಿ ಅನಿಸಿಲ್ಲ ಎಂದು ಸ್ಪಷ್ಟಪಡಿಸಿದರು.

    ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನೋವು ಆಗಿತ್ತು. ಕ್ಷೇತ್ರದ ಅಭಿವೃದ್ಧಿ ಮತ್ತು ಜನತೆಯ ಹಿತಕ್ಕಾಗಿ ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದೇನೆ ಎಂದು ಅತೃಪ್ತ ಶಾಸಕ ಬಿ.ಸಿ.ಪಾಟೀಲ್ ಪಬ್ಲಿಕ್ ಟಿವಿಗೆ ತಿಳಿಸಿದರು.

    ನನ್ನ ಸ್ವಕ್ಷೇತ್ರವನ್ನು ತೊರೆದು ಒಂದು ತಿಂಗಳಾಗಿದೆ. ಎಂದೂ ನಾನು ಇಷ್ಟು ದಿನ ಕ್ಷೇತ್ರದ ಜನತೆಯೊಂದಿಗೆ ದೂರವಿಲ್ಲ. ಕೂಡಲೇ ಎಲ್ಲರೊಂದಿಗೆ ಚರ್ಚಿಸಿ ಬರುವ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

  • ಆಪರೇಷನ್ ಕಮಲ ನಿಂತಿಲ್ಲ – ಮತ್ತೆ 8 ಶಾಸಕರ ರಾಜೀನಾಮೆ ಸಾಧ್ಯತೆ

    ಆಪರೇಷನ್ ಕಮಲ ನಿಂತಿಲ್ಲ – ಮತ್ತೆ 8 ಶಾಸಕರ ರಾಜೀನಾಮೆ ಸಾಧ್ಯತೆ

    ಬೆಂಗಳೂರು: 15 ಶಾಸಕರು ರಾಜೀನಾಮೆ ನೀಡಿದ್ದರೂ ಮತ್ತಷ್ಟು ದೋಸ್ತಿ ಪಕ್ಷದ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಯಿದೆ.

    ಹೌದು. ರಾಜೀನಾಮೆ ನೀಡಿದ ಶಾಸಕರ ಪೈಕಿ ಹಳೆ ಮೈಸೂರು ಭಾಗದವರು ಇದ್ದಾರೆ. ಈ ಭಾಗದಲ್ಲಿ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಉಪಚುನಾವಣೆ ನಡೆದರೆ ಇಲ್ಲಿ ಜಯಗಳಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಉತ್ತರ ಕರ್ನಾಟಕ ಭಾಗದ 8 ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ.

    ಉತ್ತರ ಕರ್ನಾಟಕದಲ್ಲಿ ಬಿಜೆಪಿಯ ಹಿಡಿತ ಹೆಚ್ಚಿದೆ. ಅದರಲ್ಲೂ ಹಲವಾರು ಕ್ಷೇತ್ರಗಳಲ್ಲಿ ಲಿಂಗಾಯತರೇ ನಿರ್ಣಾಯಕರಾಗಿದ್ದಾರೆ. ಹೀಗಾಗಿ 8 ಮಂದಿ ಲಿಂಗಾಯತ ಶಾಸಕರನ್ನು ಸೆಳೆಯಲು ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ ಎನ್ನುವ ವಿಚಾರ ಮೂಲಗಳಿಂದ ಲಭ್ಯವಾಗಿದೆ.

    ಒಂದು ವೇಳೆ ರಾಜೀನಾಮೆ ನೀಡಿರುವ ಶಾಸಕರು ಸೋತರೆ ಮತ್ತೆ ಸರ್ಕಾರ ಅಲ್ಪ ಮತಕ್ಕೆ ಕುಸಿಯಬಹುದು. ಈ ರೀತಿ ಆಗದಂತೆ ತಡೆಯಲು ಬಿಜೆಪಿ ಈಗ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದೆ.

    ಅತೃಪ್ತ ಶಾಸಕರ ಜೊತೆ ಸ್ನೇಹಿತರಾಗಿರುವ ಶಾಸಕರನ್ನು ಸೆಳೆಯಲು ಬಿಜೆಪಿ ಮುಂದಾಗಿದ್ದು, ಈಗಾಗಲೇ ಕೆಲ ಶಾಸಕರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

    ಜೆಡಿಎಸ್ಸಿನ ಹುಣಸೂರು ಶಾಸಕ ಎಚ್ ವಿಶ್ವನಾಥ್, ಮಾಹಾಲಕ್ಷ್ಮಿ ಲೇ ಔಟ್ ಶಾಸಕ ಗೋಪಾಲಯ್ಯ ಹಾಗೂ ಕೆ. ಆರ್ ಪೇಟೆಯ ನಾರಾಯಣ ಗೌಡ ರಾಜೀನಾಮೆ ನೀಡಿದ್ದಾರೆ.

    ಕಾಂಗ್ರೆಸ್ಸಿನ ಶಾಸಕರಾದ ಯಶವಂತಪುರದ ಎಸ್.ಟಿ ಸೋಮಶೇಖರ್, ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ ಪಾಟೀಲ್, ಅಥಣಿಯ ಮಹೇಶ್ ಕುಮಟಳ್ಳಿ, ಕೆ.ಆರ್ ಪುರಂನ ಭೈರತಿ ಬಸವರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ರಾಜರಾಜೇಶ್ವರಿ ನಗರದ ಮುನಿರತ್ನ ಹಾಗೂ ಶಿವಾಜಿನಗರದ ರೋಷನ್ ಬೇಗ್, ಚಿಕ್ಕಬಳ್ಳಾಪುರದ ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಕಾಗವಾಡದ ಶ್ರೀಮಂತ ಪಾಟೀಲ್, ವಿಶ್ವಾಸಮತಯಾಚನೆ ಬಾರದೇ ಕೈ ಕೊಟ್ಟಿದ್ದಾರೆ.

  • ಕಾಂಗ್ರೆಸ್ಸಿಗೆ ಸಿಎಂ ಸ್ಥಾನದ ಆಫರ್ ನೀಡಿದ್ದು ನಿಜ: ಡಿ.ಕೆ.ಶಿವಕುಮಾರ್

    ಕಾಂಗ್ರೆಸ್ಸಿಗೆ ಸಿಎಂ ಸ್ಥಾನದ ಆಫರ್ ನೀಡಿದ್ದು ನಿಜ: ಡಿ.ಕೆ.ಶಿವಕುಮಾರ್

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಯಾರಾದರೂ ಸಿಎಂ ಆಗಬಹುದು. ಒಟ್ಟಿನಲ್ಲಿ ಮೈತ್ರಿ ಸರ್ಕಾರ ಉಳಿಯಬೇಕು ಎಂದು ಜೆಡಿಎಸ್‍ನವರು ನಮ್ಮ ಬಳಿ ಕೇಳಿಕೊಂಡಿರುವುದು ನಿಜ ಎಂದು ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಯಾರಾದರೂ ಮುಖ್ಯಮಂತ್ರಿಯಾಗಿ ಎಂದು ಜೆಡಿಎಸ್‍ನವರು ಮುಕ್ತ ಕಂಠದಿಂದ ಹೇಳಿದ್ದಾರೆ. ಈ ಕುರಿತು ಹೈಕಮಾಂಡ್‍ಗೂ ಜೆಡಿಎಸ್ ನಾಯಕರು ತಿಳಿಸಿದ್ದಾರೆ. ಇಂತಹ ವಿಷಯಗಳನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದರು.

    ನಾನಾಗಲಿ(ಡಿ.ಕೆ.ಶಿವಕುಮಾರ್), ಡಾ.ಜಿ.ಪರಮೇಶ್ವರ್ ಇಲ್ಲವೇ ಸಿದ್ದರಾಮಯ್ಯನವರು ಯಾರಾದರೂ ಸರಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಯಾಗಬಹುದು. ಒಟ್ಟಿನಲ್ಲಿ ಮೈತ್ರಿ ಸರ್ಕಾರ ಉಳಿಯಬೇಕೆಂದು ಕೇಳಿಕೊಂಡಿದ್ದಾರೆ ಎಂದು ಡಿಕೆಶಿ ತಿಳಿಸಿದರು.

    ನಾಳೆ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚಿಸಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ಶಾಸಕರನ್ನು ನಾವು ಮನವೊಲಿಸುತ್ತೇವೆ. ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

    ನಾನು ಸ್ಟಂಟ್ ಮಾಡುತ್ತಿದ್ದೇನೆ. ತೋರಿಕೆಗೆ ಓಡಾಡುತ್ತಿದ್ದೇನೆ. ಏನೂ ಕೆಲಸ ಮಾಡುತ್ತಿಲ್ಲ ಎಂದು ನನ್ನ ಬಗ್ಗೆ ಕೆಲವರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ನನಗೆ ಅಭ್ಯಂತರವಿಲ್ಲ. ಎಲ್ಲರೂ ಟೀಕಿಸಲಿ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ. ಸರ್ಕಾರ ಉಳಿಸಿಕೊಳ್ಳುವಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ತಿಳಿಸಿದರು.

    ಸಿಎಂ ಕೊನೆಯ ದಾಳ
    ಅತೃಪ್ತ ಶಾಸಕರ ಮನವೊಲಿಕೆಗೆ ಸಾಕಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗದೇ ಇದ್ದಾಗ ಈಗ ಹೇಗಾದರೂ ಮಾಡಿ ಸರ್ಕಾರ ಉಳಿಸಲು ಸಿಎಂ ಈ ಕೊನೆಯ ದಾಳವನ್ನು ಪ್ರಯೋಗಿಸಿದ್ದಾರೆ. ದೋಸ್ತಿ ಸರ್ಕಾರದ 17 ಶಾಸಕರು ಗೈರಾಗಿರುವ ಹಿನ್ನೆಲೆಯಲ್ಲಿ ಬಹುಮತ ಸಾಬೀತು ಪಡಿಸುವುದು ಕಷ್ಟ ಎನ್ನುವುವುದು ಸಿಎಂಗೆ ಗೊತ್ತಾಗಿದೆ. ಹೀಗಾಗಿ ಕೊನೆಯ ಅಸ್ತ್ರ ಎಂಬಂತೆ ಕಾಂಗ್ರೆಸ್ ನಾಯಕರಿಗೆ ಸಿಎಂ ಪಟ್ಟ ನೀಡುವುದಾಗಿ ಹೇಳಿದ್ದಾರೆ.

    2018ರಲ್ಲಿ ಚುನಾವಣೆಯ ಬಳಿಕ 5 ವರ್ಷಗಳ ಕಾಲ ಸಿಎಂ ದಳಕ್ಕೆ ಎನ್ನುವ ನಿರ್ಧಾರಕ್ಕೆ ಎರಡು ಪಕ್ಷಗಳು ಒಪ್ಪಿಕೊಂಡಿತ್ತು. ಆದರೆ ಈಗ ಕಾಂಗ್ರೆಸ್ಸಿನಲ್ಲಿ ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಅವರಿಗೆ ಸಿಎಂ ಪಟ್ಟ ನೀಡಲು ಮುಂದಾಗಿದ್ದಾರೆ. ನಮ್ಮ ಪ್ರಯತ್ನಗಳು ಮುಗಿದಿವೆ. ಇನ್ನು ನಮ್ಮಿಂದ ಆಗುವುದಿಲ್ಲ. ನಿಮ್ಮ ಶಾಸಕರನ್ನ ಕರೆತಂದು ನೀವೇ ಸಿಎಂ ಆಗಿ ಸರ್ಕಾರವನ್ನು ಉಳಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ.

