Tag: ಆಪರೇಷನ್ ಕಮಲ

  • ಇಬ್ಬರು ಅತೃಪ್ತರಿಂದ ಸಿದ್ದರಾಮಯ್ಯನವರಿಗೆ ಕರೆ- ಎಂ.ಬಿ.ಪಾಟೀಲ್

    ಇಬ್ಬರು ಅತೃಪ್ತರಿಂದ ಸಿದ್ದರಾಮಯ್ಯನವರಿಗೆ ಕರೆ- ಎಂ.ಬಿ.ಪಾಟೀಲ್

    ವಿಜಯಪುರ: ಇಬ್ಬರು ಅತೃಪ್ತ ಶಾಸಕರು ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದರು ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಅತೃಪ್ತ ಶಾಸಕರು ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದರು. ಆದರೆ, ಸಿದ್ದರಾಮಯ್ಯ ಅವರು ಇಬ್ಬರ ಕರೆಯನ್ನೂ ಸ್ವೀಕರಿಸಿಲ್ಲ ಎಂದು ತಿಳಿಸಿದ್ದಾರೆ.

    ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ಆಗಬೇಕಿದೆ. ಈ ಕಾಯ್ದೆಯ 10ನೇ ಶೆಡ್ಯೂಲ್‍ಗೆ ತಿದ್ದುಪಡಿ ತರಬೇಕು. ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಬೇಕು. ಈ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ಸಹಕರಿಸಬೇಕಿದೆ ಎಂದರು.

    ಗೃಹ ಸಚಿವನಾಗಿ ನಾನೇ ಝೀರೋ ಟ್ರಾಫಿಕ್ ಬಳಸಿಲ್ಲ. ಅಂಥದ್ದರಲ್ಲಿ ಅತೃಪ್ತರಿಗೆ ಹೇಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲು ಸಾಧ್ಯ. ಆಡಳಿತ ಪಕ್ಷದ ಶಾಸಕರನ್ನು ಸೆಳೆದು, ಪಕ್ಷಾಂತರ ಮಾಡಿಸಿ ಅವರಿಗೆ ಸಚಿವ ಸ್ಥಾನದ ಆಫರ್ ನೀಡುವುದು ಸರಿಯಾದ ವ್ಯವಸ್ಥೆಯಲ್ಲ. ಈ ರೀತಿಯ ವ್ಯವಸ್ಥೆ ಪ್ರಾರಂಭವಾದರೆ ಬೇರೆ ರಾಜ್ಯಗಳಿಗೂ ಹರಡುತ್ತದೆ. ನಂತರ ಇದು ಕರ್ನಾಟಕದ ಫಾರ್ಮುಲಾ ಎಂದು ದೇಶಾದ್ಯಂತ ಪ್ರಚಾರ ಪಡೆಯುತ್ತದೆ. ಆಗ ರಾಜ್ಯದ ಗೌರವಕ್ಕೆ ಧಕ್ಕೆ ಬರುತ್ತದೆ ಇದನ್ನು ರಾಜಕೀಯ ನಾಯಕರು ಅರಿಯಬೇಕಿದೆ ಎಂದು ಹರಿಹಾಯ್ದರು.

    ಯಡಿಯೂರಪ್ಪನವರಿಗೆ ಶತಾಯಗತಾಯ ಅಧಿಕಾರಕ್ಕೇರುವುದು ಅನಿವಾರ್ಯವಾಗಿದೆ. ಅವರು ರಾಜಕೀಯ ಜೀವನದ ಕಟ್ಟ ಕಡೆಯ ಹಂತದಲ್ಲಿದ್ದಾರೆ. ಹೀಗಾಗಿ ನಾಲ್ಕು ವರ್ಷ ಕಾಯುವ ತಾಳ್ಮೆ ಅವರಿಗಿಲ್ಲ. ನಾಲ್ಕು ವರ್ಷದ ನಂತರ ಮುಖ್ಯಮಂತ್ರಿಯಾಗುತ್ತೇನೋ ಇಲ್ಲವೋ ಎಂದು ಈ ರೀತಿ ಮಾಡಿದ್ದಾರೆ. ಅವರ ಪಕ್ಷದ ನಿಯಮದಂತೆ ವಯಸ್ಸಿನ ಪರಿಮಿತಿಯಲ್ಲಿ ಆಡಳಿತ ನಡೆಸಬೇಕಾಗಿದೆ. ಹೀಗಾಗಿ ಯಡಿಯೂರಪ್ಪನವರು ತರಾತುರಿಯಲ್ಲಿ ಸರ್ಕಾರ ರಚನೆ ಮಾಡಿದ್ದು, ಇದು ಅನೈತಿಕ ಸರ್ಕಾರವಾಗಿದೆ. ಈ ಸರ್ಕಾರ ತುಂಬಾ ದಿನ ಉಳಿಯುವುದಿಲ್ಲ. ಇದರ ಅವಧಿ ಕೇವಲ ಆರು ತಿಂಗಳಿಂದ ಒಂದು ವರ್ಷ ಮಾತ್ರ ಎಂದು ಅವರು ವಾಗ್ದಾಳಿ ನಡೆಸಿದರು.

    ಸಿದ್ದರಾಮಯ್ಯ ಅವರಿಗೆ ಕರೆ ಮಾಡಿರುವ ಅತೃಪ್ತರು ಯಾರೆಂದು ತನಗೆ ಗೊತ್ತು, ಆದರೆ ಮಾಧ್ಯಮದ ಮುಂದೆ ನಾನು ಹೇಳೋದು ಸರಿಯಿರಲ್ಲ. ಅದನ್ನು ಸಿದ್ದರಾಮಯ್ಯ ಅವರೇ ಹೇಳುತ್ತಾರೆ ಎಂದು ಹೇಳುವ ಮೂಲಕ ಕರೆ ಮಾಡಿದವರು ಯಾರು ಎಂಬುದನ್ನು ಎಂ.ಬಿ ಪಾಟೀಲ್ ಬಾಯಿ ಬಿಟ್ಟಿಲ್ಲ.

  • ಯಡಿಯೂರಪ್ಪ ಪ್ರಮಾಣ ವಚನ – ದೇವಸ್ಥಾನಕ್ಕೆ ತೆರಳಿ ವಿಜಯದ ಕುಂಕುಮ ಧರಿಸಿದ ಅತೃಪ್ತರು

    ಯಡಿಯೂರಪ್ಪ ಪ್ರಮಾಣ ವಚನ – ದೇವಸ್ಥಾನಕ್ಕೆ ತೆರಳಿ ವಿಜಯದ ಕುಂಕುಮ ಧರಿಸಿದ ಅತೃಪ್ತರು

    ಮುಂಬೈ: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಯಾವ ರೀತಿ ಮಂದಹಾಸ ಮೂಡಿದೆಯೋ ಅದೇ ರೀತಿ ಅತೃಪ್ತ ಶಾಸಕರಲ್ಲೂ ಮೂಡಿದ್ದು, ನಾವು ಗೆದ್ದೆವು ಎಂದು ಸಂತಸ ಪಟ್ಟಿದ್ದಾರೆ.

    ಅತೃಪ್ತ ಶಾಸಕರು ಸಂಜೆ ಕೊಲ್ಲಾಪುರದ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿದ್ದು, ದೇವಾಲಯದಲ್ಲಿ ವಿಜಯದ ಸಂಕೇತವಾಗಿ ಕುಂಕುಮವನ್ನು ಧರಿಸಿ ಪರಸ್ಪರ ಸಂತಸ ಹಂಚಿಕೊಂಡಿದ್ದಾರೆ. ನಾವು ಅಂದುಕೊಂಡಂತೆ ಎಲ್ಲ ನಡೆದಿದ್ದು, ಯಾವುದೂ ಹುಸಿಯಾಗಿಲ್ಲ ನಾವು ಗೆದ್ದಿದ್ದೇವೆ ಎಂದು ಸಂಭ್ರಮಿಸಿದ್ದಾರೆ.

    ದೇವಸ್ಥಾನಕ್ಕೆ ತೆರಳಿದ ಸಂದರ್ಭದಲ್ಲಿ ಕೇವಲ ದೇವಿಯ ದರ್ಶನ ಮಾಡಿ ಹೊರ ಬಂದಿಲ್ಲ. ದೇವಸ್ಥಾನದ ಜಗಲಿಯ ಬಳಿ ಕೂತು ಮಾತನಾಡಿಕೊಂಡು ಗಂಟೆಗಟ್ಟಲೇ ಕಾಲ ಕಳೆದಿದ್ದು, ಗೆಲವು ನಮ್ಮದೇ ಎಂದು ಹೇಳಿಕೊಂಡು ಅತೃಪ್ತ ಶಾಸಕರು ಹರಟೆ ಹೊಡೆದಿದ್ದಾರೆ. ಗೆದ್ದೇ ಗೆಲ್ಲುತ್ತೇವೆ ಇದರಲ್ಲಿ ಯಾವುದೇ ಆತಂಕ, ಸಂಶಯವಿಲ್ಲ ಎಂದು ಈ ಹಿಂದೆಯೇ ಹೇಳಿದ್ದೇವೆ ಎಂದು ಅತೃಪ್ತ ಶಾಸಕರು ತಮ್ಮ ಆಪ್ತರ ಬಳಿ ಸಂತಸ ಹಂಚಿಕೊಂಡಿದ್ದಾರೆ.

    ಕೊಲ್ಲಾಪುರದ ಈ ಮಹಾಲಕ್ಷ್ಮೀ ದೇವಾಲಯ ರಮೇಶ್ ಜಾರಕಿಹೊಳಿ ಅವರ ಮನೆ ದೇವರಾಗಿದ್ದು, ಈ ದೇವಸ್ಥಾನ ಬೆಳಗಾವಿಯಿಂದ ಕೇವಲ 100 ಕಿ.ಮೀ.ದೂರದಲ್ಲಿದೆ.

    ದು:ಖವೇ ಇಲ್ಲ
    ಅನರ್ಹತೆ ಎನ್ನುವ ದು:ಖ ಯಾವ ಅತೃಪ್ತ ಶಾಸಕರಲ್ಲೂ ಸಹ ಕಂಡಿಲ್ಲ. ನಮ್ಮನ್ನು ಅನರ್ಹತೆಗೊಳಿಸಿದರೂ ಕೋರ್ಟ್ ನಲ್ಲಿ ನಾವು ಗೆಲ್ಲುವ ಭರವಸೆ ನಮಗಿದೆ. ಯಾವುದರ ಕುರಿತು ಸಹ ನಮಗೆ ಆತಂಕವಿಲ್ಲ. ಅನರ್ಹತೆ ಕುರಿತು ಕೋರ್ಟಿನಲ್ಲಿ ಹೇಗೆ ಗೆಲ್ಲಬೇಕೆಂದು ನಮಗೆ ತಿಳಿದಿದೆ ಎಂದು ಅತೃಪ್ತರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

    ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ಅನರ್ಹತೆ ಕುರಿತ ಅರ್ಜಿ ವಿಚಾರಣೆಗೆ ಬರಲಿದ್ದು, ನಂತರ ಎಲ್ಲರೂ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಮೇಶ್ ಜಾರಕಿಹೊಳಿ, ಪ್ರತಾಪ್‍ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ, ಆರ್.ಶಂಕರ್ ಸೇರಿದಂತೆ ಎಲ್ಲ ಅತೃಪ್ತ ಶಾಸಕರೂ ಸಹ ದೇವಸ್ಥಾನಕ್ಕೆ ಒಟ್ಟಿಗೆ ಭೇಟಿ ನೀಡಿದ್ದಾರೆ.

  • ಗೊಂದಲಗಳ ನಡುವೆ ಹೇಗೆ ಆಡಳಿತ ನಡೆಸುತ್ತಾರೋ ನೋಡುತ್ತೇನೆ: ಪರಮೇಶ್ವರ್

    ಗೊಂದಲಗಳ ನಡುವೆ ಹೇಗೆ ಆಡಳಿತ ನಡೆಸುತ್ತಾರೋ ನೋಡುತ್ತೇನೆ: ಪರಮೇಶ್ವರ್

    ತುಮಕೂರು: ಒಂದೆಡೆ ಅತೃಪ್ತ ಶಾಸಕರ ಗೊಂದಲ, ಇನ್ನೊಂದೆಡೆ ಮನಿ ಬಿಲ್ ಪಾಸ್ ಮಾಡುವುದು ಸೇರಿದಂತೆ ವಿವಿಧ ಅಡೆತಡೆಗಳಿದ್ದು, ಈ ಎಲ್ಲ ಗೊಂದಲಗಳ ನಡುವೆ ಹೇಗೆ ಆಡಳಿತ ನಡೆಸುತ್ತಾರೋ ನೋಡುತ್ತೇನೆ ಎಂದು ನಿರ್ಗಮಿತ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕುಟುಕಿದ್ದಾರೆ.

    ತುಮಕೂರಿನ ಗೊಲ್ಲಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಎಂಟು ತಿಂಗಳಲ್ಲಿ ಹಣಕಾಸು ಆಯವ್ಯಯದ ಅನುಮತಿಯನ್ನು ಸದನದಲ್ಲಿ ಪಡೆದುಕೊಳ್ಳಬೇಕು. ಹೀಗಾಗಿ ಅವರು ಅಧಿಕಾರ ಸ್ವೀಕರಿಸಿದ ತಕ್ಷಣವೇ ಮನಿ ಬಿಲ್ ಪಾಸ್ ಮಾಡಿಕೊಳ್ಳಬೇಕಾಗುತ್ತದೆ. ಸಂಖ್ಯಾ ಬಲದ ಮೇಲೆ ಬಿಲ್ ಪಾಸ್ ಆಗುತ್ತದೆ. ಒಂದು ಸರ್ಕಾರ ಅಸ್ತಿತ್ವಕ್ಕೆ ಬರಬೇಕಾದಲ್ಲಿ 113 ಸ್ಥಾನ ಇರಬೇಕು. ಇದನ್ನು ಅವರು ಸಾಬೀತು ಮಾಡಬೇಕು. ಯಾವ ರೀತಿ ಸಾಬೀತು ಮಾಡುತ್ತಾರೆ. ಇಂತಹ ಹಲವು ಸವಾಲುಗಳನ್ನು ಹೇಗೆ ಬಗೆಹರಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದು ತಿಳಿಸಿದ್ದಾರೆ.

    ಇದೀಗ ರಾಜ್ಯದಲ್ಲಿ ಹೊಸ ರಾಜಕಾರಣವನ್ನು ನೋಡ್ತಿದ್ದೇವೆ. ಶಾಸಕರನ್ನು ಮನವೊಲಿಸಿ, ಆಸೆ, ಆಮೀಷಗಳನ್ನೊಡ್ಡಿ ರಾಜೀನಾಮೆ ಕೊಡಿಸಿ ಪಕ್ಷ ಬದಲಾಯಿಸೋ ಘಟನೆಗಳು ನಡೆಯುತ್ತಿವೆ. 2008ರಲ್ಲಿ ಬಿ.ಎಸ್.ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ಇಂತಹ ಘಟನೆಗಳು ನಡೆದಿದ್ದವು. ಇಂದು ಅದೇ ರೀತಿಯ ಕೆಟ್ಟ ವಾತಾವರಣವನ್ನು ನೋಡುತ್ತಿದ್ದೇವೆ. ವೈಯಕ್ತಿಕವಾಗಿ ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಒಳ್ಳೇಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈಗಿನ್ನು ಮೂವರು ಶಾಸಕರನ್ನು ಮಾತ್ರ ಸ್ಪೀಕರ್ ಅಮಾನತು ಮಾಡಿದ್ದಾರೆ. ಬಹುಶಃ ಉಳಿದವರ ಭವಿಷ್ಯ ಏನಾಗುತ್ತೋ ಗೊತ್ತಿಲ್ಲ. ಅಮಾನತುಗೊಳಿಸಿದ ಆಧಾರದ ಮೇಲೆ ಕೂಡ 113 ಸಂಖ್ಯಾಬಲ ಕಡಿಮೆ ಆಗಬಹುದು. ಉಳಿದವರ ರಾಜೀನಾಮೆ ವಿಚಾರದಲ್ಲಿ ಸ್ಪಿಕರ್ ಏನಾದರೂ ತೀರ್ಮಾನ ಕೈಗೊಳ್ಳಲೇಬೇಕು. ಅವರ ರಾಜೀನಾಮೆಯನ್ನು ಪುರಸ್ಕರಿಸಬೇಕು ಇಲ್ಲವೆ ತಿರಸ್ಕರಿಸಬೇಕು. ಹತ್ತನೇ ಶೆಡ್ಯೂಲ್ ಪ್ರಕಾರ ಅವರನ್ನು ಅನರ್ಹ ಮಾಡಬೇಕಾಗುತ್ತದೆ. ಈಗಾಗಲೇ ಸ್ಪೀಕರ್ ಪ್ರಕ್ರಿಯೆ ಶುರು ಮಾಡಿದ್ದಾರೆ. ಸ್ಪೀಕರ್ ಗೆ 14 ದಿನಗಳ ಕಾಲ ಸಮಯ ಕಾಲಾವಕಾಶವಿದೆ. ಇವತ್ತು, ನಾಳೆ ಯಾವ ತೀರ್ಮಾನ ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದು ತಿಳಿಸಿದರು.

    ಹೊಸ ಸರ್ಕಾರ ಬಂದ ನಂತರ, ಹೊಸ ಸ್ಪೀಕರ್ ಅಯ್ಕೆಗೆ ಈಗಿನ ಸ್ಪೀಕರ್ ಅನುವು ಮಾಡಿಕೊಡಬೇಕು. ಅಷ್ಟರೊಳಗೆ ಅತೃಪ್ತರ ಬಗ್ಗೆ ನಿರ್ಧಾರ ಮಾಡಬೇಕು. ನಾವು ಅತೃಪ್ತರ ಮನವೊಲಿಸಿಲ್ಲ. ಅವರು ನಮಗೆ ಕೊಟ್ಟಿರುವ ಸಂದೇಶಗಳು ಉತ್ತೇಜನಕಾರಿಯಾಗಿಲ್ಲ. ರಾಜಿನಾಮೆಯನ್ನು ವಾಪಸ್ ಪಡೆಯಲ್ಲ ಎಂಬ ಸಂದೇಶ ಮಾತ್ರ ಕಳುಹಿಸಿದ್ದಾರೆ. ಹೀಗಾಗಿ ಅವರಿಗೆ ಪದೇ ಪದೆ ಒತ್ತಾಯ ಮಾಡುವುದು ಸರಿಯಲ್ಲ ಎಂದರು.

    ನನ್ನ ಪಾತ್ರವಿಲ್ಲ
    ರಾಜಣ್ಣ ನಾನು ಆತ್ಮೀಯ ಸ್ನೇಹಿತರು. ಯಾವ ಕಾರಣಕ್ಕೆ ಸೂಪರ್ ಸೀಡ್ ಆಗಿದೆ ಎನ್ನುವುದು ಅವರಿಗೆ ತಿಳಿದಿದೆ. ಅನಾವಶ್ಯಕವಾಗಿ ನನ್ನನ್ನು ಹೊಣೆ ಮಾಡುವುದು, ದೂಷಣೆ ಮಾಡುವುದು, ಸರಿಯಲ್ಲ. ಅವರು ನಮ್ಮ ಸಂಸ್ಥೆಗಳ ವಿರುದ್ಧ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇದು ಸಾರ್ವಜನಿಕರ ಆಸ್ತಿ ರಾಜಣ್ಣ ಮಾತ್ರವಲ್ಲ, ಯಾರು ಬೇಕಾದರೂ ತನಿಖೆ ಮಾಡಬಹುದು ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

  • ಬಿಜೆಪಿಯವರು ಮಂಗನಾಟ ಆಡುತ್ತಿದ್ದಾರೆ: ಎಸ್.ಆರ್.ಪಾಟೀಲ್

    ಬಿಜೆಪಿಯವರು ಮಂಗನಾಟ ಆಡುತ್ತಿದ್ದಾರೆ: ಎಸ್.ಆರ್.ಪಾಟೀಲ್

    ಬೆಂಗಳೂರು: ಬಿಜೆಪಿ ಇಂತಹ ದೊಡ್ಡ ಸಾಹಸಕ್ಕೆ ಇಳಿಯಬಾರದಿತ್ತು, ಅವರು ಮಾಡಿದ ಪಾಪಕ್ಕೆ ತಕ್ಕ ಶಿಕ್ಷೆಯಾಗುತ್ತದೆ ಎಂದು ಶಾಸಕ, ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸ ಮತಯಾಚನೆಗೂ ಮುನ್ನವೇ ಬಿಜೆಪಿಯವರ ಕೋಟು, ಸೂಟು ರೆಡಿಯಾಗಿತ್ತು. ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನಕ್ಕಾಗಿ ತುದಿಗಾಲಲ್ಲಿ ನಿಂತು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಪ್ರಮಾಣವಚನ ಸ್ವೀಕರಿಸಲು ಸಹ ಕಾತರದಿಂದ ಕಾಯುತ್ತಿದ್ದರು. ಆದರೆ ಈವರೆಗೂ ಸರ್ಕಾರವೇ ರಚನೆಯಾಗಿಲ್ಲ ಎಂದು ವ್ಯಂಗ್ಯವಾಡಿದರು.

    ನನ್ನ 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ರಾಜಕಾರಣವನ್ನು ನೋಡಿಲ್ಲ. ಬಿಜೆಪಿಯವರು ಮಂಗನಾಟದಂತೆ ಆಡುತ್ತಿದ್ದಾರೆ. ಆಪರೇಷನ್ ಕಮಲದ ಮೂಲಕ ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಇದರಿಂದ ಬಿಜೆಪಿಯವರ ಪರಿಸ್ಥಿತಿ ನೆಟ್ಟಗಾಗುವುದಿಲ್ಲ ಎಂದು ಕಿಡಿ ಕಾರಿದರು.

    ಅತೃಪ್ತ ಶಾಸಕರ ಅನರ್ಹತೆ ವಿಚಾರ ಸ್ಪೀಕರ್ ಅಂಗಳದಲ್ಲಿದ್ದು, ಸ್ಪೀಕರ್ ತೀರ್ಮಾನವೇ ಅಂತಿಮ. ಬಿಜೆಪಿಯವರ ಸರ್ಕಾರ ರಚನೆಯ ಕಾತರಕ್ಕೆ ಹೈ ಕಮಾಂಡ್ ಬ್ರೇಕ್ ಹಾಕಿದ್ದು, ಅವರ ಪರಿಸ್ಥಿತಿ ನೆನಸಿಕೊಂಡರೆ ಮರುಕವಾಗುತ್ತದೆ. ಬಿಜೆಪಿಯಿಂದ ಸ್ಥಿರ ಸರ್ಕಾರ ನೀಡಲು ಸಾಧ್ಯವೇ ಇಲ್ಲ, ಅವರಿಂದ ರಾಜ್ಯದ ಅಭಿವೃದ್ಧಿ ಕನಸಿನ ಮಾತು ಎಂದು ಎಸ್.ಆರ್.ಪಾಟೀಲ್ ಟೀಕಿಸಿದರು.

  • ಕಮಲ್‍ನಾಥ್ ಒಪ್ಪಿದ್ರೆ ಬಿಜೆಪಿಯ 4 ಶಾಸಕರು ಕಾಂಗ್ರೆಸ್ ಸೇರ್ಪಡೆ: ಕಂಪ್ಯೂಟರ್ ಬಾಬಾ

    ಕಮಲ್‍ನಾಥ್ ಒಪ್ಪಿದ್ರೆ ಬಿಜೆಪಿಯ 4 ಶಾಸಕರು ಕಾಂಗ್ರೆಸ್ ಸೇರ್ಪಡೆ: ಕಂಪ್ಯೂಟರ್ ಬಾಬಾ

    ಭೋಪಾಲ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವ ಸರ್ಕಾರವನ್ನು ಬೀಳಿಸಲು ಮುಂದಾದ ರಾಜ್ಯ ಬಿಜೆಪಿ ನಾಯಕರಿಗೆ ಅವರದ್ದೇ ಕಂಪ್ಯೂಟರ್ ಬಾಬಾ ಶಾಕ್ ಕೊಟ್ಟಿದ್ದಾರೆ.

    ಬಿಜೆಪಿಯ ನಾಲ್ಕು ಜನ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಸಮಯ ಬಂದಾಗ ಎಲ್ಲರ ಮುಂದೆ ಹಾಜರು ಪಡೆಸುತ್ತೇನೆ. ಸಿಎಂ ಕಮಲ್‍ನಾಥ್ ಹೇಳಿದರೆ ಅವರ ಮುಂದೆ ಹಾಜರು ಪಡಿಸುತ್ತೇನೆ. ಬಿಜೆಪಿ ಆ ನಾಲ್ಕು ಜನ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಕಂಪ್ಯೂಟರ್ ಬಾಬಾ ಬಾಂಬ್ ಸಿಡಿಸಿದ್ದಾರೆ.

    ಕಂಪ್ಯೂಟರ್ ಬಾಬಾ ಎಂದೇ ಖ್ಯಾತಿಯಾಗಿರುವ ನಾಮದೇವ್ ದಾಸ್ ತ್ಯಾಗಿ ಅವರು ಬಿಜೆಪಿ ಶಿವರಾಜ್‍ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರದಲ್ಲಿ ರಾಜ್ಯ ದರ್ಜೆಯ ಮಂತ್ರಿ ಸ್ಥಾನಮಾನ ಪಡೆದಿದ್ದರು. ನರ್ಮದಾ ನದಿಯ ಸಂರಕ್ಷಣಾ ಸಮಿತಿ ಸದಸ್ಯ ಸ್ಥಾನ ಪಡೆದಿದ್ದ ಕಂಪ್ಯೂಟರ್ ಬಾಬಾ, ನರ್ಮಾನಂದ ಮಹಾರಾಜ್, ಹರಿಹರನಂದ ಮಹಾರಾಜ್, ಭೈಯು ಮಹಾರಾಜ್‍ಜಂದ್ ಹಾಗೂ ಪಂಡಿತ್ ಯೋಗೇಂದ್ರ ಮಹಂತ್ ಅವರಿಗೆ ಮಧ್ಯಪ್ರದೇಶ ಸರ್ಕಾರ ಮಂತ್ರಿ ಸ್ಥಾನವನ್ನು ಕಲ್ಪಿಸಿತ್ತು. ಸದ್ಯ ಕಮಲ್‍ನಾಥ್ ನೇತೃತ್ವದ ಸರ್ಕಾರದಲ್ಲಿ ಕಂಪ್ಯೂಟರ್ ಬಾಬಾ ನರ್ಮದಾ, ಶಿಪ್ರಾ ಹಾಗೂ ಮಂದಾಕಿನಿ ನದಿ ಟ್ರಸ್ಟ್ ನ ಅಧ್ಯಕ್ಷರಾಗಿದ್ದಾರೆ.

    ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಬುಧವಾರ ನಡೆದ ಕಲಾಪದಲ್ಲಿ ಬಿಜೆಪಿ ಶಾಸಕರಿಬ್ಬರು ಕ್ರಿಮಿನಲ್ ಅಪರಾಧ ತಿದ್ದುಪಡಿ ತರಲು ಬೆಂಬಲ ನೀಡುವ ಮಸೂದೆಯ ಪರ ಮತವನ್ನು ಹಾಕಿ ಶಾಕ್ ನೀಡಿದ್ದರು. ಈ ಬೆನ್ನಲ್ಲೇ ಕಂಪ್ಯೂಟರ್ ಬಾಬಾ ತಮ್ಮದೆ ಪಕ್ಷದ ನಾಯಕರು ನಡೆಸಿದ್ದ ಆಪರೇಷನ್‍ಗೆ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಮಧ್ಯಪ್ರದೇಶದಲ್ಲಿ ಅಧಿಕಾರ ಹಿಡಿಯುವ ಕನಸು ಹೊತ್ತಿದ್ದ ಬಿಜೆಪಿಗೆ ಆಘಾತವಾಗಿದೆ.

    ಕಮಲ್‍ನಾಥ್ ನೇತೃತ್ವದ ಸರ್ಕಾರವು ವಿಶ್ವಾಸಮತ ಕಳೆದುಕೊಳ್ಳಲಿದೆ ಎಂದು ವಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಅವರು ಹೇಳಿದ್ದರು. ಆದರೆ ಈಗ ಎಲ್ಲವೂ ತಲೆ ಕೆಳಗಾಗಿದ್ದು, ಕಾಂಗ್ರೆಸ್ ಮತ್ತೆ ಹೆಚ್ಚಿನ ಸಂಖ್ಯಾಬಲ ಸಿಕ್ಕಂತಾಗಿದೆ. ಸರ್ಕಾರಕ್ಕೆ ಬೆಂಬಲ ನೀಡಿದ ಶಾಸಕರ ಪೈಕಿ ಒಬ್ಬರಾದ ನಾರಾಯಣ್ ತ್ರಿಪಾಠಿ ಅವರು, ಇದು ನನ್ನ ಘರ್ ವಾಪಸಿ ಎಂದು ಬುಧವಾರ ಘೋಷಿಸಿದ್ದರು.

    ಬುಧವಾರವಷ್ಟೇ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ವಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಅವರು, ಪಕ್ಷದ ನಂಬರ್ 1 ಮತ್ತು ನಂಬರ್ 2 ವ್ಯಕ್ತಿಗಳಿಂದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಬಂದಲ್ಲಿ 24 ಗಂಟೆಯ ಒಳಗಡೆ ಕಮಲ್‍ನಾಥ್ ಸರ್ಕಾರ ಬೀಳಲಿದೆ ಎಂದು ಹೇಳಿದ್ದರು.

    ಕಮಲ್‍ನಾಥ್ ಸರ್ಕಾರವನ್ನು ಬೀಳಿಸಲು ನಾವು ಕಾಯುತ್ತಿದ್ದೇವೆ. ಮಧ್ಯಪ್ರದೇಶದ ಪರಿಸ್ಥಿತಿ ಕರ್ನಾಟಕಕ್ಕಿಂತ ಅತ್ಯಂತ ಕೆಟ್ಟದಾಗಿದೆ. ಇಲ್ಲಿನ ಸರ್ಕಾರವು ಏಳು ತಿಂಗಳು ಪೂರ್ಣಗೊಳಿಸಿದ್ದೆ ಆಶ್ಚರ್ಯಕರ ಹಾಗೂ ಇಲ್ಲಿಗೆ ಕಮಲ್‍ನಾಥ್ ಆಡಳಿತವನ್ನು ನಿಲ್ಲಿಸಬೇಕಿದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ನಾವು ಸರ್ಕಾರ ರಚನೆಯ ಆತುರದಲ್ಲಿ ಇರಲಿಲ್ಲ. ಆದರೆ ಇಂದಿನ ಪರಿಸ್ಥಿತಿ ನಮಗೆ ಅನುಕೂಲವಾಗಿದೆ ಎಂದು ತಿಳಿಸಿದ್ದರು.

    ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿದೆ. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಚಿಂದ್ವಾರಾ ಕ್ಷೇತ್ರದಿಂದ ಸಿಎಂ ಕಮಲ್‍ನಾಥ್ ಪುತ್ರ ನಕುಲ್ ನಾಥ್ ಜಯಗಳಿಸಿದ್ದರು.

  • ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲಕ್ಕೆ ‘ಆಪರೇಷನ್’

    ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲಕ್ಕೆ ‘ಆಪರೇಷನ್’

    ಭೋಪಾಲ್: ಮಧ್ಯಪ್ರದೇಶದಲ್ಲಿ ಕಮಲ್‍ನಾಥ್ ನೇತೃತ್ವದ ಸರ್ಕಾರ ಅಸ್ಥಿರಗೊಳಿಸಲು ಮುಂದಾಗಿದ್ದ ಕಮಲಪಡೆಗೆ ಕಾಂಗ್ರೆಸ್ ಘರ್ ವಾಪಸಿ ಶಾಕ್ ಕೊಟ್ಟಿದೆ.

    ಮಧ್ಯಪ್ರದೇಶದ ವಿಧಾನಸಭೆಯಲ್ಲಿ ಬುಧವಾರ ನಡೆದ ಕಲಾಪದಲ್ಲಿ ಬಿಜೆಪಿ ಶಾಸಕರಿಬ್ಬರು ಕ್ರಿಮಿನಲ್ ಅಪರಾಧ ತಿದ್ದುಪಡಿ ತರಲು ಬೆಂಬಲ ನೀಡುವ ಮಸೂದೆಯ ಪರ ಮತವನ್ನು ಹಾಕಿ ಶಾಕ್ ನೀಡಿದ್ದಾರೆ. ಸರ್ಕಾರಕ್ಕೆ ಬೆಂಬಲ ನೀಡಿದ ಶಾಸಕರ ಪೈಕಿ ಒಬ್ಬರಾದ ನಾರಾಯಣ್ ತ್ರಿಪಾಠಿ ಅವರು, ಇದು ನನ್ನ ಘರ್ ವಾಪಸಿ ಎಂದು ಘೋಷಿಸಿದ್ದಾರೆ.

    ಕಮಲ್‍ನಾಥ್ ನೇತೃತ್ವದ ಸರ್ಕಾರವು ವಿಶ್ವಾಸಮತ ಕಳೆದುಕೊಳ್ಳಲಿದೆ ಎಂದು ವಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಅವರು ಹೇಳಿದ್ದರು. ಆದರೆ ಈಗ ಎಲ್ಲವೂ ತಲೆ ಕೆಳಗಾಗಿದ್ದು, ಕಾಂಗ್ರೆಸ್ ಮತ್ತೆ ಎರಡು ಸಂಖ್ಯಾಬಲ ಸಿಕ್ಕಂತಾಗಿದೆ.

     

    ಕಾಂಗ್ರೆಸ್ ಶಾಸಕರಾಗಿದ್ದ ನಾರಾಯಣ್ ತ್ರಿಪಾಠಿ ಅವರು 2014 ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ಈಗ ಮರಳಿ ಕಾಂಗ್ರೆಸ್ ಗೂಡು ಸೇರಿಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ ಕಮಲ್‍ನಾಥ್ ಸರ್ಕಾರದ ಮಸೂದೆಯನ್ನು ಬೆಂಬಲಿಸಿದ ಮತ್ತೊಬ್ಬ ಬಿಜೆಪಿ ಶಾಸಕ ಶರದ್ ಕೋಲ್ ಎಂದು ತಿಳಿಸಿದ್ದಾರೆ.

    ನನ್ನ ರಾಜಕೀಯ ಭವಿಷ್ಯವನ್ನು ಹಾಳು ಮಾಡಲು ಬಿಜೆಪಿಯಲ್ಲಿ ಪ್ರಯತ್ನಗಳು ನಡೆದಿವೆ. ಅಷ್ಟೇ ಅಲ್ಲದೆ ಮಾಜಿ ಸಿಎಂ ಶಿವರಾಜ್ ಚೌಹಾಣ್ ನೇತೃತ್ವದ ಸರ್ಕಾರವು ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ನನ್ನ ಕ್ಷೇತ್ರವಾದ ಮೈಹಾರ್ ನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಆರೋಪಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಕಮಲ್‍ನಾಥ್ ಅವರು, ನಮ್ಮ ಸರ್ಕಾರ ವಿಶ್ವಾಸಮತ ಕಳೆದುಕೊಳ್ಳುತ್ತದೆ ಎಂದು ಬಿಜೆಪಿ ನಾಯಕರು ಪದೇ ಪದೇ ಹೇಳುತ್ತಿದ್ದರು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇರುವುದರಿಂದ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಉಳಿಯಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಬಿಜೆಪಿಯ ಇಬ್ಬರು ಶಾಸಕರು ನಮಗೆ ಬೆಂಬಲ ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಪ್ರಸ್ತುತ 230 ಸದಸ್ಯರನ್ನು ಹೊಂದಿರುವ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಪರ ಸ್ಪೀಕರ್ ಸೇರಿ 121 ಶಾಸಕರ ಬಲವನ್ನು ಹೊಂದಿದೆ.

    ಇದಕ್ಕೂ ಮುನ್ನ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ವಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಅವರು, ಪಕ್ಷದ ನಂಬರ್ 1 ಮತ್ತು ನಂಬರ್ 2 ವ್ಯಕ್ತಿಗಳಿಂದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಬಂದಲ್ಲಿ 24 ಗಂಟೆಯ ಒಳಗಡೆ ಕಮಲ್‍ನಾಥ್ ಸರ್ಕಾರ ಬೀಳಲಿದೆ ಎಂದು ಹೇಳಿದ್ದರು.

    ಕಮಲ್‍ನಾಥ್ ಸರ್ಕಾರವನ್ನು ಬೀಳಿಸಲು ನಾವು ಕಾಯುತ್ತಿದ್ದೇವೆ. ಮಧ್ಯಪ್ರದೇಶದ ಪರಿಸ್ಥಿತಿ ಕರ್ನಾಟಕಕ್ಕಿಂತ ಅತ್ಯಂತ ಕೆಟ್ಟದಾಗಿದೆ. ಇಲ್ಲಿನ ಸರ್ಕಾರವು ಏಳು ತಿಂಗಳು ಪೂರ್ಣಗೊಳಿಸಿದ್ದೆ ಆಶ್ಚರ್ಯಕರ ಹಾಗೂ ಇಲ್ಲಿಗೆ ಕಮಲ್‍ನಾಥ್ ಆಡಳಿತವನ್ನು ನಿಲ್ಲಿಸಬೇಕಿದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ನಾವು ಸರ್ಕಾರ ರಚನೆಯ ಆತುರದಲ್ಲಿ ಇರಲಿಲ್ಲ. ಆದರೆ ಇಂದಿನ ಪರಿಸ್ಥಿತಿ ನಮಗೆ ಅನುಕೂಲವಾಗಿದೆ ಎಂದು ತಿಳಿಸಿದ್ದರು.

    ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2 ಕ್ಷೇತ್ರದಲ್ಲಿ ಜಯಗಳಿಸಿದೆ. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಚಿಂದ್ವಾರಾ ಕ್ಷೇತ್ರದಿಂದ ಸಿಎಂ ಕಮಲ್‍ನಾಥ್ ಪುತ್ರ ನಕುಲ್ ನಾಥ್ ಜಯಗಳಿಸಿದ್ದರು.

  • ಒಂದೇ ಒಂದು ಆದೇಶ ಸಿಕ್ಕಿದ್ರೆ 24 ಗಂಟೆಯಲ್ಲಿ ಕೈ ಸರ್ಕಾರ ಪತನ: ಮಧ್ಯಪ್ರದೇಶ ವಿಪಕ್ಷ ನಾಯಕ

    ಒಂದೇ ಒಂದು ಆದೇಶ ಸಿಕ್ಕಿದ್ರೆ 24 ಗಂಟೆಯಲ್ಲಿ ಕೈ ಸರ್ಕಾರ ಪತನ: ಮಧ್ಯಪ್ರದೇಶ ವಿಪಕ್ಷ ನಾಯಕ

    ಭೋಪಾಲ್: ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸಿದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಕಮಲ ಅರಳಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮಂಗಳವಾರ ವಿಶ್ವಾಸ ಮತಯಾಚನೆಯಲ್ಲಿ ಕೇವಲ 99 ಮತಗಳನ್ನು ಪಡೆದಿತ್ತು. ಆದರೆ ಬಿಜೆಪಿಯು 105 ಸಂಖ್ಯಾಬಲದಿಂದ ದೋಸ್ತಿಯನ್ನು ಸೋಲಿಸಿದೆ. ಹೀಗಾಗಿ ಎಚ್.ಡಿ.ಕುಮಾರಸ್ವಾಮಿ ಅವರು ನಿನ್ನೆ ರಾತ್ರಿಯೇ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಕಮಲ್‍ನಾಥ್ ನೇತೃತ್ವದ ಸರ್ಕಾರವನ್ನು ಬೀಳಿಸಲು ಬಿಜೆಪಿ ಆಪರೇಷನ್ ಆರಂಭಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ವಿಧಾನಸಭೆಯ ವಿಪಕ್ಷ ನಾಯಕ ಗೋಪಾಲ್ ಭಾರ್ಗವ್ ಅವರು ಹೈಕಮಾಂಡ್ ಆದೇಶಕ್ಕಾಗಿ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಪಕ್ಷದ ನಂಬರ್ 1 ಮತ್ತು ನಂಬರ್ 2 ವ್ಯಕ್ತಿಗಳಿಂದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದೇಶ ಬಂದಲ್ಲಿ 24 ಗಂಟೆಯ ಒಳಗಡೆ ಕಮಲ್‍ನಾಥ್ ಸರ್ಕಾರ ಬೀಳಲಿದೆ ಎಂದು ಹೇಳಿದ್ದಾರೆ.

    ಕಮಲ್‍ನಾಥ್ ಸರ್ಕಾರವನ್ನು ಬೀಳಿಸಲು ನಾವು ಕಾಯುತ್ತಿದ್ದೇವೆ. ಮಧ್ಯಪ್ರದೇಶದ ಪರಿಸ್ಥಿತಿ ಕರ್ನಾಟಕಕ್ಕಿಂತ ಅತ್ಯಂತ ಕೆಟ್ಟದಾಗಿದೆ. ಇಲ್ಲಿನ ಸರ್ಕಾರವು ಏಳು ತಿಂಗಳು ಪೂರ್ಣಗೊಳಿಸಿದ್ದೆ ಆಶ್ಚರ್ಯಕರ ಹಾಗೂ ಇಲ್ಲಿಗೆ ಕಮಲ್‍ನಾಥ್ ಆಡಳಿತವನ್ನು ನಿಲ್ಲಿಸಬೇಕಿದೆ. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ನಾವು ಸರ್ಕಾರ ರಚನೆಯ ಆತುರದಲ್ಲಿ ಇರಲಿಲ್ಲ. ಆದರೆ ಇಂದಿನ ಪರಿಸ್ಥಿತಿ ನಮಗೆ ಅನುಕೂಲವಾಗಿದೆ ಎಂದು ಗೋಪಾಲ್ ಭಾರ್ಗವ್ ತಿಳಿಸಿದ್ದಾರೆ.

    ಕಮಲ್‍ನಾಥ್ ನೇತೃತ್ವದ ಸರ್ಕಾರವು ಯಾವುದೇ ಸೈದ್ದಾಂತಿಕ ಹಾಗೂ ತತ್ವದ ಮೇಲೆ ರಚನೆಯಾಗಿಲ್ಲ. ಅವರ ದುರಾಸೆಯ ಆಧಾರದ ಮೇಲೆ ಒಕ್ಕೂಟ ರಚನೆಯಾಗಿದೆ. ಒಕ್ಕೂಟದ ಪಕ್ಷಗಳ ಬೇಡಿಕೆ ಈಡೇರಿಸದ ದಿನ ಮೈತ್ರಿ ಕುಸಿದು ಬೀಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶ ಸಿಎಂ ಕಮಲ್‍ನಾಥ್ ಅವರು, ಬಿಜೆಪಿ ನಂಬರ್ 1 ಹಾಗೂ 2 ಅತ್ಯಂತ ಬುದ್ಧಿವಂತರು. ಹೀಗಾಗಿಯೇ ರಾಜ್ಯ ನಾಯಕರಿಗೆ ಆದೇಶ ನೀಡಿಲ್ಲ. ಅವರಿಗೆ ಅಗತ್ಯವಿದ್ದರೆ ವಿಶ್ವಾಸ ಮತಯಾಚನೆ ನಿರ್ಣಯವನ್ನು ತರಬಹುದು ಎಂದು ಚಾಟಿ ಬೀಡಿದ್ದಾರೆ.

    ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಪಕ್ಷೇತರ 1, ಬಿಎಸ್‍ಪಿ 2, ಎಸ್‍ಪಿ 2ರಲ್ಲಿ ಜಯಗಳಿಸಿದೆ. 2019ರ ಲೋಕಸಭಾ ಚುನಾವಣೆಯ ಒಟ್ಟು 29 ಕ್ಷೇತ್ರಗಳ ಪೈಕಿ ಬಿಜೆಪಿ 28 ರಲ್ಲಿ ಗೆದ್ದಿದ್ದರೆ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಚಿಂದ್ವಾರಾ ಕ್ಷೇತ್ರದಿಂದ ಸಿಎಂ ಕಮಲ್‍ನಾಥ್ ಪುತ್ರ ನಕುಲ್ ನಾಥ್ ಜಯಗಳಿಸಿದ್ದರು.

  • ಶಾಸಕರ ರಾಜೀನಾಮೆಗೆ ಹಲವಾರು ಕಾರಣಗಳಿವೆ, ಬಿಜೆಪಿ ಕಾರಣ ಅಲ್ಲ – ರಾಘವೇಂದ್ರ

    ಶಾಸಕರ ರಾಜೀನಾಮೆಗೆ ಹಲವಾರು ಕಾರಣಗಳಿವೆ, ಬಿಜೆಪಿ ಕಾರಣ ಅಲ್ಲ – ರಾಘವೇಂದ್ರ

    ನವದೆಹಲಿ: ಅತೃಪ್ತ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಇಲ್ಲ. ಬಿಜೆಪಿ ಯಾವುದೇ ಆಪರೇಷನ್ ಮಾಡಿಲ್ಲ ಮತ್ತು ಅತೃಪ್ತ ಶಾಸಕರಿಗೆ ಬಿಜೆಪಿ ಆಹ್ವಾನ ನೀಡಿಲ್ಲ ಎಂದು ಯಡಿಯೂರಪ್ಪ ಅವರ ಪುತ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.

    ಇಂದು ದೆಹಲಿಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಅತೃಪ್ತ ಶಾಸಕರ ರಾಜೀನಾಮೆಗೆ ಹಲವಾರು ಕಾರಣಗಳಿವೆ. ರಾಜೀನಾಮೆ ಕೂಡಾ ಇನ್ನು ಅಂಗೀಕಾರ ಆಗಿಲ್ಲ. ಅತೃಪ್ತರು ಬಿಜೆಪಿ ಸೇರ್ಪಡೆ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ. ತಪ್ಪುಗಳನ್ನು ಮುಚ್ಚಿಕೊಳ್ಳಲು ಮೈತ್ರಿ ನಾಯಕರು ಬಿಜೆಪಿ ಮೇಲೆ ಆಪರೇಷನ್ ಕಮಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

    ಯಾವುದೇ ಅತೃಪ್ತರು ನಮ್ಮ ಜೊತೆ ಸಂಪರ್ಕದಲ್ಲಿ ಇಲ್ಲ. ಅತೃಪ್ತ ಶಾಸಕರು ಯಾರ ಪರ ಇದ್ದೀವಿ ಎಂದು ಹೇಳಿಲ್ಲ. ಅವರು ಕೇವಲ ಮೈತ್ರಿ ವಿರುದ್ಧ ಎಂದು ಹೇಳಿದ್ದಾರೆ. ನಮ್ಮ 105 ಶಾಸಕರು ನಮ್ಮ ಜೊತೆ ಇದ್ದಾರೆ. ಬಿಜೆಪಿ ಯಾವ ಶಾಸಕರನ್ನು ಟಚ್ ಮಾಡಲು ಸಾಧ್ಯವಿಲ್ಲ ಮೈತ್ರಿ ನಾಯಕರು ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ ಎಂದು ತಿಳಿಸಿದರು.

    ಮುಂದೆ ಕ್ಯಾಬಿನೆಟ್ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತೇವೆ. ಬಿಜೆಪಿ ರಾಷ್ಟ್ರೀಯ ಪಕ್ಷದ ಆದ ಹಿನ್ನೆಲೆ ಮೈತ್ರಿ ಸರ್ಕಾರದ ರೀತಿಯಲ್ಲಿ ಅಸಮಾಧಾನ ಕಂಡು ಬರಲ್ಲ ಪಕ್ಷದ ಚೌಕಟ್ಟಿನಲ್ಲಿ ಎಲ್ಲರೂ ಇರಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

  • ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಸದನಕ್ಕೆ ಗೈರಾದೆ – ಎನ್.ಮಹೇಶ್

    ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಸದನಕ್ಕೆ ಗೈರಾದೆ – ಎನ್.ಮಹೇಶ್

    ಬೆಂಗಳೂರು: ವಿಶ್ವಾಸ ಮತಯಾಚನೆ ಮಾಡುವ ಸಂದರ್ಭದಲ್ಲಿ ಸದನಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. ಆದರೆ ನನ್ನ ಫೋನ್ ಸ್ವಿಚ್ ಆಫ್ ಇತ್ತು, ಈ ಬಗ್ಗೆ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ. ಆದರೆ ಮುಂದಿನ ಅವಧಿಯಲ್ಲಿ ತಟಸ್ಥರಾಗಿಯೇ ಇರುತ್ತೇನೆ ವಿನಾ: ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಕೊಳ್ಳೇಗಾಲ ಬಿಎಸ್‍ಪಿ ಶಾಸಕ ಎನ್ ಮಹೇಶ್ ಸ್ಪಷ್ಟಪಡಿಸಿದ್ದಾರೆ.

    ಮೈತ್ರಿ ಸರ್ಕಾರ ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಹಾಜರಾಗದ ಹಿನ್ನೆಲೆಯಲ್ಲಿ ಬಿಎಸ್‍ಪಿ ಹೈಕಮಾಂಡ್ ಮಾಯಾವತಿ ಅವರು ಮಹೇಶ್ ಅವರನ್ನು ಉಚ್ಛಾಟನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎನ್ ಮಹೇಶ್ ಅವರು, ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಕ್ಕೆ ಬೆಂಬಲ ನೀಡಿದ್ದೇವು. ಆಗ ನನಗೆ ಸಚಿವ ಸ್ಥಾನ ಕೂಡ 4 ತಿಂಗಳು ನೀಡಿದ್ದರು. ಆದರೆ ಆ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಆದೇಶದ ಮೇರೆಗೆ ರಾಜೀನಾಮೆ ನೀಡಿದ್ದೆ. ಅಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದೆ. ವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ ನನಗೆ ತಟಸ್ಥರಾಗಿ ಇರುವಂತೆ ಹೇಳಿದ್ದರು. ಆದ್ದರಿಂದ ಕ್ಷೇತ್ರದಿಂದ ಹೊರಗೆ ಇದ್ದೆ ಎಂದು ತಿಳಿಸಿದರು.

    ಜುಲೈ 15ರ ವರೆಗೂ ಜನರೊಂದಿಗೆ ಕ್ಷೇತ್ರದಲ್ಲೇ ಇದ್ದು ಪಕ್ಷದ ಸಂಘಟನೆ ಮಾಡಿದ್ದೆ. ಇದಕ್ಕೂ ಮುನ್ನ ರಾಷ್ಟ್ರಿಯ ಕಾರ್ಯಕಾರಿಣಿ ಸಭೆಯಲ್ಲಿ ಸಮ್ಮಿಶ್ರ ಸರ್ಕಾರ ಬೆಂಬಲ ನೀಡುವ ಬಗ್ಗೆ ಮಾತನಾಡಿದ್ದೆ. ಈ ಸಂದರ್ಭದಲ್ಲಿ ನಾನು ನನಗೆ ಸ್ವತಂತ್ರ್ಯವಾಗಿ ಇರುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸೌಧಲ್ಲಿ ನನಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲು ಸ್ಪೀಕರ್ ಅವರಿಗೂ ಮನವಿ ಮಾಡಿದ್ದೆ. ಪಕ್ಷದ ರಾಜ್ಯ ಉಸ್ತುವಾರಿ ಡಾ.ಆಶೋಕ್ ಸಿದ್ಧಾರ್ಥ ಅವರಿಗೂ ಈ ಬಗ್ಗೆ ಮಾಹಿತಿ ನೀಡಿ ವಿಶ್ವಾತ ಮತಯಾಚನೆ ಬಗ್ಗೆಯೂ ಚರ್ಚೆ ನಡೆಸಿದ್ದೆ. ಈ ಸಂದರ್ಭದಲ್ಲಿ ನನಗೆ ತಟಸ್ಥರಾಗಿರುವಂತೆ ಸೂಚನೆ ನೀಡಿದ್ದ ಕಾರಣ ಸದನಕ್ಕೆ ಗೈರಾಗುವ ಬಗ್ಗೆ ಮಾಹಿತಿ ನೀಡಿದ್ದೆ. ನನ್ನ ಪಕ್ಷದ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಎರಡು ದಿನ ಅಲ್ಲಿಯೇ ಇದ್ದೆ ಎಂದರು.

    ಜುಲೈ 16ರ ಬಳಿಕ ನಾನು ಕ್ಷೇತ್ರದಿಂದ ಹೊರ ಹೋಗಿದ್ದೆ, ಈ ಸಂದರ್ಭದಲ್ಲಿ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಪಕ್ಷದ ಸೂಚನೆಯಂತೆ ತಟಸ್ಥರಾಗಿಯೇ ಇದ್ದರು ಕೂಡ ನನ್ನನ್ನು ಉಚ್ಛಾಟನೆ ಮಾಡಿದ್ದಾರೆ. ಇಲ್ಲಿ ಬಂದ ಮೇಲೆ ನನಗೆ ಅವರು ಟ್ವೀಟ್ ಮಾಡಿರುವ ಮಾಹಿತಿ ಲಭಿಸಿತ್ತು. ನಾನು ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿಲ್ಲ. ಸಂವಹನ ಕೊರತೆ ಈ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಕೂಡ ಸರಿ ಹೋಗಲಿದೆ. ನಾನು ಪಕ್ಷದ ಸದಸ್ಯನಾಗಿಯೇ ಮುಂದುವರಿಯುತ್ತೇನೆ ಎಂದರು.

    ಆಪರೇಷನ್ ಕಮಲಕ್ಕೆ ಒಳಗಾಗಿದ್ದೇನೆ ಎಂಬುವುದು ನಾನ್ ಸೆನ್ಸ್, ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗದೇ ತಟಸ್ಥನಾಗಿರುವೆ. ನನಗೂ ಖಾಸಗಿ ಜೀವನ ಇರುತ್ತೆ. ಆ ಹಿನ್ನೆಲೆಯಲ್ಲಿ ಮಾಹಿತಿಯ ಕೊರತೆ ಆಗಿದೆ. ಮುಂದಿನ ಸಮಯದಲ್ಲಿ ಪಕ್ಷದ ನಾಯಕರೊಂದಿಗೆ ಮಾತನಾಡುತ್ತೇನೆ. ಎಲ್ಲವೂ ಸರಿಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಕೈ, ದಳ ಶಾಸಕರಿಗೆ ಆಹ್ವಾನ ನೀಡಿದ್ದು ನಿಜ – ಆಪರೇಷನ್ ಕಮಲ ಒಪ್ಪಿಕೊಂಡ ಡಿವಿಎಸ್

    ಕೈ, ದಳ ಶಾಸಕರಿಗೆ ಆಹ್ವಾನ ನೀಡಿದ್ದು ನಿಜ – ಆಪರೇಷನ್ ಕಮಲ ಒಪ್ಪಿಕೊಂಡ ಡಿವಿಎಸ್

    ನವದೆಹಲಿ: ರಾಜ್ಯದಲ್ಲಿ ಬಹುದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕಕ್ಕೆ ತೆರೆ ಬಿದ್ದಿದ್ದು, ರಾಜ್ಯದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಮೈತ್ರಿ ಸರ್ಕಾರ ರಚನೆ ಮಾಡಿದ ಮೊದಲ ವಾರದ ಬಳಿಕ ಆರಂಭವಾದ ಎರಡು ಪಕ್ಷದ ಆಂತರಿಕ ಕಚ್ಚಾಟದಿಂದ ಅಭಿವೃದ್ಧಿ ಕುಂಠಿತವಾಗಿತ್ತು. ಆದರೆ ಈಗ ಬಿಎಸ್ ಯಡಿಯೂರಪ್ಪ ಅವರು ಅಭಿವೃದ್ಧಿ ಪರ ಆಡಳಿತ ನಡೆಸುತ್ತಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

    ನಗರದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ನಡೆಯುತ್ತಿದ್ದ ನಾಟಕದಲ್ಲಿ ರಾಜ್ಯದ ಜನರು ಕಂಗಾಲಾಗಿದ್ದರು. ರಾಜ್ಯದ ಜನರಿಗೆ ಉತ್ತಮ ಸರ್ಕಾರ ನೀಡುವ ಉದ್ದೇಶದಿಂದಲೇ ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಬಿಜೆಪಿ ಆಹ್ವಾನ ನೀಡಿತ್ತು. ಮೈತ್ರಿ ಒಪ್ಪದ ಶಾಸಕರಿಗೆ ಬಿಜೆಪಿ ಬರುವಂತೆ ಆಹ್ವಾನ ನೀಡಿದ್ದೆವು, ಇದರಂತೆ ಬಿಜೆಪಿ ಮೇಲೆ ಒಲವು ಇರುವ ಶಾಸಕರು ಬರುವಂತೆಯೂ ಹೇಳಿದ್ದೆವು. ರಾಜ್ಯದಲ್ಲಿ ಹೆಚ್ಚು ಸೀಟು ಪಡೆದ ಪಕ್ಷಕ್ಕೆ ಸರ್ಕಾರ ರಚಿಸುವ ನೈತಿಕತೆ ಇದೆ ಎಂದರು.

    ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆ ಆದ ಮೇಲೆ ನಾವು ಸುಮ್ಮನೆ ಆಗಿದ್ದೆವು. ಆದರೆ ಸರ್ಕಾರ ರಚನೆಯಾಗಿ 1 ವಾರದಲ್ಲೇ ಮೈತ್ರಿಯಲ್ಲಿ ಕಚ್ಚಾಟ ಆರಂಭವಾದ ಹಿನ್ನೆಲೆಯಲ್ಲಿ ನೈತಿಕತೆ ಆಧಾರದ ಮೇಲೆ ಕಾಂಗ್ರೆಸ್, ಜೆಡಿಎಸ್ ಅನೈತಿಕ ಮೈತ್ರಿ ಒಪ್ಪದ ನಾಯಕರನ್ನು ಆಹ್ವಾನಿಸಿದ್ದೆವು. ಕೇವಲ ಅತೃಪ್ತ ಶಾಸಕರು ಮಾತ್ರವಲ್ಲ ಮೈತ್ರಿ ಒಪ್ಪದ ಎಲ್ಲ ಶಾಸಕರಿಗೂ ಆಹ್ವಾನ ನೀಡಿದ್ದೆವು. ರಾಜ್ಯದ ಒಳಿತಿಗಾಗಿ ಮಾಡಿರುವುದರಿಂದ ಇದರಲ್ಲಿ ತಪ್ಪಿಲ್ಲ. ಆದರೆ ದೋಸ್ತಿ ನಾಯಕರು ಆಪರೇಷನ್ ಕಮಲದ ಬಣ್ಣ ಬಳೆಯುತ್ತಿದ್ದಾರೆ ಅಷ್ಟೇ ಎಂದರು.

    ಮೈತ್ರಿ ಸರ್ಕಾರದ ಬಿಜೆಪಿ ಮೇಲೆ ಆಪರೇಷನ್ ಕಮಲ ಹೆಸರಿನಲ್ಲಿ ಎರಚಿದ ಬಣ್ಣ ಮಳೆಯಾಗಿ ಬಿದ್ದು ತೊಳೆದು ಹೋಗಿದ್ದು, ಕಾರ್ಮೋಡ ಕಳಚಿ ಎಲ್ಲವೂ ಸ್ಪಷ್ಟವಾಗಿದೆ. ಯಾವುದೇ ಒಬ್ಬ ವ್ಯಕ್ತಿಯಿಂದ ಸರ್ಕಾರ ಬಿತ್ತು ಎಂದು ಹೇಳಲು ಆಗಲ್ಲ. ಸಿದ್ದರಾಮಯ್ಯ ತಂಡ, ಜೆಡಿಎಸ್ ಪಕ್ಷದ ಬಂಡಾಯಗಳಿಂದ ಸರ್ಕಾರ ಬಿದ್ದಿದೆ. ಕಾಂಗ್ರೆಸ್ ನಾಯಕರ ಮನಸ್ಸಿನ ನಂಜು ಕಟ್ಟೆಯೊಡೆದು ಸರ್ಕಾರ ಪತನವಾಯಿತು ಎಂದರು.

    ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರ ಇದೆ. ಆದ್ದರಿಂದ ಒಟ್ಟಿಗೆ ಕೂಡಿ ಮತ್ತಷ್ಟು ಕೆಲಸಗಳನ್ನು ಮಾಡುತ್ತೇವೆ. ಈಗ ಬಿಎಸ್ ಯಡಿಯೂರಪ್ಪ ಅವರ ನಾಯಕತ್ವದಲ್ಲೇ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ನಡೆಸಿದ್ದೆವು. ಅವರ ನಾಯಕತ್ವದಲ್ಲೇ ಭಾರೀ ಯಶಸ್ಸು ಪಡೆದಿದ್ದೇವೆ. ಅವರೊಂದಿಗೆ ನಡೆದು ಮುಂದಿನ ಅವಧಿಯಲ್ಲಿ 24 ಗಂಟೆಗಳ ಕಾಲ ಕೆಲಸ ಮಾಡುವ ಮೂಲಕ ಉತ್ತಮ ಆಡಳಿತ ನೀಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.