Tag: ಆಣೆಕಟ್ಟು

  • ತಿರುಪತಿಯಲ್ಲಿ ಆಣೆಕಟ್ಟು ಬಿರುಕು – ಜನರಲ್ಲಿ ಹೆಚ್ಚಿದ ಆತಂಕ

    ತಿರುಪತಿಯಲ್ಲಿ ಆಣೆಕಟ್ಟು ಬಿರುಕು – ಜನರಲ್ಲಿ ಹೆಚ್ಚಿದ ಆತಂಕ

    ತಿರುಪತಿ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಿರುಪತಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಜಿಲ್ಲೆಯ ಅತಿದೊಡ್ಡ ಆಣೆಕಟ್ಟು ರಾಯಲ ಚೇವೂರು ಬಿರುಕು ಬಿಟ್ಟಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

    ಭಾರೀ ಮಳೆಯಿಂದಾಗಿ ಆಣೆಕಟ್ಟಿಗೆ ನೀರಿನ ಹರಿವು ಹೆಚ್ಚಾಗಿದೆ. ಈಗ ಮಳೆ ನಿಂತಿದ್ದರೂ ಬಿರುಕುಗಳಿಂದ ನೀರು ಸೋರಿಕೆಯಾಗುತ್ತಿರುವುದು ಈಗ ಭಯಕ್ಕೆ ಕಾರಣವಾಗಿದೆ.

    ಜಿಲ್ಲಾಧಿಕಾರಿ ಹರಿ ನಾರಾಯಣನ್, ಜಿಲ್ಲಾ ಪೊಲೀಸ್, ಕಂದಾಯ ಅಧಿಕಾರಿಗಳು ಹಾಗೂ ನೀರಾವರಿ ತಂಡದ ಅಧಿಕಾರಿಗಳು ತಂಡವನ್ನು ಪರಿಶೀಲಿಸಿ, ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರನ್ನು ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.

    ಆಣೆಕಟ್ಟಿನಲ್ಲಿ ಬಿರುಕು ಮೂಡಿದ್ದರಿಂದ ಎಲ್ಲ ಅಮೂಲ್ಯ ಕಾಗದ ಪತ್ರಗಳು ಹಾಗೂ ಅಗತ್ಯ ವಸ್ತುಗಳೊಂದಿಗೆ ಎತ್ತರದ ಪ್ರದೇಶಕ್ಕೆ ತೆರಳಲು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸೂಚಿಸಲಾಗಿದೆ.

    ಜಿಲ್ಲೆಯಲ್ಲಿ ಅತಿ ದೊಡ್ಡದಾದ ಹಾಗೂ ಪುರಾತನ ಆಣೆಕಟ್ಟು ಇದಾಗಿದೆ. ಇದರಿಂದಾಗಿ ಯಾವುದೇ ಅವಕಾಶವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಆದ್ದರಿಂದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರಿನಾರಾಯಣ್ ಹೇಳಿದರು. ಇದನ್ನೂ ಓದಿ: ರಾಜ್ಯಕ್ಕೆ ತಪ್ಪದ ಮಳೆ ಕಾಟ – ರಾಜ್ಯಕ್ಕೆ ವಕ್ಕರಿಸಲಿದೆ ಮತ್ತೊಂದು ಸೈಕ್ಲೋನ್

    ಜಲಾಶಯದಲ್ಲಿ 0.9 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಆಣೆಕಟ್ಟು ನೀರನ್ನು ಸಂಗ್ರಹಿಸುವಷ್ಟು ಶಕ್ತಿಯನ್ನು ಹೊಂದಿಲ್ಲ. ಹೀಗಾಗಿ ಕೆಳಭಾಗದ ಗ್ರಾಮಗಳನ್ನು ಸ್ಥಳಾಂತರಿಸುವಂತೆ ತಿಳಿಸಲಾಗಿದೆ. ಜೊತೆಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಬಿರುಕು ತಡೆಗೆ ಕ್ರಮ ಕೈಗೊಳ್ಳಲು ಮಾತುಕತೆ ನಡೆಸಲಾಗಿದೆ.

    ಚಿತ್ತೂರು ಜಿಲ್ಲೆಯ ಮೇಲ್ದಂಡೆಗಳಿಂದ ಹಾಗೂ ತಿರುಮಲ ಬೆಟ್ಟಗಳಿಂದ ಅಧಿಕ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಸ್ವರ್ಣಮುಖಿ ನದಿಯು ಉಕ್ಕಿ ಹರಿಯುತ್ತಿದೆ. ಈ ನದಿಯಿಂದಲೇ ರಾಯಲ ಚೇವೂರು ಆಣೆಕಟ್ಟಿಗೆ ನೀರು ಸಂಗ್ರಹವಾಗುತ್ತದೆ.

    ಪ್ರವಾಹದಿಂದಾಗಿ ಹಲವಾರು ಹಳ್ಳಿಗಳ ಸಂಪರ್ಕ ಕಡಿತವಾಗಿದ್ದು, ಹೆದ್ದಾರಿ ಹಾಗೂ ಇತರ ರಸ್ತೆಗಳು ಜಲಾವೃತಗೊಂಡಿದೆ. ರೇಣಿಗುಂಟಾ ವಿಮಾನ ನಿಲ್ದಾಣದಲ್ಲಿ ಜನರ ರಕ್ಷಣೆಗೆ ಎನ್‍ಡಿಆರ್‍ಆಫ್ ಪಡೆ ಹಾಗೂ ವಾಯುಪಡೆಯ ಮೂರು ಹೆಲಿಕಾಪ್ಟರ್‍ಗಳು ಬಂದಿವೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅನಾಹುತ – ರಾಜಕಾಲುವೆ ಒಡೆದು ರಸ್ತೆ, ಮನೆಗಳಿಗೆ ನುಗ್ಗಿದ ನೀರು

    ಭಾರೀ ಮಳೆ ಹಿನ್ನೆಲೆಯಲ್ಲಿ 2 ದಿನದ ಹಿಂದಷ್ಟೇ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಶಬರಿಮಲೆಯನ್ನು ಮುಚ್ಚುವುದಾಗಿ ಅಲ್ಲಿನ ಜಿಲ್ಲಾಡಳಿತ ಹೇಳಿತ್ತು.

  • ಮೂವರು ಕಾರ್ಮಿಕರು ಬದುಕು ಕಿತ್ತುಕೊಂಡ ಅಕ್ರಮ ಗಣಿಗಾರಿಕೆ

    ಮೂವರು ಕಾರ್ಮಿಕರು ಬದುಕು ಕಿತ್ತುಕೊಂಡ ಅಕ್ರಮ ಗಣಿಗಾರಿಕೆ

    ಮಂಡ್ಯ: ಕೂಲಿ ಅರಸಿ ನೂರಾರು ಕಿಲೋಮೀಟರ್ ದೂರದಿಂದ ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ಆಗಮಿಸಿದ್ದ ಕಾರ್ಮಿಕರ ಬದುಕನ್ನು ಅಕ್ರಮ ಗಣಿಗಾರಿಕೆ ಕಿತ್ತುಕೊಂಡಿದೆ. ಅಕ್ರಮ ಕಲ್ಲುಗಣಿಕಾರಿಕೆ ಮಾಲೀಕರ ಕೈಗೆ ಸಿಕ್ಕ ಕಾರ್ಮಿಕರ ಬದುಕು ಈಗ ಅಕ್ಷರಶಃ ನರಕವಾಗಿದೆ. ಕಲ್ಲುಗಣಿಯಲ್ಲಿ ನಡೆದ ಅಕ್ರಮ ಸ್ಫೋಟಕ್ಕೆ ಕಣ್ಣು, ಕಿವಿಗಳನ್ನೇ ಕಳೆದುಕೊಂಡಿರುವ ಬಡ ಕೂಲಿ ಕಾರ್ಮಿಕರ ಕುಟುಂಬ ಬೀದಿಗೆ ಬಿದ್ದಿದೆ. ಇದೀಗ ಅನ್ಯಾಯಕ್ಕೊಳಗಾಗಿರುವ ಕುಟುಂಬ ನ್ಯಾಯಕ್ಕಾಗಿ ಕಣ್ಣೀರುಡುತ್ತಿದೆ.

    ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಡ್ಲಿ ತಾಂಡಾದ ನಿವಾಸಿಗಳು ಮೇಸ್ತ್ರಿ ಚಂದ್ರು ಪೋಮಪ್ಪ ಲಮಾಣಿ ಎಂಬಾತನ ಮಾತನ್ನು ನಂಬಿ ರಮೇಶ್, ರವಿ, ರಾಜು ಎಂಬ ಮೂವರು ಕೆಲಸ ಅರಸಿ ಮಂಡ್ಯ ಜಿಲ್ಲೆಗೆ ಆಗಮಿಸಿದ್ದರು. ಮೇಸ್ತ್ರಿ ಚಂದ್ರು ಪೋಮಪ್ಪ ಲಮಾಣಿ ಮೂವರಿಗೂ ಶ್ರೀರಂಗಪಟ್ಟಣ ತಾಲೂಕಿನ ಮುಂಡಗದೊರೆ ಗ್ರಾಮದ ಹೊರವಲಯದಲ್ಲಿರುವ ಎಂಸಿ.ಮರಿಯಪ್ಪ ಎಂಬವರ ಕಲ್ಲು ಕ್ವಾರಿಯಲ್ಲಿ ಕೆಲಸ ಕೊಡಿಸಿದ್ದನು. ದಿನಾಂಕ 24-05-2019 ರಂದು ಕಲ್ಲು ಗಣಿಗಾರಿಕೆಯಲ್ಲಿ ನಡೆದ ಅಕ್ರಮ ಸ್ಫೋಟಕ್ಕೆ ರಮೇಶ್ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ರವಿಗೆ ಎರಡು ಕಿವಿಗಳು ಕೇಳದಂತಾಗಿವೆ. ರಾಜು ಸೇರಿದಂತೆ ಮೂವರಿಗೂ ಗಂಭೀರ ಗಾಯವಾಗಿ ಈಗಷ್ಟೇ ಸ್ವಲ್ಪ ಚೇತರಿಕೆ ಕಾಣುತ್ತಿದ್ದು ಇವರನ್ನೇ ನಂಬಿದ್ದ ಮೂವರ ಕುಟುಂಬಗಳು ಬೀದಿಗೆ ಬಿದ್ದಂತಾಗಿದೆ. ಸಹಾಯ ಮಾಡಬೇಕಾದ ಗಣಿಮಾಲೀಕ ಬಿಡಿಗಾಸು ನೀಡದೇ ಬೀದಿಗೆ ತಳ್ಳಿದ್ದಾನೆ.

    ಶ್ರೀರಂಗಪಟ್ಟಣ ಸುತ್ತಮುತ್ತ ನಡೆಯುವ ಗಣಿಗಾರಿಕೆಗಳಿಂದ ಕೆಆರ್‍ಎಸ್ ಅಣೆಕಟ್ಟೆಗೆ ತೊಂದರೆಯಾಗುತ್ತೆ ಎಂಬ ಕಾರಣಕ್ಕೆ ಯಾವುದೇ ಸ್ಫೋಟಕಗಳನ್ನು ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಲಂಚ ನೀಡುವ ಗಣಿ ಮಾಲೀಕರು ಬೋರ್‍ವೆಲ್ ಕುಳಿಗಳನ್ನು ತೋಡಿ, ಅಕ್ರಮವಾಗಿ ಬೃಹತ್ ಪ್ರಮಾಣದ ಸ್ಪೋಟಕ ತುಂಬಿ ಬ್ಲಾಸ್ಟ್ ಮಾಡುತ್ತ ನಿರಂತರವಾಗಿ ಗಣಿಗಾರಿಕೆ ನಡೆಸುತ್ತಲೇ ಬಂದಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಈ ರೀತಿಯ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ತಮಗೆ ಬರುವ ಮಾಮೂಲಿ ಪಡೆದು ಕರ್ತವ್ಯ ಮರೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಇಂದು ಅಕ್ರಮ ಸ್ಫೋಟಕ್ಕೆ ಮೂವರು ಕೂಲಿ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬದವರು ಪ್ರತಿ ದಿನದ ಖರ್ಚಿಗೂ ಹಣವಿಲ್ಲದೇ ಸಂಕಟ ಪಡುತ್ತಿದ್ದಾರೆ. ಪ್ರಭಾವಿಯಾದ ಗಣಿ ಮಾಲೀಕ ಎಂಸಿ.ಮರಿಯಪ್ಪ ಕಾರ್ಮಿಕರ ಯೋಗಕ್ಷೇಮ ನೋಡದೇ, ಧನ ಸಹಾಯವನ್ನೂ ಮಾಡದೇ ತನ್ನ ಪಾಡಿಗೆ ತಾನು ಆರಾಮವಾಗಿದ್ದಾನೆ ಎಂದು ಕಾರ್ಮಿಕರು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

    ಕೆಆರ್‍ಎಸ್ ಅಣೆಕಟ್ಟು ಸುತ್ತಮುತ್ತ ನಡೆಯುವ ಕಲ್ಲು ಗಣಿಗಾರಿಕೆಯ ಅಕ್ರಮ ಸ್ಫೋಟದಿಂದ ಅಣೆಕಟ್ಟೆಗೆ ತೊಂದರೆ ಆಗುವ ಸಾಧ್ಯತೆಗಳಿವೆ. ಅಧಿಕಾರಿಗಳು ಆ ರೀತಿಯ ಯಾವುದೇ ಸ್ಫೋಟ ನಡೆಯುತ್ತಲೇ ಇಲ್ಲ ಎಂಬ ಮಾತುಗಳನ್ನಾಡುತ್ತಿದ್ದರು. ಇದೀಗ ಅದೇ ಅಕ್ರಮ ಸ್ಫೋಟಕ್ಕೆ ಮೂರು ಜನ ಬಡ ಕೂಲಿಕಾರ್ಮಿಕರ ಬದುಕೇ ನಾಶವಾಗಿದೆ. ಇನ್ನಾದ್ರು ಸರ್ಕಾರ ಇತ್ತ ಗಮನಹರಿಸಿ ಭ್ರಷ್ಟ ಅಧಿಕಾರಿಗಲು, ಗಣಿಮಾಲೀಕರಿಗೆ ಶಿಕ್ಷೆ ನೀಡಿ, ಅನ್ಯಾಯಕ್ಕೊಳಗಾಗರುವ ಬಡ ಕೂಲಿ ಕಾರ್ಮಿಕರ ಹಿತ ಕಾಯಬೇಕಾಗಿದೆ.

    ಕೆಲವು ದಿನಗಳ ಹಿಂದೆ ಸಂಸದೆ ಸುಮಲತಾ ಅಂಬರೀಶ್, ಅಕ್ರಮ ಗಣಿಗಾರಿಕೆ ಕಡಿವಾಣ ಹಾಕಬೇಕಿದೆ. ಕೆಆರ್ ಎಸ್ ಆಣೆಕಟ್ಟಿನ ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಸ್ಫೋಟದಿಂದ ಆಣೆಕಟ್ಟಿಗೆ ಹಾನಿಯುಂಟಾಗುತ್ತಿದೆ ಎಂದು ಲೋಕಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.

  • ರಾಜ್ಯದಲ್ಲಿ ನಿಲ್ಲದ ಮಳೆ, ತಗ್ಗದ ಪ್ರವಾಹ – ಆಗುಂಬೆ ಸೂರ್ಯಾಸ್ತ ಗೋಪುರ ರಸ್ತೆ ಕುಸಿತ – KRS, ಹೇಮಾವತಿ ಇಂದು ಸಂಪೂರ್ಣ

    ರಾಜ್ಯದಲ್ಲಿ ನಿಲ್ಲದ ಮಳೆ, ತಗ್ಗದ ಪ್ರವಾಹ – ಆಗುಂಬೆ ಸೂರ್ಯಾಸ್ತ ಗೋಪುರ ರಸ್ತೆ ಕುಸಿತ – KRS, ಹೇಮಾವತಿ ಇಂದು ಸಂಪೂರ್ಣ

    ಬೆಂಗಳೂರು: ರಾಜ್ಯಾದ್ಯಂತ ಮಳೆರಾಯನ ಅಬ್ಬರ ಮತ್ತಷ್ಟು ಜೋರಾಗಿದೆ. ಕರಾವಳಿ, ಮಲೆನಾಡು ಜನರಿಗೆ ಸಾಕು ಅನ್ನಿಸುವಷ್ಟು ಮಳೆಯಾಗುತ್ತಿದ್ದರೆ, ಬಯಲು ಸೀಮೆಯ ಜನರಲ್ಲಿ ಖುಷಿಯೋ ಖುಷಿ. ಯಾಕಂದ್ರೆ ಎಲ್ಲಾ ಡ್ಯಾಮ್‍ಗಳಿಗೂ ಜೀವಕಳೆ ಬಂದಿದೆ.

    124.80 ಅಡಿ ಸಾಮರ್ಥ್ಯದ ಕೆಆರ್ ಎಸ್‍ನಲ್ಲೀಗ 121.40 ಅಡಿ ನೀರು ಬಂದಿದ್ದು, ಭರ್ತಿಗೆ ಮೂರು ಅಡಿ ಬಾಕಿ ಇದೆ. ಹೇಮಾವತಿಗೂ 3 ಅಡಿ ಬಾಕಿಯಿದ್ದು, ಎರಡು ಜಲಾಶಯಗಳು ಇವತ್ತೇ ಬಹುತೇಕ ತುಂಬಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನದಿ ತಟದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

    ಕಬಿನಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ನಂಜನಗೂಡಲ್ಲಿರುವ ಕಪಿಲಾ ನದಿ ಅಕ್ಕ-ಪಕ್ಕದ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಮನೆಗಳು ಜಲಾವೃತಗೊಂಡಿದ್ದು, ಸ್ಥಳೀಯರು ಮನೆ ತೊರೆದು ಸಾಮಾನು ಸರಂಜಾಮುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಅತ್ತ, ಮಹಾರಾಷ್ಟ್ರದಲ್ಲಿ ವಿಪರೀತ ಮಳೆ ಆಗುತ್ತಿರೋ ಕಾರಣ ಕೃಷ್ಣಾನದಿಗೆ ಮತ್ತಷ್ಟು ನೀರು ಹರಿದು ಬಂದಿದೆ. ಚಿಕ್ಕೋಡಿ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಮಾಲತಿ ನದಿ ತುಂಬಿ ಹರಿಯುತ್ತಿದೆ. ಗುಡ್ಡೇಕೇರಿ- ಬಿದರಗೋಡು ರಸ್ತೆ ಮೇಲೆ ಮೂರು ಅಡಿ ನೀರು ನಿಂತಿದ್ದು, ಶೃಂಗೇರಿ-ತೀರ್ಥಹಳ್ಳಿ ಸಂಪರ್ಕ ಬಂದ್ ಆಗಿದೆ. ಗ್ರಾಮೀಣ ಪ್ರದೇಶದ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಆಗುಂಬೆ ಘಾಟ್‍ನಲ್ಲಿ ಮತ್ತೆ ಭೂ ಕುಸಿತವಾಗಿದೆ. ಆಗುಂಬೆ ಸನ್ ಸೆಟ್ ಪಾಯಿಂಟ್ ಬಳಿ ರಸ್ತೆ ಪಕ್ಕದಲ್ಲಿ ಭೂ ಕುಸಿದಿದ್ದು, ಸೂರ್ಯಾಸ್ತ ವೀಕ್ಷಣೆಗೆ ಸಾರ್ವಜನಿಕರಿಗೆ ನಿಷೇಧ ಹೇರಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿಕ್ಕ ಆಣೆಕಟ್ಟುಗಳೆಲ್ಲಾ ಭರ್ತಿ ಆಗಿದ್ದು, ರಸ್ತೆ, ಸೇತುವೆ, ಮನೆ ಗೋಡೆ, ಗುಡ್ಡಗಳೆಲ್ಲಾ ಕುಸಿಯುತ್ತಿವೆ.

    ರಾಮನಗರದ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಚನ್ನಪಟ್ಟಣ, ಕನಕಪುರದಲ್ಲಿ ಸೇರಿ ಹಲವೆಡೆ ಮಳೆಯಾಗಿದ್ದು ರಸ್ತೆಯ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಅನುಭವಿಸಿದರು.

    ಮಲೆನಾಡಿನಲ್ಲಿ ಸಾಕು ಅನ್ನುವಷ್ಟು ಮಳೆಯಾಗ್ತಿದ್ರೆ, ಬಿಸಿಲನಾಡು ರಾಯಚೂರು, ಧಾರವಾಡ, ಹಾವೇರಿಯಲ್ಲಿ ಮಾತ್ರ ವರುಣದೇವ ತನ್ನ ಕೃಪೆ ತೋರಿಲ್ಲ. ಉದ್ದು, ಹೆಸರು, ಎಳ್ಳು ಬಿತ್ತನೆ ಮಾಡಿದ್ದ ರೈತರು ಮೊಳಕೆ ಬಾರದೆ ನಷ್ಟ ಅನುಭವಿಸಿದ್ದಾರೆ. ಮೋಡಕವಿದ ವಾತಾವರಣವಿದ್ದರೂ ದೊಡ್ಡ ಮಳೆ ಬಾರದೆ ಕಂಗಾಲಾಗಿ ವಿಶೇಷ ಪೂಜೆಗಳನ್ನ ಮಾಡುತ್ತಿದ್ದಾರೆ. ಇತ್ತ ನವಲಗುಂದ ಪಟ್ಟಣದ ಬಿರಲಿಂಗೇಶ್ವರ ಯುವಕ ಮಂಡಳಿಯವರು ಮಳೆಗಾಗಿ ಕತ್ತೆಗಳ ಮದುವೆ ಮಾಡಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಭಾರೀ ಮಳೆಯಾಗಿದೆ. ಮಳೆ ರುದ್ರನರ್ತನಕ್ಕೆ ನಗರದ ರಸ್ತೆಗಳು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನರು ಪರದಾಡುತ್ತಿದ್ದಾರೆ. ಮಿಂಟೋ ಸೇತುವೆಯ ಅಡಿ ಮಳೆ ನೀರು ತುಂಬಿ ಹೋಗಿದೆ. ರಸ್ತೆಗಳು ಕೆರೆಯಂತಾಗಿದ್ದು, ಹಲವಾರು ಬಸ್‍ಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ಯಗೊಂಡಿದೆ.

  • ಕೆಆರ್‍ಎಸ್ ಡ್ಯಾಂಗೆ ಒಳಹರಿವು ಹೆಚ್ಚಳ: ನಿನ್ನೆ ಎಷ್ಟು ಇತ್ತು ,ಈಗ ಎಷ್ಟಾಗಿದೆ?

    ಕೆಆರ್‍ಎಸ್ ಡ್ಯಾಂಗೆ ಒಳಹರಿವು ಹೆಚ್ಚಳ: ನಿನ್ನೆ ಎಷ್ಟು ಇತ್ತು ,ಈಗ ಎಷ್ಟಾಗಿದೆ?

    ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗುತ್ತಿದ್ದು, ಮಂಡ್ಯ ಜಿಲ್ಲೆಯ ವಿಶ್ವವಿಖ್ಯಾತ ಕೆಆರ್‍ಎಸ್ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ,

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಡ್ಯಾಂಗೆ ಒಳಹರಿವು ಹೆಚ್ಚಳವಾಗಿದೆ. ಬುಧವಾರ 601 ಕ್ಯೂಸೆಕ್ ಇದ್ದ ಒಳಹರಿವು, ಗುರುವಾರ 1135 ಕ್ಯೂಸೆಕ್‍ಗೆ ಹೆಚ್ಚಳವಾಗಿದೆ. ಅಣೆಕಟ್ಟೆಯ ನೀರು ಸಂಗ್ರಹ ಗರಿಷ್ಠ ಮಟ್ಟ 124.80 ಅಡಿ ಇದೆ. ಪ್ರಸ್ತುತ ಡ್ಯಾಂನಲ್ಲಿರುವ ನೀರು ಸಂಗ್ರಹ ಪ್ರಮಾಣ 67.60 ಅಡಿಗೆ ಏರಿಕೆಯಾಗಿದೆ.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.