Tag: ಆನೆಗಳ ಹಿಂಡು

  • ಶಿಸ್ತುಬದ್ಧವಾಗಿ ರಸ್ತೆ ದಾಟಿದ ಆನೆಗಳು – ವಿಡಿಯೋ ನೋಡಿ

    ಶಿಸ್ತುಬದ್ಧವಾಗಿ ರಸ್ತೆ ದಾಟಿದ ಆನೆಗಳು – ವಿಡಿಯೋ ನೋಡಿ

    ರಾಯಪುರ: ಆನೆಗಳು ಬುದ್ಧಿವಂತ ಪ್ರಾಣಿಗಳು ಎಂದು ಹೇಳಲಾಗುತ್ತದೆ. ಇದೀಗ ಕೇವಲ ಒಂದು ರಸ್ತೆ ದಾಟಲು ದೊಡ್ಡ ಗುಂಪು ರಚಿಸಿಕೊಳ್ಳುವ ಮೂಲಕ ಆನೆಗಳು ಜಾಣ್ಮೆಯನ್ನು ಪ್ರದರ್ಶಿಸಿವೆ.

    ಛತ್ತಿಸ್‍ಗಢದ ಕೋಬ್ರಾ ಜಿಲ್ಲೆಯ ಹಸ್ಡಿಯೋ ಅರಾಂಡ್ ಪ್ರದೇಶದಲ್ಲಿ ಆನೆಯ ಬೃಹತ್ ಹಿಂಡು ರಸ್ತೆ ದಾಟುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅರಣ್ಯ ಇಲಾಖೆಯ ಅಧಿಕಾರಿ ಪ್ರವೀಣ್ ಕಸ್ವಾನ್ ತಮ್ಮ ಟ್ವಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಆನೆಗಳ ಬೃಹತ್ ಹಿಂಡು ಶಿಸ್ತುಬದ್ಧವಾಗಿ ಹೇಗೆ ರಸ್ತೆ ದಾಟುತ್ತಿವೆ, ಇದಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ಮೂಲ ಸೌಕರ್ಯಗಳನ್ನು ಬಳಸಿಕೊಂಡು ಆನೆಗಳು ಹೇಗೆ ರಸ್ತೆ ಮೂಲಕ ಹಾದು ಹೋಗುತ್ತವೆ ಎಂಬುದಕ್ಕೆ ಇದು ಉದಾಹರಣೆ. ಬಲಿಷ್ಟ ಸದಸ್ಯರನ್ನು ಹೊಂದಿದ ಆನೆಗಳು ಹೇಗೆ ಶಿಸ್ತಿನ ಗುಂಪು ರಚಿಸಿಕೊಂಡಿವೆ ನೋಡಿ. ಇದೆಲ್ಲ ಕೇವಲ ರಸ್ತೆ ದಾಟಲು ಮಾತ್ರ. ಇಂತಹ ದೃಶ್ಯಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಛತ್ತಿಸ್‍ಗಢದ ಕೋಬ್ರಾ ಜಿಲ್ಲೆಯ ಹಸ್ಡಿಯೋ ಅರಾಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸ್ನೇಹಿತರೊಬ್ಬರು ಕಳುಹಿಸಿದ್ದರು ಎಂದು ಪೋಸ್ಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ಆನೆಗಳು ದೊಡ್ಡ ಗುಂಪು ರಚಿಸಿಕೊಂಡು ರಸ್ತೆ ದಾಟುತ್ತಿದ್ದು, ಬೃಹತ್ ಆನೆಗಳು ಆ ಗುಂಪನ್ನು ಮುನ್ನಡೆಸುತ್ತಿವೆ. ಆನೆಗಳ ಒಗ್ಗಟ್ಟು ಹಾಗೂ ನಾಯಕತ್ವ ಗುಣವನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಇನ್ನೂ ಕೆಲವರು ಅಭಿವೃದ್ಧಿಯ ಹೆಸರಿನಲ್ಲಿ ಕಾಡನ್ನು ಮಾನವರು ಹೇಗೆ ಅತಿಕ್ರಮಣ ಮಾಡಿಕೊಂಡಿದ್ದೇವೆ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾನವರು ವಿಶ್ವವನ್ನು ನರಕ ಮಾಡಿದ್ದಾರೆ. ಇದೀಗ ದೈತ್ಯರಾದ ನಾವು ಮರಳಿದ್ದೇವೆ, ಅವರ ಮನೆ ಹಾಗೂ ಅಭಿವೃದ್ಧಿಯನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಆನೆಗಳು ಹೇಳಿದಂತಿದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಎಂತಹ ಸೌಂದರ್ಯ, ಶಿಸ್ತು, ನೋಡಲು ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

  • ಕಾಡಾನೆಗಳನ್ನು ಓಡಿಸುವ ವೇಳೆ ಯುವಕನನ್ನು ತುಳಿದು ಘಾಸಿಗೊಳಿಸಿದ ಆನೆ!

    ಕಾಡಾನೆಗಳನ್ನು ಓಡಿಸುವ ವೇಳೆ ಯುವಕನನ್ನು ತುಳಿದು ಘಾಸಿಗೊಳಿಸಿದ ಆನೆ!

    ಬೆಂಗಳೂರು: ಗ್ರಾಮಕ್ಕೆ ಬಂದಿದ್ದ ಆನೆಗಳ ಹಿಂಡನ್ನು ಓಡಿಸಲು ಗ್ರಾಮಸ್ಥರು ಪ್ರಯತ್ನಿಸುವಾಗ ಆನೆಯೊಂದು ಯುವಕನೊಬ್ಬನನ್ನು ತುಳಿದು ಗಾಯಗೊಳಿಸಿದ ಘಟನೆ ಆನೇಕಲ್ ಗಡಿ ಭಾಗದ ತಮಿಳುನಾಡಿನ ಬಿರ್ಜೆಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಶನಿವಾರ ಇಡೀ ರಾತ್ರಿ ಬಿರ್ಜೆಪಲ್ಲಿ ಗ್ರಾಮದ ಪಕ್ಕದಲ್ಲೇ ಆನೆಗಳ ಹಿಂಡು ಕಾಣಿಸಿಕೊಂಡಿತ್ತು. ಹೊಲಗಳಲ್ಲಿ ಬೆಳೆದಿದ್ದ ಬೆಳೆಯನ್ನು ನಾಶ ಮಾಡುತ್ತಿದ್ದ ಆನೆಗಳನ್ನು ಗ್ರಾಮಸ್ಥರು ಹಾಗು ಅರಣ್ಯ ಸಿಬ್ಬಂದಿ ಓಡಿಸುವ ವೇಳೆ ಗ್ರಾಮಸ್ಥರ ಮೇಲೆಯೇ ಆನೆಗಳು ತಿರುಗಿ ಬಿದ್ದಿವೆ. ಈ ಸಂದರ್ಭದಲ್ಲಿ ಗ್ರಾಮದ ಯುವಕನೊಬ್ಬನ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ಆತ ಗಾಯಗೊಂಡಿದ್ದಾನೆ.

    ಈ ಕಾಡಾನೆಗಳ ಅಟ್ಟಹಾಸಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಏಕಾಏಕಿ ಯುವಕನ ಮೇಲೆ ದಾಳಿ ಮಾಡಿದ ಆನೆ, ತನ್ನ ಕಾಲುಗಳಿಂದ ಯುವಕನನ್ನು ತುಳಿಯಲು ಯತ್ನಿಸಿದೆ. ಹಾಗೆಯೇ ತಪ್ಪಿಸಿಕೊಳ್ಳಲು ಓಡಿ ಹೋಗುತ್ತಿದ್ದ ಯುವಕನ ಮೇಲೆ ತನ್ನ ಸೊಂಡಿಲಿನಿಂದ ದಾಳಿ ಮಾಡಿದೆ. ಆದ್ರೆ ಅದೃಷ್ಟವಶಾತ್ ಕುದಲೆಳೆಯ ಅಂತರದಲ್ಲಿ ಯುವಕ ಪಾರಾಗಿ ಜೀವ ಉಳಿಸಿಕೊಂಡಿದ್ದಾನೆ.

    ಗಡಿ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅಲ್ಲದೆ ಈ ಭಾಗದ ಜನರು ಆನೆಗಳ ಅಟ್ಟಹಾಸಕ್ಕೆ ಬೇಸತ್ತು ಹೋಗಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಈ ವಿಚಾರವಾಗಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ.

    ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಕೆಲ ಕಾಲ ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಇವೆಲ್ಲ ಘಟನೆಗಳ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಆನೆಗಳನ್ನು ಕಾಡಿಗೆ ಅಟ್ಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv