Tag: ಆದೇಶ

  • ಕೊರೊನಾ ಭೀತಿ ಎಫೆಕ್ಟ್ – ಟ್ರಾಫಿಕ್ ಪೊಲೀಸರಿಗೆ ಖಡಕ್ ಆದೇಶ

    ಕೊರೊನಾ ಭೀತಿ ಎಫೆಕ್ಟ್ – ಟ್ರಾಫಿಕ್ ಪೊಲೀಸರಿಗೆ ಖಡಕ್ ಆದೇಶ

    ಬೆಂಗಳೂರು: ಕೊರೊನಾ ವೈರಸ್ ಕೇಸ್‍ಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಸದಾ ಜನರ ನಡುವೆ ಕೆಲಸ ಮಾಡುವ ಟ್ರಾಫಿಕ್ ಪೊಲೀಸರಿಗೆ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಖಡಕ್ ಆದೇಶ ನೀಡಿದ್ದಾರೆ.

    ಠಾಣೆಗೆ ಬರುವವರನ್ನು ಬಾಗಿಲಲ್ಲೇ ತಡೆದು ಸ್ಯಾನಿಟೈಸರ್ ಹಾಕಿ ಒಳಗೆ ಬಿಡಬೇಕು. ಯಾವುದೇ ವ್ಯಕ್ತಿಯೊಂದಿಗೆ ಮಾತಾಡಬೇಕಾದರು ಕನಿಷ್ಟ ಮೂರು ಅಡಿ ದೂರದಲ್ಲಿ ನಿಂತು ಮಾತಾಡಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಕರ್ವತ್ಯ ನಿರ್ವಹಿಸಬೇಕು. ಯಾವುದೇ ಸಿಬ್ಬಂದಿಗೆ ಕೆಮ್ಮು, ನೆಗಡಿ, ಶೀತ, ಜ್ವರದಂತ ಲಕ್ಷಣಗಳು ಕಾಣಿಸಿಕೊಂಡರೆ ಆ ಸಿಬ್ಬಂದಿ ಕಡ್ಡಯವಾಗಿ ರಜೆ ತಗೋಬೇಕು ಎಂದು ರವಿಕಾಂತೇಗೌಡ ಆದೇಶಿಸಿದ್ದಾರೆ.

    ರವಿಕಾಂತೇಗೌಡ ಅವರ ಈ ಆದೇಶ ಎಲ್ಲಾ ಸಿಬ್ಬಂದಿ ಪಾಲಿಸುತ್ತಿಲ್ಲ. ಬಹುತೇಕರು ಯಾವುದೇ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ. ಠಾಣೆಗಳಲ್ಲೂ ಕೂಡ ಮಾಸ್ಕ್ ಇಲ್ಲದೇ ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿದ್ದು, ಮಾಸ್ಕ್ ಮತ್ತು ಸ್ಯಾನಿಟೈಜರ್ ಖರೀದಿಗೆ ನಾವೇ ಹಣ ಹಾಕಿಕೊಳ್ಳಬೇಕು ಎಂದು ಕೆಲ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೆಲ ಸಿಬ್ಬಂದಿ ಕೂಡ ಕೊರೊನಾ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಮುಕ್ತವಾಗಿ ಕೆಲಸ ನಿರ್ವಹಿಸುವುದಕ್ಕೆ ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ.

  • ನಿರ್ಭಯಾ ಅತ್ಯಾಚಾರ ಪ್ರಕರಣ – ಇಂದು ಸುಪ್ರೀಂಕೋರ್ಟ್‌ನಿಂದ ಮಹತ್ವದ ಆದೇಶ

    ನಿರ್ಭಯಾ ಅತ್ಯಾಚಾರ ಪ್ರಕರಣ – ಇಂದು ಸುಪ್ರೀಂಕೋರ್ಟ್‌ನಿಂದ ಮಹತ್ವದ ಆದೇಶ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯನ್ನು ಬೆಚ್ಚಿ ಬಿಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ಸಂಬಂಧ ಇಂದು ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ.

    ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಮುಖ್ಯ ನ್ಯಾ.ಎಸ್.ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಮಧ್ಯಾಹ್ನ ಎರಡು ಗಂಟೆಗೆ ವಿಚಾರಣೆ ನಡೆಸಲಿದ್ದು, ತೀರ್ಪು ಪರಿಶೀಲಿಸುವ ಬಗ್ಗೆ ತಿರ್ಮಾನ ತೆಗೆದುಕೊಳ್ಳಲಿದೆ.

    ದಿಶಾ ಅತ್ಯಾಚಾರಿಗಳು ಎನ್‍ಕೌಂಟರ್ ಆದ ಬಳಿಕ ನಿರ್ಭಯಾ ಅತ್ಯಾಚಾರಿಗಳಿಗೆ ಶೀಘ್ರ ಗಲ್ಲು ಶಿಕ್ಷೆ ವಿಧಿಸಬೇಕು ಎನ್ನುವ ಒತ್ತಡಗಳು ಕೇಳಿ ಬಂದಿತ್ತು. ಇದರ ಬೆನ್ನೆಲೆ ತಿಹಾರ್ ಜೈಲಿನ ಸಿಬ್ಬಂದಿ ಕೂಡ ಗಲ್ಲು ಶಿಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ಈ ತಯಾರಿ ಬೆನ್ನೆಲೆ ಅಪರಾಧಿ ಅಕ್ಷಯ್ ಠಾಕೂರ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ.

    ವೇದ, ಪುರಾಣ, ಉಪನಿಷತ್‍ಗಳಲ್ಲಿ ಉಲ್ಲೇಖಿಸಿರುವಂತೆ ಮನುಷ್ಯನ ಆಯಸ್ಸು ಸತ್ಯಯುಗ ಮತ್ತು ತೇತ್ರಾಯುಗದಲ್ಲಿ ಜನರು ಸಾವಿರ ವರ್ಷ, ದ್ವಾಪರ ಯುಗದಲ್ಲಿ ನೂರು ಹಾಗೂ ಕಲಿಯುಗದಲ್ಲಿ 50-60 ವರ್ಷ ಬದುಕುತ್ತಿದ್ದರು. ಆದರೆ ದೆಹಲಿಯಲ್ಲಿರುವ ನಾವು ಮಾಲಿನ್ಯ, ಕಲುಷಿತ ನೀರು, ಗ್ಯಾಸ್ ಚೇಂಬರ್ ನಂತಹ ಗಾಳಿ ಸೇವನೆಯಿಂದ ಆಯಸ್ಸು ಕ್ಷೀಣಿಸುತ್ತಿದೆ. ಹೀಗಾಗಿ ನಮ್ಮಗೆ ಏಕೆ ಗಲ್ಲು ಶಿಕ್ಷೆ ಎಂದು ಠಾಕೂರ್ ಪ್ರಶ್ನಿಸಿದ್ದನು. ಅಲ್ಲದೇ ಬಡವ ಅಥವಾ ಅಸಹಾಯಕನನ್ನು ಶಿಕ್ಷಿಸುವ ಮುನ್ನ ಯೋಚಿಸಿ ಎಂದು ಗಾಂಧಿ ಅಂಬೇಡ್ಕರ್ ಹೇಳಿದ್ದಾರೆ. ಹೀಗಾಗಿ ಹಿಂದೆ ನೀಡಿದ್ದ ತೀರ್ಪು ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾನೆ.

    ಈ ಹಿಂದೆ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದ ಗಲ್ಲು ಶಿಕ್ಷೆ ಆದೇಶವನ್ನು ಪುನರ್ ಪರಿಶೀಲನೆ ಮಾಡುವಂತೆ ಹಿಂದೆ ಪ್ರಕರಣ ಬಾಕಿ ಮೂವರು ಅಪರಾಧಿಗಳಾದ ಮುಖೇಶ್, ಪವನ್ ಕುಮಾರ್ ಗುಪ್ತಾ ಮತ್ತು ವಿನಯ್ ಶರ್ಮಾ ಸಲ್ಲಿಸಿದ್ದ ಪುನರ್ ಪರಿಶೀಲನೆ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈಗಾಗಲೇ ಕ್ಷಮದಾನ ಅರ್ಜಿ ತಿರಸ್ಕರಿಸಿದ ಹಿನ್ನೆಲೆ ಅಕ್ಷಯ್ ಠಾಕೂರ್ ಸಲ್ಲಿಸಿರುವ ಕಡೆಯ ಅರ್ಜಿ ಈಗ ಮಹತ್ವ ಪಡೆದುಕೊಂಡಿದೆ.

    ಅಕ್ಷಯ್ ಠಾಕೂರ್ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸುತ್ತಿದ್ದಂತೆ ಇತ್ತ ಸಂತ್ರಸ್ಥೆಯ ತಾಯಿ ಆಶಾದೇವಿ ಸುಪ್ರೀಂಕೋರ್ಟ್‌ನ ಮೆನ್ಶನ್ ಮಾಡಿದ್ರೆ, ಪಟಿಯಾಲ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲಿ ಗಲ್ಲು ಶಿಕ್ಷೆಗೆ ಒಳಪಡಿಸಿ ಎಂದು ಅವರು ಮನವಿ ಮಾಡಿದ್ದಾರೆ. ಆದರೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇದ್ದ ಹಿನ್ನೆಲೆ ಡಿಸೆಂಬರ್ 18ಕ್ಕೆ ವಿಚಾರಣೆ ನಡೆಸುವುದಾಗಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಹೇಳಿದ್ದಾರೆ. ಅಲ್ಲದೇ ಅರ್ಜಿದಾರರ ಕಾನೂನು ಹೋರಾಟದ ಅವಕಾಶಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

    ಹೀಗಾಗಿ ಇಂದು ಸವೋಚ್ಛ ನ್ಯಾಯಾಲಯ ತೆಗೆದುಕೊಳ್ಳುವ ನಿರ್ಧಾರ ಮೇಲೆ ಎಲ್ಲವೂ ಅವಲಂಬಿತವಾಗಿದ್ದು ಅಕ್ಷಯ್ ಠಾಕೂರ್ ಅರ್ಜಿಯನ್ನು ಪರಿಗಣಿಸುತ್ತಾ ಅಥವಾ ತಿರಸ್ಕರಿಸುತ್ತಾ ಎನ್ನುವುದು ಮಧ್ಯಾಹ್ನ ಗೊತ್ತಾಗಲಿದೆ.

  • ಜನ ಎಣ್ಣೆ ಹಾಕುವುದನ್ನು ಕಡಿಮೆ ಮಾಡಿದ್ದೇಕೆ, ತನಿಖೆ ಮಾಡಿ: ಅಬಕಾರಿ ಆಯುಕ್ತರ ಆದೇಶ

    ಜನ ಎಣ್ಣೆ ಹಾಕುವುದನ್ನು ಕಡಿಮೆ ಮಾಡಿದ್ದೇಕೆ, ತನಿಖೆ ಮಾಡಿ: ಅಬಕಾರಿ ಆಯುಕ್ತರ ಆದೇಶ

    ಬೆಂಗಳೂರು: ರಾಜ್ಯದ ಜನ ಎಣ್ಣೆ ಹಾಕುವುದನ್ನು ಯಾಕೆ ಕಡಿಮೆ ಮಾಡಿದ್ದಾರೆ. ತನಿಖೆ ಮಾಡಿ ಮೂರು ದಿನದೊಳಗೆ ವರದಿ ಕೊಡಬೇಕು ಎಂದು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

    ರಾಜ್ಯದಲ್ಲಿ ಬಿಯರ್ ಮಾರಾಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗಬೇಕು. ಆದರೆ ಈ ವರ್ಷ ಮಾರಾಟದ ಪ್ರಮಾಣದಲ್ಲಿ ಏರಿಕೆಯಾಗಿಲ್ಲ. ಇದ್ರಿಂದ ತಲೆಕೆಡಿಸಿಕೊಂಡ ಅಬಕಾರಿ ಆಯುಕ್ತರು ಜಂಟಿ ಆಯುಕ್ತರಿಗೆ ಮೂರು ದಿನದೊಳಗೆ ವಿಶ್ಲೇಷಣಾ ವರದಿ ಕೊಡುವಂತೆ ಸೂಚಿಸಿದ್ದಾರೆ.

    ಈ ವರದಿ ಹಾಸ್ಯಾಸ್ಪದವಾಗಿದ್ದು, ನಮಗೆ ಬಿಯರ್ ಅನ್ನು ಅಬಕಾರಿ ಇಲಾಖೆ ಪೂರೈಸುತ್ತಿರಲಿಲ್ಲ. ಸೇಲ್ ಆಗುವುದು ಹೇಗೆ ಎಂದು ಬಾರ್ ಮಾಲೀಕರ ಸಂಘದ ಕರುಣಾಕರ್ ಹೆಗ್ಡೆ ಅವರು ಟಾಂಗ್ ಕೊಟ್ಟಿದ್ದಾರೆ.

    ಅಬಕಾರಿ ಇಲಾಖೆ ಬೇರೆ ಮದ್ಯ ಪೂರೈಕೆ ಮಾಡುತ್ತದೆ. ಏಕೆಂದರೆ ಆದಾಯದ ಪ್ರಮಾಣ ಹೆಚ್ಚಾಗಿರುತ್ತೆ. ಬಿಯರ್ ಸೇಲ್‍ನಲ್ಲಿ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯ ಕಡಿಮೆಯಿರುತ್ತದೆ. ಹೀಗಾಗಿ ಪೂರೈಕೆ ಕಡಿಮೆ ಮಾಡಿದೆ. ನಾವು ಬಿಯರ್ ಪೂರೈಕೆಗೆ ದುಂಬಾಲು ಬಿದರೂ ಕಳುಹಿಸುತ್ತಿರಲಿಲ್ಲ ಎಂದು ಬಾರ್ ಮಾಲೀಕರು ಹೇಳಿದ್ದಾರೆ.

  • ಮುನಿಯಪ್ಪ ಬೆಂಬಲಿಗರ ಅಮಾನತು ಆದೇಶ ವಾಪಸ್ ಪಡೆದ ಕಾಂಗ್ರೆಸ್

    ಮುನಿಯಪ್ಪ ಬೆಂಬಲಿಗರ ಅಮಾನತು ಆದೇಶ ವಾಪಸ್ ಪಡೆದ ಕಾಂಗ್ರೆಸ್

    ಕೋಲಾರ: ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಬೆಂಬಲಿಗರ ಅಮಾನತು ಆದೇಶವನ್ನು ಕಾಂಗ್ರೆಸ್ ಹಿಂದಕ್ಕೆ ಪಡೆದಿದೆ.

    ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸದ್ಯ ನಿರಾಳವಾಗಿದ್ದು, ಕೆಪಿಸಿಸಿ ಗೆ ಕ್ಷಮಾಪಣೆ ಪತ್ರ ರವಾನಿಸಿದ್ದಾರೆ. ಪತ್ರಿಕಾಗೋಷ್ಠಿಯ ಕುರಿತು ಲಿಖಿತ ಸಮಜಾಯಿಷಿ ನೀಡಿ ಕ್ಷಮೆ ಕೋರಿದ ಹಿನ್ನೆಲೆ ಆರು ಜನ ಕೈ ಮುಖಂಡರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೂಚನೆ ಮೇರೆಗೆ ಪ್ರಧಾನ ಕಾರ್ಯದರ್ಶಿಗಳಾದ ಅಮಾನದು ಆದೇಶವನ್ನು ಘೋರ್ಪಡೆ ಅವರು ಹಿಂಪಡೆದಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಕೆಲ ಶಾಸಕರು ಹಾಗೂ ಮುಖಂಡರು ಕೆ.ಎಚ್.ಮುನಿಯಪ್ಪ ವಿರುದ್ಧ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧವಾಗಿ ಕೆಲಸ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅ.17 ರಂದು ಕೈ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದ್ದರು.

    ಪಕ್ಷ ವಿರೋಧಿಗಳನ್ನು ಕಾಪಾಡಲು ಕೆ.ಸಿ ವೇಣುಗೋಪಾಲ್ ಪ್ರಯತ್ನ ಮಾಡಿದ್ದಾರೆ ಎಂದು ಆರೋಪ ಮಾಡಿ ಕಾಂಗ್ರೆಸ್‍ನ ಹಿರಿಯ ನಾಯಕರ ವಿರುದ್ಧ ನಗರಸಭೆ ಮಾಜಿ ಅಧ್ಯಕ್ಷ ಖಲೀಲ್ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಅವರು ಏಳು ಜನ ಕೈ ಮುಖಂಡರನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದರು. ಇದೀಗ ನಗರ ಸಭೆ ಮಾಜಿ ಅಧ್ಯಕ್ಷ ಖಲೀಲ್ ಹೊರತುಪಡಿಸಿ ಆರು ಮಂದಿ ಕೈ ಮುಖಂಡರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.

  • ನಿವಾಸ ಖಾಲಿ ಮಾಡಿ, ಇಲ್ದಿದ್ರೆ ನೀರು, ವಿದ್ಯುತ್ ಕಡಿತ – ಮಾಜಿ ಸಂಸದರಿಗೆ ಸೂಚನೆ

    ನಿವಾಸ ಖಾಲಿ ಮಾಡಿ, ಇಲ್ದಿದ್ರೆ ನೀರು, ವಿದ್ಯುತ್ ಕಡಿತ – ಮಾಜಿ ಸಂಸದರಿಗೆ ಸೂಚನೆ

    ನವದೆಹಲಿ: ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾಗಿ ಸುಮಾರು 2 ತಿಂಗಳು ಕಳೆದಿದೆ. ಆದರೆ ಮಾಜಿ ಸಂಸದರು ನೂತನ ಸಂಸದರಿಗೆ ಸರ್ಕಾರಿ ನಿವಾಸ ಬಿಟ್ಟು ಕೊಡದೆ ಅಲ್ಲಿಯೇ ವಾಸವಿದ್ದಾರೆ. ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ 1 ವಾರದೊಳಗೆ ಸರ್ಕಾರಿ ನಿವಾಸವನ್ನು ಖಾಲಿ ಮಾಡುವಂತೆ ಮಾಜಿ ಸಂಸದರಿಗೆ ಆದೇಶ ನೀಡಿದೆ. ಜೊತೆಗೆ ಮೂರು ದಿನದೊಳಗೆ ನಿವಾಸಗಳಿಗೆ ನೀಡಿದ್ದ ನೀರು, ಗ್ಯಾಸ್ ಹಾಗೂ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

