Tag: ಆದಾಯ ತೆರಿಗೆ

  • Budget 2022: ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ

    Budget 2022: ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ

    ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ ಅನ್ನು ಸಂಸತ್‌ನಲ್ಲಿ ಮಂಗಳವಾರ ಮಂಡಿಸಿದರು. ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

    ಆದಾಯ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಲಾಗಿತ್ತು. ಆದರೆ ಬಜೆಟ್‌ನಲ್ಲಿ ಅದ್ಯಾವುದೇ ಬದಲಾವಣೆ ಆಗಿಲ್ಲ. ಆದಾಗ್ಯೂ ತೆರಿಗೆದಾರರು ಈಗ ಎರಡು ವರ್ಷಗಳಲ್ಲಿ ಐಟಿ ರಿಟರ್ನ್ಸ್‌ ಅನ್ನು ನವೀಕರಿಸಬಹುದು ಎಂದು ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. ಇದನ್ನೂ ಓದಿ: Budget 2022: ರಾಷ್ಟ್ರೀಯ ಹೆದ್ದಾರಿ 25 ಸಾವಿರ ಕಿ.ಮೀ ವಿಸ್ತರಣೆ – 400 ವಂದೇ ಭಾರತ್ ರೈಲು ತಯಾರಿ ಗುರಿ

    ಐಟಿ ರಿಟರ್ನ್ಸ್‌ ಸಲ್ಲಿಕೆ ವೇಳೆ ಆಗಿರುವ ಲೋಪ ಸರಿಪಡಿಸಿ, ನವೀಕೃತ ರಿಟರ್ನ್ಸ್‌ ಸಲ್ಲಿಸಲು ಮೌಲ್ಯಮಾಪನ ವರ್ಷದಿಂದ 2 ವರ್ಷಗಳವರೆಗೆ ಕಾಲಾವಕಾಶ ನೀಡಲಾಗಿದೆ. ವರ್ಜುವಲ್‌ ಡಿಜಿಟಲ್‌ ಸ್ವತ್ತುಗಳ ವರ್ಗಾವಣೆಯಿಂದ ಬರುವ ಯಾವುದೇ ಆದಾಯಕ್ಕೆ ಶೇ.30 ತೆರಿಗೆ ವಿಧಿಸಲಾಗುತ್ತದೆ. ವರ್ಚುವಲ್‌ ಸ್ವತ್ತುಗಳ ಉಡುಗೊರೆಗಳನ್ನು ಸ್ವೀಕರಿಸುವವರಿಗೆ ತೆರಿಗೆ ಹಾಕಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Budget 2022: ವರ್ಲ್ಡ್‌ ಕ್ಲಾಸ್‌ ಶಿಕ್ಷಣಕ್ಕೆ ಡಿಜಿಟಲ್‌ ವಿಶ್ವವಿದ್ಯಾಲಯ ಸ್ಥಾಪನೆ

    ಆದಾಯ ತೆರಿಗೆ ದರಗಳು
    2.5 ಲಕ್ಷ ರೂ.ವರೆಗೆ – ಶೂನ್ಯ
    2.5-5 ಲಕ್ಷ – ಶೇ.5
    5-7.50 ಲಕ್ಷ – ಶೇ.10 (ಒಟ್ಟು ಆದಾಯ 5 ಲಕ್ಷ ಮೇಲ್ಪಟ್ಟು ಇದ್ದರೆ 12,500 ರೂ. ಹೆಚ್ಚುವರಿ ತೆರಿಗೆ)
    7.50-10 ಲಕ್ಷ – ಶೇ.15 (ಒಟ್ಟು ಆದಾಯ 7.5 ಲಕ್ಷ ಮೇಲ್ಪಟ್ಟು ಇದ್ದರೆ 37,500 ರೂ. ಹೆಚ್ಚುವರಿ ತೆರಿಗೆ)
    10-12.50 ಲಕ್ಷ – ಶೇ.20 (ಒಟ್ಟು ಆದಾಯ 10 ಲಕ್ಷ ಮೇಲ್ಪಟ್ಟು ಇದ್ದರೆ 75,000 ರೂ. ಹೆಚ್ಚುವರಿ ತೆರಿಗೆ)
    12.50-15 ಲಕ್ಷ – ಶೇ.25 (ಒಟ್ಟು ಆದಾಯ 12.5 ಲಕ್ಷ ಮೇಲ್ಪಟ್ಟು ಇದ್ದರೆ 1,25,000 ರೂ. ಹೆಚ್ಚುವರಿ ತೆರಿಗೆ)
    15 ಲಕ್ಷ ಮೇಲ್ಪಟ್ಟು – ಶೇ.30 (ಒಟ್ಟು ಆದಾಯ 15 ಲಕ್ಷ ಮೇಲ್ಪಟ್ಟು ಇದ್ದರೆ 1,87,500 ರೂ. ಹೆಚ್ಚುವರಿ ತೆರಿಗೆ)

  • ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ಗೆ ಸೇರಿದ 1,000 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ಗೆ ಸೇರಿದ 1,000 ಕೋಟಿ ಮೌಲ್ಯದ ಆಸ್ತಿ ಜಪ್ತಿ

    ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ಸೇರಿದ್ದು ಎನ್ನಲಾದ ಸುಮಾರು 1,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.

    ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ನಿರ್ಮಲ್‌ ಟವರ್‌ ಸೇರಿದಂತೆ ಐದು ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅರೆಸ್ಟ್‌

    ಕಳೆದ ತಿಂಗಳು ಅಜಿತ್‌ ಪವಾರ್‌ ಅವರ ಸಹೋದರಿಯ ನಿವಾಸಗಳು ಹಾಗೂ ಸಂಸ್ಥೆಗಳಲ್ಲಿ ತೆರಿಗೆಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಕೈಗೊಳ್ಳಲಾಗಿತ್ತು.

    ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿದ್ದ ಪವಾರ್‌ ಅವರು, “ಪ್ರತಿ ವರ್ಷ ತೆರಿಗೆಯನ್ನು ಪಾವತಿಸುತ್ತಿದ್ದೇವೆ. ನಾನು ಹಣಕಾಸು ಸಚಿವ. ಹೀಗಾಗಿ ತೆರಿಗೆ ಪಾವತಿ ಸಂಬಂಧ ಬದ್ಧತೆ ಇದೆ. ತಮಗೆ ಸಂಬಂಧಿಸಿದ ಎಲ್ಲಾ ಘಟಕಗಳು ನಿಯಮಿತವಾಗಿ ತೆರಿಗೆ ಪಾವತಿಸಿವೆ” ಎಂದು ತಿಳಿಸಿದ್ದರು. ಇದನ್ನೂ ಓದಿ: ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ – ಬಿಜೆಪಿ ನಾಯಕನ ವಿರುದ್ಧ FIR

    ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಗಂಭೀರ ಆರೋಪ ಮಾಡಿರುವ ಪವಾರ್‌,”ನನ್ನ ಸಹೋದರಿ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿರುವುದಕ್ಕೆ ಬೇಸರವಾಗಿದೆ. ನನ್ನ ಸಂಬಂಧಿ ಎಂಬ ಕಾರಣಕ್ಕೆ ನಡೆದಿರುವ ದಾಳಿ ಬಗ್ಗೆ ಜನರೇ ಆಲೋಚಿಸಬೇಕಿದೆ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಸೋನು ಸೂದ್ ಕಚೇರಿ ಮೇಲೆ ಐಟಿ ದಾಳಿ

    ಸೋನು ಸೂದ್ ಕಚೇರಿ ಮೇಲೆ ಐಟಿ ದಾಳಿ

    ನವದೆಹಲಿ: ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ.

    ಮುಂಬೈ ಕಚೇರಿ ಮತ್ತು ಲಕ್ನೋದಲ್ಲಿರುವ ಕಂಪನಿ ಸೇರಿದಂತೆ ಒಟ್ಟು ಆರು ಕಡೆ ಈ ದಾಳಿ ನಡೆದಿದೆ. ಸೋನು ಸೂದ್ ಕಂಪನಿ ಮತ್ತು ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಯ ನಡುವಿನ ಇತ್ತೀಚಿಗೆ ಒಪ್ಪಂದ ನಡೆದಿತ್ತು. ಈ ಒಪ್ಪಂದದ ವೇಳೆ ತೆರಿಗೆ ವಂಚನೆ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

    ಸೋನು ಸೂದ್ ಮೇಲೆ ಐಟಿ ದಾಳಿ ನಡೆಯುತ್ತಿರುವುದು ಇದೇ ಮೊದಲೆನಲ್ಲ. ಈ ಹಿಂದೆ 2012 ರಲ್ಲಿ ತೆರಿಗೆ ವಂಚನೆ ಆರೋಪದ ಮೇಲೆ ದಾಳಿ ನಡೆದಿತ್ತು.

    ರಾಜಕೀಯ ಪಕ್ಷಗಳು ಸೋನು ಸೂದ್ ಮೇಲಿನ ಐಟಿ ದಾಳಿಯನ್ನು ಖಂಡಿಸಿವೆ. ಆಪ್ ನಾಯಕ ರಾಘವ್ ಚಡ್ಡಾ ಪ್ರತಿಕ್ರಿಯಿಸಿ, ಬಡವರಿಗೆ ಸಹಾಯ ಮಾಡಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಸೋನು ಸೂದ್ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದಾರೆ.  ಇದನ್ನೂ ಓದಿ: ಮಾಜಿ ಗಂಡನ ಹೇಳಿಕೆಯಿಂದ ಚೀನಾದ ಖ್ಯಾತ ನಟಿಗೆ ಬಿತ್ತು 340 ಕೋಟಿ ರೂ. ದಂಡ

    ರಾಜಕೀಯ ಪಕ್ಷಗಳ ಟೀಕೆ ಬಿಜೆಪಿ ವಕ್ತಾರ ಆಸಿಫ್ ಭಮ್ಲಾ ಪ್ರತಿಕ್ರಿಯಿಸಿ, ಐಟಿ ದಾಳಿಗೂ ಕೇಜ್ರಿವಾಲ್ ಜೊತೆಗಿನ ಭೇಟಿಗೂ ಯಾವುದೇ ಸಂಬಂಧವಿಲ್ಲ. ಯಾವುದೇ ವ್ಯಕ್ತಿ ಯಾರನ್ನೂ ಭೇಟಿ ಮಾಡಬಹುದು. ಆದಾಯ ತೆರಿಗೆ ಇಲಾಖೆ ಸ್ವತಂತ್ರವಾಗಿದ್ದು ತನ್ನದೇ ಆದ ಶಿಷ್ಟಾಚಾರವನ್ನು ಹೊಂದಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್

    48 ವರ್ಷದ ಸೋನ್ ಸೂದ್ ಎರಡು ದಶಕಗಳಿಂದ ಚಲನ ಚಿತ್ರರಂಗದಲ್ಲಿದ್ದಾರೆ. ಕೋವಿಡ್ 19 ಸಮಯದಲ್ಲಿ ಅವರು ನೀಡಿದ ಸಹಾಯ ಕಾರ್ಯ ದೇಶದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿತ್ತು. ದೆಹಲಿ ಸರ್ಕಾರ ಕೆಲ ದಿನಗಳ ಹಿಂದೆ ಶಾಲಾ ವಿದ್ಯಾರ್ಥಿಗಳಿಗೆ ಆರಂಭಿಸಿರುವ ಮಾರ್ಗದರ್ಶನ ಕಾರ್ಯಕ್ರಮದ ರಾಯಭಾರಿಯಾಗಿ ಸೋನು ಸೂದ್ ಅವರನ್ನು ಆಯ್ಕೆ ಮಾಡಿತ್ತು.

  • ಇನ್ಫಿ ಸಿಇಒ ಸಲೀಲ್ ಪರೇಖ್‍ಗೆ ಹಣಕಾಸು ಸಚಿವಾಲಯದಿಂದ ಸಮನ್ಸ್

    ಇನ್ಫಿ ಸಿಇಒ ಸಲೀಲ್ ಪರೇಖ್‍ಗೆ ಹಣಕಾಸು ಸಚಿವಾಲಯದಿಂದ ಸಮನ್ಸ್

    ನವದೆಹಲಿ: ಇ-ಫೈಲಿಂಗ್ ಪೋರ್ಟಲ್ ನಲ್ಲಿ  ಕಾಣಿಸಿಕೊಂಡ ತಾಂತ್ರಿಕ ದೋಷ ಪರಿಹಾರವಾಗದ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

    ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟನ್  ಲೋಕಾರ್ಪಣೆಗೊಂಡು 2.5 ತಿಂಗಳು ಕಳೆದರೂ ಅದರಲ್ಲಿನ ತಾಂತ್ರಿಕ ದೋಷಗಳು ಇನ್ನೂ ಸರಿಯಾಗದ ಹಿನ್ನೆಲೆಯಲ್ಲಿ ಜನರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇದನ್ನೂ ಓದಿ: 107 ಭಾರತೀಯರು ಸೇರಿ ಅಫ್ಘಾನಿಸ್ತಾನದಿಂದ 168 ಜನರ ಆಗಮನ

    ಜನರಿಂದ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಹಣಕಾಸು ಸಚಿವಾಲಯ ಸೋಮವಾರ ಸಲೀಲ್ ಪರೇಖ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಇದನ್ನೂ ಓದಿ: ಮಧ್ಯರಾತ್ರಿ ಆಪರೇಷನ್ ಇಂಡಿಯನ್ಸ್ – ಕಾಬೂಲ್‍ನಿಂದ ದೋಹಾ ಮೂಲಕ ದೆಹಲಿಗೆ ಭಾರತೀಯರು

    ಆದಾಯ ತೆರಿಗೆ ಸಲ್ಲಿಕೆಯ ನೂತನ ಇ-ಫೈಲಿಂಗ್ ಪೋರ್ಟಲ್ ಅಭಿವೃದ್ಧಿಪಡಿಸಿದ ಇಸ್ಫೋಸಿಸ್ ಸಂಸ್ಥೆಗೆ 2019ರ ಜನವರಿಯಿಂದ 2021ರ ಜೂನ್‍ವರೆಗೆ 164.5 ಕೋಟಿ ರೂ. ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿತ್ತು.

    ಈ ಸಂಬಂಧ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದ ಆರ್ಥಿಕ ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ಎಂಎಸ್‍ಪಿ, ಜಿಎಸ್‍ಟಿ, ಬಾಡಿಗೆ,ಪೋಸ್ಟೇಜ್   ಮತ್ತು ಯೋಜನೆ ವ್ಯವಸ್ಥಾಪನೆಯ ವೆಚ್ಚಕ್ಕೆ ಸಂಬಂಧಿಸಿದ 4,241.97 ಕೋಟಿ ರೂ. ವೆಚ್ಚದ ಸಮಗ್ರ ಇ-ಫೈಲಿಂಗ್ ಮತ್ತು ಸಿಪಿಸಿ-2.0 ಯೋಜನೆಯನ್ನು ಇಸ್ಫೋಸಿಸ್‍ಗೆ ವಹಿಸಲಾಗಿತ್ತು. ಈ ಪ್ರಕಾರ ಇದೇ ವರ್ಷದ ಜೂ.7ರಂದು ನೂತನ ಆದಾಯ ತೆರಿಗೆಯ ಇ-ಫೈಲಿಂಗ್ ಪೋರ್ಟಲ್  ಲೋಕಾರ್ಪಣೆಯಾಗಿತ್ತು.

    ಹೊಸ ತಲೆಮಾರಿನ ಆದಾಯ ತೆರಿಗೆ ಪಾವತಿ ಸಲ್ಲಿಸುವ ವೆಬ್‍ಸೈಟ್ ತೆರೆಯಲು 2019ರಲ್ಲಿ ಇನ್ಫೋಸಿಸ್ ಈ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಐಟಿ ರಿಟರ್ನ್ಸ್  ಸಲ್ಲಿಕೆಯಾದ 63 ದಿನಗಳ ಬಳಿಕ ರಿಫಂಡ್ ಆಗುವುದನ್ನು ತಪ್ಪಿಸಿ ಒಂದೇ ದಿನಕ್ಕೆ ರಿಟರ್ನ್ ಪ್ರಕ್ರಿಯೆ ಪೂರ್ಣಗೊಳಿಸಿ ಬಹಳ ಬೇಗ ಮರು ಪಾವತಿ ಮಾಡುವಂತೆ ವೆಬ್‍ಸೈಟ್ ಸಿದ್ಧಪಡಿಸಬೇಕೆಂಬ ಷರತ್ತು ವಿಧಿಸಲಾಗಿತ್ತು.

  • ನಕಲಿ ಕೋವಿಡ್ ಬಿಲ್ – ರಾಜ್ಯದ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಿಗೆ ಐಟಿ ಶಾಕ್

    ನಕಲಿ ಕೋವಿಡ್ ಬಿಲ್ – ರಾಜ್ಯದ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಿಗೆ ಐಟಿ ಶಾಕ್

    – ರಾಜ್ಯಾದ್ಯಂತ 107 ಕಡೆ ಐಟಿ ದಾಳಿ
    – ನರ್ಸಿಂಗ್ ಪ್ರವೇಶಾತಿ, ಕೋವಿಡ್ ಬಿಲ್ ಬಗ್ಗೆ ಅನುಮಾನ

    ಬೆಂಗಳೂರು: 2 ವರ್ಷದ ಬಳಿಕ ರಾಜ್ಯದಲ್ಲಿ ಅತಿ ದೊಡ್ಡ ಆದಾಯ ತೆರಿಗೆ ಇಲಾಖೆಯ ದಾಳಿ ನಡೆದಿದೆ. ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದಂತೆ ಒಟ್ಟು 107 ಕಡೆ ದಾಳಿಯಾಗಿದೆ.

    ರಾಜ್ಯದ 20 ಆಸ್ಪತ್ರೆಗಳು ಸೇರಿ 107 ಕಡೆ ಏಕ ಕಾಲದಲ್ಲಿ ದಾಳಿಯಾಗಿದೆ. ನರ್ಸಿಂಗ್ ಪ್ರವೇಶಾತಿ ಅಕ್ರಮ, ಕೊರೊನಾ ಚಿಕಿತ್ಸೆ ಸಮಯದಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಕೇಳಿ ಬಂದಿರುವ ಆಕಾಶ್ ಆಸ್ಪತ್ರೆ, ಸಪ್ತಗಿರಿ ಆಸ್ಪತ್ರೆ ಮೇಲೆ ಐಟಿ ದಾಳಿ ಮಾಡಲಾಗಿದೆ.

    ಆಕಾಶ್ ಆಸ್ಪತ್ರೆಯಲ್ಲಿ ಬೆಳಗ್ಗೆ 5:30ಕ್ಕೆ ದಾಳಿ ಮಾಡಿದ್ದು, ಎಂಟು ಇನ್ನೊವಾಕಾರಿನಲ್ಲಿ ಬಂದ25 ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಆಕಾಶ್ ಹಾಸ್ಪಿಟಲ್ ಮಾಲೀಕ ಮುನಿಯಪ್ಪ ಅವರ ಸಹಕಾರನಗರ ಮನೆ, ಕಚೇರಿ ಹಾಗೂ ಮಗ ಅಮರ್ ಮನೆ ಕಚೇರಿ ಮೇಲೆ ದಾಳಿ ಮಾಡಲಾಗಿದೆ.

    ಮಲ್ಲೇಶ್ವರಂನಲ್ಲಿರುವ ಸಪ್ತಗಿರಿ ಆಸ್ಪತ್ರೆ ಮಾಲೀಕ ದಯಾನಂದ್ ಮನೆ ಮೇಲೂ ದಾಳಿ ಮಾಡಲಾಗಿದೆ. ಮೊನ್ನೆಯಷ್ಟೆ ಆಕಾಶ್ ಆಸ್ಪತ್ರೆ ಮಾಲೀಕನ ಮಗ ಅಮರ್ ನಿಶ್ಚಿತಾರ್ಥ ನೆರವೇರಿತ್ತು. ಈಗ ಐಟಿ ಬಿಸಿ ಮುಟ್ಟಿದೆ. ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜು ಮೇಲೆ ಸಹ ಐಟಿ ದಾಳಿಯಾಗಿದೆ. ಸಪ್ತಗಿರಿ ಆಸ್ಪತ್ರೆ ಮಾಲೀಕ ದಯಾನಂದ್ ಒಡೆತನದಲ್ಲಿರುವ ಹೆಸರುಘಟ್ಟ ಮುಖ್ಯ ರಸ್ತೆಯಲ್ಲಿರುವ ಎಂಜಿನಿಯರಿಂಗ್ ಕಾಲೇಜ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.

    ನರ್ಸಿಂಗ್ ಪ್ರವೇಶಾತಿ, ಕೋವಿಡ್ ಬಿಲ್ಲಿಂಗ್ ವಿಚಾರದ ಅನುಮಾನದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿರುವ ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಕೋಟ್ಯಂತರ ರೂ. ಆದಾಯ ತೆರಿಗೆ ವಂಚನೆ ಮಾಡಿರುವ ಆರೋಪದಡಿಯಲ್ಲಿ ಆಸ್ಪತ್ರೆಗಳ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.

  • ಐಟಿಆರ್ ಸಲ್ಲಿಕೆ ಅವಧಿ ಡಿ.31ರವರೆಗೆ ವಿಸ್ತರಣೆ

    ಐಟಿಆರ್ ಸಲ್ಲಿಕೆ ಅವಧಿ ಡಿ.31ರವರೆಗೆ ವಿಸ್ತರಣೆ

    ನವದೆಹಲಿ: ಕೇಂದ್ರ ವಿತ್ತ ಸಚಿವಾಲಯ ಐಟಿಆರ್ ಸಲ್ಲಿಕೆಯ ಅವಧಿಯನ್ನ ಡಿಸೆಂಬರ್ 31, 2020ರವರೆಗೆ ವಿಸ್ತರಣೆ ಮಾಡಿದೆ. 2019-20 ಹಣಕಾಸಿನ ವರ್ಷದ ಇನ್‍ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಕೆಯ ಸಮಯವನ್ನ ವಿಸ್ತರಣೆ ಮಾಡಲಾಗಿದೆ.

    ಈ ಮೊದಲು ನವೆಂಬರ್ 30 ಐಟಿಆರ್ ಸಲ್ಲಿಕೆಯ ಅಂತಿಮ ದಿನವಾಗಿತ್ತು. ಈ ಹಿಂದೆ ಜುಲೈ 31ಕ್ಕೆ ಅಂತಿಮ ಗಡುವನ್ನ ಸರ್ಕಾರ ನವೆಂಬರ್ 30ಕ್ಕೂ ಮುಂದೂಡಿತ್ತು. ಕೊರೊನಾ ವೈರಸ್ ಸಂಕಷ್ಟ ಮತ್ತು ತೆರಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಅವಧಿ ವಿಸ್ತರಣೆ ಮಾಡಲಾಗುತ್ತಿದೆ ಎಂದು ವಿತ್ತ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.

    ನಾಲ್ಕನೇ ಬಾರಿಗೆ ಸರ್ಕಾರ ಐಟಿಆರ್ ಸಲ್ಲಿಕೆಯ ಅಂತಿಮ ದಿನಾಂಕವನ್ನ ಮುಂದೂಡುತ್ತಾ ಬಂದಿದೆ.

  • ಪಾರದರ್ಶಕ ತೆರಿಗೆ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

    ಪಾರದರ್ಶಕ ತೆರಿಗೆ ವೇದಿಕೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

    ನವದೆಹಲಿ: ಪಾರದರ್ಶಕ ತೆರಿಗೆ ಪಾವತಿಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಟ್ರಾನ್ಸಫರೆಂಟ್ ಟ್ಯಾಕ್ಸೇಷನ್ – ಹಾನರಿಂಗ್ ದ ಹಾನೆಸ್ಟ್ (ಪಾರದರ್ಶಕ ತೆರಿಗೆ – ತೆರಿಗೆದಾರರಿಗೆ ಗೌರವ) ಹೆಸರಿನ ವೇದಿಕೆ ಉದ್ಘಾಟಿಸಿದ್ದಾರೆ.

    ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಾಮಾಣಿಕ ತೆರಿಗೆ ಪಾವತಿಗೆ ಒತ್ತು ನೀಡಲು ಸಂಬಂಧ ಈ ವೇದಿಕೆ ಸೃಷ್ಟಿಸಲಾಗಿದೆ. ತೆರಿಗೆದಾರರು ದೇಶದ ಅಭಿವೃದ್ಧಿ ಪಯಣದಲ್ಲಿ ದೊಡ್ಡ ಹೆಜ್ಜೆ, ನಮ್ಮ ತೆರಿಗೆ ವ್ಯವಸ್ಥೆ ತಡೆರಹಿತ, ನೋವುರಹಿತ, ಮುಖರಹಿತವಾಗಿರಬೇಕು ಎಂಬುದು ನಮ್ಮ ಪ್ರಯತ್ನ ಎಂದರು.

    ದೇಶದ ಪ್ರಾಮಾಣಿಕ ತೆರಿಗೆ ಪಾವತಿದಾರನು ರಾಷ್ಟ್ರ ನಿರ್ಮಾಣದಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸುತ್ತಾನೆ. ದೇಶದ ಪ್ರಾಮಾಣಿಕ ತೆರಿಗೆದಾರರ ಜೀವನವು ಸುಲಭವಾದಾಗ ದೇಶದ ವ್ಯವಸ್ಥೆ ಸರಾಗವಾಗಲಿದೆ. ತೆರಿಗೆದಾರರಿಗೆ ಸುಲಭವಾಗುವ ನಿಟ್ಟಿನಲ್ಲಿ ಹೊಸ ವ್ಯವಸ್ಥೆ ಜಾರಿಗೆ ತಂದಿದೆ ಎಂದು ಮೋದಿ ಹೇಳಿದರು.

    ದೇಶದಲ್ಲಿ ಹಲವಾರು ದೇಶದಲ್ಲಿ ಹಲವಾರು ಮಹತ್ವದ ಬದಲಾವಣೆಗಳಾಗುತ್ತಿದ್ದು, ಪ್ರಾಮಾಣಿಕ ತೆರಿಗೆದಾರರಿಗೆ ಉತ್ತೇಜನೆ ನೀಡಲು ಹೊಸ ವೇದಿಕೆಯನ್ನ ಸೃಷ್ಟಿಸಲಾಗಿದೆ. ಇನ್ನು ಇಂದಿನಿಂದ ತೆರಿಗೆ ನೀತಿಯಲ್ಲಿ ಹೊಸ ಯಾತ್ರೆ ಆರಂಭವಾಗಲಿದೆ ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

  • ಹೊಸ ತೆರಿಗೆ ಪದ್ಧತಿ ಕಡ್ಡಾಯವೂ ಅಲ್ಲ – ತೆರಿಗೆ ಪಾವತಿದಾರರಿಗೆ ಎರಡು ಆಯ್ಕೆ ಕೊಟ್ಟ ನಮೋ ಸರ್ಕಾರ

    ಹೊಸ ತೆರಿಗೆ ಪದ್ಧತಿ ಕಡ್ಡಾಯವೂ ಅಲ್ಲ – ತೆರಿಗೆ ಪಾವತಿದಾರರಿಗೆ ಎರಡು ಆಯ್ಕೆ ಕೊಟ್ಟ ನಮೋ ಸರ್ಕಾರ

    ನವದೆಹಲಿ: ಇದು ಜನಸಾಮಾನ್ಯರ ಬಜೆಟ್ ಎನ್ನುತ್ತಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಯವ್ಯಯ ಮಂಡಿಸಿದ್ದಾರೆ. 2 ಗಂಟೆ 40 ನಿಮಿಷಗಳ ಸುದೀರ್ಘ ಬಜೆಟ್ ಭಾಷಣದಲ್ಲಿ ಮೇಲ್ನೋಟಕ್ಕೆ ಹಲವು ವರಗಳನ್ನು ಘೋಷಣೆ ಮಾಡಿದರು. ಆದರೆ ಎಲ್ಲಾ ಮುಗಿದ ಮೇಲೆ ಬಜೆಟ್ ಆಳಕ್ಕೆ ಇಳಿದಾಗ ಅಸಲಿಯತ್ತು ಬಯಲಾಯ್ತು. ಮಧ್ಯಮವರ್ಗಕ್ಕೆ ಸೀತಮ್ಮ ವರಗಳನ್ನು ಕೊಟ್ಟಂತೆ ಕೊಟ್ಟು ಹಾಗೆಯೇ ಕಸಿದುಕೊಂಡಿದ್ದಾರೆ. ಇದ್ದುದರಲ್ಲಿ ಕೃಷಿ ಮತ್ತು ಗ್ರಾಮೀಣಾ ಭಾಗಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

    ವಿತ್ತಿಯ ಕೊರತೆ ನೀಗಿಸಲು ಸರ್ಕಾರಿ ಸ್ವಾಮ್ಯದ ಎಲ್‍ಐಸಿಯಂತಹ ಕಂಪನಿಗಳಲ್ಲಿ ಹೂಡಿಕೆ ಹಿಂತೆಗೆತಕ್ಕೆ ಅವಕಾಶ ನೀಡಿದೆ. ಏರಿಕೆ ಕಾಣುತ್ತಿರುವ ಬಂಗಾರ, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಯಾವುದೇ ಮುನ್ಸೂಚನೆ ನೀಡಿಲ್ಲ. ರಿಯಲ್ ಎಸ್ಟೇಟ್, ಆಟೋ ಮೊಬೈಲ್ ರಂಗಕ್ಕೆ ಹೆಚ್ಚು ಒತ್ತು ನೀಡಿಲ್ಲ. ಭಾಷಣದ ಮಧ್ಯೆ ಹಲವು ಬಾರಿ ತಮಿಳುಕವಿ ತಿರುವಳ್ಳುವರ್, ಅವ್ವಯ್ಯಾರ್, ಕವಿರತ್ನ ಕಾಳಿದಾಸನ ಶ್ಲೋಕ, ಕವಿತೆ, ಶಾಯಿರಿಗಳನ್ನು ಉಲ್ಲೇಖಿಸಿದ ನಿರ್ಮಲಾ ಕವಿ ಹೃದಯಿಯೂ ಆದರು. ಮೋದಿಯ ಆಡಳಿತವನ್ನು ಹೊಗಳಿ ಅಟ್ಟಕ್ಕೆ ಏರಿಸಿದರು.

    ಆದಾಯ ತೆರಿಗೆಯಲ್ಲಿ ಹಳೆ ಪದ್ಧತಿಯನ್ನು ಮುಂದುವರೆಸುತ್ತಲೇ, ಹೊಸ ವಿಧಾನವನ್ನು ಪರಿಚಯ ಮಾಡಿರೋ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಿರೋ ನಿಮಗೆ ಬಿಟ್ಟಿದ್ದು ಎಂದಿದ್ದಾರೆ. ಹೊಸ ತೆರಿಗೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದು ಐಚ್ಛಿಕ ಎಂದಿದ್ದಾರೆ. ತೆರಿಗೆ ವಿನಾಯಿತಿಗಳನ್ನು ಹೊಂದಬೇಕೋ ಅಥವಾ ಬೇಡವೋ? ಎನ್ನುವುದು ವೇತನದಾರನ ನಿರ್ಣಯದ ಮೇಲೆ ಅವಲಂಬಿತವಾಗಿರುತ್ತದೆ. ಹೊಸ ಆದಾಯ ತೆರಿಗೆ ವಿಧಾನವನ್ನು ನೀವು ಬಯಸಿದಲ್ಲಿ 80 ಸಿ ಅಡಿ ಬರುವ ವಿನಾಯಿತಿಗಳು ನಿಮಗೆ ಸಿಗಲ್ಲ.

    ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?
    * 2.5 ಲಕ್ಷದಿಂದ 5 ಲಕ್ಷದವರೆಗೆ ಶೇ.5 ತೆರಿಗೆ
    * 5 ಲಕ್ಷ ರೂ.ಯಿಂದ 7.5 ಲಕ್ಷ ರೂ.ವರೆಗೆ ತೆರಿಗೆ ಶೇ.20ರ ಬದಲಾಗಿ ಶೇ.10 ಅನ್ವಯವಾಗುವುದು
    * 7.5 ಲಕ್ಷ ನಿಂದ 10 ಲಕ್ಷವರೆಗೆ ಶೇ.20ರ ಬದಲಾಗಿ ಶೇ.15 ಅನ್ವಯ
    * 10 ಲಕ್ಷದಿಂದ 12.5 ಲಕ್ಷಕ್ಕೆ ತೆರಿಗೆ ಶೇ.30ರ ಬದಲಾಗಿ ಶೇ.20 ಅನ್ವಯ
    * 12.5 ಲಕ್ಷದಿಂದ 15 ಲಕ್ಷದವರೆಗೆ ಶೇ.30ರ ಬದಲಾಗಿ ಶೇ. 25 ಅನ್ವಯ
    * 15 ಲಕ್ಷಕ್ಕಿಂತ ಅಧಿಕ ಆದಾಯಕ್ಕೆ ಶೇ.30 ಅನ್ವಯ
    * ಹೊಸ ತೆರಿಗೆಯಿಂದಾಗಿ 15 ಲಕ್ಷ ಅಧಿಕ ಆದಾಯ ಹೊಂದಿದ ತೆರಿಗೆದಾರನಿಗೆ 78 ಸಾವಿರ ರೂ. ಲಾಭವಾಗಲಿದೆ
    * ಹೊಸ ವ್ಯವಸ್ಥೆಯಲ್ಲಿ ವಿವಿಧ 70 ಕಡಿತಗಳನ್ನು ತೆಗೆದು ಹಾಕಲಾಗಿದೆ. ಒಂದು ವೇಳೆ ತೆರಿಗೆದಾರ ಬಯಸಿದ್ರೆ ಹಳೆಯ ವ್ಯವಸ್ಥೆಯ ಲಾಭ ಪಡೆಯಬಹುದು.
    * ಡೈರೆಕ್ಟ್ ಟ್ಯಾಕ್ಸ್ (ನೇರ ತೆರಿಗೆ) ಹೊಂದಿರುವ ವಿವಾದಗಳನ್ನು ಶಮನಗೊಳಿಸುವದಕ್ಕಾಗಿ `ವಿವಾದ ಸೇ ವಿಶ್ವಾಸ್ ಯೋಜನೆ’ಯಲ್ಲಿ ಬಡ್ಡಿ ಮತ್ತು ದಂಡದಿಂದ ವಿನಾಯ್ತಿ

    * ಕಂಪನಿಯ ಡಿವಿಡೆಂಟ್ ಮೇಲಿನ ಲಾಭಾಂಶ ತೆರಿಗೆ ಕಂಪನಿಗಳ ಬದಲಾಗಿ ಶೇರುದಾರನಿಗೆ ಅನ್ವಯವಾಗಲಿದೆ. ಲಾಭಾಂಶ ತೆರಿಗೆಯನ್ನು ಶೇರುದಾರ ಪಾವತಿಸೋದು.
    * ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸುವ ಅರ್ಜಿದಾರನಿಗೆ ಕಡಿಮೆ ಸಮಯದಲ್ಲಿ ಪ್ಯಾನ್ ಕಾರ್ಡ್ ನೀಡಲಾಗುವುದು.

    80 ಸಿ ಶಾಕ್: ಹೊಸ ತೆರಿಗೆ ಪದ್ಧತಿಯನ್ನು ನೀವು ಆಯ್ಕೆ ಮಾಡಿಕೊಂಡ್ರೆ ನಿಮಗೆ 80 ಸಿ ಅನ್ವಯ ಸಿಗಬೇಕಾದ ಯಾವುದೇ ವಿನಾಯಿತಿಗಳು ಸಿಗಲ್ಲ. ಯಾವುದಕ್ಕೆ ತೆರಿಗೆ ವಿನಾಯಿತಿ ಸಿಗಲ್ಲ ಎಂಬುವುದು ಈ ಕೆಳಗಿನಂತಿದೆ.

    * ಮನೆ ಬಾಡಿಗೆ ಭತ್ಯೆಗೆ ತೆರಿಗೆ ವಿನಾಯಿತಿ ಇರಲ್ಲ.
    * ಟಿಎ, ಡಿಎಗಳಿಗೆ ತೆರಿಗೆ ವಿನಾಯಿತಿ ಇರಲ್ಲ.
    * ವಿಕಲಚೇತನರಿಗೆ ಸಿಗುತ್ತಿದ್ದ ತೆರಿಗೆ ವಿನಾಯಿತಿ ಇರಲ್ಲ.
    * 50 ಸಾವಿರ ರೂ. ಸ್ಟಾಂಡರ್ಡ್ ಡಿಡಕ್ಷನ್‍ಗೆ ತೆರಿಗೆ ವಿನಾಯಿತಿ ಇರಲ್ಲ.
    * ಕುಟುಂಬ ಪಿಂಚಣಿ ಅಡಿ 15 ಸಾವಿರ ಡಿಡಕ್ಷನ್‍ಗೆ ಅವಕಾಶ ಇರಲ್ಲ.
    * ಜೀವವಿಮೆಗೆ ತೆರಿಗೆ ವಿನಾಯಿತಿ ಇರಲ್ಲ.
    * ಸುಕನ್ಯ ಸಮೃದ್ಧಿ ಯೋಜನೆ ತೆರಿಗೆ ವಿನಾಯಿತಿ ಇರಲ್ಲ.
    * ಪಿಪಿಎಫ್‍ಗೆ ತೆರಿಗೆ ವಿನಾಯಿತಿ ಇರಲ್ಲ.
    * ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗೆ ತೆರಿಗೆ ವಿನಾಯಿತಿ ಇರಲ್ಲ.
    * ನಿಶ್ಚಿತ ಠೇವಣಿಗೆ ತೆರಿಗೆ ವಿನಾಯಿತಿ ಇರಲ್ಲ.
    * ಹಿರಿಯ ನಾಗರಿಕರ ಉಳಿತಾಯಕ್ಕೆ ತೆರಿಗೆ ವಿನಾಯಿತಿ ಇರಲ್ಲ.
    * ಮನೆ ಸಾಲಗಳಿಗೆ ತೆರಿಗೆ ವಿನಾಯಿತಿ ಇರಲ್ಲ.
    * ಸಂಸ್ಥೆಗಳಿಗೆ ನೀಡುವ ಡೊನೇಷನ್‍ಗೆ ತೆರಿಗೆ ವಿನಾಯಿತಿ ಇರಲ್ಲ.

    ಯಾವುದೆಲ್ಲ ಏರಿಕೆ?
    * ಪೆಟ್ರೋಲ್, ಡೀಸೆಲ್, ಚಿನ್ನ ದರ ಏರಿಕೆಯಾಗಲಿದೆ
    * ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ದುಪ್ಪಟ್ಟಾಗಿದೆ.
    * ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲೆನ ತೆರಿಗೆ ಏರಿಕೆ ಮಾಡಲಾಗಿದೆ.
    * ಚೀನಾ ಸೆರಾಮಿಕ್, ಜೇಡಿ ಮಣ್ಣಿನಿಂದ ತಯಾರಿಸಿದ ಗೃಹ ಉಪಯೋಗಿ ವಸ್ತುಗಳ ಮೇಲಿನ ತೆರಿಗೆ ಏರಿಕೆಯಾಗಿದೆ.
    * ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ಶೇ.10ರಿಂದ ಶೆ. 20ರಷ್ಟು ಏರಿಕೆಯಾಗಿದೆ.
    * ಪಿಂಗಾಣಿ ಕಪ್, ಮಗ್, ತಾಮ್ರ, ಸ್ಟೀಲ್ ಪಾತ್ರೆಗಳ ಮೇಲಿನ ತೆರಿಗೆ ಏರಿಕೆಯಾಗಿದೆ.
    * ವಾಣಿಜ್ಯ ವಾಹನಗಳ ಬಿಡಿ ಭಾಗಗಳ ಮೇಲಿನ ತೆರಿಗೆ ಹಾಗೂ ವಾಣಿಜ್ಯ ವಾಹನಗಳ ಮೇಲಿನ ತೆರಿಗೆಯಲ್ಲಿ ಏರಿಕೆ.
    * ಆಟೋ, ಬೈಕ್, ಕಾರು ದುಬಾರಿ
    * ಚಪ್ಪಲಿ, ಫರ್ನಿಚರ್ ದುಬಾರಿ
    * ಪೀಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳ ದರ ಏರಿಕೆಯಾಗಿದೆ
    * ಕೆನೆ ತೆಗೆದ ಹಾಲಿನ ಉತ್ಪನ್ನಗಳು ಇನ್ಮುಂದೆ ಮತ್ತಷ್ಟು ತುಟ್ಟಿಯಾಗಲಿವೆ
    * ಸಕ್ಕರೆ ಬೆಲೆ ಏರಿಕೆಯಾಗಿದೆ
    * ಸೋಯಾ ಫೈಬರ್ ಉತ್ಪನ್ನಗಳ ದರ ಏರಿಕೆಯಾಗಿದೆ
    * ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆ ಏರಿಕೆ ಆಗಿರೋದ್ರಿಂದ ಆಸ್ಪತ್ರೆ ಖರ್ಚು ಹೆಚ್ಚಲಿದೆ.

    ಇಳಿಕೆ ಕಂಡಿದ್ದು ಯಾವುದು?:
    * ನ್ಯೂಸ್ ಪ್ರಿಂಟ್‍ಗಳ ದರ ಇಳಿಕೆ
    * ಹಗುರ ಕೋಟೆಡ್ ಕಾಗಗದ ದರ ಇಳಿಕೆ

  • ಆದಾಯ ತೆರಿಗೆಯಲ್ಲಿ ಭಾರೀ ಕಡಿತ

    ಆದಾಯ ತೆರಿಗೆಯಲ್ಲಿ ಭಾರೀ ಕಡಿತ

    ನವದೆಹಲಿ: ಬಿಜೆಪಿ ಸರ್ಕಾರದ ಎರಡನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಆದಾಯ ತೆರಿಗೆಯಲ್ಲಿ ಭಾರೀ ಕಡಿತ ನೀಡಿದ್ದಾರೆ. 5 ಲಕ್ಷದವರಿಗೆ ತೆರಿಗೆ ವಿನಾಯ್ತಿ ನೀಡಲಾಗಿದ್ದು, ಬದಲಾಗ ತೆರಿಗೆ ಅನ್ವಯ 15ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವ ತೆರಿಗೆ ಪಾವತಿದಾರನಿಗೆ 78 ಸಾವಿರ ರೂ. ಉಳಿತಾಯವಾಗಲಿದೆ.

    ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?

    *2.5 ಲಕ್ಷದಿಂದ 5 ಲಕ್ಷದವರೆಗೆ ಶೇ.5 ತೆರಿಗೆ
    * 5 ಲಕ್ಷ ರೂ.ಯಿಂದ 7.5 ಲಕ್ಷ ರೂ.ವರೆಗೆ ತೆರಿಗೆ ಶೇ.20ರ ಬದಲಾಗಿ ಶೇ.10 ಅನ್ವಯವಾಗುವುದು
    * 7.5 ಲಕ್ಷ ನಿಂದ 10 ಲಕ್ಷವರೆಗೆ ಶೇ.20ರ ಬದಲಾಗಿ ಶೇ.15 ಅನ್ವಯ
    * 10 ಲಕ್ಷದಿಂದ 12.5 ಲಕ್ಷಕ್ಕೆ ತೆರಿಗೆ ಶೇ.30ರ ಬದಲಾಗಿ ಶೇ.20 ಅನ್ವಯ
    * 12.5 ಲಕ್ಷದಿಂದ 15 ಲಕ್ಷದವರೆಗೆ ಶೇ.30ರ ಬದಲಾಗಿ ಶೇ. 25 ಅನ್ವಯ

    * 15 ಲಕ್ಷಕ್ಕಿಂತ ಅಧಿಕ ಆದಾಯಕ್ಕೆ ಶೇ.30 ಅನ್ವಯ
    * ಹೊಸ ತೆರಿಗೆಯಿಂದಾಗಿ 15 ಲಕ್ಷ ಅಧಿಕ ಆದಾಯ ಹೊಂದಿದ ತೆರಿಗೆದಾರನಿಗೆ 78 ಸಾವಿರ ರೂ. ಲಾಭವಾಗಲಿದೆ
    * ಹೊಸ ವ್ಯವಸ್ಥೆಯಲ್ಲಿ ವಿವಿಧ 70 ಕಡಿತಗಳನ್ನು ತೆಗೆದು ಹಾಕಲಾಗಿದೆ. ಒಂದು ವೇಳೆ ತೆರಿಗೆದಾರ ಬಯಸಿದ್ರೆ ಹಳೆಯ ವ್ಯವಸ್ಥೆಯ ಲಾಭ ಪಡೆಯಬಹುದು.
    * ಡೈರೆಕ್ಟ್ ಟ್ಯಾಕ್ಸ್ (ನೇರ ತೆರಿಗೆ) ಹೊಂದಿರುವ ವಿವಾದಗಳನ್ನು ಶಮನಗೊಳಿಸುವದಕ್ಕಾಗಿ ‘ವಿವಾದ ಸೇ ವಿಶ್ವಾಸ್ ಯೋಜನೆ’ಯಲ್ಲಿ ಬಡ್ಡಿ ಮತ್ತು ದಂಡದಿಂದ ವಿನಾಯ್ತಿ
    * ಕಂಪನಿಯ ಡಿವಿಡೆಂಟ್ ಮೇಲಿನ ಲಾಭಾಂಶ ತೆರಿಗೆ ಕಂಪನಿಗಳ ಬದಲಾಗಿ ಶೇರುದಾರನಿಗೆ ಅನ್ವಯವಾಗಲಿದೆ. ಲಾಭಾಂಶ ತೆರಿಗೆಯನ್ನು ಶೇರುದಾರ ಪಾವತಿಸೋದು.

    * ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸುವ ಅರ್ಜಿದಾರನಿಗೆ ಕಡಿಮೆ ಸಮಯದಲ್ಲಿ ಪ್ಯಾನ್ ಕಾರ್ಡ್ ನೀಡಲಾಗುವುದು.

  • ರಶ್ಮಿಕಾಗೂ ರಾಜಕೀಯ ನಾಯಕರಿಗೂ ಇದೆಯೇ ಹಣಕಾಸಿನ ನಂಟು?

    ರಶ್ಮಿಕಾಗೂ ರಾಜಕೀಯ ನಾಯಕರಿಗೂ ಇದೆಯೇ ಹಣಕಾಸಿನ ನಂಟು?

    – 2.5 ಕೋಟಿ ರೂ. ಮೌಲ್ಯದ ಜಾಗ ಖರೀದಿ
    – ರಶ್ಮಿಕಾ ಹೆಸರಿನಲ್ಲಿ ಬೇನಾಮಿಯಾಗಿ ಹಣ ಹೂಡಿಕೆ?

    ಬೆಂಗಳೂರು/ಮಡಿಕೇರಿ: ನಟಿ ರಶ್ಮಿಕಾ ಮಂದಣ್ಣ ಅವರಿಗೂ ರಾಜಕೀಯ ವ್ಯಕ್ತಿಗಳಿಗೂ ಹಣಕಾಸಿನ ನಂಟು ಇದೆಯೇ ಹೀಗೊಂದು ಅನುಮಾನ ಈಗ ಎದ್ದಿದೆ.

    ಈ ಹಿಂದೆ ರಾಜ್ಯದ ಪ್ರಭಾವಿ ರಾಜಕೀಯ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ದಾಳಿಯ ತನಿಖೆಯ ವೇಳೆ ಈ ವ್ಯಕ್ತಿಗಳು ರಶ್ಮಿಕಾ ಮಂದಣ್ಣ ಅವರ ಹೆಸರಿನಲ್ಲಿ ಬೇನಾಮಿಯಾಗಿ ಹಣವನ್ನು ಹೂಡಿಕೆ ಮಾಡಿದ್ದ ಬಗ್ಗೆ ಕೆಲ ವಿಚಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನುವ ಅನುಮಾನ ಈಗ ವ್ಯಕ್ತವಾಗಿದೆ.

    ಇಂದು ಬೆಳಗ್ಗೆ 7 ಗಂಟೆಯ ವೇಳೆಗೆ ಮೂರು ಕಾರುಗಳಲ್ಲಿ ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ 10 ಐಟಿ ಅಧಿಕಾರಿಗಳು ಆಗಮಿಸಿ ರಶ್ಮಿಕಾ ಮತ್ತು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಆಸ್ತಿ ಮತ್ತು ಆದಾಯಕ್ಕೆ ಸಂಬಂಧಿಸಿದಂತೆ ಲೆಕ್ಕ ಪತ್ರವನ್ನು ಪರಿಶೀಲನೆ ನಡೆಸುತ್ತಿದ್ದಾರೆ. 2016ರ ಡಿಸೆಂಬರ್ 30 ರಂದು ಬಿಡುಗಡೆಯಾದ ‘ಕಿರಿಕ್ ಪಾರ್ಟಿ’ ಸಿನಿಮಾದ ಬಳಿಕ ಮನೆ ಮಾತಾಗಿರುವ ರಶ್ಮಿಕಾ ಮಂದಣ್ಣ ಆದಾಯ ಕೆಲ ವರ್ಷಗಳಿಂದ ಗಣನೀಯವಾಗಿ ಹೆಚ್ಚಳವಾಗಿದೆ. ಇದನ್ನೂ ಓದಿ: ನನ್ನ ಅಕೌಂಟ್‍ನಲ್ಲಿ ದುಡ್ಡೇ ಇಲ್ಲ ಎಂದಿದ್ದ 5 ದಿನದಲ್ಲೇ ರಶ್ಮಿಕಾಗೆ ಐಟಿ ಶಾಕ್

    ತಂದೆ ಕಾಫಿ ಉದ್ಯಮಿ:
    ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಹೆಸರಿನಲ್ಲಿ ವಿರಾಜಪೇಟೆಯಲ್ಲಿ ಸೆರಿನಿಟಿ ಹಾಲ್ ಮತ್ತು ವಾಣಿಜ್ಯ ಸಂಕೀರ್ಣವಿದೆ. ವಿರಾಜಪೇಟೆ ಸುತ್ತಮುತ್ತ 50 ಎಕರೆ ಕಾಫಿ ತೋಟವನ್ನು ಮದನ್ ಮಂದಣ್ಣ ಹೊಂದಿದ್ದಾರೆ. ಅಷ್ಟೇ ಅಲ್ಲದೇ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ ಸುಮಾರು 2.5 ಕೋಟಿ ರೂ. ಮೌಲ್ಯದ ಐದೂವರೆ ಎಕರೆ ಜಾಗ ಖರೀದಿ ಮಾಡಿದ್ದಾರೆ. ತಂದೆಯ ಹೆಸರಿನಲ್ಲಿ ರಶ್ಮಿಕಾ ಜಾಗ ಖರೀದಿ ಮಾಡಿದ್ದು ಇನ್ನು ಪತ್ರ ವ್ಯವಹಾರ ಮುಗಿದಿಲ್ಲ ಎನ್ನುವ ವಿಚಾರ ಈಗ ಲಭ್ಯವಾಗಿದೆ.

    ರಶ್ಮಿಕಾ ಕುಟುಂಬ ಇತ್ತೀಚೆಗೆ ವಿರಾಜಪೇಟೆ ಗೋಣಿಕೊಪ್ಪದಲ್ಲಿ 3 ಎಕರೆ ಜಾಗ ಖರೀದಿಸಿ ರೆಸಿಡೆನ್ಶಿಯಲ್ ಸ್ಕೂಲ್ ಪ್ರಾರಂಭ ಮಾಡುವ ಉದ್ದೇಶ ಹೊಂದಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ವಿರಾಜಪೇಟೆ ಸುತ್ತಮುತ್ತ ಸುಮಾರು 50 ಎಕರೆಯಷ್ಟು ಕಾಫಿ ತೋಟ ಖರೀದಿಯ ಬಗ್ಗೆಯೂ ಐಟಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಹಲವು ವ್ಯವಹಾರಗಳಲ್ಲಿ ಹೂಡಿಕೆಯನ್ನು ಮಾಡಿದ್ದಾರೆ.

    ಮೂರು ತಿಂಗಳ ಹಿಂದೆ ರಶ್ಮಿಕಾ ಕೋಟ್ಯಂತರ ರೂ. ಬೆಲೆ ಬಾಳುವ ಕಾರು ಖರೀದಿ ಮಾಡಿದ್ದಾರೆ. ಜೊತೆಗೆ ಭೂಮಿ ಖರೀದಿ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲದೇ ರಶ್ಮಿಕಾ ನಗದು ರೂಪದಲ್ಲಿ ಸಂಭಾವನೆ ಪಡೆದಿರುವ ಕಾರಣ ತೆರಿಗೆ ಪಾವತಿಸಿಲ್ಲ ಎನ್ನಲಾಗುತ್ತಿದೆ. ಈ ಎಲ್ಲಾ ಮಾಹಿತಿಯ ಆಧಾರದ ಮೇರೆಗೆ ಐಟಿ ಅಧಿಕಾರಿಗಳು ರಶ್ಮಿಕಾ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಮದನ್ ಮಂದಣ್ಣ ಕಾಫಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು ರಶ್ಮಿಕಾ ಅವರ ಎಲ್ಲ ಆಸ್ತಿಯೂ ತಂದೆ ಮದನ್ ಮಂದಣ್ಣ ಹೆಸರಲ್ಲಿದೆ ಎಂದು ಹೇಳಲಾಗುತ್ತಿದೆ. ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಬಹುಬೇಡಿಕೆ ನಟಿಯಾಗಿರುವ ರಶ್ಮಿಕಾ ಈಗ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯಾಗಿದ್ದು ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಸಿನಿಮಾಗಳಿಗೆ ಸಹಿ ಹಾಕಿರುವ ದಾಖಲೆ ಪತ್ರಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

    ಕಾಂಗ್ರೆಸ್ ನಾಯಕ:
    ರಶ್ಮಿಕಾ ತಂದೆ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಮಾಜಿ ಸಚಿವರಾದ ಡಿಕೆ ಶಿವಕುಮಾರ್ ಮತ್ತು ಕೆಜೆ ಜಾರ್ಜ್ ಅವರ ಜೊತೆ ಅವರು ಉತ್ತಮ ಸಂಬಂಧ ಹೊಂದಿದ್ದ ಮದನ್ ಮಂದಣ್ಣ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿ ವಿರಾಜಪೇಟೆಯ ಪಟ್ಟಣ ಪಂಚಾಯತ್ ಸದಸ್ಯರಾಗಿ ಆಯ್ಕೆ ಆಗಿದ್ದರು.

    ಶೂಟಿಂಗ್ ನಲ್ಲಿರುವ ರಶ್ಮಿಕಾ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗ ಕೇಳಿ ಬಂದಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಬಳಿಕ ದಾಳಿ ಕುರಿತ ಸತ್ಯಾಸತ್ಯತೆ ಹೊರಬರಲಿದೆ.