    ನಮಗೆ ಸರ್ಕಾರ ಉಳಿಯಬೇಕು, ನಾನು ಸಿಎಂ ತ್ಯಾಗ ಮಾಡಲು ಸಿದ್ಧ. ನಾವು ಬಾಹ್ಯ ಬೆಂಬಲವನ್ನು ನೀಡುತ್ತೇವೆ. ಪರಮೇಶ್ವರ್, ಸಿದ್ದರಾಮಯ್ಯ, ಖರ್ಗೆ, ಡಿಕೆ ಶಿವಕುಮಾರ್ ಯಾರಾದ್ರೂ ಸಿಎಂ ಆಗಲಿ. ಈ ನಿರ್ಧಾರಕ್ಕೆ ದೇವೇಗೌಡರು ಕೂಡ ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

  • ದೋಸ್ತಿಗಳಿಗೆ ಕೈ ಕೊಟ್ಟ ‘ಆನೆ’

    ದೋಸ್ತಿಗಳಿಗೆ ಕೈ ಕೊಟ್ಟ ‘ಆನೆ’

    ಚಾಮರಾಜನಗರ: ಮೊನ್ನೆಯಷ್ಟೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ವಿಷಯಾಧಾರಿತ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದ್ದ ಬಿಎಸ್‍ಪಿ ಶಾಸಕ ಎನ್.ಮಹೇಶ್ ಇದೀಗ ಮತ್ತೆ ಉಲ್ಟಾ ಹೊಡೆದಿದ್ದು, ವಿಶ್ವಾಸ ಮತಯಾಚನೆಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಆರಂಭದಲ್ಲಿ ಯಾರಿಗೂ ಬೆಂಬಲ ನೀಡದಿರುವಂತೆ ಮಾಯಾವತಿ ಅವರು ಸೂಚಿಸಿದ್ದು ಹೀಗಾಗಿ ಯಾವ ಪಕ್ಷಕ್ಕೂ ನಾನು ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದರು. ಇದಾದ ಬಳಿಕ ಸದನ ಆರಂಭವಾಗುವುದಕ್ಕೂ ಮುನ್ನಾದಿನ ಪ್ರತಿಕ್ರಿಯೆ ನೀಡಿ, ನಿಮ್ಮ ಇಷ್ಟ ಯಾರಿಗಾದರೂ ಬೆಂಬಲ ನೀಡಿ ಎಂದು ಮಾಯಾವತಿ ಅವರು ತಿಳಿಸಿದ್ದಾರೆ. ಹೀಗಾಗಿ ನಾನು ಮೈತ್ರಿ ಸರ್ಕಾರಕ್ಕೆ ವಿಷಯಾಧಾರಿತ ಬಾಹ್ಯ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ್ದರು.

    ಇದೀಗ ಅತೃಪ್ತ ಶಾಸಕರ ಮನವೊಲಿಸುವಲ್ಲಿಯೂ ಮೈತ್ರಿ ನಾಯಕರು ವಿಫಲವಾಗಿದ್ದು, ಇದರ ಬೆನ್ನಲ್ಲೇ ಶಾಸಕ ಎನ್.ಮಹೇಶ್ ಸಹ ಬೆಂಬಲ ನೀಡುವುದಿಲ್ಲ ಎಂದು ಹೇಳಿರುವುದು ಮೈತ್ರಿ ಸರ್ಕಾರಕ್ಕೆ ಆಘಾತವನ್ನುಂಟು ಮಾಡಿದೆ.

    ಈ ಕುರಿತು ಕೊಳ್ಳೇಗಾಲದಲ್ಲಿ ಪ್ರತಿಕ್ರಿಯಿಸಿರುವ ಎನ್.ಮಹೇಶ್, ಮಾಯಾವತಿ ಅವರು ತಟಸ್ಥವಾಗಿರಲು ಹೇಳಿದ್ದು, ಹೀಗಾಗಿ ನಾಳೆ ನಡೆಯುವ ವಿಶ್ವಾಸ ಮತಯಾಚನೆಗೆ ನಾನು ಹೋಗುವುದಿಲ್ಲ. ಎರಡು ದಿನ ನನಗೆ ಖಾಸಗಿ ಕೆಲಸ ಇತ್ತು ಹೀಗಾಗಿ ಸದನಕ್ಕೆ ಹೋಗಿರಲಿಲ್ಲ. ನಾಳೆಯೂ ಸಹ ಕ್ಷೇತ್ರದಲ್ಲಿ ಖಾಸಗಿ ಕೆಲಸವಿದ್ದು, ನಾನು ಸದನಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಸಿಎಂ ಖುರ್ಚಿಯ ಡೆಡ್ ಲೈನ್ ಸೋಮವಾರನಾ? ಮಂಗಳವಾರನಾ?

    ಸಿಎಂ ಖುರ್ಚಿಯ ಡೆಡ್ ಲೈನ್ ಸೋಮವಾರನಾ? ಮಂಗಳವಾರನಾ?

    ಬೆಂಗಳೂರು: ಸಿಎಂಗೆ ರಾಜ್ಯಪಾಲರು ವಿಧಿಸಿದ್ದ ಎರಡು ಡೆಡ್ ಲೈನ್‍ಗಳನ್ನು ದಾಟಿದ್ದು, ಸೋಮವಾರ ಸರ್ಕಾರ ಪತನವಾಗುತ್ತಾ? ಸೇಫ್ ಆಗುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

    ರಾಜ್ಯಪಾಲರು ನೀಡಿದ ಎರಡು ಡೆಡ್‍ಲೈನ್ ಗಳಿಗೆ ರಾಜ್ಯ ಸರ್ಕಾರ ಡೋಂಟ್‍ಕೇರ್ ಎದ್ದಿದ್ದು ಈಗ ಸ್ಪೀಕರ್ ಅವರೇ ಸೋಮವಾರ ಎಲ್ಲದ್ದಕ್ಕೂ ಇತಿಶ್ರೀ ಹಾಡಲಾಗುವುದು ಎಂದು ಹೇಳಿದ್ದಾರೆ. ಆದರೆ ಸೋಮವಾರವೂ ವಿಶ್ವಾಸಮತಯಾಚನೆ ಮಾಡುವುದು ಅನುಮಾನ ಎನ್ನುವ ಮಾತು ಕೇಳಿ ಬಂದಿದೆ.

    ಕಳೆದ ಬುಧವಾರ ವಿಶ್ವಾಸ ಮತ ಯಾಚನೆ ಮಾಡಿರುವ ಮುಖ್ಯಮಂತ್ರಿಗಳು ಇನ್ನು ಚರ್ಚೆ ನಡೆಸುತ್ತಿದ್ದಾರೆ. ಈ ಮಧ್ಯೆ ಕಲಾಪಕ್ಕೆ ಗೈರಾಗಿರುವ ಶಾಸಕರಿಗೆ ವಿಪ್ ಅನ್ವಯವಾಗುತ್ತೋ ಇಲ್ಲವೋ ಎನ್ನುವ ಗೊಂದಲ ಪರಿಹಾರಕ್ಕೆ ಎರಡು ಪಕ್ಷ ಸುಪ್ರೀಂ ಕೋರ್ಟ್ ಕದ ತಟ್ಟಿದೆ. ಈ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆಗೆ ಮಾನ್ಯ ಮಾಡಿದ್ದಲ್ಲಿ ಕೋರ್ಟ್ ಆದೇಶ ಬರುವವರೆಗೂ ವಿಶ್ವಾಸ ಮತಯಾಚನೆ ನಡೆಯುವುದು ಅನುಮಾನ.

    ಮೈತ್ರಿ ಪಕ್ಷಗಳ ನಾಯಕರು ಹೇಳಿಕೊಂಡಂತೆ ಸೋಮವಾರವೇ ವಿಶ್ವಾಸಮತ ಸಾಬೀತು ಮಾಡಲು ಹೋದರೆ ದೋಸ್ತಿಗಳಿಗೆ ಸಂಖ್ಯಾಬಲದ ಕೊರತೆ ಇದೆ. ಒಂದು ವೇಳೆ ವೋಟ್ ನಡೆದರೆ ಸರ್ಕಾರ ಪತನವಾಗಲಿದೆ.

    ಸೋಮವಾರವು ಚರ್ಚೆ ಮುಂದುವರಿದು ಸುಪ್ರೀಂ ಆದೇಶದ ನಂತರ ಮತಯಾಚನೆ ಮಾಡಲಾಗುವುದು ಎಂದು ಹೇಳಿದರೆ ರಾಜ್ಯಪಾಲರು ಸರ್ಕಾರವನ್ನು ವಜಾಗೊಳಿಸುವ ನಿರ್ಧಾರ ತೆಗೆದುಕೊಂಡರೆ ಸಿಎಂ ಮಂಗಳವಾರ ಮಾಜಿ ಆಗಬಹುದು. ಆದರೆ ವಿಪ್ ಪ್ರಕರಣ ಸುಪ್ರೀಂ ಅಂಗಳದಲ್ಲಿ ಇರುವ ಕಾರಣ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬರುವುದು ಅಷ್ಟು ಸುಲಬ ಅಲ್ಲ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

  • ಇನ್ನೂ ಕೆಲ ಶಾಸಕರ ರಾಜೀನಾಮೆ ಮಾಡಿಸೋ ಪ್ರಯತ್ನ ನಡೆದಿದೆ: ಈಶ್ವರ್ ಖಂಡ್ರೆ

    ಇನ್ನೂ ಕೆಲ ಶಾಸಕರ ರಾಜೀನಾಮೆ ಮಾಡಿಸೋ ಪ್ರಯತ್ನ ನಡೆದಿದೆ: ಈಶ್ವರ್ ಖಂಡ್ರೆ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಇನ್ನೂ ಕೆಲ ಶಾಸಕರಿಗೆ ಬಿಜೆಪಿಯವರು ಆಮಿಷ ಒಡ್ಡುತ್ತಲೇ ಇದ್ದು, ಹೆದರಿಸಿ, ಬೆದರಿಸಿ ಶಾಸಕರ ರಾಜೀನಾಮೆ ಕೊಡಿಸುವ ಪ್ರಯತ್ನ ಮುಂದುವರಿದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

    ಕಾಂಗ್ರೆಸ್ ಶಾಸಕರು ತಂಗಿರುವ ಹೋಟೆಲ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕರು ಅವರ ಕಡೆ ಹೋಗುವುದಿಲ್ಲ. ಆದರೆ ಪುನಃ ಬಿಜೆಪಿಯಿಂದ ಶಾಸಕರ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ನಮ್ಮ ಶಾಸಕರನ್ನ ಒತ್ತೆಯಾಳುಗಳ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

    ಸರ್ಕಾರ ಆಸ್ಥಿಗೊಳಿಸುವ ಪ್ರಯತ್ನ ನಡೆದಿದೆ. ಆದರೆ ನಮ್ಮ ಶಾಸಕರು ಅಂಜಿಕೆ, ಹೆದರಿಕೆ ಒಳಗಾಗಬಾರದು. ಕ್ಷೇತ್ರದ ಜನತೆ ವಿಶ್ವಾಸ ಇಟ್ಟು ಗೆಲ್ಲಿಸಿದ್ದಾರೆ, ಅತೃಪ್ತ ಶಾಸಕರು ಕೂಡ ವಾಪಸ್ ಬಂದು ಕೈಜೋಡಿಸಬೇಕು. ನಮ್ಮ ಶಾಸಕ ರಹೀಂಖಾನ್‍ಗೂ ಆಮಿಷ ನೀಡಿದ್ದಾರೆ. ಕುದುರೆ ವ್ಯಾಪಾರದ ಬಗ್ಗೆ ಮಾತನಾಡುವ ರಾಜ್ಯಪಾಲರು ಇದರ ಬಗ್ಗೆ ಯಾಕೆ ಗಮನ ಹರಿಸಬಾರದು. ರಾಜ್ಯಪಾಲರನ್ನೂ ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎಂದರು.

  • ಸೋಮವಾರವೂ ಸದನ ಮುಂದೂಡುವ ಮಾಹಿತಿ ಇದೆ: ಸಿಟಿ ರವಿ

    ಸೋಮವಾರವೂ ಸದನ ಮುಂದೂಡುವ ಮಾಹಿತಿ ಇದೆ: ಸಿಟಿ ರವಿ

    ಬೆಂಗಳೂರು: ಸೋಮವಾರವೂ ಸದನದಲ್ಲಿ ಕಾಲಹರಣ ಮಾಡಿ, ಮುಂದೂಡುತ್ತಾರೆ ಎಂಬ ಮಾಹಿತಿ ಇದೆ. ಅವರು ಅತೃಪ್ತ ಶಾಸಕರಿಗೆ ಗಾಳ ಹಾಕಿಕೊಂಡು, ಯಾವಾಗ ಬೀಳುತ್ತಾರೋ ನೋಡುತ್ತಾ ಕಾಯುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಮೈತ್ರಿ ನಾಯಕರ ವಿರುದ್ಧ ಆರೋಪ ಮಾಡಿದ್ದಾರೆ.

    ರಮಡ ರೆಸಾರ್ಟಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ ಅವರು, ಸೋಮವಾರ ವಿಶ್ವಾಸ ಮತ ನಿರ್ಣಯ ಮಂಡನೆ ಮಾಡುತ್ತೇವೆಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದಾರೆ. ಆದರೆ, ನಮಗಿರುವ ಮಾಹಿತಿ ಪ್ರಕಾರ ಸೋಮವಾರ ಕೂಡ ಸದನವನ್ನು ಮುಂದೂಡಬಹುದು ಎಂದು ತಿಳಿದು ಬಂದಿದೆ. ಅತೃಪ್ತ ಶಾಸಕರು ಬರುತ್ತಾರೆ ಎಂದು ಗಾಳ ಹಾಕಿಕೊಂಡು ಮೈತ್ರಿ ನಾಯಕರು ಕಾಯುತ್ತಿದ್ದಾರೆ. ವಿಶ್ವನಾಥ್ ಅವರನ್ನು ಉಳಿಸಿಕೊಳ್ಳಲು ಅಂತಿಮ ಕ್ಷಣದವರೆಗೂ ಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ಹೀಗಿದ್ದರೂ ತಮ್ಮ ವ್ಯರ್ಥ ಪ್ರಯತ್ನವನ್ನು ದೋಸ್ತಿ ನಾಯಕರು ಬಿಡುತ್ತಿಲ್ಲ ಎಂದು ಕಿಡಿಕಾರಿದರು.

    ವಿಶ್ವನಾಥ್ ಅವರು ಸರ್ಕಾರದ ಕಾರ್ಯವೈಖರಿಯಿಂದ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಆದರೆ, ವಿಶ್ವನಾಥ್ ಅವರೂ ಸಹ ವ್ಯಾಪಾರಕ್ಕೊಳಗಾಗಿದ್ದಾರೆ ಎಂದು ಸದನದಲ್ಲಿ ಹೇಳುತ್ತಾರೆ. ಅವರ ಬಗ್ಗೆ ಅಪಹಾಸ್ಯ ಮಾಡಿದ್ದಾರೆ ಎಂದು ಪರೋಕ್ಷವಾಗಿ ಸಾ.ರಾ.ಮಹೇಶ್ ವಿರುದ್ಧ ಕಿಡಿ ಕಾರಿದರು. ಅಲ್ಲದೇ ಅತೃಪ್ತ ಶಾಸಕರಲ್ಲಿ ಶಾಸಕರನ್ನೇ ಖರೀದಿ ಮಾಡುವ ಶಕ್ತಿಯಿದೆ ಎನ್ನುವ ಮೂಲಕ ಮೈತ್ರಿ ಮುಖಂಡರು ಅವರ ಶಾಸಕರನ್ನೇ ಅಪಹಾಸ್ಯ ಮಾಡುತ್ತಿದ್ದಾರೆ ಎಂದರು.

    ಸದನದಲ್ಲಿ ನಮ್ಮ ಶಾಸಕರು ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ಹಣ ನೀಡಲು ಯತ್ನಿಸಿದರು ಎಂದು ಆರೋಪಿಸಿದ್ದಾರೆ. ಆದರೆ, ಯಾವುದೇ ಶಾಸಕರು ಸದನದಲ್ಲಿ ಮತ್ತೊಬ್ಬರ ಮೇಲೆ ಗಂಭೀರ ಆರೋಪ ಮಾಡುವ ಮುನ್ನ ಸಭಾಧ್ಯಕ್ಷರಿಗೆ ಮಾಹಿತಿ ನೀಡಿ ದಾಖಲೆ ಕೊಡಬೇಕು. ನೋಟಿಸ್ ನೀಡಿ ನಂತರ ಆರೋಪ ಮಾಡಬೇಕು ಆದರೆ, ಇದಾವುದೇ ನಿಯಮಗಳನ್ನು ಮೈತ್ರಿ ನಾಯಕರು ಪಾಲಿಸಿಲ್ಲ ಎಂದು ಆರೋಪಿಸಿದರು.

    ಸ್ಪೀಕರ್ ಅವರು ಪದೇ ಪದೇ ಸಂವಿಧಾನದ ನಿಯಮಗಳ ಅಡಿ ಕೆಲಸ ಮಾಡುತ್ತೇನೆ, ನಿಯಮಗಳನ್ನು ಪಾಲಿಸುತ್ತೇನೆ ಎಂದು ಹೇಳುತ್ತಾರೆ. ಆದರೆ, ನೋಟಿಸ್ ನೀಡದೆ ಸದನದಲ್ಲಿ ಆರೋಪ ಮಾಡಲು ಅವಕಾಶ ನೀಡುತ್ತಾರೆ. ಯಾವ ರೀತಿಯ ನಿಯಮವನ್ನು ಸ್ಪೀಕರ್ ಪಾಲಿಸುತ್ತಾರೆ ಎಂದು ಪ್ರಶ್ನಿಸಿದರು. ನಮ್ಮದೇ ಶಾಸಕರನ್ನು ಸೆಳೆಯಲು ಮೈತ್ರಿ ನಾಯಕರು ಯತ್ನಿಸಿದರು ಎಂದು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

  • ಶ್ರೀನಿವಾಸಗೌಡ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ: ಎಸ್.ಆರ್.ವಿಶ್ವನಾಥ್

    ಶ್ರೀನಿವಾಸಗೌಡ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ: ಎಸ್.ಆರ್.ವಿಶ್ವನಾಥ್

    ಬೆಂಗಳೂರು: ಜೆಡಿಎಸ್ ಶಾಸಕ ಶ್ರೀನಿವಾಸಗೌಡರ ವಿರುದ್ಧ 1 ರೂ. ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕಿಡಿ ಕಾರಿದ್ದಾರೆ.

    ರಮಡ ರೆಸಾರ್ಟ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಾಪದಲ್ಲಿ ಉತ್ತರ ನೀಡದಿರಲು ಕಾರಣ ಬೇರೆ ಇತ್ತು. ವಿಶ್ವಾಸಮತ ಯಾಚನೆಯಾಗುವುದು ಬಹಳ ಮುಖ್ಯವಾಗಿತ್ತು. ಹೀಗಾಗಿ ಸದನದಲ್ಲಿ ಉತ್ತರಿಸಲಿಲ್ಲ. ಈ ಕುರಿತು ಸಭಾದ್ಯಕ್ಷರಿಗೆ ಹಕ್ಕುಚ್ಯುತಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

    ನಾವು ಅವರಿಗೆ 5 ಕೋಟಿ ರೂ. ಆಮಿಷ ಒಡ್ಡಿದ್ದೇವೆ ಎಂದು ಸದನದಲ್ಲೇ ಆರೋಪಿಸಿದ್ದಾರೆ. ಈ ಕುರಿತು ಶ್ರೀನಿವಾಸಗೌಡ ವಿರುದ್ಧ ಸೋಮವಾರ ಇಲ್ಲವೆ ಮಂಗಳವಾರ ಒಂದು ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಹೇಳಿದ್ದಾರೆ.

    ಪ್ರಕರಣ ರದ್ದಾದ ಮೇಲೂ ಈ ರೀತಿ ಹೇಳಿಕೆ ನೀಡಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ. ನಾವು ಅವರಿಗೆ ದುಡ್ಡು ಕೊಟ್ಟಿರೋದಕ್ಕೆ ಸಾಕ್ಷಿ ನೀಡಲಿ. ಇಂತಹ ಹೇಳಿಕೆಗಳ ಮೂಲಕ ಕಲಾಪವನ್ನು ಅಡ್ಡದಾರಿಗೆ ಎಳೆಯಲು ಮುಂದಾಗಿದ್ದಾರೆ. ಕಲಾಪವನ್ನು ಒಂದು ದಿನ ಮುಂದೆ ಹಾಕಲು ಈ ರೀತಿ ಪ್ಲಾನ್ ಮಾಡಿದ್ದಾರೆ ಎಂದು ಹರಿಹಾಯ್ದರು. ಸೋಮವಾರ ಸಭಾಧ್ಯಕ್ಷರು ರೂಲಿಂಗ್ ನೀಡಿದ್ದಾರೆ, ರೂಲಿಂಗ್ ತಪ್ಪುವುದಿಲ್ಲ ಎಂಬ ಭರವಸೆ ಇದೆ ಎಂದು ಇದೇ ವೇಳೆ ತಿಳಿಸಿದರು.

    ಏನಿದು 5 ಕೋಟಿ ರಾದ್ಧಾಂತ ?
    ಆಪರೇಷನ್ ಕಮಲ ಮಾಡುವುದಕ್ಕಾಗಿ ಬಿಜೆಪಿ ಶಾಸಕರಾದ ಅಶ್ವಥ್ ನಾರಾಯಣ ಹಾಗೂ ಎಸ್.ಆರ್.ವಿಶ್ವನಾಥ್ ಅವರು ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರಿಗೆ 5 ಕೋಟಿ ರೂ. ಆಮಿಷ ಒಡ್ಡಿದ್ದರು. ಸ್ವತಃ ಇಬ್ಬರೂ ಶಾಸಕರು ನಮ್ಮ ಮನೆಗೆ ಹಣ ಕಳುಹಿಸಿದ್ದರು ಎಂದು ಶ್ರೀನಿವಾಸಗೌರ ಅವರು ಈ ಹಿಂದೆ ಮಾತ್ರವಲ್ಲದೆ, ಶುಕ್ರವಾರ ಸದನದಲ್ಲಿಯೂ ಹೆಸರು ಸಮೇತ ಪ್ರಸ್ತಾಪಿಸಿದ್ದರು. ಇದಕ್ಕೆ ಆಡಳಿತ ಪಕ್ಷದ ನಾಯಕರು ಧ್ವನಿಗೂಡಿಸಿ, ಇದಕ್ಕಿಂತ ಉದಾಹರಣೆ ಬೇಕೆ? ಆನ್ ರೆಕಾರ್ಡ್ ಸದನದಲ್ಲಿ ಶಾಸಕರೊಬ್ಬರು ಹೆಸರು ಸಮೇತ ಆಪರೇಷನ್ ಕಮಲದ ವಿವರ ನೀಡಿದ್ದಾರೆ ಎಂದು ಗದ್ದಲ ಎಬ್ಬಿಸಿದ್ದರು.

  • ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರ ನಿವಾಸದಲ್ಲಿ ಬಿರುಸಿನ ಚರ್ಚೆ

    ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರ ನಿವಾಸದಲ್ಲಿ ಬಿರುಸಿನ ಚರ್ಚೆ

    – ಸಿದ್ದರಾಮಯ್ಯ, ಎಚ್‍ಡಿಡಿ ನಿವಾಸದಲ್ಲಿ ನಿರಂತರ ಸಭೆ

    ಬೆಂಗಳೂರು: ಅತೃಪ್ತ ಶಾಸಕರನ್ನು ಕರೆ ತರಲು ಮೈತ್ರಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದು, ಒಂದೆಡೆ ಜೆಡಿಎಸ್ ವರಿಷ್ಠ ದೇವೇಗೌಡರ ಮನೆಯಲ್ಲಿ ರಣತಂತ್ರ ಇನ್ನೊಂದೆಡೆ ಸಿಎಲ್‍ಪಿ ನಾಯಕ ಸಿದ್ದರಾಮಯ್ಯನವರ ನಿವಾಸದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ.

    ಇಂದು ಬೆಳಗ್ಗೆಯಿಂದ ದೇವೇಗೌಡರ ಮನೆಯಲ್ಲಿ ಸಭೆ ಮೇಲೆ ಸಭೆ ನಡೆಸಿ, ರಣತಂತ್ರ ಹೆಣೆಯುತ್ತಿದ್ದು, ಇತ್ತ ಸಿದ್ದರಾಮಯ್ಯನವರ ಮನೆಯಲ್ಲಿ ಸಹ ಗಾಢ ಚರ್ಚೆ ನಡೆಯುತ್ತಿದೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ ಅವರ ನಿವಾಸದಲ್ಲಿ ಗಾಢ ಚರ್ಚೆಯಲ್ಲಿ ತೊಡಗಿದ್ದಾರೆ. ಕೆಲ ಅತೃಪ್ತ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ ಎಂಬ ವದಂತಿ ಹರಡುತ್ತಿದ್ದ ಬೆನ್ನಲ್ಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ನಿವಾಸಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು, ಹೇಗಾದರೂ ಮಾಡಿ ಮನವೊಲಿಸಬೇಕು ಎಂಬ ದಾರಿಯನ್ನು ನಾಯಕರು ಹುಡುಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಅತೃಪ್ತರನ್ನು ಸಂಪರ್ಕಿಸಬಹುದೇ ಎಂಬುದರ ಕುರಿತು ಮೈತ್ರಿ ನಾಯಕರು ತಲೆ ಕೆಡಿಸಿಕೊಂಡಿದ್ದು, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ, ಎಂಟಿಬಿ ನಾಗರಾಜ್ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ. ರಾಮಲಿಂಗ ರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದರಿಂದ ಅವರ ಮೂಲಕವೇ ನಾಲ್ವರನ್ನೂ ಹೇಗಾದರು ಮಾಡಿ ಸಂಪರ್ಕಿಸಿದರೆ, ನಂತರ ಮನವೊಲಿಸಬಹುದು ಎಂಬ ಆಲೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

    ನಾಲ್ವರನ್ನೂ ಸಂಪರ್ಕಿಸಿ ಸಮಾಧಾನ ಪಡಿಸಿದಲ್ಲಿ, ಕಾರ್ಯಸಾಧುವಾಗಬಹುದು ಎಂಬುದರ ಕುರಿತು ದೋಸ್ತಿ ನಾಯಕರು ಗಾಢ ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೆ, ರಾಜ್ಯಪಾಲರು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿರುವ ಬಗ್ಗೆ ಸಹ ನಾಯಕರು ಚರ್ಚೆ ನಡೆಸಿದ್ದು, ರಾಜ್ಯಪಾಲರು ವರದಿ ಕೊಟ್ಟಿರುವುದರಿಂದ ಆಗಬಹುದಾದ ಬೆಳವಣಿಗಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಇದೇ ವೇಳೆ ಸಭೆಯ ಮಧ್ಯ ಜಮೀರ್ ಆಹಮ್ಮದ್ ಸಹ ಆಗಮಿಸಿದ್ದು, ಎಲ್ಲರೂ ಸೇರಿ ಸರ್ಕಾರ ಉಳಿಸಿಕೊಳ್ಳುವ ಮಾರ್ಗೋಪಾಯಗಳನ್ನು ಹುಡುಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ನನಗೆ ಯಾವುದೇ ಹುದ್ದೆ ಬೇಡ, ಎಚ್‍ಡಿಡಿ ಭೇಟಿ ಬಳಿಕ ರಾಮಲಿಂಗಾರೆಡ್ಡಿ ಸ್ಪಷ್ಟನೆ

    ನನಗೆ ಯಾವುದೇ ಹುದ್ದೆ ಬೇಡ, ಎಚ್‍ಡಿಡಿ ಭೇಟಿ ಬಳಿಕ ರಾಮಲಿಂಗಾರೆಡ್ಡಿ ಸ್ಪಷ್ಟನೆ

    ಬೆಂಗಳೂರು: ನನಗೆ ಯಾವುದೇ ಹುದ್ದೆ ಬೇಡ, ಡಿಸಿಎಂ ಹುದ್ದೆಯೂ ಬೇಡ, ಔಪಚಾರಿಕವಾಗಿ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿದ್ದೆಯಷ್ಟೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

    ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಔಪಚಾರಿಕವಾಗಿ ಭೇಟಿಯಾಗಿದ್ದೆ ಅಷ್ಟೇ, ಅತೃಪ್ತ ಶಾಸಕರ ಮನವೊಲಿಕೆ ಕುರಿತು ಯಾವುದೇ ರೀತಿಯ ಚರ್ಚೆ ನಡೆದಿಲ್ಲ. ನಾನು ರಾಜೀನಾಮೆ ಹಿಂಪಡೆಯುವ ನಿರ್ಧಾರ ಮಾಡಿದಾಗ ಅತೃಪ್ತ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಇದೇ ವೇಳೆ ತಿಳಿಸಿದರು.

    ಎಸ್.ಟಿ.ಸೋಮಶೇಖರ್ ಹೇಳಿದ್ದು ನಿಜ:
    ಅತೃಪ್ತ ಶಾಸಕ ಸೋಮಶೇಖರ್ ಅವರು ನನ್ನ ಬಗ್ಗೆ ಹೇಳಿದ್ದು ನಿಜ. ನಾನು, ಸೋಮಶೇಖರ್ ಹಾಗೂ ವಿಶ್ವನಾಥ್ ಅವರು ಮೂವರೂ ಸೇರಿ ಮಾತನಾಡಿಕೊಂಡು ಯಾವುದೇ ಒತ್ತಡ ಬಂದರೂ, ನಮ್ಮ ರಾಜೀನಾಮೆಯನ್ನು ವಾಪಸ್ ಪಡೆಯಬಾರದು ಎಂಬ ತಿರ್ಮಾನಕ್ಕೆ ಬಂದಿದ್ದೆವು. ಆದರೆ ಅಷ್ಟು ಜನ ಮುಖಂಡರು ಬಂದು ಒತ್ತಡ ಹಾಕಿದ್ದರಿಂದ ರಾಜೀನಾಮೆ ಹಿಂಪಡೆಯಬೇಕಾಯಿತು. ಭಾನುವಾರ ರಾಜೀನಾಮೆ ವಾಪಸ್ ಪಡೆಯಬೇಕೆಂದು ನಿರ್ಧಾರ ಮಾಡಿದ ನಂತರ ಸೋಮವಾರ, ಮಂಗಳವಾರ ಮಾತನಾಡಲು ಯತ್ನಿಸಿದೆ. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

    ನನಗೆ ಯಾವುದೇ ಹುದ್ದೆ ಬೇಡ, ಡಿಸಿಎಂ ಹುದ್ದೆಯ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಹೀಗಿರುವಾಗ ನನಗೆ ಸಿಗಲು ಹೇಗೆ ಸಾಧ್ಯ. ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ. ಅವರೂ ನೀಡಿದರೂ ನನಗೆ ಬೇಡ. ಹುದ್ದೆಗಾಗಿ ನಾನು ರಾಜೀನಾಮೆ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

    ಎಸ್.ಟಿ.ಸೋಮಶೇಖರ್ ಹೇಳಿದ್ದೇನು?
    ರಾಮಲಿಂಗಾರೆಡ್ಡಿ ಅವರು ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಹಿಂಪಡೆದ ನಂತರ ಅತೃಪ್ತ ಶಾಸಕ ಎಸ್.ಟಿ.ಸೋಮಶೇಖರ್ ಮಾತನಾಡಿ, ನಾವು ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಹಿಂಪಡೆಯುತ್ತಾರೆ ಎಂದು ಊಹಿಸಿರಲಿಲ್ಲ. ರಾಜೀನಾಮೆ ಹಿಂಪಡೆಯುವ ಮೂಲಕ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ಆದರೆ, ನಾವು(ಉಳಿದ ಅತೃಪ್ತ ಶಾಸಕರು) ಎಂತಹ ಒತ್ತಡ ಹೇರಿದರೂ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ನಮ್ಮ ನಿರ್ಧಾರಕ್ಕೆ ನಾವು ಎಂದಿಗೂ ಬದ್ಧರಾಗಿರುತ್ತೇವೆ. ನಾವು ನಾಲ್ಕೂ ಜನ (ಎಚ್.ವಿಶ್ವನಾಥ್, ಮುನಿರತ್ನ, ಸೋಮಶೇಖರ್, ರಾಮಲಿಂಗಾರೆಡ್ಡಿ) ಮತನಾಡಿಕೊಂಡು ರಾಜೀನಾಮೆ ನೀಡಿದ್ದೆವು. ಇದರಲ್ಲಿ ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆದಿದ್ದಾರೆ. ನಾವು ಮೂವರೂ ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯುವುದಿಲ್ಲ ಎಂದು ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದರು.