Tag: ಆಡಮ್ ಜಂಪಾ

  • ಕೇನ್ ರಿಚರ್ಡ್‍ಸನ್ ಔಟ್ – ಆರ್​ಸಿಬಿಗೆ ಬಂದ್ರು ಹೊಸ ಲೆಗ್ ಸ್ಪಿನ್ನರ್

    ಕೇನ್ ರಿಚರ್ಡ್‍ಸನ್ ಔಟ್ – ಆರ್​ಸಿಬಿಗೆ ಬಂದ್ರು ಹೊಸ ಲೆಗ್ ಸ್ಪಿನ್ನರ್

    ಅಬುಧಾಬಿ: ಆರ್​ಸಿಬಿ ತಂಡದಲ್ಲಿ ಆಡುತ್ತಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ಕೇನ್ ರಿಚರ್ಡ್‍ಸನ್ ಅವರು ಟೂರ್ನಿಯಿಂದ ಹೊರಬಂದಿದ್ದಾರೆ. ಈ ಜಾಗಕ್ಕೆ ಆಸಿಸ್‍ನ ಮತ್ತೋರ್ವ ಲೆಗ್ ಸ್ಪಿನ್ನರ್ ಎಂಟ್ರಿ ಕೊಟ್ಟಿದ್ದಾರೆ.

    ಐಪಿಎಲ್ ಆರಂಭಗೊಳ್ಳಲು ಇನ್ನೇನು ಕೆಲವೇ ದಿನ ಬಾಕಿಯಿದೆ. ಅಂತೆಯೇ ಎಲ್ಲ ತಂಡಗಳು ಈಗಾಗಲೇ ಯುಎಇ ತಲುಪ್ಪಿದ್ದು, ಚೆನ್ನೈ ತಂಡವನ್ನು ಹೊರತುಪಡಿಸಿ ಉಳಿದ ತಂಡಗಳು ಅಭ್ಯಾಸವನ್ನು ಆರಂಭ ಮಾಡಿವೆ. ಇದರ ನಡುವೆ ಆರ್​ಸಿಬಿ ತಂಡಕ್ಕೆ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆಡಮ್ ಜಂಪಾ ಅವರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.

    ಕಳೆದ ಸೀಸನ್ ಅಲ್ಲಿ ಆರ್​ಸಿಬಿ ಪರವಾಗಿ ಆಡಿದ್ದ ಕೇನ್‍ಗೆ ಈ ಬಾರಿಯ ಬಿಡ್ಡಿಂಗ್‍ನಲ್ಲಿ ಬರೋಬ್ಬರಿ 4 ಕೋಟಿಗೆ ಆರ್​ಸಿಬಿ ತಂಡ ಕೊಂಡುಕೊಂಡಿತ್ತು. ಆದರೆ ಅಪ್ಪ ಆಗುತ್ತಿರುವ ಖುಷಿಯಲ್ಲಿರುವ ಕೇನ್ ರಿಚರ್ಡ್‍ಸನ್ ಈ ಬಾರಿಯ ಐಪಿಎಲ್ ಆಡುವುದಿಲ್ಲ ಎಂದು ಹೇಳಿದ್ದಾರೆ. ಈ ಕಾರಣದಿಂದ ಇವರ ಜಾಗಕ್ಕೆ ಆಸ್ಟ್ರೇಲಿಯಾದ ಮತ್ತೋರ್ವ ಯುವ ಲೆಗ್ ಸ್ಪಿನ್ನರ್ ಆಡಮ್ ಜಂಪಾ ಅವರು ಬಂದಿದ್ದಾರೆ.

    ಆಡಮ್ ಜಂಪಾ ಅವರು ಈ ಬಾರಿ ಐಪಿಎಲ್ ಹಾರಾಜು ಪ್ರಕ್ರಿಯೆಯಲ್ಲಿ ಅನ್‍ಸೋಲ್ಡ್ ಆಗಿದ್ದರು. ಅವರು ಕಳೆದ 2017ರ ಐಪಿಎಲ್‍ನಲ್ಲಿ ರೈಸಿಂಗ್ ಪುಣೆ ಸೂಪರ್‍ಜಿಯಂಟ್ ತಂಡದಲ್ಲಿ ಆಡಿದ್ದರು. ಆ ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿ 19 ವಿಕೆಟ್ ಪಡೆದಿದ್ದರು. ಈಗ ಆರ್​ಸಿಬಿಯ ಸ್ಪಿನ್ನರ್ ಗಳಾದ ಯುಜ್ವೇಂದ್ರ ಚಾಹಲ್, ಮೊಯೀನ್ ಅಲಿ, ವಾಷಿಂಗ್ಟನ್ ಸುಂದರ್, ಮತ್ತು ಪವನ್ ನೇಗಿ ಅವರನ್ನು ಸೇರಿಕೊಳ್ಳಲಿದ್ದಾರೆ.

    ಈ ವಿಚಾರವನ್ನು ಟ್ವೀಟ್ ಮಾಡುವ ಮೂಲಕ ಬಹಿರಂಗ ಪಡಿಸಿರುವ ಆರ್​ಸಿಬಿ ತಂಡ, ಆಡಮ್ ಜಂಪಾ ಅವರನ್ನು ಆರ್‍ಸಿಬಿ ಜೆರ್ಸಿಯಲ್ಲಿ ನೋಡಲು ತುಂಬಾ ಉತ್ಸುಕತೆಯಿಂದ ಕಾಯುತ್ತಿದ್ದೇವೆ. ಅವರು ಕೇನ್ ರಿಚರ್ಡ್‍ಸನ್ ಅವರ ಬದಲಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಜೊತೆಗೆ ತಮ್ಮ ಮೊದಲ ಮಗುವಿನ ಜನನವನ್ನು ನಿರೀಕ್ಷಿಸುತ್ತಿರುವ ಕೇನ್ ಮತ್ತು ಅವರ ಪತ್ನಿಗಾಗಿ ಆರ್‍ಸಿಬಿ ಕುಟುಂಬವು ಉತ್ಸುಕವಾಗಿದೆ ಮತ್ತು ಟೂರ್ನಿಯಿಂದ ಹೊರಗುಳಿಯುವ ಅವರ ನಿರ್ಧಾರವನ್ನು ಗೌರವಿಸುತ್ತದೆ ಎಂದು ಟ್ವೀಟ್ ಮಾಡಿದೆ.

    ಐಪಿಎಲ್-2020ರ ಆರ್​ಸಿಬಿ ತಂಡ: ವಿರಾಟ್ ಕೊಹ್ಲಿ (ನಾಯಕ), ಆರನ್ ಫಿಂಚ್, ಎಬಿ ಡಿವಿಲಿಯರ್ಸ್, ಜೋಶ್ ಫಿಲಿಪ್, ಪಾರ್ಥಿವ್ ಪಟೇಲ್, ಡೇಲ್ ಸ್ಟೇನ್, ಆಡಮ್ ಜಂಪಾ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಉಮೇಶ್ ಯಾದವ್, ಯುಜ್ವೇಂದ್ರ ಚಾಹಲ್, ದೇವದತ್ ಪಡಿಕ್ಕಲ್, ಕ್ರಿಸ್ ಮೋರಿಸ್, ಗುರ್ಕೀರತ್ ಸಿಂಗ್ ಮನ್, ಇಸುರು ಉದಾನಾ, ಮೊಯೀನ್ ಅಲಿ, ಪವನ್ ದೇಶಪಾಂಡೆ, ಪವನ್ ನೇಗಿ, ಶಹಬಾಜ್ ಅಹ್ಮದ್, ಶಿವಮ್ ದುಬೆ, ವಾಷಿಂಗ್ಟನ್ ಸುಂದರ್.