Tag: ಆದಿತ್ಯ L-1

  • ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆಗೆ ನಾಸಾ-ಇಸ್ರೋ ಸಜ್ಜು: ಮುಂದಿನ ವರ್ಷ ‘NISAR’ ಉಪಗ್ರಹ ಉಡಾವಣೆ – ಏನಿದು ನಿಸಾರ್‌?

    ಬಾಹ್ಯಾಕಾಶದಲ್ಲಿ ಮತ್ತೊಂದು ಸಾಧನೆಗೆ ನಾಸಾ-ಇಸ್ರೋ ಸಜ್ಜು: ಮುಂದಿನ ವರ್ಷ ‘NISAR’ ಉಪಗ್ರಹ ಉಡಾವಣೆ – ಏನಿದು ನಿಸಾರ್‌?

    ಚಂದ್ರಯಾನ-3 ಸಕ್ಸಸ್ (Chandrayaan-3) ಹಾಗೂ ಸೂರ್ಯಯಾನ (Aditya L-1) ಯಶಸ್ವಿ ಉಡಾವಣೆ ಮಾಡಿದ ಭಾರತದ ಕಡೆ ಈಗ ಇಡೀ ಜಗತ್ತು ನೋಡುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ವಿಜ್ಞಾನ ಲೋಕ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೇ ಸ್ಪೇಸ್ (ಬಾಹ್ಯಾಕಾಶ) ವಲಯದಲ್ಲಿ ಹೊಸ ಅನ್ವೇಷಣೆಗಳಿಗಾಗಿ ಭಾರತದ ಜೊತೆ ಕೆಲಸ ಮಾಡಲು ಬೇರೆ ದೇಶಗಳ ವಿಜ್ಞಾನ ಸಂಸ್ಥೆಗಳು ಮುಂದೆ ಬರುತ್ತಿವೆ. ಅದರ ಮೊದಲ ಹೆಜ್ಜೆಯಾಗಿ ಇಸ್ರೋ ಜೊತೆ ಅಮೆರಿಕದ ನಾಸಾ ಕೈ ಜೋಡಿಸಿದೆ. ಈ ಎರಡೂ ಸಂಸ್ಥೆಗಳ ಕನಸಿನ ಕೂಸೇ ‘ನಿಸಾರ್’.

    ಹೌದು, ನಾಸಾ-ಇಸ್ರೋ (NASA-ISRO) ಜಂಟಿಯಾಗಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರೆಡಾರ್ (NISAR) ಉಪಗ್ರಹ ಮುಂದಿನ ವರ್ಷ ಅಂದರೆ, 2024 ಕ್ಕೆ ಉಡಾವಣೆಯಾಗಲಿದೆ. ಅದಕ್ಕೆ ಬೇಕಾದ ಎಲ್ಲಾ ತಯಾರಿ ಹಾಗೂ ಪರೀಕ್ಷೆಗಳನ್ನು ನಾಸಾ ಮತ್ತು ಇಸ್ರೋ ನಡೆಸುತ್ತಿವೆ. ಹಾಗಾದರೆ ಏನಿದು ಉಪಗ್ರಹ? ಇದರ ಉಡಾವಣೆ ಉದ್ದೇಶವೇನು? ಇದರಿಂದಾಗಬಹುದಾದ ಪ್ರಯೋಜನ ಏನು ಎಂಬ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಇದನ್ನೂ ಓದಿ: PublicTV Explainer: ‘ಸೋಷಿಯಲ್‌’ನಲ್ಲಿ ಬೆತ್ತಲಾದ ‘ಡೀಪ್‌ಫೇಕ್’; ಏನಿದು ತಂತ್ರಜ್ಞಾನ? ಇದರ ಆಳ ಎಷ್ಟು? ಅಪರಾಧಕ್ಕೆ ಶಿಕ್ಷೆ ಏನು?

    ಏನಿದು ನಿಸಾರ್ ಉಪಗ್ರಹ?
    ಅಮೆರಿಕ ಮತ್ತು ಭಾರತದ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದೆ. 2014 ರಲ್ಲಿ ನಾಸಾ ಮತ್ತು ಇಸ್ರೋ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅದರನ್ವಯ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರೆಡಾರ್ (ನಿಸಾರ್) ಅನ್ನು ನಿರ್ಮಿಸಲಾಯಿತು. ಮಾರ್ಚ್ ತಿಂಗಳಲ್ಲೇ ಈ ಉಪಗ್ರಹವು ಬೆಂಗಳೂರಿಗೆ ಬಂದಿಳಿದಿದೆ. ಅಮೆರಿಕನ್ ವಾಯುಪಡೆಯ ಸಿ-17 ಸಾರಿಗೆ ವಿಮಾನವು, ಕ್ಯಾಲಿಫೋರ್ನಿಯಾದಿಂದ ಹೊರಟು ಬೆಂಗಳೂರಿಗೆ ಈ ಉಪಗ್ರಹವನ್ನು ಹೊತ್ತು ತಂದಿತ್ತು. ಭಾರತ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆಗಳು ಮೊಟ್ಟಮೊದಲ ಬಾರಿಗೆ ಜಂಟಿಯಾಗಿ ಈ ಕಾರ್ಯಕ್ರಮವನ್ನು ರೂಪಿಸಿವೆ. ಈ ಯೋಜನೆಯು ವಿಶ್ವದ ಅತ್ಯಂತ ದುಬಾರಿ ‘ಭೂಮಿಯ ಇಮೇಜಿಂಗ್ ಉಪಗ್ರಹ’ಗಳಲ್ಲಿ ಒಂದಾಗಿದೆ.

    ನಿಸಾರ್ ಉಡಾವಣೆ ಯಾಕೆ?
    ಮನುಕುಲದ ಆಶ್ರಯ ತಾಣ ಭೂಮಿ. ಈ ಭೂಮಿಯಲ್ಲಿ ಯಾವಾಗ, ಏನೇನಾಗುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರಿಯುವುದು ಮುಖ್ಯ. ಹವಾಮಾನ ಬದಲಾವಣೆ ಜೀವಸಂಕುಲದ ಮೇಲೆ ಅಪಾರ ಪರಿಣಾಮ ಬೀರಿದೆ. ಇದನ್ನು ಅರ್ಥಮಾಡಿಕೊಳ್ಳಲು ಭೂಮಿಯ ಮೇಲ್ಮೈ ಹೇಗೆ ಬದಲಾಗುತ್ತಿದೆ ಎಂಬುದನ್ನು ತಿಳಿಯುವುದು ಮುಖ್ಯ. ಈ ವಿಚಾರವನ್ನು ಮನಗಂಡು ‘ನಿಸಾರ್’ ಉಪಗ್ರಹ ಉಡಾವಣೆಗೆ ಇಸ್ರೋ-ನಾಸಾ ಸಂಸ್ಥೆಗಳು ಮುಂದಾಗಿವೆ. ಭೂ ಮೇಲ್ಮೈ ಬದಲಾವಣೆ, ಕರಗುವ ಮಂಜುಗಡ್ಡೆ, ಅರಣ್ಯ, ಭೂಕಂಪ, ಜ್ವಾಲಾಮುಖಿ ಎಲ್ಲವೂ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಪ್ರತಿಯೊಬ್ಬರಿಗೂ ನಿಖರ ಮಾಹಿತಿ ಒದಗಿಸುವುದು ಈ ಉಪಗ್ರಹ ಉಡಾವಣೆಯ ಮುಖ್ಯ ಉದ್ದೇಶವಾಗಿದೆ. ಇದನ್ನೂ ಓದಿ: PublicTV Explainer: ಉಗುರಿಗೆ ಹೆದರಿದ ‘ಹೀರೋಸ್‌’; ವನ್ಯಜೀವಿ ಸಂರಕ್ಷಣಾ ಕಾಯ್ದೆ ಏನು ಹೇಳುತ್ತೆ? – ಅಪರಾಧಕ್ಕೆ ಶಿಕ್ಷೆ ಏನು?

    ಕಾಲಕಾಲಕ್ಕೆ ಭೂ ಮೇಲ್ಮೈನ ಹವಾಮಾನ ಬದಲಾವಣೆ ಯಾವ ಪ್ರಮಾಣದಲ್ಲಾಗುತ್ತದೆ. ಇದರಿಂದ ಜೀವ ಸಂಕುಲದ ಮೇಲೆ ಆಗುತ್ತಿರುವ ಹಾಗೂ ಮುಂದಾಗಬಹುದಾದ ಪರಿಣಾಮಗಳ ಕುರಿತು ಪೂರಕ ಮಾಹಿತಿ ಒದಗಿಸಲು ನಿಸಾರ್ ಉಡಾವಣಾ ಯೋಜನೆ ಸಹಕಾರಿಯಾಗಲಿದೆ. ಜೊತೆಗೆ ಹಿಮ ಪರ್ವತ, ನದಿ ಪಾತ್ರಗಳಲ್ಲಿ ಬದಲಾವಣೆ ಬಗ್ಗೆಯೂ ಡೇಟಾ ಸಂಗ್ರಹಿಸಿ ಉಪಗ್ರಹ ಒದಗಿಸುತ್ತದೆ. ಭೂಕಂಪ ಸೇರಿದಂತೆ ಅನೇಕ ಪ್ರಕೃತಿ ವಿಕೋಪಗಳಿಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿಗಳು ಇದರಿಂದ ಸಿಗಲಿದೆ. ಮುಂದಿನ ದಿನಗಳಲ್ಲಿ ಸಂಭವನೀಯ ಪ್ರಕೃತಿ ವಿಕೋಪಗಳಿಗೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳಿಗೆ ಇದರಿಂದ ಸಿಗುವ ಮಾಹಿತಿ ನೆರವಾಗಲಿದೆ.

    ಉಪಗ್ರಹ ಕಾರ್ಯವೇನು?
    ನಿಸಾರ್ ಉಪಗ್ರಹ ಭೂಮಿಯ ಕೆಳಹಂತದ ಕಕ್ಷೆಯಲ್ಲಿ ನೆಲೆ ನಿಂತು ಭೂಮಿಯನ್ನು ಗಮನಿಸುತ್ತದೆ. ಇಡೀ ಭೂಮಿಯ ನಕ್ಷೆಯನ್ನು 12 ದಿನಗಳಲ್ಲಿ ರೂಪಿಸಿ, ಭೂ ವ್ಯವಸ್ಥೆ, ಹಿಮ ಪ್ರದೇಶ, ಸಸ್ಯ ಸಂಪತ್ತು, ಸಮುದ್ರದ ನೀರಿನ ಮಟ್ಟ ಏರಿಕೆ, ಅಂತರ್ಜಲ ಎಲ್ಲಾ ಬಗೆಯ ನೈಸರ್ಗಿಕ ದುರಂತಗಳ ನಿಯಮಿತ ದತ್ತಾಂಶವನ್ನು ಪ್ರಾದೇಶಿಕವಾಗಿ ಮತ್ತು ತಾತ್ಕಾಲಿಕವಾಗಿ ಒದಗಿಸುವ ಕಾರ್ಯ ನಿರ್ವಹಿಸುತ್ತದೆ. ಇದನ್ನೂ ಓದಿ: PublicTV Explainer: ಚಂದ್ರ, ಸೂರ್ಯಯಾನ ಆಯ್ತು.. ಈಗ ಶುಕ್ರನ ಮೇಲೆ ಇಸ್ರೋ ಕಣ್ಣು – ಶುಕ್ರಯಾನ ಯಾವಾಗ?

    ಈ ಉಪಗ್ರಹವು ಮೂರು ವರ್ಷ ಕಾರ್ಯನಿರ್ವಹಿಸಲಿದೆ. ಭೂಭಾಗ, ಹಿಮ ಆವೃತ ಪ್ರದೇಶಗಳ ಮೇಲ್ಮೈಯ ಬದಲಾವಣೆಗಳನ್ನು 12 ದಿನಗಳಿಗೊಮ್ಮೆ ಸಮೀಕ್ಷೆ ಮಾಡಲಿದೆ. ಉಪಗ್ರಹ ಕಾರ್ಯಾರಂಭ ಮಾಡಿದ 90 ದಿನಗಳ ಬಳಿಕ ಸಮೀಕ್ಷೆಯನ್ನು ಆರಂಭಿಸುತ್ತದೆ. ನಿಸಾರ್ ವರ್ಷವಿಡೀ ಹಗಲು-ರಾತ್ರಿ ಡೇಟಾವನ್ನು ಸಂಗ್ರಹಿಸುತ್ತದೆ. ಸಂಶ್ಲೇಷಿತ ದ್ಯುತಿರಂಧ್ರ ರೆಡಾರ್ ಅತ್ಯಾಧುನಿಕ ಸಾಧನವಾಗಿದ್ದು, ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ.

    ಏನಿದು ಎಲ್-ಬ್ಯಾಂಡ್, ಎಸ್-ಬ್ಯಾಂಡ್?
    ಎಸ್‌ಯುವಿ ಗಾತ್ರದ ಉಪಗ್ರಹವು ಸುಮಾರು 2,800 ಕೆಜಿ ಭಾರವಿದೆ. ಎಲ್ ಮತ್ತು ಎಸ್-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೆಡಾರ್ ಉಪಕರಣಗಳನ್ನು ಇದು ಒಳಗೊಂಡಿದೆ. ನಾಸಾ ಪ್ರಕಾರ, ಎಲ್-ಬ್ಯಾಂಡ್ 24 ಸೆಂ.ಮೀ ತರಂಗಾಂತರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಎಲ್-ಬ್ಯಾಂಡ್ ತರಂಗಾಂತರಗಳನ್ನು ಜಿಪಿಎಸ್ ಘಟಕಗಳಿಗೆ ಬಳಸಲಾಗುತ್ತದೆ. ಮೋಡ, ಮಂಜು, ಮಳೆ, ಬಿರುಗಾಳಿ, ಮಳೆಯನ್ನೂ ಭೇದಿಸಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ರೆಡಾರ್ ಸಿಗ್ನಲ್‌ಗಳು ದಟ್ಟ ಅರಣ್ಯದಲ್ಲೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಎಸ್-ಬ್ಯಾಂಡ್ 12 ಸೆ.ಮೀ ಕಡಿಮೆ ತರಂಗಾಂತರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಬಾಹ್ಯಾಕಾಶ ನೌಕೆ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಸಂವಹನ ನಡೆಸಲು ನಾಸಾ ಬಳಸುತ್ತದೆ. ಇದು ಮೋಡಗಳನ್ನು ಭೇದಿಸಿ ಅಧ್ಯಯನ ನಡೆಸುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?

    ರೆಡಾರ್ ಪ್ರತಿಫಲಕ ಆಂಟೆನಾ, ನಿಯೋಜಿಸಬಹುದಾದ ಬೂಮ್, ವಿಜ್ಞಾನ ದತ್ತಾಂಶಕ್ಕಾಗಿ ಹೈ-ರೇಟ್ ಕಮ್ಯುನಿಕೇಷನ್ ಸಬ್‌ಸಿಸ್ಟಮ್, ಜಿಪಿಎಸ್ ರಿಸೀವರ್ಸ್, ಘನ-ಸ್ಥಿತಿಯ ರೆಕಾರ್ಡರ್ ಮತ್ತು ಪೇಲೋಡ್ ಡೇಟಾ ಸಬ್‌ಸಿಸ್ಟಮ್ ಉಪಕರಣಗಳನ್ನು ನಾಸಾ ಒದಗಿಸಿದೆ. ಎಸ್-ಬ್ಯಾಂಡ್ ರಾಡಾರ್, ಉಡಾವಣಾ ವಾಹನ ಮತ್ತು ಸಂಬಂಧಿತ ಉಡಾವಣಾ ಸೇವೆಗಳನ್ನು ಇಸ್ರೋ ಒದಗಿಸಿದೆ.

    2024ಕ್ಕೆ ಲಾಂಚ್?
    ಜಿಎಸ್‌ಎಲ್‌ವಿ ರಾಕೆಟ್ ಮೂಲಕ ಶ್ರೀಹರಿಕೋಟದಿಂದ ಉಡಾವಣೆಗೊಳ್ಳಲಿದೆ. ಈ ಉಪಗ್ರಹವು 2024ರ ಮೊದಲ ಮೂರು ತಿಂಗಳ ಒಳಗಾಗಿ ಉಪಗ್ರಹ ಉಡಾವಣೆಯಾಗುವ ಸಾಧ್ಯತೆ ಇದೆ. ಈ ಯೋಜನೆಗೆ ಅಂದಾಜು 13,500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಉಪಗ್ರಹ ಉಡಾವಣೆಗೂ ಮುನ್ನ ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕಂಪನವೂ ಸೇರಿ ಕೆಲವು ಪರೀಕ್ಷೆಗಳು ನಡೆಯುತ್ತದೆ. ಈಗಾಗಲೇ ಕಂಪನ ಪರೀಕ್ಷೆ ನಡೆದಿದ್ದು, ಕಾರ್ಯಕ್ಷಮತೆ ಪರೀಕ್ಷೆ ನಡೆಯಬೇಕಿದೆ. ಸಿಸ್ಟಮ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಬ್ಯಾಟರಿ ಮತ್ತು ಸಿಮ್ಯುಲೇಶನ್ ಪರೀಕ್ಷೆಗಳು ನಡೆಯಲಿವೆ. ನಿಸಾರ್ ಯೋಜನೆಯು ಈ ಹಿಂದೆ ನಡೆಸಿರುವ ಎಲ್ಲಾ ಕಾರ್ಯಾಚರಣೆಗಳಿಗಿಂತ ಉತ್ತಮದ್ದಾಗಿದೆ ಎನ್ನುತ್ತಾರೆ ನಾಸಾ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ನಿರ್ದೇಶಕಿ ಡಾ. ಲೌರಿ ಲೆಶಿನ್. ಇದನ್ನೂ ಓದಿ: PublicTV Explainer: ಭಾರತೀಯ ವಿಜ್ಞಾನಿಗಳಿಂದ ‘ಏಲಿಯನ್‌ ಗ್ರಹ’ ಪತ್ತೆ – ಇಲ್ಲಿ ಅನ್ಯಗ್ರಹ ಜೀವಿಗಳು ಇವೆಯೇ?

  • ಚಂದ್ರ, ಸೂರ್ಯ ಮಿಷನ್‌ ಆಯ್ತು; ಇಸ್ರೋ ಮುಂದಿನ ಆಪರೇಷನ್‌ ಯಾವುದು?

    ಚಂದ್ರ, ಸೂರ್ಯ ಮಿಷನ್‌ ಆಯ್ತು; ಇಸ್ರೋ ಮುಂದಿನ ಆಪರೇಷನ್‌ ಯಾವುದು?

    ನವದೆಹಲಿ: ಚಂದ್ರಯಾನ-3 (Chandrayaan-3), ಆದಿತ್ಯ ಎಲ್‌1 (Aditya L1) ಮಿಷನ್‌ ಆಯ್ತು. ಮತ್ತೊಂದು ಉಪಗ್ರಹ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಜ್ಜಾಗಿದೆ. ಖಗೋಳಶಾಸ್ತ್ರದಲ್ಲಿ ಅತ್ಯಾಧುನಿಕ ವೈಜ್ಞಾನಿಕ ತಿಳುವಳಿಕೆ ಹೆಚ್ಚಿಸುವ ಗುರಿಯನ್ನು ಇಸ್ರೋ ಹೊಂದಿದೆ.

    XPoSAT (ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ) ಉಪಗ್ರಹ ಉಡಾವಣೆಗೆ ಇಸ್ರೋ ಸಿದ್ಧವಾಗಿದೆ. XPoSat (ಎಕ್ಸ್-ರೇ ಪೋಲಾರಿಮೀಟರ್ ಸ್ಯಾಟಲೈಟ್) ಭಾರತದ ಮೊದಲ ಮೀಸಲಾದ ಪೋಲಾರಿಮೆಟ್ರಿ ಮಿಷನ್. ಇದು ತೀವ್ರವಾದ ಪರಿಸ್ಥಿತಿಗಳಲ್ಲಿ ಪ್ರಕಾಶಮಾನವಾದ ಖಗೋಳ ಎಕ್ಸ್-ರೇ ಮೂಲಗಳ ವಿವಿಧ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡುತ್ತದೆ. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ

    ಈ ಬಾಹ್ಯಾಕಾಶ ನೌಕೆಯು ಎರಡು ವೈಜ್ಞಾನಿಕ ಪೇಲೋಡ್‌ಗಳನ್ನು ಕಡಿಮೆ ಭೂಮಿಯ ಕಕ್ಷೆಯಲ್ಲಿ ಸಾಗಿಸುತ್ತದೆ. ಒಂದು ಪ್ರೈಮರಿ ಪೇಲೋಡ್‌ POLIX (ಎಕ್ಸ್‌-ಕಿರಣಗಳಲ್ಲಿನ ಪೋಲಾರಿಮೀಟರ್‌ ಉಪಕರಣ). ಮತ್ತೊಂದು XSPECT (ಎಕ್ಸ್‌-ರೇ ಸ್ಪೆಕ್ಟ್ರೋಸ್ಕೋಪಿ ಮತ್ತು ಟೈಮಿಂಗ್)‌ ಪೇಲೋಡ್‌.

    XPoSat ಉಡಾವಣೆಗೆ ಸಿದ್ಧವಾಗಿದೆ ಎಂದು ಇಸ್ರೋದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಪ್ಪು ಕುಳಿ, ನ್ಯೂಟ್ರಾನ್ ನಕ್ಷತ್ರಗಳು, ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯ, ಪಲ್ಸರ್ ವಿಂಡ್ ನೀಹಾರಿಕೆಗಳಂತಹ ವಿವಿಧ ಖಗೋಳ ಮೂಲಗಳಿಂದ ಹೊರಸೂಸುವ ಎಕ್ಸ್‌-ರೇ ಅಧ್ಯಯನ ಮಾಡಲು ಇದು ಸಹಕಾರಿಯಾಗಲಿದೆ ಎಂದು ಇಸ್ರೋ ಹೇಳಿದೆ. ಇದನ್ನೂ ಓದಿ: Aditya L1 ಮಿಷನ್ ಯಶಸ್ವಿ: ಇಸ್ರೋ ಅಧ್ಯಕ್ಷ

    ಎಕ್ಸ್-ರೇ ಪೋಲಾರಿಮೀಟರ್ ಉಪಗ್ರಹ (XPoSat) ಕಾಸ್ಮಿಕ್ ಎಕ್ಸ್‌-ಕಿರಣಗಳ ಧ್ರುವೀಕರಣವನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ವೀಕ್ಷಣಾಲಯ ಉಡಾವಣೆಗೆ ಇಸ್ರೋ ಯೋಜಿಸಿದೆ. 2023 ಅಥವಾ ಮುಂದಿನ ವರ್ಷ ಈ ಉಪಗ್ರಹ ಉಡಾಯಿಸಲು ಇಸ್ರೋ ಪ್ಲ್ಯಾನ್‌ ಮಾಡಿದೆ. ಈ ಮಿಷನ್‌ ಅವಧಿ ಕನಿಷ್ಠ 5 ವರ್ಷ ಇರುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಚಿತ್ರಾತಿ ವಿಚಿತ್ರಗಳ ಉರಿ ಉಂಡೆ ನಮ್ಮ ಸೂರ್ಯ: ಡಾ. ಎಪಿ ಭಟ್

    ವಿಚಿತ್ರಾತಿ ವಿಚಿತ್ರಗಳ ಉರಿ ಉಂಡೆ ನಮ್ಮ ಸೂರ್ಯ: ಡಾ. ಎಪಿ ಭಟ್

    ಉಡುಪಿ: ಸೂರ್ಯನ (Sun) ಅಧ್ಯಯನಕ್ಕೆ ಇಳಿಯುವ ಮೂಲಕ ಭಾರತ ಖಗೋಳದಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಆದಿತ್ಯನ ಅಧ್ಯಯನ ಸುಲಭವಿಲ್ಲ. ಬೆಂಕಿ ಉಗುಳುವ ಉರಿ ಉಂಡೆಯನ್ನು ಭೂಮಿ ಮೇಲೆ ನಿಂತು ನೋಡಲು ಸಾಧ್ಯವಿಲ್ಲ. ಹಾಗಾದರೆ 15 ಲಕ್ಷ ಕೀ.ಮೀ ಆಚೆಗೆ ಹೇಗಿರುತ್ತದೆ ಎಂಬುದೇ ಎಲ್ಲರ ಕುತೂಹಲ. ಉಡುಪಿಯ ಖಗೋಳಶಾಸ್ತ್ರಜ್ಞ ಡಾ.ಎ.ಪಿ ಭಟ್ (Dr.A.P.Bhat) ಸೂರ್ಯ ಅಧ್ಯಯನದ ಆಳವಾದ ಸಮಗ್ರ ಮಾಹಿತಿ ನೀಡಿದ್ದಾರೆ.

    ನಮ್ಮ ಅನ್ನದಾತ ನಮ್ಮ ದಿನಪ. ಇವನನ್ನು ಬಳಿ ಸಾರುವಂತಿಲ್ಲ. ಇಳಿದು ನೋಡಿದವರಿಲ್ಲ. ನಮ್ಮ ಸೂರ್ಯನ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ನಮ್ಮ ಭೂಮಿಯ ಲಕ್ಷ ಲಕ್ಷ ಸಸ್ಯಗಳು, ಪ್ರಾಣಿಗಳು, ಇಡೀ ಮನುಕುಲದ ಸೃಷ್ಟಿ, ಸ್ಥಿತಿ ಲಯಕ್ಕೂ ಕಾರಣೀಕರ್ತ ನಮ್ಮ ಸೂರ್ಯ. ಸೌರವ್ಯೂಹದ 8 ಗ್ರಹಗಳು ಸುಮಾರು 182 ಉಪಗ್ರಹಗಳಾದ ಚಂದ್ರರು, ಲಕ್ಷ ಕೋಟಿ ಕಲ್ಲುಂಡೆಗಳು, ಲಕ್ಷ ಲಕ್ಷ ಧೂಮಕೇತುಗಳು ಎಲ್ಲವನ್ನೂ ಅವುಗಳದೇ ಅಕ್ಷಗಳಲ್ಲಿ ತಿರುತಿರುಗಿಸಿ ಕುಣಿಸುವವ ನಮ್ಮ ಸೂರ್ಯ. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ

    ಭೂಮಿ ಮತ್ತು ಸೂರ್ಯರ ದೂರ ಸುಮಾರು 15 ಕೋಟಿ ಕಿ.ಮೀ. ಆದರೆ ಸೂರ್ಯನ ಗುರುತ್ವ ಹಿಡಿತ ಸುಮಾರು ಇದರ ಲಕ್ಷ ಪಟ್ಟು ದೂರದವರೆಗೂ ( ಒಂದು ಲಕ್ಷ AU) ವ್ಯಾಪಿಸಿದೆ. ಆದರೆ, ನಮ್ಮ ಸೂರ್ಯ, ನಮ್ಮ ಆಕಾಶಗಂಗೆಯ ಅಸಂಖ್ಯ ನಕ್ಷತ್ರಗಳಲ್ಲಿ ಒಂದು ಸಾಮಾನ್ಯ ನಕ್ಷತ್ರ. ಸುಮಾರು ಸಾವಿರ ಕೋಟಿ ವರ್ಷದ ತನ್ನ ಆಯುಷ್ಯದಲ್ಲಿ 460 ಕೋಟಿ ವರ್ಷ ಕ್ರಮಿಸಿ ಈಗ ಮಧ್ಯ ವಯಸ್ಕ. ತನ್ನ ಅಂತಿಮ ಹಂತದಲ್ಲಿ ಬೃಹತ್ ನಕ್ಷತ್ರಗಳಂತೆ ಸೂಪರ್ ನೋವಾ ಆಗಲಾರ. ಕಪ್ಪುರಂಧ್ರ (Black Hole)) ಆಗಲಾರ. ಇನ್ನು 540 ಕೋಟಿ ವರ್ಷಗಳ ನಂತರ ಶ್ವೇತ ಕುಬ್ಜನಾಗಿ ನಂದಿ ಧೂಳಾಗುವನು. ನಮ್ಮ ಸುರುಳಿ ಗ್ಯಾಲಾಕ್ಸಿ, ಆಕಾಶ ಗಂಗೆಯ ಸುಮಾರು 10 ಸಾವಿರ ಕೋಟಿ ನಕ್ಷತ್ರಗಳಂತೆ ತನ್ನ ಪಾಡಿಗೆ ತಾನು ಗ್ಯಾಲಾಕ್ಸಿಯ ಕೇಂದ್ರದ ಸುತ್ತ ಸುಮಾರು 28 ಸಾವಿರ ಜ್ಯೋತಿ ವರ್ಷ ದೂರದಲ್ಲಿ ಸುತ್ತುತ್ತಿದ್ದಾನೆ. ಇದನ್ನೂ ಓದಿ: ಭಾರತಕ್ಕೆ ಗೌರವ ತರುವ ಕೆಲಸವನ್ನ ಕರ್ನಾಟಕದಿಂದ ಇಸ್ರೋ ಮಾಡ್ತಿದೆ: ಡಿಕೆಶಿ

    ಆಶ್ಚರ್ಯವೆಂದರೆ ನಮ್ಮ ಸೌರವ್ಯೂಹದ ಒಟ್ಟು ದ್ರವ್ಯರಾಶಿಯ 99.86 ಅಂಶ ತನ್ನಲ್ಲೇ ಇರಿಸಿಕೊಂಡಿರುವ ಸೂರ್ಯನ ದ್ರವ್ಯರಾಶಿ ಭೂಮಿಯ ದ್ರವ್ಯರಾಶಿಗಿಂತ ಸುಮಾರು 3,33,333ಪಟ್ಟು ಹೆಚ್ಚು. ನಮ್ಮ ಭೂಮಿಯ ಗಾತ್ರಕ್ಕಿಂತ 13 ಲಕ್ಷ ಪಟ್ಟು ದೊಡ್ಡದಿರುವ ಸೂರ್ಯ ಹೊಟ್ಟೆಮೇಲೆ 108 ಭೂಮಿ ಮಣಿಗಳ ಸರವಿಡಬಹುದು. ಸಕಲ ವಿದ್ಯುತ್ ಕಾಂತಿಯ ಕಿರಣಗಳನ್ನೂ ದಶದಿಶೆಗೆ ಹೊರ ಸೂಸುತ್ತಿರುವ ನಮ್ಮ ಸೂರ್ಯ ಸೌರವ್ಯೂಹದ ಆಧಾರಸ್ತಂಭ. ಅದೇನು ಭೂತಾಯಿಯ ಅದೃಷ್ಟವೋ, ಬೇರೆ ಯಾವ ಗ್ರಹದಲ್ಲೂ ಜೀವ ಜಂತುಗಳಿಗೆ ಬೇಕಾಗುವ ವಾತಾವರಣ ಸೌರವ್ಯೂಹದ ಬೇರಾವ ಗ್ರಹ, ಉಪಗ್ರಹಗಳಲ್ಲಿ ಇರಿಸದೇ ಭೂಮಿಯಲ್ಲಿ ಇರಿಸಿದ್ದಾನೆ. ಇದನ್ನೂ ಓದಿ: ಕಾವೇರಿ ಹೋರಾಟದ ಅಖಾಡಕ್ಕಿಳಿದ ದಳಪತಿಗಳು- ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ

    ನ್ಯೂಕ್ಲಿಯರ್ ಸಮ್ಮಿಲನ ಕ್ರಿಯೆಯಿಂದ ಕೊತಕೊತ ಕುದಿಯುವ ಪ್ಲಾಸ್ಮಾದ ಈ ನಮ್ಮ ಸೂರ್ಯನಲ್ಲಿ ಪ್ರಮುಖವಾಗಿ ಮೂರು ಪದರಗಳು. ಕೇಂದ್ರದ ಕೋರ್, ರೇಡಿಯೇಟಿವ್ ಝೋನ್ ಹಾಗೂ ಕನ್ವಿಕ್ಟಿವ್ ಝೋನ್. ಸುಮಾರು 13 ವಿಲಿಯನ್ ಡಿಗ್ರಿ ಸೆಲ್ಸಿಯಸ್‌ನ ಉಷ್ಣತೆಯಲ್ಲಿರುವ ಕೇಂದ್ರ ಕೋರ್‌ನ ನಂತರ ತಣಿಯುತ್ತಿರುವ ಇತರ ಪದರಗಳು. ಇವುಗಳ ನಂತರ ಹೊರಭಾಗದ ವಾತಾವರಣದಲ್ಲಿ ಪುನ: ಮೂರುಕವಚಗಳಿವೆ. ಅವೆಂದರೆ ಫೋಟೊಸ್ಫಿಯರ್, ಕ್ರೋಮೋಸ್ಪಿಯರ್ ಹಾಗೂ ಕೊರೋನಾ. ಅತ್ಯಂತ ಪರಮಾಶ್ಚರ್ಯವೆಂದರೆ ಈ ಸೂರ್ಯನ ಹೊರ ಪದರಗಳ ಉಷ್ಣತೆ ತಣಿದ ಹೊರ ಕವಚ ಫೋಟೋಸ್ಪಿಯರ್‌ನದ್ದು ಸುಮಾರು 6,000 ಡಿಗ್ರಿ ಆದರೆ ಅದರ ಕೊನೆಯ ಹೊರ ಕವಚ, ಕೊರೋನಾದಲ್ಲಿ 15 ಲಕ್ಷ ಡಿಗ್ರಿಗಿಂತಲೂ ಹೆಚ್ಚು. ಇವುಗಳ ಸೋಜಿಗ ಇನ್ನೂ ಗೊತ್ತಾಗಿಲ್ಲ. ಇದನ್ನೂ ಓದಿ: ಹೆಚ್‍ಡಿಕೆ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ- ಶೀಘ್ರವೇ ಡಿಸ್ಚಾರ್ಜ್

    ಆಶ್ಚರ್ಯವೆಂದರೆ 62 ಮೂಲವಸ್ತುಗಳನ್ನು ಹೊಂದಿರುವ ನಮ್ಮ ಸೂರ್ಯನಲ್ಲಿ, ಸುಮಾರು 75 ಅಂಶ ಹೈಡ್ರೋಜನ್. ಸೂರ್ಯ ನಿರಂತರ ನ್ಯೂಕ್ಲಿಯರ್ ಸಮ್ಮಿಲನ ಕ್ರಿಯೆಗಳ ಹರಿಕಾರ. ಕೇಂದ್ರದಲ್ಲಿ ಹೈಡ್ರೋಜನ್ ನಂತರ ಹೀಲಿಯಂ, ಕಾರ್ಬನ್ ಹೀಗೆ ಹೊರಹೊರಗೆ ನೀರುಳ್ಳಿ ಪದರದಲ್ಲಿರುವಂತೆ ಪದರಪದರಗಳಲ್ಲಿ ನಡೆಯುತ್ತಿರುತ್ತದೆ. ಸಹಸ್ರಾರು ವರ್ಷಗಳಿಂದ ಸೂರ್ಯನನ್ನು ಅರಿಯಲು ಮಾನವ ಪ್ರಯತ್ನ ನಡೆಯುತ್ತಲೇ ಇದೆಯಾದರೂ ಅಧ್ಯಯನ, ಚಿಂತನ ಮಂಥನಗಾಳಾಗಿದ್ದರೂ ಸಮೀಪಿಸಲು ಆಗದ ಉರಿ ಗೋಲವಾದುದರಿಂದ ಪ್ರಾಯೋಗಿಕವಾಗಿ ಅರಿಯಲು ಅಸಾಧ್ಯ. ಹಾಗಾಗಿ  ಸೋಹೋ, ಪಾರ್ಕರ್ ಮೊದಲಾದ ಅನೇಕ ಕೃತಕ ಉಪಗ್ರಹಗಳು ದೂರದಲ್ಲಿ ನಿಂತು ಅಥವಾ ಸುತ್ತ ತಿರುಗುತ್ತಾ ಅಧ್ಯಯನ ಮಾಡುತ್ತಿವೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ಅನರ್ಹ – ಪ್ರಜ್ವಲ್ ರೇವಣ್ಣ ಮೇಲಿನ ಆರೋಪಗಳೇನು?

    ಸೂರ್ಯ ಭೂಮಿ ಜೊತೆಯಾಗಿ ಸೂರ್ಯನನ್ನು ನೆಮ್ಮದಿಯಿಂದ ಅಧ್ಯಯನ ಮಾಡಲು ಒಂದು ಒಳ್ಳೆಯ ಸ್ಥಳ ಮಾಡಿವೆ. ಅದೇ ಎಲ್1 ಸ್ಥಳ. ಭೂಮಿ ಸೂರ್ಯರ ಸರಾಸರಿ ದೂರ 15 ಕೋಟಿ ಕಿಮೀ. ಈ ದೂರದ ನಡುವೆ ಭೂಮಿಗೆ ಸಮೀಪ, ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ ದೂರದಲ್ಲಿ ಈ ಎರಡರ ಗುರುತ್ವ ನಮ್ಮ ಕೃತಕ ಉಪಗ್ರಹಕ್ಕೆ ಸಮಾನವಾಗುವುದರಿಂದ ಅಲ್ಲೇ ನಾವು ಹಾರಿಸಿದ ಉಪಗ್ರಹ ಆರಾಮವಾಗಿ ಆ ಜಾಗದಲ್ಲಿ ನೆಲೆಸುತ್ತದೆ. ಭಾರತೀಯ ವಿಜ್ಞಾನಿಗಳು ಈ ಪವಿತ್ರ ಸ್ಥಳ ಎಲ್1 ನಲ್ಲಿ ನಮ್ಮ ನೆಚ್ಚಿನ ಕೃತಕ ಉಪಗ್ರಹ ಆದಿತ್ಯ ಎಲ್1 ನ್ನು ಇರಿಸಲು ಮುಂದಾಗಿದ್ದಾರೆ. ಸೂರ್ಯನ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿ ಸೂರ್ಯನನ್ನು ಅರಿಯಲು ಹೊರಟಿದ್ದಾರೆ. ಇದನ್ನೂ ಓದಿ: ಜಿಡಿಪಿ ಬೆಳವಣಿಗೆಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದ ಭಾರತ – ಯಾವ ದೇಶದ್ದು ಎಷ್ಟು?

    ಇದು ಭಾರತದ 140 ಕೋಟಿ ಜನರ ಹೆಮ್ಮೆ: ಸೋಜಿಗಗಳ ಗೂಡಾದ ಸೂರ್ಯನನ್ನು ಅರಿಯಲು 7 ವಿಭಾಗಗಳಲ್ಲಿ ಆದಿತ್ಯ ಎಲ್1 ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಗೆಲೀಲಿಯೋ 1610ರಲ್ಲಿ ಕಂಡ ಸೂರ್ಯನ ಕಲೆಗಳು ಇವತ್ತಿಗೂ ವಿಸ್ಮಯ. ಜೊತೆ ಜೊತೆಯಾಗಿರುವ ಇವುಗಳ ಸಂಖ್ಯೆ ಪ್ರತೀ ವರ್ಷ ಬೇರೆಬೇರೆ. 11 ವರ್ಷಕ್ಕೆ ಪುನರಾವರ್ತಿಸುವ ಇವು ಒಂದು ವರ್ಷ ಇರುವುದೇ ಇಲ್ಲ. ಫೋಟೋಸ್ಪಿಯರ್‌ನಿಂದ ಚಿಮ್ಮುವ ಕಾಂತಿಯ ಸಮೂಹ ಬಹು ವಿಸ್ಮಯ ಇವುಗಳಿಗೆ ಕಾರಣವೆಂದು ಅಂದಾಜಿಸಲಾಗಿದೆ. ಸೂರ್ಯನ ಕಾಂತಿಯ ವಿಸ್ಮಯ, ಸೌರ ಕಲೆಗಳು, ಕೊರೋನಾ ವಿಚಿತ್ರ, ಬಿಡಗಡೆಯಾಗಿ ದಶ ದಿಶೆಗಳಿಗೆ ರಾಚುವ ವಿದ್ಯುತ್‌ಕಾಂತಿಯ ಕಿರಣಗಳ ಸೌರಮಾರುತಗಳ ವೈಭವ, ಕೊರೋನಲ್ ಮಾಸ್ ಇಜೆಕ್ಷನ್‌ನ ಶಕ್ತಿಯುತ ಕಣಗಳ ಪ್ರವಾಹಗಳ ಮುನ್ಸೂಚನೆ ಹೀಗೆ ಅನೇಕ ಪ್ರಯೋಗಗಳನ್ನು ಮಾಡಲು ಆದಿತ್ಯ ಎಲ್1 ಅಣಿಯಾಗಿದೆ. ಇದನ್ನೂ ಓದಿ: ಗೃಹಬಳಕೆಯ ಬೆನ್ನಲ್ಲೇ ವಾಣಿಜ್ಯ ಬಳಕೆಯ LPG ಬೆಲೆ 158 ರೂ. ಇಳಿಕೆ

    ಒಂದು ರೀತಿಯಲ್ಲಿ ನಮ್ಮ ಅರಮನೆಗಳ ಹೊರ ಕೋಟೆಯ ಮೇಲಿರುವ ಕಾವಲುಗಾರನಂತೆ ಸೂರ್ಯನಿಂದ ಬರುವ ಕಣ ಪ್ರವಾಹಗಳ ಮುನ್ನೆಚ್ಚರಿಕೆಯ ಕಾವಲುಗಾರ ನಮ್ಮ ಆದಿತ್ಯ ಎಲ್1. ಈ ಶಕ್ತಿಯುತ ಕಣಗಳು ನಮ್ಮ ವಿದ್ಯುತ್ ವ್ಯವಸ್ಥೆಯನ್ನು ತಲ್ಲಣ ಗೊಳಿಸಿಯಾವು. ಹಾಗೆ ನಮ್ಮ ಸುತ್ತಲ ಆಕಾಶದಲ್ಲಿರುವ ಕೃತಕ ಉಪಗ್ರಹಗಳನ್ನೂ ಹಾಳು ಮಾಡಿಯಾವು. ನಮ್ಮ ಭೂ ವಾತಾವರಣದ ಕಣಗಳನ್ನೂ ತಲ್ಲಣ ಗೊಳಿಸಿಯಾವು. ವಿಶ್ವವೇ ಭಾರತದ ವಿಜ್ಞಾನಿಗಳ ಈ ಕುತೂಹಲ ಪ್ರಯೋಗವನ್ನು ನಿಬ್ಬೆರಗಾಗಿ ವೀಕ್ಷಿಸುತ್ತಿವೆ. ನಮ್ಮ ವಿಜ್ಞಾನಿಗಳ ಈ ಪ್ರಾಮಾಣಿಕ ಪ್ಯಯತ್ನಕ್ಕೆ ನಮ್ಮ ಅನ್ನದಾತ ಜ್ಞಾನದಾತ ಆದಿತ್ಯ ಶುಭಹೇಳಲಿ. ನಮ್ಮ ನೆಚ್ಚಿನ ಆದಿತ್ಯ L1ಗೆ ನಮ್ಮೆಲ್ಲರ ಶುಭಾಶಯಗಳು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಿದ್ಧ – ಸುಪ್ರೀಂ ಕೋರ್ಟ್‍ಗೆ ಕೇಂದ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]