    ಹೌದು. ಮೇ 25ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 16ನೇ ಲೋಕಸಭೆಯನ್ನು ವಿಸರ್ಜನೆ ಮಾಡಿದ್ದರು. ಬಳಿಕ ಎರಡನೇ ಬಾರಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ನಿಯಮದ ಪ್ರಕಾರ, ಲೋಕಸಭೆ ವಿಸರ್ಜನೆಗೊಂಡ 1 ತಿಂಗಳ ಒಳಗೆ ಮಾಜಿ ಸಂಸದರು ಸರ್ಕಾರಿ ನಿವಾಸಗಳನ್ನು ಖಾಲಿ ಮಾಡಬೇಕು. ಆದರೆ ಅವಧಿ ಮೀರಿ 2 ತಿಂಗಳು ಕಳೆಯುತ್ತಾ ಬಂದಿದ್ದರೂ ಮಾಜಿ ಸಂಸದರು ಮಾತ್ರ ನಿವಾಸ ಖಾಲಿ ಮಾಡಿಲ್ಲ. ಇದನ್ನೂ ಓದಿ:ಅಧಿಕೃತ ನಿವಾಸವನ್ನು 1 ತಿಂಗಳಲ್ಲಿ ತೆರವುಗೊಳಿಸಿ ಮೆಚ್ಚುಗೆಗೆ ಪಾತ್ರರಾದ ಸುಷ್ಮಾ ಸ್ವರಾಜ್

    ನಗರದ ಪ್ರತಿಷ್ಠಿತ ಲ್ಯೂಟೆನ್ಸ್ ದೆಹಲಿ ಪ್ರದೇಶದಲ್ಲಿ ಹಂಚಿಕೆ ಮಾಡಲಾಗಿದ್ದ ಸರ್ಕಾರಿ ನಿವಾಸಗಳಲ್ಲಿಯೇ 200 ಮಾಜಿ ಸಂಸದರು ಉಳಿದುಕೊಂಡಿದ್ದಾರೆ. ಅವರಿಗೆ ಮನೆ ಖಾಲಿ ಮಾಡಲು ಏಳು ದಿನಗಳ ಗಡುವು ನೀಡಲಾಗಿದ್ದು, ಮೂರು ದಿನದೊಳಗೆ ನೀರು ಮತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಸೂಚನೆ ನೀಡಿದೆ ಎಂದು ಸಂಸತ್‍ನ ವಸತಿ ಸಮಿತಿ ಅಧ್ಯಕ್ಷ ಸಿ.ಆರ್.ಪಾಟೀಲ್ ತಿಳಿಸಿದ್ದಾರೆ.

    ಮಾಜಿ ಸಂಸದರು ಸರ್ಕಾರಿ ನಿವಾಸವನ್ನು ಖಾಲಿ ಮಾಡದ ಕಾರಣಕ್ಕೆ ಹೊಸ ಸಂಸದರಿಗೆ ವಸತಿ ಕಲ್ಪಿಸುವುದು ಕಷ್ಟವಾಗಿದೆ. ಸದ್ಯ ನೂತನ ಸಂಸದರು ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

    ಕೆಲ ದಿನಗಳ ಹಿಂದೆ ಮೃತಪಟ್ಟಿದ್ದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಜೂನ್ ತಿಂಗಳಿನಲ್ಲಿ ಟ್ವೀಟ್ ಮಾಡಿ ಸರ್ಕಾರ ನೀಡಿದ ನಿವಾಸವನ್ನು ಖಾಲಿ ಮಾಡುತ್ತೇನೆ ಎಂದು ತಿಳಿಸಿದ್ದರು. ನಾನೀಗ ನಂ.8 ಸಫ್ದಾರ್ಜಂಗ್ ರಸ್ತೆ, ನವದೆಹಲಿಯ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದೇನೆ. ಹೀಗಾಗಿ ನಾನು ಈ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದರು. ಸುಷ್ಮಾ ಸ್ವರಾಜ್ ಅವರ ಈ ನಡೆ ಮೆಚ್ಚುಗೆಗೆ ಪಾತ್ರವಾಗಿತ್ತು.

    ಅನಧಿಕೃತವಾಗಿ ಸಾರ್ವಜನಿಕ ನಿವಾಸದಲ್ಲಿ ತಂಗಿರುವ ವ್ಯಕ್ತಿಗಳನ್ನು ಹೊರ ಹಾಕುವ ತಿದ್ದುಪಡಿ ಮಸೂದೆ ಈ ಬಾರಿಯ ಸಂಸತ್ತಿನಲ್ಲಿ ಮಂಡನೆಯಾಗಿ ಎರಡು ಸದನದಲ್ಲಿ ಪಾಸ್ ಆಗಿತ್ತು.

    ಈ ಕಾಯ್ದೆ ಅನ್ವಯ ಆರಂಭದಲ್ಲಿ ನೋಟಿಸ್ ನೀಡಲಾಗುತ್ತದೆ. ಬಳಿಕ ಶೋಕಾಸ್ ನೋಟಿಸ್ ನೀಡಿ ತನಿಖೆ ನಡೆಸಲಾಗುತ್ತದೆ. ಅಷ್ಟೇ ಅಲ್ಲದೇ ಎಸ್ಟೇಟ್ ಅಧಿಕಾರಿಗೆ ತೆರವುಗೊಳಿಸುವಂತೆ ಸೂಚಿಸಲಾಗುತ್ತದೆ. ಬಂಗಲೆಯಲ್ಲಿ 5 ತಿಂಗಳಿಗೂ ಹೆಚ್ಚು ದಿನಗಳ ಕಾಲ ವಾಸವಾಗಿದ್ದಲ್ಲಿ 10 ಲಕ್ಷ ರೂ. ದಂಡ ವಿಧಿಸುವ ಅಂಶ ಕಾಯ್ದೆಯಲ್ಲಿದೆ.

    ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕಳೆದ ವರ್ಷ ಲಕ್ನೋನಲ್ಲಿರುವ ಸರ್ಕಾರಿ ಬಂಗಲೆ ಖಾಲಿ ಮಾಡಲು 2 ವರ್ಷಗಳ ಕಾಲಾವಕಾಶವನ್ನು ಕೇಳಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅವರ ಅಧಿಕೃತ ನಿವಾಸವನ್ನು ಬಿಎಸ್‍ಪಿ ಸಂಸ್ಥಾಪಕ ಹಾಗೂ ಮಾರ್ಗದರ್ಶಕ ಕನ್ಶಿ ರಾಮ್ ಅವರ ಸ್ಮಾರಕವನ್ನಾಗಿ ಪರಿವರ್ತಿಸಲು ಯತ್ನಿಸಿ ಟೀಕೆ ಒಳಗಾಗಿದ್ದರು.

  • ರಾಜ್ಯಪಾಲರ ಆದೇಶಕ್ಕೆ ಡೋಂಟ್ ಕೇರ್ – ರಾತ್ರೋ ರಾತ್ರಿ ಕಡತ ವಿಲೇವಾರಿ

    ರಾಜ್ಯಪಾಲರ ಆದೇಶಕ್ಕೆ ಡೋಂಟ್ ಕೇರ್ – ರಾತ್ರೋ ರಾತ್ರಿ ಕಡತ ವಿಲೇವಾರಿ

    – ಬಡ್ತಿ, ನೇಮಕಾತಿ, ವರ್ಗಾವಣೆಯಲ್ಲಿ ಸರ್ಕಾರ ಬ್ಯುಸಿ

    ಬೆಂಗಳೂರು: ರಾಜ್ಯಪಾಲರ ಆದೇಶಕ್ಕೂ ಡೋಂಟ್ ಕೇರ್ ಎನ್ನದ ಮೈತ್ರಿ ಸರ್ಕಾರದ ಸಿಎಂ ಮತ್ತು ಸಚಿವರು ರಾತ್ರೋ ರಾತ್ರಿ ಕಡತಗಳನ್ನು ವಿಲೇವಾರಿ ಮಾಡುತ್ತಿದ್ದಾರೆ.

    ಶಾಸಕರ ರಾಜೀನಾಮೆ ಪರ್ವದ ಹಿನ್ನೆಲೆ ಪತನದ ಹಾದಿಯಲ್ಲಿರುವ ಮೈತ್ರಿ ಸರ್ಕಾರ ಯಾವುದೇ ಮಹತ್ತರ ನಿರ್ಧಾರವನ್ನು ಕೈಗೊಳ್ಳಬೇಡಿ ಎಂದು ರಾಜ್ಯಪಾಲರು ಆದೇಶ ನೀಡಿದ್ದರು. ಈ ಆದೇಶವನ್ನು ಲೆಕ್ಕಿಸದ ಸರ್ಕಾರದ ರಾತ್ರಿ 10 ಗಂಟೆಯ ಸಮಯದಲ್ಲೂ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ.

    ತಡ ರಾತ್ರಿ ಶಕ್ತಿ ಭವನದ ಮುಂದೆ ಆಧಿಕಾರಿಗಳು ಫೈಲ್ ಹಿಡಿದುಕೊಂಡು ಓಡಾಡುತ್ತಿರುವುದು ಕಂಡು ಬಂದಿದೆ. ಬಹುಮತ ಸಾಬೀತು ಪಡಿಸುವ ಒತ್ತಡ ನಡುವೆಯೂ ಮೈತ್ರಿ ಸರ್ಕಾರ ಕಡತ ವಿಲೇವಾರಿಯಲ್ಲಿ ಬ್ಯುಸಿಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಬಡ್ತಿ, ನೇಮಕಾತಿ, ವರ್ಗಾವಣೆ ಮತ್ತು ಅನುದಾನ ಬಿಡುಗಡೆಯಲ್ಲಿ ತೊಡಗಿರುವ ಸರ್ಕಾರ, ಹಳೆಯ ದಿನಾಂಕವನ್ನು ಹಾಕಿ ಕಡತ ವಿಲೇವಾರಿ ಮಾಡಲಾಗುತ್ತಿದೆ ಎಂದು ಬಿಜೆಪಿ ಶಾಸಕ ಬಸವರಾಜು ಬೊಮ್ಮಯಿ ಆರೋಪ ಮಾಡಿದ್ದರು. ಅವರು ಆರೋಪಕ್ಕೆ ಈಗ ನಡೆಯುತ್ತಿರುವ ದೃಶ್ಯಗಳು ಪುಷ್ಠಿ ನೀಡಿದ್ದಂತೆ ಆಗಿದೆ.

  • ಮಾಧ್ಯಮಗಳಿಗೆ ಮಾಹಿತಿ ನೀಡಿದ್ರೆ ಅಮಾನತು – ಪೊಲೀಸ್ ಇಲಾಖೆಯಲ್ಲಿ ಹೊಸ ಆರ್ಡರ್

    ಮಾಧ್ಯಮಗಳಿಗೆ ಮಾಹಿತಿ ನೀಡಿದ್ರೆ ಅಮಾನತು – ಪೊಲೀಸ್ ಇಲಾಖೆಯಲ್ಲಿ ಹೊಸ ಆರ್ಡರ್

    ಮೈಸೂರು: ಮಾಧ್ಯಮಗಳಿಗೆ ಮಾಹಿತಿ ನೀಡಿದರೆ ಅಮಾನತು ಮಾಡುತ್ತೇವೆ ಎಂದು ಮೈಸೂರು ಪೊಲೀಸ್ ಆಯುಕ್ತರಾದ ಕೆ.ಟಿ. ಬಾಲಕೃಷ್ಣ ಲಿಖಿತ ರೂಪದಲ್ಲಿ ಆದೇಶ ಹೊರಡಿಸಿದ್ದಾರೆ.

    ಆದೇಶದಲ್ಲಿ ಏನಿದೆ?
    ರಾಜ್ಯ ಸರ್ಕಾರದ ಮಾಧ್ಯಮ ನಿಮಯದ ಪ್ರಕಾರ ಎಸ್ಪಿ, ಪೊಲೀಸ್ ಆಯುಕ್ತರು ಮತ್ತು ವಲಯ ಐಜಿಪಿಯವರು ಅಥವಾ ಇವರಿಂದ ಅನುಮೋದನೆಗೊಂಡ ನೋಡೆಲ್ ಅಧಿಕಾರಿಗಳು ಮಾತ್ರ ಮಾಧ್ಯಮಕ್ಕೆ ಮಾಹಿತಿ ಕೊಡಬೇಕು.

    ಈ ನಿಯಮದ ಪ್ರಕಾರ ಮೈಸೂರು ನಗರದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಅನುಮತಿ ಇಲ್ಲದೆ ಇಲಾಖೆಯ ಯಾವುದೇ ವಿವರಗಳನ್ನು ಮಾಧ್ಯಮಗಳಿಗೆ ನೀಡುವಂತಿಲ್ಲ. ಒಂದು ವೇಳೆ ನೀಡಿದರೆ ವಿಚಾರಣೆ ಬಾಕಿ ಇರಿಸಿಕೊಂಡು ಅಮಾನತು ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಪೊಲೀಸ್ ಆಯುಕ್ತರ ಈ ಆದೇಶದಿಂದ ಇಡೀ ಪೊಲಿಸ್ ಇಲಾಖೆಯೇ ಬೆಸ್ತು ಬಿದ್ದಿದೆ.

  • ಡೆಪ್ಯೂಟಿ ಕಮಿಶನರ್ ಆಗಿ ನೇಮಕ – ತಂದೆಗೆ ಮಗಳಿಂದ ಖಡಕ್ ಆದೇಶ

    ಡೆಪ್ಯೂಟಿ ಕಮಿಶನರ್ ಆಗಿ ನೇಮಕ – ತಂದೆಗೆ ಮಗಳಿಂದ ಖಡಕ್ ಆದೇಶ

    ಕೋಲ್ಕತ್ತಾ: ಮಂಗಳವಾರ ಐಎಸ್‍ಸಿ ಪಠ್ಯದ 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ದೇಶಕ್ಕೆ ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿನಿ ಒಂದು ದಿನದ ಮಟ್ಟಕ್ಕೆ ಡೆಪ್ಯೂಟಿ ಕಮಿಶನರ್ ಆಗಿ ತನ್ನ ತಂದೆಗೆ ಆರ್ಡರ್ ಮಾಡಿದ್ದಾಳೆ.

    ರಿಚ್ಚ ಸಿಂಗ್ ಜಿ.ಡಿ ಬಿರ್ಲಾ ಸೆಂಟರ್‍ನಲ್ಲಿ ಓದುತ್ತಿದ್ದು, 12ನೇ ತರಗತಿ ಪರೀಕ್ಷೆಯಲ್ಲಿ ಶೇ. 99.25 ಅಂಕಗಳನ್ನು ಪಡೆದಿದ್ದಾಳೆ. ರಿಚ್ಚ ಶೇ. 99.25 ಅಂಕಗಳನ್ನು ಪಡೆಯುವ ಮೂಲಕ ದೇಶಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾಳೆ. ರಿಚ್ಚ ಸಾಧನೆಯನ್ನು ಗೌರವಿಸಲು ಕೋಲ್ಕತ್ತಾ ಪೊಲೀಸರು ಆಕೆಯನ್ನು ಒಂದು ದಿನದ ಮಟ್ಟಿಗೆ ಡೆಪ್ಯೂಟಿ ಕಮಿಶನರ್ ಹುದ್ದೆಯನ್ನು ನೀಡಿ ಪುರಸ್ಕರಿಸಿದ್ದರು.

    ರಿಚ್ಚ ಸಿಂಗ್ ಸಾಧನೆಯನ್ನು ಪ್ರೋತ್ಸಾಹಿಸಲು ಕೋಲ್ಕತ್ತಾ ಪೊಲೀಸರು ಆಕೆಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಡೆಪ್ಯೂಟಿ ಕಮಿಷನರ್ ಆಗಿ ನೇಮಿಸಿದ್ದರು. ಇದೇ ವಿಭಾಗದಲ್ಲಿ ರಿಚ್ಚ, ತಂದೆ ರಾಜೇಶ್ ಸಿಂಗ್ ಅವರು ಹೆಚ್ಚುವರಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

    ರಿಚ್ಚ ಡೆಪ್ಯೂಟಿ ಕಮಿಶನರ್ ಆಗಿ ಕುರ್ಚಿಯಲ್ಲಿ ಕುಳಿತ್ತಿದ್ದ ವೇಳೆ ಅಲ್ಲಿದ್ದ ಪೊಲೀಸರು ನಿನ್ನ ತಂದೆಗೆ ಏನು ಆದೇಶ ನೀಡಬೇಕು ಎಂದುಕೊಂಡಿದ್ದೀಯಾ ಎಂದು ಕೇಳಿದ್ದಾರೆ. ಅದಕ್ಕೆ ರಿಚ್ಚ ನನ್ನ ತಂದೆ ಬೇಗನೆ ಮನೆಗೆ ಮರಳಬೇಕು ಎಂದು ಆದೇಶಿಸುತ್ತೇನೆ ಎಂದು ಹೇಳಿದ್ದಾಳೆ.

    ಪೊಲೀಸ್ ಅಧಿಕಾರಿಗಳು 12ನೇ ತರಗತಿ ನಂತರ ಏನು ಓದಲು ಇಷ್ಟಪಡುತ್ತೀಯಾ ಎಂದು ಕೇಳಿದ್ದಾರೆ. ಆಗ ಅವಳು ಮುಂದೆ ಇತಿಹಾಸ ಅಥವಾ ಸಮಾಜಶಾಸ್ತ್ರ ಓದಬೇಕೆಂದು ಬಯಸುತ್ತೇನೆ. ಅಲ್ಲದೆ ಯುಪಿಎಸ್‍ಸಿ ಪರೀಕ್ಷೆ ಕೂಡ ಬರೆಯುವ ಕನಸು ಇದೆ ಎಂದು ಉತ್ತರಿಸಿದ್ದಾಳೆ.

    ಮಗಳು ಡೆಪ್ಯೂಟಿ ಕಮಿಶನರ್ ಸ್ಥಾನದಲ್ಲಿ ಕುಳಿತ್ತಿದ್ದನ್ನು ನೋಡಿದ ತಂದೆ ರಾಜೇಶ್ ಭಾವುಕರಾಗಿ,”ನನ್ನ ಖುಷಿಯನ್ನು ಹೇಗೆ ಹೇಳಬೇಕು ಎಂಬುದು ನನಗೆ ಗೊತ್ತಾಗುತ್ತಿಲ್ಲ. ಈ ದಿನ ನನ್ನ ಮಗಳು ನನಗೆ ಬಾಸ್ ಆಗಿದ್ದಾಳೆ. ಬೇಗ ಮನೆಗೆ ಬರಬೇಕು ಎಂದು ಆದೇಶಿಸಿದ್ದಾಳೆ. ನಾನು ಆಕೆಯ ಆದೇಶವನ್ನು ಪಾಲಿಸುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

  • ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

    ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ಮಹತ್ವದ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ

    ಬೆಂಗಳೂರು: ಶಿಕ್ಷಣ ಇಲಾಖೆ ಸ್ಕೂಲ್ ಬ್ಯಾಗ್‍ನ ತೂಕ ಇಳಿಸಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ. ಕೆಜಿ ಗಟ್ಟಲೆ ಸ್ಕೂಲ್ ಬ್ಯಾಗ್ ಹೊರುವುದರಿಂದ ಶಾಲಾ ಮಕ್ಕಳ ದೈಹಿಕ  ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

    1-10 ನೇ ತರಗತಿವರಗಿನ ಮಕ್ಕಳ ಬ್ಯಾಗ್ ತೂಕಕ್ಕೆ ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದೆ. ಬ್ಯಾಗ್ ತೂಕವು ಮಗುವಿನ ದೇಹದ ಸರಾಸರಿ ಶೇ.10 ರಷ್ಟು ಮೀರುವಂತೆ ಇಲ್ಲ. 1-2 ತರಗತಿ ಮಕ್ಕಳಿಗೆ ಇನ್ನು ಮುಂದೆ ಹೋಂ ವರ್ಕ್ ಕೊಡುವಂತಿಲ್ಲ ಎಂದು ಹೇಳಿದೆ. ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಕಡ್ಡಾಯವಾಗಿ ಆಗಬೇಕು. ಮಕ್ಕಳು ನೀರಿನ ಬಾಟಲ್ ತರುವುದು ತಪ್ಪಿಸಲು ಶಾಲೆಯಲ್ಲೇ ನೀರಿನ ವ್ಯವಸ್ಥೆ ಮಾಡಬೇಕು. ಈ ಎಲ್ಲಾ ಯೋಜನೆಗಳು ರಾಜ್ಯದ ಎಲ್ಲಾ ಶಾಲೆಗಳಲ್ಲೂ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಬೇಕು ಎಂದು ಆದೇಶ ನೀಡಿದೆ.

    ಸ್ಕೂಲ್ ಬ್ಯಾಗ್ ರೂಲ್ಸ್!
    1. ಹೊಸ ಆದೇಶದ ಅನ್ವಯ ಮಕ್ಕಳ ಬ್ಯಾಗ್ ತೂಕವು ಮಗುವಿನ ದೇಹದ ಸರಾಸರಿ 10% ಮೀರುವಂತಿಲ್ಲ.
    2. 1-2 ತರಗತಿಗೆ ಇನ್ನುಂದೆ ಹೋಂ ವರ್ಕ್ ಕೊಡುವಂತಿಲ್ಲ.
    3. ಪ್ರತಿ ತಿಂಗಳ ಮೂರನೇ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಕಡ್ಡಾಯ.
    4. ಮಕ್ಕಳು ನೀರಿನ ಬಾಟಲ್ ತರುವುದು ತಪ್ಪಿಸಲು ಶಾಲೆಯಲ್ಲೆ ನೀರಿನ ವ್ಯವಸ್ಥೆ ಮಾಡೋದು ಕಡ್ಡಾಯ.
    5. 100 ಹಾಳೆಗಳು ಮೀರದ ಪುಸ್ತಕವನ್ನೇ ಮಕ್ಕಳಿಗೆ ನೀಡಬೇಕು.
    6. ಬ್ಯಾಗ್ ತೂಕದ ಬಗ್ಗೆ ಪೋಷಕರಿಗೆ ಅರಿವು ಮೂಡಿಸುವ ಕೆಲಸ ಶಾಲೆಗಳು ಮಾಡಬೇಕು.
    7. ಮುಂಚಿತವಾಗಿಯೇ ಮಕ್ಕಳಿಗೆ ಆಯಾ ದಿನದ ವೇಳಾಪಟ್ಟಿಗೆ ಅನುಗುಣವಾಗಿ ಪುಸ್ತಕಗಳನ್ನು ತರಲು ಸೂಚನೆ ನೀಡುವುದು.
    8. ಮಕ್ಕಳಿಗೆ ಅಗತ್ಯವಾದ ಕಲಿಕಾ ಸಾಮಗ್ರಿಗಳನ್ನು ಆದಷ್ಟು ಶಾಲೆಗಳಲ್ಲಿ ಸಂಗ್ರಹ ಮಾಡುವ ವ್ಯವಸ್ಥೆ ಶಾಲೆ ಮಾಡಬೇಕು.

    ಹೊಸ ಆದೇಶದ ಅನ್ವಯ ಮಕ್ಕಳ ಶಾಲಾ ಬ್ಯಾಗ್ ತೂಕ ಹೀಗೆ ಇರಬೇಕು
    1. 2ನೇ ತರಗತಿ – 1.5 ರಿಂದ 2 ಕೆಜಿ.
    2. 3-5ನೇ ತರಗತಿ – 2 ರಿಂದ 3 ಕೆಜಿ
    3. 6-8ನೇ ತರಗತಿ – 3 ರಿಂದ 4 ಕೆಜಿ.
    4. 9-10ನೇ ತರಗತಿ – 4 ರಿಂದ 5 ಕೆಜಿ

    ಶಾಲಾ ಬ್ಯಾಗ್ ರಹಿತ ದಿನದ ಯಾವ ಚಟುವಟಿಕೆಗಳನ್ನು ಮಾಡಬೇಕು?
    1. ಕ್ಷೇತ್ರ ಸಂಚಾರ
    2. ವಾರ್ತಾಪತ್ರಿಕೆಗಳ ಚಟುವಟಿಕೆಗಳು
    3. ಗಣಿತ ವಿನೋದ, ಅಬ್ಯಾಕಸ್
    4. ವಿಜ್ಞಾನ ಪ್ರಯೋಗ ಮತ್ತು ಪ್ರದರ್ಶನಗಳು
    5. ಸಾಮಾನ್ಯ ಜ್ಞಾನ ಶೈಕ್ಷಣಿಕ ಸಂಘದ ಚಟುವಟಿಕೆಗಳು
    6. ಚಿತ್ರಕಲೆ, ಚಿತ್ರಗಳಿಗೆ ಬಣ್ಣ ತುಂಬುವುದು, ಕರಕುಶಲತೆ
    7. ಸಾಮಾಜಿಕ ಉಪಯೋಗಿತ ಉತ್ಪಾದನಾ ಕಾರ್ಯ
    8. ಭಕ್ತಿಗೀತೆಗಳು ಮತ್ತು ದೇಶಭಕ್ತಿಗೀತೆಗಳ ಚಟುವಟಿಕೆ (ಕನ್ನಡ, ಹಿಂದಿ, ಇಂಗ್ಲೀಷ್)
    9. ಚಿತ್ರ ಓದುವಿಕೆ ಮತ್ತು ನಕ್ಷೆ ಓದುವಿಕೆ
    10. ಒಳಾಂಗಣ ಕ್ರೀಡೆಗಳು (ಹಾವು ಮತ್ತು ಏಣಿ, ಕೇರಂ ಬೋರ್ಡ್ ಇತ್ಯಾದಿ)
    11. ಹೊರಾಂಗಣ ಕ್ರೀಡೆಗಳು
    12. ದೃಕ್ ಶ್ರವಣ ಮಾಧ್ಯಮಗಳ ಚಟುವಟಿಕೆಗಳು/ ಶ್ಲೋಕಗಳನ್ನು ಪಠಿಸುವುದು
    13. ನೃತ್ಯ/ ಚರ್ಚಾಸ್ಪರ್ಧೆ/ ನಾಟಕ/ ಏಕಪಾತ್ರಾಭಿನಾಯ/ ಆಶುಭಾಷಣ ಸ್ಪರ್ಧೆಗಳು/ ಧ್ಯಾನ/ ಯೋಗಗಳ ಚಟುವಟಿಕೆ
    14. ಶಾಲಾ ಪರಿಸರಕ್ಕೆ ಅನುಗುಣವಾದ ಶೈಕ್ಷಣಿಕ ಚಟುವಟಿಕೆಗಳು.

  • ಶಾಸಕ ಡಾ.ಸುಧಾಕರ್‌ಗೆ ಮಣಿದ ಕಾಂಗ್ರೆಸ್!?

    ಶಾಸಕ ಡಾ.ಸುಧಾಕರ್‌ಗೆ ಮಣಿದ ಕಾಂಗ್ರೆಸ್!?

    ಚಿಕ್ಕಬಳ್ಳಾಪುರ: ಕ್ಷೇತ್ರದ ಶಾಸಕ ಡಾ.ಕೆ ಸುಧಾಕರ್ ಅವರ ಬೆಂಬಲಿಗರನ್ನು ಅಮಾನತ್ತು ಮಾಡಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ತನ್ನ ಆದೇಶವನ್ನು ಹಿಂಪಡೆದಿದೆ.

    ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಜನವರಿ 8 ರಂದು ಶಾಸಕ ಸುಧಾಕರ್ ಬೆಂಬಲಿಗರನ್ನ ಅಮಾನತು ಮಾಡಿದ್ದ ಕೆಪಿಸಿಸಿ ಒಂದು ವಾರದಲ್ಲೇ ಅಮಾನತು ಆದೇಶ ರದ್ದುಪಡಿಸಿದೆ. ಇದರೊಂದಿಗೆ ಡಾ. ಸುಧಾಕರ್ ಅವರ ಒತ್ತಡಕ್ಕೆ ಮಣಿದಿದೆ ಎಂಬ ಅನುಮಾನ ಮೂಡಿದೆ.

    ಶಾಸಕ ಸುಧಾಕರ್ ಅವರಿಗೆ ಪಿಸಿಬಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೈ ತಪ್ಪಿದ್ದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಜನವರಿ 8 ರಂದು ಪ್ರತಿಭಟನೆ ನಡೆಸಿದ್ದರು.  ತಮ್ಮ ಪ್ರತಿಭಟನೆಗೆ ಪಕ್ಷದ ನಾಯಕರು ಬೆಲೆ ನೀಡದ ಪರಿಣಾಮ ಅಸಮಾಧಾನಗೊಂಡ ಶಾಸಕರ ಬೆಂಬಲಿಗರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಕಾರ್ಯಕಾರಿಣಿ ಸಭೆ ಬಳಿಯೂ ಪ್ರತಿಭಟನೆ ನಡೆಸಿದ್ದರು.

     

    ಪಕ್ಷದ ಕಾರ್ಯಕರ್ತರ ಪ್ರತಿಭಟನೆಗೆ ಕೆರಳಿದ್ದ ವೇಣುಗೋಪಾಲ್ ಅವರು ಸುಧಾಕರ್ ಅವರ ಬೆಂಬಲಿಗರನ್ನು ಅಮಾನತು ಮಾಡುವಂತೆ ಸೂಚಿಸಿದ್ದರು. ಇದರ ಅನ್ವಯ ಕೆಪಿಸಿಸಿ ಕಾರ್ಯರ್ಶಿ ಕೃಷ್ಣಮೂರ್ತಿ, ಚಿಕ್ಕಬಳ್ಳಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ. ರಫೀಕ್ ಹಾಗೂ ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಅವರನ್ನು ಅಮಾನತು ಮಾಡಲಾಗಿತ್ತು. ಸದ್ಯ ಈ ಅಮಾನತು ರದ್ದಾಗಿದೆ.

    ಆಪರೇಷನ್ ಕಮಲ ಪ್ಲಾಪ್ ಆದ ಸಮಯದಲ್ಲೇ ವೇಣುಗೋಪಾಲ್ ಜೊತೆ ಸಾಕಷ್ಟು ಓಡಾಟ ನಡೆಸಿದ್ದ ಶಾಸಕ ಸುಧಾಕರ್ ತಮ್ಮ ಬೆಂಬಲಿಗರ ಅಮಾನತು ಆದೇಶವನ್ನ ರದ್ದುಪಡಿಸಲು ಈ ಮೂಲಕ ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv