Tag: ಆನಂದರಾವ್ ಸರ್ಕಲ್

  • ಸರ್ಕಾರಿ ಕಚೇರಿಗಳಿಗಾಗಿ 50 ಮಹಡಿಗಳ ಅವಳಿಗೋಪುರ ನಿರ್ಮಾಣ: ಗೋವಿಂದ ಕಾರಜೋಳ

    ಸರ್ಕಾರಿ ಕಚೇರಿಗಳಿಗಾಗಿ 50 ಮಹಡಿಗಳ ಅವಳಿಗೋಪುರ ನಿರ್ಮಾಣ: ಗೋವಿಂದ ಕಾರಜೋಳ

    – ಬಾಡಿಗೆ ಕಟ್ಟಡದಲ್ಲಿರುವ ಕಚೇರಿಗಳಿಗೆ ಹೊಸ ಕಟ್ಟಡ

    ಬೆಂಗಳೂರು: ಬೆಂಗಳೂರಿನಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಸದುದ್ದೇಶದಿಂದ ನಗರದ ಹೃದಯಭಾಗವಾಗಿರುವ ಆನಂದರಾವ್ ಸರ್ಕಲ್ ಬಳಿ 1,250 ಕೋಟಿ ರೂ. ವೆಚ್ಚದ ಸುಸಜ್ಜಿತ 50 ಮಹಡಿಗಳ ಅವಳಿಗೋಪುರವನ್ನು ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.

    ಕಾಮಗಾರಿ ಉದ್ದೇಶಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹಲವು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವುದಲ್ಲದೇ ಸಕಾಲದಲ್ಲಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಕಷ್ಟಕರವಾಗುತ್ತಿದೆ. ಸಾರ್ವಜನಿಕರಿಗೂ ಅನಾನುಕೂಲವಾಗುತ್ತಿದೆ. ಇದನ್ನು ಮನಗಂಡು ಸಿಎಂ ಯಡಿಯೂರಪ್ಪ ಅವರು 2020-21 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದರು. ಕಳೆದ ಸಚಿವ ಸಂಪುಟದಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ನಗರದ ಹೃದಯ ಭಾಗದಲ್ಲಿರುವ ಈ ಪ್ರದೇಶವು ವಿಧಾನಸೌಧ, ವಿಕಾಸಸೌಧ, ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣಕ್ಕೆ ಸಮೀಪದಲ್ಲಿರುವುದರಿಂದ ನೌಕರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.

    ಈ ಕಾಮಗಾರಿಯನ್ನು ಪಿಪಿಪಿ ಮಾದರಿಯಲ್ಲಿ ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮ ಲಿಮಿಟೆಡ್ (ಎನ್‍ಬಿಸಿಸಿ) ಇವರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುವುದು. 8.5 ಎಕರೆ ಸರ್ಕಾರಿ ನಿವೇಶನದಲ್ಲಿ 23.94 ಲಕ್ಷ ಚದುರ ಅಡಿ ವಿಸ್ತೀರ್ಣದಲ್ಲಿ ಈ ಬೃಹತ್ ಕಟ್ಟಡವನ್ನು ನಿರ್ಮಿಸಲಾಗುವುದು. ಶೇ. 60: 40 ಅನುಪಾತದಲ್ಲಿ ಭಾಗಶ: ಕಟ್ಟಡಗಳನ್ನು ನಿರ್ಮಿಸಲಾಗುವುದು. ಎನ್‍ಬಿಸಿಸಿಗೆ 30 ವರ್ಷಗಳ ಲೀಸ್ ನೀಡುವ ಮೂಲಕ ನಿರ್ಮಿಸಲಾಗುವುದು. ಎನ್‍ಬಿಸಿಸಿ ಅವರೊಂದಿಗೆ ಶೀಘ್ರವಾಗಿ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.

    ಶೇ. 60 ರಷ್ಟು ಕಟ್ಟಡ ಪ್ರದೇಶವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುವುದು. ರಾಜ್ಯ ಸರ್ಕಾರಕ್ಕೆ ಯಾವುದೇ ವೆಚ್ಚವಿಲ್ಲದೇ ಕಟ್ಟಡ ನಿರ್ಮಾಣವಾಗುತ್ತದೆ. ಕಟ್ಟಡ ನಿರ್ವಹಣೆಯ ವೆಚ್ಚವನ್ನು ಕಟ್ಟಡದ ವಾಸಿಗಳಿಂದಲೇ ಭರಿಸಲು ಉದ್ದೇಶಿಸಿರುವುದರಿಂದ ನಿರ್ವಹಣೆಯ ವೆಚ್ಚವೂ ಉಳಿಕೆಯಾಗಲಿದೆ. ಯಾವುದೇ ವೆಚ್ಚವಿಲ್ಲದೇ ಸರ್ಕಾರಕ್ಕೆ 263 ಕೋಟಿ ರೂ. ನಿವ್ವಳ ಲಾಭವಾಗಲಿದೆ. ಈ ಕಾಮಗಾರಿಯನ್ನು 2 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಈ ನಿವೇಶನದಲ್ಲಿ 1940 ಕ್ಕಿಂತಲೂ ಹಿಂದೆ ನಿರ್ಮಿಸಲಾದ ಲೋಕೋಪಯೋಗಿ ಇಲಾಖೆಯ ಕಟ್ಟಡಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಟ್ಟಡಗಳು ಸೇರಿದಂತೆ ವಿವಿಧ ಇಲಾಖೆಗಳ ಕಟ್ಟಡಗಳಿದ್ದು, ಇವುಗಳನ್ನು ಶೀಘ್ರವಾಗಿ ತೆರವುಗೊಳಿಸಲಾಗುತ್ತದೆ.

    ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಅಭಿಯಂತರರಾದ ಶಿವಯೋಗಿ ಹಿರೇಮಠ, ಅಧೀಕ್ಷಕ ಅಭಿಯಂತರರಾದ ಎಲ್. ಶ್ರೀಧರ ಮೂರ್ತಿ, ಕಾರ್ಯನಿರ್ವಾಹಕ ಅಭಿಯಂತರ ಜಿ. ಡಿ. ಕುಮಾರ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

  • ಬೆಂಗ್ಳೂರಲ್ಲಿ ಮಳೆಯ ಅಬ್ಬರ- ಧರೆಗುರುಳಿದ ಮರ, ವಿದ್ಯುತ್ ಕಂಬ, ಅಂಡರ್‍ಪಾಸ್‍ನಲ್ಲಿ ಮರ್ಸಿಡಿಸ್ ಕಾರು ಜಖಂ

    ಬೆಂಗ್ಳೂರಲ್ಲಿ ಮಳೆಯ ಅಬ್ಬರ- ಧರೆಗುರುಳಿದ ಮರ, ವಿದ್ಯುತ್ ಕಂಬ, ಅಂಡರ್‍ಪಾಸ್‍ನಲ್ಲಿ ಮರ್ಸಿಡಿಸ್ ಕಾರು ಜಖಂ

    ಬೆಂಗಳೂರು: ಮಂಗಳವಾರ ರಾತ್ರಿ ಬೆಂಗಳೂರಲ್ಲಿ ಸುರಿದ ಭಾರಿ ಮಳೆಗೆ ಇಂದಿರಾನಗರದ ತಿಪ್ಪಸಂದ್ರದ ಬಳಿ ತೆಂಗಿನ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದು ವರೆಗೂ ಪಾಲಿಕೆಯಿಂದ ಯಾವ ಸಿಬ್ಬಂದಿಯೂ ಮರ ತೆರವು ಮಾಡಲು ಬಂದಿಲ್ಲ ಅಂತ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತೆಂಗಿನಮರ ವಿದ್ಯುತ್ ತಂತಿ ಮೇಲೆ ಬಿದ್ದಿರೋದ್ರಿಂದ ವಿದ್ಯುತ್ ತಂತಿ ಸಹ ಹರಿದು ಬಿದ್ದಿದ್ದು, ರಾತ್ರಿಯಿಂದ ಕರೆಂಟ್ ಕೂಡ ಇಲ್ಲ.

    ಮಂಗಳವಾರ ರಾತ್ರಿ ನಗರದಲ್ಲಿ ಒಂದು ಗಂಟೆ ಸುರಿದ ಮಳೆ ಹತ್ತಾರು ಅನಾಹುತಗಳನ್ನ ಸೃಷ್ಟಿಸಿದೆ. ಬೆಂಗಳೂರಿನ ಪ್ರಮುಖ ನಗರಗಳಲ್ಲಿ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬ ಬಿದ್ದಿದೆ. ಮನೆಗಳಿಗೆ ನೀರು ನುಗ್ಗಿದೆ. ಕಾರು, ಬಸ್ ನೀರಲ್ಲಿ ಮುಳುಗಿ ಹೋಗಿವೆ.

    ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಬೆಂಗಳೂರಿನ ಲಿ ಮೆರಿಡಿಯನ್ ಅಂಡರ್‍ಪಾಸ್‍ನಲ್ಲಿ ಸಿಕ್ಕಿಕೊಂಡ ಕಾರನ್ನು ಇನ್ನೂ ಹೊರತೆಗೆದಿಲ್ಲ. ಅಂಡರ್‍ಪಾಸ್‍ನಲ್ಲಿ ನೀರು ತುಂಬಿರೋದ್ರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ. ನೀರನ್ನು ಹೊರತೆಗೆದಿಲ್ಲ, ಕಾರು ಹೊರಬಂದಿಲ್ಲ. ಹೀಗಾಗಿ ಪ್ಯಾಲೆಸ್ ಗುಟ್ಟಹಳ್ಳಿ, ಗಾಲ್ಫ್ ರಸ್ತೆ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ.

    ಆನಂದ್‍ರಾವ್ ಸರ್ಕಲ್‍ನಲ್ಲಿ ಮತ್ತೆ ಮುಳುಗಿದ ಬಸ್: ಇದು ಪ್ರತಿ ಬಾರಿ ಮಳೆ ಬಂದಾಗ್ಲೂ ಕಿನೋ ಥಿಯೇಟರ್ ಮುಂದೆ ಆಗೋ ಮಾಮೂಲಿ ಪ್ರಾಬ್ಲಂ. ಸುತ್ತಲೂ ಎತ್ತರ ಪ್ರದೇಶದಲ್ಲಿ ಮನೆಗಳು ಹಾಗೂ ರಸ್ತೆಗಳಿವೆ. ಅಲ್ಲಿಂದ ಹರಿದುಬರುವ ನೀರು ಅಂಡರ್‍ಪಾಸ್‍ನಲ್ಲಿ ಬಂದು ನಿಲ್ಲುತ್ತೆ. ಇದ್ರಿಂದ ಇಂಥಾ ಅನಾಹುತಗಳು ಪ್ರತಿ ಬಾರಿನೂ ಆಗ್ತಾನೇ ಇದೆ. ಮಂಗಳವಾರದಂದು ಕೂಡ ಇದೇ ಪರಿಸ್ಥಿತಿ ಉಂಟಾಗಿದ್ದು, ಕೆಲವು ಹುಡುಗರು ಅದೇ ಮೋರಿ ನೀರು, ಚೇಂಬರ್ ನೀರಲ್ಲಿ ಈಜಿಕೊಂಡು ಹೋಗಿ ಬಸ್‍ನಲ್ಲಿದ್ದವರನ್ನ ರಕ್ಷಣೆ ಮಾಡಿದ್ದಾರೆ. ಬಸ್ ಮುಳುಗಡೆ ಆಗಿರೋದು ಗೊತ್ತಾಗ್ತಿದ್ದಂತೆ ಸ್ಥಳಕ್ಕೆ ಮೇಯರ್ ಪದ್ಮಾವತಿ ಬಂದ್ರು. ಅಗ್ನಿಶಾಮಕ ದಳವೂ ಬಂತು. ನೀರನ್ನ ಹೊರಹಾಕುವ ಕೆಲಸ ಮಾಡಿದ್ರು. ಆದ್ರೆ ಜನ ಮಾತ್ರ ಮೇಯರ್‍ಗೆ ಕ್ಲಾಸ್ ತಗೊಂಡ್ರು. ಇಷ್ಟಾದ್ಮೇಲೆ ಮೇಯರ್ ಪದ್ಮಾವತಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಂದು ವರ್ಷದಿಂದ ಕೆಲಸ ಆಗ್ತಿದೆ. ಇನ್ನೊಂದು ತಿಂಗಳಲ್ಲಿ ಶಾಸ್ವತ ಪರಿಹಾರ ಕೊಡ್ತೀವಿ ಅಂದ್ರು.

    ಇದು ಆನಂದ್ ರಾವ್ ಸರ್ಕಲ್ ಕಥೆಯಾದ್ರೆ, ಕಾವೇರಿ ಜಂಕ್ಷನ್‍ನ ಅಂಡರ್‍ಪಾಸ್‍ನಲ್ಲಿ ಕಾರು ಮುಳುಗಡೆಯಾಗಿತ್ತು. ಜಯನಗರದಲ್ಲಿ ಭಾರೀ ಮಳೆಗೆ ಜಾಹಿರಾತು ಫಲಕ ರಸ್ತೆಗೆ ಬಂದು ಬಿತ್ತು ಸಂಜಯ್‍ನಗರದಲ್ಲಿ ಬುಡ ಸಮೇತ ಮರ ಬಿದ್ದಿದ್ರಿಂದ ಕಾರು ಜಖಂ ಆಗಿದೆ. ಕಾಕ್ಸ್ ಟೌನ್‍ನಲ್ಲಿ ಪಾದಚಾರಿಯೊಬ್ಬರಿಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದ್ದಾರೆ. ಚಂದ್ರಲೇಔಟ್‍ನಲ್ಲಿ ಮತ್ತಿಕೆರೆಯ ಅಯ್ಯಪ್ಪ ದೇವಸ್ಥಾನದ ಹತ್ತಿರ ಮರಗಳು ನೆಲಕಚ್ಚಿವೆ. ಹೊಸಕೆರೆಹಳ್ಳಿಯಲ್ಲಿ ವಿದ್ಯುತ್ ಕಂಬ ಉರುಳಿಬಿದ್ದಿದೆ.

    ಹತ್ತಾರು ಮನೆಗಳಿಗೆ ನುಗ್ಗಿದ ನೀರು: ಮಲ್ಲೇಶ್ವರಂ 12ನೇ ಮುಖ್ಯರಸ್ತೆಯಲ್ಲಿ ರಾಘವೇಂದ್ರ ಅನ್ನೋರ ಮನೆಗೆ ನೀರು ನುಗ್ಗಿದೆ. ಹಲಸೂರಿನ ಕೆರೆ ಬಳಿ ನಾಲ್ಕೈದು ಮನೆಗಳಿಗೆ ಚರಂಡಿ ನೀರು ನುಗ್ಗಿತ್ತು. ಜೆಪಿನಗರದ ಕೆಎಸ್‍ಆರ್‍ಟಿಸಿ ಲೇಔಟ್‍ನಲ್ಲೂ ನಾಲ್ಕು ಮನೆಗಳಿಗೆ ನೀರು ನುಗ್ಗಿದ್ರಿಂದ ಜನ ರಾತ್ರಿಯಿಡೀ ಮನೆ ಕ್ಲೀನ್ ಮಾಡೋದೇ ಕೆಲಸವಾಗಿತ್ತು.

    ಇನ್ನು ಇಂದಿರಾನಗರ, ಪೀಣ್ಯಾ, ಮೈಸೂರು ರಸ್ತೆ, ಯಶವಂತಪುರ, ಯಲಹಂಕ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ನೀರು ನಿಂತಿದ್ರಿಂದ ವಾಹನ ಸವಾರರು ಪರದಾಡಿದ್ರು. ಬರೀ ಒಂದು ದಿನದ ಮಳೆ, ಅದು ಬೇಸಿಗೆ ಮಳೆಗೆ ಬೆಂಗಳೂರು ಗತಿ ಹೀಗಾಗಿದೆ. ಮಳೆಗಾಲ ಬಂದ್ರೆ ಏನ್ ಗತಿ. ಮೇಯರ್ ಅವರು ಸಮಸ್ಯೆ ಬಂದಾಗ ಸ್ಥಳಕ್ಕೆ ಬಂದ್ರೆ ಸಾಲಲ್ಲ. ಸಮಸ್ಯೆ ಸರಿಮಾಡೋಕೆ ಕ್ರಮ ಕೈಗೊಳ್ಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.