Tag: ಆಟ

  • ಸಂಜೆ ಆಟವಾಡ್ತಿದ್ದ ನಾಲ್ವರು ಬಾಲಕರು ನಾಪತ್ತೆ- ಪೋಷಕರಲ್ಲಿ ಆತಂಕ

    ಸಂಜೆ ಆಟವಾಡ್ತಿದ್ದ ನಾಲ್ವರು ಬಾಲಕರು ನಾಪತ್ತೆ- ಪೋಷಕರಲ್ಲಿ ಆತಂಕ

    ಬೆಂಗಳೂರು: ಸಂಜೆ ಆಟ ಆಡ್ತಿದ್ದ ನಾಲ್ವರು ಶಾಲಾ ಮಕ್ಕಳು ಇದ್ದಕ್ಕಿದ್ದಂತೆ ಕಾಣೆಯಾದ ಘಟನೆ ಬೆಂಗಳೂರು ಹೊರವಲಯದ ಆನೇಕಲ್‍ನ ಮಂಚನಹಳ್ಳಿಯಲ್ಲಿ ನಡೆದಿದೆ.

    12 ವರ್ಷದ ಚಂದನ್, ವಿಕಾಸ್, ನಂದನ್ ಮತ್ತು 14 ವರ್ಷದ ಕಾರ್ತಿಕ್ ನಾಪತ್ತೆಯಾದ ಬಾಲಕರು. ಆನೇಕಲ್, ಅತ್ತಿಬೆಲೆ, ಬೆಂಗಳೂರು ಸೇರಿ ಎಲ್ಲೆಡೆ ಮಕ್ಕಳಿಗಾಗಿ ಹುಡುಕಾಟ ನಡೆಸಲಾಗ್ತಿದೆ.

    ಸಂಜೆ 5 ಗಂಟೆವರೆಗೂ ಗ್ರಾಮದಲ್ಲೇ ಬಾಲಕರು ಆಟವಾಡುತ್ತಿದ್ದರು. ಇತ್ತೀಚೆಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಆತಂಕಗೊಂಡ ಪಾಲಕರು ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ.

    ಸದ್ಯ ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಾಲಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಆಟವಾಡಲೆಂದು ಕರೆದುಕೊಂಡು ಹೋಗಿ 8 ತಿಂಗ್ಳ ಕಂದಮ್ಮನ ಮೇಲೆ ರೇಪ್!

    ಆಟವಾಡಲೆಂದು ಕರೆದುಕೊಂಡು ಹೋಗಿ 8 ತಿಂಗ್ಳ ಕಂದಮ್ಮನ ಮೇಲೆ ರೇಪ್!

    ಜೈಪುರ: ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದಕ್ಕೆ ಕೇಂದ್ರ ಅಸ್ತು ಅಂದರೂ ದೇಶದಲ್ಲಿ ರೇಪ್ ಪ್ರಕರಣಗಳ ಸಂಖ್ಯೆ ಕಡಿಮೆಯಗುವಂತೆ ಕಾಣುತ್ತಿಲ್ಲ. ಇಂತದ್ದೇ ಘಟನೆಯೊಂದು ಇದೀಗ ರಾಜಸ್ಥಾನದಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

    ಎಂಟು ತಿಂಗಳ ಮುಗ್ಧ ಕಂದಮ್ಮನ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ ಹೀನಾಯ ಘಟನೆ ರಾಜಸ್ಥಾನದ ಅಲ್ವಾರ್ ಜೆಲ್ಲೆಯ ಹರ್ಸಾನ ಗ್ರಾಮದಲ್ಲಿ ನಡೆದಿದೆ. ಮೊದಲೇ ಪ್ಲಾನ್ ಮಾಡಿದ್ದ ಕಾಮುಕ ಆಕೆಯನ್ನು ಆಟವಾಡಲು ಬಾ ಅಂತ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ಅಪ್ರಾಪ್ತ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ – ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಅಸ್ತು

    ನೆರೆ ಮನೆಯ ವ್ಯಕ್ತಿಯೇ ಈ ಕೃತ್ಯ ಎಸಗಿದ್ದು, ಬುಧವಾರ ಬಾಲಕಿಯಿದ್ದ ಮನೆಗೆ ಬಂದ ಕಾಮುಕ ಆಟವಾಡೋಣ ಬಾ ಅಂತ ಅಲ್ಲಿಂದ ಹೊರಗಡೆ ಕರೆದುಕೊಂಡು ಹೋಗಿದ್ದಾನೆ. ರಾತ್ರಿ ಬಾಲಕಿ ಅಸ್ವಸ್ಥಗೊಂಡಿರುವುದನ್ನು ಪೋಷಕರು ಗಮನಿಸಿದ್ದಾರೆ. ಸದ್ಯ ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಅಂತ ಪೊಲೀಸರು ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

  • ಆಟವಾಡುತ್ತಿದ್ದ ಮಕ್ಕಳ ಮೇಲೆ ಅಪಾಯಕಾರಿ ದ್ರಾವಣ ಎರಚಿದ ಬಾಲಕ!

    ಆಟವಾಡುತ್ತಿದ್ದ ಮಕ್ಕಳ ಮೇಲೆ ಅಪಾಯಕಾರಿ ದ್ರಾವಣ ಎರಚಿದ ಬಾಲಕ!

    ತುಮಕೂರು: ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಅಪರಿಚಿತ ಬಾಲಕನೋರ್ವ ಅಪಾಯಕಾರಿ ದ್ರಾವಣ ಎರಚಿ ಪರಾರಿಯಾದ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ನಡೆದಿದೆ.

    ಘಟನೆಯಲ್ಲಿ ಸಹೋದರರಾದ 11 ವರ್ಷದ ದರ್ಶನ್ ಹಾಗೂ 4 ವರ್ಷದ ವಿನಯ್ ಗಾಯಗೊಂಡಿದ್ದಾರೆ. ತಿಪಟೂರು ನಗರದ ಕೆ.ಆರ್.ಬಡಾವಣೆಯ ಬಯಲು ರಂಗಮಂದಿರದಲ್ಲಿ ಇಬ್ಬರು ಸಹೋದರರು ಆಡುತ್ತಿದ್ದಾಗ ಸುಮಾರು 14 ವರ್ಷದ ಬಾಲಕನೋರ್ವ ಬಂದು ಇಲ್ಲಿ ಆಟವಾಡಬೇಡಿ ಎಂದು ಗದರಿಸಿ ಜಗಳ ಮಾಡಿದ್ದಾನೆ ಎನ್ನಲಾಗಿದೆ.

    ಬಳಿಕ ಕೈಯಲ್ಲಿದ್ದ ದ್ರಾವಣ ಇಬ್ಬರ ಮುಖಕ್ಕೆ ಎರಚಿ ಪರಾರಿಯಾಗಿದ್ದಾನೆ. ಕಳೆದ 15 ದಿನದ ಹಿಂದೆ ಇದೇ ಅಪರಿಚಿತ ಬಾಲಕ ಈ ಸಹೋದರರ ನಡುವೆ ಜಗಳ ಮಾಡಿದ್ದ ಎನ್ನಲಾಗಿದೆ. ಅದರ ಸೇಡು ತೀರಿಸಿಕೊಳ್ಳಲು ಇಂದು ಬಾಟಲಿಯಲ್ಲಿ ಅಪಾಯಕಾರಿ ದ್ರಾವಣ ತಂದು ಎರಚಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

    ಘಟನೆಯ ಪರಿಣಾಮ ಮಕ್ಕಳ ಮುಖಕ್ಕೆ ಸುಟ್ಟ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಆ ದ್ರಾವಣವನ್ನು ಟಾಯ್ಲೆಟ್ ಕ್ಲೀನರ್ ಎಂದು ಶಂಕಿಸಲಾಗಿದ್ದು, ಪರಿಶೀಲನೆ ನಡೆದಿದೆ.

    ತಿಪಟೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಬ್ಯಾಟಿನಿಂದ ಹೊಡೆದ ಕಲ್ಲು ಓದುತ್ತ ಕುಳಿತಿದ್ದ ವಿದ್ಯಾರ್ಥಿಗೆ ತಾಗಿ ದೃಷ್ಟಿ ಹೋಯ್ತು!

    ಬ್ಯಾಟಿನಿಂದ ಹೊಡೆದ ಕಲ್ಲು ಓದುತ್ತ ಕುಳಿತಿದ್ದ ವಿದ್ಯಾರ್ಥಿಗೆ ತಾಗಿ ದೃಷ್ಟಿ ಹೋಯ್ತು!

    ಮಂಡ್ಯ: ಸಹಪಾಠಿಗಳು ಆಟವಾಡುತ್ತ ಬ್ಯಾಟಿನಿಂದ ಹೊಡೆದ ಕಲ್ಲು ಕಣ್ಣಿಗೆ ತಾಗಿ ವಿದ್ಯಾರ್ಥಿ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ಮದ್ದೂರು ತಾಲೂಕಿನ ಭಾರತೀನಗರದಲ್ಲಿರುವ ಡಾಕ್ಟರ್ ಬಿಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪವನ್‍ಕುಮಾರ್ ಕಣ್ಣು ಕಳೆದುಕೊಂಡ ವಿದ್ಯಾರ್ಥಿ. ವಸತಿ ನಿಲಯದ ಆವರಣದಲ್ಲಿ ಪವನ್ ಕುಮಾರ್ ಓದಿಕೊಳ್ಳುತ್ತಿದ್ದ. ಈ ವೇಳೆ ಪವನ್ ಕುಮಾರ್ ಸಹಪಾಠಿಗಳು ಆಟವಾಡಿ ಬ್ಯಾಟ್‍ನಿಂದ ಕಲ್ಲನ್ನು ಜೋರಾಗಿ ಹೊಡೆದಿದ್ದಾರೆ. ಇದರಿಂದ ವೇಗವಾಗಿ ಬಂದ ಕಲ್ಲು ಪವನ್ ಕುಮಾರ್ ಎಡಗಣ್ಣಿಗೆ ಬಡಿದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ.

    ಮಕ್ಕಳು ಕಲ್ಲನ್ನು ಬಾಲ್‍ನಂತೆ ಬಳಸಿ ಕ್ರಿಕೆಟ್ ಆಡುತ್ತಿದ್ದರು. ವಸತಿ ಶಾಲೆಯ ಶಿಕ್ಷಕರ ಬೇಜವಾಬ್ದಾರಿಯಿಂದಾಗಿ ನಮ್ಮ ಮಗ ಕಣ್ಣು ಕಳೆದುಕೊಂಡಿದ್ದಾನೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

    ಈ ಬಗ್ಗೆ ತನಿಖೆ ನಡೆಸಿ ನಿರ್ಲಕ್ಷ್ಯ ವಹಿಸಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಮಗನ ಭವಿಷ್ಯಕ್ಕೆ ಅನುಕೂಲವಾಗುವಂತೆ ಪರಿಹಾರ ನೀಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಭಾರತೀನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಣೆಯಾಗಿದ್ದ 2 ವರ್ಷದ ಕಂದಮ್ಮ ನೀರಿನ ಟ್ಯಾಂಕ್‍ ನಲ್ಲಿ ಶವವಾಗಿ ಪತ್ತೆ

    ಕಾಣೆಯಾಗಿದ್ದ 2 ವರ್ಷದ ಕಂದಮ್ಮ ನೀರಿನ ಟ್ಯಾಂಕ್‍ ನಲ್ಲಿ ಶವವಾಗಿ ಪತ್ತೆ

    ನವದೆಹಲಿ: ಮನೆಯ ಹೊರಗಡೆ ಆಟವಾಡುತ್ತಿದ್ದ 2 ವರ್ಷದ ಕಂದಮ್ಮ ಏಕಾಏಕಿ ಕಾಣೆಯಾಗಿ, ಬಳಿಕ ನೀರಿನ ಟ್ಯಾಂಕಿನಲ್ಲಿ ಶವವಾಗಿ ಪತ್ತೆಯಾಗಿರೋ ಘಟನೆ ಚರೋಲಿಯ ದಿಘಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ಸುಭಾಷ್ ಗೌರವ್ ತಿವಾರಿ ಎಂದು ಗುರುತಿಸಲಾಗಿದೆ. ಮೃತ ಮಗುವಿನ ತಂದೆ ಗೌರವ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ಹಿಂದೆಯಷ್ಟೇ ಉತ್ತರಪ್ರದೇಶದಿಂದ ಪುಣೆಗೆ ಬಂದಿದ್ದರು. ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಹಾಗೂ ಆತನ ಭವಿಷ್ಯದ ದೃಷ್ಟಿಯಿಂದ ನಾವು ಇಲ್ಲಿಗೆ ಬಂದಿದ್ದೆವು ಅಂತ ಗೌರವ್ ದುಃಖ ತೋಡಿಕೊಂಡರು.

    ಕಳೆದ ಭಾನುವಾರ ಮಧ್ಯಾಹ್ನ ತಾಯಿ ಮಗುವಿಗೆ ಊಟ ಮಾಡಿಸುತ್ತಿದ್ದರು. ಈ ಮಧ್ಯೆ ಗ್ಯಾಸ್ ಆಫ್ ಮಾಡಲೆಂದು ಮನೆಯೊಳಗೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಮಗ ಅಲ್ಲಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಮಗನಿಗಾಗಿ ಎಲ್ಲಾ ಕಡೆ ಹುಡುಕಾಡಿದರು. ಮಗ ಎಲ್ಲೂ ಕಾಣಿಸದಿದ್ದಾಗ ಕಿಡ್ನಾಪ್ ಆಗಿರಬಹುದೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪೋಷಕರ ದೂರಿನಂತೆ ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದಾಗ ಮನೆಯ ಪಕ್ಕದಲ್ಲಿದ್ದ ನೀರಿನ ಟ್ಯಾಂಕ್ ಮುಚ್ಚಳ ತೆಗೆದು ನೋಡಿದ್ದಾರೆ. ಈ ವೇಳೆ ಕಂದಮ್ಮನ ಶವ ನೀರಿನಲ್ಲಿ ತೇಲುತ್ತಿರುವುದು ಬೆಳಕಿಗೆ ಬಂದಿದೆ. ಮಗುವಿನ ತಲೆಯ ಮೇಲೆ ಗಾಯಗಳಿದ್ದಿದ್ದರಿಂದ ಆತ ಟ್ಯಾಂಕಿನೊಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯ ಈ ಕುರಿತು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ನಾಗರ ಪಂಚಮಿ ವಿಶೇಷ: ಸಗಣಿ ಎರಚಿ ಆಟ ಆಡ್ತಾರೆ ಗದಗ ಜನ!

    ನಾಗರ ಪಂಚಮಿ ವಿಶೇಷ: ಸಗಣಿ ಎರಚಿ ಆಟ ಆಡ್ತಾರೆ ಗದಗ ಜನ!

    ಗದಗ: ಈಗಿನ ಕಾಲದಲ್ಲಿ ಜಾನುವಾರುಗಳ ಸಗಣಿ ಅಂದ್ರೆ ಜನ ದೂರ ಸರಿಯುವವರೇ ಹೆಚ್ಚು ಜನ. ಆದರೆ ಮುದ್ರಣ ನಗರಿ ಎಂದು ಹೆಸರುವಾಸಿಯಾದ ಗದಗದಲ್ಲಿ ಮಾತ್ರ ಒಬ್ಬರಿಗೊಬ್ಬರು ಪರಸ್ಪರ ಸಗಣಿಯನ್ನ ಮೈಮೇಲೆ ಎರಚುವ ಆಟ ಆಡುತ್ತಾರೆ.

    ಹೌದು, ನಗರದ ಕುಂಬಾರ ಓಣಿಯಲ್ಲಿ ಸಗಣಿ ಎರಚಾಡುವುದು ತುಂಬಾನೆ ವಿಶಿಷ್ಠವಾಗಿದೆ. ನಾಗರ ಪಂಚಮಿ ಹಬ್ಬವನ್ನು ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಆ ಈ ಓಣಿಯಲ್ಲಿ ನಾಗರ ಪಂಚಮಿ ಕರೆಕಟಾಂಬ್ಲೆ ದಿನ ಪರಸ್ಪರ ಸಗಣಿ ಎರಚಿಕೊಂಡು ಸಂಭ್ರಮಿಸಿ ಹಬ್ಬ ಆಚರಿಸುತ್ತಾರೆ.

    ಇದು ನೂರಾರು ವರ್ಷದಿಂದ ನಡೆದು ಬಂದ ಪದ್ಧತಿಯಾಗಿದ್ದು, ಈ ನಾಡಿಗೆ ಸಂಪೂರ್ಣ ಮಳೆಯಾಗಲಿ, ಚೆನ್ನಾಗಿ ಬೆಳೆ ಬರಲಿ ಎಂಬ ಉದ್ದೇಶದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಜೊತೆಗೆ ಈ ಸಗಣಿ ಆಟ ಆಡುವುದರಿಂದ ಯಾವುದೇ ರೀತಿಯ ಚರ್ಮರೋಗ ಬರುವದಿಲ್ಲ ಎಂದು ಇಲ್ಲಿಯ ಜನ ಹೇಳುತ್ತಿದ್ದಾರೆ.

    ಸುಮಾರು ಒಂದು ವಾರಗಳಿಂದ ಗೌಳಿಯವರ ಮನೆಯಲ್ಲಿ ಸಗಣಿ ಸಂಗ್ರಹಿಸಿ ಇಡುತ್ತಾರೆ. ಅದನ್ನು ತಂದು ರಸ್ತೆಗೆ ಹಾಕಿ ಅದಕ್ಕೆ ಸುಣ್ಣ, ಬಣ್ಣ, ಕುಂಕುಮ ಹಾಕಿ ಪೂಜೆ ಮಾಡುತ್ತಾರೆ. ಇಲ್ಲಿಯ ಪುರುಷರು ಮಹಿಳೆಯರ ವೇಷಧಾರಿಯಾಗಿರುತ್ತಾರೆ. ಹೀಗೆ ನಾನಾ ರೀತಿಯ ಹಾರಗಳನ್ನ ಕೊರಳಲ್ಲಿ ಹಾಕಿಕೊಂಡು ಮೈಮೇಲೆ ಸಗಣಿ ಎರಚಿ ಸಂಭ್ರಮಿಸುತ್ತಾರೆ.

    ಈ ಹಬ್ಬಕ್ಕೆ ಧಾರ್ಮಿಕ ಆಚರಣೆಯೊಂದಿಗೆ ವೈಜ್ಞಾನಿಕ ಹಿನ್ನೆಲೆಯೂ ಸಹ ಇದೆ. ಈ ಹಬ್ಬ ಆಚರಿಸುವುದರಿಂದ ಉತ್ತಮ ಮಳೆ ಬೆಳೆಯಾಗುತ್ತೆ ಎಂಬ ನಂಬಿಕೆ ಇದೆ. ಈ ಮೋಜಿನ ಸಗಣಿ ಹಬ್ಬದ ಆಟ ನೋಡಲೆಂದೇ ದೂರದ ಊರಿನಿಂದ ಜನ ಬರುತ್ತಾರೆ.

    ಸಗಣಿ ಎರಚಾಟದಲ್ಲಿ ಯುವಕರು ಮಗ್ನರಾಗಿ ಸಂತೋಷ ಅನುಭವಿಸುತ್ತಿದ್ದರೆ, ಸ್ಥಳದಲ್ಲಿ ಸಾವಿರಾರು ಜನ ನೋಡುತ್ತಾ ಖುಷಿಪಡುತ್ತಾರೆ. ಈ ನಾಗರ ಪಂಚಮಿ ಕರಿಕಟಾಂಬ್ಲಿ ದಿನದ ಹಬ್ಬದಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಈ ಸಗಣಿ ಹಬ್ಬ ಸಂಭ್ರಮಿಸುತ್ತಾರೆ. ಸುಮಾರು ಮೂರು-ನಾಲ್ಕು ಗಂಟೆಗಳ ಕಾಲ ನಡೆಯುವ ಈ ಆಟ ಎಲ್ಲರಿಗೂ ಸಂತೋಷ ನೀಡುತ್ತದೆ.