Tag: ಆಟ

  • ನೆಲಕ್ಕೆ ಬಿದ್ದ ವಿದ್ಯುತ್ ಕಂಬ, ವೈರ್ ಜೊತೆಗೆ ಬಾಲಕಿ ಆಟ

    ನೆಲಕ್ಕೆ ಬಿದ್ದ ವಿದ್ಯುತ್ ಕಂಬ, ವೈರ್ ಜೊತೆಗೆ ಬಾಲಕಿ ಆಟ

    – ಹೈ ವೋಲ್ಟೇಜ್ ವಿದ್ಯುತ್ ತಂತಿಯೇ ಇವಳ ಜೋಕಾಲಿ

    ಯಾದಗಿರಿ: ಕೊರೊನಾದಿಂದ ಶಾಲೆಗೆ ರಜೆ ಇರುವ ಹಿನ್ನೆಲೆ ಪೋಷಕರು ತಮ್ಮ ಮಕ್ಕಳನ್ನು ಬೇಕಾ ಬಿಟ್ಟಿಯಾಗಿ ಆಟವಾಡಲು ಬಿಟ್ಟಿದ್ದಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಇಲ್ಲೊಬ್ಬ ಬಾಲಕಿ ಮಳೆ ಗಾಳಿಗೆ ನೆಲಕ್ಕುರುಳಿದ ವಿದ್ಯುತ್ ಕಂಬ ಹಾಗೂ ತಂತಿಯ ಜೊತೆ ಆಟವಾಡಿದ್ದು, ಹೈ ವೋಲ್ಟೇಜ್ ವಿದ್ಯುತ್ ತಂತಿಯನ್ನೇ ಬಾಲಕಿ ಜೋಕಾಲಿ ಮಾಡಿಕೊಂಡಿದ್ದಾಳೆ.

    ಜಿಲ್ಲೆಯ ಶಹಾಪೂರ ತಾಲೂಕಿನ ಗೋಗಿ ಗ್ರಾಮದ ಹೊರ ವಲಯದಲ್ಲಿ ಘಟನೆ ನಡೆದಿದೆ. ಬಾಲಕಿ ಕೆಲ ಹೊತ್ತು ಅಲ್ಲಿಯೇ ಆಟವಾಡಿದ್ದಾಳೆ. ಅದೃಷ್ಟವಶಾತ್ ವಿದ್ಯುತ್ ತಂತಿಯಲ್ಲಿ ಕರೆಂಟ್ ಇರದ ಕಾರಣ ಬಾಲಕಿ ಅನಾಹುತದಿಂದ ಪಾರಾಗಿದ್ದಾಳೆ. ಒಂದು ಸಣ್ಣ ನಿಷ್ಕಾಳಜಿ ಮಕ್ಕಳ ಪ್ರಾಣಕ್ಕೆ ಕುತ್ತು ತರಬಹುದು. ಹೀಗಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನಹರಿಸಬೇಕು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಈ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಮಳೆ, ಗಾಳಿಗೆ ವಿದ್ಯತ್ ಕಂಬಗಳು ಧರೆಗುರುಳಿದ್ದವು. ಬಿದ್ದು ಎರಡು ದಿನವಾಗಿದ್ದರೂ ಜೆಸ್ಕಾಂ ಸಿಬ್ಬಂದಿ ಮಾತ್ರ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಸ್ಥಳೀಯರು ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಡೋಂಟ್‍ಕೇರ್ ನೀತಿ ಅನುಸರಿಸುತ್ತಿದ್ದಾರೆ. ಮಕ್ಕಳು ಪಾಲಕರ ಕಣ್ಣು ತಪ್ಪಿಸಿ ಗ್ರಾಮದ ಹೊರ ವಲಯಕ್ಕೆ ಬಂದು ಕಂಬದಲ್ಲಿ ಆಟವಾಡುತ್ತಿದ್ದಾರೆ.

    ಮಕ್ಕಳು ಆಟವಾಡುತ್ತಿರುವುದನ್ನು ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದು, ವಿಷಯ ತಿಳಿಸಿದ ಗ್ರಾಮಸ್ಥರಿಗೆ ಕಂಬದಲ್ಲಿ ವಿದ್ಯುತ್ ಹರಿಯುವದಿಲ್ಲ ಎಂಬ ಬೇಜವಾಬ್ದಾರಿ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

  • ಆಟದಲ್ಲಿ ಜಗಳ-ಗೆಳೆಯನನ್ನ ಕೊಡಲಿಯಿಂದ ಕೊಂದ್ರು

    ಆಟದಲ್ಲಿ ಜಗಳ-ಗೆಳೆಯನನ್ನ ಕೊಡಲಿಯಿಂದ ಕೊಂದ್ರು

    – ಇಬ್ಬರ ಬಂಧನ, ರಬ್ಬರ್ ತೋಟದಲ್ಲಿ ಸಮಾಧಿ

    ತಿರುವನಂತಪುರ: 16 ವರ್ಷದ ಬಾಲಕನೋರ್ವ ತನ್ನ ಸಹಪಾಠಿಯನ್ನು ಕೊಲೆಗೈದಿರುವ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.

    ಅಂಗದಿಕ್ಕಲ್ ನಿವಾಸಿಯಾದ ಅಖಿಲ್ (16) ಸ್ನೇಹಿತರಿಂದಲೇ ಕೊಲೆಯಾದ ಬಾಲಕ. ಎಲ್‍ಐಡಿ ಆಟದಲ್ಲಿ ಸ್ನೇಹಿತರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಅಖಿಲ್ ನನ್ನು ಆತನ ಗೆಳೆಯರೇ ಕೊಡಲಿಯಿಂದ ಕೊಂದಿದ್ದಾರೆ. ತದನಂತರ ಶವವನ್ನು ಕೊಡುಮಾನ್ ಪ್ರದೇಶದ ರಬ್ಬರ್ ತೋಟದಲ್ಲಿ ಯಾರಿಗೂ ತಿಳಿಯದಂತೆ ಸಮಾಧಿ ಮಾಡಿದ್ದಾರೆ.

    ಭಾನುವಾರ ಈ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರು ಕೊಲೆಗೆ ಬೇರೆ ಕಾರಣಗಳಿರುಬಹುದಾ ಎಂದು ಅನುಮಾನಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

  • ‘ಸ್ವಲ್ಪ ಹೊತ್ತು ನನ್ನೊಂದಿಗೆ ಆಡು’- ಮಕ್ಕಳೊಂದಿಗೆ ಆಟವಾಡಲು ಬಂದ ಬಾಲಕಿಯ ರೇಪ್

    ‘ಸ್ವಲ್ಪ ಹೊತ್ತು ನನ್ನೊಂದಿಗೆ ಆಡು’- ಮಕ್ಕಳೊಂದಿಗೆ ಆಟವಾಡಲು ಬಂದ ಬಾಲಕಿಯ ರೇಪ್

    ಅಹಮದಾಬಾದ್: ತನ್ನ ಮಕ್ಕಳೊಂದಿಗೆ ಆಟವಾಡಲು ಬಂದ ಪುಟ್ಟ ಬಾಲಕಿಯ ಮೇಲೆ 40 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಹೀನಾಯ ಘಟನೆಯೊಂದು ಅಹಮದಾಬಾದ್‍ನಲ್ಲಿ ನಡೆದಿದೆ.

    ಬಾಲಕಿಯ ಮನೆ ಆರೋಪಿ ಮನೆಯ ಪಕ್ಕದಲ್ಲಿಯೇ ಇದೆ. ಹೀಗಾಗಿ ಬಾಲಕಿ ಆರೋಪಿಯ ಮಕ್ಕಳ ಜೊತೆ ಆಟವಾಡಲೆಂದು ಭಾನುವಾರ ತೆರಳಿದ್ದಾಳೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡಿರುವ ಆರೋಪಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

    ಆರೋಪಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನ ಇಬ್ಬರು ಮಕ್ಕಳೊಂದಿಗೆ ಆಟವಾಡಲು ಬಾಲಕಿ ಆಗಾಗ್ಗೆ ಆರೋಪಿ ಮನೆಗೆ ಬರುತ್ತಿದ್ದಳು. ಭಾನುವಾರವೂ ಬಾಲಕಿ ತನ್ನ ಗೆಳೆಯರೊಂದಿಗೆ ಆಟವಾಡಲೆಂದು ಆರೋಪಿ ಮನೆಗೆ ತೆರಳಿದ್ದಾಳೆ. ಈ ಸಂದರ್ಭವನ್ನೇ ಉಪಯೋಗಿಸಿಕೊಂಡ ಆರೋಪಿ, ತನ್ನಿಬ್ಬರು ಮಕ್ಕಳೊಂದಿಗೆ ಆಟವಾಡುತ್ತಿದ್ದ ಬಾಲಕಿಯನ್ನು ಕರೆದು ‘ಸ್ವಲ್ಪ ಹೊತ್ತು ನನ್ನೊಂದಿಗೆ ಆಟವಾಡು’ ಎಂದು ಹೇಳಿ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಸೋಲ ಹೈಕೋರ್ಟ್ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಳಿಕ ಯಾರಿಗೂ ತಿಳಿಯಬಾರದೆಂದು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಸ್ಪತ್ರೆಯಿಂದ ಭಯದಿಂದಲೇ ಬಂದ ಬಾಲಕಿ, ತನ್ನ ತಾಯಿ ಬಳಿ ನಡೆದ ಘಟನೆಯನ್ನೆಲ್ಲ ವಿವರಿಸಿದ್ದಾಳೆ. ಕೂಡಲೇ ಗಾಬರಿಯಾದ ಬಾಲಕಿ ತಾಯಿ, ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಪೊಲೀಸರು ಆರೋಪಿ ವಿರುದ್ಧ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಅಲ್ಲದೆ ಆತನನ್ನು ಟ್ರೇಸ್ ಮಾಡಲು ಕೂಡ ಸಾಧ್ಯವಿಲ್ಲ. ಯಾಕಂದರೆ ಆತ ತನ್ನ ಮೊಬೈಲನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಹೀಗಾಗಿ ಆತನ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ.

  • ಆಟವಾಡೋಕೆ ತೊಂದರೆ ಕೊಟ್ಟ 5ರ ಬಾಲಕಿಯನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಬಾಲಕ

    ಆಟವಾಡೋಕೆ ತೊಂದರೆ ಕೊಟ್ಟ 5ರ ಬಾಲಕಿಯನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಬಾಲಕ

    – ಲೈಂಗಿಕ ದೌರ್ಜನ್ಯ ಎಸೆಗಿರುವ ಶಂಕೆ
    – ಕಸದ ರಾಶಿಯಲ್ಲಿ ಬಾಲಕಿ ಮೃತದೇಹ ಪತ್ತೆ

    ನವದೆಹಲಿ: ಆಟವಾಡೋಕೆ ತೊಂದರೆ ಕೊಡುತ್ತಾಳೆಂದು 5 ವರ್ಷದ ಬಾಲಕಿಯನ್ನು ಬಾಲಕನೋರ್ವ ಇಟ್ಟಿಗೆಯಿಂದ ಹೊಡೆದು ಕೊಂದ ಅಮಾನವೀಯ ಘಟನೆ ದೆಹಲಿಯ ನಿಹಾಲ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.

    ಶುಕ್ರವಾರದಿಂದ ಬಾಲಕಿ ನಾಪತ್ತೆ ಆಗಿದ್ದಳು. ಈ ಬಗ್ಗೆ ಬಾಲಕಿ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಎಷ್ಟೇ ಹುಡುಕಾಟ ನಡೆಸಿದರೂ ಬಾಲಕಿ ಮಾತ್ರ ಪತ್ತೆಯಾಗಿರಲಿಲ್ಲ. ಆದರೆ ಮರುದಿನ ಬೆಳಗ್ಗೆ ನಿಹಾಲ್ ವಿಹಾರಿನ ಕಸದ ರಾಶಿಯಲ್ಲಿ ಬಳಿ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಲೈಂಗಿಕ ದೌರ್ಜನ್ಯ ನಡೆಸಿ, ಬಳಿಕ ಇಟ್ಟಿಗೆಯಿಂದ ಹೊಡೆದು ಬಾಲಕಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    ಮೃತದೇಹದ ಪಕ್ಕ ರಕ್ತಸಿಕ್ತ ಇಟ್ಟಿಗೆ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಾಗ ಆರೋಪಿ ಬಗ್ಗೆ ಸುಳಿವು ಸಿಕ್ಕಿತು. ತನಿಖೆ ಚುರುಕುಗೊಳಿಸಿದಾಗ ಆರೋಪಿ ಯಾರೆಂದು ತಿಳಿದಿದೆ. ಬಾಲಕನೋರ್ವ ತಾನೇ ಬಾಲಕಿಯ ಕೊಲೆ ಮಾಡಿರುವುದಾಗ ಒಪ್ಪಿಕೊಂಡಿದ್ದಾನೆ.

    ನನಗೆ ಬಾಲಕಿ ಆಟವಾಡಲು ಬಿಡುತ್ತಿರಲ್ಲ ಅದಕ್ಕೆ ಕೊಲೆ ಮಾಡಿದೆ ಎಂದು ಬಾಲಕ ಬಾಯಿಬಿಟ್ಟಿದ್ದಾನೆ. ಈ ಹಿಂದೆ ಕೂಡ ಸಾಕಷ್ಟು ಬಾರಿ ಬಾಲಕ ಬಾಲಕಿಗೆ ಹೊಡೆದಿದ್ದನು. ಆಟವಾಡಲು ಬಿಡಲ್ಲ ತೊಂದರೆ ಕೊಡುತ್ತಾಳೆ ಎಂದು ಬಾಲಕ ಬಾಲಕಿಗೆ ಹೊಡೆದಿದ್ದನು.

    1 ವರ್ಷದ ಹಿಂದೆ ಬಾಲಕಿಯ ತಾಯಿ ಮೃತಪಟ್ಟಿದ್ದರು. ಬಳಿಕ ಮಗಳನ್ನು ತಂದೆಯೊಬ್ಬರೇ ನೋಡಿಕೊಳ್ಳುತ್ತಿದ್ದರು. ವೃತ್ತಿಯಲ್ಲಿ ಚಾಲಕರಾಗಿದ್ದ ಬಾಲಕಿ ತಂದೆ ಅಕ್ಕ ಪಕ್ಕದ ಮನೆಯವರ ಬಳಿ ಮಗಳನ್ನು ಸ್ವಲ್ಪ ನೋಡಿಕೊಳ್ಳಿ ಎಂದು ಹೇಳಿ ಕೆಲಸಕ್ಕೆ ಹೋಗುತ್ತಿದ್ದರು. ಎಂದಿನಂತೆ ಶುಕ್ರವಾರ ಬೆಳಗ್ಗೆ ಕೆಲಸಕ್ಕೆ ಹೋದ ತಂದೆ ಸಂಜೆ ವೇಳೆಗೆ ಮನೆಗೆ ಬಂದಾಗ ಮಗಳು ಕಾಣಲಿಲ್ಲ. ಬಳಿಕ ಅಕ್ಕಪಕ್ಕದ ಮನೆಯವನ್ನು ವಿಚಾರಿಸಿದಾಗ ಆಕೆ ಕಾಣೆಯಾಗಿರುವುದು ಪತ್ತೆಯಾಗಿದ್ದು, ಮಗಳಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಕೊನೆಗೆ ತಂದೆಗೆ ಸಿಕ್ಕಿದ್ದು ಮಾತ್ರ ಮಗಳ ಹೆಣ.

  • ಕುತ್ತಿಗೆಗೆ ದುಪ್ಪಟ್ಟ ಸುತ್ತಿಕೊಂಡು ಬಾಲಕಿ ಸಾವು

    ಕುತ್ತಿಗೆಗೆ ದುಪ್ಪಟ್ಟ ಸುತ್ತಿಕೊಂಡು ಬಾಲಕಿ ಸಾವು

    ಶಿವಮೊಗ್ಗ: ಮನೆಯ ಕಿಟಕಿಗೆ ದುಪ್ಪಟ್ಟ ಕಟ್ಟಿಕೊಂಡು ಆಡುತ್ತಿದ್ದ ವೇಳೆ ದುಪ್ಪಟ್ಟ ಬಾಲಕಿಯ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಬಾಲಕಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣ ಸಮೀಪದ ಯಡೆಹಳ್ಳಿ ಕೆರೆಯಲ್ಲಿ ನಡೆದಿದೆ.

    ಹರ್ಷಿತಾ (6) ಮೃತಪಟ್ಟ ಬಾಲಕಿ. ಮೃತ ಬಾಲಕಿ ಯಡೇಹಳ್ಳಿ ಕೆರೆ ಗ್ರಾಮದ ವಿಜಯ ಕುಮಾರ್ ಮತ್ತು ಶಶಿಕಲಾ ದಂಪತಿಯ ಪುತ್ರಿಯಾಗಿದ್ದು, ಸೇವಾ ಭಾರತಿ ಶಾಲೆಯಲ್ಲಿ ಒಂದನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದಳು.

    ವಿಜಯ ಕುಮಾರ್ ರಥಬೀದಿಯಲ್ಲಿ ಅಂಗಡಿ ನಡೆಸುತ್ತಿದ್ದು, ಶಶಿಕಲಾ ಮನೆಯಲ್ಲಿದ್ದರು. ಹರ್ಷಿತಾ ಶನಿವಾರ ಸಂಜೆ ದುಪ್ಪಟ್ಟವನ್ನು ಮನೆ ಕಿಟಕಿಗೆ ಕಟ್ಟಿಕೊಂಡಿದ್ದಳು. ಅಲ್ಲದೇ ತನ್ನ ಕುತ್ತಿಗೆಗೆ ಕಟ್ಟಿಕೊಂಡು ಆಟ ಆಡುತ್ತಿದ್ದಳು. ಆಟವಾಡುತ್ತಾ ದುಪ್ಪಟ್ಟ ಬಾಲಕಿಯ ಕತ್ತಿಗೆ ಸುತ್ತುಕೊಂಡಿದೆ. ನಂತರ ಹರ್ಷಿತಾ ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿದ ಆಕೆಯ ಅಣ್ಣ ಕೆಲಸ ಮಾಡುತ್ತಿದ್ದ ತಾಯಿಗೆ ತಿಳಿಸಿದ್ದಾನೆ.

    ತಾಯಿ ಬಂದು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆಯೇ ಬಾಲಕಿ ಮೃತಪಟ್ಟಿದ್ದಾಳೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೋರಿ ನೀರಿನಲ್ಲಿ ಶತ್ರುವನ್ನು ಹುಡುಕಿದ ಪಬ್‍ಜಿ ವೀರ

    ಮೋರಿ ನೀರಿನಲ್ಲಿ ಶತ್ರುವನ್ನು ಹುಡುಕಿದ ಪಬ್‍ಜಿ ವೀರ

    ವಿಜಯಪುರ: ಇತ್ತೀಚೆಗೆ ಬೆಳಗಾವಿಯಲ್ಲಿ ಪಬ್‍ಜಿ ಆಡಲು ಇಂಟರ್ನೆಟ್ ಪ್ಯಾಕ್ ಹಾಕಿಸಲು ಹಣ ಕೊಡಲಿಲ್ಲವೆಂದು ತಂದೆಯನ್ನೇ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣ ಮಾಸುವ ಮುನ್ನವೇ ಇದೀಗ ಪಬ್‍ಜಿ ಗೇಮ್ ಮತ್ತೊಮ್ಮೆ ಸದ್ದು ಮಾಡಿದೆ.

    ಹೌದು. ಈ ಬಾರಿ ಯುವಕನೊಬ್ಬ ಕಂದಕದ ಚರಂಡಿಯಲ್ಲಿ ಬಿದ್ದು ಪಬ್‍ಜಿ ಆಟದಂತೆ ಈಜಾಡುವ ಮೂಲಕ ತನ್ನ ಶತ್ರುಗಳನ್ನು ಹುಡುಕಿದ್ದಾನೆ. ಈ ಘಟನೆ ವಿಜಯಪುರ ನಗರದ ಗಗನ ಮಹಲ್ ನ ಹಿಂದಿರುವ ಚರಂಡಿಯಲ್ಲಿ ನಡೆದಿದೆ. ಯುವಕ ವಿಜಯಪುರ ನಗರದ ಶಿವಾಜಿ ಕಾಲೋನಿಯ ನಿವಾಸಿಯಾಗಿದ್ದು, ಹೆಸರು ತಿಳಿದುಬಂದಿಲ್ಲ. ಚರಂಡಿ ನೀರಿನಲ್ಲಿ ಯುವಕ ಈಜಾಡುತ್ತಿರುವುದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲೇನಿದೆ..?
    ಯುವಕ ಚರಂಡಿ ನೀರಿನಲ್ಲಿ ಮುಳುಗಿ, ಮೇಲೇಳುತ್ತಾ ಪಬ್‍ಜಿ ಆಟದಂತೆ ಈಜಾಡಿದ್ದಾನೆ. ಅಲ್ಲದೆ ಮೋರಿಯಲ್ಲಿ ಈಜಾಡುತ್ತಾ ಶತ್ರುಗಳನ್ನು ಹುಡುಕಾಡಿದ್ದಾನೆ. ಈತನನ್ನು ನೋಡಿದ ಸ್ಥಳೀಯರು ಮೇಲಕ್ಕೆ ಬಾರೋ ಪಕ್ಕದಲ್ಲಿ ಹಾವು ಬರುತ್ತಿದೆ ಹುಷಾರ್.. ಹುಷಾರ್.. ಛೀ.. ಥೂ.. ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕೇಳಬಹುದು. ಆದರೂ ಯುವಕ ಸ್ಥಳೀಯರ ಮಾತುಗಳನ್ನು ಲೆಕ್ಕಿಸದೇ ತನ್ನ ಪಾಡಿಗೆ ಗಬ್ಬುವಾಸನೆ ಬರುತ್ತಿರುವ ನೀರಿನಲ್ಲಿ ಈಜಾಡಿದ್ದಾನೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕರು ಕಮೆಂಟ್ ಮಾಡಿದ್ದಾರೆ. ಅದರಲ್ಲಿ ಕೆಲವರು ಯುವಕ ಮದ್ಯವ್ಯಸನಿಯಾಗಿದ್ದು ಹೀಗೆ ಹುಚ್ಚಾಟ ನಡೆಸಿದ್ದಾನೆಂದು ಹೇಳಿದ್ದಾರೆ. ಆದರೆ ಯುವಕ ಮನೆಯವರ ವಿರೋಧದ ನಡುವೆಯೂ ಪಬ್‍ಜಿ ಆಡುತ್ತಿದ್ದನು. ಹೀಗೆ ಆಟವಾಡಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ವರ್ತಿಸಿದ್ದಾನೆ ಎಂಬ ಕೆಲವರು ಹೇಳುತ್ತಿದ್ದಾರೆ.

    ತಂದೆಯನ್ನೇ ಕೊಂದ ಮಗ!
    ಇತ್ತೀಚೆಗೆ ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ಮಗನೇ ತನ್ನ ತಂದೆಯನ್ನು ಬರ್ಬರವಾಗಿ ಕೊಲೆಗೈದ ಭಯಾನಕ ಘಟನೆ ನಡೆದಿತ್ತು. ಕಾಕತಿಯ ನಿವಾಸಿ ಶಂಕ್ರಪ್ಪ ಕಮ್ಮಾರ(59) ಅವರನ್ನು ರಘುವೀರ್ ಕಮ್ಮಾರ(21) ಕೊಲೆ ಮಾಡಿದ್ದಾನೆ. ಡಿಪ್ಲೊಮಾ ಮೆಕ್ಯಾನಿಕಲ್ ಎಂಜಿನಿಯರ್ ಎರಡನೇ ವರ್ಷ ಓದುತ್ತಿದ್ದ ಆರೋಪಿ ರಘುವೀರ್ ಕಳೆದ ನಾಲ್ಕೈದು ವರ್ಷಗಳಿಂದ ಮೊಬೈಲ್ ಗೇಮ್‍ಗಳನ್ನು ಆಡುವ ಗೀಳಿಗೆ ಬಿದ್ದಿದ್ದನು. ಪಾಲಕರು ಎಷ್ಟೇ ಕಿವಿ ಮಾತು ಹೇಳಿದರೂ ಕೇಳದ ಯುವಕ ಗೇಮ್ ಹುಚ್ಚಿಗೆ ಜೀವನವನ್ನೇ ಹಾಳು ಮಾಡಿಕೊಂಡಿದ್ದನು.

    ಪಬ್ ಜಿ ಆಡಲು ತಂದೆಗೆ ಇಂಟರ್ನೆಟ್ ಪ್ಯಾಕ್ ಹಾಕಿ ಎಂದು ಕೇಳಿಕೊಂಡಿದ್ದಾನೆ. ಆದರೆ ಮಗನ ಮಾತನ್ನು ತಂದೆ ನಿರಾಕರಿಸಿದ್ದು ಮಾತ್ರವಲ್ಲದೆ ಮಗನಿಗೆ ಬುದ್ಧಿವಾದ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದ ರಘುವೀರ್ ತನ್ನ ತಾಯಿಯನ್ನು ಕೋಣೆಯಲ್ಲಿ ಕೂಡಿಹಾಕಿದ್ದಾನೆ. ಬಳಿಕ ತರಕಾರಿ ಕತ್ತರಿಸುವ ಹಾಗೆ ತಂದೆಯ ರುಂಡವನ್ನು, ಕಾಲನ್ನು ಪಾಪಿ ಮಗ ಕತ್ತರಿಸಿದ್ದಾನೆ. ಮೊದಲು ಕತ್ತರಿಯಿಂದ ತಂದೆಯ ಕುತ್ತಿಗೆಯನ್ನು ಕತ್ತರಿಸಲು ರಘುವೀರ್ ಪ್ರಯತ್ನಿಸಿ, ಇಳಿಗೆ ಮಣೆ ತಂದು ತಂದೆಯ ರುಂಡವನ್ನು ಕಟ್ ಮಾಡಿದ್ದಾನೆ. ನಂತರ ತಂದೆಯ ದೇಹವನ್ನು ಛಿದ್ರಛಿದ್ರ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

  • ನಾಯಿ ಜೊತೆ ಆಟವಾಡ್ತಿದ್ದಂತೆ ಕೆರೆಗೆ ಬಿದ್ದ ಬಾಲಕಿ!

    ನಾಯಿ ಜೊತೆ ಆಟವಾಡ್ತಿದ್ದಂತೆ ಕೆರೆಗೆ ಬಿದ್ದ ಬಾಲಕಿ!

    ಮಡಿಕೇರಿ: ಮುದ್ದಿನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕೆರೆಯೊಳಗೆ ಬಿದ್ದು ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸಮೀಪದ 7ನೇ ಹೊಸಕೋಟೆಯಲ್ಲಿ ನಡೆದಿದೆ.

    ಭಾರತಿ(13) ಮೃತ ಬಾಲಕಿ. ಭಾರತಿ ಗ್ರಾಮದ ರಂಜನ್ ಎಂಬವರ ತೋಟದಲ್ಲಿ ಕಾರ್ಮಿಕರಾಗಿರುವ ಚೋಮ ಎಂಬವರ ಪುತ್ರಿಯಾಗಿದ್ದು, ನಾಯಿಯೊಂದಿಗೆ ಆಟವಾಡುತ್ತಾ ಕೆರೆಗೆ ಬಿದ್ದಿದ್ದಾಳೆ.

    ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ತೋಟದ ಲೈನ್ ಮನೆಯ ಪಕ್ಕದಲ್ಲಿ ಮುದ್ದಿನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದಳು. ಆಟದ ನಡುವೆ ಭಾರತಿಯನ್ನು ನಾಯಿ ಓಡಿಸಿಕೊಂಡು ಹೋಗಿದೆ. ಆಟವಾಡುತ್ತಿದ್ದ ಜಾಗದ ಒತ್ತಿನಲ್ಲಿ ಇಳಿಜಾರಿನಿಂದ ಕೂಡಿದ ಪ್ರದೇಶದಲ್ಲಿ ಕೆರೆಯೊಂದಿದ್ದು ನಾಯಿಯ ಕೈಗೆ ಸಿಗದಂತೆ ಭಾರತಿ ಓಡಿದ್ದಳು.

    ಭಾರತಿ ನಿಯಂತ್ರಣ ಕಳೆದುಕೊಂಡು ಅದರೊಳಗೆ ಜಾರಿ ಬಿದ್ದಿದ್ದಾಳೆ. ನಂತರ ಮೇಲಕ್ಕೆ ಬರಲಾಗದೇ ಮೃತಪಟ್ಟಿದ್ದಾಳೆ. ಕುಶಾಲನಗರ ಆಸ್ಪತ್ರೆಯಲ್ಲಿ ಬಾಲಕಿಯ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಗಿದೆ.

  • ಕಬ್ಬಡ್ಡಿ ಆಡೋ ವೇಳೆ ವಿದ್ಯಾರ್ಥಿ ದುರ್ಮರಣ

    ಕಬ್ಬಡ್ಡಿ ಆಡೋ ವೇಳೆ ವಿದ್ಯಾರ್ಥಿ ದುರ್ಮರಣ

    ಮೈಸೂರು: ಕಬ್ಬಡ್ಡಿ ಆಟ ಆಡುವ ವೇಳೆ ವಿದ್ಯಾರ್ಥಿ ಮೃತಪಟ್ಟ ಪ್ರಕರಣವೊಂದು ಮೈಸೂರಿನಲ್ಲಿ ನಡೆದಿದೆ.

    ಆಕಾಶ್(15) ಮೃತ ವಿದ್ಯಾರ್ಥಿ. ಈತ ಜನತಾನಗರ ನಿವಾಸಿಯಾಗಿದ್ದು, ಮೈಸೂರಿನ ಶಾರದಾ ದೇವಿ ನಗರದ ಶಾರದಾ ಶಾಲೆ ವಿದ್ಯಾಭ್ಯಾಸ ಮಾಡುತ್ತಿದ್ದನು. ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಕ್ಕೆ ಅಭ್ಯಾಸ ಮಾಡುವ ವೇಳೆ ಈ ಘಟನೆ ನಡೆದಿದೆ.

    ಆಕಾಶ್ ರೈಡಿಂಗ್ ಮಾಡಿ ತನ್ನ ಕೋರ್ಟ್ ಕಡೆ ಹೋಗುವ ವೇಳೆ ತಲೆ ಸಿಮೆಂಟ್ ಕಂಬಕ್ಕೆ ಬಡಿದಿದೆ. ಗುರುವಾರ ಅಭ್ಯಾಸ ಮಾಡುವ ವೇಳೆ ಆಕಾಶ್ ಗಾಯಗೊಂಡಿದ್ದನು. ಗಂಭೀರ ಗಾಯಗೊಂಡ ವಿದ್ಯಾರ್ಥಿ ಆಕಾಶ್‍ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಮೃತಪಟ್ಟಿದ್ದಾನೆ.

    ಆಕಾಶ್ ಮೃತದೇಹವನ್ನು ಕೆ.ಆರ್. ಆಸ್ಪತ್ರೆಗೆ ಶವಗಾರಕ್ಕೆ ರವಾನಿಸಲಾಗಿದೆ. ಈ ಬಗ್ಗೆ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಗುವಿನೊಂದಿಗೆ ಮಗುವಾದ ಗವಿಸಿದ್ದೇಶ್ವರ ಸ್ವಾಮೀಜಿ- ವಿಡಿಯೋ ವೈರಲ್

    ಮಗುವಿನೊಂದಿಗೆ ಮಗುವಾದ ಗವಿಸಿದ್ದೇಶ್ವರ ಸ್ವಾಮೀಜಿ- ವಿಡಿಯೋ ವೈರಲ್

    ಕೊಪ್ಪಳ: ಜಿಲ್ಲೆಯ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಸ್ವಾಮೀಜಿ ಪುಟ್ಟ ಮಗುವನ್ನ ಎತ್ತಿ ಆಟ ಆಡಿಸುತ್ತಿರೋ ದೃಶ್ಯ ಇದೀಗ ವೈರಲ್ ಆಗಿದ್ದು, ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಗುವಿನೊಂದಿಗೆ ಮಗುವಾಗಿ ಕಾಲ ಕಳೆದಿದ್ದಾರೆ.

    ಜಿಲ್ಲೆಯ ಗವಿಸಿದ್ದೇಶ್ವರ ಮಠ ಇಡೀ ಕರ್ನಾಟಕದಲ್ಲಿ ಹೆಸರುವಾಸಿಯಾಗಿದೆ. ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ತುಂಬಾ ಸರಳ ವ್ಯಕ್ತಿಯಾಗಿದ್ದು, ಸ್ವಾಮೀಜಿ ಬಗ್ಗೆ ಭಕ್ತರಿಗೆ ಎಲ್ಲಿಲ್ಲದ ಭಯ ಭಕ್ತಿ. ಸ್ವಾಮೀಜಿಯನ್ನ ನೋಡಲು ನಿತ್ಯ ನೂರಾರು ಜನ ಮಠಕ್ಕೆ ಆಗಮಿಸುತ್ತಾರೆ. ಆದ್ರೆ ಅದೇ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಮಗುವಿನೊಂದಿಗೆ ಆಟ ಆಡುತ್ತಿರೋ ವಿಡಿಯೋ ಇದೀಗ ವೈರಲ್ ಆಗಿದೆ.

    ಸ್ವಾಮಿಜಿ ಅವರು ಮಠದ ಆವರಣದಲ್ಲಿ ಪುಟ್ಟ ಮಗುವನ್ನ ಎತ್ತಿ ಆಟ ಆಡಿಸಿ, ಮಗುವಿನೊಂದಿಗೆ ತಾವು ಮಗುವಾಗಿ ಕಾಲ ಕಳೆದು ಸಂತಸ ಪಟ್ಟರು.

    https://www.youtube.com/watch?v=Jow2D4cgLEQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾತ್ರಿ ಮನೆ ಮುಂದೆ ಶಟಲ್ ಆಡಿದ್ದಕ್ಕೆ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು!

    ರಾತ್ರಿ ಮನೆ ಮುಂದೆ ಶಟಲ್ ಆಡಿದ್ದಕ್ಕೆ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು!

    ತುಮಕೂರು: ಕ್ಷುಲ್ಲಕ ಕಾರಣಕ್ಕೆ ರಾತ್ರಿವೇಳೆ ಮನೆ ಮುಂದೆ ಶಟಲ್ ಕಾಕ್ ಆಡುತ್ತಿದ್ದ ವ್ಯಕ್ತಿಯ ಮೇಲೆ ಮನಸೋ ಇಚ್ಛೆ ಥಳಿಸಿದ ಆರೋಪ ಜಿಲ್ಲೆಯ ಹುಲಿಯೂರು ದುರ್ಗದ ಪೊಲೀಸರ ಮೇಲೆ ಬಂದಿದೆ.

    40 ವರ್ಷದ ಪದ್ಮನಾಭ ಅವರು ತನ್ನ ಮನೆ ಮುಂದೆ ಶಟಲ್ ಆಡುತ್ತಿದ್ದರು. ಆಟ ನಿಲ್ಲಿಸಿ ಮನೆಯೊಳಗೆ ಹೋಗುವಂತೆ ಪೊಲೀಸರು ಗದರಿದ್ದಾರೆ. ತನ್ನ ಮನೆ ಎದುರಲ್ಲೇ ಆಟವಾಡುತ್ತಿದ್ದರಿಂದ ಯಾರಿಗೂ ತೊಂದರೆ ಆಗುತ್ತಿಲ್ಲ ಎಂದು ಪದ್ಮನಾಭ, ಇದೇ ವೇಳೆ ಪೊಲೀಸರ ಮಾತಿಗೆ ಪ್ರತ್ಯುತ್ತರ ನೀಡಿದ್ದಾರೆ. ಇದರಿಂದ ಕೋಪಗೊಂಡ ಎ.ಎಸ್.ಐ ನಾರಾಯಣಸ್ವಾಮಿ, ಹಾಗೂ ಪೇದೆ ರಂಗಸ್ವಾಮಿ, ಪದ್ಮನಾಭನ ಮನೆಗೆ ನುಗ್ಗಿ ಎಳೆದೊಯ್ದು ಮನಬಂದಂತೆ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಪೃಷ್ಠ ಭಾಗದಲ್ಲಿ ಬಾಸುಂಡೆ ಬರುವಂತೆ ಲಾಠಿ ಏಟು ಕೊಟ್ಟಿದ್ದಾರೆ. ಮೈ ತುಂಬಾ ರಕ್ತ ಹೆಪ್ಪುಗಟ್ಟುವಂತೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪದ್ಮನಾಭ ವಿರುದ್ಧ ಕರ್ತವ್ಯಕ್ಕೆ ಅಡ್ಡಿಯಡಿ ಪ್ರಕರಣ ದಾಖಲಿಸಿ ಕುಣಿಗಲ್ ಜೆಎಂಎಫ್ ಸಿ ಕಿರಿಯ ಶ್ರೇಣಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಸದ್ಯ ಪದ್ಮನಾಭ ಅವರನ್ನು ನ್ಯಾಯಾಂಗ ಬಂಧನದಲ್ಲಿಟ್ಟು ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews