Tag: ಆಧಾರ್ ಜೋಡಣೆ

  • ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ನಲ್ಲಿ ಕೇಂದ್ರ ಸ್ಪಷ್ಟನೆ

    ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ನಲ್ಲಿ ಕೇಂದ್ರ ಸ್ಪಷ್ಟನೆ

    ನವದೆಹಲಿ: ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಗಳ ನಡುವೆ ಲಿಂಕ್ ಮಾಡಲು ಸರ್ಕಾರಿ ಅಧಿಕಾರಿಗಳಿಗೆ ಸಾಧ್ಯವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಶುಕ್ರವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.

    ಲೋಕಸಭೆಯಲ್ಲಿ ನಡೆದ ಪ್ರತ್ಯೇಕ ಪ್ರಶ್ನೋತ್ತರ ಅವಧಿಯಲ್ಲಿ ಕಿರಣ್ ರಿಜಿಜು ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಗಳ ಜೋಡಣೆ ಬಗ್ಗೆ ಇದ್ದ ಗೊಂದಲಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್‍ನಿಂದ ವಿದ್ಯಾರ್ಥಿನಿಯ ಶಿಕ್ಷಣ ಭವಿಷ್ಯ ಕಸಿದುಕೊಳ್ಳುತ್ತಿದ್ದೇವೆ: ರಾಹುಲ್ ಗಾಂಧಿ

    ಆಧಾರ್ ಬಳಸಿಕೊಂಡು ಪೌರತ್ವ ದೃಢೀಕರಿಸಲು ಸರ್ಕಾರ ಪ್ರೊಟೋಕಾಲ್ ರಚಿಸಿದೆಯೇ? ಎಂಬ ಲಿಖಿತ ಪ್ರಶ್ನೆಗೆ ಸಂಸತ್ತಿನಲ್ಲಿ ಪ್ರತಿಕ್ರಿಯಿಸಿದ ಕಿರಣ್ ರಿಜಿಜು, ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಗಳ ನಡುವೆ ಯಾವುದೇ ರೀತಿಯ ಜೋಡಣೆ ನಡೆಸಲಾಗುವುದಿಲ್ಲ. ಆಧಾರ್ ಪೌರತ್ವದ ಪುರಾವೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಇಬ್ಬರು ಉಗ್ರರ ಸಾವು

    ಆಧಾರ್ ಅನ್ನು ಕಾನೂನುಬದ್ಧ ಸಾಧನವಾಗಿ ಬಳಸುವ ವಿಚಾರವಾಗಿ ಉತ್ತರಿಸಿದ ಕಿರಣ್ ರಿಜಿಜು, ಆಧಾರ್ ಪೌರತ್ವದ ಪುರಾವೆಯಲ್ಲ. ಹೀಗಾಗಿ ಅದನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಿಸುವ ಬಗ್ಗೆ ಗೊಂದಲ ಬೇಡ ಎಂದಿದ್ದಾರೆ.

  • ಆಧಾರ್ ಕಾರ್ಡ್ ಲಿಂಕ್ ಅನಿರ್ಧಿಷ್ಟ ಅವಧಿಗೆ ವಿಸ್ತರಣೆ – ಸುಪ್ರೀಂ

    ಆಧಾರ್ ಕಾರ್ಡ್ ಲಿಂಕ್ ಅನಿರ್ಧಿಷ್ಟ ಅವಧಿಗೆ ವಿಸ್ತರಣೆ – ಸುಪ್ರೀಂ

    ನವದೆಹಲಿ: ವಿವಿಧ ಸೇವೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಅಂತಿಮ ದಿನಾಂಕವನ್ನು ಸುಪ್ರೀಂಕೋರ್ಟ್ ಅನಿರ್ಧಿಷ್ಟ ಅವಧಿವರೆಗೆ ವಿಸ್ತರಣೆ ಮಾಡಿದೆ.

    ಈ ಹಿಂದೆ ಮಾರ್ಚ್ 31 ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆ ದಿನಾಂಕವಾಗಿತ್ತು. ಆದರೆ ಈಗ ಆಧಾರ್ ಸಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಇತ್ಯರ್ಥ ಆಗುವವರೆಗೂ ಈ ಗಡುವು ವಿಸ್ತರಣೆಯಾಗಲಿದೆ ಎಂದು ಮುಖ್ಯ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರನ್ನು ಒಳಗೊಂಡ ಪೀಠ ಹೇಳಿದೆ.

    ವಿಚಾರಣೆ ವೇಳೆ ನ್ಯಾಯಾಲಯ ಮಾರ್ಚ್ 31ರ ವೇಳೆಗೆ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಅಲ್ಲದೇ ಈ ಅವಧಿಯೊಳಗೆ ಬ್ಯಾಂಕ್ ಸೇರಿದಂತೆ ಇತರೇ ಆರ್ಥಿಕ ಸೇವೆಗಳಿಗೆ ಆಧಾರ್ ಲಿಂಕ್ ಮಾಡಲು ಸಾಧ್ಯವಾಗದೇ ಇದ್ದರೆ ಗಂಭೀರ ಸ್ವರೂಪ ಸಮಸ್ಯೆಗಳು ಎದುರಿಸಬೇಕಾಗುತ್ತದೆ ಎಂದು ತಿಳಿಸಿತ್ತು.

    ಕಳೆದ ವರ್ಷ ಡಿಸೆಂಬರ್ 15 ಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಡೆಡ್‍ಲೈನ್ ನಿಗದಿಯಾಗಿತ್ತು. ಇದಾದ ಬಳಿಕ ಸುಪ್ರೀಂ ಕೋರ್ಟ್ ಮಾರ್ಚ್ 31ಕ್ಕೆ ಡೆಡ್‍ಲೈನ್ ವಿಸ್ತರಿಸಿತ್ತು. ಮಾರ್ಚ್ 31ರ ನಂತರ ಯಾವುದೇ ಕಾರಣಕ್ಕೂ ಡೆಡ್ ಲೈನ್ ವಿಸ್ತರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು.

    ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಕೆ. ಎಸ್. ಪುಟ್ಟಸ್ವಾಮಿ ಅವರು ಕೇಂದ್ರ ಸರ್ಕಾರ ತನ್ನ ಸೇವೆಗಳಿಗೆ `ಆಧಾರ್’ ಕಡ್ಡಾಯ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಕಾನೂನು ಮಾನ್ಯತೆ ಇಲ್ಲದ `ಆಧಾರ್’ ಸಂಖ್ಯೆಯಿಂದ ನಾಗರಿಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗು­ತ್ತಿದೆ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.