ಹಾರರ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ’ಆತ್ಮ’ (Atma) ಚಿತ್ರದ ಟ್ರೈಲರ್ (Trailer) ಅನ್ನು ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ವಿರಾಜ್ ಫಿಲಿಂ ರೆರ್ಕಾಡಿಂಗ್ ಸ್ಟುಡಿಯೋ ಮಾಲೀಕ ಯುವ ಪ್ರತಿಭೆ ಅನಿಲ್.ಸಿ.ಆರ್ ಕಥೆ, ನಿರ್ಮಾಣ ಮಾಡುವುದರ ಜತೆಗೆ ನಾಯಕರಾಗಿ ಅಭಿನಯಿಸಿರುವುದು ಎರಡನೇ ಅನುಭವ. ಮುನೇಗೌಡ ಕಿತ್ತಗನೂರು ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಅಚಲ, ಓಂ ಶಾಂತಿ ಓಂ ಮತ್ತು ಅಸ್ಥಿರ ಚಿತ್ರಗಳಿಗೆ ಆಕ್ಷನ್ ಹೇಳಿರುವ ಎಸ್.ಆರ್.ಪ್ರಮೋದ್ (Pramod) ನಿರ್ದೇಶನ ಮಾಡಿದ್ದಾರೆ.
ಪ್ರಾರಂಭದಿಂದ ಅಂತ್ಯದವರೆಗೂ ಕುತೂಹಲ ಹುಟ್ಟಿಸುತ್ತಾ ಸಿನಿಮಾವು ಸಾಗಲಿದೆ. ಮನುಷ್ಯ ಸತ್ತ ಮೇಲೆ ಶ್ರಾದ್ಧ ಮಾಡದೆ ಇದ್ದಲ್ಲಿ ಅದು ಆತ್ಮವಾಗುತ್ತದೆಂದು ಹೇಳುತ್ತಾರೆ. ಇದರ ಒಂದು ಎಳೆಯನ್ನು ತೆಗೆದುಕೊಂಡು ಚಿತ್ರಕಥೆ ಸಿದ್ದಪಡಿಸಲಾಗಿದೆ. ಆರು ಸ್ನೇಹಿತರು ವೀಕೆಂಡ್ ಪಾರ್ಟಿಗೆಂದು ಒಂದು ಸ್ಥಳಕ್ಕೆ ಹೋಗುತ್ತಾರೆ. ಅವರ ಗುಂಪಿನಲ್ಲಿ ಒಬ್ಬಳು ಗೋಸ್ಟ್ ಹಂಟರ್ ಇರುತ್ತಾಳೆ. ಅವಳು ಎಲ್ಲರನ್ನು ಭೂತದ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಎಲ್ಲರೂ ಪಾರ್ಟಿ ಮಾಡುತ್ತಿರುವಾಗ ಇವಳು ಮಾತ್ರ ಗೋಸ್ಟ್ ಹಂಟ್ ಮಾಡ್ತಾ ಇರುತ್ತಾಳೆ. ಅಲ್ಲಿ ಸಿಗುವ ಆತ್ಮ ಇಪ್ಪತ್ತು ವರ್ಷಗಳ ಹಿಂದೆ ನಡೆದ ಭಯಾನಕ ಘಟನೆಯ ನಿಗೂಢತೆಯನ್ನು ತೆರೆದುಕೊಳ್ಳುತ್ತದೆ. ಕೊನೆಗೆ ಅದರಿಂದ ತಪ್ಪಿಸಿಕೊಂಡು ಹೇಗೆ ಹೊರಗೆ ಬರುತ್ತಾರೆ? ಗೋಸ್ಟ್ ಹಂಟರ್ ಯಾರು? ಅದಕ್ಕೆ ಕಾರಣವೇನು? ಇವೆಲ್ಲವೂ ಕುತೂಹಲಕಾರಿ ಸನ್ನಿವೇಶಗಳು ಸಿನಿಮಾದಲ್ಲಿ ಇರಲಿವೆಯಂತೆ.
ನಾಯಕಿ ಕಾವ್ಯ, ಇವರೊಂದಿಗೆ ದಿವ್ಯ, ಪುಷ್ಪ, ಪ್ರೀತಿ, ಏಲೇಶ್, ಬನ್ನೂರು ಶ್ರೀನಿವಾಸಗೌಡ, ಮುಂತಾದವರ ನಟನೆ ಇದೆ. ಎರಡು ಹಾಡುಗಳಿಗೆ ನಿತಿನ್‌ರಾಜ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ರಣಧೀರ್ ನಾಯಕ್, ಸಂಕಲನ ಆಯುರ್, ಸಂಭಾಷಣೆ ಅಜಯ್ ವೇದಾಂತಿ, ಸಾಹಿತ್ಯ ಸಿದ್ದುಅರಸು, ನಿರ್ವಹಣೆ ದೀಪಕ್ ಬಾಬು ಅವರದಾಗಿದೆ. ಮೈಸೂರು ಸುತ್ತಮುತ್ತ 22 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಐರ್ಲೆಂಡ್: ಅದು ಪಶ್ಚಿಮ ಐರ್ಲೆಂಡ್. ಭೂ ಲೋಕದ ಸ್ವರ್ಗದಂತಿರೋ ತಾಣಗಳನ್ನು ಹೊತ್ತಿರೋ ಸುಂದರಾತಿ ಸುಂದರ ತಾಣ. ಇದು ಐತಿಹಾಸಿಕ ನಗರಿಯೂ ಹೌದು. ಅಂತೆಯೇ ಅನೇಕ ನಿಗೂಢ ರಹಸ್ಯಗಳನ್ನು ತನ್ನಲ್ಲಿ ಹೊತ್ತುಕೊಂಡಿರೋ ವಿಲಕ್ಷಣ ಸ್ಥಳವೂ ಹೌದು. ಇಂದಿಗೂ ಇಲ್ಲಿ ಕಳೆದು ಹೋದ ಆತ್ಮಗಳ ಪಿಸುಮಾತನ್ನು ಕೇಳಬಹುದು ಅನ್ನೋದು ಅನೇಕರ ಅನುಭವದ ಮಾತು.
ಇಂತಹ ಪ್ರಶಾಂತವಾದ ಪ್ರದೇಶದಲ್ಲಿ ಕಳೆದ 50 ವರ್ಷಗಳಿಂದ ಗೋಡಿಯವರ ಕುಟುಂಬ ವಾಸ ಮಾಡ್ತಿದೆ. ಅಂದ ಹಾಗೆ ಈ ಘಟನೆ ನಡೆದಿರೋದು 1996ರಲ್ಲಿ. ಅಂದ್ರೆ, ಇಲ್ಲಿಂದ ಸರಿ ಸುಮಾರು 20-22 ವರ್ಷಗಳ ಹಿಂದೆ. ಆ ಸಮಯದಲ್ಲಿ ಈ ಮನೆಯಲ್ಲಿ ಗೋಡಿ ಹಾಗೂ ಪತ್ನಿ ವೀನಸ್, ಮಗ ಮೈಕೆಲ್ ಹಾಗೂ ಮಗನ ಭಾವಿ ಪತ್ನಿ ನೀಹೆ, ಮಗಳು ಮೀನಲ್ ಹಾಗೂ ಆಕೆಯ ಒಂದು ತಿಂಗಳ ಮಗು ಸಾರಾ ವಾಸಮಾಡ್ತಿದ್ರು. ಆಗ ತಾನೇ ಮನೆಗೆ ಪುಟಾಣಿ ಸಾರಾಳನ್ನು ಕರೆದುಕೊಂಡು ಬಂದ ಖುಷಿಯಲ್ಲಿದ್ರು ಮನೆ ಮಂದಿ. ಆದ್ರೆ, ಯಾವಾಗ ಮಗುವನ್ನು ಕರೆದುಕೊಂಡು ಬಂದ್ರೋ ಒಂದೊಂದೇ ತೊಂದರೆಗಳು ನಡೆಯೋದಕ್ಕೆ ಆರಂಭವಾದವಂತೆ.
ಮೊದಲ ಘಟನೆ: ಮಗು ಮಲಗಿದ್ದ ತೊಟ್ಟಿಲಿನ ಮೇಲ್ಭಾಗದಲ್ಲಿ ಸಾಲಾಗಿ ಗೊಂಬೆಗಳನ್ನು ಜೋಡಿಸಲಾಗಿತ್ತು. ಅದೊಂದು ದಿನ ಮಗು ಮಲಗಿದ್ದ ಕೋಣೆಯ ಗೋಡೆಗಳು ಅಲುಗಾಡೋದಕ್ಕೆ ಶುರುವಾಯ್ತು. ತಕ್ಷಣ ಗೊಂಬೆಯೊಂದು ಮಗುವಿನ ಮೇಲೆ ಬಿದ್ದು ಬಿಡುತ್ತೆ. ಮಗು ಜೋರಾಗಿ ಅಳೋದಕ್ಕೆ ಶುರು ಮಾಡಿಬಿಡುತ್ತೆ. ಮಗು ಅಳ್ತಿರೋದನ್ನ ನೋಡಿ ಕೋಣೆಗೆ ಬಂದ ಮೀನಲ್ ಗೆ ಆತಂಕವುಂಟಾಯ್ತು. ಆದ್ರೆ ಇದು ಇಷ್ಟಕ್ಕೇ ನಿಲ್ಲಲಿಲ್ಲ ಅನ್ನೋದೇ ದುರಂತ.
ಸಾಂದರ್ಭಿಕ ಚಿತ್ರ
ಅದೊಂದು ದಿನ ರಾತ್ರಿ ಮನೆಯವರೆಲ್ಲಾ ಮಲಗಿದ್ರು. ಮಧ್ಯರಾತ್ರಿ 2 ಗಂಟೆ ಆಗಿರಬಹುದೇನೋ. ಅಷ್ಟರಲ್ಲೇ, ಜೋರಾಗಿ ಮಗು ಅಳೋ ಶಬ್ದ ಕೇಳೋಕೆ ಶುರುವಾಗಿತ್ತು. ಮನೆಯ ಒಂದನೇ ಮಹಡಿಯಲ್ಲಿ ಮಲಗಿದ್ದ ಮೈಕೆಲ್ ಹಾಗೂ ನೀಹೆಗೆ ಎಚ್ಚರವಾಯ್ತು. ಕೆಳಗೆ ಬಂದು ಮಗು ಮಲಗಿದ್ದ ಕೋಣೆಯ ಬಾಗಿಲನ್ನು ತೆಗೆದಾಗ ಪುಟಾಣಿ ಸಾರಾ ಹಾಗೂ ತಾಯಿ ಮೀನಲ್ ಬೆಚ್ಚಗೆ ಮಲಗಿರ್ತಾರೆ. ಇದನ್ನು ನೋಡಿದ ಮೈಕೆಲ್ ಗೆ ಅಚ್ಚರಿಯ ಜೊತೆಗೆ ಭಯಾನೂ ಆಗುತ್ತೆ. ಯಾಕಂದ್ರೆ, ಮಗು ಅಳೋ ಶಬ್ದ ಮತ್ತಷ್ಟು ಜಾಸ್ತಿಯಾಗ್ತಾನೆ ಇರುತ್ತೆ. ಇದು ಯಾವುದೋ ಆತ್ಮದ್ದೇ ಕಾಟ ಅನ್ನೋದು ಇಬ್ಬರಿಗೂ ಖಾತ್ರಿಯಾಗುತ್ತೆ.
ಈ ವಿಷ್ಯ ಮಾಧ್ಯಮಗಳ ಮೂಲಕ ಜನಕ್ಕೆ ತಿಳಿದ್ರೆ ಯಾರಾದ್ರೂ ತಮ್ಮ ಸಹಾಯಕ್ಕೆ ಬರಬಹುದು ಅಂತಾ ಮೈಕೆಲ್ ಸಲಹೆ ಕೊಡ್ತಾನೆ. ಅದೊಂದು ದಿನ ಐರ್ಲೆಂಡ್ ದೇಶದ ಪತ್ರಿಕಾ ಪ್ರತಿನಿಧಿಯೊಬ್ಬಳು ಇವರ ಮನೆಗೆ ಬರ್ತಾಳೆ. ಮೊದಮೊದಲು ಆಕೆಯೂ ಇದೆಲ್ಲಾ ಕಟ್ಟುಕಥೆ ಅಂತಾ ವಾದಿಸುತ್ತಾಳೆ. ಆದ್ರೆ, ಅವಳಿಗೂ ಆತ್ಮದ ಇರುವಿಕೆಯ ಅನುಭವವಾಗುತ್ತೆ. ಅದನ್ನು ಹಾಗೇ ಪತ್ರಿಕೆಗೆ ವರದಿ ಮಾಡ್ತಾಳೆ.
ಸಾಂದರ್ಭಿಕ ಚಿತ್ರ
ಪ್ಯಾರಾ ಸೈಕಾಲಜಿಸ್ಟ್: ಪತ್ರಿಕಾ ವರದಿ ನೋಡಿದ ಆತ್ಮ ಹಾಗೂ ಪುನರ್ಜನ್ಮದ ಬಗ್ಗೆ ಅಧ್ಯಯನ ಮಾಡ್ತಿದ್ದ ಪ್ಯಾರಾ ಸೈಕಾಲಜಿಸ್ಟ್ ತಜ್ಞೆ ಈಡಿಯಾ, ಗೋಡಿ ಮನೆಗೆ ಭೇಟಿ ಕೊಡ್ತಾಳೆ. ಅಂದ ಹಾಗೆ, ಇಲ್ಲಿ ಪ್ಯಾರಾ ಸೈಕಾಲಜಿಸ್ಟ್ ಅಂದ್ರೆ, ಮನಃಶಾಸ್ತ್ರಕ್ಕಿಂತಲೂ ಒಂದು ಹಂತ ಮೇಲಿನದ್ದೆಂದೇ ಹೇಳಬೇಕು. ವಿಜ್ಞಾನ ಹಾಗೂ ಮೂಢನಂಬಿಕೆಗಳ ನಡುವಿರೋ ತೀಕ್ಷ್ಣ ಗೆರೆಯದು. ಹೀಗೆ ಪ್ಯಾರಾ ಸೈಕಾಲಜಿಸ್ಟ್ ಈಡಿಯಾ ಮನೆಗೆ ಬಂದು ಎಲ್ಲರನ್ನೂ ಪರಿಚಯಿಸಿಕೊಳ್ತಾಳೆ. ಅವರೆಲ್ಲಾ ಹೇಳುತ್ತಿದ್ದ ಪ್ರತಿಯೊಂದು ಘಟನೆಗಳನ್ನೂ ಒಂದಕ್ಕೊಂದು ತಾಳೆ ಹಾಕ್ತಾ ಹೋಗ್ತಾಳೆ.
ತಾನು ಮನೆಯಲ್ಲಿ ಮಗುವಿನ ಕೋಣೆಗೆ ಹೋಗಬಹುದಾ ಅಂತಾ ಈಡಿಯಾ ಹೇಳ್ತಾಳೆ. ಸ್ವಲ್ಪ ಹೊತ್ತು ತನ್ನನ್ನ ಅಲ್ಲಿಯೇ ಏಕಾಂತವಾಗಿ ಇರೋದಕ್ಕೆ ಬಿಡಿ ಅಂತಾ ಕೇಳ್ಕೋತಾಳೆ. ಈಡಿಯಾ ಈ ಮನೆಯಲ್ಲಿ ಆಗಿದ್ದ ಘಟನೆಗಳ ಬಗ್ಗೆ ಪ್ಯಾರಾಸೈಕಾಲಜಿಯ ಮೂಲಕ ತಿಳಿದುಕೊಳ್ಳೋ ಪ್ರಯತ್ನ ಮಾಡಿದಾಗ, ಇದೇ ಕೋಣೆಯಲ್ಲಾದ ಘಟನೆಯೊಂದು ಗಮನಕ್ಕೆ ಬರುತ್ತೆ.
ಸಾಂದರ್ಭಿಕ ಚಿತ್ರ
ಅಲ್ಲಿ ನಡೆದಿದ್ದು ವಿಚಿತ್ರ: ಆ ಘಟನೆ ಪ್ರಕಾರ, ಇಲ್ಲಿ ಗರ್ಭಿಣಿಯೊಬ್ಬಳು ಮಗುವಿಗೆ ಜನ್ಮ ಕೊಡ್ತಾ ಇರ್ತಾಳೆ. ವ್ಯಕ್ತಿಯೊಬ್ಬ ಆಕೆಗೆ ಸಹಾಯ ಮಾಡ್ತಿರ್ತಾನೆ. ಇನ್ನು ಮತ್ತೊಬ್ಬ ವ್ಯಕ್ತಿ ಅಲ್ಲಿಯೇ ನಿಂತು ದುರುಗುಟ್ಟಿ ನೋಡುತ್ತಿರುತ್ತಾನೆ. ಸ್ವಲ್ಪ ಹೊತ್ತಲ್ಲೇ ಆ ಮಹಿಳೆ ಮಗುವಿಗೆ ಜನ್ಮ ಕೊಡ್ತಾಳೆ. ವಿಚಿತ್ರ ಅನ್ನೋ ಹಾಗೆ ಹೆರಿಗೆ ಮಾಡಿಸ್ತಾ ಇದ್ದ ವ್ಯಕ್ತಿಯೇ ಮಗುವನ್ನು ಉಸಿರುಗಟ್ಟಿಸಿ ಸಾಯಿಸಿಬಿಡ್ತಾನೆ.
ಆಗ್ಲೇ ಈಡಿಯಾಗೆ ಇಲ್ಲಿ ಅಳ್ತಿರೋದೂ ಅದೇ ಮಗುವಿನ ಆತ್ಮ ಅನ್ನೋದು ಸ್ಪಷ್ಟವಾಗುತ್ತೆ. ಇದನ್ನು ನೆಲಮಹಡಿಯಲ್ಲಿದ್ದ ಮನೆಯವರಿಗೆ ತಿಳಿಸ್ತಾಳೆ. ಜೊತೆಗೆ ಈ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳವುದು ಸಾಧ್ಯ ಅನ್ನೋದಾಗಿ ಹೇಳ್ತಾಳೆ. ಇದಕ್ಕಾಗಿ ಮನೆಯಲ್ಲಿರೋ ಮಗುವನ್ನು ಕರೆದುಕೊಂಡು ಹೊರಗೆ ಹೋಗಬೇಕಾಗುತ್ತೆ. ಉಳಿದವರು ತನಗೆ ಆತ್ಮವನ್ನು ಉಚ್ಛಾಟಿಸೋದಕ್ಕೆ ಸಹಾಯ ಮಾಡಿ ಅನ್ನೋದಾಗಿ ಈಡಿಯಾ ಹೇಳ್ತಾಳೆ. ಈಕೆಯ ಸೂಚನೆ ಪ್ರಕಾರ ಗೋಡಿ ಹಾಗೂ ವೀನಸ್ ಮಗುವನ್ನು ಕರೆದುಕೊಂಡು ಹೊರಗೆ ಹೋಗ್ತಾರೆ. ಉಳಿದ ಮೂವರು ಈಡಿಯಾ ಜೊತೆಗೆ ಇರ್ತಾರೆ.
ಸಾಂದರ್ಭಿಕ ಚಿತ್ರ
ತೊಟ್ಟಿಲು: ಈಡಿಯಾ, ಮೈಕೆಲ್, ನೀಹೆ ಹಾಗೂ ಮೀನಲ್ ಗೆ ಚಾಚೂ ತಪ್ಪದೆ ತನ್ನ ಸೂಚನೆಗಳನ್ನು ಪಾಲಿಸುವಂತೆ ಹೇಳ್ತಾಳೆ. ಅದರ ಪ್ರಕಾರ ಒಂದು ತೊಟ್ಟಿಲು ತಂದು ಎದುರಿಡಲಾಗುತ್ತೆ. ಮೂವರೂ ಕಣ್ಣು ಮುಚ್ಚಿದಾಗ, ಈಡಿಯಾ ಮಗುವಿನ ಆತ್ಮವನ್ನು ಆವಾಹಿಸ್ತಾಳೆ. ಆಗ ಅಲ್ಲೊಂದು ಪ್ರಕಾಶಮಾನವಾದ ಬೆಳಕಿನ ನಡುವೆ, ಆಟವಾಡ್ತಿರೋ ಮಗುವೊಂದು ಮೂಡುತ್ತೆ. ಇದು ಎಲ್ಲರ ಗಮನಕ್ಕೂ ಬರುತ್ತೆ. ಈಡಿಯಾ ಆ ಮಗುವಿಗೆ ನಿನ್ನ ಹೆತ್ತವರು ನಿನಗೋಸ್ಕರ ಕಾಯ್ತಾ ಇದ್ದಾರೆ, ಸುಂದರವಾದ ಪ್ರಪಂಚ ನಿನಗಾಗಿ ಕಾಯ್ತಾ ಇದೆ ನೀನು ಅಲ್ಲಿಗೆ ಹೋಗು ಅಂತಾ ಹೇಳ್ತಾ ಹೋಗ್ತಾಳೆ. ಆ ಆತ್ಮ ಈಡಿಯಾ ಸೂಚನೆಯಂತೆ ಮನೆ ಬಿಟ್ಟು ಹೊರಟುಹೋಗುತ್ತೆ. ಈಗ ಗೋಡಿ ಹಾಗೂ ಮನೆಯವರು ಒಂದು ಪುಟ್ಟ ಮಗುವಿನ ಆತ್ಮದಿಂದಾಗಿ ನರಕ ಅನುಭವಿಸಿಬಿಟ್ರು. ಆದ್ರೀಗ ಆ ಮನೆಯಲ್ಲಿ ಎಲ್ಲವೂ ಶಾಂತವಾಗಿದೆ. ಯಾವುದೇ ಸಮಸ್ಯೆ ಇಲ್ಲ. ಆದ್ರೆ ಇದನ್ನೆಲ್ಲಾ ನಂಬೋದು ಬಿಡೋದು ನಿಮಗೆ ಬಿಟ್ಟಿದ್ದು.
ಕಾರವಾರ: ಧರ್ಮಗುರುಗಳು ಸಾವನ್ನಪ್ಪಿ ಏಳು ದಿನಗಳು ಕಳೆದ್ರೂ, ಅವರ ಆತ್ಮವಿನ್ನೂ ಜಾಗೃತವಾಗಿದೆ ಎಂಬ ಕಾರಣಕ್ಕೆ ಶವ ಸಂಸ್ಕಾರ ಮಾಡದೇ ಕೊಠಡಿಯೊಂದರಲ್ಲಿಟ್ಟು ಪೂಜೆ ಮಾಡಲಾಗ್ತಿತ್ತು.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಗೆಲುಕ್ಪಾ ಪಂಗಡದ ಪ್ರಮುಖ ನಾಯಕ ಗೆಶೆ ಲೋಬ್ಸಂಗ್ ತೆಂಜಿನ್ (90) ಅವರು ಇದೇ ತಿಂಗಳು 21ರಂದು ಸಾವನ್ನಪ್ಪಿದ್ದರು. ಆದರೆ ಅವರ ಆತ್ಮ ದೇಹದಲ್ಲಿ ಜಾಗೃತವಾಗಿದೆ ಎಂಬ ಕಾರಣಕ್ಕೆ ಇಂದು ಅಂತ್ಯಸಂಸ್ಕಾರ ಮಾಡಲಾಗಿದೆ.
ಇದೇ ತಿಂಗಳ 21 ರಂದು ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ವಯೋ ಸಹಜತೆಯಿಂದ ತೆಂಜಿನ್ ಮೃತಪಟ್ಟಿದ್ದರು. ನಂತರ ದೆಹಲಿಯಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಬಳಿ ಇರುವ ಟಿಬೇಟಿಯನ್ ನಿರಾಶ್ರಿತರ ಕಾಲೋನಿಗೆ ಮೃತದೇಹವನ್ನು ತರಲಾಗಿದ್ದು, ಧಾರ್ಮಿಕ ವಿಧಿ ಪೂರೈಸಲು ಅನುಯಾಯಿಗಳು ಮುಂದಾಗಿದ್ರು. ಆದ್ರೆ ಅವರ ದೇಹದಲ್ಲಿ ಆತ್ಮ ಜಾಗೃತವಾಗಿದೆ ಎಂದು ಹಿರಿಯ ಧರ್ಮ ಗುರುಗಳು ಹೇಳಿದ್ದರಿಂದ ಅಂತ್ಯಸಂಸ್ಕಾರವನ್ನು ಮುಂದೂಡಲಾಯ್ತು. ಇನ್ನು ಅವರ ದೇಹಕ್ಕೆ ಪೂಜೆ ಸಲ್ಲಿಸುವ ಮೂಲಕ ಆತ್ಮ ದೇಹದಿಂದ ಸಂಪೂರ್ಣ ಹೋದ ನಂತರವೇ ಶವ ಸಂಸ್ಕಾರದ ವಿಧಿಯನ್ನು ಪೂರೈಸಲು ತೀರ್ಮಾನಿಸಿ ಲಾಮಾ ಕ್ಯಾಂಪ್ ನ ನಂ.2 ಲೋಸಲಿಂಗ್ ಬೌದ್ಧ ಮಂದಿರದಲ್ಲಿ ಇಟ್ಟು ಪೂಜೆಗೈಯಲಾಗುತಿದ್ದು, ಇಂದು ದೇಹದಿಂದ ಆತ್ಮ ಹೊರಹೋಗಿರುವುದು ದೃಢಪಟ್ಟಿದ್ದರಿಂದಾಗಿ ಅಂತ್ಯಸಂಸ್ಕಾರದ ವಿಧಿ ಪೂರೈಸಲಾಯ್ತು ಎನ್ನಲಾಗಿದೆ.
ಸಾಂದರ್ಭಿಕ ಚಿತ್ರ
ಆತ್ಮವಿರುವುದು ತಿಳಿಯುವುದು ಹೇಗೆ?: ಟಿಬೇಟಿಯನ್‍ರಲ್ಲಿ ಯಾವುದೇ ಧರ್ಮ ಗುರುಗಳು ನಿಧನ ಹೊಂದಿದ್ರೆ ಅವರ ಮೈ ಬೆಚ್ಚಗಿದ್ದರೇ ಆಗ ಆತ್ಮ ಜಾಗೃತವಾಗಿರುತ್ತೆ ಅನ್ನೂ ನಂಬಿಕೆ ಇದೆ. ಹೀಗಾಗಿ ಯಾವುದೇ ಧರ್ಮಗುರುಗಳು ನಿಧನ ಹೊಂದಿದಾಗ ಅದನ್ನು ದೃಢಪಡಿಸಿಕೊಳ್ಳಲಾಗುತ್ತೆ. ಹೀಗೆ ದೃಢಪಡಿಸಿಕೊಳ್ಳುವ ಸಂದರ್ಭದಲ್ಲಿ ಗೆಶೆ ಲೋಬ್ಸಂಗ್ ತೆಂಜಿನ್ ರವರ ದೇಹ ಬಿಸಿಯಾಗಿತ್ತು. ಆದ್ದರಿಂದ ಕಾಲೋನಿಯ ಒಂದು ಕೋಣೆಯಲ್ಲಿ ಅವರ ಶವವನ್ನ ಮಲಗಿದ ಸ್ಥಿತಿಯಲ್ಲಿಟ್ಟು ದಿನಂಪ್ರತಿ ಪೂಜೆ ಸಲ್ಲಿಸಲಾಗುತಿತ್ತು. ಇಂದು ಅವರ ದೇಹದಲ್ಲಿ ತಣ್ಣಗಿನ ಅನುಭವವಾಗಿದ್ದು ದೇಹದಿಂದ ಆತ್ಮ ಹೊರಹೋಗಿರುವುದನ್ನ ಟಿಬೇಟಿಯನ್ ಕಾಲೋನಿಯ ದಲಾಯಿ ಲಾಮಾ ಕಚೇರಿಯ ಸ್ಥಳೀಯ ಪ್ರತಿನಿಧಿ ಕರ್ಮಾರವರು ದೃಢಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಟಿಬೇಟಿಯನ್‍ನ ಗೆಲುಕ್ಪಾ ಪಂಗಡದ ಗೆಶೆ ಲೋಬ್ಸಂಗ್‍ರವರು ಈ ಹಿಂದೆ ಇಂದಿರಾ ಗಾಂಧಿ ಸರ್ಕಾರದ ಕಾಲದಲ್ಲಿ ಟಿಬೇಟ್‍ನಿಂದ ಆಶ್ರಯ ಬಯಸಿ ಭಾರತಕ್ಕೆ ಬಂದು ಮುಂಡಗೋಡಿನ ನಿರಾಶ್ರಿತರ ಕಾಲೋನಿಯಲ್ಲಿ ವಾಸವಾಗಿದ್ದರು. ಅಪ್ಪಟ ದಲಾಯಿ ಲಾಮಾ ರವರ ಅನುಯಾಯಿಯಾಗಿರುವ ಇವರು ದೇಶ ವಿದೇಶಗಳನ್ನು ಸುತ್ತಿ ಬೌದ್ಧ ಧರ್ಮ ಪ್ರಚಾರದ ಜೊತೆಗೆ ಟಿಬೇಟಿಯನ್ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಹೀಗಾಗಿ ಟಿಬೇಟಿಯನ್‍ಗಳ ಅಚ್ಚುಮೆಚ್ಚಿನ ನಾಯಕರಾಗಿ, ಧರ್ಮಗುರುಗಳಾಗಿ ಅನೇಕ ಅನುಯಾಯಿಗಳನ್ನ ಸಂಪಾದಿಸಿದ್ದರು.
ಸಾಂದರ್ಭಿಕ ಚಿತ್ರ
ಹಿಂದೆಯೂ ನಡೆದಿತ್ತು: ಇನ್ನು ಈ ರೀತಿಯ ಘಟನೆ ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ಲಾಮಾ ಕ್ಯಾಂಪ್ ನಂ.2 ರ ಲೋಸಲಿಂಗ ಬೌದ್ಧ ಮಠದ ಪಂಡಿತರಾದ ತಿಸುರ ರಿನಪೋಜೆ ಲೋಬಸಾಂಗ್ ನ್ಯೀಮಾ ರವರು ಮೃತಪಟ್ಟು 18 ದಿನ ಕಳೆದಿದ್ದರೂ ಸಹ ಅವರ ಮೃತದೇಹವನ್ನು ಇಡಲಾಗಿತ್ತು. ಆದರೆ ದೇಹದಿಂದ ಮಾತ್ರ ಯಾವುದೇ ವಾಸನೆ ಬಂದಿರಲಿಲ್ಲ. ನಂತರ ಹಿಮಾಚಲ ಪ್ರದೇಶದ ವೈದ್ಯರ ತಂಡ ಆಗಮಿಸಿ ಪರೀಕ್ಷೆ ನೆಡೆಸಿ 21 ದಿನದ ನಂತರ ಅಂತ್ಯ ಸಂಸ್ಕಾರ ಮಾಡಲಾಯ್ತು. ಹೀಗೆ ಬಹಳಷ್ಟು ವರ್ಷಗಳಿಂದ ಈ ರೀತಿಯ ಧರ್ಮ ಗುರುಗಳು ಸತ್ತಾಗ ಮೂರು ತಿಂಗಳವರೆಗೂ ಶವವನ್ನ ಇಟ್ಟು ಪೂಜಿಸಿದ ಘಟನೆಗಳಿವೆ ಎಂದು ಟಿಬೇಟೆಯನ್ನರು ಹೇಳುತ್ತಾರೆ.
ಇನ್ನು ಈಗ ಮೃತಪಟ್ಟ ಧರ್ಮಗುರುಗಳ ಶವ ಕೆಡದೇ ಬಿಸಿಯಾಗಿದ್ದು ಮುಖದ ಮೇಲೆ ಬೆವರು ಕಾಣಿಸಿತಿತ್ತು. ಹೀಗಾಗಿ ಆತ್ಮ ದೇಹದಿಂದ ಹೊರಹೋಗಿಲ್ಲ ಎಂಬುದು ದೃಢಪಟ್ಟಿದ್ದು ಈ ಕಾರಣದಿಂದಾಗಿ ನಾವು ಅವರ ದೇಹವನ್ನು ಇರಿಸಿ ಏಳು ದಿನಗಳಿಂದ ಪೂಜೆಗೈದು ಇಂದು ಅಂತ್ಯಸಂಸ್ಕಾರ ನೆರವೇರಿಸಿದ್ದೇವೆ ಎಂದು ಪಬ್ಲಿಕ್ ಟಿ.ವಿಗೆ ಟಿಬೇಟಿಯನ್ ಕಾಲೋನಿಯ ಬೌದ್ಧ ಸನ್ಯಾಸಿ ತುಪ್ತಿನ್ ಸಿರಿಂಗ್ ತಿಳಿಸಿದ್ದಾರೆ.