Tag: ಆನಂದ್ ಶರ್ಮ

  • ನೀವು ನಮ್ಮ ಪ್ರಧಾನಿಯಾಗಿ ಅಮೆರಿಕದಲ್ಲಿದ್ದೀರಿ, ಚುನಾವಣಾ ಪ್ರಚಾರಕರಾಗಲ್ಲ: ಮೋದಿಗೆ ಕಾಂಗ್ರೆಸ್ ಟಾಂಗ್

    ನೀವು ನಮ್ಮ ಪ್ರಧಾನಿಯಾಗಿ ಅಮೆರಿಕದಲ್ಲಿದ್ದೀರಿ, ಚುನಾವಣಾ ಪ್ರಚಾರಕರಾಗಲ್ಲ: ಮೋದಿಗೆ ಕಾಂಗ್ರೆಸ್ ಟಾಂಗ್

    ನವದೆಹಲಿ: ನರೇಂದ್ರ ಮೋದಿಯವರೇ ನೀವು ಭಾರತದ ಪ್ರಧಾನಿಯಾಗಿ ಅಮೆರಿಕದಲ್ಲಿದ್ದೀರಿ, ಚುನಾವಣೆಯ ಸ್ಟಾರ್ ಪ್ರಚಾರಕರಾಗಿ ಅಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ಸಂಸದ ಆನಂದ್ ಶರ್ಮಾ ನಮೋಗೆ ಟಾಂಗ್ ಕೊಟ್ಟಿದ್ದಾರೆ.

    ಮೋದಿ ವಿರುದ್ಧ ಟ್ವಿಟ್ಟರ್‌ನಲ್ಲಿ ವಾಗ್ದಾಳಿ ನಡೆಸಿದ ಅವರು, ನೀವು ಯುಎಸ್‍ಎಯಲ್ಲಿ ನಮ್ಮ ಪ್ರಧಾನಿಯಾಗಿದ್ದೀರಿ. ಚುನಾವಣೆಗಳಲ್ಲಿ ಸ್ಟಾರ್ ಪ್ರಚಾರಕರಲ್ಲ ಎಂಬುದನ್ನು ನಿಮಗೆ ನೆನಪಿಸುತ್ತೇನೆ ಎಂದು ಶರ್ಮಾ ಭಾನುವಾರ ತಡರಾತ್ರಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಇನ್ನೊಂದು ಟ್ವೀಟ್‍ನಲ್ಲಿ ಪ್ರಧಾನಿ ಮೋದಿ ಅವರು ಮತ್ತೊಂದು ದೇಶದ ದೇಶೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಇದು ಭಾರತೀಯ ವಿದೇಶಾಂಗ ನೀತಿಯ ತತ್ವವನ್ನು ಉಲ್ಲಂಘಿಸಿದಂತೆ ಎಂದು ಟ್ವಿಟ್ ಮಾಡಿ ಕಿಡಿಕಾರಿದ್ದಾರೆ.

    ಅಮೆರಿಕದೊಂದಿಗಿನ ನಮ್ಮ ದೇಶ ಉಭಯಪಕ್ಷೀಯ ಸಂಬಂಧ ಹೊಂದಿದೆ. ಎರಡೂ ದೇಶಗಳ ನಡುವೆ ರಿಪಬ್ಲಿಕನ್ ಮತ್ತು ಡೆಮೊಕ್ರಟಿಕ್ ಸಂಬಂಧವಿದೆ. ಟ್ರಂಪ್‍ಗಾಗಿ ನೀವು ಸಕ್ರಿಯವಾಗಿ ಪ್ರಚಾರ ಮಾಡುವುದು ಭಾರತ ಮತ್ತು ಅಮೆರಿಕ ಎರಡೂ ದೇಶದ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವಗಳ ಉಲ್ಲಂಘನೆ ಮಾಡಿದಂತೆ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

    ಭಾನುವಾರ ಹ್ಯೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಭಾರತೀಯ-ಅಮೆರಿಕನ್ ಸಮುದಾಯದ ದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಮೋದಿ ಅವರು ಇಂಡೋ-ಯುಎಸ್ ಸಂಬಂಧಗಳನ್ನು ಶ್ಲಾಘಿಸಿದರು. ಅಲ್ಲದೆ ಭಾರತ ಅಮೆರಿಕ ಎರಡೂ ರಾಷ್ಟ್ರ ಶ್ರೇಷ್ಠ ಸ್ನೇಹಿತರು ಎಂದು ಸಾರಿದರು.