Tag: ಆತ್ಮ ನಿರ್ಭರ್ ಭಾರತ್

  • ಕೋವಿಡ್-19 ಬಿಕ್ಕಟ್ಟು ಸ್ವಾವಲಂಬಿ ಭಾರತಕ್ಕೆ ಸಿಕ್ಕಿದ ಅವಕಾಶ: ಪ್ರಧಾನಿ ಮೋದಿ

    ಕೋವಿಡ್-19 ಬಿಕ್ಕಟ್ಟು ಸ್ವಾವಲಂಬಿ ಭಾರತಕ್ಕೆ ಸಿಕ್ಕಿದ ಅವಕಾಶ: ಪ್ರಧಾನಿ ಮೋದಿ

    ನವದೆಹಲಿ: ವರಮಾನ ಹಂಚಿಕೆ ಆಧಾರದಲ್ಲಿ ಕಲ್ಲಿದ್ದಲು ವಲಯದಲ್ಲಿರುವ ಸರ್ಕಾರದ ಏಕಸ್ವಾಮ್ಯ ವ್ಯವಸ್ಥೆ ರದ್ದುಗೊಳಿಸಿ ಖಾಸಗಿ ಸಂಸ್ಥೆಗಳಿಗೆ ವಾಣಿಜ್ಯ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದ್ದು, ಈ ಯೋಜನೆಗೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಿದರು.

    ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ವ್ಯವಸ್ಥೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹಾಜರಿದ್ದರು. ಕೋವಿಡ್-19 ಹಿನ್ನೆಲೆಯಲ್ಲಿ ‘ಆತ್ಮ ನಿರ್ಭರ್ ಭಾರತ್’ ಯೋಜನೆ ಅಡಿ ಕೇಂದ್ರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಇದರ ಭಾಗವಾಗಿ ಕಲ್ಲಿದ್ದಲು ಕ್ಷೇತ್ರದಲ್ಲಿ ವಾಣಿಜ್ಯ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

    ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೊನಾ ವೈರಸ್ ಸಂದರ್ಭದ ಸಂದಿಗ್ಧ ಪರಿಸ್ಥಿತಿಯನ್ನು ಭಾರತ ವಿದೇಶಿ ವಸ್ತುಗಳ ಅಮದು ನಿಲ್ಲಿಸಿ, ಸ್ವಾವಲಂಬಿಯಾಗುವ ಅವಕಾಶವನ್ನಾಗಿ ಬಳಕೆ ಮಾಡಿಕೊಳ್ಳಲಿದೆ. ಕೊರೊನಾ ಬಿಕ್ಕಟ್ಟು ನಮಗೆ ಸ್ವಾವಲಂಬಿ ಪಾಠವನ್ನು ಕಲಿಸಿದ್ದು, ಆಮದು ವಸ್ತುಗಳ ಮೇಲಿನ ಅವಲಂಬನೆಯನ್ನು ಭಾರತ ಕಡಿಮೆ ಮಾಡಲಿದೆ. ಭಾರತ ವಿಶ್ವದಲ್ಲಿ 4ನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ವಿಶ್ವದ 2ನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದರೂ ಕಲ್ಲಿದ್ದಲನ್ನು ರಫ್ತು ಮಾಡುತ್ತಿಲ್ಲ ಎಂದರು.

    ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಈಗ ಮುಕ್ತವಾಗಿದ್ದು, ಇದು ಎಲ್ಲಾ ಕ್ಷೇತ್ರಗಳಿಗೂ ಸಹಾಯ ಮಾಡುತ್ತದೆ. ಭಾರತ ಶಕ್ತಿಯಲ್ಲಿ ಸ್ವಾವಲಂಬಿಯಾಗಲು ಇಂದು ಬಹುದೊಡ್ಡ ಹೆಜ್ಜೆ ಇಟ್ಟಿದೆ. ಕೋವಿಡ್-19 ಬಿಕ್ಕಟ್ಟನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಿ ಆಮದಿನ ಮೇಲಿನ ಅವಲಂಬನೆಯನ್ನು ಇದು ಕಡಿಮೆ ಮಾಡಲಿದೆ. ಹರಾಜು ಪ್ರಕ್ರಿಯೆಯಿಂದ ರಾಜ್ಯಗಳಿಗೆ ಹೆಚ್ಚಿನ ಆದಾಯ ನೀಡುತ್ತದೆ. ಉದ್ಯೋಗ ಅವಕಾಶವನ್ನು ಸೃಷ್ಟಿಸುವುದರೊಂದಿಗೆ ದೂರದ ಪ್ರದೇಶಗಳ ಅಭಿವೃದ್ಧಿಗೂ ಸಹಕಾರಿ ಆಗಲಿದೆ ಎಂದು ತಿಳಿಸಿದರು.

    ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಖಾಸಗಿ ವಲಯ ಆರಂಭ ಹಾಗೂ ಹೂಡಿಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ 41 ಕಲ್ಲಿದ್ದಲು ಗಣಿಗಳನ್ನು ಇ-ಹರಾಜು ಹಾಕಲಿದೆ. ಅಂದಾಜಿನ ಪ್ರಕಾರ 41 ಕಲ್ಲಿದ್ದಲು ಗಣಿಗಳ ಹರಾಜಿನ ಮೂಲಕ ಮುಂದಿನ 5-7 ವರ್ಷಗಳಲ್ಲಿ ದೇಶದಲ್ಲಿ 33 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಈ ಪ್ರಕ್ರಿಯೆಯಿಂದ ರಾಜ್ಯ ಸರ್ಕಾರಗಳಿಗೆ ವಾರ್ಷಿಕ 20 ಸಾವಿರ ಕೋಟಿ ರೂ. ಆದಾಯ ಲಭಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.