Tag: ಆದಾಯ ತೆರಿಗೆ ಇಲಾಖೆ

  • ಮಾಯಾವತಿ ಸಹೋದರನ 400 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಜಪ್ತಿ

    ಮಾಯಾವತಿ ಸಹೋದರನ 400 ಕೋಟಿ ರೂ. ಮೌಲ್ಯದ ಬೇನಾಮಿ ಆಸ್ತಿ ಜಪ್ತಿ

    ನವದೆಹಲಿ: ಬಹುಜನ ಸಮಾಜವಾದಿ ಪಕ್ಷ (ಬಿಎಸ್‍ಪಿ) ನಾಯಕಿ ಮಾಯಾವತಿ, ಸಹೋದರ ಹಾಗೂ ಅವರ ಪತ್ನಿಗೆ ಸೇರಿದ್ದ 400 ಕೋಟಿ ರೂ. ಮೌಲ್ಯದ ಬೆನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿದೆ.

    ಮಾಯಾವತಿ ಸಹೋದರ, ಬಿಎಸ್‍ಪಿ ರಾಷ್ಟ್ರೀಯ ಉಪಾಧ್ಯಕ್ಷ ಆನಂದ್ ಕುಮಾರ್ ಮತ್ತು ಅವರ ಪತ್ನಿ ಹೆಸರಿನಲ್ಲಿ 7 ಎಕರೆ ಆಸ್ತಿ ಇತ್ತು. ಅಕ್ರಮ ಆಸ್ತಿಗಳಿಕೆ ಪ್ರರಣದ ಅಡಿ ಈ ಜಮೀನನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿಕೊಂಡಿದೆ. ಈ ಜಮೀನಿನ ಮೌಲ್ಯವನ್ನು 400 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

    ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆ 1988ರ ಸೆಕ್ಷನ್ 24(3)ರ ಅಡಿ ದೆಹಲಿಯ ಆದಾಯ ತೆರಿಗೆ ಇಲಾಖೆಯು ಜುಲೈ 16ರಂದು ಅಕ್ರಮ ಆಸ್ತಿ ಜಪ್ತಿಗೆ ಆದೇಶ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಬೇನಾಮಿ ನಿಷೇಧ ಘಟಕವು (ಬಿಪಿಯು) ಇಂದು ಆನಂದ್ ಕುಮಾರ್ ಅವರಿಗೆ ಸೇರಿದ್ದ ಆಸ್ತಿಯನ್ನು ವಶಕ್ಕೆ ಪಡೆದಿದೆ.

    ಆನಂದ್‍ಕುಮಾರ್ ಅವರ ಆಸ್ತಿ ಒಟ್ಟು 28,328.07 ಚ.ಮೀ ಅಳತೆ ಹೊಂದಿದೆ. ಇದರ ಪ್ರಸ್ತುತ ಮೌಲ್ಯವು 400 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಬೇನಾಮಿ ಕಾಯ್ದೆಯ ಪ್ರಕಾರ ಆರೋಪ ಸಾಬೀತಾದರೆ ದೋಷಿಗಳು 7 ವರ್ಷ ಕಠಿಣ ಶಿಕ್ಷಗೆ ಗುರಿಯಾಗುತ್ತಾರೆ. ಅಷ್ಟೇ ಅಲ್ಲದೆ ಅವರ ಆಸ್ತಿಯ ಶೇ.25ರಷ್ಟು ದಂಡವನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.

  • ಐಟಿ ದಾಳಿ: ಯಾರ ನಿವಾಸದಲ್ಲಿ ಎಷ್ಟು ಕೋಟಿ ಸಿಕ್ಕಿದೆ? ಎಷ್ಟು ಚಿನ್ನ ಸಿಕ್ಕಿದೆ?

    ಐಟಿ ದಾಳಿ: ಯಾರ ನಿವಾಸದಲ್ಲಿ ಎಷ್ಟು ಕೋಟಿ ಸಿಕ್ಕಿದೆ? ಎಷ್ಟು ಚಿನ್ನ ಸಿಕ್ಕಿದೆ?

    ಬೆಂಗಳೂರು: ಚುನಾವಣಾ ವೆಚ್ಚದ ಮೇಲ್ವಿಚಾರಣೆ ಭಾಗವಾಗಿ ಕರ್ನಾಟಕ, ಗೋವಾ ವಲಯಕ್ಕೆ ಸೇರಿದ ಐಟಿ ಅಧಿಕಾರಿಗಳು ಕರ್ನಾಟಕದ ಕೆಲ ಪ್ರದೇಶಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಇಲಾಖೆ ಸ್ಪಷ್ಟಪಡಿಸಿದೆ.

    ಐಟಿ ಹೇಳಿಕೆಯಲ್ಲಿ ಏನಿದೆ?
    ಏ.10 ರಂದು ಪಣಜಿ ಮತ್ತು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ಗೋವಾ, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಉಡುಪಿ ಪ್ರದೇಶದಲ್ಲಿ ಮಟ್ಕಾ, ಆರ್ಥಿಕ ವ್ಯವಹಾರ, ಗೋಡಂಬಿ ವ್ಯವಹಾರ ಸೇರಿದಂತೆ ಇತರೇ ಆರ್ಥಿಕ ವ್ಯವಹಾರಗಳನ್ನು ನಡೆಸುವ ಕೆಲ ಉದ್ಯಮಿಗಳ ಮೇಲೆ ದಾಳಿ ನಡೆಸಲಾಗಿದೆ. ಗೋವಾದಲ್ಲಿ ನಡೆದ ದಾಳಿಯಲ್ಲಿ ಮಟ್ಕಾ ಹಾಗೂ ಗೋಡಂಬಿ ವ್ಯವಹಾರ ನಡೆಸುವ ಉದ್ಯಮಿ ನಿವಾಸ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಸುಮಾರು 33 ಲಕ್ಷ ರೂ. ದಾಖಲೆ ಇಲ್ಲದ ಹಣ ಪತ್ತೆಯಾಗಿದೆ.

    ಬೆಳಗಾವಿಯ ಚಿಕ್ಕೋಡಿ, ಗೋಕಾಕ್, ನಿಪ್ಪಾಣಿ ಪ್ರದೇಶಗಳಲ್ಲಿ ಸಿವಿಲ್ ಗುತ್ತಿಗೆದಾರರು ಹಾಗೂ ಮದ್ಯಪಾನಕ್ಕೆ ಸಂಬಂಧಿಸಿದ ಉದ್ಯಮ ನಡೆಸುವ ವ್ಯಕ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಪ್ರಕರಣದಲ್ಲಿ ದಾಖಲೆ ಇಲ್ಲದೇ ನೌಕರರ ಹೆಸರಿನಲ್ಲಿ ಇರುವ ಎಫ್‍ಡಿ ಹಾಗೂ ನಕಲಿ ಬಿಲ್ಲಿಂಗ್ ಮೂಲಕ ನಗದು ಪಡೆದಿರುವ ದಾಖಲೆಗಳು ಲಭ್ಯವಾಗಿದೆ. ಅಲ್ಲದೇ ಪಿಡಬ್ಲ್ಯೂಡಿ ಎಂಜಿನಿಯರ್ ಗಳಿಗೆ ನೀಡಲಾಗಿರುವ ಹಣ ಬಗ್ಗೆ ಮಾಹಿತಿ ಲಭಿಸಿದೆ. ಅಂದಾಜು 62 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

    ಹುಬ್ಬಳ್ಳಿ, ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ 6 ಪಿಡಬ್ಲ್ಯೂಡಿ ಗುತ್ತಿಗೆದಾರರು, ಒಬ್ಬ ಪಿಡಬ್ಲೂಡಿ ಅಧಿಕಾರಿ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಅಕ್ರಮ ಹಣ ಪಾವತಿ, ನಕಲಿ ಬಿಲ್ಲಿಂಗ್ ಮೂಲಕ ಅಪಾರ ಮೊತ್ತದ ಹಣ ಪಡೆದಿರುವ ಸಾಕ್ಷಿಗಳು ಲಭ್ಯವಾಗಿದೆ. ಇದನ್ನು ಹೊರತು ಪಡಿಸಿ ಲಭ್ಯವಾಗಿರುವ ಇತರೇ ದಾಖಲೆಗಳ ಅನ್ವಯ 40.50 ಕೋಟಿ ಆದಾಯ ಹಣ, 1.29 ಕೋಟಿ ರೂ. ದಾಖಲೆ ರಹಿತ ಹಣ ಮತ್ತು 3.9 ಕೋಟಿ ರೂ. ಮೌಲ್ಯದ ಚಿನ್ನ (10.30 ಕೆಜಿ ಚಿನ್ನಾಭರಣ, 2.22 ಕೆಜಿ ಚಿನ್ನದ ಗಟ್ಟಿ) ಸೇರಿದೆ.

