Tag: ಆದೇಶ

  • ನವರಾತ್ರಿ, ಮೊಹರಂ ಆಚರಣೆಗೆ ಷರತ್ತುಗಳನ್ನು ಹಾಕಿದ ಉತ್ತರಪ್ರದೇಶ ಸಿಎಂ

    ನವರಾತ್ರಿ, ಮೊಹರಂ ಆಚರಣೆಗೆ ಷರತ್ತುಗಳನ್ನು ಹಾಕಿದ ಉತ್ತರಪ್ರದೇಶ ಸಿಎಂ

    ಲಕ್ನೌ: ಸೆಪ್ಟೆಂಬರ್ 21 ಇದೇ ಗುರುವಾರದಿಂದ ನವರಾತ್ರಿ ಹಬ್ಬ ಆರಂಭವಾಗಲಿದೆ. ಇದೇ ಹೊತ್ತಲ್ಲಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ದುರ್ಗಾ ಪೂಜೆ, ದಸರಾ ಹಾಗೂ ಮೊಹರಂ ಆಚರಣೆಗೆ ಹಲವು ಷರತ್ತುಗಳನ್ನ ವಿಧಿಸಿದೆ.

    ದುರ್ಗಾ ಪೂಜೆ ಮೆರವಣಿಗೆ ವೇಳೆ ದುರ್ಗಾ ಮಾತೆಯ ಮೂರ್ತಿ ಹಾಗೂ ಮೊಹರಂನ ಮೆರವಣಿಗೆ ವೇಳೆ ಹೊತ್ತೊಯ್ಯಲಾಗುವ ತಝಿಯಾಗಳು ಇಷ್ಟೇ ಎತ್ತರ ಇರಬೇಕೆಂದು ನಿರ್ಬಂಧ ಹೇರಲಾಗಿದೆ. ಹಾಗೂ ಡಿಜೆ(ಹಾಡು-ನೃತ್ಯಕ್ಕೂ) ನಿಷೇಧ ಹೇರಿದ್ದಾರೆ. ಧ್ವನಿವರ್ಧಕಗಳ ಬಳಕೆಗೆ ಸರ್ಕಾರದ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಮೊದಲೇ ನಿಗದಿಪಡಿಸಿದ ಮಾರ್ಗ ಹೊರತುಪಡಿಸಿ ಬೇರೆ ಮಾರ್ಗದಲ್ಲಿ ಮೆರವಣಿಗೆ ಸಾಗುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.

    ಸೆಪ್ಟೆಂಬರ್ 26 ರಂದು 4 ದಿನಗಳ ಕಾಲ ದುರ್ಗಾ ಪೂಜೆ ನಡೆಯಲಿದೆ. ಸೆಪ್ಟೆಂಬರ್ 30 ರಂದು ವಿಜಯದಶಮಿ ಆಚರಿಸಲಾಗುತ್ತದೆ. ಹಾಗೇ ಆಕ್ಟೋಬರ್ 1ರಂದು ಮೊಹರಂ ಇದೆ. ಧ್ವನಿ ವರ್ಧಕಗಳ ಬಳಕೆ ಹಾಗೂ ಮೆರವಣಿಗೆ ಹೋಗುವ ಮಾರ್ಗದ ವಿಚಾರವಾಗಿ ಈ ಹಿಂದೆ ಹಿಂದೂ ಹಾಗೂ ಮುಸ್ಲಿಮರ ನಡುವೆ ಗಲಾಟೆ ಆದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ದುರ್ಗಾ ಮಾತೆಯ ಮೆರವಣಿಗೆ ಹಾಗೂ ಮೊಹರಂ ಮೆರವಣಿಗೆ ಸಾಗುವ ಮಾರ್ಗವನ್ನು ರಾಜ್ಯ ಸರ್ಕಾರವೇ ನಿರ್ಧರಿಸಲಿದೆ.

    ದಸರಾ ಹಬ್ಬ ಕೊನೆಯಾದ ಮಾರನೇ ದಿನವೇ ಮೊಹರಂ ಇರೋದು ವಿಶೇಷ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡೋ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

  • ಹಲವು ಷರತ್ತುಗಳನ್ನು ವಿಧಿಸಿ ರಾಜ್ಯ ಸರ್ಕಾರದಿಂದ ಸಾಲ ಮನ್ನಾದ ಅಧಿಕೃತ ಆದೇಶ ಜಾರಿ

    ಹಲವು ಷರತ್ತುಗಳನ್ನು ವಿಧಿಸಿ ರಾಜ್ಯ ಸರ್ಕಾರದಿಂದ ಸಾಲ ಮನ್ನಾದ ಅಧಿಕೃತ ಆದೇಶ ಜಾರಿ

    ಬೆಂಗಳೂರು: ರೈತರ ಸಾಲ ಮನ್ನಾ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸಾಲ ಮನ್ನಾದ ಲಾಭ ಪಡೆಯಲು ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿ ಕಡ್ಡಾಯಗೊಳಿಸಿದೆ. ಪಬ್ಲಿಕ್ ಟಿವಿಗೆ ರಾಜ್ಯ ಸರ್ಕಾರದ ಆದೇಶದ ಅಧಿಕೃತ ಪ್ರತಿ ಸಿಕ್ಕಿದೆ.

    ಜೂನ್ 21ರಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ 50 ಸಾವಿರ ಸಾಲ ಮನ್ನಾ ಮಾಡಿ ಘೋಷಣೆ ಮಾಡಿದ್ರು. ಘೋಷಣೆಯ ಮರುದಿನವೇ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಈ ಕುರಿತು ನಿರ್ಣಯವನ್ನೂ ಅಂಗೀಕರಿಸಲಾಗಿತ್ತು. ವಿಧಾನಸಭೆಯಲ್ಲಿ ಘೋಷಣೆ ಹೊರಡಿಸಿದ ಮೂರು ದಿನಗಳಲ್ಲಿ ಇಂದು ಅಧಿಕೃತ ಆದೇಶವೂ ಹೊರಬಿದ್ದಿದ್ದು, ಸಾಲ ಮನ್ನಾ ಅಧಿಕೃತವಾಗಿ ಜಾರಿಗೆ ಬಂದಿದೆ.
    ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಸಾಲ ಮನ್ನಾ ಘೋಷಣೆಯಾಗಿದ್ದರೂ ಈವರೆಗೆ ಆದೇಶ ಪತ್ರ ಹೊರಬಂದಿಲ್ಲ.

    ಸರ್ಕಾರದ ಷರತ್ತುಗಳೇನು?:

    > ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್‍ಗಳು, ಪಿಕಾರ್ಡ್ ಬ್ಯಾಂಕ್ ಗಳು ವಿತರಿಸಿದ ಅಲ್ಪಾವಧಿ ಬೆಳೆಸಾಲದ ಪೈಕಿ 20-06-2017ರವೆರೆಗೆ ಹೊಂದಿದ್ದ ಹೊರಬಾಕಿ ಸಾಲಕ್ಕೆ ಮಾತ್ರ ಅನ್ವಯ.

    > ದಿನಾಂಕ 20-06-2017ರ ವರೆಗೆ ಅಲ್ಪಾವಧಿ ಬೆಳೆ ಸಾಲ ಪಡೆದು 20-06-2017ಕ್ಕೆ ಹೊರಬಾಕಿ ಇರುವ ಸಾಲದ ಪೈಕಿ 50 ಸಾವಿರ ರೂ. ವರೆಗಿನ ಸಾಲ ಮನ್ನಾ.

    > ಕೃಷಿಯೇತರ ಸಾಲಗಳು, ಮಧ್ಯಮಾವಧಿ, ದೀರ್ಘಾವಧಿ, ಪಶು ಭಾಗ್ಯ ಯೋಜನೆಯಡಿ ನೀಡಿದ ಸಾಲಗಳಿಗೆ ಅನ್ವಯವಾಗುವುದಿಲ್ಲ.

    > 20-06-2017ಕ್ಕೆ 50 ಸಾವಿರ ರೂಪಾಯಿಗಿಂತ ಹೆಚ್ಚಿಗೆ ಸಾಲ ಪಡೆದು 20-06-2018ಕ್ಕಿಂತ ಮೊದಲು 50 ಸಾವಿರ ರೂಪಾಯಿಗಿಂತ ಹೆಚ್ಚಿನ ಹಣ ಪಾವತಿ ಮಾಡಿದ್ದಲ್ಲಿ ಸಾಲ ಮನ್ನಾ.

    > 20 -06-2017ಕ್ಕೆ ಹೊರಬಾಕಿ ಇರುವ ಸಾಲವು ಸುಸ್ತಿಯಾಗಿದ್ದಲ್ಲಿ 20-06-2017ಕ್ಕೆ ಬಾಕಿ ಇರುವ ಅಸಲು ಮತ್ತು ಮರು ಪಾವತಿಸುವ ದಿನಾಂಕಕ್ಕೆ ಅನ್ವಯಿಸುವ ಬಡ್ಡಿ ಸೇರಿ 50 ಸಾವಿರ ರೂಪಾಯಿಗಿಂತ ಹೆಚ್ಚಿನ ಸಾಲವನ್ನು 31-12-2017ರೊಳಗೆ ಮರು ಪಾವತಿ ಮಾಡಿದ್ದಲ್ಲಿ ಅಸಲು ಮತ್ತು ಬಡ್ಡಿ ಸೇರಿ 50 ಸಾವಿರ ರೂಪಾಯಿವರೆಗಿನ ಸಾಲ ಮನ್ನಾ.

    > ಸಾಲ ಮನ್ನಾ ಸೌಲಭ್ಯ ಪಡೆದ ರೈತರು ಸಾಲ ಮರುಪಾವತಿಗೆ ನಿಗದಿಪಡಿಸಿದ ಗಡುವು ದಿನಾಂಕ ಮುಗಿದ ನಂತರವೇ ಪುನಃ ಸಾಲ ಪಡೆಯಲು ಅರ್ಹರು.

    > ಒಂದಕ್ಕಿಂತ ಹೆಚ್ಚಿನ ಸಹಕಾರ ಸಂಘ, ಸಹಕಾರ ಬ್ಯಾಂಕ್‍ನಲ್ಲಿ ಸಾಲ ಪಡೆದಿದ್ದರೆ ಒಂದು ಬ್ಯಾಂಕ್‍ನ ಸಾಲ ಮಾತ್ರ ಮನ್ನಾ.

    > ಸಾಲ ಪಡೆದು ರೈತರು ಮೃತಪಟ್ಟಿದ್ದಲ್ಲಿ ಸಂಬಂಧಿಸಿದ ವಾರಸುದಾರರು ಸಾಲ ಮರುಪಾವತಿಸಿದ್ದರೆ ಅಂತಹವರಿಗೆ ಈ ಸೌಲಭ್ಯ ಅನ್ವಯ.

    > ಬಡ್ಡಿ ಸಹಾಯಧನ ಯೋಜನೆಯಡಿ ಕ್ಲೈಂ ಬಿಲ್‍ಗಳನ್ನು ಸಾಲ ಮರುಪಾವತಿಸಲು ನಿಗದಿಪಡಿಸಿದ ತಿಂಗಳಿನ 30 ದಿನಗಳೊಳಗೆ ಕ್ಲೈಂ ಬಿಲ್‍ಗಳನ್ನು ಸಲ್ಲಿಸತಕ್ಕದ್ದು.