Tag: ಆನ್ ಲೈನ್

  • ಕ್ಲಿಕ್ ಮಾಡಿ ಎರಡು ಲಕ್ಷ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ

    ಕ್ಲಿಕ್ ಮಾಡಿ ಎರಡು ಲಕ್ಷ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ

    ನರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ, ಇನ್ನೂ ಆನ್ ಲೈನ್ (Online) ದೋಖಾಗಳು ನಿಲ್ಲುತ್ತಿಲ್ಲ. ಅದರಲ್ಲೂ ಸುಶಿಕ್ಷಿತರೇ ಈ ಜಾಲಗಳಿಗೆ ಬಲಿಯಾಗುತ್ತಿದ್ದಾರೆ. ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಿದ್ದಾರೆ. ಇಂಥದ್ದೇ ಪರಿಸ್ಥಿತಿಗೆ ಸಿಲುಕಿದ್ದಾರೆ. ಮಾಜಿ ಬಿಗ್ ಬಾಸ್ (Bigg Boss) ಸ್ಪರ್ಧಿ  ಕೀರ್ತಿ ಭಟ್ (Keerti Bhatt) . ಒಂದೇ ಒಂದು ಕ್ಲಿಕ್ ಮಾಡಿ ಬರೋಬ್ಬರಿ ಎರಡು ಲಕ್ಷ ರೂಪಾಯಿಯನ್ನು ಅವರು ಕಳೆದುಕೊಂಡಿದ್ದಾರೆ.

    ತಮಗೆ ಆದ ಮೋಸವನ್ನು ತನ್ನದೇ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಮಾಡಿ ಪೊಲೀಸರ ಎದುರು ಕಣ್ಣಿರಿಟ್ಟಿದ್ದಾರೆ. ಕೀರ್ತಿ ಭಟ್ ಅವರಿಗೆ ಕೊರಿಯರ್ ಒಂದು ಬರಬೇಕಿತ್ತು. ವಾರ ಕಳೆದರೂ ಬಂದಿಲ್ಲ. ವಿಚಾರಿಸಲೆಂದೇ ಕೇಂದ್ರ ಕಚೇರಿಕೆ ಕರೆ ಮಾಡಿದ್ದಾರೆ. ಡೆಲಿವರಿ ಆಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಆದರೆ, ಟ್ರ್ಯಾಕ್ ಮಾಡಿದಾಗ ಅದು ಮೆಹದಿಪಟ್ನಂ ಅಲ್ಲಿ ಇರೋದು ಗೊತ್ತಾಗಿದೆ.

    ಕೊರಿಯರ್ ಸರ್ವಿಸ್ ಎಂದುಕೊಂಡು ಕೀರ್ತಿಗೆ ಕಾಲ್ ಮಾಡಿದ್ದಾರೆ. ನಿಮ್ಮ ಅಡ್ರೆಸ್ ಟ್ರ್ಯಾಕ್ ಆಗದೇ ಇರುವ ಕಾರಣಕ್ಕಾಗಿ ಪಾರ್ಸಲ್ ತಲುಪಿಲ್ಲ ಎಂದು ಹೇಳಲಿದ್ದಾರೆ. ಸರಿಯಾದ ಅಡ್ರೆಸ್ ವಾಟ್ಸಪ್ ಮಾಡಿ ಅಂದಿದ್ದಾರೆ. ಅವರು ಹೇಳಿದಂತೆ ಕೀರ್ತಿ ವಿಳಾಸ ನೀಡಿದ್ದಾರೆ. ಆದರೆ, ವಾಟ್ಸಪ್ ನಲ್ಲೂ ಅದು ತೋರಿಸ್ತಿಲ್ಲ. ನಾರ್ಮಲ್ ಮಸೇಜ್ ಕಳುಹಿಸುತ್ತೇವೆ. ಅಲ್ಲಿ ಕ್ಲಿಕ್ ಮಾಡಿ ಅಂದಿದ್ದಾರೆ. ನಾರ್ಮಲ್ ಮಸೇಜ್ ‍ಕ್ಲಿಕ್ ಮಾಡಿದಾಗ ಹಣ ಕ್ರಿಮಿನಲ್ ಖಾತೆ ಸೇರಿದೆ.

     

    ಪೊಲೀಸರಿಗೇನೂ ದೂರು ನೀಡಿದ್ದಾರೆ. ವಾಪಸ್ಸು ನಿಮ್ಮ ಹಣ ಬರುತ್ತದೆ ಎಂದು ಪೊಲೀಸರು ಸಮಾಧಾನಿಸಿದ್ದಾರೆ. ಆದರೆ, ಈವರೆಗೂ ಅವರಿಗೆ ಹಣ ವಾಪಸ್ಸು ಬಂದಿಲ್ಲ. ಕೇವಲ ಒಂದು ಕ್ಲಿಕ್ ಮಾಡಿರೋ ತಪ್ಪಿಗೆ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ ಕೀರ್ತಿ.

  • ಬಾಣಂತನದ ಬಟ್ಟೆಗಳನ್ನು ಆನ್‍ಲೈನ್‍ನಲ್ಲಿ ಹರಾಜಿಗಿಟ್ಟ ನಟಿ ಅನುಷ್ಕಾ ಶರ್ಮಾ

    ಬಾಣಂತನದ ಬಟ್ಟೆಗಳನ್ನು ಆನ್‍ಲೈನ್‍ನಲ್ಲಿ ಹರಾಜಿಗಿಟ್ಟ ನಟಿ ಅನುಷ್ಕಾ ಶರ್ಮಾ

    ಮುಂಬೈ: ಮದುವೆ ಹಾಗೂ ಮಗುವಿಗೆ ಜನ್ಮ ನೀಡಿದ ಬಳಿಕ ಸಿನಿಮಾದಿಂದ ದೂರ ಉಳಿದಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇದೀಗ ನಟಿ ತಮ್ಮ ಬಟ್ಟೆಗಳನ್ನು ಹರಾಜಿಗಿಡುವ ಮೂಲಕ ಸುದ್ದಿಯಾಗಿದ್ದಾರೆ.

    ಹೌದು, ಸದ್ಯ ಹೆಣ್ಣು ಮಗುವಿನ ಆರೈಕೆಯಲ್ಲಿರುವ ನಟಿ ತಮ್ಮ ಬಾಣಂತನದ ಬಟ್ಟೆಗಳನ್ನು ಆನ್ ಲೈನ್ ಮೂಲಕ ಹರಾಜಿಗಿಟ್ಟಿದ್ದಾರೆ. ಈ ಮೂಲಕ ಬಟ್ಟೆಗಳ ಮರು ಬಳಕೆ ಮಾಡಲು ಪ್ರೋತ್ಸಾಹ ನೀಡಿದ್ದಾರೆ. ಇದನ್ನು ಸರ್ಕುಲರ್ ಫ್ಯಾಷನ್ ಟ್ರೆಂಡ್ ಎಂದು ಕರೆದಿರುವ ನಟಿ, ತಾಯಿಯ ಆರೋಗ್ಯನ್ನು ಬೆಂಬಲಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಇದಕ್ಕೆ ಸ್ನೇಹ ಫೌಂಡೇಶನ್ ಎಂದು ಹೆಸರು ಕೂಡ ಇಟ್ಟಿದ್ದಾರೆ. ಇದನ್ನೂ ಓದಿ: ಹೂ ಮಾರುವ ಹುಡ್ಗಿ ಮತ್ತು ಪಬ್ಲಿಕ್ ಟಿವಿ ಬಿಗ್ ಬುಲೆಟಿನ್‍ನ ಆ ಬ್ರೇಕ್..!

    ಈ ಸಂಬಂಧ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ತಾವು ಬಳಸುವ ವಸ್ತುಗಳನ್ನು ಪುನರ್ ಬಳಕೆ ಮಾಡುವ ಟ್ರೆಂಡ್ ಅನುಸರಿಸಿದರೆ ನಮ್ಮ ಪರಿಸರದ ಮೇಲೆ ಇದು ದೊಡ್ಡ ಪರಿಣಾಮ ಬೀರಬಹುದು. ಗರ್ಭಿಣಿಯಾಗಿರುವ ಸಂದರ್ಭದಲ್ಲಿ ನಮ್ಮ ಜೀವನದಲ್ಲಿ ಈ ಹಂತವು ತುಂಬಾ ಮುಖ್ಯವಾದುದು ಅಂತ ನನಗೆ ಅನಿಸಿತು. ಹೀಗಾಗಿ ನಾವೆಲ್ಲರೂ ಒಟ್ಟು ಸೇರಿ ಈ ಕಾರ್ಯವನ್ನು ಆರಂಭಿಸಿಸೋಣ ಎಂದು ಅನುಷ್ಕಾ ಕರೆ ನೀಡಿದ್ದಾರೆ.

    ಇಡೀ ದೇಶದಲ್ಲಿನ ಗರ್ಭಿಣಿಯರ ಪೈಕಿ ಶೇ.1ರಷ್ಟು ಮಹಿಳೆಯರು ಮಾತ್ರ ತಮ್ಮ ಬಟ್ಟೆಗಳನ್ನು ಮರು ಬಳಕೆ ಮಾಡಬಲ್ಲರು. ಬಾಣಂತನದ ಬಟ್ಟೆ ಖರೀದಿ ಮಾಡಿದರೆ ನೀರಿನ ಉಳಿತಾಯ ಮಾಡಬಹುದು. ಈ ಮೂಲಕ ಪರಿಸರದಲ್ಲಿ ನಾವು ದೊಡ್ಡ ಬದಲಾವಣೆ ತರಬಹುದು ಎಂದು ಅನುಷ್ಕಾ ಅಭಿಪ್ರಾಯ ಪಟ್ಟಿದ್ದಾರೆ. ಇದೇ ವರ್ಷ ಜನವರಿ 11ರಂದು ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮಗಳಿಗೆ ವಿರುಷ್ಕಾ ದಂಪತಿ ವಮಿಕಾ ಎಂದು ಹೆಸರಿಟ್ಟಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)

  • ಕೋವಿಡ್ ಕಾಲದಲ್ಲಿ ಶಿಕ್ಷಣ ಪ್ರಕ್ರಿಯೆ, ತಜ್ಞರ ಸಮಿತಿ ರಚನೆ- ಸುರೇಶ್ ಕುಮಾರ್

    ಕೋವಿಡ್ ಕಾಲದಲ್ಲಿ ಶಿಕ್ಷಣ ಪ್ರಕ್ರಿಯೆ, ತಜ್ಞರ ಸಮಿತಿ ರಚನೆ- ಸುರೇಶ್ ಕುಮಾರ್

    ಬೆಂಗಳೂರು: ಮರುಕಳಿಸುತ್ತಿರುವ ಆತಂಕ ಒಡ್ಡಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಕ್ಕಳನ್ನು ಕಲಿಕೆಯಿಂದ ಹೊರಗುಳಿಯದಂತೆ ಮಾಡುವ ಉದ್ದೇಶದಿಂದ ಕೋವಿಡ್ ಸಂಕಷ್ಟದ ಕಾಲದಲ್ಲಿ ಶಿಕ್ಷಣದ ಮುಂದುವರಿಕೆ ಕ್ರಮಗಳ ಕುರಿತಂತೆ ತಜ್ಞರ ಸಮಿತಿ ರಚಿಸಿ ವರದಿ ಪಡೆಯಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

    ಕೊರೊನಾ ಸೋಂಕಿನ ಭೀತಿಯಿಂದಾಗಿ 2021-22ನೇ ಶೈಕ್ಷಣಿಕ ವರ್ಷವೂ ನಿಗದಿಯಂತೆ ಆರಂಭವಾಗುವ ಲಕ್ಷಣಗಳು ಗೋಚರಿಸದ ಹಿನ್ನೆಲೆಯಲ್ಲಿ ಮಕ್ಕಳ ಕಲಿಕಾ ನಿರಂತರತೆಗೆ ತೊಂದರೆಯಾಗದಂತೆ ಈಗಿನಿಂದಲೇ ಕ್ರಮ ವಹಿಸುವ ನಿಟ್ಟಿನಲ್ಲಿ ಬುಧವಾರ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, ವಿಶೇಷವಾಗಿ ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ಮಕ್ಕಳನ್ನು ಕಲಿಕೆಯಿಂದ ಹೊರಗುಳಿಯದಂತೆ ಮಾಡುವುದು ಆ ಮೂಲಕ ಅವರ ಶಿಕ್ಷಣದ ಹಕ್ಕುಗಳನ್ನು ರಕ್ಷಿಸುವುದು ಹಾಗೆಯೇ ಕಳೆದ ಸಾಲಿನಲ್ಲಿ ಕಲಿತ ಪಾಠದಂತೆ ನಮ್ಮ ಮಕ್ಕಳನ್ನು ತಲುಪಲು ಪರ್ಯಾಯ ಕ್ರಮಗಳನ್ನು ಅನುಸರಿಸಬೇಕೆಂಬ ಕುರಿತು ಈ ಸಮಿತಿಯು ರೂಪುರೇಷೆ ಸಿದ್ಧಪಡಿಸಲಿದೆ ಎಂದರು.

    ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗಬಹುದೆಂಬ ಪರ್ಯಾಯ ಬೋಧನಾ ಹಾಗೂ ಕಲಿಕಾ ಕ್ರಮಗಳು ಪ್ರಾಮುಖ್ಯತೆ ಹೊಂದಲಿದ್ದು, ಈ ಹಿನ್ನೆಲೆಯಲ್ಲಿ ತಜ್ಞರ ತಂಡದಿಂದ ಸಲ್ಲಿಕೆಯಾಗುವ ವರದಿಯ ಆಧಾರದಲ್ಲಿ ಬರುವ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಕಾರ್ಯೋನ್ಮುಖವಾಗಲಾಗುವುದು ಎಂದು ಸಚಿವರು ತಿಳಿಸಿದರು.

    ಲಭ್ಯವಿರುವ ಸ್ಥಿತಿಗತಿಗಳು, ಮೌಲ್ಯಾಂಕನ ಪದ್ಧತಿ, ಮಂಡಳಿ ಪರೀಕ್ಷೆಗಳು, ಆನ್ ಲೈನ್, ದೂರಶಿಕ್ಷಣ, ಶಿಕ್ಷಕರ ತರಬೇತಿ, ಸಂಪನ್ಮೂಲ ಸದ್ಬಳಕೆ ಸೇರಿದಂತೆ ಎಲ್ಲ ಆಯಾಮಗಳನ್ನೂ ಆಧ್ಯಯನ ಮಾಡಿ ವರದಿ ನೀಡಲು ಸಮಿತಿಯಲ್ಲಿ ಖ್ಯಾತ ವಿವಿಧ ಶಿಕ್ಷಣ ತಜ್ಞರು, ಭಾರತೀಯ ವಿಜ್ಞಾನ ಸಂಸ್ಥೆ ಪ್ರತಿನಿಧಿಗಳು, ನಿಮ್ಹಾನ್ಸ್ ಪ್ರತಿನಿಧಿಗಳು, ರಾಜ್ಯದ ಆರೋಗ್ಯ ಇಲಾಖೆಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರು, ಖಾಸಗಿ ಶಾಲೆಗಳ ಪ್ರತಿನಿಧಿ, ಪೋಷಕ ಸಂಘಟನೆಯ ಪ್ರತಿನಿಧಿಗಳು, ಶಿಕ್ಷಕ,ಉಪನ್ಯಾಸಕರ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಇರಲಿದ್ದಾರೆ. ತಕ್ಷಣದಲ್ಲೇ ಸಮಿತಿ ರಚಿಸಿ ಇಲಾಖೆ ಅಧಿಸೂಚನೆ ಹೊರಡಿಸಿ ಒಂದು ತಿಂಗಳ ಅವಧಿಯಲ್ಲಿ ನೀಲನಕ್ಷೆಯನ್ನು ಮಂಡಿಸಲು ಸಮಿತಿಯನ್ನು ಕೋರಲಾಗುವುದು ಎಂದು ಸಚಿವರು ತಿಳಿಸಿದರು.

    ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು:
    ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಕೇಂದ್ರ ಶಿಕ್ಷಣ ಸಚಿವರ ಮಂಗಳವಾರದ ಸಭೆಯಲ್ಲಿ ವಿಶೇಷ ಚರ್ಚೆ ನಡೆದಿದ್ದು, ಹಲವಾರು ರಾಜ್ಯಗಳು, ಅದರ ಅನುಷ್ಠಾನಕ್ಕೆ ಸಾಕಷ್ಟು ಪೂರ್ವಭಾವಿ ಕೆಲಸಗಳನ್ನು ಕೈಗೊಂಡಿವೆ. ಕರ್ನಾಟಕ ರಾಜ್ಯದಲ್ಲಿ ಇದರ ಬಗ್ಗೆ ವರದಿ ಸಲ್ಲಿಕೆಯಾದ ಬಳಿಕ ಇನ್ನಷ್ಟು ಸಾಂಸ್ಥಿಕ ಸುಧಾರಣೆಗಳು ಅವಶ್ಯವಿದ್ದು, ರಾಜ್ಯ ಸಂಪನ್ಮೂಲ ತಂಡದ ರಚನೆಯೂ ಸೇರಿದಂತೆ ಇದರಲ್ಲಿ ಉಲ್ಲೇಖಿಸಿರುವ ಹಲವು ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಕೂಡಲೇ ಕಾರ್ಯೋನ್ಮುಖರಾಗಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ವಿವರಿಸಿದರು.

    ಮೃತ ಶಿಕ್ಷಕರಿಗೆ ಪರಿಹಾರ, ಶಿಕ್ಷಕರಿಗೆ ಕೋವಿಡ್ ವ್ಯಾಕ್ಸಿನ್:
    ಕೋವಿಡ್ ನಿಂದ ರಾಜ್ಯದ ವಿವಿಧೆಡೆ ಸರ್ಕಾರಿ,ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ಮೃತರಾಗಿರುವ ಕುರಿತು ಅಂಕಿ ಅಂಶಗಳನ್ನು ಮಂಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಶಿಕ್ಷಕರ ಕಲ್ಯಾಣ ನಿಧಿಯಿಂದ ವಿಶೇಷ ಪ್ರಕರಣವೆಂದು ಈ ಶಿಕ್ಷಕರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತೂ ಇಲಾಖೆ ಚಿಂತನೆ ನಡೆಸಿದೆ ಎಂದರು.

    ಹಾಗೆಯೇ ಶಿಕ್ಷಕ ಸಮುದಾಯವನ್ನ ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಮುಂದಿನ ಶೈಕ್ಷಣಿಕ ಸಾಲಿನ ಪ್ರಾರಂಭಕ್ಕೆ ಮುನ್ನ ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಲಸಿಕೆ ನೀಡುವಲ್ಲಿ ಪ್ರಾಧಾನ್ಯತೆ ನೀಡಬೇಕಿದ್ದು, ಈ ಕುರಿತು ಆರೋಗ್ಯ ಇಲಾಖೆಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ ಸುರೇಶ್ ಕುಮಾರ್ ಈ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಅವರೂ ಸಹ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಸಹ ಮಾತನಾಡುವುದಾಗಿ ತಿಳಿಸಿದರು. ಕೂಡಲೇ ಈ ಕುರಿತು ಅರೋಗ್ಯ ಇಲಾಖೆಗೆ ಸಲ್ಲಿಸಿರುವ ಅಂಕಿ ಅಂಶಗಳನ್ನು ಅನುಪಾಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದೂ ಸುರೇಶ್ ಕುಮಾರ್ ತಿಳಿಸಿದರು.

    ಅಲ್ಲದೇ, ಕೋವಿಡ್ ಮೂರನೇ ಅಲೆ ಅಪ್ಪಳಿಸಬಹುದೆಂಬ ವರದಿಗಳ ಹಿನ್ನೆಲೆಯಲ್ಲಿ ನಮ್ಮ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು, ಆರೋಗ್ಯ ಸಚಿವರೊಂದಿಗೆ ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದೂ ಸುರೇಶ್ ಕುಮಾರ್ ಹೇಳಿದರು.

    ಶಿಕ್ಷಕರ ವರ್ಗಾವಣೆ ಚುರುಕುಗೊಳಿಸಿ:
    ಈಗಾಗಲೇ ಶಿಕ್ಷಕರ ವರ್ಗಾವಣೆ ಬಹಳ ತಡವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೂಚಿಸಲಾಗಿದ್ದು, ಲಾಕ್ ಡೌನ್ ಮುಗಿದ ಕೂಡಲೇ ಪ್ರಕ್ರಿಯೆ ಪ್ರಾರಂಭಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು. ಶಿಕ್ಷಕರು ಇಲಾಖೆಯಿಂದ ತುಂಬಾ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಅವರಿಗೆ ನೀಡಿದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕಿದೆ. ಇದರಲ್ಲಿ ವಿಳಂಬ ಮಾಡಬಾರದೆಂದು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

    ವೃಂದ ಮತ್ತು ನೇಮಕಾತಿ ನಿಯಮ:
    6-8ನೇ ತರಗತಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವೃಂದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಆದೇಶ ಮಾಡಲಾಗಿತ್ತು. ವಿಳಂಬದ ಕಾರಣ ನೇಮಕಾತಿಗೆ ಯಾವುದೇ ಕ್ರಮವಾಗಿಲ್ಲ. ಕಾಲಮಿತಿ ವಿಧಿಸಿಕೊಂಡು ಇದನ್ನು ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನೇಮಕಾತಿಗೆ ನಿಬರ್ಂಧ ಇಲ್ಲದ ಕಾರಣ, ಆ ಪ್ರದೇಶದ ಖಾಲಿ ಹುದ್ದೆಗಳ ನೇಮಕಾತಿಗೆ ಕೂಡಲೇ ಕ್ರಿಯಾಯೋಜನೆ ರೂಪಿಸಿ ಮಂಡಿಸಬೇಕೆಂದು ಸೂಚಿಸಿದರು.

    ಸಂಕನೂರ ನೇತೃತ್ವದ ಸಮಿತಿ ವರದಿ:
    ಶಾಲಾಕಾಲೇಜುಗಳ ಆರ್.ಆರ್.ನವೀಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ವರದಿ ಮಂಡಿಸಲು ರಚಿಸಲಾಗಿದ್ದ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ನೇತೃತ್ವದ ಸಮಿತಿ ವರದಿ ಕುರಿತಂತೆ ಪ್ರಸ್ತಾಪಿಸಿದ ಸಚಿವರು, ಈ ಕುರಿತ ಪ್ರಗತಿ ಪರಿಶೀಲಿಸಿ ವರ್ಚುವಲ್ ಮೂಲಕ ಸಭೆ ನಡೆಸಿ ಶೀಘ್ರವೇ ವರದಿ ನೀಡುವ ಸಂಬಂಧದಲ್ಲಿ ಸಂಕನೂರು ಅವರೊಂದಿಗೆ ಚರ್ಚಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ತಾವೂ ಸಹ ಸಂಕನೂರು ಅವರೊಂದಿಗೆ ಮಾತನಾಡಿ ಸಾಧ್ಯವಾದಷ್ಟು ಶೀಘ್ರವೇ ವರದಿ ಕೋರುವುದಾಗಿ ತಿಳಿಸಿದರು.

    ದೀಕ್ಷಾ ಆಪ್ ಸದ್ಬಳಕೆಗೆ ಸೂಚನೆ:
    ಭೌತಿಕ ತರಗತಿಗಳ ಅನುಪಸ್ಥಿತಿಯಲ್ಲಿ ಆನ್ ಲೈನ್ ಶಿಕ್ಷಣದ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದ ಪೋರ್ಟಲ್ ದೀಕ್ಷಾ ಆಪ್ ಮೂಲಕ ಪದವಿ ಪೂರ್ವ ವಿದ್ಯಾರ್ಥಿಗಳು ಕಲಿಕೆ ಪ್ರಕ್ರಿಯೆಯಲ್ಲಿ ತೊಡಗಲು ಅನುವಾಗುವಂತೆ ಪಠ್ಯ ಭಾಗಗಳನ್ನು ಅದರಲ್ಲಿ ಅಳವಡಿಸಲಾಗುತ್ತಿದ್ದು, ಮುಂದಿನ ವಾರದಲ್ಲಿ ಪೋರ್ಟಲ್ ಲೋಕಾರ್ಪಣೆ ಮಾಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

    ಇದು ವಿಶ್ವದಲ್ಲೇ ಅತಿ ಹೆಚ್ಚು ಬಳಕೆಯಲ್ಲಿರುವ ಪೋರ್ಟಲ್ ಆಗಿದ್ದು, ದೀಕ್ಷಾ ಪೋರ್ಟಲ್ ನಲ್ಲಿ ಅತಿ ಹೆಚ್ಚು ಪಠ್ಯ ಲಭ್ಯವಿರುವ ರಾಜ್ಯಗಳಲ್ಲಿ ಕರ್ನಾಟಕವೂ ಉತ್ತಮ ಸ್ಥಾನದಲ್ಲಿದೆ. ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ 1ರಿಂದ 10ನೇ ತರಗತಿಗಳಿಗೆ ಅನ್ವಯವಾಗುವಂತೆ 22 ಸಾವಿರ ಇ-ಪಠ್ಯಗಳನ್ನು ಅಳವಡಿಸಲಾಗಿದೆ. ಎಲ್ಲ ಪಠ್ಯಪುಸ್ತಕಗಳು, ವರ್ಕ್ ಪುಸ್ತಕಗಳು, ತರಬೇತಿ ಪಠ್ಯಗಳು ಅಧ್ಯಾಯವಾರು ದೀಕ್ಷಾ ಆಪ್ ನಲ್ಲಿ ಲಭ್ಯವಿದೆ. ಹಾಗೆಯೇ ಪದವಿ ಪೂರ್ವ ಶಿಕ್ಷಣಕ್ಕೆ ಅನುವಾಗುವಂತೆಯೂ ಪಠ್ಯರಚನೆ ಪೂರೈಸಿ ಆಪ್ ಗೆ ಅಪ್ ಲೋಡ್ ಮಾಡಲಾಗಿದೆ. ಪದವಿ ಪೂರ್ವ ಉಪನ್ಯಾಸಕರ ತರಬೇತಿ ಮಾಡ್ಯೂಲ್ ನ್ನು ಸಹ ಅಪ್ ಲೋಡ್ ಮಾಡಲಾಗುತ್ತಿದೆ. ಈ ಆ್ಯಪ್ ಬಳಕೆಯನ್ನು ನಮ್ಮ ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಪಡೆಯಬೇಕೆಂದು ಸಚಿವರು ಕೋರಿದರು.

    ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಪರ್ಯಾಯ ಬೋಧನಾ ಕ್ರಮಗಳಿಗೆ ಆದ್ಯತೆ ಇರಲಿದ್ದು, ಈಗಿನಿಂದಲೇ ದೂರದರ್ಶನ, ಆಕಾಶವಾಣಿಯಂತಹ ಸಮೂಹ ಮಾಧ್ಯಮಗಳು ಸೇರಿದಂತೆ ತಂತ್ರಜ್ಞಾನಾಧಾರಿತ ಬೋಧನೆಯ ಸಂಪೂರ್ಣ ಕ್ರಿಯಾಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದೂ ಸುರೇಶ್ ಕುಮಾರ್ ತಿಳಿಸಿದರು.

    ಸಕಾಲಕ್ಕೆ ಪಠ್ಯಪುಸ್ತಕ ಪೂರೈಕೆಗೆ ಸೂಚನೆ:
    ಭೌತಿಕವಾಗಿ ಶಾಲೆಗಳು ಆರಂಭವಾಗುವುದು ತಡವಾದರೂ ಸರಿಯೇ ಮಕ್ಕಳ ಕಲಿಕೆಗೆ ಪೂರಕವಾಗಿ ಪಠ್ಯಪುಸ್ತಕಗಳನ್ನು ಸಕಾಲದಲ್ಲಿ ತಲುಪಿಸಲು ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸಬೇಕು. ಮುಂದಿನ ಎರಡು ತಿಂಗಳ ಅವಧಿಯಲ್ಲಿ ಪುಸ್ತಕಗಳು ಪ್ರತಿಯೊಬ್ಬ ವಿದ್ಯಾರ್ಥಿಗೆ ತಲುಪಬೇಕು ಎಂದು ಸಚಿವರು ಸೂಚಿಸಿದರು.

    ಶಾಲಾ ಶುಲ್ಕದ ಗೊಂದಲ ಪರಿಹಾರ:
    ಪ್ರಸ್ತುತ ನ್ಯಾಯಾಲಯದ ಅಂಗಳದಲ್ಲಿರುವ ಶಾಲಾ ಶುಲ್ಕಕ್ಕೆ ಸಂಬಂಧಿಸಿದ ಪ್ರಕರಣದ ಮಾಹಿತಿ ಪಡೆದ ಸಚಿವರು, ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳಿಗೆ ತೊಂದರೆಯಾಗದ ರೀತಿಯಲ್ಲಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ಮಾರ್ಗಗಳನ್ನು ಆಲೋಚಿಸಬೇಕೆಂದು ಸಲಹೆ ನೀಡಿದರು.

    ಸಭೆಯಲ್ಲಿ ಪಿಯು ಇಲಾಖೆ ನಿರ್ದೇಶಕಿ ಆರ್. ಸ್ನೇಹಲ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್ ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

  • ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮನೆಯ ಹಂಚು ಏರಿದ ಬಿಎ ವಿದ್ಯಾರ್ಥಿನಿ

    ಆನ್‍ಲೈನ್ ಕ್ಲಾಸಿಗೆ ಹಾಜರಾಗಲು ಮನೆಯ ಹಂಚು ಏರಿದ ಬಿಎ ವಿದ್ಯಾರ್ಥಿನಿ

    ತಿರುವನಂತಪುರಂ: ಕೊರೊನಾ ಮಹಾಮಾರಿಯ ಅಟ್ಟಹಾಸದಿಂದ ಇದೀಗ ತಗರತಿಗಳೆಲ್ಲವೂ ಆನ್ ಲೈನ್ ನಲ್ಲೇ ನಡೆಯುತ್ತಿದೆ. ಆದರೆ ಇಲ್ಲಿ ಸಮಸ್ಯೆಯೆಂದರೆ ಕೆಲವರಿಗೆ ತರಗತಿಗೆ ಹಾಜರಾಗಲು ನೆಟ್ ವರ್ಕ್ ಇಲ್ಲದೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳದ ಪದವಿ ವಿದ್ಯಾರ್ಥಿನಿಯೊಬ್ಬಳು ಒಳ್ಳೆಯ ಉಪಾಯವೊಂದನ್ನು ಕಂಡುಕೊಂಡಿದ್ದಾಳೆ.

    ಹೌದು. ಕುಟ್ಟಿಪುರಂ ಕೆಎಂಸಿಟಿ ಆರ್ಟ್ಸ್ & ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ನಮಿತಾ, ಮೊಬೈಲ್ ನೆಟ್‍ವರ್ಕ್ ಇಲ್ಲವೆಂದು ತನ್ನದೇ ಆದ ಐಡಿಯಾವೊಂದನ್ನು ಕಂಡುಕೊಂಡು ಇದೀಗ ಭಾರೀ ಸುದ್ದಿಯಾಗಿದ್ದಾಳೆ.

    ಕೊಟ್ಟಕಲ್ ಸಮೀಪದ ಅರೀಕ್ಕಲ್ ನಿವಾಸಿ ನಮಿತಾ ಬಿಎ ಐದನೇ ಸೆಮಿಸ್ಟರ್ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ ಕೊರೊನಾ ಲಾಕ್ ಡೌನ್ ಪರಿಣಾಮ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿದ್ದು, ಆನ್ ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮಿತಾ ತನ್ನ ಮನೆಯ ಮೇಲೆ ಹಂಚಿನಲ್ಲಿ ಮೊಬೈಲ್ ನೆಟ್ ವರ್ಕ್ ಸಿಗುವುದನ್ನು ಕಂಡುಕೊಂಡಿದ್ದಾಳೆ. ಹೀಗಾಗಿ ಸುಮಾರು 4 ಗಂಟೆಗಳ ಕಾಲ ಅಲ್ಲಿಯೇ ಕುಳಿತು ತರಗತಿಗೆ ಹಾಜರಾಗಿದ್ದಾಳೆ.

    ಈ ಬಗ್ಗೆ ಮಾತನಾಡಿರುವ ನಮಿತಾ, ನನ್ನ ಮನೆಯ ಸುತ್ತಮುತ್ತ ಎಲ್ಲಾ ಕಡೆ ಮೊಬೈಲ್ ನೆಟ್ ವರ್ಕ್ ಗಾಗಿ ಅಲೆದಾಡಿದ್ದೇನೆ. ಆದರೆ ಎಲ್ಲಿಯೂ ನೆಟ್‍ವರ್ಕ್ ಸಿಗುತ್ತಿರಲಿಲ್ಲ. ಕೊನೆಗೆ ಮನೆಯ ಹಂಚಿನ ಮೇಲೆ ಹೋದಾಗ ಅಲ್ಲಿ ನೆಟ್‍ವರ್ಕ್ ಸಿಕ್ಕಿತ್ತು ಎಂದು ಹೇಳಿದ್ದಾಳೆ.

    ಮೊಬೈಲ್ ನೆಟ್ ವರ್ಕ್ ಹುಡುಕಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಮನೆಯ ಸುತ್ತಮುತ್ತ ಎಲ್ಲಿಯೂ ನೆಟ್‍ವರ್ಕ್ ಸಿಗದೆ ಪರದಾಡುತ್ತಿದ್ದೆ. ಕೊನೆಗೂ ಮನೆಯ ಮಹಡಿ ಹತ್ತಿ ಕುಳಿತು ಆನ್ ಲೈನ್ ತರಗತಿಗೆ ಹಾಜರಾದೆ. ಸೋಮವಾರ ಹಾಗೂ ಮಂಗಳವಾರ ಛತ್ರಿ ಹಿಡಿದುಕೊಂಡೇ ಪಾಠ ಕೇಳಿದೆ. ಆದರೆ ಬುಧವಾರ ಬಿಸಿಲಿದ್ದರಿಂದ ಆರಮಾಗಿ ತರಗತಿಗೆ ಹಾಜರಾಗಿದ್ದೇನೆ. ಬರೀ ಮಳೆಯಾದರೆ ತೊಂದರೆ ಇಲ್ಲ. ಆದರೆ ಮಿಂಚು ಹಾಗೂ ಗುಡುಗಿನಿಂದಾಗಿ ಸ್ವಲ್ಪ ಭಯವಾಯಿತು. ನನ್ನಂತೆ ಹಲವು ವಿದ್ಯಾರ್ಥಿಗಳು ಮೊಬೈಲ್ ನೆಟ್ ವರ್ಕ್ ಇಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ. ಹೀಗೆ ಹಲವರು ಬೇರೆ ಬೇರೆ ವಿಧಾನಗಳ ಮೂಲಕ ಮೊಬೈಲ್ ನೆಟ್‍ವವರ್ಕ್ ಪಡೆದುಕೊಳ್ಳುವ ಮೂಲಕ ಕ್ಲಾಸಿಗೆ ಹಾಜರಾಗಿದ್ದಾರೆ ಎಂದು ತನ್ನ ಅನುಭವ ಹಾಗೂ ಸ್ನೇಹಿತರ ಕಷ್ಟವನ್ನು ಕೂಡ ನಮಿತಾ ಹಂಚಿಕೊಂಡಿದ್ದಾಳೆ.

    ನಮಿತಾ ತಂದೆ ಕೆ.ಸಿ ನಾರಾಯಣ್ ಅವರು ಕೋಟಕಲ್ ಆರ್ಯ ವೈದ್ಯ ಶಾಲೆಯ ಉದ್ಯೋಗಿಯಾಗಿದ್ದು, ತಾಯಿ ಎಂ. ಜೀಜಾ ಮಲ್ಲಪುರಂನಲ್ಲಿರುವ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ-ತಾಯಿ ಸಹಾಯದಿಂದಾಗಿ ನಮಿತಾ ಮನೆಯ ಮಹಡಿಯಲ್ಲಿ ಕುಳಿತು ತರಗತಿಗೆ ಹಾಜರಾಗಿದ್ದಾಳೆ. ಈಕೆಯ ಸಹೋದರಿ ನಯನಾ ಬಿಎಎಂಎಸ್ 4ನೇ ವರ್ಷದಲ್ಲಿ ಕಲಿಯುತ್ತಿದ್ದು, ಆಕೆಯೂ ತಂಗಿಗೆ ಸಂಪೂರ್ಣ ಸಹಕಾರ ನೀಡಿದ್ದಾಳೆ. ನಾನು ಕೆಲವು ಡಾಟಾ ಆಪರೇಟರ್ ಗಳ ಮೊರೆ ಹೋದೆ. ಆದರೆ ಏನೇ ಮಾಡಿದರೂ ನೆಟ್ ವರ್ಕ್ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ನಮಿತಾ ತಂದೆ ಪ್ರತಿಕ್ರಿಯಿಸಿದ್ದಾರೆ.

  • ಕೊಲ್ಲೂರು, ಕೋಟ, ಮಂದಾರ್ತಿಯಲ್ಲಿ ಆನ್‍ಲೈನ್ ಪೂಜೆಗೆ ಆಡಳಿತ ಮಂಡಳಿ ರೆಡಿ

    ಕೊಲ್ಲೂರು, ಕೋಟ, ಮಂದಾರ್ತಿಯಲ್ಲಿ ಆನ್‍ಲೈನ್ ಪೂಜೆಗೆ ಆಡಳಿತ ಮಂಡಳಿ ರೆಡಿ

    ಉಡುಪಿ: ರಾಜ್ಯ ಸರ್ಕಾರದ ಹೊಸ ನಿಯಮದ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಮೂರು ಕಡೆ ಆನ್‍ಲೈನ್ ಪೂಜೆಗೆ ಅವಕಾಶ ನೀಡಲಾಗಿದೆ. ಕೊಲ್ಲೂರಿನಲ್ಲಿ ಈಗಾಗಲೇ ಭಕ್ತರಿಗೆ ಅವಕಾಶವಿದ್ದು, ಕೋಟ ಅಮೃತೇಶ್ವರಿ ಮತ್ತು ಮಂದಾರ್ತಿ ಕ್ಷೇತ್ರ ಹೊಸ ಸೇರ್ಪಡೆಯಾಗಿದೆ.

    ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳಲ್ಲಿ ಆನ್‍ಲೈನ್ ಪೂಜೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮುಜರಾಯಿ ಇಲಾಖೆಯಿಂದ ಉಡುಪಿ ಜಿಲ್ಲೆಯೊಳಗೆ ಮೂರು ದೇವಸ್ಥಾನಗಳಿಗೆ ಅವಕಾಶವಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಈಗಾಗಲೇ ಭಕ್ತರಿಗೆ ಬುಕ್ ಮಾಡಿ ಪೂಜೆ ಮಾಡಿಸಿ, ಪೋಸ್ಟ್ ಮೂಲಕ ಪ್ರಸಾದ ಪಡೆಯುವ ಅವಕಾಶ ಇತ್ತು. ಇದೀಗ ಕೋಟ ಅಮೃತೇಶ್ವರಿ, ಮಂದಾರ್ತಿ ದುರ್ಗಾ ಪರಮೇಶ್ವರಿ ದೇಗುಲದಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರಕ್ಕೆ ಬರಲು ಸಾಧ್ಯವಾಗದವರು ಈ ಅವಕಾಶ ಪಡೆಯಬಹುದು.

    ಜೂನ್ 1 ರಿಂದ ನಮ್ಮಲ್ಲಿ ಆನ್‍ಲೈನ್ ಪೂಜೆ ಆರಂಭವಾಗಲಿದೆ ಎಂದು ಕೋಟ ಅಮೃತೇಶ್ವರಿ ದೇವಸ್ಥಾನ ಮಾಹಿತಿ ನೀಡಿದೆ. ಕೋಟ ಅಮೃತೇಶ್ವರಿ ದೇವರಿಗೆ ವಿಶೇಷ ಅಭಿಷೇಕ ಬೆಳಗ್ಗೆ ಸಂಪನ್ನವಾಗುತ್ತದೆ. ಅಲಂಕಾರ ಪೂಜೆ, ಮಂಗಳಾರತಿ ನಡೆಸಿ ಲಾಕ್ ಡೌನ್ ಸಂದರ್ಭದಲ್ಲಿ ಬಾಗಿಲು ಮುಚ್ಚುತ್ತಿದ್ದರು, ಜೂನ್ 1 ರಿಂದ ದೇವಸ್ಥಾನ ತೆರೆಯಲಿದ್ದು, ಭಕ್ತರಿಗೆ ದರ್ಶನ ಅವಕಾಶ ಸಿಗಲಿದೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಮಾದಪ್ಪನ ದರ್ಶನ ಆರಂಭ

    ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆನ್ ಲೈನ್ ಪೂಜೆಗೆ ಅವಕಾಶ ಆರಂಭವಾಗಿದೆ. ಭಕ್ತರು ಆನ್‍ಲೈನ್ ಮೂಲಕ ಪೂಜೆ ಬುಕ್ ಮಾಡಬಹುದು. ಸರ್ಕಾರದ ನಿಯಮದಂತೆ ಪೂಜೆ ನಡೆಸುತ್ತೇವೆ. ಜೂನ್ 1ರಿಂದ ಭಕ್ತರಿಗೆ ನೇರ ದರ್ಶನ ಅವಕಾಶವಿದೆ. ಸರ್ಕಾರದ ಸುತ್ತೋಲೆ ಈವರೆಗೆ ನಮ್ಮ ಕೈ ಸೇರಿಲ್ಲ. ದೇಗುಲ ತೆರವಿಗೆ ಎಲ್ಲಾ ಸ್ವಚ್ಛತೆ, ಸಿದ್ಧತೆ ಮಾಡುತ್ತೇವೆ ಎಂದು ಮಂದರ್ತಿ ದೇವಸ್ಥಾನ ಧರ್ಮದರ್ಶಿ ಧನಂಜಯ ಶೆಟ್ಟಿ ಮಾಹಿತಿ ನೀಡಿದ್ದಾರೆ.

  • ಅನ್‍ಲೈನ್‍ಗೂ ವಕ್ಕರಿಸಿತು ಕೊರೊನಾ ವೈರಸ್!

    ಅನ್‍ಲೈನ್‍ಗೂ ವಕ್ಕರಿಸಿತು ಕೊರೊನಾ ವೈರಸ್!

    ಬೆಂಗಳೂರು: ಕೊರೊನಾ ವೈರಸ್ ಫೋಬಿಯಾ ಅನ್‍ಲೈನ್‍ಗೂ ಹೊಕ್ಕಿದೆ. ಕೊರೊನಾ ವೈರಸ್ ಓವರ್ ಡೋಸ್‍ಗೆ ಜನ ತಲೆಕೆಡಿಸಿಕೊಂಡಿದ್ದಾರೆ. ವೈರಸ್‍ನಿಂದ ಪಾರಾಗೋದು ಹೇಗೆ ಅನ್ನೋ ಪ್ರಯತ್ನದಲ್ಲಿ ಇರೋವಾಗ್ಲೇ ಡೆಂಜರಸ್ ಕೊರೊನಾ ಅನ್‍ಲೈನ್‍ಗೂ ಆವರಿಸಿ ಜನರಲ್ಲಿ ಮತ್ತಷ್ಟು ಭೀತಿಯನ್ನ ಹುಟ್ಟಿಸಿದೆ.

    ಕೊರೊನಾ ವೈರಸ್ ಇಡೀ ವಿಶ್ವವನ್ನೇ ಭೀತಿಯಲ್ಲಿ ಮುಳುಗಿಸಿದೆ. ಚೀನಾದಲ್ಲಿ ಜನ್ಮತಳೆದು ದೇಶ-ದೇಶಗಳನ್ನ ಆವರಿಸುತ್ತಿರುವ ಕೊರೊನಾ ವೈರಸ್ ತಡೆಗೆ ಜನ ತಲೆಕೆಡಿಸಿಕೊಂಡಿದ್ದಾರೆ. ಯಾವಾಗ ಮಾಸ್ಕ್, ಕೊರೊನಾ ವೈರಸ್ ತಡೆಯಬಹುದು ಅನ್ನೊದು ಗೊತ್ತಾಯ್ತೋ ಜನ ಮಾಸ್ಕ್ ಹಿಂದೆ ಬಿದ್ರು. ಆದರೆ ಡಿಮ್ಯಾಂಡ್‍ನಿಂದಾಗಿ ಮಾಸ್ಕ್ ಎಲ್ಲೂ ಸಿಗದಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡವರು ಲಾಭ ಮಾಡೋ ಮಾಸ್ಕ್ ದಂಧೆಗಿಳಿದಿದ್ದಾರೆ.

    ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ಅದರಲ್ಲೂ ರಾಜ್ಯದಲ್ಲಿ ಇದೀಗ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಗಳ ಬೇಡಿಕೆ ಹೆಚ್ಚಾಗಿದ್ದಲ್ಲದೇ ಎಲ್ಲಿಯೂ ಸಿಗದ ಪರಿಸ್ಥಿತಿ ಶುರುವಾಗಿದೆ. ಇದರಿಂದ ಜನ ಅನ್‍ಲೈನ್‍ನಲ್ಲಿ ಮಾಸ್ಕ್ ಖರೀದಿಗೆ ಮುಂದಾಗಿದ್ದಾರೆ. ಆದರೆ ಅಲ್ಲಿಯೂ ಮಾಸ್ಕ್ ಬೆಲೆ ಗಗನಕ್ಕೇರಿದೆ. ಅನಿವಾರ್ಯವಾಗಿ ಖರೀದಿ ಮಾಡೋ ಪರಿಸ್ಥಿತಿ ನಿರ್ಮಾಣವಾಗಿದೆ.

    ಒಟ್ಟಾರೆ ಕೊರೊನಾ ದಾಳಿಯನ್ನ ಎದುರಿಸಲು ಜನ ಸರ್ಕಸ್ ಮಾಡುವಂತಾಗಿದೆ. ಹೇಗಾದರೂ ಮಾಡಿ ಆ ಡೆಂಜರಸ್ ವೈರಸ್ ನಿಂದ ಬಚಾವ್ ಆದರೆ ಸಾಕು ಎಂದು ಮಾಸ್ಕ್, ಸ್ಯಾನಿಟೈಸರ್ ಖರೀದಿ ಜನ ಮುಂದಾಗಿದ್ರೂ ಅದರ ಲಭ್ಯತೆ ಇಲ್ಲದಂತಾಗಿದೆ.

  • ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ವಂಚನೆ- ಸಿಸಿಬಿಯಿಂದ ಆರೋಪಿಗಳ ಬಂಧನ

    ಸಾರ್ವಜನಿಕರಿಗೆ ಆನ್‍ಲೈನ್‍ನಲ್ಲಿ ವಂಚನೆ- ಸಿಸಿಬಿಯಿಂದ ಆರೋಪಿಗಳ ಬಂಧನ

    – ವಂಚನೆ ಮಾಡುತ್ತಿದ್ದಿದ್ದು ಹೇಗೆ?

    ಮಡಿಕೇರಿ: ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರನ್ನು ವಂಚಿಸಿರುವ ವ್ಯವಸ್ಥಿತ ಆನ್‍ಲೈನ್ ವಂಚಕರ ತಂಡವೊಂದನ್ನು ಬಂಧಿಸುವಲ್ಲಿ ಸಿಸಿಬಿ (ಅಪರಾಧ ಪತ್ತೆ ದಳ) ಪೊಲೀಸರು ಯಶಸ್ವಿಯಾಗಿದ್ದಾರೆ.

    ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪನ್ನೇಕರ್ ಮಾತನಾಡಿ, ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಸಾರ್ವಜನಿಕರಿಗೆ ಆಮಿಷವೊಡ್ಡಿ ಅವರಿಂದ ಹಣ ಹೂಡಿಕೆ ಮಾಡಿಸಿದ್ದ ಬೆಂಗಳೂರಿನ ಅನಧಿಕೃತ Capitalraitiin.in ಎನ್ನುವ ವೆಬ್ ಸೈಟ್‍ನಲ್ಲಿ ಮೋಸ ಮಾಡಿದ್ದ ಕುಶಾಲನಗರದ ಮೂಲದ ಎ.ಜಾನ್ (45), ಶಶಿಕಾಂತ್ (37) ಹಾಗೂ (39) ಆಂಟೋನಿ ಎನ್ನುವ ಮೂವರನ್ನು ಬಂಧಿಸಲಾಗಿದೆ. ತಂಡದ 5 ಮಂದಿ ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿಸಿದರು.

    ವಂಚಿಸಿದ್ದು ಹೇಗೆ?:
    ಕೊಡಗು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಸಾರ್ವಜನಿಕರು ಈ ವಂಚಕರ ಆನ್‍ಲೈನ್ ಜಾಲಕ್ಕೆ ಮೋಸ ಹೋಗಿದ್ದಾರೆ. ಸಾಕಷ್ಟು ಜನರು ಕೋಟ್ಯಂತರ ಹಣವನ್ನು ಕಳೆದುಕೊಂಡಿದ್ದಾರೆ. ಆರೋಪಿ ಶಶಿಕಂತಾ ಅಡ್ಮಿನ್ ಮಾಡಿಕೊಳ್ಳುತ್ತಿದ್ದ. ಹಣ ತೊಡಗಿಸುವ ಮೊದಲು ಶಶಿಕಾಂತ್‍ನನ್ನು ಸಂಪರ್ಕಿಸಿ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ನೊಂದಿಗೆ ಒಂದು ಇ-ಪಿನ್‍ಗೆ 1000 ರೂ. ಪಾವತಿಸಿ ಖರೀದಿಸಬೇಕು. ಸೈಟ್‍ಗೆ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಬಳಸಿ ಲಾಗಿನ್ ಆಗಿ ಒಂದು ಯೂಸರ್ ಐಡಿ ಪಡೆಯಲು 3000 ರೂ. ಹಣ ತೊಡಗಿಸಬೇಕು.

    ಪ್ರತಿನಿತ್ಯ ಒಂದು ಯೂಸರ್ ಐಡಿಯಿಂದ ಮೂರು ಇ-ಪಿನ್ ಮಾತ್ರ ಬಳಸಬಹುದು. ಹಣ ಹೂಡಿಕೆಗೆ ಲಾಗಿನ್ ಆದ ಕೂಡಲೇ ತಾವು ಹೂಡಿಕೆ ಮಾಡುತ್ತಿರುವ 3000 ರೂ. ಹಣ ಯಾರ ಖಾತೆಗೆ ವರ್ಗಾವಣೆ ಆಗಬೇಕೆಂದು ಮಾನೀಟರ್‍ನಲ್ಲಿ ತೋರಿಸಲಾಗುತ್ತಿತ್ತು. ಹಣವನ್ನು ಗೂಗಲ್ ಪೇ, ಪೋನ್ ಪೇ ಅಥವಾ ನೆಟ್ ಬ್ಯಾಂಕಿಂಗ್‍ನಲ್ಲಿ ಹಣ ಹಾಕುವುದಾಗಿ ತಿಳಿಸಿ, ಹಣ ಸಂದಾಯದ ರಶೀದಿಯನ್ನು ಅಪ್‍ಲೋಡ್ ಮಾಡಿದ ನಂತರ ಹಣ ಹೂಡಿಕೆ ಮಾಡಿದ ವ್ಯಕ್ತಿಯ ಹಿರಿತನ ಪ್ರಾರಂಭವಾಗುತ್ತದೆ. ಹೀಗೆ ಒಂದು ವ್ಯವಸ್ಥಿತವಾದ ಆನ್ ಲೈನ್ ಮೂಲಕ ವಂಚಿಸುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವರಿಸಿದರು.

    ಸಾಕಷ್ಟು ಆನ್‍ಲೈನ್ ವಂಚನೆ ಪ್ರಕರಣಗಳು ರಾಜ್ಯಾದ್ಯಂತ ಸಕ್ರಿಯವಾಗಿದ್ದು ಜಿಲ್ಲೆಯ ಜನತೆ ಎಚ್ವರಿಕೆಯಿಂದ ಇರಬೇಕು ಎಂದು ಕಿವಿ ಮಾತು ಹೇಳಿದರು.

  • ರಾಜ್ಯದಲ್ಲಿ ಆ್ಯಕ್ಟಿವ್ ಆಗಿದೆ ಆನ್ ಲೈನ್ ವೇಶ್ಯಾವಾಟಿಕೆ ವಂಚನೆ ದಂಧೆ

    ರಾಜ್ಯದಲ್ಲಿ ಆ್ಯಕ್ಟಿವ್ ಆಗಿದೆ ಆನ್ ಲೈನ್ ವೇಶ್ಯಾವಾಟಿಕೆ ವಂಚನೆ ದಂಧೆ

    – ಹೇಗೆ ವಂಚಿಸುತ್ತಾರೆ ಗೊತ್ತಾ?

    ಕಲಬುರಗಿ: ಇಷ್ಟು ದಿನ ಆನ್‍ಲೈನ್‍ನಲ್ಲಿ ಹಣ ಡಬಲ್ ನೀಡುವುದಾಗಿ ಇಲ್ಲ, ನಿಮಗೆ ಬಹುಮಾನ ಸಿಕ್ಕಿದೆ ಅಂತ ವಂಚಿಸಲಾಗುತ್ತಿತ್ತು. ಆದರೆ ಇದೀಗ ಬಣ್ಣ ಬಣ್ಣದ ಚಿಟ್ಟೆಯಂತಹ ಹುಡುಗಿಯರ ಫೋಟೋವನ್ನು ಯುವಕರಿಗೆ ತೋರಿಸಿ ಡೆಟಿಂಗ್ ಹೆಸರಲ್ಲಿ ವಂಚಿಸುವ ಜಾಲ ಸಕ್ರೀಯವಾಗಿದೆ. ಈ ಜಾಲದ ಬಗ್ಗೆ ಹಲವು ಯುವಕರು ಲಾಗಿನ್ ಆಗಿ ಹಣವನ್ನು ಸಹ ಕಳೆದುಕೊಂಡಿದ್ದಾರೆ. ಹೀಗಿದ್ದರು ಸಹ ಈ ಆನ್‍ಲೈನ್ ವೇಶ್ಯಾವಾಟಿಕೆ ಬಲೆಗೆ ಬೀಳುವ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

    ಯುವಕರನ್ನೇ ಟಾರ್ಗೆಟ್ ಮಾಡುವ ಈ ಆನ್‍ಲೈನ್, ಕಾಲ್‍ಗರ್ಲ್ಸ್ ಅಂದ- ಚೆಂದದ ಯುವತಿಯರ ಫೋಟೋಗಳನ್ನೇ ಕಳುಹಿಸುತ್ತಾರೆ. ಈ ಮೂಲಕ ಯುವಕರ ವೀಕ್‍ನೆಸ್ ಎನ್‍ಕ್ಯಾಶ್ ಮಾಡಿಕೊಂಡ ಆನ್ ಲೈನ್ ಖದೀಮರು ಲೊಕೆಂಟೋ, ಚಾಯ್ಸ್ ಆಫ್ ಲವ್ ಸೇರಿದಂತೆ ಹಲವು ಆ್ಯಪ್‍ಗಳನ್ನು ಕ್ರಿಯೇಟ್ ಮಾಡಿದ್ದಾರೆ. ಆ ಆ್ಯಪ್‍ನಲ್ಲಿ ಹೋಗಿ ನೀವು ಡೆಟಿಂಗ್ ಸಲುವಾಗಿ ಲಾಗಿನ್ ಆದ ಕೂಡಲೇ ನಿಮ್ಮ ಮೊಬೈಲ್‍ಗೆ ಕಾಲ್ ಬರುತ್ತದೆ. ಅದಾದ ಬಳಿಕ ನಿಮ್ಮ ವಾಟ್ಸಪ್‍ಗೆ ಒಂದಕ್ಕಿಂತ-ಒಂದು ಸುಂದರವಾದ ಹುಡುಗಿಯರ ಫೋಟೋಗಳನ್ನು ಕಳುಹಿಸುತ್ತಾರೆ. ನಂತರ ನೀವು ಯಾವ ಜಿಲ್ಲೆ ಅಂತೀರಿ ಅಲ್ಲೇ ಸರ್ವಿಸ್ ನೀಡುವುದಾಗಿ ಹೇಳಿ ನಿಮ್ಮಿಂದ ಆನ್‍ಲೈನ್‍ನಲ್ಲಿ ಹಣ ಪಡೆಯುತ್ತಾರೆ. ಹೀಗೆ ನಿಮ್ಮ ಮೊಬೈಲ್‍ಗೇ ಬಂದ ಈ ರಂಬೆ-ಮೆನಕೆಯರಂತಹ ಫೋಟೋಗಳು ನೋಡಿ ನೀವು ಯಾಮಾರಿದ್ರೆ ನಿಮಗೆ ಮೂರು ನಾಮ ಬಿಳುವುದು ಮಾತ್ರ ಗ್ಯಾರಂಟಿಯಾಗಿದೆ.

    ಯುವಕರನ್ನೇ ನೈಸಾಗಿ ವಂಚಿಸಲೆಂದು ಈ ಆನ್ ಲೈನ್ ದಂಧೆಕೋರರು ಕಾಲ್‍ಗರ್ಲ್ಸ್ ಗಳನ್ನು ನೇಮಕ ಮಾಡಿಕೊಂಡಿದ್ದಾರೆ. ನೀವು ಒಂದು ಸಲ ಅಲ್ಲಿ ಲಾಗಿನ್ ಆಗುತ್ತಿದ್ದಂತೆ ಕಾಲ್‍ಗರ್ಲ್ ಗಳು ನೀವು ನೀಡಿರುವ ನಂಬರಿಗೆ ಕರೆ ಮಾಡಿ ಯುವಕರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ಬಳಿಕ ನಿಮ್ಮ ನಂಬರಿಗೆ ಅವರ ಅಕೌಂಟ್ ನಂಬರ್ ಮೆಸೇಜ್ ಹಾಕುತ್ತಾರೆ. ಅಲ್ಲಿಂದ ನೀವು ಎಲ್ಲಿತನಕ ಅವರು ನೀಡಿದ ಅಕೌಂಟ್‍ಗೇ ಹಣ ಹಾಕುವುದಿಲ್ಲವೋ ಅಲ್ಲಿಯವರೆಗೆ ಪದೇ ಪದೇ ಕಾಲ್ ಮಾಡುತ್ತಾನೆ ಇರುತ್ತಾರೆ.

    ಅದೇ ರೀತಿ ಫ್ರೀ ವೀಡಿಯೋ ಚಾಟ್ ಸಹ ಈ ಆ್ಯಪ್‍ನಲ್ಲಿದೆ. ಅಲ್ಲಿ ಸಹ ಹಲವು ನಂಬರ್ ಗಳನ್ನು ನೀಡಿದ್ದು ನೀವು ಅವರಿಗೆ ವಾಟ್ಸಪ್ ಮೆಸೇಜ್ ಹಾಕುತ್ತಿದ್ದಂತೆಯೇ ಅಲ್ಲಿ ಮೊದಲು ಹಣ ಪಡೆಯಲಾಗುತ್ತದೆ. ಈ ಕಾಲ್‍ಗರ್ಲ್ ಮಾತಿಗೆ ಮರಳಾಗಿ ಈ ಸುಂದರ ಯುವತಿಯರ ಫೋಟೋ ನೋಡಿ ನೀವೆನಾದರೂ ಯಾಮಾರಿ ಅವರ ಅಕೌಂಟ್‍ಗೆ ಹಣ ಹಾಕಿದರೆ ಕೂಡಲೇ ನಿಮ್ಮ ನಂಬರ್ ಅನ್ನು ಬ್ಲ್ಯಾಕ್‍ಲಿಸ್ಟ್ ಗೆ ಹಾಕುತ್ತಾರೆ. ನೀವು ಬೇರೆ ಮೊಬೈಲ್ ಬಳಸಿ ಅವರಿಗೇ ಕಾಲ್ ಮಾಡಿದರೂ ಆ ನಂಬರ್ ನಾಟ್ ರಿಚೆಬಲ್ ಎಂದು ಬರುತ್ತದೆ.

    ಸದ್ಯ ಈ ಜಾಲ ದೂರದ ಮುಂಬೈ-ದೆಹಲಿ ಸೇರಿದಂತೆ ಹಲವೆಡೆ ತಮ್ಮ ಕಚೇರಿಯನ್ನು ಹೊಂದಿದ್ದು, ಅಲ್ಲಿಂದಲೇ ಚೆಂದುಳ್ಳಿ ಚೆಲುವೆಯರ ಫೋಟೋ ತೋರಿಸಿ ಯುವಕರಿಗೆ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.

  • 2018ರ `ಅಮೆಜಾನ್ ಪ್ರೈಂ ಡೇ’ ಜುಲೈ 16 ರಂದು ಆರಂಭ: ಈ ಬಾರಿಯ ವಿಶೇಷತೆ ಏನು?

    2018ರ `ಅಮೆಜಾನ್ ಪ್ರೈಂ ಡೇ’ ಜುಲೈ 16 ರಂದು ಆರಂಭ: ಈ ಬಾರಿಯ ವಿಶೇಷತೆ ಏನು?

    ಬೆಂಗಳೂರು: ಆನ್ ಲೈನ್ ಶಾಪಿಂಗ್ ತಾಣ ಅಮೆಜಾನ್ ಸಂಸ್ಥೆ ತನ್ನ ಭಾರೀ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುವ `ಅಮೆಜಾನ್ ಪ್ರೈಂ ಡೇ’ ಅನ್ನು ಇದೇ ತಿಂಗಳ ಜುಲೈ 16 ರಿಂದ ಪ್ರಾರಂಭಿಸಲಿದೆ.

    ಕಳೆದ ವರ್ಷ ಅದ್ಧೂರಿಯಾಗಿ ಯಶಸ್ವಿಗೊಂಡಿದ್ದ `ಅಮೆಜಾನ್ ಪ್ರೈಂ ಡೇ’ ಅನ್ನು ಈ ವರ್ಷವು ಮುಂದುವರಿಸಲು ಸಂಸ್ಥೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಜುಲೈ ತಿಂಗಳ 16ನೇ ತಾರೀಖಿನಂದು ಮಾರಾಟ ಮಾಡಲು ತಯಾರಿ ನಡೆಸಿದೆ.

    `ಅಮೆಜಾನ್ ಪ್ರೈಂ ಡೇ’ ಕೊಡುಗೆ ಜುಲೈ 16ರ ಮಧ್ಯಾಹ್ನ 1ಕ್ಕೆ ಪ್ರಾರಂಭವಾಗಿ ಜುಲೈ 18ರ ಮಧ್ಯರಾತ್ರಿ 12ರವರೆಗೆ ಜಾರಿಯಲ್ಲಿರುತ್ತದೆ. ಒಟ್ಟು 36 ಗಂಟೆಗಳಲ್ಲಿ ಪ್ರತಿ 6 ಗಂಟೆಗೊಮ್ಮೆ ನೂತನ ಕೊಡುಗೆಗಳನ್ನು ಪರಿಚಯಿಸಲಿದೆ. ಅಲ್ಲದೇ ವಿಶೇಷವಾಗಿ ಎಚ್‍ಡಿಎಫ್‍ಸಿ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಹೆಚ್ಚಿನ ಶೇ. 10ರಷ್ಟು ರಿಯಾಯಿತಿ ನೀಡಲು ಸಿದ್ಧವಾಗಿದೆ. ಈ ಎಲ್ಲಾ ಆಫರ್ ಗಳು ಕೇವಲ `ಅಮೆಜಾನ್ ಪ್ರೈಂ ಮೆಂಬರ್ಸ್’ಗೆ ಮಾತ್ರ ಸೀಮಿತವಾಗಿದೆ.

    2018ರ ಪ್ರೈಂ ಡೇ ಅಂಗವಾಗಿ ನೂತನವಾಗಿ 200ಕ್ಕೂ ಹೆಚ್ಚು ಹೊಸ ವಸ್ತುಗಳನ್ನು ಪರಿಚಯಿಸಿ ಮಾರಾಟ ಮಾಡಲು ತಯಾರಾಗಿದೆ. ಹೆಸರಾಂತ ಕಂಪನಿಗಳಾದ ಒನ್ ಪ್ಲಸ್, ಸೆನ್ಹೈಸರ್, ಡಬ್ಲ್ಯೂಡಿ, ಗೋದ್ರೇಜ್, ಕ್ಲೌಡ್ ವಾಕರ್, ಸೀಗೇಟ್, ಸ್ಯಾಮ್‍ಸಂಗ್ ಹಾಗೂ ಹೋಮ್ ಅಂಡ್ ಕಿಚನ್, ಡೈಲಿ ನೀಡ್ಸ್, ಫ್ಯಾಶನ್ ಅಂಡ್ ಲೈಫ್ ಸ್ಟೈಲ್, ಹೆಚ್ಚಿನ ಉತ್ಪನ್ನಗಳಲ್ಲಿ ಭಾರೀ ರೀಯಾಯಿತಿ ನೀಡಲಿದ್ದು. ಪ್ರತಿ ಖರೀದಿಯಲ್ಲಿ ಒನ್ ಪ್ಲಸ್-6 ಸ್ಮಾರ್ಟ್ ಫೋನನ್ನು ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ನೀಡಿದೆ.

    ಏನಿದು ಅಮೆಜಾನ್ ಪ್ರೈಂ ಮೆಂಬರ್ಸ್?
    ಹಣವನ್ನು ಪಾವತಿಸಿ ಪಡೆಯುವ ಸೇವೆಯೇ ಅಮೆಜಾನ್ ಪ್ರೈಂ ಸೇವೆ. ಪ್ರೈಂ ಸದಸ್ಯರಾದರೆ ಡೆಲಿವರಿಗಾಗಿ(ಒಂದು ದಿನ, ಎರಡು ದಿನ) ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಅಷ್ಟೇ ಅಲ್ಲದೇ ಪ್ರೈಂ ವಿಡಿಯೋ, ಮ್ಯೂಸಿಕ್ ಗಳನ್ನು ಸಹ ಉಚಿತವಾಗಿ ನೋಡಬಹುದಾಗಿದೆ. ಹೊಸದಾಗಿ ರಿಲೀಸ್ ಆಗಿರುವ ಸಿನಿಮಾಗಳನ್ನು ಸಹ ಪ್ರೈಂ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿ ನೋಡಬಹುದಾಗಿದೆ. ಈ ಸೇವೆಯನ್ನು ಮೊದಲ ಬಾರಿಗೆ 13ವರ್ಷಗಳ ಹಿಂದೆ ಅಂದರೆ 2005ರ ಜನವರಿ 2ರಂದು ಆರಂಭಿಸಲಾಗಿತ್ತು. ಏಪ್ರಿಲ್ 2018ರ ವೇಳೆಗೆ ವಿಶ್ವದೆಲ್ಲೆಡೆ 10 ಕೋಟಿ ಪ್ರೈಂ ಸದಸ್ಯರನ್ನು ಅಮೆಜಾನ್ ಸಂಸ್ಥೆ ಹೊಂದಿದೆ. ಭಾರತದಲ್ಲಿ ಈ ಸೇವೆಯನ್ನು 2016 ಜುಲೈ ತಿಂಗಳಿನಲ್ಲಿ ಆರಂಭಿಸಿತ್ತು. 999 ರೂ. ನೀಡಿದ್ದಲ್ಲಿ ವರ್ಷ ಕಾಲ ಪ್ರೈಂ ಸೇವೆಗೆ ಸದಸ್ಯರಾಗಬಹುದಾಗಿದೆ. ಸದ್ಯ ಈಗ ತಿಂಗಳಿಗೆ 129 ರೂ., ವರ್ಷಕ್ಕೆ 999 ರೂ. ಪಾವತಿಸಿದರೆ ಅಮೇಜಾನ್ ಪ್ರೈಂ ಮೆಂಬರ್ ಆಗಬಹುದು.

  • ಖಾಸಗಿ ಕಂಪೆನಿ ಎಂಡಿ ಯಿಂದ ಮಹಿಳೆಗೆ ಲೈಂಗಿಕ ಕಿರುಕುಳ

    ಖಾಸಗಿ ಕಂಪೆನಿ ಎಂಡಿ ಯಿಂದ ಮಹಿಳೆಗೆ ಲೈಂಗಿಕ ಕಿರುಕುಳ

    ಬೆಂಗಳೂರು: ಕಂಪೆನಿಯೊಂದರಲ್ಲಿ ಕೆಲಸ ಮಾಡತ್ತಿದ್ದ ಮಹಿಳೆಗೆ ಕಂಪೆನಿಯ ಎಂಡಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ದೆಹಲಿ ಮೂಲದ ಲಾ ಕ್ಲಾಸಿ ಟ್ರಾನ್ಸ್ಲೇಷನ್ ಲಿಮಿಟೆಡ್‍ನ ಎಂಡಿ ಮನೋಹರ ರೋಷರ್ ಎಂಬವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಮನೋಹರ್ ಮಹಿಳೆಗೆ ಆನ್ ಲೈನ್ ನಲ್ಲಿ ಕೆಲಸವೊಂದನ್ನು ಕೊಡಿಸಿದ್ದರು. ಮನೆಯಲ್ಲೇ ಕುಳಿತು ಮಹಿಳೆ ಆನ್ ಲೈನ್ ನಲ್ಲಿ ಕೆಲಸ ಮಾಡುತ್ತಿದ್ದರು.

    ಮನೋಹರ್ ಆ ಮಹಿಳೆಯ ದೂರವಾಣಿ ನಂಬರ್ ಪಡೆದು ಅಶ್ಲೀಲ ಮೆಸೇಜ್ ಗಳನ್ನು ಕಳಿಸುತ್ತಿದ್ದ. ಅಲ್ಲದೇ ಹೋಟೆಲ್ ಗೆ ಬರುವಂತೆ ವಾಟ್ಸಪ್ ಮೂಲಕ ಕಿರುಳ ನೀಡುತ್ತಿದ್ದ ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಮನನೊಂದ ಮಹಿಳೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಮನೋಹರ ವಿರುದ್ಧ ಲೈಂಗಿಕ ದೌರ್ಜನ್ಯ ದೂರನ್ನು ದಾಖಲಿಸಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಮನೋಹರ್ ಪರಾರಿಯಾಗಿದ್ದಾನೆ. ನಾಪತ್ತೆಯಾಗಿರುವ ಮನೋಹರ್‍ಗಾಗಿ ಪೊಲೀಸರು ಜಾಲ ಬೀಸಿದ್ದಾರೆ.