Tag: ಆಗ್ನೇಯ ಏಷ್ಯಾ

  • ಆನ್‌ಲೈನ್‌ ವಂಚನೆ – ಆಗ್ನೇಯ ಏಷ್ಯಾ ಮೂಲದ ಕ್ರಿಮಿನಲ್‌ಗಳಿಗೆ ಭಾರತೀಯರೇ ಟಾರ್ಗೆಟ್‌; ವಂಚನೆ ಬಲೆಗೆ ಹೇಗೆ ಬೀಳಿಸ್ತಾರೆ ಗೊತ್ತಾ?

    ಆನ್‌ಲೈನ್‌ ವಂಚನೆ – ಆಗ್ನೇಯ ಏಷ್ಯಾ ಮೂಲದ ಕ್ರಿಮಿನಲ್‌ಗಳಿಗೆ ಭಾರತೀಯರೇ ಟಾರ್ಗೆಟ್‌; ವಂಚನೆ ಬಲೆಗೆ ಹೇಗೆ ಬೀಳಿಸ್ತಾರೆ ಗೊತ್ತಾ?

    ತಂತ್ರಜ್ಞಾನ ಬೆಳೆದಂತೆ, ಡಿಜಿಟಲ್ ವಹಿವಾಟು ಹೆಚ್ಚುತ್ತಿದ್ದಂತೆ ಆನ್‌ಲೈನ್ ವಂಚನೆಯೂ (Online Scam) ಹೆಚ್ಚಾಗುತ್ತಿದೆ. ನೆರೆರಾಷ್ಟ್ರಗಳ ಆನ್‌ಲೈನ್ ವಂಚಕರಿಗೆ ಭಾರತೀಯರೇ (Indians) ಹೆಚ್ಚು ಟಾರ್ಗೆಟ್ ಆಗಿದ್ದಾರೆ. ಆಗ್ನೇಯ ಏಷ್ಯಾದ ಮ್ಯಾನ್ಮಾರ್, ಲಾವೋಸ್, ಕಾಂಬೋಡಿಯಾದ ಡಿಜಿಟಲ್ ವಂಚಕರು ನಡೆಸಿರುವ ಆನ್‌ಲೈನ್ ವಂಚನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರೇ ಒಳಗಾಗಿರುವುದು ಬೆಳಕಿಗೆ ಬಂದಿದೆ. ಸೈಬರ್ ಅಪರಾಧಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಭಾರತ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ದೇಶವಾಸಿಗಳಿಗೆ ಸಲಹೆ ನೀಡಿದೆ.

    ಈ ವರ್ಷದ ಜನವರಿಯಿಂದ ಏಪ್ರಿಲ್ ವರೆಗೆ ದೇಶದಲ್ಲಾಗಿರುವ ಆಗಿರುವ ಆನ್‌ಲೈನ್ ವಂಚನೆ ಬಗ್ಗೆ ಭಾರತೀಯ ಸೈಬರ್‌ಕ್ರೈಮ್‌ ಕೋಆರ್ಡಿನೇಷನ್ ಸೆಂಟರ್ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ 46% ರಷ್ಟು ವಂಚನೆಗಳು ನಡೆದಿವೆ. ವಂಚನೆಗೆ ಒಳಗಾದ ಜನ ಬರೋಬ್ಬರಿ 1,776 ಕೋಟಿ ರೂಪಾಯಿಯಷ್ಟು ಹಣ ಕಳೆದುಕೊಂಡಿದ್ದಾರೆ. ಮೇಲೆ ಹೆಸರಿಸಿದ ರಾಷ್ಟ್ರಗಳ ವಂಚಕರಿಂದಲೇ ಕೃತ್ಯ ನಡೆದಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಸತತ ಸೋಲುಗಳ ನಡವೆ ನಭಕ್ಕೆ ಚಿಮ್ಮಿ ಬೆಳೆದ ಅಗ್ನಿಬಾನ್ – ಏನಿದರ ವಿಶೇಷ? 

    ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಸಚಿವಾಲಯದ ಅಡಿಯಲ್ಲಿ ಇಂಡಿಯನ್ ಸೈಬರ್‌ಕ್ರೈಮ್‌ ಕೋಆರ್ಡಿನೇಷನ್ ಸೆಂಟರ್, ದೇಶದಲ್ಲಿ ಸೈಬರ್ ಅಪರಾಧಗಳ ತಡೆಗಟ್ಟುವಿಕೆ, ಪತ್ತೆ, ತನಿಖೆ ಮತ್ತು ಪರಿಣಾಮಕಾರಿ ಕಾನೂನು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಸೈಬರ್‌ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಆರ್‌ಪಿ) ದತ್ತಾಂಶದ ಪ್ರಕಾರ, ಈ ವರ್ಷದ ಜನವರಿ ಆರಂಭದಿಂದ ಏಪ್ರಿಲ್ ಅಂತ್ಯದವರೆಗೆ ದೇಶದಲ್ಲಿ 7.4 ಲಕ್ಷ ದೂರುಗಳು ದಾಖಲಾಗಿವೆ. ಕಳೆದ ಒಂದು ವರ್ಷದ ಅವಧಿಯಲ್ಲಿ (2023) 15.56 ಲಕ್ಷ ದೂರುಗಳು ದಾಖಲಾಗಿದ್ದವು.

    ಯಾವ್ಯಾವ ಸೈಬರ್ ಅಪರಾಧಗಳು ನಡೆದಿವೆ?
    ವ್ಯವಹಾರ: ಹೂಡಿಕೆಗೆ ಸಂಬಂಧಿಸಿದಂತೆ ಉಚಿತ ಸಲಹೆಗಳನ್ನು ನೀಡುವ ಜಾಹೀರಾತುಗಳನ್ನು ವಂಚಕರು ಪ್ರಕಟಿಸುತ್ತಾರೆ. ಅವುಗಳಲ್ಲಿ ಸ್ಟಾಕ್ ಮಾರುಕಟ್ಟೆ ತಜ್ಞರ ಚಿತ್ರಗಳು ಮತ್ತು ನಕಲಿ ಸುದ್ದಿಗಳನ್ನು ಬಳಸಿಕೊಳ್ಳುತ್ತಾರೆ. ಜನರನ್ನು ವಾಟ್ಸಪ್ ಗ್ರೂಪ್ಸ್ ಅಥವಾ ಟೆಲಿಗ್ರಾಮ್ ಚಾನೆಲ್‌ಗೆ ಸೇರಲು ಹೇಳುತ್ತಾರೆ. ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ಹಣ ಗಳಿಸುವ ಕುರಿತು ಸಲಹೆ ನೀಡುತ್ತಾರೆ. ಹಣದಾಸೆಗೆ ಬೀಳುವ ಜನರು ಹೆಚ್ಚು ಲಾಭ ಸಿಗುವಂತಹ ಹೂಡಿಕೆಯ ಅಪ್ಲಿಕೇಶನ್‌ಗಳ ಬಗ್ಗೆ ಮಾರ್ಗದರ್ಶನ ಕೇಳುತ್ತಾರೆ. ಸೈಬರ್ ಅಪರಾಧಿಗಳು ಮಾಡುವ ಶಿಫಾರಸುಗಳನ್ನು ಅನುಸರಿಸಿ ಅಪ್ಲಿಕೇಶನ್‌ಗಳಲ್ಲಿ ಹೂಡಿಕೆ ಆರಂಭಿಸುತ್ತಾರೆ. ಆದರೆ ಇಂತಹ ಅಪ್ಲಿಕೇಶನ್‌ಗಳಲ್ಲಿ ಯಾವುದು ಕೂಡ ಸ್ಟಾಕ್ ಮಾರ್ಕೆಟ್ ರೆಗ್ಯುಲೇಟರ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾದಲ್ಲಿ ನೋಂದಾಯಿಸಿರುವುದಿಲ್ಲ. ಆದರೆ ವಂಚನೆಗೆ ಒಳಗಾಗುವವರು ಇದ್ಯಾವುದನ್ನೂ ಪರಿಶೀಲಿಸದೇ ಹಳ್ಳಕ್ಕೆ ಬೀಳುತ್ತಾರೆ. ವ್ಯವಹಾರ ಹಗರಣದಲ್ಲಿ ಭಾರತೀಯರು 1,420.48 ಕೋಟಿ ರೂ. ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಭೂಮಿಗೆ ತಟ್ಟುವ ತಾಪ – ಅಂತರ್ಜಲಕ್ಕೆ ಶಾಪ!

    ಡಿಜಿಟಲ್ ಅರೆಸ್ಟ್: ಸೈಬರ್ ವಂಚಕರು ಕೆಲವರನ್ನು ಟಾರ್ಗೆಟ್ ಮಾಡಿ ಕರೆ ಮಾಡುತ್ತಾರೆ. ನಾವು ಪೊಲೀಸ್ ಅಥವಾ ತನಿಖಾ ಸಂಸ್ಥೆಯ ಅಧಿಕಾರಿಗಳು ಎಂದು ಸುಳ್ಳು ಹೇಳುತ್ತಾರೆ. ನೀವು ಅಕ್ರಮ ಸರಕು ಸಾಗಾಟ, ಮಾದಕ ದ್ರವ್ಯ, ನಕಲಿ ಪಾಸ್‌ಪೋರ್ಟ್ ಅಥವಾ ನಿಷಿದ್ಧ ವಸ್ತುಗಳನ್ನು ಹೊಂದಿರುವ ಪಾರ್ಸೆಲ್‌ಗಳನ್ನು ಕಳುಹಿಸಿದ್ದೀರಿ ಎಂದು ಹೆದರಿಸುತ್ತಾರೆ. ಕರೆ ಸ್ವೀಕರಿಸಿರುವವರು ಇದರಿಂದ ಗಾಬರಿಗೊಳ್ಳುತ್ತಾರೆ. ಆಗ ವಂಚಕರು ವೀಡಿಯೋ ಕರೆ ಮಾಡುತ್ತಾರೆ. ಅದನ್ನು ಸಂತ್ರಸ್ತರು ಸ್ವೀಕರಿಸಬೇಕು. ವಂಚಕರು ಪೊಲೀಸ್ ಸಮವಸ್ತ್ರದಲ್ಲಿರುತ್ತಾರೆ. ಅಷ್ಟೇ ಅಲ್ಲ, ಪೊಲೀಸ್ ಠಾಣೆ ಅಥವಾ ಸರ್ಕಾರಿ ಕಚೇರಿಗಳನ್ನು ಹೋಲುವಂತೆ ತಾವಿರುವ ಸ್ಥಳವನ್ನು ಸೆಟ್ ಮಾಡಿರುತ್ತಾರೆ. ಸಂತ್ರಸ್ತರು ರಾಜಿ ಮಾಡಿಕೊಳ್ಳಬೇಕಾದರೆ ಹಣ ನೀಡಬೇಕು ಎಂದು ಒತ್ತಾಯಿಸುತ್ತಾರೆ. ನಾವು ಹೇಳುವವರೆಗೂ ನೀವು ವೀಡಿಯೋ ಕಾಲ್‌ನಲ್ಲೇ ಇರಬೇಕು ಎನ್ನುತ್ತಾರೆ. ಇವರು ವಂಚಕರು ಎಂಬುದನ್ನು ಅರಿಯದೇ, ಅವರು ಹೇಳಿದಂತೆ ಸಂತ್ರಸ್ತರು ಕೇಳಿ ವಂಚನೆಗೆ ಒಳಗಾಗುತ್ತಾರೆ. ಈ ರೀತಿಯ ವಂಚನೆಗಳಲ್ಲಿ ಭಾರತೀಯರು ಒಟ್ಟು 120.30 ಕೋಟಿಯಷ್ಟು ಹಣವನ್ನು ಕಳೆದುಕೊಂಡಿದ್ದಾರೆ.

    ಹೂಡಿಕೆ: ಜನರಿಗೆ ವಾಟ್ಸಪ್ ಸಂದೇಶಗಳು ಬರುತ್ತವೆ. ಮನೆಯಲ್ಲೇ ಇದ್ದುಕೊಂಡು ಹೂಡಿಕೆ ಮಾಡಿ ದೊಡ್ಡ ಮೊತ್ತದ ಹಣ ಗಳಿಸಬಹುದು ಎಂದು ಆಮಿಷ ಒಡ್ಡಲಾಗುತ್ತದೆ. ಮೆಸೇಜ್‌ಗಳಿಗೆ ಪ್ರತಿಕ್ರಿಯಿಸಿದರೆ ಒಂದು ಟಾಸ್ಕ್ ಕೊಡುತ್ತಾರೆ. ಅದು ಪೂರ್ಣಗೊಂಡ ಬಳಿಕ ಕೋಡ್ ಕಳಿಸುತ್ತಾರೆ. ಅದನ್ನು ಟೆಲಿಗ್ರಾಮ್‌ನಲ್ಲಿ ತಮ್ಮ ಅಡ್ಮಿನ್‌ನೊಂದಿಗೆ ಹಂಚಿಕೊಳ್ಳಲು ಹೇಳುತ್ತಾರೆ. ಅಡ್ಮಿನ್ ಹಣವನ್ನು ಎಲ್ಲಿ ಹಾಕಬೇಕು ಎಂದು ಹೇಳುತ್ತಾರೆ. ಇಂತಿಷ್ಟು ಮೊತ್ತವನ್ನು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಲು ಪ್ರಯತ್ನಿಸುತ್ತಾರೆ. 1,500 ರೂ.ನಿಂದ 1 ಲಕ್ಷದವರೆಗೂ ಹಣ ಸಂಪಾದಿಸಬಹುದು ಎಂದು ಪುಸಲಾಯಿಸುತ್ತಾರೆ. ಈ ಆಮಿಷವನ್ನು ನಿರಾಕರಿಸುವವರ ಸಂಪರ್ಕ ಕಡಿದುಕೊಳ್ಳುತ್ತಾರೆ. ಹಣದಾಸೆಗೆ ಬಿದ್ದು ಹೂಡಿಕೆ ಮಾಡುವುದಾಗಿ ಹೇಳುವವರಿಗೆ ಒಂದೇ ದಿನದಲ್ಲಿ ಸಾವಿರಾರು ರೂಪಾಯಿಗಳಿಸಬಹುದು ಎಂದು ಪುಸಲಾಯಿಸಿ ಯಾಮಾರಿಸುತ್ತಾರೆ. ಈ ವಂಚನೆಯಲ್ಲಿ ಭಾರತೀಯ ಸಂತ್ರಸ್ತರು 222.58 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

    ರೊಮ್ಯಾನ್ಸ್/ಡೇಟಿಂಗ್: ಹೆಣ್ಣಿನ ಆಸೆ ತೋರಿಸಿ ಪುರುಷರನ್ನು ಬಲೆಗೆ ಬೀಳಿಸುವ ತಂತ್ರ ಇದು. ವಂಚಕರು ನಾವು ವಿದೇಶಿ ಮಹಿಳೆಯರು ಎಂದು ಪುರುಷರನ್ನು ಆನ್‌ಲೈನ್‌ನಲ್ಲಿ ಪರಿಚಯ ಮಾಡಿಕೊಳ್ಳುತ್ತಾರೆ. ಮಹಿಳೆಯರು ಸಂಬಂಧ ಬೆಳೆಸುವ ಅಥವಾ ಮದುವೆಯಾಗುವ ಪ್ರಸ್ತಾಪ ಮುಂದಿಡುತ್ತಾರೆ. ಆಮಿಷಕ್ಕೆ ಒಳಗಾಗುವ ಪುರುಷರು ಒಪ್ಪಿಕೊಂಡರೆ, ಪರಸ್ಪರ ಭೇಟಿಯಾಗುವ ಪ್ರಸ್ತಾಪ ಮಾಡುತ್ತಾರೆ. ನಿಮ್ಮ ಭೇಟಿಯಾಗಲು ವಿದೇಶದಿಂದ ಬರುತ್ತೇನೆ ಎನ್ನುತ್ತಾರೆ. ನಂತರ ಕರೆ ಮಾಡಿ, ನನ್ನನ್ನು ವಿಮಾನನಿಲ್ದಾಣದಲ್ಲಿ ಬಂಧಿಸಿದ್ದಾರೆ. ಹೊರಬರಲು ಹಣದ ಅಗತ್ಯವಿದೆ ಎನ್ನುತ್ತಾರೆ. ಇದನ್ನು ನಂಬಿ ಅನೇಕರು ತಮ್ಮ ಹಣ ಕಳೆದುಕೊಂಡಿದ್ದಾರೆ. ಇಂತಹ ರೊಮ್ಯಾನ್ಸ್/ಡೇಟಿಂಗ್ ವಂಚನೆಯಿಂದಾಗಿ ಭಾರತೀಯರು 13.13 ಕೋಟಿ ರೂ.ನಷ್ಟು ಹಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: Modi 3.0 Cabinet: 72 ಸಚಿವರಲ್ಲಿ 61 ಮಂದಿ ಬಿಜೆಪಿಗರು – ಮಿತ್ರಪಕ್ಷಗಳಲ್ಲಿ ಯಾರಿಗೆ ಎಷ್ಟು ಸ್ಥಾನ?

    ರೂಪಾ ಅಯ್ಯರ್ 24 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್!
    ಇತ್ತೀಚೆಗೆ ಚಲನಚಿತ್ರ ನಿರ್ದೇಶಕಿ ರೂಪಾ ಅಯ್ಯರ್ ಕೂಡ ಸೈಬರ್ ವಂಚನೆ ಜಾಲಕ್ಕೆ ಸಿಲುಕಿಕೊಂಡಿದ್ದರು. ಮನಿಲ್ಯಾಂಡರಿಂಗ್ ಪ್ರಕರಣವೊಂದರಲ್ಲಿ ವಿಚಾರಣೆ ನೆಪದಲ್ಲಿ ರೂಪಾ ಅಯ್ಯರ್ ಅವರನ್ನು ಸೈಬರ್ ಕಳ್ಳರು ‘ಡಿಜಿಟಲ್ ಅರೆಸ್ಟ್’ ಮಾಡಿದ್ದರು. ಪ್ರಕರಣದಿಂದ ಮುಕ್ತಿ ಸಿಗಬೇಕಾದರೆ 30 ಲಕ್ಷ ರೂ. ನೀಡುವಂತೆ ಆಮಿಷವೊಡ್ಡಿದ್ದರು.

    ರೂಪಾ ಅಯ್ಯರ್‌ಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ. ನಿಮ್ಮ ಮೊಬೈಲ್ ನಂಬರ್ ಬ್ಲಾಕ್ ಮಾಡುವುದಾಗಿ ಹೇಳಿದ್ದ. ನಿಮ್ಮ ಮೊಬೈಲ್ ನಂಬರ್ ದೇಶದ್ರೋಹಿ ಚಟುವಟಿಕೆಗೆ ಬಳಕೆ ಆಗುತ್ತಿದೆ ಎಂದಿದ್ದ. ಟ್ರಾಯ್ ಮೇಲಧಿಕಾರಿಗೆ ಕನೆಕ್ಟ್ ಮಾಡುವುದಾಗಿ ಮತ್ತೊಬ್ಬ ವ್ಯಕ್ತಿಗೆ ಕಾಲ್ ಮಾಡಿದ್ದ. ಮತ್ತೊಂದು ಕರೆ ಸ್ವೀಕರಿಸಿದ್ದ ರೂಪಾಗೆ, ನಿಮ್ಮ ಆಧಾರ್ ನಂಬರ್ ಬಳಸಿ ಸಿಮ್ ಖರೀದಿ ಮಾಡಲಾಗಿದೆ. ಆ ಸಿಮ್ ದೇಶದ್ರೋಹಿ ಕೆಲಸಕ್ಕೆ ಬಳಕೆ ಆಗುತ್ತಿದೆ. ಈ ಬಗ್ಗೆ ಮುಂಬೈ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವೀಡಿಯೋ ಕಾಲ್ ಮಾಡುವಂತೆ ರೂಪಾ ಅಯ್ಯರ್ ತಾಕೀತು ಮಾಡಿದ್ದ. ವೀಡಿಯೋ ಕಾಲ್ ಮಾಡಿದಾಗ ಪೊಲೀಸ್ ಸಮವಸ್ತ್ರದಲ್ಲಿದ್ದ ನಕಲಿ ಅಧಿಕಾರಿ, ಮನಿಲ್ಯಾಂಡ್ರಿಂಗ್ ಕೇಸ್‌ನಲ್ಲಿ ತಕ್ಷಣ ನಿಮ್ಮನ್ನು ಅರೆಸ್ಟ್ ಮಾಡಬೇಕು. ನೀವು ಸೆಲೆಬ್ರಿಟಿ ಆದ ಕಾರಣ ಕರ್ನಾಟಕ ಪೊಲೀಸರಿಗೆ ಹೇಳಿದರೆ, ನಿಮ್ಮ ಮರ್ಯಾದೆ ಹೋಗಲಿದೆ. ಯಾವುದೇ ಕಾರಣಕ್ಕೂ ನಿಮ್ಮ ಪೋಷಕರು, ಪತಿಗೂ ಮಾಹಿತಿ ನೀಡಬೇಡಿ. ವರ್ಚುವಲ್‌ನಲ್ಲಿ 24 ಗಂಟೆಗಳ ವಿಚಾರಣೆ ಮತ್ತು ನಿಗಾ ವಹಿಸಬೇಕಿದೆ ಎಂದು 24 ಗಂಟೆ ಡಿಜಿಟಲ್ ಅರೆಸ್ಟ್ ಮಾಡಿದ್ದರು.

    ಯಾವ ವರ್ಷ ಎಷ್ಟು ಕೇಸ್ ದಾಖಲು?
    2023: 15.56 ಲಕ್ಷ ಕೇಸ್‌
    2022: 9.66 ಲಕ್ಷ
    2021: 4.52 ಲಕ್ಷ
    2020: 2.57 ಲಕ್ಷ
    2019: 26,049