Tag: ಆದಾಯ ತೆರಿಗೆ

  • ಆಸ್ಪತ್ರೆಯಲ್ಲಿರುವ ಡಿಕೆಶಿಗೆ ಬಿಗ್ ಶಾಕ್ – ಹೈಕೋರ್ಟಿನಲ್ಲಿ ಅರ್ಜಿ ವಜಾ

    ಆಸ್ಪತ್ರೆಯಲ್ಲಿರುವ ಡಿಕೆಶಿಗೆ ಬಿಗ್ ಶಾಕ್ – ಹೈಕೋರ್ಟಿನಲ್ಲಿ ಅರ್ಜಿ ವಜಾ

    – ನಾಲ್ಕನೆಯ ಪ್ರಕರಣದಲ್ಲಿ ಆರೋಪಿಯಾನ್ನಾಗಿ ಕೈಬಿಡುವಂತೆ ಅರ್ಜಿ
    – ಹೈಕೋರ್ಟ್ ಏಕಸದಸ್ಯ ಪೀಠದಿಂದ ಅರ್ಜಿ ವಜಾ

    ಬೆಂಗಳೂರು: ಆದಾಯ ತೆರಿಗೆ ಇಲಾಖೆ ದಾಖಲಿಸಿದ್ದ 4ನೇ ಪ್ರಕರಣದಿಂದ ಕೈ ಬಿಡುವಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

    ಹವಾಲಾ ಹಣವನ್ನು ಸಾಗಾಟ ಮಾಡಿದ್ದಾರೆ ಎಂದು ಆರೋಪಿಸಿ ಐಟಿ ಡಿಕೆ ಶಿವಕುಮಾರ್ ಸೇರಿದಂತೆ ಡಿಕೆಶಿ ಆಪ್ತರಾದ ಸುನೀಲ್ ಶರ್ಮಾ, ಸಚಿನ್ ನಾರಾಯಣ್, ರಾಜೇಂದ್ರ, ಆಂಜನೇಯ ಅವರನ್ನು ಆರೋಪಿಯನ್ನಾಗಿಸಿ ಪ್ರಕರಣ ದಾಖಲು ಮಾಡಿತ್ತು.

    ಈ ಪ್ರಕರಣದಿಂದ ಕೈ ಬಿಡುವಂತೆ ಕೋರಿ ಡಿಕೆಶಿ ಮತ್ತು ಬೆಂಬಲಿಗರು ಕೆಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದ್ದರಿಂದ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆದರೆ ಇಂದು ಹೈಕೋರ್ಟಿನ ಏಕಸದಸ್ಯ ಪೀಠ ಡಿಕೆಶಿ ಮತ್ತು ಬೆಂಬಲಿಗರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.

    ಏನಿದು ಪ್ರಕರಣ?
    ದೆಹಲಿ ನಿವಾಸದಲ್ಲಿ ಪತ್ತೆಯಾದ 8.5 ಕೋಟಿ ರೂ. ಸಿಕ್ಕ ಹಣದ ಸಂಬಂಧ ಆದಾಯ ತೆರಿಗೆ ಇಲಾಖೆಯ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿತ್ತು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲಾ ಹಣದ ವಿವರವನ್ನು ಉಲ್ಲೇಖಿಸಿತ್ತು. ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಐಟಿ ಇಲಾಖೆ ಹಿರಿಯ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಇದನ್ನು ಓದಿ: ಡಿಕೆಶಿ ಆರೋಗ್ಯದಲ್ಲಿ ವ್ಯತ್ಯಯ- ಆಸ್ಪತ್ರೆಗೆ ದಾಖಲು

    ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿರುವ ದೂರಿನಲ್ಲಿ ಹವಾಲ ಹಣದ ವಿವರವನ್ನು ಉಲ್ಲೇಖಿಸಿದ್ದರು. ಈ ದೂರಿನಲ್ಲಿ ಹವಾಲ ಹಣದ ಮೂಲಕ ಕೋಟಿ ಕೋಟಿ ಹಣವನ್ನು ಕಾಂಗ್ರೆಸ್ ಹೈಕಮಾಂಡ್ ಡಿಕೆ ಶಿವಕುಮಾರ್ ಕಳುಹಿಸಿಕೊಟ್ಟಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿತ್ತು. ಈ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಡಿಕೆಶಿ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಅಡಿ ಪ್ರಕರಣ ದಾಖಲಿಸಿ ಬಂಧಿಸಿತ್ತು.

    ಈಗ ಇಡಿ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಮೀನು ನೀಡುವ ಸಂದರ್ಭದಲ್ಲಿ ಡಿಕೆ ಪರ ವಕೀಲರು ಈ ಪ್ರಕರಣದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಹೀಗಾಗಿ ಇಡಿ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದ್ದರು. ಈಗ ಕರ್ನಾಟಕ ಹೈಕೋರ್ಟ್ ಡಿಕೆ ಸಲ್ಲಿಸಿದ್ದ ಅರ್ಜಿಯನ್ನೇ ವಜಾಗೊಳಿಸಿದ್ದು ಮುಂದೆ ಐಟಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ.

  • ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ – ಡಿಕೆಶಿಗೆ ಧೈರ್ಯ ತುಂಬಿದ ಸೋನಿಯಾ

    ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ – ಡಿಕೆಶಿಗೆ ಧೈರ್ಯ ತುಂಬಿದ ಸೋನಿಯಾ

    ನವದೆಹಲಿ: ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಡಿಕೆ ಶಿವಕುಮರ್ ಅವರಿಗೆ ಧೈರ್ಯ ತುಂಬಿದ್ದಾರೆ.

    ಇಂದು ಬೆಳಗ್ಗೆ ಡಿಕೆ ಶಿವಕುಕಮಾರ್ ಅವರನ್ನು ತಿಹಾರ್ ಜೈಲಿನಲ್ಲಿ ಸೋನಿಯಾ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿ ವೇಳೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸೋನಿಯಾ ಜೊತೆ ಆಗಮಿಸಿದ್ದರು.

    ಸೋನಿಯಾ ಭೇಟಿಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಡಿಕೆ ಸುರೇಶ್, ಪಕ್ಷ ಹಾಗೂ ಪಕ್ಷದ ಪ್ರತಿಯೊಬ್ಬ ಸದಸ್ಯ ನಿಮ್ಮ ಜೊತೆ ಇದ್ದಾರೆ ಎಂದು ಅಣ್ಣನಲ್ಲಿ ಹೇಳಿ ಸೋನಿಯಾ ಗಾಂಧಿ ಧೈರ್ಯ ತುಂಬಿದ್ದಾರೆ. ಸೋನಿಯಾಗಾಂಧಿ ಭೇಟಿ ಹಾಗೂ ಸಾಂತ್ವನದಿಂದ ಶಿವಕುಮಾರ್ ಅವರಲ್ಲಿಯೂ ಧೈರ್ಯ ಬಂದಿದೆ ಎಂದು ತಿಳಿಸಿದರು.

    ಇಂದು ದೆಹಲಿ ಹೈಕೋರ್ಟಿನಿಂದ ಜಾಮೀನು ಸಿಗುವ ವಿಶ್ವಾಸದಲ್ಲಿದ್ದೇವೆ. ಏನೇ ಅದರೂ ನ್ಯಾಯಾಲಯದ ಆದೇಶಕ್ಕೆ ನಾವು ತಲೆಬಾಗುತ್ತೇವೆ ಎಂದು ಸುರೇಶ್ ಪ್ರತಿಕ್ರಿಯಿಸಿದರು.

    ಅಕ್ರಮ ಹಣ ವರ್ಗಾವಣೆ ಆರೋಪದ ಅಡಿ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ಮಧ್ಯಾಹ್ನ 2.30ಕ್ಕೆ ದೆಹಲಿ ಹೈಕೋರ್ಟ್‍ನ ನ್ಯಾ.ಸುರೇಶ್ ಕುಮಾರ್ ಕೈಟ್ ಆದೇಶ ಪ್ರಕಟಿಸಲಿದ್ದಾರೆ.

    ಡಿಕೆಶಿ ಪರ ವಾದ ಮಂಡಿಸಿದ್ದ ಅಭಿಷೇಕ್ ಮನುಸಿಂಘ್ವಿ ಅವರು, ಈಗಾಗಲೇ 45 ದಿನಗಳಿಂದ ಡಿಕೆ ಶಿವಕುಮಾರ್ ಅವರು ಬಂಧನದಲ್ಲಿದ್ದಾರೆ. ಬಹುತೇಕ ವಿಚಾರಣೆಯ ಮುಗಿದರೂ ಅನಾವಶ್ಯಕವಾಗಿ ವಶದಲ್ಲಿಟ್ಟುಕೊಳ್ಳಲಾಗಿದೆ. ಐಟಿ ದಾಖಲಿಸಿದ್ದ ಕೇಸ್ ನಲ್ಲಿ ಇಡಿ ವಿಚಾರಣೆ ನಡೆಸುತ್ತಿದ್ದು ಸ್ವಯಂ ಘೋಷಿತ ಆಸ್ತಿ ಮೇಲೆ ವಿಚಾರ ನಡೆಸುತ್ತಿದೆ ಹೊರತು ಯಾವುದೇ ಹೊಸ ಅಂಶಗಳನ್ನು ಬಯಲು ಮಾಡಿಲ್ಲ ಎಂದು ವಾದಿಸಿದ್ದರು. ಆದರೆ, ಪ್ರತಿವಾದ ಮಂಡಿಸಿದ್ದ ಇಡಿ ಪರ ವಕೀಲರು, 300ಕ್ಕೂ ಹೆಚ್ಚು ಆಸ್ತಿಗಳನ್ನು ಡಿಕೆಶಿ ಹೊಂದಿದ್ದು ಇದರ ಮೂಲ ನೀಡುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಬೇಲ್ ಕೊಡಬಾರದು, ಬೇಲ್ ನೀಡಿದರೆ ಸಾಕ್ಷಿನಾಶ ಆಗುತ್ತೆ ಎಂದು ವಾದ ಮಂಡಿಸಿದ್ದರು.

  • ಸ್ವಯಂಘೋಷಿತ ದೇವಮಾನವ ಕಲ್ಕಿ ಭಗವಾನ್ ಆಶ್ರಮದ ಮೇಲೆ ಐಟಿ ದಾಳಿ

    ಸ್ವಯಂಘೋಷಿತ ದೇವಮಾನವ ಕಲ್ಕಿ ಭಗವಾನ್ ಆಶ್ರಮದ ಮೇಲೆ ಐಟಿ ದಾಳಿ

    ಚೆನ್ನೈ: ಸ್ವಯಂಘೋಷಿತ ದೇವಮಾನವ ಕಲ್ಕಿ ಭಗವಾನ್‍ಗೆ ಸೇರಿದ ಆಶ್ರಮಗಳು, ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕರ್ನಾಟಕದ ಆಶ್ರಮಗಳು ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ದೇಶ ವಿದೇಶಗಳಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ಕಲ್ಕಿ ಭಗವಾನ್‍ಗೆ ಸೇರಿದ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆದಿದ್ದು, ಭಗವಾನ್ ಪುತ್ರ ಕೃಷ್ಣಾ ಮತ್ತು ಪತ್ನಿಯನ್ನು ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ವರದಿಯಾಗಿದೆ.

    ಈ ಹಿಂದೆ ಕಲ್ಕಿ ಭಗವಾನ್ ಆಶ್ರಮದಲ್ಲಿ ಹಲವು ಅವ್ಯವಹಾರ ನಡೆಯುತ್ತಿದೆ. ಭಕ್ತರಿಗೆ ಲೈಂಗಿಕ ಕಿರುಕುಳ, ಬೆದರಿಕೆ ಒಡ್ಡಿದ್ದ ಆರೋಪಗಳು ಕೇಳಿಬಂದಿತ್ತು. ಆಶ್ರಮ ಸುತ್ತಮುತ್ತ ನೂರಾರು ಕೋಟಿ ಮೌಲ್ಯದ ಅಕ್ರಮ ಆಸ್ತಿಗಗಳು, ಬೆನಾಮಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿ ಖರೀದಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

    ಎಲ್‍ಐಸಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಆಂಧ್ರಪ್ರದೇಶ ಮೂಲದ ವಿಜಯ್‍ಕುಮಾರ್ ನಾಯ್ಡು ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಬೆಂಗಳೂರಿನ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ನಂತರ ಅಲ್ಲಿಂದಲೂ ಹೊರಬಿದ್ದು ಚಿತ್ತೂರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದ. 1989ರಲ್ಲಿ ಶಿಕ್ಷಣ ಸಂಸ್ಥೆಗಳು ನಷ್ಟ ಅನುಭವಿಸಿದ ಬಳಿಕ ಕೆಲ ವರ್ಷ ಭೂಗತನಾಗಿದ್ದ ವಿಜಯ್‍ಕುಮಾರ್ ದಿಢೀರ್ ಸ್ವಾಮಿ ವೇಷದಲ್ಲಿ ಪ್ರತ್ರ್ಯಕ್ಷನಾಗಿ,” ನಾನು ವಿಷ್ಣುವಿನ 10ನೇ ಅವತಾರ. ನಾನು ಕಲ್ಕಿ ಭಗವಾನ್” ಎಂದು ಘೋಷಿಸಿಕೊಂಡಿದ್ದ.

    ನನ್ನ ಪತ್ನಿಯೂ ದೇವರ ಅವತಾರ ಎಂದು ಘೋಷಿಸಿಕೊಂಡಿದ್ದ. ಕೆಲ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ದುಡ್ಡುಕೊಟ್ಟಂತೆ ಇವರ ಸಾಮಾನ್ಯ ದರ್ಶನಕ್ಕೆ ಭಕ್ತರು 5 ಸಾವಿರ ರೂ. ಮತ್ತು ವಿಶೇಷ ದರ್ಶನಕ್ಕೆ 25 ಸಾವಿರ ರೂ. ಪಾವತಿಸಬೇಕಿತ್ತು.

    ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಲವು ಕಡೆ ಆಶ್ರಮ ಕಡೆ ಸ್ಥಾಪಿಸಿದ್ದ. ಈತನಿಗೆ ಅನಿವಾಸಿ ಭಾರತೀಯರು ಮತ್ತು ದೊಡ್ಡ ದೊಡ್ಡ ಉದ್ಯಮಿಗಳು ಭಕ್ತರಿದ್ದಾರೆ. ಭಕ್ತರು ಆಶ್ರಮಕ್ಕೆ ನೀಡಿದ ದೇಣಿಗೆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗಿದೆ. ಭಾರೀ ತೆರಿಗೆ ವಂಚನೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.

    ಕಲ್ಕಿ ಭಗವಾನ್ ಪುತ್ರ ಕೃಷ್ಣಾ ವಿವಿಧ ಉದ್ಯಮಗಳಲ್ಲಿ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು ಲೆಕ್ಕ ಪತ್ರದಲ್ಲಿ ಗೋಲ್‍ಮಾಲ್ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. 2008 ರಲ್ಲಿ ಚಿತ್ತೂರು ಜಿಲ್ಲೆಯ ಕಲ್ಕಿ ಮಠದಲ್ಲಿ ಸಂಭವಿಸಿದ ದುರಂತದಲ್ಲಿ ಐದು ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡಿದ್ದರು.

  • ಪರಂ ಅಣ್ಣನ ಮಗನಿಂದಲೇ ಮೆಡಿಕಲ್ ಸೀಟ್ ಬ್ಲಾಕ್ ಅಕ್ರಮ

    ಪರಂ ಅಣ್ಣನ ಮಗನಿಂದಲೇ ಮೆಡಿಕಲ್ ಸೀಟ್ ಬ್ಲಾಕ್ ಅಕ್ರಮ

    – ಬಂದ ಹಣವನ್ನು ಸಿನಿಮಾದಲ್ಲಿ ಹೂಡಿಕೆ
    – ಖಾದರ್ ಭೇಟಿಗೆ ಅವಕಾಶ ನೀಡದ ಐಟಿ ಅಧಿಕಾರಿಗಳು

    ಬೆಂಗಳೂರು: ಮಾಜಿ ಡಿಸಿಎಂ ಪರಮೇಶ್ವರ್ ಅವರ ಅಣ್ಣನ ಮಗ ಸೀಟ್ ಬ್ಲಾಕ್ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಹೌದು. ಪರಮೇಶ್ವರ್ ಸಹೋದರ ಶಿವಪ್ರಸಾದ್ ಅವರ ಮಗ ಆನಂದ್ ನೇತೃತ್ವದಲ್ಲೇ ಸೀಟ್ ಬ್ಲಾಕ್ ದಂಧೆ ನಡೆಯುತಿತ್ತು. ಸರ್ಕಾರಕ್ಕೆ ಮರೆಮಾಚಿ ಅಕ್ರಮವಾಗಿ ಮೆಡಿಕಲ್ ಸೀಟ್ ಹಂಚಿಕೆ ಮಾಡುತ್ತಿದ್ದ ಆನಂದ್ ಬಂದ ಹಣವನ್ನು ಸಿನಿಮಾದಲ್ಲಿ ಹೂಡಿಕೆ ಮಾಡುತ್ತಿದ್ದರು ಎಂಬ ಆರೋಪ ಈಗ ಬಂದಿದೆ. ಇದನ್ನು ಓದಿ: ಇಬ್ಬರು ವಿದ್ಯಾರ್ಥಿಗಳಿಂದಾಗಿ ಪರಮೇಶ್ವರ್ ಮೇಲೆ ದಾಳಿ – ಸೀಟ್ ಬ್ಲಾಕ್ ಹೇಗೆ ಮಾಡಲಾಗುತ್ತೆ?

    ಅಕ್ರಮವಾಗಿ ಮೆಡಿಕಲ್ ಸೀಟು ಹಂಚಿಕೆಯಾಗುತ್ತಿರುವುದನ್ನು ಕಂಡು ಹಣ ನೀಡಲು ಸಾಧ್ಯವಾಗದ ಪೋಷಕರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದರು. ಈ ಕಾರಣಕ್ಕಾಗಿಯೇ ಪರಮೇಶ್ವರ್ ನಿವಾಸದ ಮೇಲೆ ದಾಳಿ ನಡೆದಿದ್ದು, ಆನಂದ್ ಅವರನ್ನು ಐಟಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

    ಎಕೆ 56 ಸಿನಿಮಾದಲ್ಲೂ ಆನಂದ್ ಹೀರೋ ಆಗಿ ನಟಿಸಿದ್ದರು. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಸಿನಿಮಾ 2012ರಲ್ಲಿ ತೆರೆ ಕಂಡಿತ್ತು.

    ವಿಚಾರಣೆ ಮುಂದುವರಿಕೆ:
    ಸದಾಶಿವನಗರ ಮನೆಯಲ್ಲೇ ನಾಲ್ಕು ಮಂದಿ ಐಟಿ ಅಧಿಕಾರಿಗಳು ಠಿಕಾಣಿ ಹೂಡಿದ್ದು ಇಂದು ಮತ್ತೆ ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯರಾತ್ರಿ 12.30ರ ವರೆಗೂ ವಿಚಾರಣೆ ನಡೆಸಿ ಪರಮೇಶ್ವರ್ ನಿವಾಸದಲ್ಲೇ ಈ ಅಧಿಕಾರಿಗಳು ನಿದ್ದೆ ಮಾಡಿದ್ದರು.

    ಮೊದಲ ದಿನ 10ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದರು. ರಾತ್ರಿ ನಾಲ್ಕು ಜನರನ್ನು ಬಿಟ್ಟು ಉಳಿದ ಅಧಿಕಾರಿಗಳು ವಾಹನದಲ್ಲಿ ತೆರಳಿದ್ದರು. ಇಂದು ಮತ್ತೆ 5 ಮಂದಿ ಅಧಿಕಾರಿಗಳು ಪರಮೇಶ್ವರ್ ನಿವಾಸಕ್ಕೆ ಆಗಮಿಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನು ಓದಿ: ಗ್ರಾಮ ಪಂಚಾಯತ್ ತೆರಿಗೆ ಕಟ್ಟದ ಪರಮೇಶ್ವರ್

    ಭೇಟಿಗೆ ಅವಕಾಶವಿಲ್ಲ: ಮಾಜಿ ಸಚಿವ ಯುಟಿ ಖಾದರ್ ಅವರು ಇಂದು ಬೆಳಗ್ಗೆ ಪರಮೇಶ್ವರ್ ಅವರನ್ನು ಭೇಟಿ ಮಾಡಲು ಸದಾಶಿವನಗರಕ್ಕೆ ಆಗಮಿಸಿದ್ದರು. ಆದರೆ ಅಧಿಕಾರಿಗಳು ಭೇಟಿಗೆ ಅವಕಾಶ ನೀಡಲಿಲ್ಲ.

    ಬೆಂಬಲಿಗರಿಂದ ಪೂಜೆ: ರಾಜಾರಾಜೇಶ್ವರಿ ನಗರದ ದೇವಸ್ಥಾನದಲ್ಲಿ ಪರಮೇಶ್ವರ್ ಅಭಿಮಾನಿಗಳು ಇಂದು ವಿಶೇಷ ಪೂಜೆ ಮಾಡಿದ್ದರು. ಕಾಂಗ್ರೆಸ್ ಮುಖಂಡ ರಾಜ್ ಕುಮಾರ್ ಮತ್ತು ತಂಡದವರು ವಿಶೇಷ ಪೂಜೆ ಮಾಡಿಸಿದ್ದರು. ಬೆಂಬಲಿಗರು ತಂದ ಪೂಜೆಯ ಪ್ರಸಾದವನ್ನು ಪರಮೇಶ್ವರ್ ಅವರಿಗೆ ನೀಡಲು ಅನುಮತಿ ನೀಡಲಾಯಿತು.

  • ಇಬ್ಬರು ವಿದ್ಯಾರ್ಥಿಗಳಿಂದಾಗಿ ಪರಮೇಶ್ವರ್ ಮೇಲೆ ದಾಳಿ – ಸೀಟ್ ಬ್ಲಾಕ್ ಹೇಗೆ ಮಾಡಲಾಗುತ್ತೆ?

    ಇಬ್ಬರು ವಿದ್ಯಾರ್ಥಿಗಳಿಂದಾಗಿ ಪರಮೇಶ್ವರ್ ಮೇಲೆ ದಾಳಿ – ಸೀಟ್ ಬ್ಲಾಕ್ ಹೇಗೆ ಮಾಡಲಾಗುತ್ತೆ?

    ಬೆಂಗಳೂರು: ಇಬ್ಬರು ವಿದ್ಯಾರ್ಥಿಗಳಿಂದಾಗಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಹೌದು. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ(ನೀಟ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಇಬ್ಬರು ವಿದ್ಯಾರ್ಥಿಗಳ ಸೀಟ್ ಅನ್ನು ಬ್ಲಾಕ್ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಾಗಿತ್ತು. ಈ ಸಂಬಂಧ ಆ ಇಬ್ಬರು ವಿದ್ಯಾರ್ಥಿಗಳನ್ನು ಐಟಿ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಸೀಟ್ ಬ್ಲಾಕ್ ಆಗಿದೆ ಎನ್ನುವುದನ್ನು ಒಪ್ಪಿಕೊಂಡಿದ್ದರು. ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಮಾಹಿತಿ ಕಲೆ ಹಾಕುತ್ತಿದ್ದ ಐಟಿ ಗುರುವಾರ ದಾಳಿ ನಡೆಸಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ:ಪರಮೇಶ್ವರ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ

    ಈ ಕಾರಣದ ಜೊತೆ ಮ್ಯಾನೇಜ್‍ಮೆಂಟ್ ಕೋಟಾದ ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಬಳಿಯಿಂದ ನಗದು ರೂಪದಲ್ಲಿ ಶುಲ್ಕವನ್ನು ಕಾಲೇಜ್ ಪಾವತಿಸಿಕೊಳ್ಳುತ್ತಿದೆ. ತೆರಿಗೆಯನ್ನು ವಂಚಿಸಲೆಂದೇ ಕಾಲೇಜಿನ ಆಡಳಿತ ಮಂಡಳಿ ನಗದು ರೂಪದಲ್ಲಿ ವ್ಯವಹಾರ ನಡೆಸಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಸೀಟ್ ಬ್ಲಾಕ್ ಹೇಗೆ?
    ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಎರಡು ರೀತಿಯಲ್ಲಿ ಸೀಟ್ ಗಳು ವಿದ್ಯಾರ್ಥಿಗಳಿಗೆ ಲಭ್ಯ ಇರುತ್ತದೆ. ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸರ್ಕಾರಿ ಸೀಟ್ ಸಿಕ್ಕುತ್ತದೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯದವರು ಅಥವಾ ಪರೀಕ್ಷೆಯೇ ಬರೆಯದ ವಿದ್ಯಾರ್ಥಿಗಳು ಮ್ಯಾನೇಜ್‍ಮೆಂಟ್ ಕೋಟಾದ ಅಡಿ ಪ್ರವೇಶ ಪಡೆಯುತ್ತಾರೆ. ಇದನ್ನೂ ಓದಿ:ಶಿಕ್ಷಣ ಸಂಸ್ಥೆ ಬಿಟ್ಟು, ಯಾವುದೇ ವ್ಯವಹಾರ ನಡೆಸುತ್ತಿಲ್ಲ- ಪರಮೇಶ್ವರ್

    ನೀಟ್ ಪರೀಕ್ಷೆಯಲ್ಲಿ ಉತ್ತಮ ಶ್ರೇಯಾಂಕ ಪಡೆದ ವಿದ್ಯಾರ್ಥಿಗಳನ್ನು ಖಾಸಗಿ ಕಾಲೇಜುಗಳಲ್ಲಿ ಈ ಸೀಟ್ ಬ್ಲಾಕ್ ಅವ್ಯವಹಾರಕ್ಕೆ ಬಳಸಲಾಗುತ್ತದೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಗಳಿಸಿದ ವಿದ್ಯಾರ್ಥಿಯೊಬ್ಬ ಯಾವುದೋ ರಾಜ್ಯದ ಕಾಲೇಜು ಸೇರುತ್ತೇನೆ ಎಂದು ಹೇಳುತ್ತಾನೆ. ಸರ್ಕಾರದ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ವಿದ್ಯಾರ್ಥಿ ಕಾಲೇಜಿಗೆ ದಿಢೀರ್ ಯಾವುದೋ ಕಾರಣ ನೀಡಿ ರದ್ದು ಪಡಿಸುವುದಾಗಿ ಮಾಹಿತಿ ನೀಡುತ್ತಾನೆ. ಈ ಹಂತದಲ್ಲಿ ರಾಜ್ಯ ಸರ್ಕಾರಕ್ಕೆ ಕೌನ್ಸಿಲಿಂಗ್ ನಡೆಸಿ ಮತ್ತೆ ಈ ಸೀಟ್ ಅನ್ನು ಹಂಚಿಕೆ ಮಾಡಲು ಸಾಧ್ಯವೇ ಇಲ್ಲ.

    ಈ ಸಂದರ್ಭದಲ್ಲಿ ಮ್ಯಾನೇಜ್‍ಮೆಂಟ್ ಈ ಸೀಟ್ ಅನ್ನು ಬೇರೊಬ್ಬ ವಿದ್ಯಾರ್ಥಿಗೆ ಲಕ್ಷ, ಕೋಟಿ ರೂ.ಗೆ ಮಾರಾಟ ಮಾಡುತ್ತದೆ. ಸೀಟ್ ಬ್ಲಾಕ್ ಮಾಡುವ ವಿಚಾರ ಮೊದಲೇ ಪೂರ್ವ ನಿರ್ಧಾರವಾಗಿರುತ್ತದೆ. ಅಂತಿಮವಾಗಿ ದಲ್ಲಾಳಿ, ವಿದ್ಯಾರ್ಥಿ ಮತ್ತು ಕಾಲೇಜಿನ ಆಡಳಿತ ಮಂಡಳಿ ಈ ತಮ್ಮ ತಮ್ಮ ಪಾಲನ್ನು ಹಂಚಿಕೊಳ್ಳುತ್ತಾರೆ. ಸೀಟ್ ಬ್ಲಾಕ್ ಅಕ್ರಮದ ಬಗ್ಗೆ ಹಿಂದೆಯೂ ಕೇಳಿ ಬಂದಿತ್ತು.

  • ಡಿಕೆಶಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಆಪ್ತ ಸುನಿಲ್ ಶರ್ಮಾ ಹೇಳಿಕೆ

    ಡಿಕೆಶಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಆಪ್ತ ಸುನಿಲ್ ಶರ್ಮಾ ಹೇಳಿಕೆ

    ನವದೆಹಲಿ: ದೆಹಲಿಯ ಸಫ್ದರ್‍ಜಂಗ್ ನಿವಾಸದಲ್ಲಿ ಸಿಕ್ಕಿದ್ದ 8.5 ಕೋಟಿ ರೂ. ಹಣ ನನ್ನದೇ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಪ್ತ ಸುನಿಲ್ ಶರ್ಮಾ ಇಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇಡಿ ವಿಚಾರಣೆಗೆ ಹಾಜರಾಗಿದ್ದ ಸುನಿಲ್ ಶರ್ಮಾ, ಯ ಸಫ್ದರ್‍ಜಂಗ್ ನಿವಾಸದಲ್ಲಿ ಸಿಕ್ಕಿದ ಹಣ ನನ್ನದು. ಈಗಾಗಲೇ ಆ ಹಣಕ್ಕೆ ಐಟಿ ರಿಟರ್ನ್ಸ್ ಸಲ್ಲಿಸಿದ್ದೇನೆ. ಆಂಜನೇಯವರ ಮನೆಯಲ್ಲಿ ಸಿಕ್ಕ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಡಿ.ಕೆ.ಶಿವಕುಮಾರ್ ಅವರ ಮುಂದೆ ಕುಳಿತು ಹೇಳಿಕೆ ನೀಡಲಾರೆ. ನಾನು ಮತ್ತೊಮ್ಮೆ ಡಿ.ಕೆ.ಶಿವಕುಮಾರ್ ಮುಂದೆ ಹೇಳಿಕೆ ನೀಡಲ್ಲ ಎಂದು ಸುನಿಲ್ ಶರ್ಮಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

    ಪದೇ ಪದೇ ಕ್ರಾಸ್ ಆಗಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಗಾಬರಿಯಲ್ಲಿ ಏನೇನು ಉತ್ತರಗಳನ್ನು ಹೇಳುತಿದ್ದೀನಿ. ನಿಮ್ಮ ಪ್ರಶ್ನೆಗಳು ಏನಿದೆ ಕೇಳಿ ಎಲ್ಲದಕ್ಕೂ ಉತ್ತರಿಸುತ್ತೇನೆ. ನೀವು ನನಗೆ ಮುಖಾಮುಖಿಯಾಗಿ ಉತ್ತರ ನೀಡುವಂತೆ ಒತ್ತಡ ಹಾಕುವಂತಿಲ್ಲ. ನಾನು ವಿಚಾರಣೆಗೆ ಬಂದಿದ್ದು, ಬಂಧನ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ನ್ಯಾಯಾಲಯದಲ್ಲಿ ಬಂಧನ ಮಾಡಲ್ಲ ಎಂದು ನೀವೇ ಒಪ್ಪಿಕೊಂಡಿದ್ದೀರಿ ಎಂದಿದ್ದಾರೆ ಎನ್ನಲಾಗಿದೆ.

    ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಕಳೆದೊಂದು ವಾರದಿಂದ ಇಡಿ ವಿಚಾರಣೆಗೆ ಒಳಗಾಗಿರುವ ಡಿ.ಕೆ ಶಿವಕುಮಾರ್‍ಗೆ ಶೇವಿಂಗ್ ಮಾಡೋಕು ಅನುಮತಿ ಇಲ್ಲ. ಇಡಿ ಅಧಿಕಾರಿಗಳನ್ನು ಕೇಳಿದರೆ ಅನುಮತಿ ನಿರಾಕರಿಸಿದರು. ಹೀಗಾಗಿ ಕ್ಷೌರ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯದ ವಿಶೇಷ ಕೋರ್ಟಿಗೆ ಡಿಕೆಶಿ ಅರ್ಜಿ ಸಲ್ಲಿಸಿದ್ದಾರೆ. ಜೊತೆ ಇಡಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಪೆನ್ನು, ಪೇಪರ್ ಬೇಕು ಅಂತಲೂ ಮನವಿ ಮಾಡಿದ್ದಾರೆ. ಕೋರ್ಟ್ ಸೋಮವಾರ ಅರ್ಜಿ ವಿಚಾರಣೆ ನಡೆಸಲಿದೆ.

  • ಡಿಕೆಶಿ ಆಸ್ತಿ ಎಷ್ಟಿದೆ? 8.59 ಕೋಟಿ ಹಣ ಯಾರದ್ದು? ದಾಳಿ ನಡೆಯದೇ ಇದ್ರೂ ಇಡಿ ಎಂಟ್ರಿಯಾಗಿದ್ದು ಹೇಗೆ?

    ಡಿಕೆಶಿ ಆಸ್ತಿ ಎಷ್ಟಿದೆ? 8.59 ಕೋಟಿ ಹಣ ಯಾರದ್ದು? ದಾಳಿ ನಡೆಯದೇ ಇದ್ರೂ ಇಡಿ ಎಂಟ್ರಿಯಾಗಿದ್ದು ಹೇಗೆ?

    ಬೆಂಗಳೂರು: ಮಾಜಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಇಡಿ ಬಲೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಗಿದ್ದು ಕೊನೆಗೂ ಅರೆಸ್ಟ್ ಆಗಿದ್ದಾರೆ. ಕಾಂಗ್ರೆಸ್ಸಿನ ಟ್ರಬಲ್ ಶೂಟರ್ ಎಂದೇ ಹೆಸರಾಗಿದ್ದ ಡಿಕೆಶಿಗೆ ಕಳೆದ ಎರಡು ವರ್ಷಗಳಿಂದ ತಲೆನೋವಿಗೆ ಕಾರಣವಾಗಿದ್ದು ದೆಹಲಿಯಲ್ಲಿ ಪತ್ತೆಯಾದ 8.59 ಕೋಟಿ ರೂ.

    ಹೌದು. 2017ರ ಆಗಸ್ಟ್ ವರೆಗೆ ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಡಿನೋಟಿಫಿಕೇಶನ್‍ನ್ ಪ್ರಕರಣ ಬಿಟ್ಟರೆ ಬೇರೆ ಯಾವುದೇ ದೊಡ್ಡ ಮಟ್ಟದ ಪ್ರಕರಣ ದಾಖಲಾಗಿರಲಿಲ್ಲ. ಆದರೆ ಆಗಸ್ಟ್ ನಲ್ಲಿ ಆದಾಯ ತೆರಿಗೆ ಇಲಾಖೆಯವರು ಡಿಕೆಶಿ, ಡಿಕೆಶಿ ಆಪ್ತರು, ಕಂಪನಿಗಳ ಮೇಲೆ ದಾಳಿ ನಡೆಸಿದ ಬಳಿಕ ಐಟಿ, ಇಡಿಯ ಬಲೆಗೆ ಬಿದ್ದರು. ಆದರಲ್ಲೂ ದಾಖಲೆ ಇಲ್ಲದ 8.59 ಕೋಟಿ ಹಣ ಬೆಂಬಿಡದೇ ಕಾಡುತ್ತಿದ್ದು, ಯಾರಿಂದಲೂ ಈ ಹಣದ ಮೂಲದ ಬಗ್ಗೆ ಸರಿಯಾದ ಉತ್ತರ ಸಿಗದ ಹಿನ್ನೆಲೆಯಲ್ಲಿ ಇಡಿ ಡಿಕೆಶಿಯನ್ನು ಬಂಧಿಸಿ ಮೂಲವನ್ನು ಬೇಧಿಸಲು ಮುಂದಾಗಿದೆ.

    ದಾಳಿ ಎಲ್ಲೆಲ್ಲಿ ಆಗಿತ್ತು?
    ಆ.2ರಿಂದ ಆ.5ರವರೆಗೆ ಬೆಂಗಳೂರು, ದೆಹಲಿ, ಕನಕಪುರ, ರಾಮನಗರ, ಮೈಸೂರು, ಹಾಸನ ಸೇರಿ ಒಟ್ಟು 67 ಕಡೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ್ದರು. ಡಿ ಕೆ ಶಿವಕುಮಾರ್, ಕುಟುಂಬ ಸದಸ್ಯರು, ಕನಕಪುರದಲ್ಲಿರುವ ತಾಯಿ ಗೌರಮ್ಮ ಮನೆ, ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಕಚೇರಿಗಳು, ವ್ಯವಹಾರ ಪಾಲುದಾರರಾದ ಶರ್ಮಾ ಟ್ರಾವೆಲ್ಸ್, ದ್ವಾರಕನಾಥ ಗುರೂಜಿ, ಆಪ್ತರಾದ ಸಚಿನ್ ನಾಯಕ್, ವಿಧಾನಪರಿಷತ್ ಸದಸ್ಯ ರವಿ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು.

    8.59 ಕೋಟಿ ಯಾರದ್ದು?
    ಶಿವಕುಮಾರ್ ಮತ್ತು ಅವರ ಆಪ್ತರಿಗೆ ಸೇರಿದ ದೆಹಲಿಯ ಆರ್.ಕೆ. ಪುರಂನ ಮನೆ ಹಾಗೂ ಸಫ್ದರ್‍ಜಂಗ್ ಎನ್‍ಕ್ಲೇವ್ ಫ್ಲ್ಯಾಟ್‍ಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆ.2 ರಂದು ದಾಳಿ ನಡೆಸಿದ್ದರು. ಈ ವೇಳೆ ದಾಖಲೆ ಇಲ್ಲದ 8.59 ಕೋಟಿ ಹಣ ಪತ್ತೆಯಾಗಿತ್ತು. ಶಿವಕುಮಾರ್ ಅವರ ವ್ಯವಹಾರಗಳ ಪಾಲುದಾರರಾಗಿರುವ ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮ, ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ಸುಖದೇವ್ ವಿಹಾರಿನ ನಿವಾಸಿ ರಾಜೇಂದ್ರ ಅವರು ಹಣದ ಮೂಲದ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದರು. ಸಿಕ್ಕಿದ ಹಣ ಡಿಕೆಶಿಗೆ ಸೇರಿದ್ದು ಎಂದು ಅವರ ಆಪ್ತ ಆಂಜನೇಯ ಹೇಳಿಕೆ ನೀಡಿದ್ದರೆ ಈ ಹಣ ನನ್ನದು ಎಬುದಾಗಿ ಶರ್ಮ ತಿಳಿಸಿದ್ದರು. ಇದರಲ್ಲಿರುವ ಸ್ವಲ್ಪ ಹಣ ಕೃಷಿಯಿಂದ ಬಂದಿರುವ ಆದಾಯ ಎಂದು ಶಿವಕುಮಾರ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರು. ಹಣದ ಮೂಲದ ಬಗ್ಗೆ ಸರಿಯಾದ ಮಾಹಿತಿ ಸಿಗದ ಕಾರಣ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು ಎಂದು ಇಡಿ ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

    ಹಣ ಬಂದಿದ್ದು ಎಲ್ಲಿಂದ?
    ಐಟಿ ವಿಚಾರಣೆಯ ಸಂದರ್ಭದಲ್ಲಿ ಸುನೀಲ್ ಕುಮಾರ್ ಶರ್ಮಾ ಆ ಹಣ ತನ್ನದು ಎಂದು ಒಪ್ಪಿಕೊಂಡಿದ್ದಾರೆ. ಆದರೆ ದೆಹಲಿ ಅಥವಾ ಸುತ್ತಮುತ್ತ ಯಾವುದೇ ವ್ಯವಹಾರವನ್ನು ಸುನೀಲ್ ಕುಮಾರ್ ಶರ್ಮಾ ಮಾಡುತ್ತಿಲ್ಲ. ಹೀಗಾಗಿ ಅವರ ಫ್ಲ್ಯಾಟ್ ಗೆ ಹಣ ಬಂದಿದ್ದು ಎಲ್ಲಿಂದ? ರಹಸ್ಯವಾಗಿ ಇಷ್ಟೊಂದು ಹಣವನ್ನು ಇಲ್ಲೇ ಯಾಕೆ ಇಡಲಾಗಿತ್ತು ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಜಾರಿ ನಿರ್ದೇಶನಾಲಯದ ವಿಚಾರಣೆಯ ಸಂದರ್ಭದಲ್ಲೂ ಶಿವಕುಮಾರ್ ಈ ಬಗ್ಗೆ ಸ್ಪಷ್ಟವಾದ ಉತ್ತರ ನೀಡಿಲ್ಲ. ಈ ಕಾರಣಕ್ಕಾಗಿ ಶಿವಕುಮಾರ್ ಅವರನ್ನು ಬಂಧಿಸಿದೆ ಎಂದು ಇಡಿ ಮೂಲವನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ.

    ಹವಾಲಾ ಹಣವೇ?
    ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳ ಮೇಲೆ ನಡೆದ ದಾಳಿ ವೇಳೆ ಒಂದು ಡೈರಿ ಸಿಕ್ಕಿತ್ತು. ಈ ಡೈರಿಯಲ್ಲಿ ಹಣಕ್ಕೆ ಕೆ.ಜಿ ಎಂದ ಸಂಕೇತಾಕ್ಷರ ಬಳಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ದೆಹಲಿಯಲ್ಲಿ ಪತ್ತೆಯಾದ 8.59 ಕೋಟಿ ರೂ. ‘ಹವಾಲಾ’ ಹಣವಾಗಿದ್ದು ಯಾರಿಗೋ ತಲುಪಿಸಲು ಈ ಹಣವನ್ನು ದೆಹಲಿಗೆ ತರಲಾಗಿದೆ ಎನ್ನುವ ಗಂಭೀರ ಆರೋಪ ಈಗ ಶಿವಕುಮಾರ್ ಮೇಲಿದೆ.

    ಡಿಕೆಶಿ ನೀಡಿದ ಉತ್ತರ ಏನು?
    8.59 ಕೋಟಿ ರೂ. ಪೈಕಿ 41.03 ಲಕ್ಷ ರೂ. ತನ್ನ ತಾಯಿ ಮತ್ತು ಸಹೋದರನ ಕೃಷಿ ಆದಾಯ ಎಂದು ಶಿವಕುಮಾರ್ ತಿಳಿಸಿದ್ದರು. ಆದರೆ, ಕೃಷಿ ಆದಾಯವನ್ನು ಹಿಂದಿನ ವರ್ಷಗಳಲ್ಲಿ ಸಲ್ಲಿಕೆ ಮಾಡಿರುವ ಐಟಿ ರಿಟರ್ನ್ ನಲ್ಲಿ ಉಲ್ಲೇಖ ಮಾಡದ ಪರಿಣಾಮ ಬೆಂಗಳೂರಿನಿಂದ ದೆಹಲಿಗೆ ತಂದಿರುವ ಕೋಟ್ಯಂತರ ರೂ. ಹಣವೂ ಹವಾಲಾ ಹಣ ಎನ್ನುವುದು ಐಟಿ ಆರೋಪ.

    ಆಸ್ತಿ ಎಷ್ಟಿದೆ?
    ಕಲ್ಲು ಗಣಿಗಾರಿಕೆ, ರಿಯಲ್ ಎಸ್ಟೇಟ್ ವ್ಯವಹಾರ, ಸಾರಿಗೆ ವ್ಯವಹಾರಗಳಲ್ಲಿ ಪಾಲುದಾರಿಕೆ, ನಾನಾ ಕಂಪನಿಗಳಲ್ಲಿ ಷೇರು ಖರೀದಿಸಿರುವ ಡಿಕೆ ಶಿವಕುಮಾರ್ 2018ರಲ್ಲಿ ಚುನಾವಣಾ ಆಯೋಗಕ್ಕೆ ನನ್ನ ಬಳಿ 619 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿದ್ದರು. ಬ್ಯಾಂಕ್‍ಗಳಲ್ಲಿ ಹೂಡಿಕೆ, ಚಿನ್ನಾಭರಣ, ವಾಹನ ಮುಂತಾದ ಚರಾಸ್ತಿಯ ಮೌಲ್ಯ 70.95 ಕೋಟಿ ರೂ. ಇದ್ದರೆ ಸ್ಥಿರಾಸ್ತಿಯ ಹಾಲಿ ಮಾರುಕಟ್ಟೆ ಮೌಲ್ಯ 548.80 ಕೋಟಿ ರೂ. ಇದೆ. ಈ ಪೈಕಿ ಸ್ವಯಾರ್ಜಿತ ಆಸ್ತಿಯ ಮೌಲ್ಯ 541.73 ಕೋಟಿ ಇದ್ದರೆ, ತಮ್ಮ ಹಿರಿಯರಿಂದ ಬಳುವಳಿ ಪಡೆದ ಆಸ್ತಿಯ ಹಾಲಿ ಮಾರುಕಟ್ಟೆ ಮೌಲ್ಯ 7.12 ಕೋಟಿ ರೂ. ಎಂದು ಉಲ್ಲೇಖಿಸಿದ್ದರು.

    2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯಲ್ಲಿ ತನ್ನ ಬಳಿ 251 ಕೋಟಿ ರೂ. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಇದಕ್ಕೂ ಮೊದಲು 2008ರಲ್ಲಿ ನಡೆದ ಚುನಾವಣೆ ವೇಳೆ ತನ್ನ ಬಳಿ 75 ಕೋಟಿ ರೂ. ಆಸ್ತಿ ಇದೆ ಎಂದು ತಿಳಿಸಿದ್ದರು.

    251 ಕೋಟಿ ರೂ. ಆಸ್ತಿಯನ್ನು ಹೊಂದುವ ಮೂಲಕ ಡಿಕೆ ಶಿವಕುಮಾರ್ ಅವರು ದೇಶದ ಶ್ರೀಮಂತ ಸಚಿವರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರು. 2016ರ ಆಗಸ್ಟ್ ನಲ್ಲಿ ಅಸೋಶಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 496 ಕೋಟಿ ರೂ. ಆಸ್ತಿಯನ್ನು ಹೊಂದಿರುವ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಸಚಿವ ಪೊಂಗುರು ನಾರಾಯಣ ದೇಶದ ಅತ್ಯಂತ ಶ್ರೀಮಂತ ಸಚಿವರು ಎನಿಸಿಕೊಂಡಿದ್ದರು. ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ನೀಡಿರುವ ಆಸ್ತಿ ಮೌಲ್ಯದ ಮಾಹಿತಿಯನ್ನು ಆಧರಿಸಿ, 29 ವಿಧಾನಸಭೆ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 620 ಸಚಿವರ ಪೈಕಿ 609 ಸಚಿವರನ್ನು ಅಧ್ಯಯನ ನಡೆಸಿ ವರದಿ ತಯಾರಿಸಿತ್ತು.

    ತೆರಿಗೆ ವಂಚನೆ ಕೇಸ್ ಎಲ್ಲಿಗೆ ಬಂದಿದೆ?
    ದಾಳಿಯಲ್ಲಿ ಸಿಕ್ಕಿದ ಆಸ್ತಿಯನ್ನು ಆಧರಿಸಿ 2015-16, 2016-17 ಮತ್ತು 2017- 18ನೇ ಸಾಲಿನಲ್ಲಿ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಮೂರು ಪ್ರತ್ಯೇಕ ಕೇಸ್ ದಾಖಲಿಸಿತ್ತು. ಈ ಮೂರು ಪ್ರಕರಣಗಳಿಂದ ಬಿಡುಗಡೆ ಮಾಡುವಂತೆ ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ. ಆದರೆ ಐಟಿ ರಿಲೀಫ್ ಸಿಕ್ಕಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದೆ. ಈ ಕುರಿತು ವಿಚಾರಣೆ ನಡೆಯುತ್ತಿದೆ.

    ಜಾರಿ ನಿರ್ದೇಶನಾಲಯ ಎಂಟ್ರಿ ಆಗಿದ್ದು ಹೇಗೆ?
    ಡಿಕೆ ಶಿವಕುಮಾರ್ ನಿವಾಸ, ಕಂಪನಿಗಳ ಮೇಲೆ ಇಡಿ ದಾಳಿ ನಡೆಸಿಲ್ಲ. ಆದರೆ ಡಿಕೆಶಿಯನ್ನು ಇಡಿ ಬಂಧಿಸಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಡಿ ದಾಳಿ ನಡೆಸದೇ ಇದ್ದರೂ ಒಟ್ಟು ನಾಲ್ಕು ದೂರು ದಾಖಲಿಸಿದ್ದ ಐಟಿ ಇಲಾಖೆಯ ತನಿಖಾ ವರದಿ ಆಧರಿಸಿ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ)ಅಡಿ ಪ್ರಕರಣ ದಾಖಲಿಸಿ ವಿಚಾರಣೆಗೆ ಸಮನ್ಸ್ ಜಾರಿ ಮಾಡಿತ್ತು. ನಾಲ್ಕು ದಿನಗಳಿಂದ ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದ ಇಡಿ ಅಧಿಕಾರಿಗಳು ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಡಿಕೆಶಿಯನ್ನು ಬಂಧಿಸಿದ್ದರು.

    ಇಡಿಗೆ ಅಧಿಕಾರವೇ ಇಲ್ಲ:
    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನೆ ಕೇಳುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕೆ ಇಲ್ಲ ಎಂದು ಡಿಕೆಶಿ ಪರವಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತಿರುವ ಹಿರಿಯ ವಕೀಲ ಶ್ಯಾಮ್ ಸುಂದರ್ ಹೇಳಿದ್ದಾರೆ. ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ್ದ ಅವರು, ಐಟಿ ಇಲಾಖೆ ನೀಡಿದ ದಾಖಲೆಯೇ ತಪ್ಪು ಎನ್ನುವುದು ಈಗಾಗಲೇ ತಿಳಿದು ಬಂದಿದೆ. ಯಾರ ಜಾಗದಲ್ಲಿ 8.59 ಕೋಟಿ ರೂ. ಸಿಕ್ಕಿತ್ತೋ ಅವರು ಹಣ ನನ್ನದೇ ಎಂಬುದಾಗಿ ಒಪ್ಪಿಕೊಂಡಿದ್ದಾರೆ. ಈ ಹೇಳಿಕೆಯನ್ನು ಐಟಿ ತಿರಸ್ಕರಿಸಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ಇಡಿ ಪ್ರವೇಶ ಮಾಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.

    ಕಾಂಗ್ರೆಸ್ ಆರೋಪ ಏನು?
    ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರು ರಾಜ್ಯಸಭೆಗೆ ಆಯ್ಕೆ ಆಗಬಾರದು ಎಂದು ಮೋದಿ ಮತ್ತು ಅಮಿತ್ ಶಾ ಪ್ಲಾನ್ ಮಾಡಿದ್ದರು. ಈ ಸಂದರ್ಭದಲ್ಲಿ ಗುಜರಾತ್ ಕೈ ಶಾಸಕರಿಗೆ ಆಫರ್ ನೀಡಲಾಗಿತ್ತು. ಬಿಜೆಪಿಯಿಂದ ಕೈ ಶಾಸಕರನ್ನು ಡಿಕೆ ಶಿವಕುಮಾರ್ ಬಿಡದಿಯ ಈಗಲ್ಟನ್ ರೆಸಾರ್ಟಿನಲ್ಲಿ ಇರಿಸಿ ರಕ್ಷಿಸಿದ್ದರು. ಈ ವಿಚಾರಕ್ಕೆ ಐಟಿ ರೇಡ್ ಮಾಡಿ ಡಿಕೆಶಿ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

  • 6 ಹಂತದ ತೆರಿಗೆ ಸ್ಲ್ಯಾಬ್ – ಜಾರಿಯಾದ್ರೆ ಮಧ್ಯಮ ವರ್ಗಕ್ಕೆ ರಿಲೀಫ್

    6 ಹಂತದ ತೆರಿಗೆ ಸ್ಲ್ಯಾಬ್ – ಜಾರಿಯಾದ್ರೆ ಮಧ್ಯಮ ವರ್ಗಕ್ಕೆ ರಿಲೀಫ್

    ನವದೆಹಲಿ: ಈಗಿನ ತೆರಿಗೆ ಹೊರೆ ಆಗಿದ್ದು, ತೆರಿಗೆ ಇಳಿಸಬೇಕು ಎನ್ನುವ ಕೂಗು ಕೇಳಿ ಬಂದ ಬೆನ್ನಲ್ಲೇ ಸರ್ಕಾರ ನೇಮಿಸಿದ ಸಮಿತಿಯೊಂದು ಟ್ಯಾಕ್ಸ್ ಇಳಿಕೆ ಸಂಬಂಧ ಶಿಫಾರಸು ಮಾಡಿದೆ. ಈ ಸಮಿತಿಯ ಶಿಫಾರಸನ್ನು ಸರ್ಕಾರ ಜಾರಿಗೆ ತಂದಲ್ಲಿ ಮಧ್ಯಮ ವರ್ಗಕ್ಕೆ ರಿಲೀಫ್ ಸಿಗಲಿದೆ.

    ಶಿಫಾರಸಿನಲ್ಲಿ ಏನಿದೆ?
    ಇಲ್ಲಿಯವರೆಗೆ ನಾಲ್ಕು ಹಂತದ ತೆರಿಗೆ ಇತ್ತು. ಈಗ 5 ಹಂತದ ಸ್ಲ್ಯಾಬ್ ಮಾಡುವಂತೆ ಶಿಫಾರಸು ಮಾಡಲಾಗಿದೆ. 2.5 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 2.50 ಲಕ್ಷ ರೂ. ನಿಂದ 5 ಲಕ್ಷ ರೂ. ವರೆಗೆ ಮಧ್ಯಂತರ ಬಜೆಟ್ ನಲ್ಲಿ ತಿಳಿಸಿದಂತೆ ರಿಬೇಟ್ ನೀಡಲಾಗಿದೆ. 5 ರಿಂದ 10 ಲಕ್ಷ ರೂ.ವರೆಗೆ ಶೇ.10 ತೆರಿಗೆ, 10 ಲಕ್ಷ ರೂ.ದಿಂದ 20 ಲಕ್ಷ ರೂ.ವರೆಗೆ ಶೇ.20, 20 ಲಕ್ಷ ರೂ.ಯಿಂದ 2 ಕೋಟಿ ರೂ.ಗೆ ಶೇ.30 ಮತ್ತು 2 ಕೋಟಿ ರೂ.ಗೆ ಮೇಲ್ಪಟ್ಟ ವಾರ್ಷಿಕ ಆದಾಯಕ್ಕೆ ಶೇ.35 ರಷ್ಟು ತೆರಿಗೆಯನ್ನು ವಿಧಿಸುವಂತೆ ಶಿಫಾರಸು ಮಾಡಿದೆ.

    ಈಗ 10 ಲಕ್ಷ ರೂ. ನಿಂದ 20 ಲಕ್ಷ ರೂ.ವರೆಗಿನ ಆದಾಯ ಹೊಂದಿರುವ ವ್ಯಕ್ತಿ ಶೇ.30 ರಷ್ಟು ತೆರಿಗೆ ಪಾವತಿಸಬೇಕಿದೆ. ಸಮಿತಿ ಶಿಫಾರಸ್ಸು ಜಾರಿಯಾದರೆ ಶೇ.20 ರಷ್ಟು ಮಾತ್ರ ತೆರಿಗೆ ಕಟ್ಟಬೇಕು. ಹೀಗಾಗಿ ಶೇ.10 ರಷ್ಟು ತೆರಿಗೆ ಇಳಿಕೆಯಾಗಲಿದೆ. ಇದನ್ನೂ ಓದಿ:  ನಿಮ್ಮ ಆದಾಯ 14.50 ಲಕ್ಷ ಇದ್ದರೂ ನೀವು ತೆರಿಗೆ ಪಾವತಿಸಬೇಕಿಲ್ಲ!

    2.5 ಲಕ್ಷ ರೂ.ದಿಂದ 5 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ವ್ಯಕ್ತಿ ಸದ್ಯ ಶೇ.5 ತೆರಿಗೆ ಪಾವತಿಸುತ್ತಾನೆ. ಸಮಿತಿಯ ಶಿಫಾರಸ್ಸು ಜಾರಿಯಾದ್ರೆ ಆತ ಶೇ.10 ತೆರಿಗೆ ಪಾವತಿಸಬೇಕು. ಇಲ್ಲಿ 5 ಲಕ್ಷದವರೆಗೆ ಆದಾಯ ಹೊಂದಿರುವ ವ್ಯಕ್ತಿ ಸರ್ಕಾರದ ರಿಬೇಟ್ ಲಾಭ ಪಡೆಯಬಹುದು.

  • ನಾನ್ಯಾಕೆ ಹೆದರಲಿ, ಐಟಿ ದಾಳಿ ನಡೆಸಿದ್ದಕ್ಕೆ ಮೋದಿಗೆ ಧನ್ಯವಾದ: ಪುಟ್ಟರಾಜು

    ನಾನ್ಯಾಕೆ ಹೆದರಲಿ, ಐಟಿ ದಾಳಿ ನಡೆಸಿದ್ದಕ್ಕೆ ಮೋದಿಗೆ ಧನ್ಯವಾದ: ಪುಟ್ಟರಾಜು

    ಬೆಂಗಳೂರು: ನಾವು ರೈತಾಪಿ ಕುಟುಂಬದವರು. ಐಟಿಯವರು ದಾಳಿ ನಡೆಸಿದರೂ ನಮ್ಮ ಮನೆಯಲ್ಲಿ ಏನು ಸಿಗುವುದಿಲ್ಲ. ನಮ್ಮ ಎಲ್ಲ ವ್ಯವಹಾರಗಳಿಗೆ ಲೆಕ್ಕವಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ.

    ಐಟಿ ದಾಳಿ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇವತ್ತು ಬೆಳಗ್ಗೆ 5:30ಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ನನಗೆ 10 ರೂ. ಬಂದರೂ ಅದಕ್ಕೂ ಲೆಕ್ಕ ಇದೆ. 1985 ರಿಂದಲೂ ನಾವು ಈ ವಿಚಾರದಲ್ಲಿ ಪಕ್ಕಾ ಇದ್ದೇವೆ. ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

    ಜೆಡಿಎಸ್ ನಾಯಕರು, ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಯಲಿದೆ ಎನ್ನುವ ಮಾಹಿತಿ ಇತ್ತು. ಆದರೆ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವನ ಮನೆ ಮೇಲೆ ದಾಳಿ ನಡೆಯುತ್ತದೆ ಎಂದು ಭಾವಿಸಿರಲಿಲ್ಲ ಎಂದರು.

    ಚುನಾವಣೆ ಸಮಯದಲ್ಲಿ ದಾಳಿ ನಡೆಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಬೇಕು. ಈ ದಾಳಿಯಿಂದ ಕೆಲಸ ಮಾಡಲು ಮತ್ತಷ್ಟು ಉತ್ಸಾಹ ಬಂದಿದೆ. ಇಂದು ನಾನು ಚುನಾವಣಾ ಪ್ರಚಾರಕ್ಕೆ ತೆರಳುತ್ತೇನೆ ಎಂದು ಹೇಳಿದರು.

    ನಾನು ಸಿಎಂ ಆಪ್ತ ಎನ್ನುವ ಕಾರಣಕ್ಕೆ ದಾಳಿ ಮಾಡಿದ್ದಾರೆ. ಬಿಜೆಪಿ ನಾಯಕರ ಮನೆಯಲ್ಲಿ ನೋಟು ಎಣಿಸುವ ಯಂತ್ರಗಳಿದ್ದರೂ ಯಾಕೆ ದಾಳಿ ಮಾಡುತ್ತಿಲ್ಲ. ಈ ರೀತಿ ದಾಳಿ ನಡೆಸಿ ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.

    ಪುಟ್ಟರಾಜು ಸ್ವಗ್ರಾಮ ಚಿನಕುರಳಿಯಲ್ಲಿರುವ ಮನೆ ಮೇಲೆ ಬೆಳಗ್ಗೆ ಐಟಿ ದಾಳಿ ನಡೆದಿದೆ. ಮೈಸೂರಿನ ವಿಜಯನಗರದಲ್ಲಿರುವ ಪುಟ್ಟರಾಜು ಅಣ್ಣನ ಮಗ ಅಶೋಕ್ ಮನೆ ಮೇಲೆಯೂ ದಾಳಿ ನಡೆದಿದೆ. ನಸುಕಿನ ಜಾವದಿಂದ ಪುಟ್ಟರಾಜು ನಿವಾಸ, ಸಂಬಂಧಿಗಳ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

  • 5 ಲಕ್ಷಕ್ಕೆ 1 ರೂ. ಸೇರಿದ್ರೂ 12,500 ರೂ. ಟ್ಯಾಕ್ಸ್ ಕಟ್ಟಿ: ಏನಿದು ಮೋದಿಯ ಹೊಸ ತೆರಿಗೆ ಲೆಕ್ಕಾಚಾರ?

    5 ಲಕ್ಷಕ್ಕೆ 1 ರೂ. ಸೇರಿದ್ರೂ 12,500 ರೂ. ಟ್ಯಾಕ್ಸ್ ಕಟ್ಟಿ: ಏನಿದು ಮೋದಿಯ ಹೊಸ ತೆರಿಗೆ ಲೆಕ್ಕಾಚಾರ?

    ನವದೆಹಲಿ: ಮಧ್ಯಮ ವರ್ಗ ಕುತೂಹಲದಿಂದ ಬೆರಗುಗಣ್ಣಿನಿಂದ ಕಾದು ಕುಳಿತಿದ್ದ ತೆರಿಗೆ ವಿಷಯದಲ್ಲಿ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. 5 ಲಕ್ಷದವರೆಗೆ ಆದಾಯ ಇರುವವರು ಯಾವುದೇ ತೆರಿಗೆ ಕಟ್ಟುವ ಅಗತ್ಯವಿಲ್ಲ. ಆದರೆ 5 ಲಕ್ಷಕ್ಕಿಂತಲೂ ಒಂದು ರೂ. ಜಾಸ್ತಿ ಆದಾಯ ಇದ್ದರೂ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.

    ಈ ಹಿಂದೆ 2.50 ಲಕ್ಷ ರೂ. ನಿಂದ 5 ಲಕ್ಷ ರೂ. ಆದಾಯ ಇದ್ದವರಿಗೆ 5% ರಷ್ಟು ತೆರಿಗೆ ವಿಧಿಸಲಾಗುತಿತ್ತು. ಆದರೆ ಈಗ ಈ ತೆರಿಗೆ ವಿನಾಯಿತಿ ಮಿತಿಯನ್ನು ಕಿತ್ತು ಹಾಕಿಲ್ಲ. ಈ ಹಿಂದೆ 3 ಲಕ್ಷ ಆದಾಯವುಳ್ಳವರು ತೆರಿಗೆ ವ್ಯಾಪ್ತಿಗೂ ಬಂದರೂ ಅನ್ವಯವಾಗುತ್ತಿದ್ದ 2,500 ರಿಬೇಟ್ ಮೂಲಕ ಮನ್ನಾ ಆಗುತ್ತಿತ್ತು. ಈಗ 5 ಲಕ್ಷ ರೂ.ವರೆಗೆ ಆದಾಯವುಳ್ಳವರಿಗೆ ಅನ್ವಯವಾಗುವ 12,500ವರೆಗಿನ ತೆರಿಗೆ ರಿಬೇಟ್ ಮೂಲಕ ಮನ್ನಾ ಆಗಲಿದೆ.

    ಮೋದಿ ತೆರಿಗೆ ಲೆಕ್ಕಾಚಾರ ಹೀಗಿದೆ ನೋಡಿ:
    5 ಲಕ್ಷವರೆಗೆ 2018ರ ವರೆಗೆ 2,500 ರೂ. ರಿಬೇಟ್ ಇತ್ತು. ಈಗ ರಿಬೇಟ್ 12,500 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ 3 ಲಕ್ಷ ರೂ. ಆದಾಯವುಳ್ಳವರು ತೆರಿಗೆ ವ್ಯಾಪ್ತಿಗೂ ಬಂದರೂ ಅನ್ವಯವಾಗುತ್ತಿದ್ದ 2,500 ರಿಬೇಟ್ ಮನ್ನಾ ಆಗುತ್ತಿತ್ತು. ಈಗ 5 ಲಕ್ಷ ರೂ.ವರೆಗೆ ಆದಾಯವುಳ್ಳವರಿಗೆ ಅನ್ವಯವಾಗುವ 12,500ರವರೆಗಿನ ರಿಬೇಟ್ ಮನ್ನಾ ಆಗಲಿದೆ. 5 ಲಕ್ಷಕ್ಕಿಂತ ಒಂದು ರೂಪಾಯಿ ಮೇಲ್ಪಟ್ಟರೂ ರಿಬೇಟ್ ಅನ್ವಯವಾಗುದಿಲ್ಲ.

    ಸ್ಟ್ಯಾಂಡರ್ಡ್ ಡಿಡಕ್ಷನ್ 40 ಸಾವಿರದಿಂದ 50 ಸಾವಿರ ರೂ. ಏರಿಕೆ ಮಾಡಿದ್ದು, ಗೃಹ ಸಾಲ 2 ಲಕ್ಷದವರೆಗೆ ತೆರಿಗೆ ವಿನಾಯ್ತಿ ನೀಡಲಾಗಿದೆ. ಪಿಎಫ್, ಪಿಪಿಎಫ್ ಸೇರಿದಂತೆ ನಿಗದಿತ ಹೂಡಿಕೆಗೆ 6.50 ಲಕ್ಷದವರೆಗೆ ತೆರಿಗೆ ಭರಿಸಬೇಕಿಲ್ಲ. ಬ್ಯಾಂಕ್, ಅಂಚೆಯಂತ ಉಳಿತಾಯ ಯೋಜನೆಗಳ ಮೇಲೆ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿ ಘೋಷಿಸಲಾಗಿದೆ.

    40 ಸಾವಿರದವರೆಗಿನ ಬಡ್ಡಿ ಆದಾಯಕ್ಕೆ ಟಿಡಿಎಸ್ ಇಲ್ಲ. ಟಿಡಿಎಸ್‍ನ ಬಡ್ಡಿ ಮಿತಿ ವಿನಾಯಿತಿಯನ್ನು 10 ಸಾವಿರದಿಂದ 40 ಸಾವಿರದವರೆಗೆ ಏರಿಸಲಾಗಿದೆ. ಸ್ಟಾಂಡರ್ಡ್ ಡಿಡಕ್ಷನ್ ಎಲ್ಲವನ್ನು ಕಳೆದು 5 ಲಕ್ಷ ರೂ. ಒಳಗಡೆ ಆದಾಯ ಇದ್ದರೆ ತೆರಿಗೆ ಕಟ್ಟಬೇಕಿಲ್ಲ. ಎಲ್ಲವನ್ನು ಕಳೆದು 1 ರೂಪಾಯಿ ಜಾಸ್ತಿಯಾದರೆ ಅದಕ್ಕೆ ತೆರಿಗೆ ಕಟ್ಟಬೇಕಾಗುತ್ತದೆ.

    12,500 ರೂ. ಹೇಗೆ? ಉದಾಹರಣೆಗೆ ವ್ಯಕ್ತಿ ಎಲ್ಲ ಸ್ಟ್ಯಾಂಡರ್ಡ್ ಡಿಡಕ್ಷನ್ ಕಳೆದು 6 ಲಕ್ಷ ರೂ. ಆದಾಯ ಹೊಂದಿದ್ದಾನೆ ಎಂದು ಭಾವಿಸಿಕೊಳ್ಳಿ. ಈಗ ಕೇವಲ ರಿಬೇಟ್ ಮೊತ್ತವಷ್ಟೇ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ವಾರ್ಷಿಕ ಆದಾಯ 5 ಲಕ್ಷ ರೂ. ಗಿಂತ ಮೇಲ್ಪಟ್ಟಿದ್ದರೆ ಆಗ 2.5 ಲಕ್ಷ ರೂ.( 2.5 ಲಕ್ಷ ರೂ.ವರೆಗೆ ತೆರಿಗೆ ಇಲ್ಲ)ನಿಂದ 6 ಲಕ್ಷ ರೂ.ವರೆಗೆ ಆದಾಯಕ್ಕೆ ತೆರಿಗೆ ಕಡ್ಡಾಯವಾಗಿ ಕಟ್ಟಬೇಕಾಗುತ್ತದೆ. 2.5 ಲಕ್ಷದವರೆಗೆ 5 ಲಕ್ಷದವರೆಗೆ 5%ರಷ್ಟು, 5 ಲಕ್ಷದಿಂದ ಉಳಿದ 1 ಲಕ್ಷ ರೂ.ಗೆ  20%ರಷ್ಟು ತೆರಿಗೆ ಒಟ್ಟು 12,500 ರೂ.  ಕಟ್ಟಬೇಕು.

    ಯಾರಿಗೆ ಎಷ್ಟೆಷ್ಟು ತೆರಿಗೆ?
    ಆದಾಯ ತೆರಿಗೆ ಸ್ಲಾಬ್‍ಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2018-19ರ ಹಣಕಾಸು ವರ್ಷದಲ್ಲಿ ಇರುವಂತೆ 2019-20 ರಲ್ಲಿ ತೆರಿಗೆ ಕಟ್ಟಬೇಕು. 2.5 ಲಕ್ಷದ ವರೆಗೆ ಯಾವುದೇ ತೆರಿಗೆ ಇಲ್ಲ. 2.5 ಲಕ್ಷದಿಂದ 5 ಲಕ್ಷದ ವರೆಗೆ 5%, 5 ಲಕ್ಷಕ್ಕಿಂತ ಮೇಲ್ಪಟ್ಟು 10 ಲಕ್ಷದ ಒಳಗಡೆ ಇದ್ದರೆ 20%, 10 ಲಕ್ಷಕ್ಕೂ ಮೇಲ್ಪಟ್ಟು 30% ತೆರಿಗೆಯನ್ನು ಕಟ್ಟಬೇಕು.

    ಎಷ್ಟು ಆದಾಯ ಇರುವವರಿಗೆ ಎಷ್ಟು ತೆರಿಗೆ?
    5 ಲಕ್ಷ ರೂ. ಒಳಗಡೆ (ಸ್ಟ್ಯಾಂಡರ್ಡ್ ಡಿಡಕ್ಷನ್ ಕಳೆದು ಸಿಗುವ ಆದಾಯ) ಇರುವ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 5 ಲಕ್ಷದ ಮೇಲೆ 1 ರೂಪಾಯಿ ಆದಾಯ ಹೆಚ್ಚಾದರೂ 12,500 ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಇದಕ್ಕೆ ರಿಬೇಟ್ ಇರುವುದಿಲ್ಲ. 7.5 ಲಕ್ಷಕ್ಕೆ 62,500 ರೂ., 10 ಲಕ್ಷಕ್ಕೆ 1,12,500 ರೂ., 15 ಲಕ್ಷಕ್ಕೆ 2,62,500 ರೂ., 20 ಲಕ್ಷಕ್ಕೆ 4,12,500 ರೂ. ತೆರಿಗೆ ಕಟ್ಟಬೇಕು. (ಗಮನಿಸಿ: 5 ಲಕ್ಷದ 1 ರೂಪಾಯಿ ಮೀರಿದ ಎಲ್ಲಾ ಮೊತ್ತದ ಟ್ಯಾಕ್ಸ್ ಮೇಲೆ 3% ರಷ್ಟು ಸೆಸ್ ಅನ್ವಯ ಆಗಲಿದೆ)

    https://www.youtube.com/watch?v=W4j4iILKQNc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv