Tag: ಆಧಾರ್ ಸೇವಾ ಕೇಂದ್ರ

  • ಜನರ ಬವಣೆ ತಪ್ಪಿಸಲು ಆಧಾರ್ ಸೇವಾ ಕೇಂದ್ರ ಸ್ಥಾಪನೆ

    ಜನರ ಬವಣೆ ತಪ್ಪಿಸಲು ಆಧಾರ್ ಸೇವಾ ಕೇಂದ್ರ ಸ್ಥಾಪನೆ

    ಹುಬ್ಬಳ್ಳಿ: ಆಧಾರ್ ನೊಂದಣಿ ಹಾಗೂ ತಿದ್ದುಪಡಿಗಾಗಿ ಜನರು ರಾತ್ರಿ 3 ಗಂಟೆಯಿಂದ ಪೋಸ್ಟ್ ಆಫೀಸ್, ಬ್ಯಾಂಕ್, ಹುಬ್ಬಳ್ಳಿ-ಧಾರವಾಡ ಒನ್ ಹಾಗೂ ನಾಡಕಚೇರಿಗಳ ಮುಂದೆ ಕಾಯುತ್ತಿದ್ದರು. ಇದನ್ನು ತಪ್ಪಿಸಲು ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    ನಗರದ ಕ್ಲಬ್ ರಸ್ತೆಯಲಿರುವ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೇಂದ್ರದ ಕಾನೂನು ಮತ್ತು ನ್ಯಾಯ, ಸಂಪರ್ಕ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರೊಂದಿಗೆ ವಿಸ್ತ್ರುತವಾಗಿ ಮಾತನಾಡಿ ರಾಜ್ಯದಲ್ಲಿ ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಮೊದಲ ಆಧಾರ್ ಸೇವಾ ಕೇಂದ್ರ ಹುಬ್ಬಳ್ಳಿಯಲ್ಲಿ ಆರಂಭವಾಗಿದೆ. ಮೈಸೂರಿನಲ್ಲಿ ಆಧಾರ್ ಸೇವಾ ಕೇಂದ್ರ ತರೆಯಲಾಗಿದ್ದು, ಸದ್ಯದಲ್ಲೇ ಧಾರವಾಡ ಎಸ್.ಪಿ. ಸರ್ಕಲ್ ನಲ್ಲಿ ಸೇವಾ ಕೇಂದ್ರ ಉದ್ಘಾಟಿಸಲಾಗುವುದು ಎಂದರು.

    ಹುಬ್ಬಳ್ಳಿಯ ಸೇವಾಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿನಿತ್ಯ 700 ಕಾರ್ಡುಗಳನ್ನು ನೊಂದಣಿ ಮಾಡಲಾಗುತ್ತಿದೆ. ಹೆಚ್ಚಿನ ಬೇಡಿಕೆ ಬಂದಾಗ ಸಾವಿರ ಕಾರ್ಡುಗಳನ್ನು ನೊಂದಣಿ ಮಾಡುವಂತೆ ಸಿಬ್ಬಂದಿಗಳಿಗೆ ಸೂಚಿಸಲಾಗುವುದು. ಕೇಂದ್ರ ಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳು ಇಲ್ಲಿಗೆ ಕರೆತಂದು ಭೇಟಿ ನೀಡಿಸಲಾಗುವುದು. ಈ ಮಾದರಿಯ ಕೇಂದ್ರಗಳನ್ನು ಅಗತ್ಯ ಇರುವ ಇತರೆಡೆಗಳಲ್ಲೂ ಸಹ ತರೆಯಲಾಗುವುದು. ಜನರು ರಾತ್ರಿ ಕಾಯುವುದು ತಪ್ಪಿದೆ. ಆನ್‍ಲೈನ್ ಮೂಲಕ ಸಹ ನೊಂದಣಿ ಹಾಗೂ ತಿದ್ದುಪಡಿಗೆ ಟೋಕನ್ ಪಡೆಯಬಹುದಾಗಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

    ಸೇವಾ ಕೇಂದ್ರದಲ್ಲಿ ವ್ಯವಸ್ಥಿತವಾಗಿ ಜನರಿಗೆ ಸೇವೆ ನೀಡಲಾಗುತ್ತಿದೆ. ಆಧಾರ್ ತಿದ್ದುಪಡಿ ನಿಯಮಗಳನ್ನು ಸರಳೀಕರಿಸಲು ಪ್ರಯತ್ನಿಸಲಾಗುವುದು. ಕೇಂದ್ರ ಸರ್ಕಾರ ಆಧಾರ್ ಕಾಯ್ದೆ ರಚಿಸುವ ಮೂಲಕ ಆಧಾರ್ ಮಾನ್ಯತೆ ನೀಡಿದೆ. ಜನಧನ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ನಂಬರ್ ಲಿಂಕ್ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಸರ್ಕಾರದ ಸೌಲಭ್ಯಗಳನ್ನು ನೀಡಲು ಆಧಾರ್‌ಗಳನ್ನು ಲಿಂಕ್ ಮಾಡಲಾಗಿದೆ. ಇದರಿಂದ ಸರ್ಕಾರದ ಯೋಜನೆಗಳು ದುರುಪಯೋಗವಾಗುವುದು ತಪ್ಪಿದೆ. ಆಧಾರ್ ಲಿಂಕ್‍ನಿಂದಾಗಿ ಕೇಂದ್ರ ಸರ್ಕಾರಕ್ಕೆ ಒಂದು ಲಕ್ಷದ ಇಪ್ಪತ್ತೈದು ಸಾವಿರ ಕೋಟಿ ಉಳಿತಾಯವಾಗಿದೆ. ಅನರ್ಹರಿಗೆ ಸೌಲಭ್ಯಗಳು ತಲುಪುವುದು ತಪ್ಪಿದೆ. ಇದೇ ಹಣವನ್ನು ಸರ್ಕಾರ ಜನರ ಕಲ್ಯಾಣಕ್ಕಾಗಿ ವಿನಯೋಗಿಸಿದೆ. ಇತರೆ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಸೇವಾ ಕೇಂದ್ರಗಳನ್ನು ಬಲಗೊಳಿಸಲಾಗುವುದು ಎಂದು ಹೇಳಿದರು.

  • ಆಧಾರ್ ಕಾರ್ಡ್ 6 ಬದಲಾವಣೆಗಳಿಗೆ ದಾಖಲೆ ಬೇಕಿಲ್ಲ

    ಆಧಾರ್ ಕಾರ್ಡ್ 6 ಬದಲಾವಣೆಗಳಿಗೆ ದಾಖಲೆ ಬೇಕಿಲ್ಲ

    ನವದೆಹಲಿ: ಆಧಾರ್ ಕಾರ್ಡಿನ ಆರು ಬದಲಾವಣೆಗಳಿಗೆ ದಾಖಲೆಯ ಅಗತ್ಯವಿಲ್ಲ ಎಂದು ಯುಐಡಿಎಐ ಹೇಳಿದೆ.

    ಫೋಟೋಗ್ರಾಫ್, ಬಯೋಮೆಟ್ರಿಕ್ ಫಿಂಗರ್ ಫ್ರಿಂಟ್, ಐರಿಸ್ ಸ್ಕ್ಯಾನ್, ಲಿಂಗ, ಮೊಬೈಲ್ ನಂಬರ್, ಇ-ಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಬದಲಾವಣೆಗಳಿಗೆ ಯಾವುದೇ ದಾಖಲಾತಿಯನ್ನು ಒದಗಿಸುವ ಅಗತ್ಯವಿಲ್ಲ. ಈ ಆರು ಬದಲಾವಣೆಗಳಿಗಾಗಿ ನಿಮ್ಮ ಆಧಾರ್ ಕಾರ್ಡ್ ಜೊತೆ ತೆರಳಿದರೆ ನಿಮ್ಮ ಆಧಾರ್ ಚೀಟಿ ಅಪ್‍ಡೇಟ್ ಆಗಲಿದೆ.

    ಆಧಾರ್ ಕಾರ್ಡ್ ನಲ್ಲಿಯ ನಿಮ್ಮ ವಿಳಾಸವನ್ನು ಬದಲಾಯಿಸಲು ತೆರಳುತ್ತಿದ್ದರೆ ಅಗತ್ಯ ದಾಖಲೆ ಜೊತೆ ನೊಂದಾಯಿಸಿಕೊಂಡ ಮೊಬೈಲ್ ನಂಬರ್ ತೆಗೆದುಕೊಂಡು ಹೋಗಬೇಕು. ವಿಳಾಸ ಬದಲಾವಣೆ ಸಮಯದಲ್ಲಿ ನಿಮ್ಮ ಮೊಬೈಲ್ ಗೆ ಒಟಿಪಿ ಬರುತ್ತದೆ.

    ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು ತೆರಳುವವರು ಅಗತ್ಯ ದಾಖಲಾತಿಯನ್ನು ಅಧಿಕಾರಿಗಳ ಮುಂದೆ ಹಾಜರುಪಡಿಸಬೇಕು. ಹೆಸರು, ವಿಳಾಸ, ಮೊಬೈಲ್ ನಂಬರ್, ಇಮೇಲ್, ಹುಟ್ಟಿದ ದಿನಾಂಕ, ಲಿಂಗ, ಬಯೋಮೆಟ್ರಿಕ್ ಬದಲಾವಣೆಗಳಿಗಾಗಿ ನೀವು ಆಧಾರ್ ಸೇವಾ ಕೇಂದ್ರಕ್ಕೆ ತೆರಳಬೇಕು. ಮೊದಲೇ ಯುಐಡಿಎಐ ವೆಬ್‍ಸೈಟ್ ನಲ್ಲಿ ಆಧಾರ್ ಸೇವಾ ಕೇಂದ್ರದಲ್ಲಿ ನೀವು ಅಪಾಯಿಂಟ್‍ಮೆಂಟ್ ಬುಕ್ ಮಾಡಿಕೊಳ್ಳಬಹುದು.

    * ಆಧಾರ್ ಸೇವಾ ಕೇಂದ್ರಕ್ಕೆ ತೆರಳಿ ಮೊದಲು ಟೋಕನ್ ಪಡೆಯಬೇಕು.
    * ಟೋಕನ್ ಪಡೆದು ನಿಮ್ಮ ಸರದಿ ಬಂದಾಗ ಸಿಬ್ಬಂದಿ ಬಳಿ ತೆರಳುವುದು.
    * ಸಿಬ್ಬಂದಿ ನಿಮ್ಮ ಸಲಹೆ ಮೇರೆಗೆ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡುತ್ತಾರೆ.
    * ತಿದ್ದುಪಡಿ ಮಾಡಿದ ಬಳಿಕ ಅಧಿಕಾರಿ ನಿಮಗೆ ಬದಲಾದ ಮಾಹಿತಿಯುಳ್ಳ ದಾಖಲೆ ನೀಡುತ್ತಾರೆ.
    * ಕೊನೆಗೆ ಶುಲ್ಕ ಪಾವತಿಸುವುದು

    * ಹೊಸ ಅರ್ಜಿದಾರರಿಗೆ ಆಧಾರ್ ಸೇವೆ ಉಚಿತವಾಗಿರುತ್ತದೆ.
    * ಮಕ್ಕಳ ಬಯೋಮೆಟ್ರಿಕ್ ಸೇವೆ ಉಚಿತ
    * ಬಯೋಮೆಟ್ರಿಕ್ ಅಥವಾ ಡಿಮೋಗ್ರಾಫಿಕ್ ಬದಲಾವಣೆಗೆ 50 ರೂ. ಶುಲ್ಕ