    ಉಡುಪಿಯಲ್ಲಿ ನಡೆದ ದಾಳಿಯಲ್ಲಿ ಸಾರಿಗೆ ಬಸ್ ಉದ್ಯಮ ನಡೆಸುವ ವ್ಯಕ್ತಿಗೆ ಸೇರಿದ ಸ್ಥಳಗಳನ್ನು ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ದಾಖಲೆ ಇಲ್ಲದ 10 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಸಾರಿಗೆ ಉದ್ಯಮದಲ್ಲಿ ಬಂದ ಆದಾಯದ ಬಗ್ಗೆ ಸರಿಯಾದ ಲೆಕ್ಕ ತೋರಿಸದ ದಾಖಲೆಗಳು ಹಾಗೂ ಹಲವು ಕಡೆ ಹೂಡಿಕೆ ಮಾಡಿರುವ ಸಾಕ್ಷಿ ಪತ್ರಗಳು ಲಭ್ಯವಾಗಿದೆ.

    ಏ.11 ರಂದು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್, ಇವೆಂಟ್ ಮ್ಯಾನೇಜ್‍ಮೆಂಟ್, ಕೋಳಿ ಸಾಕಾಣಿಕೆ ಸೇರಿದಂತೆ ವಿವಿಧ ಉದ್ಯಮಗಳು ನಡೆಸುವ ಮೂವರು ಉದ್ಯಮಿಗಳ ಮೇಲೆ ದಾಳಿ ನಡೆದಿದೆ. ಈ ವೇಳೆ ದಾಖಲೆ ಇಲ್ಲದ 85 ಲಕ್ಷ ರೂ. ಹಣ, 13.5 ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಅಲ್ಲದೇ ಅಕ್ರಮ ಹಣ ಸಂದಾಯ ಆಗಿರುವ ಬಗ್ಗೆಯೂ ದಾಖಲೆಗಳು ಸಿಕ್ಕಿದೆ.

    ಗೋವಾ, ಹುಬ್ಬಳ್ಳಿ, ಬಳ್ಳಾರಿ, ಬೆಂಗಳೂರು, ಉಡುಪಿಯಲ್ಲಿ ನಡೆದ ದಾಳಿಯಲ್ಲಿ ಒಟ್ಟು 3.19 ಕೋಟಿ ರೂ. ಹಣ ಮತ್ತು 3.9 ಕೋಟಿ ರೂ. ಮೌಲ್ಯದ 12.5 ಕೆಜಿ ತೂಕದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದ್ದು, ಈ ಎಲ್ಲಾ ದಾಳಿಗಳು ಸಂಸ್ಥೆಗೆ ಲಭಿಸಿದ ಖಚಿತ ಮಾಹಿತಿ ಹಾಗೂ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಆದರೆ ಯಾವುದೇ ರಾಜಕೀಯ ಮುಖಂಡ, ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಅಭ್ಯರ್ಥಿ, ಸಂಸದ, ಶಾಸಕರ ಮನೆ ಮೇಲೆ ದಾಳಿ ನಡೆಸಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

  • ಸಿಎಂ ಆಪ್ತ ಸಿಎಸ್ ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ

    ಸಿಎಂ ಆಪ್ತ ಸಿಎಸ್ ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ

    ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ, ಸಣ್ಣ ನೀರಾವರಿ ಮತ್ತು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಮತ್ತು ಅವರ ಸಂಬಂಧಿಕರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಪುಟ್ಟರಾಜು ಸ್ವಗ್ರಾಮ ಚಿನಕುರಳಿಯಲ್ಲಿರುವ ಮನೆ ಮೇಲೆ ಬೆಳಗ್ಗೆ ಐಟಿ ದಾಳಿ ನಡೆದಿದೆ. ಮೈಸೂರಿನ ವಿಜಯನಗರದಲ್ಲಿರುವ ಪುಟ್ಟರಾಜು ಅಣ್ಣನ ಮಗ ಅಶೋಕ್ ಮನೆ ಮೇಲೆಯೂ ದಾಳಿ ನಡೆದಿದೆ. ನಸುಕಿನ ಜಾವದಿಂದ ಪುಟ್ಟರಾಜು ನಿವಾಸ, ಸಂಬಂಧಿಗಳ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

    ಬೆಂಗಳೂರಿನ ಹಲವು ಉದ್ಯಮಿಗಳ ಮನೆ ಮೇಲೆ ಬುಧವಾರ ರಾತ್ರಿ ಐಟಿ ದಾಳಿ ನಡೆದಿದೆ. 10ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿಯಾಗಿದೆ. ಬೆಂಗಳೂರು ಉದ್ಯಮಿ ಸೌತ್ ಎಂಡ್ ಸರ್ಕಲ್ ನಲ್ಲಿರುವ ಸಿದ್ದಿಕ್ ಶೇಟ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

    ಬುಧವಾರ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ, ಬಿಜೆಪಿಯ ಆಪ್ತ ಮೂಲಗಳಿಂದ ನನಗೆ ಫೋನ್ ಕರೆ ಬಂದಿದ್ದು, ಕಾಂಗ್ರೆಸ್, ಜೆಡಿಎಸ್ ಅಭಿಮಾನಿಗಳನ್ನು ಗುರಿ ಮಾಡಿ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಪಕ್ಷ ಬೆಂಬಲಿಗರ ಮೇಲೆ ದಾಳಿ ನಡೆಸಿ ಎಷ್ಟು ಹಣ ತೆಗೆದುಕೊಂಡು ಹೋಗುತ್ತಾರೆ ನೋಡುತ್ತೇನೆ. ಆದರೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದರೆ ನಾನು ಕೂಡ ಪಶ್ಚಿಮ ಬಂಗಾಳ ಸಿಎಂರಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಐಟಿ ದಾಳಿ ನಡೆಸಲು 300 ಕ್ಯಾಬ್ ರೆಡಿಯಾಗಿವೆ: ಸಿಎಂ

     

  • ಬಿಎಸ್‍ವೈ ಕಪ್ಪ ಕಾಣಿಕೆ ಡೈರಿ ನಕಲಿ- ಐಟಿ ಇಲಾಖೆ ಸ್ಪಷ್ಟನೆ

    ಬಿಎಸ್‍ವೈ ಕಪ್ಪ ಕಾಣಿಕೆ ಡೈರಿ ನಕಲಿ- ಐಟಿ ಇಲಾಖೆ ಸ್ಪಷ್ಟನೆ

    -ಬಿಜೆಪಿಯಿಂದ ಕಾಂಗ್ರೆಸ್‍ಗೆ 10 ಪ್ರಶ್ನೆ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೇಲಿನ ಕಪ್ಪ ಕಾಣಿಕೆಯ ಡೈರಿ ಪ್ರಕರಣ ಠುಸ್ ಆಗಿದೆ. ಐಟಿ ಇಲಾಖೆ ಇದನ್ನು ಫೇಕ್ ಎಂದಿದ್ದು, ಹಸ್ತಾಕ್ಷರ ನಕಲಿ ಎಂದಿದೆ. ಇನ್ನೊಂದೆಡೆ ಬಿಜೆಪಿ ಕಾಂಗ್ರೆಸ್ ನಾಯಕರಿಗೆ ಕೇಸ್ ಸಂಬಂಧ 10 ಪ್ರಶ್ನೆಗಳನ್ನು ಕೇಳಿದೆ.

    ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಬಿಎಸ್‍ವೈ ಕಪ್ಪ ಕಾಣಿಕೆಯ ಡೈರಿ ಕೇಸ್ ಸ್ಫೋಟವಾದ ವೇಗದಲ್ಲೇ ಠುಸ್ಸಾಗಿದೆ. ಡೈರಿ ಪ್ರಕರಣವನ್ನ ಕಾಂಗ್ರೆಸ್ ಹೊರಬಿಡುತ್ತಲೇ ಎಚ್ಚೆತ್ತ ಬಿಜೆಪಿ ಇದನ್ನ ನಕಲಿ ಎಂದು ಹೇಳಿತ್ತು. ಉದ್ದೇಶಪೂರ್ವಕವಾಗಿ ಇದನ್ನ ಬಿಡುಗಡೆ ಮಾಡಲಾಗಿದೆ ಎಂದು ಹರಿಹಾಯ್ದಿತ್ತು. ಇದಕ್ಕೆ ಪೂಕರವೆಂಬಂತೆ ಆದಾಯ ತೆರಿಗೆ ಇಲಾಖೆ ಕೂಡ ಈ ಕುರಿತು ಸ್ಪಷ್ಟನೆ ನೀಡಿದೆ. ಡಿಕೆಶಿ ಮನೆಯಲ್ಲಿ ಸಿಕ್ಕಿ ಡೈರಿ ನಕಲಿ, ಸಹಿ ಕುರಿತು ನಾವು ಆಗಲೇ ವಿಧಿವಿಜ್ಞಾನ ಕೇಂದ್ರಕ್ಕೆ ಕಳುಹಿಸಿ ಪರೀಕ್ಷೆ ಮಾಡಲಾಗಿದೆ ಎಂದು ಐಟಿ ಡಿಜಿ ಬಾಲಕೃಷ್ಣನ್ ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಡೈರಿ ಇಟ್ಕೊಂಡು ಡಿಕೆಶಿ ಚೌಕಾಶಿ – ಸತ್ಯ ಬಿಚ್ಚಿಟ್ಟ ಐಟಿ ಇಲಾಖೆ

    ಕಾಂಗ್ರೆಸ್ `ಡೈರಿ ರಾಜಕೀಯಕ್ಕೆ’ ಬಿಜೆಪಿ ಪ್ರಶ್ನೆಗಳೇನು?
    * ಪ್ರಶ್ನೆ 1: ಡೈರಿ ನಿಮಗೆ ಸಿಕ್ಕಿದ್ದು ಯಾವಾಗ..?
    * ಪ್ರಶ್ನೆ 2: ಯಾರು ಈ ಡೈರಿಯನ್ನು ತಂದುಕೊಟ್ಟರು..?
    * ಪ್ರಶ್ನೆ 3: ಡೈರಿಯನ್ನು ಎಲ್ಲಿ ಕೊಟ್ಟರು..?
    * ಪ್ರಶ್ನೆ 4: ಒರಿಜಿನಲ್ ಡೈರಿ ಎಲ್ಲಿ..?
    * ಪ್ರಶ್ನೆ 5: ಏಕೆ ಇದುವರೆಗೂ ಈ ಡೈರಿ ಆಧರಿಸಿ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ಕೊಡಲಿಲ್ಲ..?
    * ಪ್ರಶ್ನೆ 6: 2013 ಮೇ ತಿಂಗಳಿನಿಂದ ನಿಮ್ಮದೇ ಪಕ್ಷದ ಆಡಳಿತ ಇದ್ದರೂ ಯಾವುದೇ ತನಿಖೆ ನಡೆಸದೇ ಇರಲು ಕಾರಣವೇನು..?
    * ಪ್ರಶ್ನೆ 7: ಡೈರಿಯು ಡಿ.ಕೆ.ಶಿವಕುಮಾರ್ ಮನೆಯಲ್ಲಿ ಪತ್ತೆಯಾಗಿದ್ದು ಹೇಗೆ? ಇದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಬೇಕಾಗಿದೆ.
    * ಪ್ರಶ್ನೆ 8: ಈ ಹಿಂದೆ ಪ್ರಕರಣವೊಂದರ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಕಾಂಗ್ರೆಸ್ ಈಗ ಏಕೆ ದೂರು ನೀಡದಿರಲು ಕಾರಣವೇನು?
    * ಪ್ರಶ್ನೆ 9: ಎಂಎಲ್‍ಸಿ ಗೋವಿಂದರಾಜು ಮನೆಯಲ್ಲಿ ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಡೈರಿಯಲ್ಲಿ ಕಾಂಗ್ರೆಸ್ ನಾಯಕರಿಗೆ ಹಣ ಸಂದಾಯವಾಗಿತ್ತು ಎಂದು ನಮೂದಾಗಿತ್ತು. ಆಗ ಯಡಿಯೂರಪ್ಪ ಡೈರಿ ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ಸೃಷ್ಟಿಯಾಗಿದ್ದು ನಿಜವಲ್ಲವೇ..?
    * ಪ್ರಶ್ನೆ 10: ಡೈರಿ ಪ್ರಕರಣ ಜನಲೋಕಪಾಲ್ ತನಿಖೆಗೆ ಸೂಕ್ತವಾದುದು ಎಂದು ಕಾಂಗ್ರೆಸ್ ಹೇಳುತ್ತಿದೆ. ಆರೋಪ ಮಾಡಿದವರು ದೂರು ನೀಡಬೇಕೆ ಅಥವಾ ದೂರಿಗೆ ಒಳಗಾದವರೇ..?  ಇದನ್ನೂ ಓದಿ: ಕಾಂಗ್ರೆಸ್ ಬಿಚ್ಚಿಟ್ಟ ಡೈರಿಯ ಸತ್ಯಾಂಶವನ್ನು ಅಲ್ಲಗಳೆದ ಐಟಿ ಇಲಾಖೆ

    ಡೈರಿ ಕೇಸ್ ನಕಲಿ ಎಂದು ಗೊತ್ತಾಗುತ್ತಿದ್ದಂತೆ ಪ್ರತಿಕ್ರಿಸಿದ ಬಿಎಸ್‍ವೈ, ಇದು ಕಾಂಗ್ರೆಸ್ ಕೀಳುಮಟ್ಟದ ರಾಜಕಾರಣ ಎಂದಿದ್ದಾರೆ. ಅಲ್ಲದೆ ಬಿಎಸ್‍ವೈ ಪುತ್ರ ರಾಘವೇಂದ್ರ `ಇದು ಜೋಕ್ ಆಫ್ ದಿ ಇಯರ್’ ಅಂದಿದ್ದರು. ಇತ್ತ ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಡೈರಿಯಲ್ಲಿರೋದು ಯಡಿಯೂರಪ್ಪ ಸಹಿಯೇ. ಇದ್ರಲ್ಲಿ ಯಾವುದೇ ಅನುಮಾನ ಬೇಡ. ಬೇಕಿದ್ರೆ ಈ ಬಗ್ಗೆ ಲೋಕಪಾಲ ತನಿಖೆ ಆಗಲಿ ಎಂದು ಹೇಳಿದ್ರು.

    ಒಟ್ಟಿನಲ್ಲಿ ಬಿಎಸ್‍ವೈ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದಾರೆ ಎನ್ನಲಾದ ಡೈರಿ ಕೇಸ್ ಸದ್ಯಕ್ಕೆ ತಣ್ಣಗಾದಂತೆ ಕಂಡುಬರುತ್ತಿದ್ದು, ಮುಂದಿನ ಪ್ರತಿಕ್ರಿಯೆಗಳನ್ನು ಕಾದು ನೋಡಬೇಕಿದೆ.

  • ಡಿಕೆಶಿ 75 ಕೋಟಿ ಬೇನಾಮಿ ಆಸ್ತಿ ಜಪ್ತಿ

    ಡಿಕೆಶಿ 75 ಕೋಟಿ ಬೇನಾಮಿ ಆಸ್ತಿ ಜಪ್ತಿ

    ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಅವರು ತಾಯಿ, ಸ್ನೇಹಿತರ ಹೆಸರಲ್ಲಿ ಇಟ್ಟಿದ್ದ 75 ಕೋಟಿ ಬೇನಾಮಿ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಐಟಿ ಇಲಾಖೆಯ ಡಿ.ಜಿ. ಬಾಲಕೃಷ್ಣನ್ ತಿಳಿಸಿದ್ದಾರೆ.

    ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿದಾಗ ಕೆಲ ದಾಖಲಾತಿಗಳು ಲಭ್ಯವಾಗಿದ್ದವು. ಆ ದಾಖಲೆಗಳನ್ನ ತೋರಿಸಿ ಡಿ.ಕೆ.ಶಿವಕುಮಾರ್ ತನಿಖೆಯಿಂದ ರಿಯಾಯಿತಿ ಪಡೆದುಕೊಳ್ಳಲು ಮುಂದಾಗಿದ್ದರು. ನಾವು ಯಾವುದೇ ಒಂದು ಪಕ್ಷದ ಪರವಾಗಿ ಕೆಲಸ ಮಾಡದ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿ ಸಹಾಯ ಮಾಡಲಿಲ್ಲ. ಈ ವೇಳೆ ಲಭ್ಯವಾಗಿರುವ ಕೆಲ ದಾಖಲೆಗಳ ಲಾಭ ಪಡೆಯಲು ಸಚಿವರು ಮುಂದಾಗಿದ್ದರು. ಕಾನೂನು ಪ್ರಕಾರವಾಗಿ ಯಾವ ಕ್ರಮಕೈಗೊಳ್ಳಬೇಕು ಆ ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ ಎಂದು ಬಾಲಕೃಷ್ಣನ್ ತಿಳಿಸಿದರು.

     

    ಡೈರಿ ಆರೋಪ ಠುಸ್: ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಬಿಡುಗಡೆ ಮಾಡಿದ್ದ 1800 ಕೋಟಿ ಕಪ್ಪ ಡೈರಿ ಆರೋಪ ಠುಸ್ ಆಗಿದೆ. ದೇಶಾದ್ಯಂತ ಸಂಚಲನ ಮೂಡಿಸಿದ ಈ ಡೈರಿ ನಕಲಿ ಅಂತ ಐಟಿ ಇಲಾಖೆಯ ಡಿ.ಜಿ. ಬಾಲಕೃಷ್ಣನ್ ಸ್ಟಷ್ಟಪಡಿಸಿದ್ದಾರೆ.

    ಒಂದು ಐಟಿ ದಾಳಿಯಲ್ಲಿ ದಾಖಲಾತಿಗಳು ಸಿಕ್ಕಿದ್ದವು. ಅದನ್ನು ಹೈದರಾಬಾದ್‍ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ವಿ. ಅದು ಫೋಟೋ ಕಾಫಿಗಳಾಗಿ ಇದ್ದಿದರಿಂದ ಸತ್ಯಾಂಶ ಬೆಳಕಿಗೆ ಬರಲಿಲ್ಲ. ನಮ್ಮ ಅಭಿಪ್ರಾಯದ ಪ್ರಕಾರ ಅದೊಂದು ಸುಳ್ಳು ದಾಖಲೆ. ಆದ್ರೆ, ನಿನ್ನೆ ಬಿಡುಗಡೆ ಮಾಡಿದ ಕೆಲ ದಾಖಲೆಗಳು ಫೋರ್ಜರಿ. ಮೊದಲ ಪೇಜ್ ಏನಿತ್ತು. ಅದು ನಾವು ಸೀಜ್ ಮಾಡಿದಾಗ ಸಿಕ್ಕಲೇ ಇಲ್ಲ. ಹಣದ ಬಗ್ಗೆ ಬರೆದಿರೋ ಪೇಜ್ ಶುದ್ಧ ಸುಳ್ಳು ಎಂದು ಬಾಲಕೃಷ್ಣನ್ ಎಂದು ತಿಳಿಸಿದ್ದಾರೆ.

  • ಡಿಕೆಶಿಗೆ ಐಟಿ ನೋಟಿಸ್ – ಉತ್ತರ ನೀಡದೇ ಇದ್ರೆ ಆಸ್ತಿ ಜಪ್ತಿ?

    ಡಿಕೆಶಿಗೆ ಐಟಿ ನೋಟಿಸ್ – ಉತ್ತರ ನೀಡದೇ ಇದ್ರೆ ಆಸ್ತಿ ಜಪ್ತಿ?

    ಬೆಂಗಳೂರು: ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಜಾರಿ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. ಬೇನಾಮಿ ಆಸ್ತಿ ಸುಳಿಯಲ್ಲಿ ಸಿಲುಕಿರುವ ಡಿಕೆಶಿಗೆ ನೋಟಿಸ್ ಮೇಲೆ ನೋಟಿಸ್ ನೀಡುತ್ತಿರುವ ಇಡಿ ಜೊತೆಗೆ ಈಗ ಐಟಿ ಪ್ರಪಾರ್ಟಿ ಅಟ್ಯಾಚ್‍ಮೆಂಟ್ ನೋಟಿಸ್ ನೀಡಿದೆ.

    ಬೇನಾಮಿ ಆಸ್ತಿ ಬಗ್ಗೆ ತನಿಖೆ ನಡೆಸುತ್ತಿರುವ ಐಟಿ 15 ದಿನಗಳ ಒಳಗಡೆ ಉತ್ತರ ನೀಡುವಂತೆ ಡಿಕೆಶಿಗೆ ಸೂಚಿಸಿದೆ. ಒಂದು ವೇಳೆ ಈ ನೋಟಿಸಿಗೆ ಸರಿಯಾದ ಉತ್ತರ ನೀಡದೇ ಇದ್ದಲ್ಲಿ ಡಿಕೆ ಶಿವಕುಮಾರ್ ಆಸ್ತಿ ಜಪ್ತಿಯಾಗುವ ಸಾಧ್ಯತೆಯಿದೆ.

    ಐಟಿ ವಿಚಾರಣೆಯ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅಧಿಕಾರಿಗಳ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಈಗಾಗಲೇ ಐಟಿ ಎರಡು ಬಾರಿ ನೋಟಿಸ್ ನೀಡಿದ್ದು ಈಗ ಉತ್ತರ ನೀಡದೇ ಇದ್ದರೆ ಡಿಕೆಶಿಗೆ ಸಂಕಷ್ಟವಾಗುವ ಸಾಧ್ಯತೆಯಿದೆ.

    ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಐಟಿ:
    2008 ರಲ್ಲಿ 75 ಕೋಟಿ ರೂ. 2013 ರಲ್ಲಿ 251 ಕೋಟಿ ರೂ. ಆದಾಯವನ್ನು ಡಿಕೆ ಶಿವಕುಮಾರ್ ಘೋಷಿಸಿದ್ದರೆ, 2018ರ ವಿಧಾನಸಭಾ ಚುನಾವಣೆ ವೇಳೆ 840 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಸಚಿವರ ಆದಾಯ ಪ್ರತಿ 5 ವರ್ಷಗಳಿಗೊಮ್ಮೆ ಶೇ.230 ರಷ್ಟು ಹೆಚ್ಚಳ ಕಂಡಿದೆ. ಶಿವಕುಮಾರ್ ಅವರ ಸಂಪಾದನೆಗೂ ಅವರಲ್ಲಿರುವ ಆದಾಯಕ್ಕೆ ತಾಳೆ ಆಗುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಚುನಾವಣಾ ಆಯೋಗಕ್ಕೆ ಈ ಹಿಂದೆ ಐಟಿ ಪತ್ರ ಬರೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಮ್ಮ ಮಗನ ಆಸ್ತಿ ಎಷ್ಟಿದೆ  – ಡಿಕೆಶಿ ತಾಯಿಗೆ ಐಟಿ ಕೇಳಿದ ಪ್ರಶ್ನೆಗಳು ಏನು?

    ನಿಮ್ಮ ಮಗನ ಆಸ್ತಿ ಎಷ್ಟಿದೆ – ಡಿಕೆಶಿ ತಾಯಿಗೆ ಐಟಿ ಕೇಳಿದ ಪ್ರಶ್ನೆಗಳು ಏನು?

    ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತಾಯಿ ಗೌರಮ್ಮ ಆದಾಯ ತೆರಿಗೆ ಕಚೇರಿಗೆ ಆಗಮಿಸಿ ಅಧಿಕಾರಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ಶುಕ್ರವಾರ ಮಧ್ಯಾಹ್ನ 12.30ಕ್ಕೆ ಆಗಮಿಸಿದ ಗೌರಮ್ಮ ಅವರನ್ನು ಸಂಜೆ 6.30ರವರೆಗೂ ವಿಚಾರಣೆ ನಡೆಸಲಾಯಿತು. ಪಿತ್ರಾರ್ಜಿತ ಆಸ್ತಿ ಮತ್ತು ಮಗನ ಆಸ್ತಿ ಬಗ್ಗೆ ತಾಯಿ ಗೌರಮ್ಮ ಉತ್ತರ ನೀಡಿದ್ದಾರೆ. ಈ ಹಿಂದೆ ಇದೇ ಪ್ರಶ್ನೆಗಳನ್ನು ಕೇಳಿದಾಗ ಡಿಕೆ ಶಿವಕುಮಾರ್ ಉತ್ತರ ನೀಡಲು ಸಮಯವಕಾಶ ಕೇಳಿದ್ದರು.

    ಡಿಕೆಶಿ ತಾಯಿಗೆ ಐಟಿ ಕೇಳಿದ 9 ಪ್ರಶ್ನೆಗಳು ಗೌರಮ್ಮ ಕೊಟ್ಟ ಉತ್ತರವೇನು..?

    ಪ್ರಶ್ನೆ: 1
    ನಿಮ್ಮ ಮಗನ ಆಸ್ತಿ ಎಷ್ಟಿದೆ ಅಂತ ನಿಮಗೆ ಗೊತ್ತಾ?
    ಬೆಂಗಳೂರಿನಾಗೆ ಮನೆ ಐತೆ ಅಂತ ಗೊತ್ತು ಸ್ವಾಮಿ

    ಪ್ರಶ್ನೆ: 2
    ಎಷ್ಟು ಮನೆಗಳಿವೆ ಗೊತ್ತಾ..?
    ಯಾವಾಗ್ಲೋ ಒಂದ್ಸಾರಿ ಬರ್ತೀವಿ ಹೋಗ್ತೀವಿ. ಹೀಗಾಗಿ ನನಗೆ ಗೊತ್ತಿರೋದು ಒಂದೇ ಮನೆ. ಇದನ್ನೂ ಓದಿ: 80 ವರ್ಷದ ತಾಯಿಯನ್ನು 6 ಗಂಟೆ ವಿಚಾರಣೆ ನಡೆಸಿದ್ದು ನೋವು ತಂದಿದೆ: ಡಿಕೆಶಿ

    ಪ್ರಶ್ನೆ: 3
    ನಿಮ್ಮ ಮೊಮ್ಮಗಳು ಏನು ಮಾಡ್ತಿದ್ದಾಳೆ ಗೊತ್ತಾ..?
    ಓದುತ್ತಿರಬೇಕು ಸ್ವಾಮಿ

    ಪ್ರಶ್ನೆ: 4
    ಬ್ಯುಸಿನೆಸ್ ಮಾಡ್ತಿರೋದು ನಿಮಗೆ ಗೊತ್ತಿಲ್ವಾ..?
    ಗೊತ್ತಿಲ್ಲ

    ಪ್ರಶ್ನೆ: 5
    ನಿಮ್ಮ ಸೊಸೆಯ ಬಳಿ ಇರೋ ಚಿನ್ನಾಭರಣ ಎಷ್ಟು ಅಂತ ಗೊತ್ತಾ..?
    ಇಲ್ಲ ಗೊತ್ತಿಲ್ಲ..

    ಪ್ರಶ್ನೆ: 6
    ನಿಮ್ಮ ಮಗನ ಅಕೌಂಟ್‍ನಲ್ಲಿ ಹಣ ಎಷ್ಟಿದೆ ಗೊತ್ತಾ..?
    ಗೊತ್ತಿಲ್ಲ

    ಪ್ರಶ್ನೆ: 7
    ನಿಮ್ಮ ಮಗ ತನ್ನ ವ್ಯವಹಾರದ ಬಗ್ಗೆ ಎಂದಾದ್ರು ತಮ್ಮ ಬಳಿ ಹೇಳಿದ್ದಾರಾ..?
    ಮಂತ್ರಿ ಆಗಿದ್ದಾನೆ ಅಂತ ಗೊತ್ತು. ಬೇರೆ ವ್ಯವಹಾರ ಗೊತ್ತಿಲ್ಲ.

    ಪ್ರಶ್ನೆ: 8
    ನಿಮ್ಮ ಹೆಸರಿನಲ್ಲಿ ನಿಮ್ಮ ಮಗ ಏನಾದ್ರು ಆಸ್ತಿ ಖರೀದಿ ಮಾಡಿದ್ದಾರಾ..?
    ನೆನಪಿಲ್ಲ ಸ್ವಾಮಿ

    ಪ್ರಶ್ನೆ: 9
    ನಿಮ್ಮ ಪಿತ್ರಾರ್ಜಿತ ಆಸ್ತಿ ಎಷ್ಟಿದೆ ..?
    ಅದರ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲವನ್ನೂ ಅವರೇ ನೋಡಿಕೊಳ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಪಾನ್ ಕಾರ್ಡ್ ನಲ್ಲಿರೋ 10 ಸಂಖ್ಯೆಗಳು ಏನನ್ನು ಸೂಚಿಸುತ್ತೆ? ಅರ್ಜಿ ಸಲ್ಲಿಸೋದು ಹೇಗೆ?

    ಪಾನ್ ಕಾರ್ಡ್ ನಲ್ಲಿರೋ 10 ಸಂಖ್ಯೆಗಳು ಏನನ್ನು ಸೂಚಿಸುತ್ತೆ? ಅರ್ಜಿ ಸಲ್ಲಿಸೋದು ಹೇಗೆ?

    ಭಾರತದ ನಾಗರೀಕರೇ ಆಗಲಿ ಅಥವಾ ಅನಿವಾಸಿ ಭಾರತೀಯರೇ(ಎನ್‍ಆರ್‍ಐ) ಆಗಿದ್ದರೂ ಭಾರತದಲ್ಲಿ ಆದಾಯ ತೆರಿಗೆ ಪಾವತಿ ಮಾಡಲು ಅಥವಾ ಹಣಕಾಸು ವ್ಯವಹಾರಗಳನ್ನು ಸಮಗ್ರವಾಗಿ ನಿರ್ವಹಿಸಲು ಪಾನ್ ಕಾರ್ಡ್ ಅತ್ಯವಶ್ಯಕ. ಇಂದಿನ ದಿನಗಳಲ್ಲಿ ಪಾನ್‍ಕಾರ್ಡ್ ಕೇವಲ ಆದಾಯ ತೆರಿಗೆ ಪಾವತಿಗೆ ಮಾತ್ರವಲ್ಲದೇ, ಅನೇಕ ರೀತಿಯ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಹಾಗಾದರೇ ಈ ಪಾನ್ ಕಾರ್ಡ್ ಎಂದರೇನು? ಅದರಿಂದ ಏನು ಉಪಯೋಗ? ಪಾನ್ ಕಾರ್ಡ್ ನಂಬರ್ ಹೇಗೆ ರಚಿಸಲ್ಪಡುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಪಾನ್ ಕಾರ್ಡ್ ಎಂದರೇನು?
    ಭಾರತದ ಆದಾಯ ತೆರಿಗೆ ಇಲಾಖೆ ನೀಡುವ 10 ಅಂಕಿಗಳುಳ್ಳ ಪರ್ಮನೆಂಟ್ ಅಕೌಂಟ್ ನಂಬರ್ ಅನ್ನು ಸಂಕ್ಷಿಪ್ತವಾಗಿ ಪಾನ್ ಕಾರ್ಡ್ ಎಂದು ಕರೆಯಲಾಗುತ್ತದೆ. ಈ ಪಾನ್ ಕಾರ್ಡ್ ನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬೇರೆ ಬೇರೆ ಅಂಕೆಗಳನ್ನು ನೀಡಲಾಗಿರುತ್ತದೆ. ಇದೊಂದು ಶಾಶ್ವತ ನಂಬರ್ ಆಗಿದ್ದು, ಒಂದು ವೇಳೆ ನಿಮ್ಮ ವಿಳಾಸ ಬದಲಾವಣೆ ಆದರೂ ಸಹ ಯಾವುದೇ ಪರಿಣಾಮ ಬೀರುವುದಿಲ್ಲ.

    ಪಾನ್ ಕಾರ್ಡನ್ನು ಯಾರಿಗೂ ವರ್ಗಾಯಿಸಲು ಸಾಧ್ಯವಿಲ್ಲ. ಇದು ಯುನಿವರ್ಸಲ್ ಗುರುತಿನ ಚೀಟಿಯ ಹಾಗೆ ಕಾರ್ಯನಿರ್ವಹಿಸುತ್ತದೆ. ಆದಾಯ ತೆರಿಗೆ ಪಾವತಿ ಹಾಗೂ ಹಣಕಾಸು ವ್ಯವಹಾರಗಳು ಈ ಖಾತೆ ಸಂಖ್ಯೆಯ ಆಧಾರದ ಮೇಲೆಯೇ ನಡೆಯುತ್ತದೆ. ಸದ್ಯ ಪಾನ್ ಕಾರ್ಡ್ ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಕಡ್ಡಾಯವಾಗಿ ಬೇಕಾಗಿದೆ.

    ಏನೇನು ಇರುತ್ತದೆ?
    ಪಾನ್ ಕಾರ್ಡಿನ ಮೊದಲನೇ ಸಾಲಿನಲ್ಲಿ ವ್ಯಕ್ತಿಯ ಸಂಪೂರ್ಣ ಹೆಸರು, ಎರಡನೇ ಸಾಲಿನಲ್ಲಿ ಆಕೆಯ/ಆತನ ತಂದೆ ಹಾಗೂ ಪೋಷಕರ ಹೆಸರು. ಮೂರನೇ ಸಾಲಿನಲ್ಲಿ ಜನ್ಮದಿನಾಂಕ. ನಾಲ್ಕನೇ ಸಾಲಿನಲ್ಲಿ 10 ಅಂಕಿಗಳ ಪರ್ಮನೆಂಟ್ ಅಕೌಂಟ್ ನಂಬರ್ ಹಾಗೂ ಐದನೇ ಸಾಲಿನಲ್ಲಿ ಪಾನ್ ಕಾರ್ಡ್ ಅರ್ಜಿದಾರರ ಸಹಿ ಹಾಗೂ ಅವರ ಭಾವಚಿತ್ರ ಮುದ್ರಿತವಾಗಿರುತ್ತದೆ. ಇದಲ್ಲದೇ ಆದಾಯ ತೆರಿಗೆ ಇಲಾಖೆಯ ಹಾಲೋಗ್ರಾಮ್ ಸಹ ಇರುತ್ತದೆ. ಒಂದು ವೇಳೆ ಸಂಸ್ಥೆಗಳು ಪಾನ್ ಕಾರ್ಡ್ ಪಡೆದುಕೊಂಡಿದ್ದರೆ, ಅದರಲ್ಲಿ ಸಂಸ್ಥೆಯ ಹೆಸರು, ನೋಂದಣಿ ದಿನಾಂಕ ಹಾಗೂ ಇತರೆ ಮಾಹಿತಿಗಳು ಮುದ್ರಿತವಾಗಿರುತ್ತವೆ.

    ಪಾನ್ ಕಾರ್ಡ್ ಸಲ್ಲಿಸಲು ಏನೇನು ಬೇಕು?
    ಇತ್ತೀಚಿನ ಎರಡು ಪಾಸ್‍ಪೋರ್ಟ್ ಸೈಜಿನ ಭಾವಚಿತ್ರ ಹಾಗೂ ಎಸ್‍ಎಸ್‍ಎಲ್‍ಸಿ ಪ್ರಮಾಣ ಪತ್ರ, ನೋಂದಾಯಿತ ಶಿಕ್ಷಣ ಸಂಸ್ಥೆಯಿಂದ ಪದವಿ ಪ್ರಮಾಣ ಪತ್ರ, ಕ್ರೆಡಿಟ್ ಕಾರ್ಡ್, ಬ್ಯಾಂಕ್ ಸ್ಟೇಟ್ ಮೆಂಟ್, ರೇಶನ್ ಕಾರ್ಡ್, ಚಾಲನಾ ಪರವಾನಗಿ, ಮತದಾನ ಗುರುತಿನ ಚೀಟಿ, ಪಾಸ್ ಪೋರ್ಟ್ ಹಾಗೂ ಆಧಾರ್ ಕಾರ್ಡ್ ಗಳು ಬೇಕು. ಅಲ್ಲದೇ ಹೊಸ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸ ಬೇಕಾದರೆ ಈ ಮೇಲ್ಕಂಡ ಕನಿಷ್ಠ ಎರಡು ಗುರುತಿನ ಚೀಟಿ ಮತ್ತು ವಿಳಾಸ ದೃಢಿಕರಣವನ್ನು ಕಡ್ಡಾಯವಾಗಿ ನೀಡಲೇ ಬೇಕು.

    ಅರ್ಜಿ ಸಲ್ಲಿಸುವುದು ಹೇಗೆ?
    ಪಾನ್ ಕಾರ್ಡ್ ಅನ್ನು ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ಇದರಲ್ಲಿ ವಯಸ್ಸು ಮತ್ತು ರಾಷ್ಟ್ರೀಯತೆ ಬರುವುದಿಲ್ಲ. ಒಂದು ವೇಳೆ ಮಕ್ಕಳ ಹೆಸರಿನಲ್ಲಿ ಪಾನ್ ಕಾರ್ಡ್ ಮಾಡಿಸಬೇಕಾದರೆ ಪೋಷಕರ ರುಜು ಕಡ್ಡಾಯವಾಗಿರುತ್ತದೆ. ಪಾನ್ ಕಾರ್ಡ್‍ಗೆ ಅರ್ಜಿ ಸಲ್ಲಿಸಲು ಆದಾಯ ತೆರಿಗೆಯ ಜಾಲತಾಣ (www.tin-nsdl.com) ಹಾಗೂ ಆದಾಯ ತೆರಿಗೆ ಇಲಾಖೆ ನಿಗದಿಪಡಿಸಿದ ಸಂಸ್ಥೆಗಳ ಮೂಲಕ ಆನ್‍ಲೈನ್ ಅಥವಾ ಆಪ್‍ಲೈನ್ ಮೂಲಕ ಅರ್ಜಿಸಲ್ಲಿಸಬಹುದು.

    10 ಸಂಖ್ಯೆಗಳು ಏನನ್ನು ಸೂಚಿಸುತ್ತವೆ?
    ಪಾನ್ ಕಾರ್ಡಿನ ಮೊದಲ 5 ಇಂಗ್ಲೀಷಿನ ಅಕ್ಷರಗಳನ್ನು ಕೋರ್ ಗುಂಪುಗಳೆಂದು ಕರೆಯುತ್ತಾರೆ. ಇದರಲ್ಲಿನ ಮೊದಲನೇ 3 ಅಕ್ಷರಗಳು `ಎ’ ಇಂದ `ಝೆಡ್’ ವರೆಗೆ ಸಾಮಾನ್ಯವಾಗಿ ಇರುತ್ತವೆ. 4ನೇ ಅಕ್ಷರವು ಪಾನ್ ಕಾರ್ಡ್ ಯಾವುದಕ್ಕೆ ಸಂಬಂಧಪಟ್ಟಿದೆ ಎಂಬುದನ್ನು ತೋರಿಸುತ್ತದೆ. ಸಿ-ಕಂಪನಿ, ಪಿ- ವ್ಯಕ್ತಿ, ಎಚ್-ಹಿಂದೂ ಅವಿಭಕ್ತ ಕುಟುಂಬ, ಎಫ್- ವಿಭಾಗ, ಎ-ವ್ಯಕ್ತಿಗಳ ಗುಂಪು, ಟಿ-ಟ್ರಸ್ಟ್, ಬಿ-ವ್ಯಕ್ತಿಯ ಗುರುತು, ಎಲ್-ಸ್ಥಳೀಯ ಸಂಸ್ಥೆಗಳು, ಜೆ-ಕಾನೂನು ಪ್ರಕಾರ ವ್ಯಕ್ತಿ ಎಂದು ಪರಿಗಣಿಸಿರುವುದು, ಜಿ-ಸರ್ಕಾರ ಆಗಿರುತ್ತದೆ. ಅಲ್ಲದೇ 5ನೇ ಅಕ್ಷರ ವ್ಯಕ್ತಿಯ ಹೆಸರಿನ ಮೊದಲನೇ ಅಕ್ಷರವಾಗಿರುತ್ತದೆ. ಇದಲ್ಲದೇ 6 ರಿಂದ 9ನೇ ಸ್ಥಾನದಲ್ಲಿ ಬರುವ ಅಂಕಿಗಳು 0001 ರಿಂದ 9999ರವರೆಗಿನ ಸರಣಿ ಸಂಖ್ಯೆಗಳಾಗಿರುತ್ತವೆ. ಕೊನೆಯ ಇಂಗ್ಲೀಷಿನ ಸಂಖ್ಯೆ ಅಂಕಿಗಳನ್ನು ಪ್ರತಿನಿಧಿಸುವ ಅಕ್ಷರವಾಗಿರುತ್ತದೆ.

    ಉದಾಹರಣೆಗೆ ABCPS1234A ಆಗಿದೆ.

    ಪಾನ್ ಕಾರ್ಡಿನ ಉಪಯೋಗವೇನು?
    ಪಾನ್ ಕಾರ್ಡ್ ನ್ನು ಬ್ಯಾಂಕ್ ಖಾತೆ ತೆರೆಯಲು, ಐಟಿ ರಿಟರ್ನ್ಸ್, ಆಸ್ತಿ ಮತ್ತು ವಾಹನ ಮಾರಾಟ ಹಾಗೂ ಖರೀದಿ ವೇಳೆ, ಷೇರು ಮತ್ತು ಮ್ಯೂಚುವಲ್ ಫಂಡ್‍ಗಳಲ್ಲಿ ಹಣ ಹೂಡಿಕೆ ಮಾಡುವ ವೇಳೆ ಹಾಗೂ ಇನ್ನೂ ಅನೇಕ ಸಂದರ್ಭದಲ್ಲಿ ಉಪಯೋಗ ಮಾಡಿಕೊಳ್ಳಬಹುದು. ಇದಲ್ಲದೇ ಪಾನ್ ಕಾರ್ಡನ್ನು ಗುರುತಿನ ಚೀಟಿಯಾಗಿರೂ ಸಹ ಬಳಕೆ ಮಾಡಬಹುದಾಗಿದೆ.

    ಪಾನ್ ಕಾರ್ಡ್ ಮೇಲೆ ಜನರಲ್ಲಿರುವ ಅಪನಂಬಿಕೆಗಳೇನು?
    ಜನರು ಪಾನ್ ಕಾರ್ಡನ್ನು ಕೇವಲ ತೆರಿಗೆ ಪಾವತಿ ಮಾಡಲು ಬಳಸುತ್ತಾರೆ ಎನ್ನುವ ಅಪನಂಬಿಕೆಯನ್ನು ಹಲವರು ನಂಬಿಕೊಂಡಿದ್ದಾರೆ.

    ಆಧುನಿಕ ಸಮಾಜದ ರೀತಿ ನೀತಿಗಳಿಗೆ ಅನುಸಾರವಾಗಿ ನಡೆದುಕೊಳ್ಳಬೇಕಾದರೆ ಪಾನ್ ಕಾರ್ಡ್ ಅತ್ಯಗತ್ಯ. ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲದಿದ್ದರೆ ಕೂಡಲೆ ಅರ್ಜಿ ಹಾಕುವುದು ಉತ್ತಮ. ಒಂದು ಬಾರಿ ಸ್ವಲ್ಪ ಸಮಯವನ್ನು ಮೀಸಲಿಟ್ಟು ಈ ಕಾರ್ಡ್ ಮಾಡಿಸಿದರೆ, ಮುಂದಿನ ದಿನಗಳಲ್ಲಿ ಈ ಕಾರ್ಡ್ ಮೂಲಕ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿಷ್ಠಾವಂತ ತೆರಿಗೆದಾರರಿಗೆ ಸಿಗಲಿದೆ ವಿಶೇಷ ಸವಲತ್ತು!

    ನಿಷ್ಠಾವಂತ ತೆರಿಗೆದಾರರಿಗೆ ಸಿಗಲಿದೆ ವಿಶೇಷ ಸವಲತ್ತು!

    ನವದೆಹಲಿ: ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಗೆ ಸಹಕರಿಸುತ್ತಿರುವ ನಿಷ್ಠಾವಂತ ತೆರಿಗೆದಾರರನ್ನು ಗುರುತಿಸಿ ಅವರಿಗೆ ವಿಶೇಷ ಸವಲತ್ತು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.

    ನಿಗದಿತ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವವರನ್ನು ಇದುವರೆಗೂ ಯಾವುದೇ ಸರ್ಕಾರಗಳು ಗುರುತಿಸಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಷ್ಠಾವಂತ ತೆರಿಗೆದಾರರಿಗೆ ವಿಶೇಷ ಸೌಲಭ್ಯಗಳನ್ನು ನೀಡಲು ಸಿದ್ಧತೆ ನಡೆಸಿದೆ.

    ಈಗಾಗಲೇ ಹಣಕಾಸು ಸಚಿವಾಲಯ ನೂತನ ಕರಡು ಪ್ರಸ್ತಾವನೆಯನ್ನು ಪ್ರಧಾನಿ ಕಚೇರಿಗೆ ತಲುಪಿಸಿದ್ದು, ಅಲ್ಲಿ ಅಂತಿಮಗೊಂಡ ಬಳಿಕ ಕ್ಯಾಬಿನೆಟ್ ಒಪ್ಪಿಗೆ ನೀಡಲಿದೆ. ಇದನ್ನೂ ಓದಿ: ದೇಶಾದ್ಯಂತ ಏಕರೂಪದ ಡಿಎಲ್, ಆರ್‌ಸಿ: ಏನೇನು ಮಾಹಿತಿ ಇರುತ್ತೆ? ಯಾವಾಗ ಬರುತ್ತೆ? ದರ ಎಷ್ಟು?

    ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ?
    ನಿಷ್ಠಾವಂತ ತೆರಿಗೆ ಪಾವತಿದಾರರಿಗೆ ಸಾರ್ವಜನಿಕ ಸೇವೆಗಳಾದ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ರಸ್ತೆ ಟೋಲ್‍ಗಳಲ್ಲಿ `ಆದ್ಯತೆಯ ಸೇವೆ’ ಸಿಗಲಿದೆ. ಅಷ್ಟೇ ಅಲ್ಲದೇ ಸರ್ಕಾರಿ ಸಮಾರಂಭದಲ್ಲಿ ಗೌರವಿಸಲಾಗುತ್ತದೆ. ವಿಶೇಷ ಗುರುತಿನ ಸಂಖ್ಯೆ ಅಥವಾ ಪಾನ್ ಸಂಖ್ಯೆಯ ಮೂಲಕ ನಿಷ್ಠಾವಂತ ತೆರಿಗೆದಾರರನ್ನು ಗುರುತಿಸಬಹುದು ಎನ್ನುವ ಅಂಶ ಕರಡು ಪ್ರಸ್ತಾವನೆಯಲ್ಲಿದೆ.

    ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನಡೆದ ಹಿರಿಯ ತೆರಿಗೆ ಅಧಿಕಾರಿಗಳ ಸಂವಾದ ಕಾರ್ಯಕ್ರಮದಲ್ಲಿ ನಿಷ್ಠಾವಂತ ತೆರಿಗೆ ಪಾವತಿ ಮಾಡುವ ಪಾವತಿದಾರರಿಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡಲಾಗುವುದು. ಅಲ್ಲದೇ ಅವರಿಗೆ ವಿಶೇಷ ಸವಲತ್ತುಗಳನ್ನು ಘೋಷಿಸಲಾಗುತ್ತದೆ ಎಂದು ಹೇಳಿದ್ದರು.

    2015-16ರ ಹಣಕಾಸು ವರ್ಷದಲ್ಲಿ ಒಟ್ಟು 5.43 ಕೋಟಿ ಮಂದಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದರೆ, 2017-18ರ ಸಾಲಿನಲ್ಲಿ 6.84 ಕೋಟಿ ಮಂದಿ ಐಟಿಆರ್ ಸಲ್ಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐಟಿ ಅಧಿಕಾರಿಗಳಿಗೆ ಶರಣಾಗಿ, 60 ಲಕ್ಷ ಮೌಲ್ಯದ ಆಸ್ತಿ ಒಪ್ಪಿಸಿದ ಪಕೋಡವಾಲಾ!

    ಐಟಿ ಅಧಿಕಾರಿಗಳಿಗೆ ಶರಣಾಗಿ, 60 ಲಕ್ಷ ಮೌಲ್ಯದ ಆಸ್ತಿ ಒಪ್ಪಿಸಿದ ಪಕೋಡವಾಲಾ!

    ಸಾಂದರ್ಭಿಕ ಚಿತ್ರ

    ಚಂಡೀಗಡ: ಪಂಜಾಬ್ ರಾಜ್ಯದ ಲೂಧಿಯಾನದ ಪ್ರಸಿದ್ಧ ಪಕೋಡಾ ವ್ಯಾಪಾರಿಯ ಮೇಲೆ ಆದಾಯ ತೆರಿಗೆ(ಐಟಿ) ಅಧಿಕಾರಿಗಳು ದಾಳಿ ಮಾಡುತ್ತಲೇ ನಾಪತ್ತೆಯಾಗಿದ್ದ ವ್ಯಾಪಾರಿಯೊಬ್ಬ ನಂತರ ಶರಣಾಗಿ 60 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ಒಪ್ಪಿಸಿದ್ದಾನೆ.

    ಹೌದು, ಪ್ರಧಾನಿ ನರೇಂದ್ರ ಮೋದಿಯವರು ಪಕೋಡ ಮಾರುವುದು ಕೂಡ ಒಂದು ಉದ್ಯೋಗ ಎಂದು ಹೇಳಿಕೆ ನೀಡಿದ್ದನ್ನು ವಿರೋಧ ಪಕ್ಷಗಳು ಟೀಕಿಸಿದ್ದವು. ಇದರ ಬೆನ್ನಲ್ಲೇ ಲೂಧಿಯಾನದ ಪ್ರಸಿದ್ಧ ಪಕೋಡಾ ಮಳಿಗೆ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ದಾಳಿ ನಡೆಸಿತ್ತು.

    ದಾಳಿ ವೇಳೆ ಖ್ಯಾತ ಪಕೋಡ ಮಾರಾಟಗಾರ ಪನ್ನಾ ಸಿಂಗ್ ನಾಪತ್ತೆಯಾಗಿದ್ದ. ಈ ವೇಳೆ ಅಧಿಕಾರಿಗಳು ಪನ್ನಾ ಸಿಂಗ್‍ರ ಅಂಗಡಿ ಹಾಗೂ ಮನೆ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ದಾಳಿ ಬೆನ್ನಲ್ಲೇ ಶುಕ್ರವಾರ ಪನ್ನಾ ಸಿಂಗ್ ಪಂಜಾಬ್‍ನ ಆದಾಯ ತೆರಿಗೆ ಇಲಾಖೆಗೆ ಶರಣಾಗಿ 60 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿದ್ದಾನೆ.

    1952 ರಿಂದಲೂ ಪನ್ನಾ ಸಿಂಗ್ ಲೂಧಿಯಾನದ ಗಿಲ್ ರಸ್ತೆಯಲ್ಲಿ ಪಕೋಡಾ ವ್ಯಾಪಾರವನ್ನು ಮಾಡಿಕೊಂಡು ಬರುತ್ತಿದ್ದ. ಅಲ್ಲದೇ ಪನ್ನಾ ಸಿಂಗ್ ಕೇವಲ ಪಕೋಡ ವ್ಯಾಪಾರದ ಮೂಲಕ ಐಷಾರಾಮಿ ಮನೆ, ಅಂಗಡಿ ಹಾಗೂ ಅಪಾರ ಪ್ರಮಾಣದ ಆಸ್ತಿಯನ್ನು ಗಳಿಸಿದ್ದರು ಎಂದು ತಿಳಿದು ಬಂದಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಆಯುಕ್ತ ಡಿ.ಎಸ್.ಚೌದರಿ, ದಶಕಗಳಷ್ಟು ಹಳೆಯದಾಗಿರುವ ಪಕೋಡಾ ಅಂಗಡಿಯು ಇಲ್ಲಿಯವರೆಗೂ ಯಾವುದೇ ಆದಾಯ ತೆರಿಗೆಯನ್ನು ಪಾವತಿ ಮಾಡಿರಲಿಲ್ಲ. ಹೀಗಾಗಿ ಪನ್ನಾ ಸಿಂಗ್‍ರ ಎರಡೂ ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದೇವೆ. ದಾಳಿ ವೇಳೆ ಪ್ರತಿದಿನ ಆಗುತ್ತಿದ್ದ ವ್ಯಾಪಾರವನ್ನು ಲೆಕ್ಕಹಾಕಿ ತೆರಿಗೆಯನ್ನು ಸಂಗ್ರಹಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv