Tag: ಆದಾಯ ತೆರಿಗೆ ಇಲಾಖೆ

  • ರಶ್ಮಿಕಾ ಮಂದಣ್ಣಗೆ ಐಟಿ ಡ್ರಿಲ್- 10 ಜನ ಅಧಿಕಾರಿಗಳಿಂದ ವಿಚಾರಣೆ

    ರಶ್ಮಿಕಾ ಮಂದಣ್ಣಗೆ ಐಟಿ ಡ್ರಿಲ್- 10 ಜನ ಅಧಿಕಾರಿಗಳಿಂದ ವಿಚಾರಣೆ

    ಮಡಿಕೇರಿ: ಆದಾಯ ತೆರಿಗೆ ಇಲಾಖೆ ದಾಳಿ ಹಿನ್ನೆಲೆಯಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು  ಕೊಡಗು ಜಿಲ್ಲೆ ವಿರಾಜಪೇಟೆಯ ಕುಕ್ಲೂರು ಗ್ರಾಮದ ನಿವಾಸಕ್ಕೆ ಆಗಮಿಸಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.

    ರಶ್ಮಿಕಾ ಮಂದಣ್ಣ ಅವರು ರಾತ್ರಿ 9:10 ಗಂಟೆಗೆ ತಮ್ಮ ನಿವಾಸಕ್ಕೆ ಆಗಮಿಸಿ, ಹತ್ತು ನಿಮಿಷ ವಿಶ್ರಾಂತಿ ಪಡೆದು ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಿದ್ದಾರೆ. 10 ಜನ ಅಧಿಕಾರಿಗಳ ತಂಡವು ರಶ್ಮಿಕಾ ಮಂದಣ್ಣ ಅವರನ್ನು ವಿಚಾರಣೆ ನಡೆಸುತ್ತಿದ್ದು, ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದನ್ನೂ ಓದಿ: ನನ್ನ ಅಕೌಂಟ್‍ನಲ್ಲಿ ದುಡ್ಡೇ ಇಲ್ಲ ಎಂದಿದ್ದ 5 ದಿನದಲ್ಲೇ ರಶ್ಮಿಕಾಗೆ ಐಟಿ ಶಾಕ್

    ನಟಿ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿದ ಐಟ ಅಧಿಕಾರಿಗಳು ಪ್ರಮುಖ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಅವರನ್ನು ಬೆಳಗ್ಗೆಯಿಂದ ವಿಚಾರಣೆಗೆ ಒಳಪಡಿಸಿದ್ದರು. ರಾತ್ರಿ ಹೋಟೆಲ್‍ನಿಂದ ಊಟ ತರಿಸಿಕೊಂಡ ಅಧಿಕಾರಿಗಳು ರಶ್ಮಿಕಾ ಅವರ ಮನೆಯಲ್ಲಿ ಊಟ ಮಾಡಿದ್ದಾರೆ. ಬಳಿಕ ರಶ್ಮಿಕಾ ಅವರ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಇದನ್ನೂ ಓದಿ: ಮೂರು ಕಾರಣಗಳಿಂದ ರಶ್ಮಿಕಾ ಮನೆ ಮೇಲೆ ಐಟಿ ದಾಳಿ

    ತಡರಾತ್ರಿ ಮೊದಲ ದಿನದ ವಿಚಾರಣೆ ಮುಗಿಸಲಿರುವ ಐಟಿ ಅಧಿಕಾರಿಗಳು ಶುಕ್ರವಾರವೂ ವಿಚಾರಣೆ ಮುಂದುವರಿಸಲಿದ್ದಾರೆ. ಹೀಗಾಗಿ ಐಟಿ ಅಧಿಕಾರಿಗಳು ವಿರಾಜಪೇಟೆಯ ಖಾಸಗಿ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿ, ಬೆಳಗ್ಗೆ 7 ಗಂಟೆಗೆ ರಶ್ಮಿಕಾ ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

  • ಡಿ.ಕೆ ಶಿವಕುಮಾರ್​ಗೆ ಮತ್ತೆ ಇಡಿ ಸಂಕಷ್ಟ

    ಡಿ.ಕೆ ಶಿವಕುಮಾರ್​ಗೆ ಮತ್ತೆ ಇಡಿ ಸಂಕಷ್ಟ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ವಿಚಾರಣೆ ಹಾಜರಾಗುವಂತೆ ಮಾಜಿ ಸಚಿವ, ಶಾಸಕ ಡಿ.ಕೆ ಶಿವಕುಮಾರ್ ಗೆ ಜಾರಿ ನಿರ್ದೇಶನಾಲಯ ನಮನ್ಸ್ ನೀಡಿದೆ. ದೆಹಲಿ ಹೈಕೋರ್ಟ್ ಜಾಮೀನು ನೀಡಿದ ಬಳಿಕ ಮೊದಲ ಬಾರಿ ಸಮನ್ಸ್ ನೀಡಿದ್ದು ಮತ್ತೆ ಡಿ.ಕೆ ಶಿವಕುಮಾರ್ ಇಡಿ ಸುಳಿಯಲ್ಲಿ ಸಿಲುಕಿದಂತಾಗಿದೆ.

    ಜನವರಿ 13 ರಂದು ವಿಚಾರಣೆಗೆ ಹಾಜರಾಗುಂತೆ ಸಮನ್ಸ್ ನೀಡಿದ್ದು, 2013-2014 ರಲ್ಲಿ ನಡೆಸಿರುವ ಆರ್ಥಿಕ ವ್ಯವಹಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಡಿ ಅಧಿಕಾರಿಗಳು ಕೋರಿದ್ದಾರೆ ಎಂದು ಮೂಲಗಳು ಹೇಳಿವೆ.

    ಜಾಮೀನು ಪಡೆದ ಬಳಿಕ ಸಮನ್ಸ್ ಜಾರಿಯಾದ ಹಿನ್ನೆಲೆ ನಿನ್ನೆ ದೆಹಲಿಯಲ್ಲಿ ವಕೀಲ ಅಭಿಷೇಕ ಮನುಸಿಂಘ್ವಿ ಅವರನ್ನ ಡಿ.ಕೆ ಶಿವಕುಮಾರ್ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಇಡಿ ವಿಚಾರಣೆಗೆ ಹಾಜರಾಗುವ ಬಗ್ಗೆ ಹಾಗೂ ಮುಂದಿನ ಕಾನೂನು ಹೋರಾಟ ಸಮಾಲೋಚನೆ ಮಾಡಿದ್ದಾರೆ ಎನ್ನಲಾಗಿದೆ.

    ವಿಚಾರಣೆ ಮುಂದೂಡಿಕೆ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ದಾಖಲಿಸಿದ್ದ 120 ಬಿ ರದ್ದು ಮಾಡುವಂತೆ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ಎರಡು ವಾರಕ್ಕೆ ಮುಂದೂಡಿಕೆಯಾಗಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಡಿ.ಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎಸ್.ಎ ಬೊಬ್ಡೆ ನೇತೃತ್ವದ ತ್ರಿಸದ್ಯ ಪೀಠ, ಬದಲಿ ಪೀಠದಲ್ಲಿ ಇದೇ ಪ್ರಕರಣ ಮತ್ತೊಂದು ಕೇಸ್ ವಿಚಾರಣೆ ಹಂತದಲ್ಲಿರುವ ಕಾರಣ ಎರಡು ವಾರಕ್ಕೆ ವಿಚಾರಣೆ ಮುಂದೂಡಿಕೆ ಮಾಡಿತು. ಅಲ್ಲದೇ ಎರಡು ಕೇಸ್‍ಗಳನ್ನು ಒಟ್ಟು ಮಾಡಿ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

  • ಉಸಿರಾಡಲು ಬಿಡ್ತಿಲ್ಲ ಏನ್ ಮಾಡೋಣ: ಡಿಕೆಶಿ

    ಉಸಿರಾಡಲು ಬಿಡ್ತಿಲ್ಲ ಏನ್ ಮಾಡೋಣ: ಡಿಕೆಶಿ

    ಬೆಂಗಳೂರು: ಐಟಿ ಇಲಾಖೆಯವರು ನೋಟಿಸ್ ಮೇಲೆ ನೋಟಿಸ್ ನೀಡುತ್ತಿದ್ದಾರೆ. ಅವರು ಉಸಿರಾಟು ಬಿಡುತ್ತಿಲ್ಲ ಏನ್ ಮಾಡೋಣ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

    ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಈ ತಿಂಗಳ ಕೊನೆಯೊಳಗೆ ಅಂತಿಮ ಹೇಳಿಕೆ (ಫೈನಲ್ ಸ್ಟೇಟ್‍ಮೆಂಟ್) ದಾಖಲು ಮಾಡಬೇಕು ಎಂದು ಐಟಿ ಇಲಾಖೆ ನೋಟಿಸ್ ನಲ್ಲಿ ಸೂಚಿಸಿದೆ.

    ಐಟಿ ದಾಳಿಯ ಬಳಿಕ ಅಂತಿಮ ವರದಿ (ಫೈನಲ್ ರಿಪೋರ್ಟ್) ತಯಾರು ಮಾಡಲಾಗುತ್ತದೆ. ಈ ವರದಿಯನ್ನು ಅಧಿಕಾರಿಗಳು ಅಸೆಸ್ಸಿಂಗ್ ಡಿಪಾರ್ಟ್ ಮೆಂಟ್ ಗೆ ಕಳುಹಿಸುತ್ತಾರೆ. ಐಟಿ ದಾಳಿಗೆ ಒಳಗಾದ ವ್ಯಕ್ತಿ ಆದಾಯವನ್ನು ಘೋಷಿಸಿಕೊಳ್ಳಲು ಒಂದು ವರ್ಷದ ಕಾಲಾವಕಾಶ ನೀಡಲಾಗುತ್ತದೆ. ಅದೇ ರೀತಿ ಡಿಕೆ ಶಿವಕುಮಾರ್ ಅವರಿಗೆ ನೀಡಲಾಗಿದ್ದ ಅವಧಿ ಡಿಸೆಂಬರ್ 31ಕ್ಕೆ ಕೊನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಕುಟುಂಬಸ್ಥರಿಗೆ ಐಟಿ ಇಲಾಖೆ ನೋಟಿಸ್ ನೀಡುತ್ತಿದೆ.

    ಸೂಕ್ತ ಸಮಯದಲ್ಲಿ ವಿಚಾರಣೆಗೆ ಹಾಜರಾಗದೇ ಇದ್ದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಐಟಿ ಇಲಾಕೆ ಎಚ್ಚರಿಕೆಯನ್ನು ನೀಡಿದೆ. ಈ ಸಂಬಂಧ ಚುನಾವಣಾ ಪ್ರಚಾರ ಕೊನೆಗೊಳಿಸಿರುವ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಐಟಿ ನೋಟಿಸ್ ಸಂಬಂಧ ವಕೀಲರೊಂದಿಗೆ ಮೂರು ದಿನಗಳ ಕಾಲ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

    ನೋಟಿಸ್ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಉಸಿರಾಡಲು ಅವಕಾಶ ನೀಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ. ತಕ್ಷಣವೇ ಅಸೆಸ್ಸಮೆಂಟ್ ಆರ್ಡರ್ ಮಾಡಬೇಕೆಂದು ಹೇಳುತ್ತಿದ್ದಾರೆ. ಈಗ ಬೆಂಗಳೂರಿಗೆ ಹೋಗಿ ಅಧಿಕಾರಿಗಳನ್ನು ಭೇಟಿಯಾಗುತ್ತೇನೆ. ಎಲ್ಲರ ಫೈನಲ್ ರಿಪೋರ್ಟ್ ನ್ನು ನಮ್ಮ ಅಧಿಕಾರಿಗಳು ಸಿದ್ಧಗೊಳಿಸುತ್ತಿದ್ದಾರೆ. ಕಾನೂನು ಅವರ ಕೈಯಲ್ಲಿದ್ದು, ಏನ್ ಬೇಕಾದ್ರೂ ಮಾಡಬಹುದು. ಕಾಗವಾಡಕ್ಕೆ ಹೆಲಿಕಾಪ್ಟರ್ ನಲ್ಲಿ ಹೋಗಲು ಅನುಮತಿಯನ್ನ ನೀಡಲಿಲ್ಲ. ಸಾಯಂಕಾಲ ಅನುಮತಿಯನ್ನು ನೀಡುತ್ತೇವೆ ಎಂದು ಹೇಳ್ತಿದ್ದಾರೆ. ಅಧಿಕಾರ ಅವರ ಕೈಯಲ್ಲಿದೆ ಇಲ್ವಾ ಎಂದು ಪ್ರಶ್ನೆ ಮಾಡಿ ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

  • ಕೋಟ್ಯಂತರ ರೂ. ವಂಚನೆ ಆರೋಪ – ಸಿದ್ಧಾರ್ಥ್ ಕಾಲೇಜ್ ಮೇಲೆ ಐಟಿ ದಾಳಿ

    ಕೋಟ್ಯಂತರ ರೂ. ವಂಚನೆ ಆರೋಪ – ಸಿದ್ಧಾರ್ಥ್ ಕಾಲೇಜ್ ಮೇಲೆ ಐಟಿ ದಾಳಿ

    ಬೆಂಗಳೂರು: ಡಿಕೆ ಶಿವಕುಮಾರ್ ಬಳಿಕ ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದು, ಪರಮೇಶ್ವರ್ ಒಡೆತನದ ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯ ಮೇಲೆ ಐಟಿ ದಾಳಿ ನಡೆದಿದೆ.

    ತುಮಕೂರು, ನೆಲಮಂಗಲದಲ್ಲಿರುವ ಸಿದ್ಧಾರ್ಥ್ ಕಾಲೇಜುಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ದಾಳಿ ಯಾಕೆ?
    ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯಲ್ಲಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೀಟ್ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಸೀಟ್ ಹೊರತುಪಡಿಸಿ ಮ್ಯಾನೇಜ್‍ಮೆಂಟ್ ಸೀಟ್ ಗಳು ಇರುತ್ತವೆ. ಈ ಸೀಟ್ ಗಳಿಗೆ ಕಾಲೇಜುಗಳು ಲ್ಕ ವಿಧಿಸಬಹುದಾಗಿದ್ದು, ಇದರಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿದೆ. ಅಷ್ಟೇ ಅಲ್ಲದೇ ತೆರಿಗೆಯನ್ನು ಮರೆಮಾಚಲು ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

  • ವಿನಾಯ್ತಿ ಬೇಡ, ಶಾಂತಿ ಪ್ರಶಸ್ತಿಗೆ ತೆರಿಗೆ ಪಾವತಿಸುತ್ತೇನೆ – ಮೋದಿ ಪತ್ರ

    ವಿನಾಯ್ತಿ ಬೇಡ, ಶಾಂತಿ ಪ್ರಶಸ್ತಿಗೆ ತೆರಿಗೆ ಪಾವತಿಸುತ್ತೇನೆ – ಮೋದಿ ಪತ್ರ

    – ತೆರಿಗೆ ವಿನಾಯಿತಿ ನೀಡಿದ್ದ ಐಟಿ ಇಲಾಖೆ
    – ಸಾಮಾನ್ಯರಂತೆ ನಾನೂ ತೆರಿಗೆ ಕಟ್ಟುತ್ತೇನೆಂದ ಪ್ರಧಾನಿ

    ನವದೆಹಲಿ: ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಇತರ ರಾಜಕಾರಣಿಗಳಿಗೆ ಮಾದರಿಯಾಗಿದ್ದು, ಸಾಮಾನ್ಯರಂತೆ ನಾನೂ ಸಹ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತೇನೆ ಎಂದು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಕ್ಷಿಣ ಕೊರಿಯಾ ಸರ್ಕಾರ 2018ನೇ ಸಾಲಿನ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಪ್ರಶಸ್ತಿಯ ಭಾಗವಾಗಿ 1.30 ಕೋಟಿ ರೂ. ನಗದನ್ನು ಮಾರ್ಚ್ 6ರಂದು ನೀಡಿತ್ತು. ಇದಕ್ಕೆ ಕೇಂದ್ರ ನೇರ ತೆರಿಗೆ ವಿಭಾಗ(ಸಿಬಿಡಿಟಿ) ಐಟಿ ಕಾಯ್ದೆಯ ಸೆಕ್ಷನ್ 10(17ಎ)(ಐ) ಅಡಿ ಸಿಯೋಲ್ ಶಾಂತಿ ಪ್ರಶಸ್ತಿಗೆ ತೆರಿಗೆ ವಿನಾಯಿತಿ ನೀಡಿತ್ತು.

    ಈ ವಿಷಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಡವಾಗಿ ತಿಳಿದಿದೆ. ನಂತರ ಪ್ರಧಾನಿ ಮೋದಿ ಆಗಸ್ಟ್ 11ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಪತ್ರ ಬರೆದಿದ್ದು, ಪ್ರಶಸ್ತಿಯ ನಗದಿನ ಮೇಲಿನ ತೆರಿಗೆಗೆ ಹಣಕಾಸು ಸಚಿವಾಲಯ ವಿನಾಯಿತಿ ನೀಡಿದೆ ಎಂದು ತಿಳಿಯಿತು. ಲೋಕಸಭಾ ಚುನಾವಣೆ ಹಾಗೂ ಇತರೆ ಒತ್ತಡಗಳ ಮಧ್ಯೆ ನಿಮಗೆ ಬೇಗನೇ ಪತ್ರ ಬರೆದು ತಿಳಿಸಲು ಸಾಧ್ಯವಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

    ಇದನ್ನು ಸಾಮಾನ್ಯ ನಗದು ಎಂದು ಪರಿಗಣಿಸಿ ಎಲ್ಲರಿಗೂ ವಿಧಿಸಿದಂತೆ ನನಗೂ ತೆರಿಗೆ ವಿಧಿಸಿ. ಆದಾಯ ತೆರಿಗೆ ಪಾವತಿ ದೇಶದ ಬೆಳವವಣಿಗೆಗೆ ನೀಡುವ ಕೊಡುಗೆಯಾಗಿದೆ. ನಿಮ್ಮ ಹಿಂದಿನ ಆದೇಶವನ್ನು ಮರು ಪರಿಶೀಲಿಸಿ ಅದನ್ನು ಹಿಂಪಡೆಯುವಂತೆ ಈ ಮೂಲಕ ಮನವಿ ಮಾಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.

    ಸಿಯೋಲ್ ಶಾಂತಿ ಪ್ರಶಸ್ತಿಯಂತಹ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಭಾರತ ಗೆದ್ದಾಗಲೆಲ್ಲ ಪ್ರತಿಯೊಬ್ಬ ಭಾರತೀಯನ ಹೃದಯ ಹೆಮ್ಮೆಯಿಂದ ಹಿಗ್ಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಪ್ರಶಸ್ತಿಯ ಹಣವನ್ನು ನಮಾಮಿ ಗಂಗಾ ಯೋಜನೆಗೆ ನೀಡುವುದಾಗಿ ಈ ಹಿಂದೆಯೇ ಪ್ರಧಾನಿ ಮೋದಿ ತಿಳಿಸಿದ್ದರು.

    ಸಿಬಿಡಿಟಿ ಆಗಸ್ಟ್ 14ರಂದು ಮತ್ತೆ ಆದೇಶ ಹೊರಡಿಸುವ ಮೂಲಕ ತನ್ನ ಹಿಂದಿನ ಆದೇಶವನ್ನು ಹಿಂಪಡೆದಿದೆ. ಆದಾಯ ತೆರಿಗೆ ಕಾಯ್ದೆ ಮೂಲಕ ನೀಡಲಾಗಿದ್ದ ಅಧಿಕಾರವನ್ನು ಚಲಾಯಿಸಿದ್ದು, ಕೇಂದ್ರ ಸರ್ಕಾರವು ‘ಸಿಯೋಲ್ ಶಾಂತಿ ಪ್ರಶಸ್ತಿ’ ಸಂಬಂಧ ಮಾರ್ಚ್ 6ರಂದು ಹೊರಡಿಸಿದ ಆದೇಶದಲ್ಲಿ ಪ್ರಕಟಿಸಲಾಗಿದ್ದ ತೆರಿಗೆ ವಿನಾಯಿತಿಯನ್ನು ಹಿಂಪಡೆಯುತ್ತಿದೆ. ಹೀಗಾಗಿ ತೆರಿಗೆ ಕಾಯ್ದೆಯ ಅನ್ವಯ ಈ ಪ್ರಶಸ್ತಿ ಎಲ್ಲ ನಿಯಮಗಳಿಗೆ ಒಳಪಟ್ಟಿದೆ ಎಂದು ಆದೇಶದಲ್ಲಿ ತಿಳಿಸಿದೆ.

  • ಟ್ಯಾಕ್ಸ್ ಟೆರರಿಸಂ ದೇಶದ ಸಾಧನೆಯನ್ನು ಕುಗ್ಗಿಸುತ್ತಿದೆ: ಇನ್ಫೋಸಿಸ್ ಮಾಜಿ ನಿರ್ದೇಶಕ

    ಟ್ಯಾಕ್ಸ್ ಟೆರರಿಸಂ ದೇಶದ ಸಾಧನೆಯನ್ನು ಕುಗ್ಗಿಸುತ್ತಿದೆ: ಇನ್ಫೋಸಿಸ್ ಮಾಜಿ ನಿರ್ದೇಶಕ

    ನವದೆಹಲಿ: ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಸಾವಿನ ಬೆನ್ನಲ್ಲೇ ಉದ್ಯಮಿಗಳು ಟ್ಯಾಕ್ಸ್ ಟೆರರಿಸಂ ಕುರಿತು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.

    ಇದೀಗ ಉದ್ಯಮಿ ಹಾಗೂ ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ ಆಕ್ರೋಶ ವ್ಯಕ್ತಪಡಿಸಿದ್ದು, ಉದ್ಯಮಿಗಳು ಟ್ಯಾಕ್ಸ್ ಟೆರರಿಸಂನಿಂದ ಬೇಸತ್ತು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

    ಟ್ಯಾಕ್ಸ್ ಟೆರರಿಸಂ ಉದ್ಯಮಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ ಎಂಬ ಮಾತುಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ್ ಅವರ ಸಾವಿನ ನಂತರ ಕೇಳಿ ಬಂದಿತ್ತು. ಇದೀಗ ಮೋಹನ್ ದಾಸ್ ಪೈ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಸಹ ಈ ಕುರಿತು ಅಸಮಾಧಾನ ಹೊರ ಹಾಕಿದ್ದು, ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂರ್ದಶದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

    ತೆರಿಗೆ ಭಯೋತ್ಪಾದನೆಯು ದೇಶದಲ್ಲಿನ ವ್ಯಾಪಾರದ ಸರಳತೆಗೆ ಅಪಾಯವನ್ನು ತಂದೊಡ್ಡಿದೆ. ಇದನ್ನು ಕೊನೆಗೊಳಿಸಲು ಸರ್ಕಾರ ಭರವಸೆ ನೀಡಿದರೂ ಅನಗತ್ಯ ತೆರಿಗೆ ಕುರಿತು ದೂರುಗಳು ಇನ್ನೂ ವ್ಯಾಪಕವಾಗಿವೆ. ಇದು ದೇಶದ ಸಾಧನೆಯನ್ನು ಕುಗ್ಗಿಸುತ್ತದೆ ಎಂದು ಮೋಹನ್ ದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ.

    ಈ ಕುರಿತು ಪೈ ಅವರು ತಮ್ಮ ಜೀವನದಲ್ಲಾದ ಘಟನೆ ಮೂಲಕ ವಿವರಿಸಿದ್ದು, ಕಿರಣ್ ಎಂಬ ಸರ್ಕಾರಿ ಅಧಿಕಾರಿ ಸಂದೇಶ ಕಳುಹಿಸಿದ್ದರು. ಇದಕ್ಕೆ ನಾನು ಉತ್ತರಿಸಿ, ಇದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದೆ. ಇದು ಅಧಿಕಾರಿಗಳಲ್ಲಿ ಯಾವ ರೀತಿಯ ಸಂಸ್ಕøತಿ ಬೆಳೆದಿದೆ ಎಂಬುದನ್ನು ತೋರಿಸುತ್ತದೆ. ಇದನ್ನು ಯಾರು ಯೋಚಿಸುತ್ತಾರೆ, ಅವರು ಹುಟ್ಟಿರುವುದೇ ನಮ್ಮನ್ನು ಆಳುವುದಕ್ಕಾಗಿ ಎಂಬ ಅಹಂನಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಘಟನೆ ಕುರಿತು ಅಧಿಕಾರಿ ಮತ್ತೆ ಪ್ರತ್ಯುತ್ತರ ನೀಡಿದ್ದು, ಇನ್ಫೋಸಿಸ್‍ನ ಸಹೋದ್ಯೋಗಿಯನ್ನು ಕರೆದು ನನ್ನನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಬೆದರಿಕೆ ಹಾಕಿದ್ದರು ಎಂದು ಘಟನೆಯನ್ನು ವಿವರಿಸಿದ್ದಾರೆ. ಇಂತಹ ವರ್ತನೆಗಳನ್ನು ಖಂಡಿಸಬೇಕಿದೆ. ಈ ಮೂಲಕ ತೆರಿಗೆ ಭಯೋತ್ಪಾದನೆಯನ್ನು ತೊಲಗಿಸಬೇಕಿದೆ. ಆದರೆ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಕುರಿತು ಭರವಸೆ ನೀಡಿದ್ದರು. ಅಲ್ಲದೆ, ಇದು 2014ರ ಎನ್‍ಡಿಎ ಪ್ರಣಾಳಿಕೆಯಲ್ಲಿಯೂ ಇದೆ. ಕಳೆದ 5 ವರ್ಷಗಳಿಂದ ಇದು ದ್ವಿಗುಣಗೊಂಡಿದ್ದು, 6 ಲಕ್ಷ ಕೋಟಿ ರೂ. ಸಂಗ್ರಹವಾಗುತ್ತಿದೆ. ಹೀಗಾಗಿ ಟ್ಯಾಕ್ಸ್ ಟೆರರಿಸಂ ಕಡಿಮೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕಳೆದ ವರ್ಷದ ಬಜೆಟ್‍ನಲ್ಲಿ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಹಣಕಾಸು ಸಚಿವರನ್ನು ದೋಷಿಸಿದ್ದರು ಎಂದು ಪೈ ವಿವರಿಸಿದ್ದಾರೆ.

    ಈ ಟ್ಯಾಕ್ಸ್ ಟೆರರಿಸಂ ತೊಲಗಿಸಬೇಕಾದಲ್ಲಿ ಸರ್ಕಾರ ಹಾಗೂ ಕಂಪನಿಗಳ ಸಿಇಓಗಳ ನಡುವೆ ಆಗಾಗ ಸಭೆ ಅಥವಾ ಮಾತುಕತೆ ನಡೆಸಬೇಕು. ಆಗ ಉದ್ಯಮಿಗಳ ಸಮಸ್ಯೆಗಳನ್ನು ತಿಳಿಯಬಹುದು ಎಂದು ಹೇಳಿದ್ದಾರೆ.

    ಕೆಫೆ ಕಾಫಿ ಡೇ ಸಿದ್ಧಾರ್ಥ್ ಅವರು ಸಾವನ್ನಪ್ಪುವುದಕ್ಕೂ ಮುನ್ನ ತಮ್ಮ ಪತ್ರದಲ್ಲಿ ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದೇನೆ ಎಂದು ಉಲ್ಲೇಖಿಸಿದ್ದರು. ನಮ್ಮ ಶೇರನ್ನು ಎರಡು ವಿವಿಧ ಹಂತಗಳಲ್ಲಿ ಸಲ್ಲಿಸಿ, ನಮ್ಮ ಕಾಫಿಯ ದಿನದ ಶೇರುಗಳ ಸ್ಥಾನವನ್ನು ಪಡೆದುಕೊಂಡಿದ್ದೇವೆ. ಪರಿಷ್ಕೃತ ಆದಾಯ ತೆರಿಗೆಯನ್ನೂ ನಮ್ಮಿಂದ ಸಲ್ಲಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದರು. ಆದಾಯ ತೆರಿಗೆ ಇಲಾಖೆಯು ಈ ಆರೋಪಗಳನ್ನು ತಳ್ಳಿ ಹಾಕಿತ್ತು, ಆದಾಯ ತೆರಿಗೆ ಕಾಯ್ದೆಯ ನಿಬಂಧನೆಗಳ ಪ್ರಕಾರ ಇಲಾಖೆ ಕಾರ್ಯನಿರ್ವಹಿಸಿದೆ ಎಂದು ಪ್ರತಿಕ್ರಿಯಿಸಿತ್ತು.

  • 2 ದಿನಗಳ ಹಿಂದೆಯಷ್ಟೇ ಪತ್ರ ಬರೆದಿದ್ದ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡ್ರಾ?

    2 ದಿನಗಳ ಹಿಂದೆಯಷ್ಟೇ ಪತ್ರ ಬರೆದಿದ್ದ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡ್ರಾ?

    ಬೆಂಗಳೂರು: ದಿಢೀರ್ ನಾಪತ್ತೆಯಾಗಿರುವ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ತಮ್ಮ ಕಂಪನಿಯ ಸಿಬ್ಬಂದಿ ಹಾಗೂ ನಿರ್ದೇಶಕರಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಎರಡು ದಿನಗಳಷ್ಟೇ ಸಿದ್ಧಾರ್ಥ್ ಅವರು ಕಂಪನಿ ಸಿಬ್ಬಂದಿ ಹಾಗೂ ನಿರ್ದೇಶಕರಿಗೆ ತುಂಬಾ ನೋವಿನಿಂದ ಪತ್ರವನ್ನು ಬರೆದಿದ್ದಾರೆ.

    ಸಿದ್ಧಾರ್ಥ್ ಪತ್ರ:
    ನಾನು ಕಳೆದ 37 ವರ್ಷದಲ್ಲಿ ಕಠಿಣ ಪರಿಶ್ರಮದಿಂದ ಕೆಲಸ ಮಾಡಿದ್ದೇನೆ. ಕಾಫಿ ಡೇ ಮೂಲಕ 30 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಅಷ್ಟೇ ಅಲ್ಲದೆ ನನ್ನ ಐಟಿ ಕಂಪನಿ ಮೂಲಕ 20 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇನೆ. ಆದರೆ ನನ್ನ ಪರಿಶ್ರಮದ ಹೊರತಾಗಿಯೂ ಆ ಎರಡೂ ಕಂಪನಿಗಳು ಲಾಭದಲ್ಲಿ ನಡೆಯಲಿಲ್ಲ. ನನಗೆ ಅನೇಕ ಕಡೆಯಿಂದ ಒತ್ತಡ ಹೆಚ್ಚಾಗಿದ್ದು, ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬರೆದಿದ್ದಾರೆ.

    ಕಂಪನಿಯಲ್ಲಿ ಷೇರು ಹೂಡಿದ್ದ ಖಾಸಗಿ ಪಾಟ್ನರ್ ಗಳು ತಮ್ಮ ಷೇರನ್ನು ವಾಪಸ್ ಕೊಡುವಂತೆ ಒತ್ತಾಯ ಹಾಕುತ್ತಿದ್ದಾರೆ. ಸ್ನೇಹಿತರೊಬ್ಬರ ಬಳಿ ನಾನು ದೊಡ್ಡ ಮಟ್ಟದಲ್ಲಿ ಸಾಲ ಮಾಡಿದ್ದೇನೆ. ಇತರೆ ಸಾಲಗಾರರ ಒತ್ತಡದಿಂದ ಇಂದು ನನಗೆ ಈ ಪರಿಸ್ಥಿತಿ ಬಂದಿದೆ. 6 ತಿಂಗಳ ಹಿಂದೆಯಷ್ಟೇ ಅಪಾರ ಪ್ರಮಾಣದಲ್ಲಿ ಸಾಲ ಪಡೆದಿದ್ದೇನೆ. ಸಾಲಗಾರರು ತುಂಬಾ ಕಿರುಕುಳ ಕೊಡುತ್ತಿದ್ದಾರೆ.

    ಇನ್ನೊಂದೆಡೆ ಆದಾಯ ತೆರಿಗೆ ಇಲಾಖೆ ಅವರು ಕಿರುಕುಳ ನೀಡುತ್ತಿದ್ದಾರೆ. ಪತ್ರದಲ್ಲಿ ಈ ಹಿಂದಿನ ಐಟಿಯ ಡಿಜಿ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ. ಎರಡು ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದ್ದರು. ಈ ಮೂಲಕ ಮೈಂಡ್ ಟ್ರೀ ಮಾರಾಟದ ಡೀಲ್‍ಗೆ ಅಡ್ಡಿಯಾದರು. ಅದಾದ ಬಳಿಕ ಕಾಫಿ ಡೇ ಷೇರಿಗೂ ಐಟಿ ಕಣ್ಣು ಹಾಕಿತ್ತು. ನನಗೆ ಖಾಸಗಿ ಕಂಪನಿ ಕಿರುಕುಳ ನೀಡುತ್ತಿದೆ. ನಾನು ಸಾಕಷ್ಟು ಹೋರಾಟ ಮಾಡಿದೆ. ಆದರೆ ಅವರ ಕಿರುಕುಳವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

    ನಾನು ಮೋಸ ಹೋದೆ. ನಮಗೆ ಕೆಲವರು ನಂಬಿಕೆ ದ್ರೋಹ ಮಾಡಿದ್ದಾರೆ. ನಾನು ಸಿಬ್ಬಂದಿಯ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಷೇರುಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ನಾನು ಖಾಸಗಿಯಿಂದ ಸಾಲ ತೆಗೆದುಕೊಂಡಿದ್ದೆ. ನಾನು ಯಾರಿಗೂ ಮೋಸ ಮಾಡಬೇಕೆಂದು ಈ ಪತ್ರ ಬರೆಯುತ್ತಿಲ್ಲ. ಓರ್ವ ಉದ್ದಿಮೆದಾರನಾಗಿ ನಾನು ಸೋತಿದ್ದೇನೆ ಎಂದಿದ್ದಾರೆ.

    ನಾನು ನಿಮ್ಮ ಎಲ್ಲರಲ್ಲೂ ಕೇಳಿಕೊಳ್ಳುತ್ತೇನೆ, ಈ ಎಲ್ಲ ಉದ್ಯಮಗಳನ್ನು ನೀವು ಹೊಸ ಆಡಳಿತ ಮಂಡಳಿಯೊಂದಿಗೆ ಮುಂದುವರೆಸಿ. ಈಗ ಆಗಿರುವ ಎಲ್ಲ ತಪ್ಪುಗಳಿಗೂ ನಾನೇ ಹೊಣೆಯಾಗಿದ್ದು, ಪ್ರತಿಯೊಂದು ಹಣಕಾಸು ವ್ಯವಹಾರಕ್ಕೂ ನಾನೇ ಹೊಣೆ. ನನ್ನ ತಂಡ ಆಡಿಟರ್ಸ್ ಹಾಗೂ ಹಿರಿಯ ಆಡಳಿತ ಮಂಡಳಿಗೂ ಹಣಕಾಸು ವ್ಯವಹಾರಕ್ಕೂ ಸಂಬಂಧವಿಲ್ಲ ಎಂದು ಬರೆದಿದ್ದಾರೆ.

    ನನ್ನ ಉದ್ದಿಮೆಯನ್ನು ಲಾಭದಾಯಕವಾಗಿ ಮಾಡಲು ಎಲ್ಲಾ ಬಾಗಿಲುಗಳು ಮುಚ್ಚಿವೆ. ಹೀಗಾಗಿ ನಾನು ಕಂಪನಿ ನಡೆಸುವುದರಲ್ಲಿ ವಿಫಲನಾದೆ. ಇದು ನನ್ನ ಪರಿಸ್ಥಿತಿಯಾಗಿದೆ. ಕೆಲವರು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಭರವಸೆ ಇದೆ. ಎಲ್ಲರೂ ನನ್ನನ್ನು ಕ್ಷಮಿಸಿ ಬಿಡಿ ಎಂದು ಬರೆದಿದ್ದು, ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ವಿದಾಯ ಪತ್ರ ಬರೆದಿದ್ದಾರೆಯೋ ಎಂಬ ಅನುಮಾನ ಮೂಡಿದೆ.

    https://www.youtube.com/watch?v=uz6xiFzo-_Q