Tag: ಆಪರೇಷನ್ ಕಮಲ

  • ಡಿಕೆಶಿ ಎಲ್ಲ ಕಷ್ಟದಿಂದ ಹೊರ ಬರ್ತಾರೆ: ಎಂ.ಬಿ.ಪಾಟೀಲ್

    ಡಿಕೆಶಿ ಎಲ್ಲ ಕಷ್ಟದಿಂದ ಹೊರ ಬರ್ತಾರೆ: ಎಂ.ಬಿ.ಪಾಟೀಲ್

    -ಆಪರೇಷನ್ ಕಮಲದ ಬಗ್ಗೆ ತನಿಖೆ ನಡೆಯಲಿ

    ವಿಜಯಪುರ: ಇಡಿ ಬಂಧನಕ್ಕೊಳಗಾಗಿರುವ ಡಿ.ಕೆ.ಶಿವಕುಮಾರ್ ಈ ಎಲ್ಲ ಕಷ್ಟಗಳಿಂದ ಆದಷ್ಟು ಬೇಗ ಹೊರ ಬರಲಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ದೇಶದಲ್ಲಿ ದ್ವೇಷದ ರಾಜಕೀಯ ನಡೆಯುತ್ತಿದ್ದು, ಚಿದಂಬರಂ ಬಳಿಕ ಡಿಕೆ ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇವಲ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರು ಆಪರೇಷನ್ ಕಮಲದಲ್ಲಿ ನೂರಾರು ಕೋಟಿ ರೂ. ಹಣ ಹಾಕಿದ್ದಾರೆ. ಯಾಕೆ ಆಪರೇಷನ್ ಕಮಲದ ಬಗ್ಗೆ ಐಟಿ ಇಲಾಖೆ ತನಿಖೆ ಮಾಡಲ್ಲ. ಐಟಿ, ಇಡಿ ಮತ್ತು ಸಿಬಿಐ ಇಲಾಖೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಂ.ಬಿ.ಪಾಟೀಲ್ ಆರೋಪಿಸಿದರು.

    ಡಿ.ಕೆ.ಶಿವಕುಮಾರ್ ಬಂಧನದಿಂದ ಅಭಿಮಾನಿಗಳಿಗೆ ಮತ್ತು ಕಾರ್ಯರ್ತರಿಗೆ ನೋವಾಗಿರುತ್ತದೆ. ಹಾಗಾಗಿ ರಸ್ತೆಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಬಿಜೆಪಿಯ ದ್ವೇಷ ರಾಜಕಾರಣದ ವಿರುದ್ಧ ಒಟ್ಟಾಗಿ ಹೋರಾಟ ಮಾಡಬೇಕಿದೆ. ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಬಾರದು ಎಂದು ಎಂ.ಬಿ.ಪಾಟೀಲ್ ಮನವಿ ಮಾಡಿಕೊಂಡರು.

  • ಬಿಬಿಎಂಪಿಯಲ್ಲೂ ಆಪರೇಷನ್ ಕಮಲ!

    ಬಿಬಿಎಂಪಿಯಲ್ಲೂ ಆಪರೇಷನ್ ಕಮಲ!

    ಬೆಂಗಳೂರು: ಮೈತ್ರಿ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದ ಬಿಜೆಪಿಯು ಈಗ ಬಿಬಿಎಂಪಿ ಮೇಯರ್ ಸ್ಥಾನಕ್ಕೂ ಆಪರೇಷನ್ ನಡೆಸುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಅಧಿಕಾರ ನಡೆಸುತ್ತಿವೆ. ಕಾಂಗ್ರೆಸ್ ಪಕ್ಷವೂ ಮೇಯರ್ ಹಾಗೂ ಜೆಡಿಎಸ್ ಉಪ ಮೇಯರ್ ಸ್ಥಾನಗಳನ್ನು ಹಂಚಿಕೊಂಡಿವೆ. ಆದರೆ ಈಗ ಮೇಯರ್ ಸ್ಥಾನವನ್ನು ತಮ್ಮದಾಗಿಸಿಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಸಿಎಂ ಬಿ.ಎಸ್.ಯಡಿಯೂರಪ್ಪನವರ ಧವಳಗಿರಿ ನಿವಾಸದ ಬಳಿ ಮಾತನಾಡಿದ ಅನರ್ಹ ಶಾಸಕ ಮುನಿರತ್ನ ಅವರು, ನಾಲ್ಕು ವರ್ಷಗಳ ಹಿಂದೆಯೇ ಬಿಜೆಪಿಗೆ ಬಿಬಿಎಂಪಿ ಮೇಯರ್ ಸ್ಥಾನ ಸಿಗಬೇಕಿತ್ತು. ಅದಕ್ಕೆ ಕಾರಣಿಕರ್ತರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಬಾರಿ ಯಾರಿಗೆ ಹೆಚ್ಚು ಮತಗಳು ಇರುತ್ತವೋ ಅವರು ಮೇಯರ್ ಆಗುತ್ತಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಆಪರೇಷನ್ ಕಮಲದ ಸುಳಿವನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ನನ್ನ ಪತ್ನಿಗೆ ಮೇಯರ್ ಸ್ಥಾನ ನೀಡಿ-ಬಿಜೆಪಿ ಮುಂದೆ ದುಬಾರಿ ಬೇಡಿಕೆ ಇಟ್ಟ ಅನರ್ಹ ಶಾಸಕ- ಯಾರಾಗ್ತಾರೆ ಹೊಸ ಮೇಯರ್?

    ಬಿಬಿಎಂಪಿ ಒಟ್ಟು 198 ಸಂಖ್ಯಾಬಲವನ್ನು ಹೊಂದಿದೆ. ಈ ಪೈಕಿ ಕಾಂಗ್ರೆಸ್ 76 ಹಾಗೂ ಜೆಡಿಎಸ್ 14 ಸ್ಥಾನ ಹೊಂದಿದ್ದು, ಆಡಳಿತ ನಡೆಸುತ್ತಿವೆ. 7 ಜನ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ 101 ಸ್ಥಾನಗಳನ್ನು ಗಳಿಸಿರುವ ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತಿದೆ.

  • ವಿರೋಧ ಪಕ್ಷದ ನಾಲ್ವರು ಶಾಸಕರು ಸೇರಿ, 57 ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ

    ವಿರೋಧ ಪಕ್ಷದ ನಾಲ್ವರು ಶಾಸಕರು ಸೇರಿ, 57 ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ

    ಮುಂಬೈ: ನಿನ್ನೆಯಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್‍ಸಿಪಿಯ ಮೂವರು ಹಾಗೂ ಕಾಂಗ್ರೆಸ್ ಒಬ್ಬ ಶಾಸಕ ಸೇರಿದಂತೆ 57 ಕೌನ್ಸಿಲರ್ ಗಳು ಇಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ನಿನ್ನೆಯಷ್ಟೇ ಎನ್‍ಸಿಪಿಯ ಮೂವರು ಹಾಗೂ ಕಾಂಗ್ರೆಸ್ಸಿನ ಓರ್ವ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇಂದು ಈ ಶಾಸಕರೂ ಸೇರಿದಂತೆ ನವ ಮುಂಬೈ ನಗರಸಭೆಯ 57 ಕೌನ್ಸಿಲರ್ ಗಳು ಹಾಗೂ ಎನ್‍ಸಿಪಿಯ ಕಾರ್ಯಕರ್ತರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಇತ್ತೀಚೆಗಷ್ಟೇ ಎನ್‍ಸಿಪಿ ಮುಂಬೈ ವಿಭಾಗದ ಮುಖ್ಯಸ್ಥರೊಬ್ಬರು ಶಿವಸೇನೆ ಪಕ್ಷಕ್ಕೆ ಸೇರಿದ್ದರು. ಇದೀಗ ಮೂವರು ಎನ್‍ಸಿಪಿ ಶಾಸಕರು ಬಿಜೆಪಿ ಸೇರಿದ್ದಾರೆ. ಎನ್‍ಸಿಪಿ ಶಾಸಕರಾದ ಶಿವೇಂದ್ರಸಿನ್ಹಾರಾಜೆ ಭೋಸ್ಲೆ(ಸತಾರಾ), ವೈಭವ್ ಪಿಚದ್(ಅಕೋಲೆ), ಸಂದೀಪ್ ನಾಯ್ಕ್(ಐರೋಲಿ) ಹಾಗೂ ಕಾಂಗ್ರೆಸ್ ಶಾಸಕ ಕಲಿದಾಸ್ ಕೋಲಂಬ್ಕರ್(ನೈಗಾನ್) ರಾಜೀನಾಮೆಗಳನ್ನು ಪ್ರತ್ಯೇಕವಾಗಿ ಸ್ಪೀಕರ್ ಹರಿಭಾವ್ ಬಗಾಡೆ ಅವರಿಗೆ ನಿನ್ನೆಯಷ್ಟೇ ಸಲ್ಲಿಸಿದ್ದರು.

    ಮುಂಬೈನಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೊಲಂಬ್ಕರ್ ಅವರನ್ನು ಶಿವೇಂದ್ರಸಿನ್ಹಾರಾಜೆ ಭೋಸ್ಲೆ ಅವರು 2014ರ ವಿಧಾನಸಭೆ ಚುನಾವಣೆಯಲ್ಲಿ 47,813 ಮತಗಳ ಅಂತರದಲ್ಲಿ ಸೋಲಿಸಿದ್ದರು.

    ಎನ್‍ಸಿಪಿಯ ಮಾಜಿ ಸಚಿವ ಮಧುಕರ್ ಪಿಚಾದ್ ಅವರ ಪುತ್ರ, ಅಹ್ಮದ್‍ನಗರ ಜಿಲ್ಲೆಯ ಅಕೋಲೆ ಕ್ಷೇತ್ರದ ವೈಭವ್ ಪಿಚಾದ್ ಅವರ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್‍ನ ನೂತನ ರಾಜ್ಯಾಧ್ಯಕ್ಷ ಬಾಳಾಸಾಹೇಬ್ ಥೋರತ್ ಅವರ ಕ್ಷೇತ್ರದ ಪಕ್ಕದಲ್ಲೇ ಇದ್ದು, ಇವರನ್ನು ಅಲ್ಲಿಯ ಅಭ್ಯರ್ಥಿಯನ್ನಾಗಿ ಘೋಷಿಸಿದರೆ ಸುತ್ತಲಿನ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂದು ಬಿಜೆಪಿ ಲೆಕ್ಕಾಚಾರ ಹಾಕಿದೆ.

    ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ 220 ಸ್ಥಾನಗಳಲ್ಲಿ ಜಯಗಳಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಇದರ ಭಾಗವಾಗಿ ವಿರೋಧ ಪಕ್ಷಗಳ ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ.

    ಇತ್ತೀಚೆಗೆ ಎನ್‍ಸಿಪಿ ಮುಂಬೈ ವಿಭಾಗದ ಮುಖ್ಯಸ್ಥ ಸಚಿನ್ ಅಹಿರ್ ಅವರು ಎನ್‍ಸಿಪಿ ಬಿಟ್ಟು ಶಿವಸೇನೆ ಸೇರಿದ್ದರು. ಅಲ್ಲದೆ, ಮೇ ತಿಂಗಳಲ್ಲಿ ಎನ್‍ಸಿಪಿ ನಾಯಕ ಹಾಗೂ ಮಾಜಿ ಸಚಿವ ಜಯ್‍ದತ್ ಕ್ಷೀರ್ ಸಾಗರ್ ಅವರು ಸಹ ಶಿವಸೇನೆ ಸೇರಿದ್ದರು.

    ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಗಿರೀಶ್, ಕಾಂಗ್ರೆಸ್ ಮತ್ತು ಎನ್‍ಸಿಪಿ 50 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಪಕ್ಷ ಬದಲಾಯಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದರು.

  • ಎನ್‍ಸಿಪಿಯ 3, ಕಾಂಗ್ರೆಸ್ಸಿನ ಓರ್ವ ಶಾಸಕ ರಾಜೀನಾಮೆ – ನಾಳೆ ಬಿಜೆಪಿಗೆ ಸೇರ್ಪಡೆ

    ಎನ್‍ಸಿಪಿಯ 3, ಕಾಂಗ್ರೆಸ್ಸಿನ ಓರ್ವ ಶಾಸಕ ರಾಜೀನಾಮೆ – ನಾಳೆ ಬಿಜೆಪಿಗೆ ಸೇರ್ಪಡೆ

    ಮುಂಬೈ: ರಾಜ್ಯದ ಗಾಳಿ ಮಹಾರಾಷ್ಟ್ರಕ್ಕೂ ಬೀಸಿದ್ದು, ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮಾಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಜೋರಾಗಿ ನಡೆಯುತ್ತಿದೆ.

    ಇತ್ತೀಚೆಗಷ್ಟೇ ಎನ್‍ಸಿಪಿ ಮುಂಬೈ ವಿಭಾಗದ ಮುಖ್ಯಸ್ಥರೊಬ್ಬರು ಶಿವಸೇನೆ ಪಕ್ಷಕ್ಕೆ ಸೇರಿದ್ದರು. ಇದೀಗ ಮೂವರು ಎನ್‍ಸಿಪಿ ಶಾಸಕರು ರಾಜೀನಾಮೆ ನೀಡಿದ್ದು, ಬಿಜೆಪಿ ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಎನ್‍ಸಿಪಿ ಶಾಸಕರಾದ ಶಿವೇಂದ್ರಸಿನ್ಹಾರಾಜೆ ಭೋಸ್ಲೆ(ಸತಾರಾ), ವೈಭವ್ ಪಿಚದ್(ಅಕೋಲೆ), ಸಂದೀಪ್ ನಾಯ್ಕ್(ಐರೋಲಿ) ಹಾಗೂ ಕಾಂಗ್ರೆಸ್ ಶಾಸಕ ಕಲಿದಾಸ್ ಕೋಲಂಬ್ಕರ್(ನೈಗಾನ್) ರಾಜೀನಾಮೆಗಳನ್ನು ಪ್ರತ್ಯೇಕವಾಗಿ ಸ್ಪೀಕರ್ ಹರಿಭಾವ್ ಬಗಾಡೆ ಅವರಿಗೆ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ ರಾಜೀನಾಮೆ ನೀಡಿದ ಶಾಸಕರು ಬುಧವಾರ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ.

    ನನ್ನ ಕ್ಷೇತ್ರದ ಹಿತಾಸಕ್ತಿ ಕಾಪಾಡಲು ಹೆಚ್ಚು ಆಸಕ್ತಿ ವಹಿಸಿದ್ದು ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಎನ್‍ಸಿಪಿ ಸಂಸದ ಉದಯನ್‍ರಾಜೆ ಭೋಸ್ಲೆ ಅವರ ಸಂಬಂಧಿಕ ಶಿವೇಂದ್ರಸಿನ್ಹಾರಾಜೆ ಭೋಸ್ಲೆ ಅವರು ತಿಳಿಸಿದ್ದಾರೆ.

    ಮುಂಬೈನಿಂದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕೊಲಂಬ್ಕರ್ ಅವರನ್ನು ಶಿವೇಂದ್ರಸಿನ್ಹಾರಾಜೆ ಭೋಸ್ಲೆ ಅವರು 2014ರ ವಿಧಾನಸಭೆ ಚುನಾವಣೆಯಲ್ಲಿ 47,813 ಮತಗಳ ಅಂತರದಲ್ಲಿ ಸೋಲಿಸಿದ್ದರು. ಹೀಗಾಗಿ ಬಿಜೆಪಿ ಇವರಿಗೆ ಗಾಳ ಹಾಕಿದೆ.

    ಎನ್‍ಸಿಪಿಯ ಮಾಜಿ ಸಚಿವ ಮಧುಕರ್ ಪಿಚಾದ್ ಅವರ ಪುತ್ರ, ಅಹ್ಮದ್‍ನಗರ ಜಿಲ್ಲೆಯ ಅಕೋಲೆ ಕ್ಷೇತ್ರದ ವೈಭವ್ ಪಿಚಾದ್ ಅವರ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್‍ನ ನೂತನ ರಾಜ್ಯಾಧ್ಯಕ್ಷ ಬಾಳಾಸಾಹೇಬ್ ಥೋರತ್ ಅವರ ಕ್ಷೇತ್ರದ ಪಕ್ಕದಲ್ಲೇ ಇದ್ದು, ಇವರನ್ನು ಅಲ್ಲಿಯ ಅಭ್ಯರ್ಥಿಯನ್ನಾಗಿ ಘೋಷಿಸಿದರೆ ಸುತ್ತಲಿನ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.

    ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳ ಪೈಕಿ 220 ಸ್ಥಾನಗಳಲ್ಲಿ ಜಯಗಳಿಸುವ ಪಕ್ಷದ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಸನ್ನದ್ಧರಾಗುತ್ತಿದ್ದು, ಇದರ ಭಾಗವಾಗಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

    ಇತ್ತೀಚೆಗೆ ಎನ್‍ಸಿಪಿ ಮುಂಬೈ ವಿಭಾಗದ ಮುಖ್ಯಸ್ಥ ಸಚಿನ್ ಅಹಿರ್ ಅವರು ಎನ್‍ಸಿಪಿ ಬಿಟ್ಟು ಶಿವಸೇನೆ ಸೇರಿದ್ದರು. ಅಲ್ಲದೆ, ಮೇ ತಿಂಗಳಲ್ಲಿ ಎನ್‍ಸಿಪಿ ನಾಯಕ ಹಾಗೂ ಮಾಜಿ ಸಚಿವ ಜಯ್‍ದತ್ ಕ್ಷೀರ್‍ಸಾಗರ್ ಅವರು ಸಹ ಶಿವಸೇನೆ ಸೇರಿದ್ದರು.

    ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಗಿರೀಶ್, ಕಾಂಗ್ರೆಸ್ ಮತ್ತು ಎನ್‍ಸಿಪಿ 50 ಮಂದಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಪಕ್ಷ ಬದಲಾಯಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದರು.

  • ಅನರ್ಹಗೊಂಡ ಕೈ ಶಾಸಕರ ತಿಥಿ ಮಾಡಿದ ಕಾರ್ಯಕರ್ತರು

    ಅನರ್ಹಗೊಂಡ ಕೈ ಶಾಸಕರ ತಿಥಿ ಮಾಡಿದ ಕಾರ್ಯಕರ್ತರು

    ಹಾಸನ: ಭಾನುವಾರ ಸ್ಪೀಕರ್ ರಮೇಶ್ ಕುಮಾರ್ ಅವರು 14 ಮಂದಿ ಕೈ ಶಾಸಕರನ್ನು ಅನರ್ಹಗೊಳಿಸಿರುವ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಅವರ ತಿಥಿ ಕಾರ್ಯ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

    ನಮ್ಮ ಪಕ್ಷಕ್ಕೆ ದ್ರೋಹ ಎಸಗಿ ಹೋದವರು ನಮ್ಮ ಪಾಲಿಗೆ ಸತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ತಿಥಿ ವಡೆ, ಹಾರ ಪ್ರದರ್ಶಿಸಿ ಹಾಸನದ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರು ಅನರ್ಹಗೊಂಡ ಶಾಸಕರ ತಿಥಿ ಕಾರ್ಯ ಮಾಡಿದರು. ಅಲ್ಲದೆ ಅನರ್ಹಗೊಂಡ ಶಾಸಕರನ್ನು ಮುಂದೆ ಪಕ್ಷಕ್ಕೆ ಸೇರಿಸದಂತೆ ಹೈಕಮಾಂಡಿಗೆ ಮನವಿ ಮಾಡಿ, ಸ್ಪೀಕರ್ ರಮೇಶ್ ಕುಮಾರ್ ಅವರ ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿದರು.

    ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ ಅವರನ್ನು ಅನರ್ಹಗೊಳಿಸಿ ಸ್ಪೀಕರ್ ತೀರ್ಪು ಪ್ರಕಟಿಸಿದ್ದಾರೆ.

    ಈ ಹಿಂದೆ ಅನರ್ಹಗೊಂಡ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್. ಶಂಕರ್ ಬೈ ಎಲೆಕ್ಷನ್ ಗೆ ನಿಲ್ಲುವಂತಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಖಡಕ್ಕಾಗಿ ತಿಳಿಸಿದ್ದಾರೆ.

  • ಆಪರೇಷನ್ ಕಮಲ ಇನ್ನೂ ಮುಗ್ದಿಲ್ಲ, ತಂತ್ರಗಾರಿಕೆಯನ್ನೂ ಬಿಡ್ತಿಲ್ಲ

    ಆಪರೇಷನ್ ಕಮಲ ಇನ್ನೂ ಮುಗ್ದಿಲ್ಲ, ತಂತ್ರಗಾರಿಕೆಯನ್ನೂ ಬಿಡ್ತಿಲ್ಲ

    ಬೆಂಗಳೂರು: ಆಪರೇಷನ್ ಕಮಲ ಇನ್ನೂ ಮುಗಿದಿಲ್ಲ ಹಾಗೂ ತಂತ್ರಗಾರಿಕೆಯನ್ನೂ ಬಿಡುತ್ತಿಲ್ಲ ಎನ್ನುವ ಮಾತುಗಳು ರಾಜಕೀಯ ವಲಯದಿಂದ ಕೇಳಿಬರುತ್ತಿವೆ.

    ಸರ್ಕಾರ ಭದ್ರತೆಗಾಗಿ ಬಿಜೆಪಿ ಹೈಕಮಾಂಡ್ ಹೊಸ ಟಾರ್ಗೆಟ್ ಫಿಕ್ಸ್ ಮಾಡಿದ್ದು, ಅದನ್ನು ಟಾರ್ಗೆಟ್ 22 ಎಂದು ಕರೆಯಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಗುರಿ ತಪ್ಪುವಂತಿಲ್ಲ. ಒಂದು ವೇಳೆ ಟಾರ್ಗೆಟ್ ಕೈತಪ್ಪಿದರೆ ಕಷ್ಟ ಎಂದು ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ತಿಳಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಬಿಜೆಪಿಗೆ 6 ತಿಂಗಳ ಸರ್ಕಾರ ಬೇಡ. ಮುಂದಿನ ಮೂರು ವರ್ಷ 10 ತಿಂಗಳ ನಾವು ಅಧಿಕಾರದಲ್ಲಿ ಇರಬೇಕು. ಈ 17 ಮಂದಿ ಜೊತೆಗೆ ಕನಿಷ್ಟ ಇನ್ನೂ 5 ಮಂದಿ ರಾಜೀನಾಮೆ ಕೊಡಬೇಕು. ಇದರಿಂದಾಗಿ ಕನಿಷ್ಟ ಅಂದರೂ 22 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ಆಗಬೇಕು. ಈ 22 ಕ್ಷೇತ್ರಗಳ ಪೈಕಿ ಬಿಜೆಪಿಯು 12 ಸೀಟು ಗೆಲ್ಲಲೇ ಬೇಕು. 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ 105+12 ಒಟ್ಟು 117 ಸೀಟುಗಳಿಗೆ ಬಲ ಹೆಚ್ಚುತ್ತದೆ. ಇದರಿಂದಾಗಿ ಬಿಜೆಪಿ ಸರ್ಕಾರ ಅವಧಿ ಪೂರ್ಣಗಳಿಸಲು ಅನುಕೂಲವಾಗುತ್ತದೆ ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದೆ ಎಂಬ ಮಾತು ಕೇಳಿ ಬರುತ್ತಿದೆ.

    ಸರ್ಕಾರ ರಚನೆ ಬೆನ್ನಲ್ಲೇ ಹೈಕಮಾಂಡ್ ಹೊಸ ಟಾರ್ಗೆಟ್ ಫಿಕ್ಸ್ ಮಾಡಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನೀಡಿದ ಹೊಸ ಟಾಸ್ಕ್ ಜಾರಿಗೆ ಬಿ.ಎಸ್ ಯಡಿಯೂರಪ್ಪ ಅವರು ಕೂಡ ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

  • ಪೂರ್ಣ ಬಹುಮತದೊಂದಿಗೆ ಬಿಎಸ್‍ವೈ ಸಿಎಂ ಆಗ್ತಾರೆ: ಕಾಂಗ್ರೆಸ್ ಶಾಸಕ ರಾಜೇಗೌಡ

    ಪೂರ್ಣ ಬಹುಮತದೊಂದಿಗೆ ಬಿಎಸ್‍ವೈ ಸಿಎಂ ಆಗ್ತಾರೆ: ಕಾಂಗ್ರೆಸ್ ಶಾಸಕ ರಾಜೇಗೌಡ

    ಚಿಕ್ಕಮಗಳೂರು: ಅತೃಪ್ತ ಶಾಸಕರೆಲ್ಲಾ ಅನರ್ಹವಾಗಿರೋದು ಬಿಜೆಪಿಗೆ ವರವಾಗಿದ್ದು, ಬಿ.ಎಸ್.ಯಡಿಯೂರಪ್ಪ ಸಂಪೂರ್ಣ ಬಹುಮತದೊಂದಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ ಎಂದು ಶೃಂಗೇರಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಹೇಳಿಕೆ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಕಲ್ಪಿಸುವ ವೇಳೆ ಯಾವುದೇ ಪಕ್ಷದವರು ಶೇ.51ರಷ್ಟು ಮತ ಹೊಂದಿರಬೇಕು. ಅದನ್ನು ಪಟ್ಟಿ ಸಮೇತ ರಾಜ್ಯಪಾಲರಿಗೆ ತೋರಿಸಬೇಕು. ಅದು ಸಂವಿಧಾನದ ನಿಯಮ ಎಂದು ತಿಳಿಸಿದ್ದಾರೆ.

    ಸದನ ಪ್ರಾರಂಭವಾದ ಮೇಲೆ ಯಾರು ಹೆಚ್ಚು ಮತ ಗಳಿಸುತ್ತಾರೋ ಅವರು ವಿಶ್ವಾಸ ಮತ ಗಳಿಸುತ್ತಾರೆ, ಮುಖ್ಯಮಂತ್ರಿಯಾಗುತ್ತಾರೆ. ಆದರೆ, ರಾಜ್ಯಪಾಲರು ಯಡ್ಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡುವಾಗ ಇವರಿಗೆ ಶೇ.51ರಷ್ಟು ಮತ ಇದೆಯಾ ಎಂದು ಯೋಚಿಸಬೇಕಿತ್ತು. ಆದರೆ, ಅವರು ಕೇಳಿದ ತಕ್ಷಣ ಅವಕಾಶ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅದೃಷ್ಟ ಎಂಬಂತೆ ಅತೃಪ್ತರು ಅನರ್ಹವಾಗಿದ್ದಾರೆ. ಈಗ ಅವರಿಗೆ ಅವಕಾಶ ಇದೆ. ಇದನ್ನು ನಾವು ಒಪ್ಪುತ್ತೇವೆ. ಆದರೆ, ರಾಜೀನಾಮೆ ಅಂಗೀಕಾರ ಅಥವಾ ಅನರ್ಹತೆ ಆಗುವುದಕ್ಕಿಂತ ಮೊದಲೇ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿರೋದು ಸಂವಿಧಾನ ವಿರೋಧ. ರಾಜ್ಯಪಾಲರ ನಡೆ ನಮಗೆ ನೋವು ತಂದಿದೆ. ಸಂವಿಧಾನ ಕಾಪಾಡಬೇಕಾದವರೆ ಅದರ ವಿರುದ್ಧ ನಡೆದುಕೊಂಡಾಗ ಏನಾಗುತ್ತದೆ ಎಂದು ರಾಜ್ಯಪಾಲರ ವಿರುದ್ಧ ಶಾಸಕ ಟಿ.ಡಿ.ರಾಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

  • ಶಾಸಕರು ಅನರ್ಹಗೊಂಡಿದ್ದು ಬಿಜೆಪಿಗೆ ಒಳಗೊಳಗೇ ಖುಷಿ ಕೊಟ್ಟಿದೆ: ಹೊರಟ್ಟಿ

    ಶಾಸಕರು ಅನರ್ಹಗೊಂಡಿದ್ದು ಬಿಜೆಪಿಗೆ ಒಳಗೊಳಗೇ ಖುಷಿ ಕೊಟ್ಟಿದೆ: ಹೊರಟ್ಟಿ

    ಧಾರವಾಡ: ಅತೃಪ್ತ ಶಾಸಕರ ಅನರ್ಹತೆ ನಿರ್ಧಾರ ಬಿಜೆಪಿಗೆ ಒಳಗೊಳಗೇ ಖುಷಿ ಕೊಟ್ಟಿದ್ದು, ಅತೃಪ್ತರ ಕಾಟ ಬಿಜೆಪಿಗೆ ತಪ್ಪಿದಂತಾಗಿದೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

    ಧಾರವಾಡದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ರಮೇಶ್ ಕುಮಾರ್ ತಮ್ಮ ಇತಿ ಮಿತಿಯಲ್ಲಿ ಕಾಯಿದೆ, ಕಾನೂನು ನೋಡಿಕೊಂಡು ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದಾರೆ. ಅವರು ಸುಪ್ರಿಂಕೋರ್ಟ್‍ಗೆ ಹೋದರೆ ಯಾವುದು ಸರಿ? ತಪ್ಪು ಎನ್ನುವುದು ತಿಳಿಯುತ್ತದೆ. ಒಂದು ಪಕ್ಷದಿಂದ ಸ್ಪರ್ಧಿಸಿ ತಮಗೆ ಬೇಕಾದಾಗ ರಾಜೀನಾಮೆ ನೀಡುವುದು ಸರಿಯಲ್ಲ. ಈ ವಿಚಾರವಾಗಿ ಸ್ಪೀಕರ್ ಒಳ್ಳೆ ನಿರ್ಣಯ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

    ಒಂದು ಪಕ್ಷದಿಂದ ಗೆದ್ದು ನಂತರ ರಾಜೀನಾಮೆ ನೀಡಿದರೆ ಮುಂದಿನ ಐದು ವರ್ಷದ ಅವಧಿಯೊಳಗೆ ಯಾವುದೇ ಚುನಾವಣೆಗೆ ಸ್ಪರ್ಧಿಸಬಾರದು ಅಂತಹ ಕಾನೂನು ಜಾರಿಯಾಗಬೇಕು. ಈ ಮೂಲಕ ರಾಜಕಾರಣದಲ್ಲಿ ಕಟ್ಟುನಿಟ್ಟಿನ ಕಾನೂನು ಬರಬೇಕು. ಇಂತಹ ಒಂದು ಕಾನೂನನ್ನು ಮೋದಿಯವರೇ ತರಬೇಕು. ಮೋದಿಯವರು ದೇಶದ ಬಗ್ಗೆ ಬಹಳ ಮಾತನಾಡುತ್ತಾರೆ ಹೀಗಾಗಿ ರಾಜಕಾರಣದಲ್ಲಿ ಕಟ್ಟುನಿಟ್ಟಿನ ಕಾನೂನನ್ನು ಅವರೇ ತರಬೇಕು ಎಂದು ಆಗ್ರಹಿಸಿದರು.

    ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ
    ಶಾಸಕರ ಕುದುರೆ ವ್ಯಾಪಾರ ವಿಚಾರವಾಗಿ ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ. ಸ್ಪೀಕರ್ ನಡೆ ಬಗ್ಗೆ ಬಿಜೆಪಿ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಎಲ್ಲ ಕಾಯ್ದೆ ಕಾನೂನು ನೋಡಿ ಅವರು ಅನರ್ಹ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ರಾಜೀನಾಮೆ ಕೊಟ್ಟ ಬಳಿಕ ಅವರು ಸದನದಲ್ಲಿ ಇರಬೇಕಿತ್ತು. ಹೀಗಾಗಿ ರಾಜೀನಾಮೆ ಅಂಗೀಕರಿಸದೇ ಅನರ್ಹ ಮಾಡಲಾಗಿದೆ. ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತಿದ್ದರೆ ಅಂಗೀಕಾರ ಆಗುತಿತ್ತು. ಆದರೆ, ಅವರು ನಿಯಮ ಪಾಲಿಸಿಲ್ಲ. ಎಲ್ಲರೂ ಒಟ್ಟಾಗಿ ಮುಂಬೈ ಹೋಟೆಲ್‍ಗೆ ತೆರಳಿದ್ದಾರೆ. ಹೀಗಾಗಿ ರಾಜೀನಾಮೆ ಅಂಗೀಕಾರ ಬದಲಿಗೆ ಅನರ್ಹ ಮಾಡಿದ್ದಾರೆ ಎಂದು ತಿಳಿಸಿದರು.

    ಬಿಜೆಪಿಗೆ ಜೆಡಿಎಸ್ ನೈತಿಕ ಬೆಂಬಲ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯ ಬಿಜೆಪಿ ಬಳಿ ಕಡಿಮೆ ಬಹುಮತ ಇದೆ. ಹೊತ್ತು ಬಂದಂತೆ ಕೊಡೆ ಹಿಡಿಯೋದು ಸರಿಯಲ್ಲ. ಜಿ.ಟಿ. ದೇವೇಗೌಡರು ಬಿಜೆಪಿ ನೈತಿಕ ಬೆಂಬಲ ಕೊಡೋ ವಿಚಾರ ಹೇಳಿದ್ದು ಸರಿಯಲ್ಲ ಎಂದರು.

  • ಇಬ್ಬರು ಅತೃಪ್ತ ಶಾಸಕರು ನನ್ನನ್ನು ಸಂಪರ್ಕಿಸಿದ್ದು ನಿಜ: ಸಿದ್ದರಾಮಯ್ಯ

    ಇಬ್ಬರು ಅತೃಪ್ತ ಶಾಸಕರು ನನ್ನನ್ನು ಸಂಪರ್ಕಿಸಿದ್ದು ನಿಜ: ಸಿದ್ದರಾಮಯ್ಯ

    ಬೆಂಗಳೂರು: ಕೆಲವು ಅತೃಪ್ತ ಶಾಸಕರು ಕರೆ ಮಾಡಿದ್ದು ನಿಜ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಇದೀಗ ಸ್ವತಃ ಸಿದ್ದರಾಮಯ್ಯನವರೇ, ಕೆಲವು ಅತೃಪ್ತ ಶಾಸಕರು ನನ್ನನ್ನು ಸಂಪರ್ಕಿಸಿದ್ದು ನಿಜ. ಅವರೊಂದಿಗೆ ಮಾತನಾಡಬಾರದು ಎಂದು ನಾನು ಕರೆ ಸ್ವೀಕರಿಸಲಿಲ್ಲ. ಅನರ್ಹತೆ ಶಿಕ್ಷೆಗೆ ಹೆದರಿ ನನಗೆ ಕರೆ ಮಾಡಿದ್ದರು. ಹೀಗಾಗಿ ನಾನು ಕರೆ ಸ್ವೀಕರಿಸಿಲ್ಲ ಎಂದು ಹೇಳುವ ಮೂಲಕ ಎಂ.ಬಿ.ಪಾಟೀಲ್ ಅವರ ಹೇಳಿಕೆಯನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

    ಯಾವ ಶಾಸಕರು ಬರುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಅವರು ಬಂದಿದ್ದರೆ ಕುಮಾರಸ್ವಾಮಿ ಅವರ ಸರ್ಕಾರ ಉರುಳುತ್ತಿರಲಿಲ್ಲ. ಇವರನ್ನು ಬಂಧಿಸಿಟ್ಟುಕೊಳ್ಳದಿದ್ದರೆ ಸರ್ಕಾರ ಸುಗಮವಾಗಿರುತ್ತಿತ್ತು. ಶಾಸಕರನ್ನು ಬಿಜೆಪಿಯವರು ಕೂಡಿ ಹಾಕಿಕೊಂಡಿದ್ದಾರೆ. ಇದು ಜನರ ಸರ್ಕಾರವಲ್ಲ, ಹಾರ್ಸ್ ಟ್ರೇಡಿಂಗ್ ಸರ್ಕಾರ. ಇದು ಸಂವಿಧಾನ ಬದ್ಧ ಸರ್ಕಾರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎಚ್.ವಿಶ್ವನಾಥ್ ಹೇಳಿದ್ದೇನು?
    ಯಾವ ಶಾಸಕರೂ ಸಹ ಯಾರನ್ನೂ ಸಂಪರ್ಕಿಸಿಲ್ಲ, ಮೈತ್ರಿ ನಾಯಕರೂ ಸಹ ನಮ್ಮನ್ನು ಸಂಪರ್ಕಿಸಿಲ್ಲ. ಎಂ.ಬಿ.ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆಗಳು ಹಸಿ ಸುಳ್ಳು ಎಂದು ರೆಬೆಲ್ ಶಾಸಕ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದ್ದರು.

    ಯಾವ ಅತೃಪ್ತ ಶಾಸಕರೂ ಸಹ ಯಾರನ್ನೂ ಸಂಪರ್ಕಿಸಿಲ್ಲ. ಎಂ.ಬಿ.ಪಾಟೀಲ್ ಹೇಳುತ್ತಿರುವುದು ಹಸಿ ಸುಳ್ಳು. ಕನ್ಫ್ಯೂಸ್ ಮಾಡಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಆದರೆ ಯಾರೂ ದಾರಿ ತಪ್ಪುವುದಿಲ್ಲ. ಅವರೇ ದಾರಿ ತಪ್ಪಿದ್ದಾರೆ. ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಸೇರಿದಂತೆ ಅವರೊಂದಿಗೆ ಇರುವವರು ದಾರಿ ತಪ್ಪಿದ ಮಕ್ಕಳು. ರಾಜ್ಯ ರಾಜಕಾರಣದ ಈ 30 ದಿನಗಳ ಬೆಳವಣಿಗೆಯಲ್ಲಿ ಅವರು ದಾರಿ ತಪ್ಪಿದ ಮಕ್ಕಳು ಎಂದು ವ್ಯಂಗ್ಯವಾಡಿದ್ದರು.

    ಯಾವ ನಾಯಕರೂ ಸಹ ಅತೃಪ್ತರನ್ನು ಸಂಪರ್ಕಿಸಲು ಪ್ರಯತ್ನಿಸಿಲ್ಲ. ಅವರು ಪ್ರಯತ್ನಿಸಿದರೂ ಸಹ ಯಾರೂ ಅವರೊಂದಿಗೆ ಹೋಗಲು ಸಿದ್ಧರಿಲ್ಲ. ನಾವು ಎಲ್ಲವನ್ನೂ ಎದುರಿಸಲು ಸಿದ್ಧರಿದ್ದೇವೆ. ಬಂಡೆಯಂತೆ ಗಟ್ಟಿಯಾಗಿ ನಿಂತಿದ್ದೇವೆ. ನಮ್ಮ ನಿರ್ಧಾರವೂ ಸಹ ಅಷ್ಟೇ ಗಟ್ಟಿಯಾಗಿದೆ. ಏಕೆಂದರೆ ನಾವು ಯಾರೂ ದುಡ್ಡಿಗಾಗಿ ಬಂದಿಲ್ಲ. ಸರ್ಕಾರದ ವಿರುದ್ಧ ಅಸಮಾಧಾನದಿಂದ ಹೊರ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು.

    ಇಬ್ಬರು ಅತೃಪ್ತ ಶಾಸಕರು ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದರು. ಆದರೆ ಸಿದ್ದರಾಮಯ್ಯ ಅವರು ಇಬ್ಬರ ಕರೆಯನ್ನೂ ಸ್ವೀಕರಿಸಿಲ್ಲ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಇಂದು ಬೆಳಗ್ಗೆ ಹೇಳಿದ್ದರು.

    ಮಾಜಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಸಿದ್ದರಾಮಯ್ಯನವರು ಅತೃಪ್ತ ಶಾಸಕರು ಕರೆ ಮಾಡಿರುವುದು ನಿಜ ಎಂದು ಹೇಳುತ್ತಿದ್ದರೆ, ಇತ್ತ ರೆಬೆಲ್ ಶಾಸಕ ಎಚ್.ವಿಶ್ವನಾಥ್ ಅವರು ಯಾವ ಶಾಸಕರೂ ಯಾರನ್ನೂ ಸಂಪರ್ಕಿಸಿಲ್ಲ. ಅದರ ಅಗತ್ಯತೆಯೂ ನಮಗಿಲ್ಲ, ಎಂ.ಬಿ.ಪಾಟೀಲ್ ಹಾಗೂ ಸಿದ್ದರಾಮಯ್ಯ ದಾರಿ ತಪ್ಪಿದ ಮಕ್ಕಳು ಎಂದು ಹರಿಹಾಯ್ದಿದ್ದರು.

  • ಯಾವ ಶಾಸಕರೂ ಯಾರನ್ನೂ ಸಂಪರ್ಕಿಸಿಲ್ಲ, ಎಂ.ಬಿ.ಪಾಟೀಲ್ ದಡ್ಡ: ಎಚ್.ವಿಶ್ವನಾಥ್

    ಯಾವ ಶಾಸಕರೂ ಯಾರನ್ನೂ ಸಂಪರ್ಕಿಸಿಲ್ಲ, ಎಂ.ಬಿ.ಪಾಟೀಲ್ ದಡ್ಡ: ಎಚ್.ವಿಶ್ವನಾಥ್

    -ಸಿದ್ದರಾಮಯ್ಯ, ಎಂಬಿಪಿ ದಾರಿ ತಪ್ಪಿದ ಮಕ್ಕಳು

    ಮುಂಬೈ: ಯಾವ ಶಾಸಕರೂ ಸಹ ಯಾರನ್ನೂ ಸಂಪರ್ಕಿಸಿಲ್ಲ, ಮೈತ್ರಿ ನಾಯಕರೂ ಸಹ ನಮ್ಮನ್ನು ಸಂಪರ್ಕಿಸಿಲ್ಲ. ಎಂ.ಬಿ.ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆಗಳು ಹಸಿ ಸುಳ್ಳು ಎಂದು ರೆಬೆಲ್ ಶಾಸಕ ಎಚ್.ವಿಶ್ವನಾಥ್ ಕಿಡಿ ಕಾರಿದ್ದಾರೆ.

    ಇಬ್ಬರು ಅತೃಪ್ತ ಶಾಸಕರು ಸಿದ್ದರಾಮಯ್ಯನವರನ್ನು ಸಂಪರ್ಕಿಸಿದ್ದರು. ಆದರೆ ಸಿದ್ದರಾಮಯ್ಯನವರು ಕರೆ ಸ್ವೀಕರಿಸಿಲ್ಲ ಎಂಬ ಎಂ.ಬಿ.ಪಾಟೀಲ್ ಹೇಳಿಕೆ ಕುರಿತು ಎಚ್ ವಿಶ್ವನಾಥ್ ಇಂದು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದರು.

    ಯಾವ ಅತೃಪ್ತ ಶಾಸಕರೂ ಸಹ ಯಾರನ್ನೂ ಸಂಪರ್ಕಿಸಿಲ್ಲ. ಎಂ.ಬಿ.ಪಾಟೀಲ್ ಹೇಳುತ್ತಿರುವುದು ಹಸಿ ಸುಳ್ಳು. ಕನ್ಫ್ಯೂಸ್ ಮಾಡಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಆದರೆ ಯಾರೂ ದಾರಿ ತಪ್ಪುವುದಿಲ್ಲ. ಅವರೇ ದಾರಿ ತಪ್ಪಿದ್ದಾರೆ. ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಸೇರಿದಂತೆ ಅವರೊಂದಿಗೆ ಇರುವವರು ದಾರಿ ತಪ್ಪಿದ ಮಕ್ಕಳು. ರಾಜ್ಯ ರಾಜಕಾರಣದ ಈ 30 ದಿನಗಳ ಬೆಳವಣಿಗೆಯಲ್ಲಿ ಅವರು ದಾರಿ ತಪ್ಪಿದ ಮಕ್ಕಳು ಎಂದು ವ್ಯಂಗ್ಯವಾಡಿದ್ದಾರೆ.

    ಯಾವ ನಾಯಕರೂ ಸಹ ಅತೃಪ್ತರನ್ನು ಸಂಪರ್ಕಿಸಲು ಪ್ರಯತ್ನಿಸಿಲ್ಲ. ಅವರು ಪ್ರಯತ್ನಿಸಿದರೂ ಸಹ ಯಾರೂ ಅವರೊಂದಿಗೆ ಹೋಗಲು ಸಿದ್ಧರಿಲ್ಲ. ನಾವು ಎಲ್ಲವನ್ನೂ ಎದುರಿಸಲು ಸಿದ್ಧರಿದ್ದೇವೆ. ಬಂಡೆಯಂತೆ ಗಟ್ಟಿಯಾಗಿ ನಿಂತಿದ್ದೇವೆ. ನಮ್ಮ ನಿರ್ಧಾರವೂ ಸಹ ಅಷ್ಟೇ ಗಟ್ಟಿಯಾಗಿದೆ. ಏಕೆಂದರೆ ನಾವು ಯಾರೂ ದುಡ್ಡಿಗಾಗಿ ಬಂದಿಲ್ಲ. ಸರ್ಕಾರದ ವಿರುದ್ಧ ಅಸಮಾಧಾನದಿಂದ ಹೊರ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ನಾವೆಲ್ಲರೂ ಸಂಪೂರ್ಣ ಒಗ್ಗಟ್ಟಾಗಿದ್ದೇವೆ. ನಾವೆಲ್ಲಾ ಒಗ್ಗಟ್ಟಾಗಿ ಇದ್ದಿದ್ದರಿಂದಲೇ ಸರ್ಕಾರ ಬಿದ್ದಿದ್ದು, ಇವರ ಬೆದರಿಕೆ ಮಾತನ್ನು ಯಾರೂ ಕೇಳುವುದಿಲ್ಲ. ಯಾರಿಗೆ ಯಾರ ಭಯವೂ ಇಲ್ಲ. ನಮ್ಮನ್ನು ಸಂಪರ್ಕಿಸುವ ಧೈರ್ಯ ಯಾರ ಬಳಿಯೂ ಇಲ್ಲ. ಎಲ್ಲರೂ ಬಹಳ ಗಟ್ಟಿಯಾಗಿದ್ದೇವೆ. ನಾಲ್ಕೈದು ದಿನಗಳಲ್ಲಿ ಮರಳಿ ರಾಜ್ಯಕ್ಕೆ ಬರುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

    ಕಾನೂನು ಹೋರಾಟ:
    ಯಾವ ಶಾಸಕರನ್ನು ಬೇಕಾದರೂ ಅನರ್ಹ ಮಾಡಲಿ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಹೇಗೆ ಕಾನೂನು ಇದೆಯೋ ಅದೇ ರೀತಿ ನಮಗೂ ಇದೆ. ಕಾನೂನು ಹೋರಾಟ ಮಾಡುತ್ತೇವೆ. ಸುಪ್ರೀಂ ಕೋರ್ಟಿಗೆ ಹೋಗುತ್ತೇವೆ. ನಾವು ಯಾವುದಕ್ಕೂ ಬಗ್ಗಲ್ಲ. ಆಕಾಶವೇ ಬೀಳಲಿ ಮೇಲೆ ನಾವೆಂದೂ ನಮ್ಮ ನಿರ್ಧಾರ ಬದಲಿಸಲ್ಲ ಎಂದು ತಮ್ಮ ನಿಲುವನ್ನು ಒತ್ತಿ ಹೇಳಿದರು.

    ಇಬ್ಬರು ಅತೃಪ್ತ ಶಾಸಕರು ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದರು. ಆದರೆ ಸಿದ್ದರಾಮಯ್ಯ ಅವರು ಇಬ್ಬರ ಕರೆಯನ್ನೂ ಸ್ವೀಕರಿಸಿಲ್ಲ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಇಂದು ಬೆಳಗ್ಗೆ ಹೇಳಿದ್ದರು.