Tag: ಆನೆ ದಾಳಿ

  • ಎಲ್ಲರ ಕೈನಲ್ಲೂ ದೊಣ್ಣೆ ಇತ್ತು – ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿ ಹೊಡೆದರು: ಎಂ.ಪಿ ಕುಮಾರಸ್ವಾಮಿ

    ಎಲ್ಲರ ಕೈನಲ್ಲೂ ದೊಣ್ಣೆ ಇತ್ತು – ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿ ಹೊಡೆದರು: ಎಂ.ಪಿ ಕುಮಾರಸ್ವಾಮಿ

    ಚಿಕ್ಕಮಗಳೂರು: ನಿನ್ನೆ ರಾತ್ರಿ ಬಟ್ಟೆ ಹರಿದ ಸ್ಥಿತಿಯಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ (M.P Kumaraswamy) ತಮ್ಮ ಮೇಲೆ ರಾಜಕೀಯ ಪ್ರೇರಿತ ದಾಳಿ ನಡೆದಿದೆ, ಕಳ್ಳ ಹುಚ್ಚು ನಾಯಿಯಂತೆ ನನ್ನನು ಅಟ್ಟಾಡಿಸಿ ಚಪ್ಪಲಿಯಲ್ಲಿ ಹೊಡೆದ್ರು ಎಂದು ಆರೋಪಿಸಿದ್ರು. ಆದ್ರೆ ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಪೊಲೀಸರು ಘಟನಾ ಸ್ಥಳದಿಂದ ಶಾಸಕರನ್ನು ಕರೆದೊಯ್ಯುವ ವೇಳೆ, ಅವರ ಮೈಮೇಲಿನ ಬಟ್ಟೆಗಳು ಹರಿದ ಸ್ಥಿತಿಯಲ್ಲಿ ಕಂಡುಬಂದಿರಲಿಲ್ಲ. ಈ ಬಗ್ಗೆ ಇಂದು ಸ್ಪಷ್ಟನೆ ನೀಡಿದ ಎಂ.ಪಿ ಕುಮಾರಸ್ವಾಮಿ, ಆಗ ವೈಟ್ ಬನಿಯನ್ ಇತ್ತು ಅದಕ್ಕೆ ಹರಿದಿದ್ದು ಸರಿಯಾಗಿ ಕ್ಯಾಮೆರಾದಲ್ಲಿ ದಾಖಲಾಗಿಲ್ಲ ಅಂದಿದ್ದಾರೆ. ಆದ್ರೆ, ಶರ್ಟ್ ಹರಿದಿರೋ ವೀಡಿಯೋದಲ್ಲಿಯೂ ಅವರು ಬನಿಯನ್ ಧರಿಸಿರೋದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದ್ರೂ, ಎಂಪಿ ಕುಮಾರಸ್ವಾಮಿ, ನನ್ನನ್ನು ಚಪ್ಪಲಿಯಿಂದ ಹೊಡೆದ್ರು. ಕಳ್ಳ ಹುಚ್ಚುನಾಯಿಯಂತೆ ನನ್ನನ್ನು ಅಟ್ಟಾಡಿಸಿ ಚಪ್ಪಲಿಯಲ್ಲಿ ಹೊಡೆದ್ರು. ಇದು ಆನೆ ದಾಳಿಯಲ್ಲ. ರಾಜಕೀಯ ದಾಳಿ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಡಾನೆ ದಾಳಿಗೆ ಮಹಿಳೆ ಬಲಿ – ಮೃತದೇಹ ನೋಡಲು ಬಂದ ಶಾಸಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ

    ನನಗೆ ಚಪ್ಪಲಿಯಲ್ಲಿ ಹೊಡೆದರು, ಎಲ್ಲರ ಕೈನಲ್ಲೂ ದೊಣ್ಣೆ ಇತ್ತು ಕಳ್ಳ, ಹುಚ್ಚು ನಾಯಿ ರೀತಿ ನನ್ನನ್ನು ಅಟ್ಟಾಡಿಸಿದರು ನಾನೇ ಓಡಿ ಬಂದು ಕಾರಲ್ಲಿ ಕೂತೆ, ಜೀಪಿನ ಮೇಲೆ ಕಲ್ಲು ಹೊಡೆದರು. ಇದು ಆನೆ ಪ್ರಕರಣ ಅಲ್ಲ, ರಾಜಕೀಯ ದಾಳಿ. ಬನಿಯನ್ ಇತ್ತು ಬಟ್ಟೆ ಹರಿದದ್ದು ಕಾಣಲಿಲ್ಲ. ಬನಿಯನ್ ತೆಗೆದರೆ ಹರಿದದ್ದು ಕಾಣುತ್ತೆ. ಬಟ್ಟೆ ನೂರು ತರ್ತೀನಿ, ಕಣ್ಣು, ಕೈ-ಕಾಲು ಹೋಗಿದ್ರೆ? ಬರೀ ನನಗೆ ಮಾತ್ರವಲ್ಲ, ಪೊಲೀಸರಿಗೂ ಹೊಡೆದಿದ್ದಾರೆ. ರಾಜಕೀಯವಾಗಿ ಚುನಾವಣೆಗೆ ನಿಲ್ಲಬಾರದು ಅಂತ ವ್ಯವಸ್ಥಿತ ಹಲ್ಲೆ. ಚುನಾವಣೆಗೆ ನಿಲ್ಲಲೇಬಾರದು ಎಂದು ಸಂಚು ಮಾಡಿ ಹಲ್ಲೆ ಮಾಡಿದ್ದಾರೆ. ವರಿಷ್ಠರಿಗೆ ದೂರು ಕೊಡೋದಾಗಿ ಹೇಳಿದ್ದಾರೆ. ಆದ್ರೆ ತಮ್ಮ ಮೇಲಿನ ದಾಳಿ ಬಗ್ಗೆ ಎಂ.ಪಿ ಕುಮಾರಸ್ವಾಮಿ ಪೊಲೀಸರಿಗೆ ದೂರು ಕೂಡ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಕಾಫಿನಾಡಿನ ಲವ್ ಜಿಹಾದ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಯುವಕನ ವಿರುದ್ಧ ಯುವತಿ ದೂರು

    Live Tv
    [brid partner=56869869 player=32851 video=960834 autoplay=true]

  • ಕೂಲಿ ಮುಗಿಸಿ ವಾಪಸ್ ಆಗುತ್ತಿದ್ದ ಕಾರ್ಮಿಕರಿಬ್ಬರ ಮೇಲೆ ಕಾಡಾನೆ ದಾಳಿ

    ಕೂಲಿ ಮುಗಿಸಿ ವಾಪಸ್ ಆಗುತ್ತಿದ್ದ ಕಾರ್ಮಿಕರಿಬ್ಬರ ಮೇಲೆ ಕಾಡಾನೆ ದಾಳಿ

    ಮಡಿಕೇರಿ: ಕೂಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಕಾರ್ಮಿಕರಿಬ್ಬರ ಮೇಲೆ ಕಾಡಾನೆಗಳು ದಾಳಿ ನಡೆಸಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಡಗಿನಲ್ಲಿ ನಡೆದಿದೆ.

    ಸೋಮವಾರಪೇಟೆ ತಾಲೂಕಿನ ಕುಸುಬೂರು ನಿವಾಸಿಯಾದ ಕೃಷ್ಣ ಮತ್ತು ಕುಶಾಲಪ್ಪ ಗಂಭೀರವಾಗಿ ಗಾಯಗೊಂಡವರು. ಕೂಲಿ ಕೆಲಸ ಮುಗಿಸಿ ಸೋಮವಾರಪೇಟೆ ತಾಲ್ಲೂಕಿನ ಕಾರೆಕೊಪ್ಪಲಿನಲ್ಲಿ ಹೋಗುತ್ತಿದ್ದ ವೇಳೆ ಕಾಡಾನೆಗಳು ದಾಳಿ ನಡೆಸಿವೆ.

    ಘಟನೆಯಲ್ಲಿ ಕೃಷ್ಣ ಅವರ ಕಾಲು ಮುರಿದಿದ್ದು, ಕುಶಾಲಪ್ಪ ಅವರ ತಲೆಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ಇಬ್ಬರಿಗೂ ಸೋಮವಾರಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಾಡಾನೆ ದಾಳಿ ನಡೆಸುತ್ತಿದ್ದಂತೆ ಸ್ಥಳೀಯರು ಜೋರಾಗಿ ಕೂಗಾಡಿದ್ದರಿಂದ ಕಾಡಾನೆ ಇಬ್ಬರನ್ನು ಬಿಟ್ಟು ಹೋಗಿದೆ. ಹೀಗಾಗಿ ಇಬ್ಬರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆಗಳ ಉಪಟಳ ಸೋಮವಾರಪೇಟೆ ತಾಲೂಕಿನ ಹಲವೆಡೆ ತೀವ್ರಗೊಂಡಿರುವುದಕ್ಕೆ ಸಾರ್ವಜನಿಕರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಆನೆ ದಾಳಿಗೆ ಬಲಿ- ಪೊಲೀಸರಿಂದ್ಲೇ ವ್ಯಕ್ತಿಯ ಅಂತ್ಯಕ್ರಿಯೆ

    ಆನೆ ದಾಳಿಗೆ ಬಲಿ- ಪೊಲೀಸರಿಂದ್ಲೇ ವ್ಯಕ್ತಿಯ ಅಂತ್ಯಕ್ರಿಯೆ

    ಚಾಮರಾಜನಗರ: ಆನೆ ದಾಳಿಗೆ ಬಲಿಯಾದ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಪೊಲೀಸರೇ ನೆರವೇರಿಸಿದ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ.

    4 ದಿನಗಳ ಹಿಂದೆಯಷ್ಟೇ 44 ವರ್ಷದ ವ್ಯಕ್ತಿಯೊಬ್ಬರು ಆನೆ ದಾಳಿಗೊಳಗಾಗಿ ಮೃತಪಟ್ಟಿದ್ದರು. ಜಿಲ್ಲೆಯ ಗಡಿ ಪ್ರದೇಶದಲ್ಲಿ ಮಾನವ ಹಾಗೂ ಪ್ರಾಣಿಗಳ ನಡುವೆ ಆಗಾಗ ಘರ್ಷಣೆಗಳು ನಡೆಯುತ್ತಲೇ ಇರುತ್ತದೆ.

    ಇತ್ತ ಮೃತಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆದರೆ ಮೃತನ ಕುಟುಂಬಸ್ಥರು ಮಾತ್ರ ಕೊರೊನಾ ವೈರಸ್ ಭೀತಿಯಿಂದ ಮೃತದೇಹವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.

    ಕುಟುಂಬಸ್ಥರೇ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿದಾಗ ಸಹಾಯಕ ಸಬ್ ಇನ್ಸ್ ಪೆಕ್ಟರ್ ಮಾದೇಗೌಡ ಹಾಗೂ ಇನ್ನಿಬ್ಬರು ಪೇದೆಗಳು ಸೇರಿ ಅಂತ್ಯಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚಾಮರಾಜನಗರದಲ್ಲಿಯೇ ಹಿಂದೂ ಸಂಪ್ರದಾಯದಂತೆ ಮೃತನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಪೊಲೀಸರಿಗೆ ಅರ್ಚಕರು ಕೂಡ ಸಾಥ್ ನೀಡಿದ್ದಾರೆ.

    ಮಾದೇಗೌಡ ಹಾಗೂ ಇಬ್ಬರು ಪೇದೆಗಳು ಜೊತೆಗೂಡಿ ಗುಂಡಿ ತೆಗೆದು ಮೃತದೇಹದ ಮೇಲೆ ಬಿಳಿ ಬಟ್ಟೆಯನ್ನು ಹಾಕಿ ಸಮಾಧಿ ಮಾಡಿದರು. ಅಲ್ಲದೆ ನಂತರ ಊದುಬತ್ತಿ ಹಚ್ಚಿ ದೇವರಲ್ಲಿ ಪ್ರಾರ್ಥನೆ ಕೂಡ ಮಾಡಿಕೊಂಡಿದ್ದಾರೆ.

    ಮೃತಪಟ್ಟ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದನು. 3 ದಿನಗಳ ಹಿಂದೆಯಷ್ಟೇ ಮೂವರು ಪೊಲೀಸರು ಸೇರಿ ಆತನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎಂದು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಉಸ್ತುವಾರಿ ಸುನಿಲ್ ತಿಳಿಸಿದ್ದಾರೆ.

  • ಕೊಡಗಿನಲ್ಲಿ ಮತ್ತೆ ಕಾಡಾನೆಗಳ ಹಾವಳಿ – ರೈತರು ಕಂಗಾಲು

    ಕೊಡಗಿನಲ್ಲಿ ಮತ್ತೆ ಕಾಡಾನೆಗಳ ಹಾವಳಿ – ರೈತರು ಕಂಗಾಲು

    ಮಡಿಕೇರಿ: ಕೊಡಗಿನಲ್ಲಿ ಕಾಡಾನೆ ಹಾವಳಿ ಮತ್ತೆ ಹೆಚ್ಚಾಗಿದ್ದು, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕಿನ ಬಹುತೇಕ ಪ್ರದೇಶದಲ್ಲಿ ಆನೆ-ಮಾನವನ ಸಂಘರ್ಷ ಸಾಮಾನ್ಯ ಎಂಬಂತಾಗಿದೆ.

    ಜಿಲ್ಲೆಯ ಜನತೆಗೆ ವರ್ಷದ ಆಹಾರ ನೀಡುವ ಕಾಫಿ ಮತ್ತು ಭತ್ತದ ಕೊಯ್ಲಿನ ಸಂದರ್ಭದಲ್ಲಿ ಹಾಡಹಗಲೇ ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿರುವುದು ಸ್ಥಳೀಯರನ್ನು ಭೀತಿಗೊಳಿಸಿದೆ. ಆನೆಗಳ ಹೆದರಿಕೆಯಿಂದ ಕಾರ್ಮಿಕರು ಕೆಲಸಕ್ಕೆ ಬರಲೂ ಹಿಂದೇಟು ಹಾಕುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಆನೆ ದಾಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ 77 ಜನ ಮೃತಪಟ್ಟಿರುವುದು ಆತಂಕ ಹುಟ್ಟಿಸಿದೆ.

    ಜಿಲ್ಲೆಯಾದ್ಯಂತ ಈಗ ಅರೆಬಿಕಾ ಕಾಫಿ ಕೊಯ್ಲು ಸೀಸನ್ ಶುರುವಾಗಿದೆ. ಅತಿವೃಷ್ಟಿ ಮಧ್ಯೆಯೂ ಉಳಿದುಕೊಂಡಿರುವ ಕಾಫಿಯನ್ನು ಕೊಯ್ಲು ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ಬೆಳೆಗಾರರು ಇದ್ದಾರೆ. ಹಣ್ಣಾದ ಕಾಫಿಯನ್ನು ಸಮಯಕ್ಕೆ ಸರಿಯಾಗಿ ಕೀಳದಿದ್ದರೆ ನೆಲಕ್ಕೆ ಬಿದ್ದು ಹಾಳಾಗುತ್ತದೆ. ವರ್ಷದ ದುಡಿಮೆಯೂ ಕೈ ತಪ್ಪುತ್ತದೆ. ಬಹುತೇಕ ಪ್ರದೇಶಗಳಲ್ಲಿ ಭತ್ತ ಕಟಾವು ಕಾರ್ಯವೂ ನಡೆಯುತ್ತಿದೆ. ಅಕ್ಕಿ ಜಿಲ್ಲೆಯ ಪ್ರಮುಖ ಆಹಾರ ಬೆಳೆಯೂ ಆಗಿರುವುದರಿಂದ ಕಟಾವು ಕಾರ್ಯ ಆಗಲೇಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಶುರುವಾಗಿರುವ ಕಾಡಾನೆ ಹಾವಳಿ ರೈತರನ್ನು ಕಂಗೆಡೆಸಿದೆ.

  • ಕಾಡಾನೆ, ಕರಡಿ ದಾಳಿ- ಕಂಗೆಟ್ಟ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ರೈತರು

    ಕಾಡಾನೆ, ಕರಡಿ ದಾಳಿ- ಕಂಗೆಟ್ಟ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ರೈತರು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಬನವಾಸಿ ಭಾಗದಲ್ಲಿ ಆನೆಗಳ ದಾಳಿಯಿಂದ ರೈತರು ಕಂಗೆಟ್ಟರೆ, ಇತ್ತ ಜೋಯಿಡಾ ದಾಂಡೇಲಿ ಭಾಗದಲ್ಲಿ ಕರಡಿ ದಾಳಿಯಿಂದ ಜನ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಕಳೆದೆರಡು ದಿನಗಳಿಂದ ಶಿರಸಿಯ ಪೂರ್ವ ಭಾಗದ ಮದ್ರಳ್ಳಿ ಭಾಗದಲ್ಲಿ ಬೀಡು ಬಿಟ್ಟಿರುವ ಆನೆಗಳು ರೈತರ ಗದ್ದೆಗಳಿಗೆ ನುಗ್ಗಿ ತೊಂದರೆ ಕೊಡುತ್ತಿವೆ. ಬೆಳೆದ ಫಸಲನ್ನು ಆನೆಗಳು ನಾಶ ಮಾಡತೊಡಗಿದೆ. ಇದರಿಂದಾಗಿ ಸ್ಥಳೀಯರು ಆತಂಕದಿಂದ ಕಾಲ ಕಳೆಯಬೇಕಾಗಿದೆ. ಇಷ್ಟು ದಿನ ಮುಂಡಗೋಡ ಕಡೆ ಇರುತ್ತಿದ್ದ ಗಜಪಡೆ ಮದ್ರಳ್ಳಿಯಲ್ಲಿ ಠಿಕಾಣಿ ಹೂಡಿದ್ದು ತನ್ನ ಪ್ರತಾಪ ತೋರಿಸುತ್ತಿವೆ.

    ಗುಂಪಿನಲ್ಲಿ ನಾಲ್ಕು ಆನೆಗಳಿದ್ದು, ಕೇವಲ ಕೃಷಿ ಭೂಮಿಗೆ ದಾಳಿ ಇಡುವುದಲ್ಲದೇ ಗ್ರಾಮಗಳಿಗೂ ಲಗ್ಗೆ ಇಡುತ್ತಿದ್ದು, ಗ್ರಾಮಸ್ಥರು ಕಂಗಾಲಾಗಿದ್ದಾರೆ. ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯ ಸೊರಬ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಭಾಗದಿಂದ ಆನೆಗಳು ಬನವಾಸಿ ಪ್ರದೇಶಕ್ಕೆ ಬಂದು ಬೀಡು ಬಿಟ್ಟಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಆನೆಗಳನ್ನ ಓಡಿಸುವ ಪ್ರಯತ್ನ ನಡೆಸಿದ್ದಾರೆ.

    ಜೋಯಿಡಾ ಭಾಗದಲ್ಲಿ ಕರಡಿ ದಾಳಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ನಡೆಸಿ ಕಾಲನ್ನು ಕಚ್ಚಿ ಹರಿದ ಘಟನೆ ಜೋಯಿಡಾ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಂಬಾರವಾಡಾ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ನಡೆದಿದೆ.

    ಜೋಯಿಡಾದ ನುಜ್ಜಿ ಸಮೀಪದ ಗ್ರಾಮದ ವಿಠಲ್ ಭಾಮಟೋ ವೇಳಿಪ ಕರಡಿ ದಾಳಿಗೆ ತುತ್ತಾಗಿದ್ದಾರೆ. ವಿಠಲ್ ತಮ್ಮ ಹೊಲದ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕರಡಿ ದಾಳಿ ನಡೆಸಿದೆ. ಮೊಳಕಾಲಿನ ಕೆಳಭಾಗವನ್ನು ಕರಡಿ ಕಚ್ಚಿ ಹರಿದಿದ್ದು, ಗಾಯಾಳು ಜೀವಾಪಾಯದಿಂದ ಪಾರಾಗಿದ್ದಾರೆ. ರೈತನಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಮುಂದಿನ ಚಿಕಿತ್ಸೆಗಾಗಿ ಅರಣ್ಯ ಇಲಾಖೆ ಸಹಕಾರ ನೀಡಬೇಕೆಂದು ಈ ಬಡ ರೈತನ ಕುಂಟುಂಬ ಆಗ್ರಹಿಸಿದೆ.

    ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ವನ್ಯಜೀವಿಗಳ ಕಾಟ ಈ ಬಾರಿ ಮಿತಿ ಮೀರಿದ್ದು ಇದೇ ತಿಂಗಳಲ್ಲಿ ಆನೆ ,ಕರಡಿ ದಾಳಿಗೆ ನಾಲ್ಕು ಜನ ಗಂಭೀರ ಗಾಯಗೊಂಡಿದ್ದಾರೆ.

  • ಕಾಡಾನೆ ಓಡಿಸಲು ಹೋದ ರೈತನಿಗೆ ಆನೆ ತಿವಿತ

    ಕಾಡಾನೆ ಓಡಿಸಲು ಹೋದ ರೈತನಿಗೆ ಆನೆ ತಿವಿತ

    ಕಾರವಾರ: ಕಾಡಾನೆ ಓಡಿಸಲು ಹೋದ ರೈತ ಆನೆ ದಾಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮುಂಡಗೋಡ ತಾಲೂಕಿನ ಕಾತೂರ ವಲಯದ ನಾಗನೂರು ಗ್ರಾಮದಲ್ಲಿ ನಡೆದಿದೆ.

    ಘಟನೆಯಲ್ಲಿ ರೈತರಾದ ದಾವಲಸಾಬ ಜಮಾಲಸಾಬ ಮುಜಾವರ, ಚಂದ್ರು ಚೆನ್ನಪ್ಪನವರ್ ಅವರು ಗಾಯಗೊಂಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ದಾವಲಸಾಬ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಚಂದ್ರು ಚೆನ್ನಪ್ಪನವರ್ ಮುಂಡಗೋಡ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಾಗನೂರು ಗ್ರಾಮದ ಸುತ್ತಮುತ್ತ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ರೈತರು ಆನೆಗಳನ್ನು ಓಡಿಸಲು ಮುಂದಾದಾಗ ಘಟನೆ ನಡೆದಿದೆ. ಹಿಂಡಿನಿಂದ ತಪ್ಪಿಸಿಕೊಂಡ ಆನೆಯೊಂದು ಮುಂಭಾಗದಲ್ಲಿದ್ದ ದಾವಲಸಾಬ ಅವರ ಮೇಲೆ ದಾಳಿ ನಡೆಸಿ ದಂತದಿಂದ ತಿವಿದು ಗಾಯಗೊಳಿಸಿದೆ.

    ಈ ಘಟನೆಯಿಂದ ಗಾಬರಿಗೊಂಡ ಚಂದು ಚೆನ್ನಾಪುರ ಎಂಬವರು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಜಮೀನಿನಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ವೃದ್ಧನ ಮೇಲೆ ಒಂಟಿ ಸಲಗ ದಾಳಿ

    ವೃದ್ಧನ ಮೇಲೆ ಒಂಟಿ ಸಲಗ ದಾಳಿ

    ಮೈಸೂರು: ಆಹಾರ ಅರಸಿ ಗ್ರಾಮಕ್ಕೆ ಬಂದ ಒಂಟಿ ಸಲಗ ಗ್ರಾಮಕ್ಕೆ ನುಗ್ಗಿ ವೃದ್ಧನ ಮೇಲೆ ಆನೆ ದಾಳಿ ನಡೆಸಿರೋ ಘಟನೆ ಮೈಸೂರಿನ ಸರಗೂರು ತಾಲೂಕಿನ ಕಲ್ಲಂಬಾಳು ಗ್ರಾಮದಲ್ಲಿ ನಡೆದಿದೆ.

    68 ವರ್ಷದ ರಾಮಯ್ಯ ಕಾಡಾನೆ ದಾಳಿಗೆ ಒಳಗಾದ ಗ್ರಾಮಸ್ಥ. ಗಾಯಗೊಂಡ ರಾಮಯ್ಯಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗ್ಗೆ ಡೈರಿಗೆ ಹಾಲನ್ನು ಹಾಕಲು ರಾಮಯ್ಯ ತೆರಳುವಾಗ ಏಕಾಏಕಿ ದಾಳಿ ನಡೆಸಿದ ಒಂಟಿ ಸಲಗ ರಾಮಯ್ಯನನ್ನ ತಳ್ಳಿ ಬೀಳಿಸಿದೆ. ರಾಮಯ್ಯನ ಚೀರಾಟ ಕೇಳಿ ಗ್ರಾಮಸ್ಥರು ಓಡಿ ಬಂದಿದ್ದಾರೆ.

    ಗ್ರಾಮಸ್ಥರ ಚೀರಾಟ ಕೇಳಿ ಆನೆ ಓಡಿ ಹೋಗಿ ಗ್ರಾಮದ ಜಮೀನೊಂದರಲ್ಲಿ ಬೀಡು ಬಿಟ್ಟಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು ಆನೆಯನ್ನು ಕಾಡಿಗೆ ಓಡಿಸುವ ಕಾರ್ಯಚರಣೆ ಆರಂಭಿಸಲು ಅರಣ್ಯ ಇಲಾಖೆ ಮುಂದಾಗಿದೆ.

  • ಸೊಂಡಿಲಲ್ಲಿ ಹಿಡಿದು ಎಸೆದ ಕಾಡಾನೆ- ಸೋದರಿಯರು ಸೇರಿ ನಾಲ್ವರಿಗೆ ಗಂಭೀರ ಗಾಯ

    ಸೊಂಡಿಲಲ್ಲಿ ಹಿಡಿದು ಎಸೆದ ಕಾಡಾನೆ- ಸೋದರಿಯರು ಸೇರಿ ನಾಲ್ವರಿಗೆ ಗಂಭೀರ ಗಾಯ

    ಹಾಸನ: ಆನೆ ದಾಳಿಯಿಂದಾಗಿ ಹಾಸನ-ಕೊಡಗು ಜಿಲ್ಲೆ ಗಡಿಭಾಗದ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋದರಿಯರು ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

    ಲಲಿತಮ್ಮ, ಪೂರ್ಣಿಮಾ, ಗಂಗಮ್ಮ ಮತ್ತು ಮಂಜ ಗಾಯಗೊಂಡಿವರಾಗಿದ್ದಾರೆ. ಇದರಲ್ಲಿ ಮಂಜ ಮತ್ತು ಲಲಿತಮ್ಮ ಎಂಬವರಿಗೆ ತೀವ್ರ ಗಾಯಗಳಾಗಿವೆ. ಅರಕಲಗೂಡು ತಾಲೂಕು ಹೊಳಲಗೋಡು ಬಳಿಯ ಕಾಫಿ ತೋಟದಲ್ಲಿ ಹತ್ತಾರು ಮಂದಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕಾಣಿಸಿಕೊಂಡ ಸುಮಾರು 10 ವರ್ಷದ ಸಲಗ, ಕಾರ್ಮಿಕರ ಮೇಲೆ ಎರಗಿದೆ.

    ಇಬ್ಬರನ್ನು ಸೊಂಡಿಲಲ್ಲಿ ಹಿಡಿದು ಎಸೆದಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದವರು ಜೀವ ಉಳಿಸಿಕೊಳ್ಳಲು ಓಡಿ ಹೋಗುವ ಆತುರದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಸಾಮಾನ್ಯವಾಗಿ ಕೊಡಗು-ಮಲೆನಾಡು ಭಾಗದಲ್ಲಿ ದಾಂಧಲೆ ನಡೆಸಿ ನಷ್ಟ ಉಂಟು ಮಾಡುತ್ತಿದ್ದ ಸಲಗ, ಇದೇ ಮೊದಲ ಬಾರಿಗೆ ಅರಕಲಗೂಡು ಭಾಗದಲ್ಲಿ ಕಾಣಿಕೊಂಡು ಆತಂಕವನ್ನು ಹೆಚ್ಚು ಮಾಡಿದೆ. ಅದರಲ್ಲೂ ಕಾಫಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಆನೆ ಹಾವಳಿಯಿಂದ ಜೀವ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಡಿಯಲ್ಲಿ ಹೆಚ್ಚಿದ ಕಾಡಾನೆ ದಾಳಿ – 40ಕ್ಕೂ ಹೆಚ್ಚಿರುವ ಆನೆ ಹಿಂಡು ಕಂಡು ಗ್ರಾಮಸ್ಥರಲ್ಲಿ ಆತಂಕ

    ಗಡಿಯಲ್ಲಿ ಹೆಚ್ಚಿದ ಕಾಡಾನೆ ದಾಳಿ – 40ಕ್ಕೂ ಹೆಚ್ಚಿರುವ ಆನೆ ಹಿಂಡು ಕಂಡು ಗ್ರಾಮಸ್ಥರಲ್ಲಿ ಆತಂಕ

    ಬೆಂಗಳೂರು: ಕರ್ನಾಟಕ – ತಮಿಳುನಾಡು ಗಡಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ಇಂದು ಸಹ 2 ಕಾಡಾನೆಗಳು ಗ್ರಾಮದ ತೋಟಕ್ಕೆ ನುಗ್ಗಿ ಬೆಳೆನಾಶ ಮಾಡಿರುವ ಘಟನೆ ಕರ್ನಾಟಕದ ಗಡಿ ಆನೇಕಲ್ ಗೆ ಹೊಂದಿಕೊಂಡಿರುವ ತಮಿಳುನಾಡು ಅರಣ್ಯದಂಚಿನಲ್ಲಿ ನಡೆದಿದೆ.

    ಅರಣ್ಯದಂಚಿನ ಗ್ರಾಮವಾದ ಪತ್ತಕೋಟ ಗ್ರಾಮದಲ್ಲಿ ಇಂದು ಮುಂಜಾನೆ 2 ಕಾಡಾನೆಗಳು ಗ್ರಾಮದಲ್ಲಿನ ತೋಟಗಳಿಗೆ ನುಗ್ಗಿ ಅಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶಮಾಡಿದೆ. ಅಲ್ಲದೇ ಸುಮಾರು 40ಕ್ಕೂ ಕಾಡಾನೆ ಹಿಂಡು ಕಳೆದ 2 ತಿಂಗಳಿಂದ ಆನೇಕಲ್‍ಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು, ಸುಳಗಿರಿ, ಡೆಂಕನಿಕೋಟೆ ಹಾಗೂ ಜವಳಗಿರಿ ಓಡಾಟ ನಡೆಸಿದೆ. ಆನೆ ಹಿಂಡು ಕಂಡ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

    ಆನೆಗಳ ಹಿಂಡು ಅರಣ್ಯದಂಚಿನ ಗ್ರಾಮಗಳಿಗೆ ನುಗ್ಗಿ ಪ್ರಾಣ ಹಾನಿ ಹಾಗೂ ಬೆಲೆ ನಾಶ ಮಾಡಿದೆ. ಕಳೆದೊಂದು ವಾರದಲ್ಲಿ ಆನೆಗಳ ದಾಳಿಗೆ ಇಬ್ಬರು ವ್ಯಕ್ತಿಗಳು ಮೃತಪಟ್ಟು, ಒಂದು ಹಸು ಕೂಡ ಬಲಿಯಾಗಿದೆ. ಆನೆಗಳನ್ನು ಕಾಡಿಗೆ ಓಡಿಸಲು ತಮಿಳುನಾಡು ಅರಣ್ಯ ಇಲಾಖೆ ಸರಿಯಾದ ನಿಟ್ಟಿನಲ್ಲಿ ಪ್ರಯತ್ನಿಸುತ್ತಿಲ್ಲ ಎಂಬುದು ಗಡಿ ಪ್ರದೇಶದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಳೆ ಬಂದ್ರು ನಾವೇ ಬರ್ಸಿದ್ವಿ ಅಂತಾರೆ, ರೋಡ್ ಮಾಡಿದ್ರು ನಾವೇ ಅಂತಾರೆ: ಎಚ್‍ಡಿಡಿ ವಿರುದ್ಧ ಬಿಜೆಪಿ ಶಾಸಕ ಗರಂ

    ಮಳೆ ಬಂದ್ರು ನಾವೇ ಬರ್ಸಿದ್ವಿ ಅಂತಾರೆ, ರೋಡ್ ಮಾಡಿದ್ರು ನಾವೇ ಅಂತಾರೆ: ಎಚ್‍ಡಿಡಿ ವಿರುದ್ಧ ಬಿಜೆಪಿ ಶಾಸಕ ಗರಂ

    ಹಾಸನ: ಮಳೆ ಬಂದರು ನಾವೇ ಮಳೆ ಬರುವಂತೆ ಮಾಡಿದ್ದು ಎಂದು ಹೇಳುತ್ತಾರೆ. ಕ್ಷೇತ್ರದಲ್ಲಿ ರಸ್ತೆ ಕೆಲಸ ಮಾಡಿಸಿದರು ನಮ್ಮದೇ ಎಂದು ಹೇಳುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ ಹಾಸನ ಲೋಕಸಭಾ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಶಕ್ತಿ ಕೊಟ್ಟಿದ್ದು, ಆದರೆ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಸಮಸ್ಯೆ ಪರಿಹರಿಸಲು ಮಾತ್ರ ವಿಫಲರಾಗಿದ್ದಾರೆ ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂಗೌಡ ಮಾಜಿ ಪ್ರಧಾನಿಗಳ ಹೆಸರು ಹೇಳದೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಆನೆ ದಾಳಿ ನಿಯಂತ್ರಣ ಹಾಗೂ ಪರಿಹಾರ ಕೋರಿ ಸಕಲೇಶಪುರದ ಬಾಳ್ಳುಪೇಟೆಯಲ್ಲಿ ನಡೆಯುತ್ತಿರುವ ರೈತರ ಹೋರಾಟ 5ನೇ ದಿನಕ್ಕೆ ಕಾಲಿಟ್ಟಿದ್ದು, ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಇಂದು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ನಾಲ್ಕು ದಶಕದಿಂದ ಹಾಸನ ಲೋಕಸಭಾ ಪ್ರತಿನಿಧಿಯಾಗಿದ್ದು, ದೇವರ ಆಶೀರ್ವಾದದಿಂದ ಅವರು ಪಧಾನಿಯೂ ಆಗಿದ್ದಾರೆ. ಆದರೆ ಕ್ಷೇತ್ರದ ಸಂಸದರು ಮಾತ್ರ ಕಾಡಾನೆ ಹಾವಳಿ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ. ಈ ಹೋರಾಟ ಕಳೆದ 3 ವರ್ಷಗಳಿಂದ ನಡೆಯುತ್ತಿದ್ದು, ಈ ಸಮಸ್ಯೆ ಬಗೆಹರಿಸಲು ಬೇಕಿರುವುದು ಇಚ್ಛಾಶಕ್ತಿ ಎಂದು ಹೇಳಿದ್ದಾರೆ.

    ಆನೆ ಹಾವಳಿಯಲ್ಲಿ ರಾಜಕೀಯ ಮಾಡಲ್ಲ ಎನ್ನುತ್ತಲೇ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪ್ರೀತಂಗೌಡ, ಹಾಸನ ಸಂಸದರೂ ಕಾಡಾನೆ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ. ಹೆದ್ದಾರಿಗೆ ನಿತಿನ್ ಗಡ್ಕರಿ ಭೇಟಿ ಮಾಡಿದಂತೆ ಕೇಂದ್ರ ಅರಣ್ಯ ಸಚಿವರನ್ನ ಭೇಟಿ ಮಾಡಿ ಸಮಸ್ಯೆ ಪರಿಹರಿಸಬಹುದಿತ್ತು. ಅವರದ್ದೇ ಶಾಸಕರೂ, ಸಚಿವರು, ಸಂಸದರು ಹಾಗೂ ಸಿಎಂ ಆಗಿದ್ದರು ಏನು ಮಾಡುತ್ತಾರೋ ಮಾಡಲಿ. ಆನೆ ಹಾವಳಿ ಎಂದಾಕ್ಷಣ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುತ್ತಾರೆ. ಈ ರೀತಿ ಬುದ್ಧಿವಂತಿಕೆ ಮಾತುಗಳನ್ನ ಬಿಟ್ಟು ಕ್ಷೇತ್ರದ ಕಡೆ ಗಮನಹರಿಸಿ ಎಂದು ವ್ಯಂಗ್ಯ ಮಾಡಿದರು. ಇದನ್ನು ಓದಿ : 4 ದಿನದಿಂದ ಪ್ರತಿಭಟನೆ ನಡೆಸಿದ್ರು ಕೇರ್ ಮಾಡ್ತಿಲ್ಲ : ಸಿಎಂಗೆ ಹಾಸನ ಮಹಿಳೆ ಅವಾಜ್

    ರೈತರ ಸಮಸ್ಯೆ ಬಗೆ ಹರಿದರೆ ನಾವೇ ಬೇಕಿದ್ದರೆ ಗಂಧದ ಹಾರ ಹಾಕಿ, ಜೇನು ತುಪ್ಪದ ಅಭಿಷೇಕ ಮಾಡಿ ದೆಹಲಿವರೆಗೂ ಕರೆದುಕೊಂಡು ಹೋಗುತ್ತೇವೆ. ಹೆಸರಿಗೆ ಮಾತ್ರ ರೈತರ ಮಗ, ಮೊದಲು ರೈತರ ಹೆಸರಿನಲ್ಲಿ ಪ್ರಮಾಣ ಮಾಡುವುದನ್ನ ಬಿಡಿ. ನಿಜವಾದ ರೈತರ ಸಮಸ್ಯೆ, ನಿಮ್ಮನ್ನ ಆಯ್ಕೆ ಮಾಡಿದವರ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯ ಮಾಡಿದರು.

    ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದ್ದು, ಕೈಯಲ್ಲಿ ವಿಷದ ಬಾಟಲ್ ಹಿಡಿದ ರೈತರು ನಾಳೆ ಬೆಂಗಳೂರಿನಲ್ಲಿ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಸೂಕ್ತ ತೀರ್ಮಾನಕ್ಕೆ ಬರುವಂತೆ ಒತ್ತಾಯ ಮಾಡಿದ್ದಾರೆ. ಸಮಸ್ಯೆ ಬಗೆಹರಿಸಲು ವಿಫಲವಾದರೆ ಸಾಮೂಹಿಕವಾಗಿ ವಿಷ ಸೇವನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv