Tag: ಆಟಗಾರ್ತಿಯರು

  • ಭಾರತೀಯ ಕ್ರಿಕೆಟ್ ಆಟಗಾರ್ತಿಯರಿಗೆ ಏರ್‌ಪೋರ್ಟಿನಲ್ಲಿ ಅವಮಾನ

    ಭಾರತೀಯ ಕ್ರಿಕೆಟ್ ಆಟಗಾರ್ತಿಯರಿಗೆ ಏರ್‌ಪೋರ್ಟಿನಲ್ಲಿ ಅವಮಾನ

    – ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

    ಮುಂಬೈ: ಭಾರತದಲ್ಲಿ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ಸ್ವಾಗತದ ವಿಚಾರವಾಗಿ ಮತ್ತೊಮ್ಮೆ ಭಾರೀ ಚರ್ಚೆ ಆರಂಭವಾಗಿದೆ. ಕಳೆದ ಭಾನುವಾರ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‍ನಲ್ಲಿ ಸೋಲಿನ ಬಳಿಕ ನಾಯಕಿ ಹರ್ಮನ್‍ಪ್ರೀತ್ ಕೌರ್ ಪಡೆ ಮಂಗಳವಾರ ಮುಂಬೈ ವಿಮಾನ ನಿಲ್ದಾಣಕ್ಕೆ ಮರಳಿತು. ಆದರೆ ಈ ವೇಳೆ ಯಾರೊಬ್ಬರೂ ಅವರನ್ನು ಸ್ವಾಗತಿಸಲಿಲ್ಲ. ಇದು ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಮಾಡಿದ ಅವಮಾನ ಎಂಬ ಮಾತು ಕೇಳಿ ಬರುತ್ತಿದೆ.

    ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೇಂದ್ರ ಕಚೇರಿ ಇರುವ ನಗರದಲ್ಲೇ ಮಹಿಳಾ ಆಟಗಾರ್ತಿಯರಿಗೆ ಅವಮಾನ ಮಾಡಲಾಗಿದೆ. ಟೀಂ ಇಂಡಿಯಾ ಪುರುಷ ಕ್ರಿಕೆಟರ್ ಹಾಗೂ ಮಹಿಳಾ ಆಟಗಾರ್ತಿಯರ ಮಧ್ಯೆ ಬಿಸಿಸಿಐ ತಾರತಮ್ಯ ತೋರುತ್ತಿದೆ ಎಂದು ಕ್ರಿಕೆಟ್ ಅಭಿಮಾನಿಗಳು ದೂರಿದ್ದಾರೆ.

    ಆದರೆ ಕೆಲ ಅಭಿಮಾನಿಗಳು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಹೋಗದಿರಬಹುದು. ಒಂದು ವೇಳೆ ಕೊರೊನಾ ಆತಂಕ ಇಲ್ಲದೇ ಇದ್ದಲ್ಲಿ ಪ್ರಶ್ನಿಸುವುದು ಸರಿಯಾಗಿದೆ. ಆದರೆ ಈ ಪರಿಸ್ಥಿತಿಯಲ್ಲಿ ಅವಮಾನ ಎಂದು ಹೇಳುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    2009ರಿಂದ ಆರಂಭವಾದ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಇದೇ ಮೊದಲ ಬಾರಿ ಭಾರತ ಫೈನಲ್ ತಲುಪಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಚೊಚ್ಚಲ ಚಾಂಪಿಯನ್‍ಶಿಪ್ ಪಟ್ಟವನ್ನು ಕೈಚೆಲ್ಲಿಕೊಂಡಿತು. ಇತ್ತ ಆತಿಥೇಯ ಆಸ್ಟ್ರೇಲಿಯಾ ತಂಡವು ಏಳು ಆವೃತ್ತಿಗಳಲ್ಲಿ ಐದನೇ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.

    https://twitter.com/kpsinha7/status/1237366153111990273

    ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಫೈನಲ್ ತಲುಪಿದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಇದಕ್ಕೂ ಮುನ್ನ ಎ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು 17 ರನ್‍ಗಳಿಂದ ಸೋಲಿಸಿತ್ತು. ಆದರೆ ಫೈನಲ್‍ನಲ್ಲಿ ಗೆಲುವು ದಾಖಲಿಸುವಲ್ಲಿ ವಿಫಲವಾಯಿತು.

    ದೇಶ, ವಿದೇಶಗಳಲ್ಲಿ ಹರಡಿರುವ ಕೊರೊನಾ ವೈರಸ್‍ನಿಂದಾಗಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ದೇಶಕ್ಕೆ ಮರಳಲು ಭಾರೀ ಸಂಕಷ್ಟ ಎದುರಿಸುವಂತಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ತಾಯ್ನಾಡಿಗೆ ಮರಳಿ ಮನೆಗೆ ಹಿಂದಿರುಗುವಾಗ ಸ್ವಾಗತ ಕೋರಲು ಯಾರೊಬ್ಬರೂ ಇಲ್ಲದೆ ಇರುವುದನ್ನು ನೋಡಿ ಆಟಗಾರ್ತಿಯರು ಇನ್ನಷ್ಟು ನಿರಾಶೆಗೊಂಡಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ನಾಯಕಿ ಹರ್ಮನ್‍ಪ್ರೀತ್ ಮತ್ತು ಆಲ್‍ರೌಂಡರ್ ವೇದ ಕೃಷ್ಣಮೂರ್ತಿ ಅವರು ಅಸಮಾಧಾನ ಹಾಗೂ ನಿರಾಶೆ ವ್ಯಕ್ತಪಡಿಸಿದ ಫೋಟೋಗಳು ಟ್ವಿಟರ್‌ನಲ್ಲಿ ವೈರಲ್ ಆಗಿವೆ.

    ಪ್ರಶಸ್ತಿ ಘೋಷಿಸಿಲ್ಲ:
    ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಆಟಗಾರ್ತಿಯರು ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಈವರೆಗೂ ಯಾವುದೇ ರಾಜ್ಯದ ಸರ್ಕಾರವೂ ಆಟಗಾರ್ತಿಯರಿಗೆ ಯಾವುದೇ ರೀತಿಯ ಬಹುಮಾನವನ್ನು ಘೋಷಿಸಿಲ್ಲ. ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ತೋರಿದ ಹರಿಯಾಣದ ಶಫಾಲಿ ವರ್ಮಾ ಅವರಿಗೆ ಅಲ್ಲಿನ ಸರ್ಕಾರವು ಯಾವುದೇ ಗೌರವವನ್ನು ಇನ್ನೂ ನೀಡಿಲ್ಲ ಎಂದು ವರದಿಯಾಗಿದೆ.

  • ಸಲಿಂಗಿ ಮದುವೆಯಾದ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿಯರು!

    ಸಲಿಂಗಿ ಮದುವೆಯಾದ ಮಹಿಳಾ ತಂಡದ ಕ್ರಿಕೆಟ್ ಆಟಗಾರ್ತಿಯರು!

    ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಸಲಿಂಗಿ ಮದುವೆ ಆಗಿದ್ದಾರೆ.

    ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಕ್ಯಾಪ್ಟನ್ ಡೇನ್ ವ್ಯಾನ್ ನಿಕೆರ್ಕ್ ಹಾಗೂ ಅದೇ ತಂಡದ ಅಲ್‍ರೌಂಡರ್ ಮರಿಝಾನ್ ಕಾಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್‍ರೌಂಡರ್ ಕಾಪ್ ತಮ್ಮ ಮದುವೆಯ ವಿಷಯವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವುದರ ಮೂಲಕ ಬಹಿರಂಗಪಡಿಸಿದ್ದಾರೆ.

    2009ರ ಮಹಿಳಾ ವಿಶ್ವಕಪ್ ಸಮಯದಲ್ಲಿ ನಿಕೆರ್ಕ್ ಹಾಗೂ ಕಾಪ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ನಿಕೆರ್ಕ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಮಾರ್ಚ್ 8ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರು. ಇನ್ನೂ ಕಾಪ್ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು.

    ಈ ಮದುವೆಗೆ ಇಬ್ಬರು ಆಟಗಾರ್ತಿಯರ ಕುಟುಂಬದವರು, ಸ್ನೇಹಿತರು ಹಾಗೂ ದಕ್ಷಿಣ ಆಫ್ರಿಕಾ ತಂಡದ ಸಹ ಆಟಗಾರರು ಇವರ ಮದುವೆಯಲ್ಲಿ ಭಾಗಿಯಾಗಿದ್ದರು. ನಿಕೆರ್ಕ್ ಹಾಗೂ ಕಾಪ್ ಅವರದ್ದು ಸಲಿಂಗಿ ಮದುವೆಯಾಗಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಇವರ ಮದುವೆ ಎರಡನೇ ಪ್ರಕರಣವಾಗಿದೆ.

    ಈ ಮೊದಲು ನ್ಯೂಜಿಲೆಂಡ್ ಮಹಿಳಾ ತಂಡದ ಆಟಗಾರ್ತಿಯರಾದ ಆಮಿ ಸಟರ್ತೈಟ್ ಹಾಗೂ ಲೀ ಟಾಹುಹು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ????

    A post shared by Marizanne Kapp (@kappie777) on