Tag: ಆದಾಯ ತೆರಿಗೆ

  • ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

    ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

    ಬೆಂಗಳೂರು: ಜುಲೈ 1 ರಿಂದ ಪಾನ್ ಕಾರ್ಡ್ ಗೆ ಆಧಾರ್ ಜೋಡಣೆ ಕಡ್ಡಾಯವಾಗಿದೆ. ಕಡ್ಡಾಯಗೊಂಡ ಕಾರಣ ಹೀಗಾಗಿ ಬಹಳಷ್ಟು ಜನ ಹೇಗಪ್ಪಾ  ಆಧಾರ್ ಜೋಡಿಸುವುದು ಎನ್ನುವ ಗೊಂದಲದಲ್ಲಿದ್ದಾರೆ. ಆದರೆ ಈ ವಿಚಾರಕ್ಕೆ ನೀವು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಕೇವಲ ಒಂದೇ ನಿಮಿಷದ ಒಳಗಡೆ ಆನ್‍ಲೈನ್ ಮೂಲಕ ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡಿಗೆ ಜೋಡಿಸಬಹುದು. ಹೇಗೆ ಜೋಡಣೆ ಮಾಡಬಹುದು ಎನ್ನುವ ಸರಳ ವಿವರಣೆಯನ್ನು ಇಲ್ಲಿ ನೀಡಲಾಗಿದೆ.

    ಸ್ಟೆಪ್ 1: ಮೊದಲು ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ https://www.incometaxindiaefiling.gov.in/   ಪೋರ್ಟಲ್ ಹೋಗಿ.

    ಸ್ಟೆಪ್ 2: ವೆಬ್‍ಸೈಟ್ ಓಪನ್ ಆಗುತ್ತಿದ್ದಂತೆ ಅದರ ಹೋಮ್ ಪೇಜ್‍ನ ಎಡಗಡೆ ಸರ್ವಿಸಸ್ ಎನ್ನುವ ವಿಭಾಗ ಇದೆ. ಇದರಲ್ಲಿ ಮೇಲುಗಡೆ ಲಿಂಕ್ ಆಧಾರ್ ಬ್ಲಿಂಕ್ ಆಗುತ್ತಿರುತ್ತದೆ. ಈ ಲಿಂಕ್  ಕ್ಲಿಕ್ ಮಾಡಿ.

    ಸ್ಟೆಪ್ 3: ಲಿಂಕ್ ಆಧಾರ್ ಕ್ಲಿಕ್ ಮಾಡಿದ ಕೂಡಲೇ ಒಂದು ಪ್ರತ್ಯೇಕ ಪೇಜ್ ಓಪನ್ ಆಗುತ್ತದೆ. ಇದರಲ್ಲಿ ನೀವು ಪಾನ್ ನಂಬರ್, ಆಧಾರ್ ನಂಬರ್, ಹೆಸರು ಟೈಪಿಸಬೇಕು. ಇದಾದ ಬಳಿಕ ಅಲ್ಲೇ ನೀಡಲಾಗಿರುವ ಕ್ಯಾಪ್ಚಾ ಕೋಡ್ ಟೈಪ್ ಮಾಡಬೇಕು. ಒಂದು ವೇಳೆ ಇಮೇಜ್ ಕ್ಯಾಪ್ಚಾ ಕೋಡ್ ನೋಡಲು ಸಾಧ್ಯವಿಲ್ಲದಿದ್ದರೆ ಒಟಿಪಿ(ಒನ್ ಟೈಮ್ ಪಾಸ್‍ವರ್ಡ್) ಆಯ್ಕೆಯೂ ಇದೆ. ಸೇರಿಸಬೇಕಾದ ಎಲ್ಲ ಮಾಹಿತಿಗಳನ್ನು ಟೈಪಿಸಿದ ಬಳಿಕ ಕೆಳಗಡೆ ಹಸಿರು ಬಾಕ್ಸ್ ನಲ್ಲಿರುವ ಲಿಂಕ್ ಆಧಾರ್ ಕ್ಲಿಕ್ ಮಾಡಬೇಕು. ನೀವು ಟೈಪಿಸಿದ ಆಧಾರ್ ಮಾಹಿತಿ ಮತ್ತು ಪಾನ್ ನಂಬರ್‍ಗಳು ಸರಿಯಾಗಿ ಇದ್ದರೆ ನಿಮ್ಮ ಈ ಜೋಡಣಾ ಪ್ರಕ್ರಿಯೆ ಯಶಸ್ವಿಯಾಗಿದೆ ಎನ್ನುವ ಸಂದೇಶ ಸ್ಕ್ರೀನ್‍ನಲ್ಲಿ ಮರುಕ್ಷಣವೇ ಬರುತ್ತದೆ. ಒಂದು ವೇಳೆ ಈ ಸಂದೇಶ ಬಾರದೇ ಇದ್ದಲ್ಲಿ ನೀವು ತಪ್ಪು ಮಾಹಿತಿ ನಮೂದಿಸಿದ್ದೀರಿ ಎಂದು ತಿಳಿದುಕೊಳ್ಳಬಹುದು.

     

    ಮೊಬೈಲ್ ಎಸ್‍ಎಂಎಸ್ ಮೂಲಕ ಜೋಡಣೆ ಹೇಗೆ?
    ಆಧಾರ್ ಜೋಡಣೆಯನ್ನು ಮೊಬೈಲ್ ಮೂಲಕ ಮಾಡಲು ಸಾಧ್ಯವಿದೆ. ನಿಮ್ಮ ಮೊಬೈಲ್ ನಿಂದ 56768 ಅಥವಾ 56161 ಎಸ್‍ಎಂಎಸ್ ಕಳುಹಿಸಿ ಜೋಡಣೆ ಮಾಡಬಹುದು. ನಿಮ್ಮ ಸಂದೇಶ ಈ ಮಾದರಿಯಲ್ಲಿ ಇರಬೇಕು.

    UIDPAN<SPACE><12 digit Aadhaar><Space><10 digit PAN>

    ಉದಾಹರಣೆ: UIDPAN 234567890123 ABCDE1234F

    ಜೋಡಣೆ ಯಾಕೆ ಆಗಲ್ಲ?
    ಪಾನ್ ಕಾರ್ಡ್ ಗೆ ನೀಡಿದ ಮಾಹಿತಿ ಮತ್ತು ಆಧಾರ್ ಕಾರ್ಡ್ ಪಡೆಯುವ ವೇಳೆ ನೀಡಿದ ಮಾಹಿತಿ ಸರಿಯಾಗಿ ಇಲ್ಲದೇ ಇದ್ದರೆ ಈ ಜೋಡಣೆ ಪ್ರಕ್ರಿಯೆ ಯಶಸ್ವಿಯಾಗುವುದಿಲ್ಲ. ವಿಶೇಷವಾಗಿ ಹೆಸರು ತಪ್ಪಾಗಿ ಮುದ್ರಣವಾಗಿದ್ದರೆ, ಇನ್ಶಿಯಲ್ ಸರಿಯಾಗಿ ಹೊಂದಾಣಿಕೆ ಆಗದೇ ಇದ್ದರೆ ಪಾನ್ ಕಾರ್ಡಿಗೆ ಆಧಾರ್ ಜೋಡಣೆಯಾಗುವುದಿಲ್ಲ.

    ಆಧಾರ್ ಕಡ್ಡಾಯ ಮಾಡಿದ್ದು ಯಾಕೆ?
    ಬಹಳಷ್ಟು ಜನ ತೆರಿಗೆಯನ್ನು ವಂಚಿಸಲು ಬೇರೆ ಬೇರೆ ಪಾನ್ ಕಾರ್ಡ್ ಬಳಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ತೆರಿಗೆಯನ್ನು ವಂಚನೆ ಮಾಡುವ ಕುಳಗಳನ್ನು ನಿಯಂತ್ರಿಸಲು ಪಾನ್ ಕಾರ್ಡಿಗೆ ಆಧಾರ್ ಜೋಡಣೆ ಸಂಬಂಧ ಆದಾಯ ತೆರಿಗೆ ಕಾಯ್ದೆಯ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಜುಲೈ 1 ರಿಂದ ಜಾರಿಗೆ ಬರುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.

    ಇದನ್ನೂ ಓದಿ: ಓದ್ಲೇಬೇಕು, ಜುಲೈ 1ರಿಂದ ನಿಮ್ಮ ಜೀವನದ ಮೇಲೆ ಪರಿಣಾಮ ಬೀಳುವ ಈ 11 ಕ್ಷೇತ್ರಗಳಲ್ಲಿ ಏನೇನು ಆಗುತ್ತೆ?

     

  • ಕುಮಾರಸ್ವಾಮಿಯವರಿಗೆ ಆತ್ಮರತಿ ಹೆಚ್ಚಾಗಿದೆ: ತೇಜಸ್ವಿನಿ ಗೌಡ

    ಕುಮಾರಸ್ವಾಮಿಯವರಿಗೆ ಆತ್ಮರತಿ ಹೆಚ್ಚಾಗಿದೆ: ತೇಜಸ್ವಿನಿ ಗೌಡ

    ಬೆಂಗಳೂರು: ಎಚ್‍ಡಿ ಕುಮಾರಸ್ವಾಮಿಯವರಿಗೆ ಆತ್ಮರತಿ ಹೆಚ್ಚಾಗಿದ್ದು, ಜಂತಕಲ್ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಅವರು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ತೇಜಸ್ವಿನಿ ಗೌಡ ವಾಗ್ದಾಳಿ ನಡೆಸಿದ್ದಾರೆ.

    ತನ್ನ ವಿರುದ್ಧ ಆದಾಯ ತೆರಿಗೆ ಇಲಾಖೆಯಲ್ಲಿ ದೂರು ದಾಖಲಾಗಲು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕಾರಣ ಎಂದು ಎಚ್‍ಡಿ ಕುಮಾರಸ್ವಾಮಿ ಆರೋಪಿಸಿದ ಬಳಿಕ ತೇಜಸ್ವಿನಿ ಗೌಡ ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಮೂಲಕ ವಾಗ್ದಾಳಿ ನಡೆಸಿ ಪ್ರತ್ಯುತ್ತರ ನೀಡಿದ್ದಾರೆ.

    ಮಾಜಿ ಸಿಎಂ ಆಗಿ ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನು ಅವರು ಮರೆತಿದ್ದಾರೆ. ಹಿಟ್ ಅಂಡ್ ರನ್ ಮಾಡುವುದರಲ್ಲಿ ಕುಮಾರಸ್ವಾಮಿ ಎಕ್ಸ್ ಪರ್ಟ್. ಉಪಚುನಾವಣೆಗೆ ಅವರು ಅಭ್ಯರ್ಥಿಗಳನ್ನು ಹಾಕುವುದಿಲ್ಲ. ಬೇಕಾದಾಗ ಕಾಂಗ್ರೆಸ್ ಜೊತೆ ಸೇರುತ್ತಾರೆ. ಯಡಿಯೂರಪ್ಪ ಸುದೀರ್ಘ ರಾಜಕಾರಣದ ಮೂಲಕ ಮುಖ್ಯಮಂತ್ರಿಯಾದವರು. ಅದ್ರೆ ಎಚ್‍ಡಿಕೆ ರಾತ್ರೋ ರಾತ್ರಿ ಮುಖ್ಯಮಂತ್ರಿಯಾದವರು. ಬಾಹುಬಲಿ, ಬಾಹುಬಲಿ 2 ನೋಡಿದ್ದೇವೆ. ಅದರೆ ಇವರ ಮೇಲೆ ಆರೋಪ ಮಾಡಲು ತುಂಬಾ ಸ್ಟೋರಿಗಳಿವೆ ಎಂದು ಆರೋಪಿಸಿದರು.

    ಎಚ್‍ಡಿಕೆಯನ್ನು ಕಟ್ಟಪ್ಪನಿಗೆ ಹೋಲಿಕೆ ಮಾಡಿದ ಅವರು, 8 ಮಂದಿ ಸ್ನೇಹಿತರಿಗೇ ಅವರು ವಿಶ್ವಾಸದ್ರೋಹ ಮಾಡಿದ್ದಾರೆ. ತಮ್ಮ ಪುತ್ರರ ರಾಜಕೀಯ ಯಶಸ್ಸಿಗಾಗಿ ಯಾರನ್ನ ಬೇಕಾದ್ರೂ ಪಕ್ಷದಿಂದ ಹೊರಹಾಕ್ತಾರೆ ಎಂದು ಹೇಳಿದರು.

    ಇದನ್ನೂ ಓದಿ: ಹೇಡಿತನದ ರಾಜಕಾರಣ ಮಾಡದೇ, ಧೈರ್ಯವಾಗಿ ಮುಂದೆ ಬಂದು ಮಾತನಾಡಿ: ಬಿಎಸ್‍ವೈಗೆ ಎಚ್‍ಡಿಕೆ ಸವಾಲು

  • ಹೇಡಿತನದ ರಾಜಕಾರಣ ಮಾಡದೇ, ಧೈರ್ಯವಾಗಿ ಮುಂದೆ ಬಂದು ಮಾತನಾಡಿ: ಬಿಎಸ್‍ವೈಗೆ ಎಚ್‍ಡಿಕೆ ಸವಾಲು

    ಹೇಡಿತನದ ರಾಜಕಾರಣ ಮಾಡದೇ, ಧೈರ್ಯವಾಗಿ ಮುಂದೆ ಬಂದು ಮಾತನಾಡಿ: ಬಿಎಸ್‍ವೈಗೆ ಎಚ್‍ಡಿಕೆ ಸವಾಲು

    – ಬಿಜೆಪಿಯಿಂದ ನನ್ನ ವಿರುದ್ಧ ಐಟಿಗೆ ದೂರು ದಾಖಲು
    – ದೂರು ನೀಡಿದ ವೆಂಕಟೇಶ್ ಗೌಡ ಕೆಜೆಪಿ ಕಾರ್ಯಕರ್ತ

    ಬೆಂಗಳೂರು: ಹೇಡಿತನದ ರಾಜಕಾರಣ ಮಾಡಬೇಡಿ, ಧೈರ್ಯವಾಗಿ ಮುಂದೆ ಬಂದು ಮಾತನಾಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈಗೆ ಸವಾಲು ಎಸೆದಿದ್ದಾರೆ.

    ತನ್ನ ವಿರುದ್ಧ ವೆಂಕಟೇಶ್ ಗೌಡ ಎಂಬವರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ನೇತೃತ್ವದಲ್ಲೆ ಈ ದೂರಿನ ಪತ್ರ ರೆಡಿಯಾಗಿದೆ. ಬಿಜೆಪಿ ಕಚೇರಿಯಿಂದಲೇ ದೂರಿನ ಪ್ರತಿ ಸಿದ್ಧವಾಗಿದೆ ಎಂದು ಆರೋಪಿಸಿದರು.

    ನನ್ನ ಇಮೇಜ್ ಹಾಳು ಮಾಡಲು ಇಂತಹ ಆರೋಪ ಮಾಡ್ತಿದ್ದಾರೆ. ಪ್ರಧಾನಿ ಮಂತ್ರಿಗಳಿಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. 20 ಸಾವಿರ ಕೋಟಿ ರೂ. ಆರೋಪ ಮಾಡಿರುವ ಈ ಹಣವನ್ನು ಕಂಡು ಹಿಡಿದು ರೈತರ ಸಾಲ ಮನ್ನ ಮಾಡಲಿ. ತನಿಖೆ ನಡೆಸುವುದೇ ಆದರೆ ಬ್ಲಾಂಕ್ ಸ್ಟಾಂಪ್ ಪೇಪರ್ ಮೇಲೆ ಬರೆದುಕೊಡಲು ನಾನು ಸಿದ್ಧ ಎಂದು ಎಚ್‍ಡಿಕೆ ತಿಳಿಸಿದರು.

    ಹೇಡಿತನದ ರಾಜಕಾರಣ:ಧೈರ್ಯವಾಗಿ ಮುಂದೆ ಬಂದು ಮಾತಾಡಿ. ಹೇಡಿತನದ ರಾಜಕಾರಣ ಮಾಡಬೇಡಿ, ಕುತಂತ್ರದ ರಾಜಕಾರಣಕ್ಕೆ ನನ್ನ ಬಲಿಪಶು ಮಾಡಲು ನೀವು ದೂರು ಕೊಟ್ಟಿದ್ದೀರಿ. ಮಂಗಳವಾರ ಮಧ್ಯಾಹ್ನ ದೂರು ನೀಡಿ ರಾತ್ರಿ ವಾಟ್ಸಪ್ ಮೂಲಕ ಮಾಧ್ಯಮದವರಿಗೆ ಸುದ್ದಿ ಕಳುಹಿಸಿದ್ದೀರಿ. ಸುದ್ದಿಗೋಷ್ಠಿ ನಡೆಸಿ ಎಲ್ಲರ ಮುಂದೆಯೇ ಆರೋಪ ಮಾಡಬಹುದಿತ್ತಲ್ಲ. ನಿಮ್ಮದು ಹೇಡಿತನದ ರಾಜಕಾರಣ. ಜನರ ಮಧ್ಯೆ ನನ್ನ ಇಮೇಜ್ ಕೆಡಿಸಲು ಇಂತಹ ಮಾರ್ಗ ಹಿಡಿಯುತ್ತಿದ್ದೀರಿ ಎಂದು ಬಿಎಸ್‍ವೈ ಅವರನ್ನು ಎಚ್‍ಡಿಕೆ ದೂರಿದರು.

    ಸಂಶಯಕ್ಕಾಗಿ ಆರೋಪ: ಬಿಜೆಪಿ ಅವಧಿಯಲ್ಲಿ ನನ್ನ ವಿರುದ್ಧ ಬೇನಾಮಿ ಆಸ್ತಿ ಮಾಡಿದ ಆರೋಪ ಕೇಳಿ ಬಂದಿತ್ತು. ಆಗ ನಾನು ಈ ಸಿಬಿಐ ತನಿಖೆ ಮಾಡಿ ಎಂದು ಉಪವಾಸ ಧರಣಿ ಮಾಡಿದ್ದೆ. ಯಾಕೆ ಈಗ ನನ್ನ ವಿರುದ್ಧ ಇಂತಹ ಆರೋಪಗಳನ್ನು ಮಾಡಲಾಗ್ತಿದೆ ಅಂತ ಗೊತ್ತಿದೆ. ಸಾರ್ವಜನಿಕವಾಗಿ ನನ್ನ ವಿರುದ್ಧ ಸಂಶಯಗಳು ಬರಲಿ ಎಂದು ಸಂಚು ಮಾಡುತ್ತಿದ್ದಾರೆ. ಜನರ ಭಾವನೆ ನನ್ನ ಪರವಾಗಿದೆ ಅಂತ ಎರಡು ರಾಷ್ಟ್ರೀಯ ಪಕ್ಷಗಳಿಗೆ ಗೊತ್ತಾಗಿದೆ. ಹೀಗಾಗಿ ಎರಡು ಪಕ್ಷಗಳು ನನ್ನ ವಿರುದ್ಧ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

    ಒಬ್ಬ ಮನುಷ್ಯನಿಗೆ ಕಿರುಕುಳ ಕೊಡುವುದಕ್ಕೂ ಇತಿಮಿತಿ ಇದೆ. ಎಲ್ಲ ಕಿರುಕುಳಗಳನ್ನು ಸಹಿಸಿಕೊಂಡು ಬರುತ್ತಿದ್ದೇನೆ. ಎರಡೂ ರಾಷ್ಟ್ರೀಯ ಪಕ್ಷಗಳು ಚುನಾವಣೆಗೋಸ್ಕರ ನನ್ನ ವಿರುದ್ಧ ಪಿತೂರಿ ನಡೆಸುತ್ತಿವೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಎಸ್‍ಐಟಿ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ನಾನು ನಾನು ಆರೋಪಿಯೇ ಅಲ್ಲ ವ್ಯವಸ್ಥಿತವಾಗಿ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದರು.

    ದೇವೇಗೌಡರು ಮುಖ್ಯಮಂತ್ರಿ ಆಗಿದಾಗಿನಿಂದ ಇಂದಿನವರೆಗೂ ನಮ್ಮ ಕುಟುಂಬದ ಬಗ್ಗೆ ತನಿಖೆ ಮಾಡಿಸಿ. ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ಪ್ರಾಮಾಣಿಕ ನಿಸ್ಪಕ್ಷಪಾತ ತನಿಖೆ ನಡೆಸಿ. ಈ ತನಿಖೆಗೆ ನಾನು ಸಿದ್ದ ಎಚ್‍ಡಿಕೆ ಬಿಎಸ್‍ವೈಗೆ ಸವಾಲು ಎಸೆದರು.

    ಕೆಜೆಪಿ ಸದಸ್ಯ: ನನ್ನ ವಿರುದ್ಧ ಬೇನಾಮಿ ಆಸ್ತಿ ಆರೋಪದಲ್ಲಿ ದೂರು ನೀಡಿದ ವೆಂಕಟೇಶ್ ಗೌಡ ಈ ಮೊದಲು ಕಾಂಗ್ರೆಸ್ ನಲ್ಲಿದ್ದು ಬಳಿಕ ಕೆಜೆಪಿ ಸೇರಿದ್ದ. 2013 ರ ಚುನಾವಣೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ವೆಂಕಟೇಶ್ ಕೆಜೆಪಿ ಅಭ್ಯರ್ಥಿಯಾಗಿದ್ದ. ವೆಂಕಟೇಶ್ ಗೌಡ ಬಗ್ಗೆ ಯಡಿಯೂರಪ್ಪ ಅವರ ಬಳಿ ಸಂಪೂರ್ಣ ಮಾಹಿತಿ ಇದೆ ಎಂದು ಕುಮಾರಸ್ವಾಮಿ ಹೇಳಿದರು.

    ಮಾನ ಮರ್ಯಾದೆ ಇಲ್ಲ: ಪೇದೆ ಸುಭಾಷ್ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವ್ರು ಬೆಟ್ಟಿಂಗ್ ದಂಧೆ ಯಿಂದ ಪೊಲೀಸ್ ಪೇದೆ ಆತ್ಮಹತ್ಯೆ ಯತ್ನಿಸಿದ್ದಾರೆ. ಬೆಟ್ಟಿಂಗ್ ದಂಧೆ ಬಗ್ಗೆ ಎಷ್ಟುಬಾರಿ ಹೇಳಿದ್ದೇನೆ. ಯಾವುದೇ ಕ್ರಮ ಸರ್ಕಾರ ತೆಗದುಕೊಂಡಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಬೆಟ್ಟಿಂಗ್ ದಂಧೆಯಿಂದ ತಿಂಗಳಿಗೆ 4-5 ಕೋಟಿ ಹಣ ಹೋಗ್ತಿದೆ. ಇವೆಲ್ಲ ಸರ್ಕಾರಕ್ಕೆ ಗಮನ ತಂದಿದ್ದೇನೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ ಅಂತ ವಾಗ್ದಾಳಿ ನಡೆಸಿದರು.

  • ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ್ ನಿವಾಸದ ಮೇಲೆ ಐಟಿ ದಾಳಿ

    ಮಾಜಿ ಕೇಂದ್ರ ಸಚಿವ ಸಿದ್ದೇಶ್ವರ್ ನಿವಾಸದ ಮೇಲೆ ಐಟಿ ದಾಳಿ

    ಚಿತ್ರದುರ್ಗ: ಕೇಂದ್ರ ಮಾಜಿ ಸಚಿವ ಸಿದ್ದೇಶ್ವರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಚಿತ್ರದುರ್ಗದ ಭೀಮಸಂದ್ರದಲ್ಲಿರುವ ತೋಟದ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಜಿಎಂ ಸಿದ್ದೇಶ್ವರ್ ಗೆ ಸೇರಿದ ಮೂರು ಫ್ಯಾಕ್ಟರಿ ಮತ್ತು ಜಿಎಂ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕಿನ ಮೇಲೂ ದಾಳಿ ನಡೆದಿದೆ.

    ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರವಾಗಿರುವ ಜಿಎಂ ಸಿದ್ದೇಶ್ವರ್ ಈ ಹಿಂದೆ ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವರಾಗಿದ್ದರು. ಮೋದಿ ಸಂಪುಟದ ಪುನಾರಚನೆ ವೇಳೆ ಅವರನ್ನು ಕೈಬಿಡಲಾಗಿತ್ತು.

  • ಕೃಷಿಯನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರ್ತಿರಾ: ಅರುಣ್ ಜೇಟ್ಲಿ ಹೇಳಿದ್ದು  ಹೀಗೆ

    ಕೃಷಿಯನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರ್ತಿರಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ

    ನವದೆಹಲಿ: ಕೃಷಿಯನ್ನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು ಎನ್ನುವ ಪ್ರಸ್ತಾಪಕ್ಕೆ ಪೂರ್ಣ ವಿರಾಮ ಬಿದ್ದಿದ್ದು, ಸರ್ಕಾರದ ಬಳಿ ಕೃಷಿಗೆ ತೆರಿಗೆ ವಿಧಿಸುವ ಯಾವುದೇ ಯೋಜನೆಗಳಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

    ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಕೃಷಿಗೆ ತೆರಿಗೆ ವಿಧಿಸುವ ಪ್ರಸ್ತಾಪ ಸರ್ಕಾರದಲ್ಲಿ ಇಲ್ಲ. ಕೃಷಿ ವಲಯ ಈಗ ಸಂಕಷ್ಟದಲ್ಲಿದೆ. ಹೀಗಾಗಿ ತೆರಿಗೆ ವಿಧಿಸಬೇಕೇ ಎನ್ನುವ ಬಗ್ಗೆ ಯಾವುದೇ ಪ್ರಶ್ನೆಯೇ ಉದ್ಭಸುವುದಿಲ್ಲ ಎಂದು ಹೇಳಿದರು.

    ಈಗಾಗಲೇ ನಾನು ಈ ವಿಚಾರದ ಬಗ್ಗೆ ಸ್ಪಷ್ಟಪಡಿಸಿದ್ದೇನೆ. ಶ್ರೀಮಂತ ರೈತರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪ್ರಸ್ತುತ ನಾವು ಈಗ ಕೃಷಿಯನ್ನು ಬೆಂಬಲಿಸಬೇಕು. ರೈತರು ಸಂಕಷ್ಟದಲ್ಲಿರುವ ಸಮಯದಲ್ಲಿ ತೆರಿಗೆ ವಿಧಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

    ಅಷ್ಟೇ ಅಲ್ಲದೇ ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ರಾಜ್ಯ ಸರ್ಕಾರಕ್ಕೆ ತೆರಿಗೆ ವಿಧಿಸುವ ಅಧಿಕಾರ ಇದೆ. ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಯಾವೊಂದು ಸರ್ಕಾರ ಈ ನಿರ್ಧಾರವನ್ನು ಕೈಗೊಳ್ಳಲಾರದು ಎಂದು ತಿಳಿಸಿದರು.

    ಚರ್ಚೆಗೆ ಕಾರಣ ಏನು?
    ನೀತಿ ಆಯೋಗದ ಸದಸ್ಯ ವಿವೇಕ್ ದೇಬ್‍ರಾಯ್ ಈ ಹಿಂದೆ, ಕೃಷಿ ಆದಾಯಕ್ಕೆ ವಿನಾಯಿತಿ ಇರುವುದರಿಂದ ತೆರಿಗೆ ಕಳ್ಳರು ದುರುಪಯೋಗ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಒಂದು ಮಿತಿಯ ಬಳಿಕ ಕೃಷಿಯಿಂದ ಬರುವ ಆದಾಯವನ್ನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು. ಅಷ್ಟೇ ಅಲ್ಲದೇ ವೈಯಕ್ತಿಕ ಆದಾಯ ತೆರಿಗೆಯಲ್ಲಿರುವ ಎಲ್ಲ ವಿನಾಯಿತಿಗಳನ್ನೂ ತೆಗೆದು ಹಾಕಬೇಕೆಂದು ಹೇಳಿದ್ದರು. ಇವರ ಹೇಳಿಕೆಯಿಂದಾಗಿ ಸರ್ಕಾರ ಕೃಷಿಗೆ ತೆರಿಗೆ ವಿಧಿಸುತ್ತಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು.

  • ಪರೀಕ್ಷೆ ನಡೆಸಲು ಹಣವಿಲ್ಲ, ಪರಿಸ್ಥಿತಿ ಮುಂದುವರಿದ್ರೆ ವಿಟಿಯು ಮುಚ್ಚಬೇಕಾದಿತು: ಬಸವರಾಜರಾಯ ರೆಡ್ಡಿ

    ಪರೀಕ್ಷೆ ನಡೆಸಲು ಹಣವಿಲ್ಲ, ಪರಿಸ್ಥಿತಿ ಮುಂದುವರಿದ್ರೆ ವಿಟಿಯು ಮುಚ್ಚಬೇಕಾದಿತು: ಬಸವರಾಜರಾಯ ರೆಡ್ಡಿ

    ನವದೆಹಲಿ: ಕೇಂದ್ರ ಸರ್ಕಾರದ ಆದಾಯ ತೆರಿಗೆ ನೀತಿಯಿಂದ ವಿಶೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮುಚ್ಚುವ ಪರಿಸ್ಥಿತಿ ಗೆ ಬಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಕಿಡಿ ಕಾರಿದ್ದಾರೆ.

    ಆದಾಯ ತೆರಿಗೆ ವಿನಾಯತಿ ಪಡೆದಿಲ್ಲ ಎಂದು ವಿಟಿಯುನ 441 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡು, 123 ಕೋಟಿ ದಂಡವನ್ನು ವಿಧಿಸಿರುವ ಹಿನ್ನಲೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ರು.

    ಮಾತುಕತೆ ವಿಫಲವಾದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದು ಅವರು, ಸರ್ಕಾರದ ಶಿಕ್ಷಣ ಸಂಸ್ಥೆಗಳು ಆದಾಯ ತೆರಿಗೆ ಕಟ್ಟುವ ಪದ್ದತಿ ಇಲ್ಲ ಆದ್ರೆ, ಆದಾಯ ಇಲಾಖೆ ವಿಶ್ವವಿದ್ಯಾಲಯದ ಹಣವನ್ನು ಜಪ್ತಿ ಮಾಡಿದ್ದು ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗ್ತಿಲ್ಲ ಜೊತೆಗೆ ಪರೀಕ್ಷೆಗಳು ಹತ್ತಿರವಾಗುತ್ತಿದ್ದು ಪರೀಕ್ಷೆ ನಡೆಸಲು ವಿವಿ ಬಳಿ ಇಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ವಿಶ್ವವಿದ್ಯಾಲಯ ಮುಚ್ಚಬೇಕಾದಿತು ಅಂತಾ ರಾಯರೆಡ್ಡಿ ಹೇಳಿದರು.

    ಜಪ್ತಿ ಮಾಡಿಕೊಂಡಿದ್ದ ಹಣವನ್ನು ಮರಳಿನೀಡುವಂತೆ ಮನವಿ ಮಾಡಿದ್ರು ಅರುಣ್ ಜೇಟ್ಲಿ ಮನಸ್ಸು ಮಾಡುತ್ತಿಲ್ಲ. ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹಾಗೂ ಕೇಂದ್ರ ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ಮನವಿ ಮಾಡಿದ್ರು ಕ್ಯಾರೇ ಮಾಡ್ತಿಲ್ಲ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ರು.

    ಆದಾಯ ತೆರಿಗೆ ಇಲಾಖೆಯ ನಿಯಮಗಳ ಅನುಸಾರ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದ ರಾಯರೆಡ್ಡಿ ನಾಲ್ಕು ಲಕ್ಷ ವಿದ್ಯಾರ್ಥಿ ಗಳ ಭವಿಷ್ಯ ಡೋಲಾಯಮಾನವಾಗಿದೆ ಅಂತಾ ಆತಂಕ ವ್ಯಕ್ತಪಡಿಸಿದರು.

  • ಮದುವೆ ದಿಬ್ಬಣದಂತೆ ಹೊರಟು ಕೊಡಗಿನ ಹಲವು ಕಡೆ ಏಕಕಾಲದಲ್ಲಿ ಐಟಿ ರೇಡ್

    ಮದುವೆ ದಿಬ್ಬಣದಂತೆ ಹೊರಟು ಕೊಡಗಿನ ಹಲವು ಕಡೆ ಏಕಕಾಲದಲ್ಲಿ ಐಟಿ ರೇಡ್

    ಮಡಿಕೇರಿ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಾರಿನಲ್ಲಿ ಬಂದು ಮನೆ, ಕಚೇರಿಗಳ ಮೇಲೆ ದಾಳಿ ಮಾಡಿದ್ದ ಸುದ್ದಿಯನ್ನು ನೀವು ಓದಿರಬಹುದು. ಆದರೆ ಬುಧವಾರ ಮದುವೆಯ ವೇಳೆ ಶೃಂಗಾರಗೊಂಡ ಕಾರಿನಲ್ಲಿ ದಿಬ್ಬಣ ಹೇಗೆ ಹೊರಡುತ್ತದೋ ಅದೇ ರೀತಿಯಾಗಿ ಐಟಿ ಅಧಿಕಾರಿಗಳು ಹೊರಟು ಏಕ ಕಾಲದಲ್ಲಿ ಕೊಡಗು ಜಿಲ್ಲೆಯಲ್ಲಿ ಹಲವು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

    ಸೋಮವಾರಪೇಟೆ ತಾಲೂಕಿನ ಕುಶಾಲನಗರ ಬಳಿಯ ಎಸ್‍ಎಲ್‍ಎನ್ ಸಮೂಹ ಸಂಸ್ಥೆಯ ಕಛೇರಿಗಳ ಮೇಲೆ ಐಟಿ ರೇಡ್ ನಡೆದಿದೆ. ಎಸ್‍ಎಲ್‍ಎನ್ ಸಮೂಹ ಸಂಸ್ಥೆಗಳ ಮಾಲೀಕರಾದ ವಿಶ್ವನಾಥ್ ಹಾಗೂ ಸಾತಪ್ಪನ್ ಸಹೋದರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕಡತಗಳ ಪರಿಶೀಲನೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ.

    ಎಸ್‍ಎಲ್‍ಎನ್ ಸಮೂಹ ಸಂಸ್ಥೆಗಳಿಗೆ ಸೇರಿದ ಎಸ್‍ಎಲ್‍ಎನ್ ಕಾಫಿ ಕ್ಯೂರಿಂಗ್ ವರ್ಕ್, ಎಸ್‍ಎಲ್‍ಎನ್ ಪೆಟ್ರೋಲ್ ಬಂಕ್, ಎಸ್‍ಎಲ್‍ಎನ್ ಮಾಲೀಕರಿಗೆ ಸೇರಿದ 2 ಮನೆಗಳು, ಈಡನ್ ಗಾರ್ಡನ್ ಲೇಔಟ್, ಪರ್ಪಲ್‍ಪಾರ್ಮ್ ಎಂಬ ರೆಸಾರ್ಟ್ ಮೇಲೆ ದಾಳಿ ನಡೆದಿದೆ.

    ಮೈಸೂರು ಮತ್ತು ಬೆಂಗಳೂರಿನ 50ಕ್ಕೂ ಅಧಿಕ ಐಟಿ ಅಧಿಕಾರಿಗಳು 15ಕ್ಕೂ ಅಧಿಕ ಇನ್ನೋವಾ ವಾಹನಗಳಲ್ಲಿ ಎಸ್‍ಎಲ್‍ಎನ್‍ಗೆ ಸೇರಿದ ಐದಾರು ಕಛೇರಿಗಳ ಮೇಲೆ ಮುಂಜಾನೆ 8 ಗಂಟೆಯ ದಾಳಿ ನಡೆಸಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೂ ದಾಖಲೆಗಳ ಪರಿಶೀಲನೆ ನಡೆದಿದೆ.

    ಐಟಿ ಅಧಿಕಾರಿಗಳು ತಮ್ಮ ಇನ್ನೋವಾ ಕಾರಿಗೆ ಮದುವೆ ದಿಬ್ಬಣಕ್ಕೆ ಹೊರಡುವ ಹಾಗೆ ಸಿಂಗಾರ ಮಾಡಿದ್ದು, ಕಾರಿನ ಮುಂಭಾಗದಲ್ಲಿ “ಧೀರಜ್ ವೆಡ್ಸ್ ಕಾಜಲ್” ಎಂಬ ಹೆಸರಿನ ಬೋರ್ಡ್ ಹಾಕಿದ್ದಾರೆ. ಒಮ್ಮೆಗೆ 15ಕ್ಕೂ ಅಧಿಕ ಇನ್ನೋವಾದಲ್ಲಿ ಅಧಿಕಾರಿಗಳು ಬರುತ್ತಿರುವುದರ ಬಗ್ಗೆ ಯಾರಿಗೂ ಅನುಮಾನ ಬರದಿರಲಿ ಎಂಬುದಕ್ಕೆ ಹೀಗೆ ಕಾರ್‍ಗಳನ್ನು ಮದುವೆ ದಿಬ್ಬಣಕ್ಕೆ ಹೋಗುವ ಹಾಗೆ ಸಿಂಗರಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಬೆಳಗ್ಗಿನಿಂದ ಪರಿಶೀಲನೆಯಲ್ಲಿ ತೊಡಗಿರುವ ಅಧಿಕಾರಿಗಳು ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ಮತ್ತು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

    ವಿರಾಜಪೇಟೆ ತಾಲೂಕಿನ ಪಾಳಿಘಟ್ಟ ಗ್ರಾಮದಲ್ಲಿ ಸುಮಾರು 500 ಎಕರೆ ಕಾಫೀ ತೋಟವಿದ್ದು ಅದನ್ನು ಎಸ್‍ಎಲ್‍ಎನ್ ಸಮೂಹ ಸಂಸ್ಥೆಗಳು ನಿರ್ವಹಿಸುತ್ತಿವೆ.

  • ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ದಿದ್ರೆ ಸಿಮ್ ಸಿಗಲ್ಲ!

    ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ದಿದ್ರೆ ಸಿಮ್ ಸಿಗಲ್ಲ!

    ನವದೆಹಲಿ: ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲವೆಂದಲ್ಲಿ ಇನ್ನು ಮುಂದೆ ಮೊಬೈಲ್ ಸಿಮ್ ಕಾರ್ಡ್ ಸಿಗಲ್ಲ.

    ಹೌದು. ಈಗಾಗಲೇ ಆದಾಯ ತೆರಿಗೆ ಲೆಕ್ಕಪತ್ರ(ಐಟಿ ರಿಟರ್ನ್ಸ್) ಸಲ್ಲಿಸುವ ವೇಳೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಹೇಳಿರುವ ಕೇಂದ್ರ ಸರ್ಕಾರ ಇದೀಗ ಮೊಬೈಲ್ ಸಿಮ್ ಪಡೆಯಲು ಕೂಡ ಆಧಾರ್ ಕಾರ್ಡ್ ಕಡ್ಡಾಯ ಮಾಡಲು ಮುಂದಾಗಿದೆ.

    ಈ ಸಂಬಂಧ ಟೆಲಿಕಾಂ ಇಲಾಖೆ ಎಲ್ಲಾ ಟೆಲಿಕಾಂ ಕಂಪೆನಿಗಳಿಗೂ ನೋಟಿಸ್ ಕಳುಹಿಸಿದ್ದು, ಮೊಬೈಲ್ ಚಂದಾದಾರರ ಸಿಮ್ ಕಾರ್ಡ್‍ಗಳು ಅವರ ಆಧಾರ್ ನಂಬರ್ ಜೊತೆ ಲಿಂಕ್ ಆಗಿದೆಯೋ ಅಥವಾ ಇಲ್ಲವೋ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದೆ. ಮಾತ್ರವಲ್ಲದೇ ಈ ಪ್ರಕ್ರಿಯೆ ವರ್ಷದೊಳಗೆ ಪೂರ್ಣಗೊಳಿಸಬೇಕು ಅಂತಾ ಇಲಾಖೆ ತಿಳಿಸಿದೆ.

    ಈ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಎಲ್ಲಾ ಗ್ರಾಹಕರ ದಾಖಲೆಗಳನ್ನು ಆಧಾರ್ ಕಾರ್ಡ್ ಇ- ನಿಮ್ಮ ಗ್ರಾಹಕರನ್ನು ಅರಿಯಿರಿ(ಕೆವೈಸಿ) ಮೂಲಕ ಮರುಪರಿಶೀಲನೆ ಮಾಡಲಿವೆ.

    ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ವೆರಿಫಿಕೇಶನ್ ಕೋಡ್ ನ್ನು ಕಳುಹಿಸಲಿವೆ. ಭವಿಷ್ಯದಲ್ಲಿ ವ್ಯಕ್ತಿಯ ಗುರುತು ಪತ್ತೆಗೆ ಆಧಾರ್ ಕಾರ್ಡ್ ಏಕೈಕ ಸಾಧನವಾಗಲಿದೆ ಅಂತಾ ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದರು.

    ಪಾನ್ ಕಾರ್ಡ್, ಐಟಿ ರಿಟರ್ನ್ಸ್ ಗೂ ಆಧಾರ್ ಕಡ್ಡಾಯ: ಕಳೆದ ಮಂಗಳವಾರವಷ್ಟೇ ಸಂಸತ್ತಿನಲ್ಲಿ ಚರ್ಚೆಯಾದ ಹಣಕಾಸು ಮಸೂದೆಯಲ್ಲಿ ತಿದ್ದುಪಡಿ ತಂದು ಆಧಾರ್ ಕಡ್ಡಾಯ ಎಂಬ ಅಂಶವನ್ನು ಕೇಂದ್ರ ಸರ್ಕಾರ ಸೇರಿಸಿತ್ತು. ಜುಲೈ 1ರಿಂದ ಈ ನಿಯಮ ಜಾರಿಗೆ ಬರಲಿದೆ ಅಂತಾ ಹೇಳಲಾಗಿದೆ.

    ದೇಶದಲ್ಲಿ ಮೊದಲ ಬಾರಿಗೆ ರಿಲಯನ್ಸ್ ಜಿಯೋ ಕಂಪೆನಿ ಆಧಾರ್ ಕಾರ್ಡ್ ಮೂಲಕ ಗ್ರಾಹಕರಿಗೆ ಸಿಮ್ ಕಾರ್ಡನ್ನು ಕೆಲವೇ ನಿಮಿಷಗಳಲ್ಲಿ ವಿತರಣೆ ಮಾಡಿತ್ತು. ಗ್ರಾಹಕರು ಬೆರಳಚ್ಚು ಓತ್ತಿದಾಗಲೇ ಆಧಾರ್ ದಾಖಲೆಗಳು ಸ್ಕ್ರೀನ್‍ನಲ್ಲಿ ಕಾಣುತಿತ್ತು.

  • ಆಧಾರ್ ಕಾರ್ಡ್ ಇಲ್ಲದೇ ಇದ್ರೆ ಇನ್ನು ಮುಂದೆ ನಿಮಗೆ ಪಾನ್ ಕಾರ್ಡ್ ಸಿಗಲ್ಲ!

    ಆಧಾರ್ ಕಾರ್ಡ್ ಇಲ್ಲದೇ ಇದ್ರೆ ಇನ್ನು ಮುಂದೆ ನಿಮಗೆ ಪಾನ್ ಕಾರ್ಡ್ ಸಿಗಲ್ಲ!

    ನವದೆಹಲಿ: ಪಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವ ವೇಳೆ  ಮತ್ತು ಆದಾಯ ತೆರಿಗೆ ಲೆಕ್ಕಪತ್ರ(ಐಟಿ ರಿಟರ್ನ್ಸ್) ಸಲ್ಲಿಸುವ ವೇಳೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

    ಸಂಸತ್ತಿನಲ್ಲಿ ಚರ್ಚೆಯಾಗುತ್ತಿರುವ ಹಣಕಾಸು ಮಸೂದೆಯಲ್ಲಿ ತಿದ್ದುಪಡಿ ತಂದು ಆಧಾರ್ ಕಡ್ಡಾಯ ಅಂಶವನ್ನು ಕೇಂದ್ರ ಸರ್ಕಾರ ಸೇರಿಸಿದೆ. ಜುಲೈ 1ರಿಂದ ಈ ನಿಯಮ ಜಾರಿಗೆ ಬರಲಿದ್ದು, ಹಣಕಾಸು ಸಚಿವ ಅರುಣ್ ಜೇಟ್ಲಿ ಹಣಕಾಸು ಮಸೂದೆಯ ಬಗ್ಗೆ ಬುಧವಾರ ಸಂಸತ್ತಿನಲ್ಲಿ ಮಾತನಾಡಲಿದ್ದಾರೆ.

    ಕಳೆದ ಕೆಲ ವರ್ಷಗಳ ಐಟಿಆರ್ ಸಲ್ಲಿಕೆಯ ಆಧಾರ್ ಐಚ್ಚಿಕವಾಗಿತ್ತು. ಭಾರತದಲ್ಲಿ ವಿದೇಶಿ ಪ್ರಜೆಗಳು ತೆರಿಗೆ ಪಾವತಿಸುತ್ತಿರುವುದರಿಂದ ಈಗ ಕೆಲ ಪ್ರಶ್ನೆಗಳು ಎದ್ದಿದ್ದು ಈ ಸಮಸ್ಯೆಗೆ ಪರಿಹಾರ ಏನು ಎನ್ನುವ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಿದೆ.

    ಕೇಂದ್ರ ಸರ್ಕಾರ ಈಗ ಎಲ್ಲ ಸೇವೆಗಳಿಗೂ ಆಧಾರ್ ಕಡ್ಡಾಯಗೊಳಿಸುತ್ತಿದ್ದು, ಕೆಲ ದಿನಗಳ ಹಿಂದೆ ಬಡ ಮಹಿಳೆಯರು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತ ಅಡಿಗೆ ಅನಿಲ(ಎಲ್ ಪಿಜಿ) ಸಂಪರ್ಕ ಪಡೆಯಯಲು ಆಧಾರ ಕಾರ್ಡ್ ಅನ್ನು ಕಡ್ಡಾಯಗೊಳಿಸಿತ್ತು.

  • ಡೈರಿಯಲ್ಲಿರೋದು ಗೋವಿಂದರಾಜ್ ಹಸ್ತಾಕ್ಷರ!

    ಡೈರಿಯಲ್ಲಿರೋದು ಗೋವಿಂದರಾಜ್ ಹಸ್ತಾಕ್ಷರ!

    – ವರದಿ ಕೊಟ್ಟಿದ್ಯಂತೆ ಪ್ರಯೋಗಾಲಯ
    – ನಿಜವೇ ಆಗಿದ್ರೆ ಬಿಜೆಪಿಗೆ ಮತ್ತೊಂದು ಭರ್ಜರಿ ಅಸ್ತ್ರ

    ಬೆಂಗಳೂರು: ರಾಜ್ಯ ಮಾತ್ರವಲ್ಲ ರಾಷ್ಟ್ರ ರಾಜಕಾರಣದಲ್ಲೂ ಸಂಚಲನ ಮೂಡಿಸಿದ್ದ ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಲಾಗಿದೆ ಅನ್ನೋ ಎಂಎಲ್‍ಸಿ ಗೋವಿಂದರಾಜು ಡೈರಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪಬ್ಲಿಕ್ ಟಿವಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಕಪ್ಪ ಡೈರಿ ಗೋವಿಂದರಾಜು ಅವರದ್ದೇ. ಅದ್ರಲ್ಲಿರೋ ಅವರದ್ದೇ ಹಸ್ತಬರಹ ಎನ್ನಲಾಗಿದೆ.

    ಐಟಿ ದಾಳಿ ವೇಳೆ ಸಿಕ್ಕಿದೆ ಎನ್ನಲಾದ ಗೋವಿಂದರಾಜು ಡೈರಿ ಕೊಡಿ, ಲ್ಯಾಬ್‍ನಲ್ಲಿ ಹಸ್ತಾಕ್ಷರ ಪರೀಕ್ಷೆ ಮಾಡಿಸ್ತೇವೆ ಅಂತ ಐಟಿ ಇಲಾಖೆ ಅಧಿಕಾರಿಗಳಿಗೆ ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ. ಆದರೆ ಐಟಿ ಸೈಲೆಂಟ್ ಆಗಿದೆ. ಮತ್ತೊಂದು ಮೂಲಗಳ ಪ್ರಕಾರ ತಾನು ಕ್ಲೀನ್ ಹ್ಯಾಂಡ್ ಅಂತ ಬಿಂಬಿಸಿಕೊಳ್ಳೋಕೆ ಗೋವಿಂದರಾಜು ಅವರೇ ಪ್ರೈವೇಟ್ ಲ್ಯಾಬ್‍ನಲ್ಲಿ ಡೈರಿಯಲ್ಲಿನ ಹ್ಯಾಂಡ್‍ರೈಟಿಂಗ್ ಬಗ್ಗೆ ಚೆಕ್ ಮಾಡಿಸಿದ್ದಾರೆ. ಆ ಖಾಸಗಿ ಲ್ಯಾಬ್‍ನವ್ರು ಡೈರಿಯಲ್ಲಿ ಬರೆದಿರೋದು ಗೋವಿಂದರಾಜು ಅಲ್ಲ. ಅದರಲ್ಲಿರೋದು ಅವರ ಹಸ್ತಾಕ್ಷರ ಅಲ್ಲ. ಅವರಿಗೂ ಡೈರಿಗೂ ಸಂಬಂಧ ಇಲ್ಲ ಅಂತಾ ವರದಿ ಕೊಟ್ಟಿದ್ಯಂತೆ.

    ಲ್ಯಾಬ್ ಕೊಟ್ಟ ರಿಪೋರ್ಟ್ ಸರಿಯಾಗಿದ್ದರೆ ಡೈರಿಯಲ್ಲಿ ಕಪ್ಪ ಪಡೆದಿದ್ದಾರೆ ಎಂದು ಕೋಡ್ ವರ್ಡ್‍ನಲ್ಲಿ ಬರೆದಿರೋ ಎಲ್ಲಾ ಕಾಂಗ್ರೆಸ್ ನಾಯಕರು ಆರೋಪ ಮುಕ್ತರಾಗ್ತಾರೆ. ಆದ್ರೆ, ಈ ಲ್ಯಾಬ್ ರಿಪೋರ್ಟ್‍ನ್ನು ಐಟಿ ಒಪ್ಪಿಕೊಳ್ಳುತ್ತಾ? ಪೊಲೀಸರು ಏನಂತಾರೆ? ಅನ್ನೋದು ಕುತೂಹಲ ಕೆರಳಿಸಿದೆ.

    ಡೈರಿಯಲ್ಲಿರೋ ಹ್ಯಾಂಡ್ ರೈಟಿಂಗ್ ನನ್ನದಲ್ಲ. ಅಸಲಿಗೆ ಡೈರಿಯೇ ನನ್ನದಲ್ಲ, ಅದು ಎಲ್ಲಿಂದ ಬಂತೋ ಗೊತ್ತೇ ಇಲ್ಲ ಅಂತ ಗೋವಿಂದರಾಜು ವಾದ ಮಾಡುತ್ತಲೇ ಇದ್ದಾರೆ. ಜೊತೆಗೆ, ಡೈರಿ ಸೀಕ್ರೇಟ್ ಸೋರಿಕೆ ಬಗ್ಗೆ ತನಿಖೆ ನಡೆಸಿ ಎಂದು ಫೆಬ್ರವರಿ 28ರಂದು ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಈಗ ತನಿಖೆ ಶುರು ಮಾಡಿದ್ದಾರೆ. ಆದ್ರೆ, ಡೈರಿಯನ್ನ ಐಟಿ ಕೊಡ್ತಿಲ್ಲ ಅಂತ ಪೊಲೀಸ್ರು ಹೇಳ್ತಿದ್ದಾರೆ. ಈ ಮಧ್ಯೆ, ವಿಧಾನಮಂಡಲದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ವಾಗ್ವಾದವೇ ನಡೀತು.

    ಲೀಕ್ ಆಗಿಲ್ಲ: ಡೈರಿ ಅಂಶಗಳು ಆದಾಯ ತೆರಿಗೆ ಇಲಾಖೆಯಿಂದ ಲೀಕ್ ಅಗಿಲ್ಲ ಅಂತ ಐಟಿ ಡಿಜಿ ಬಾಲಕೃಷ್ಣನ್ ಸ್ಪಷ್ಟನೆ ನೀಡಿದ್ದಾರೆ. ಡೈರಿ ಸಿಕ್ಕಿದ್ದು ನಿಜಾನ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದ ಅಧಿಕಾರಿಗಳು, ಐಟಿ ದಾಳಿಯಲ್ಲಿ ಸಿಕ್ಕ ಯಾವುದೇ ಮಾಹಿತಿಯನ್ನು ಐಟಿ ಕಾಯ್ದೆ ಅನ್ವಯ ಬಹಿರಂಗಪಡಿಸುವಂತಿಲ್ಲ ಅಂದ್ರು. ಇಂದಿರಾನಗರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ನಾನು ಪೊಲೀಸ್ ಕಮೀಷನರ್‍ಗೆ ಉತ್ತರ ಬರೆದಿದ್ದೇನೆ. ಗೋವಿಂದರಾಜು ಅವರಿಗೆ ವಿವರವಾಗಿ ಉತ್ತರ ನೀಡಲಾಗಿದೆ. ಇದು ದೂರುದಾರ ಮತ್ತು ನಮ್ಮ ನಡುವಿನ ವಿಚಾರ. ಆರೋಪ ಮತ್ತು ದೂರಿನ ಬಗ್ಗೆ ಗೋವಿಂದರಾಜುಗೆ ಲಿಖಿತ ಉತ್ತರ ನೀಡಿದ್ದೇನೆ. ಇದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಅಂತ ಬಾಲಕೃಷ್ಣನ್ ಹೇಳಿದ್ರು.

    ಅವಧಿಗೆ ಮೊದಲೇ ಸಾಧನೆ: ಆರ್ಥಿಕ ವರ್ಷದಲ್ಲಿ ಸ್ವಯಂ ಘೋಷಿತವಾಗಿ ಆದಾಯ ಘೋಷಿಸಿಕೊಂಡ ಮೊತ್ತ 4,828 ಕೋಟಿಯಾಗಿದ್ರೆ, ರೇಡ್ ಮಾಡಿ 132 ಕೋಟಿಯನ್ನ ಸೀಜ್ ಮಾಡಲಾಗಿದೆ. ಕಾನೂನು ಬಾಹಿರ ಹಣ ವರ್ಗಾವಣೆ ಹಿನ್ನೆಲೆಯಲ್ಲಿ 307 ಕೋಪರೇಟೀವ್ ಬ್ಯಾಂಕ್‍ಗಳು ಮತ್ತು ಏಳು ರಾಷ್ಟ್ರೀಕೃತ ಬ್ಯಾಂಕುಗಳ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿಯಿಂದ ಶಿವಮೊಗ್ಗದ ಎರಡು ಮತ್ತು ಮಂಗಳೂರಿನ ಒಂದು ಕೋಪರೇಟೀವ್ ಬ್ಯಾಂಕುಗಳಿಂದ 900 ಕೋಟಿ ಹಣ ವಶಪಡಿಸಿಕೊಳ್ಳಲಾಗಿದೆ ಅಂತ ಐಟಿ ತನಿಖಾ ವಿಭಾಗ ಮಾಹಿತಿ ನೀಡ್ತು. ಇನ್ನು, ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ನಾವು 85 ಸಾವಿರಕೋಟಿ ಟಾರ್ಗೆಟ್ ಇಟ್ಟುಕೊಂಡಿದ್ವಿ. ಆದ್ರೆ, 86,229 ಕೋಟಿ ತೆರಿಗೆ ಸಂಗ್ರಹವಾಗಿದೆ. ತೆರಿಗೆ ಸಂಗ್ರಹದ ಗುರಿಯನ್ನು ನಾವು ಅವಧಿಗೆ ಮೊದಲೇ ಮುಟ್ಟಿದ್ದೇವೆ. ಶೇ. 22.48 ಶೇ ದರದಲ್ಲಿ ತೆರಿಗೆ ಸಂಗ್ರಹ ವೃದ್ಧಿಯಾಗಿದೆ. ಕರ್ನಾಟಕ ವಿಭಾಗ ತೆರಿಗೆ ಸಂಗ್ರಹದಲ್ಲಿ ಮೂರನೇ ಸ್ಥಾನ ಗಳಿಸಿದೆ ಎಂದು ಐಟಿ ಆಯುಕ್ತೆ ನೂತನ್ ಒಡೆಯರ್ ಹೇಳಿದ್ರು.