Tag: ಆಕ್ಸಿಯಂ 4

  • ಬಾಹ್ಯಾಕಾಶದಲ್ಲಿ ಮೊಳಕೆ ಒಡೆಯಲಿವೆ ಧಾರವಾಡ ಕೃಷಿ ವಿವಿಯ ಮೆಂತೆ, ಹೆಸರು ಕಾಳು!

    ಬಾಹ್ಯಾಕಾಶದಲ್ಲಿ ಮೊಳಕೆ ಒಡೆಯಲಿವೆ ಧಾರವಾಡ ಕೃಷಿ ವಿವಿಯ ಮೆಂತೆ, ಹೆಸರು ಕಾಳು!

    – ಭೂಮಿಗೆ ಮರಳಿದ  ಬಳಿಕ ಸಂಶೋಧನೆ

    ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹೆಸರು ಮತ್ತು ಮೆಂತೆ ಬೀಜಗಳನ್ನು ಆಕ್ಸಿಯಂ-4 ಬಾಹ್ಯಾಕಾಶ ಯೋಜನೆಗಾಗಿ (Axiom Mission 4) ಬುಧವಾರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರವಾನಿಸಲಾಗಿದೆ.

    ಬಾಹ್ಯಾಕಾಶದಲ್ಲಿ ಸಲಾಡ್ ಬೀಜಗಳ ಮೊಳಕೆ ಗಗನಯಾತ್ರಿಗಳ ಆಹಾರ ಪೋಷಣೆ ಸಂಶೋಧನೆ ನಿಟ್ಟಿನಲ್ಲಿ ಪರೀಕ್ಷಾರ್ಥವಾಗಿ ರವಾನಿಸಲಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ (Dharwad Agricultural University) ಕುಲಪತಿ ಪ್ರೊ.ಪಿ.ಎಲ್.ಪಾಟೀಲ ಮಾಹಿತಿ ‌ನೀಡಿದ್ದಾರೆ. ಇದನ್ನೂ ಓದಿ: ಚೆನ್ನಾಗಿ ನಿದ್ರೆ ಮಾಡಿದೆ – ಅಂತರಿಕ್ಷ ಪ್ರಯಾಣದ ಅನುಭವ ಬಿಚ್ಚಿಟ್ಟ ಶುಭಾಂಶು ಶುಕ್ಲಾ

    ಏನಿದು ಸಂಶೋಧನೆ?
    ಗಗನಯಾತ್ರಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಈ ಬೀಜಗಳಿಗೆ ನೀರು ಹಾಕುತ್ತಾರೆ. ಎರಡರಿಂದ ನಾಲ್ಕು ದಿನಗಳಲ್ಲಿ ಇವು ಮೊಳಕೆಯೊಡೆಯುತ್ತವೆ. ಮೊಳಕೆ ಕಾಳುಗಳನ್ನು ಬಾಹ್ಯಾಕಾಶದಲ್ಲಿ ಶೈತ್ಯ ಘಟಕದಲ್ಲಿ ಇಟ್ಟು ನಂತರ ಭೂಮಿಗೆ ತರಲಾಗುತ್ತದೆ.

    ಮೊಳಕೆ ಕಾಳುಗಳನ್ನು ವಾಪಸ್ ಭೂಮಿಗೆ ತಂದ ನಂತರ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲಾಗುತ್ತದೆ. ಮೊಳಕೆ ಪ್ರಮಾಣ, ಅವುಗಳ ಪೋಷಕಾಂಶ ಗುಣಮಟ್ಟ, ಫೈಟೋ-ಹಾರ್ಮೋನ್‌ಗಳ ಚಟುವಟಿಕೆ ಹಾಗೂ ಜೀವಸೂತ್ರ (ಟ್ರಾನ್ಸ್ ಕ್ರಿಪ್ಲೋಮ್) ಪರೀಕ್ಷಿಸಿ ವಿಶ್ಲೇಷಿಸಲಾಗುವುದು, ಅಲ್ಲದೇ ಮೊಳಕೆಯ ಮೇಲೆ ಮೈಕ್ರೋಬಿಯಲ್ ಬೆಳವಣಿಗೆ ಅಧ್ಯಯನ ಮಾಡಲಾಗುತ್ತದೆ.

    ಈ ಸಂಶೋಧನಯು ಭವಿಷ್ಯದಲ್ಲಿ ಅಂತರಿಕ್ಷ-ಯಾನದಲ್ಲಿ ಭಾರತೀಯರ ಆಹಾರದ ಭಾಗವಾಗಬಲ್ಲ ಆರೋಗ್ಯಕರ ಸಲಾಡ್ ತರಕಾರಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮೊಳಕೆಯೊಡೆಯುವ ಬೀಜಗಳನ್ನು ಬೆಳೆಸಲು ಕೇವಲ ಕಂಟೇನರ್, ನೀರು ಇದ್ದರೆ ಸಾಕು. ಮೊಳಕೆ ಕಾಳುಗಳು ಪೋಷಕಾಂಶ ಭರಿತವಾಗಿರುತ್ತವೆ.

    ಗಗನಯಾನ ಮಿಷನ್ ಭವಿಷ್ಯದ ಯಾತ್ರಿಕರ ಆಹಾರ ಗಮನದಲ್ಲಿಟ್ಟುಕೊಂಡು ಈ ಸಂಶೋಧನೆಗೆ ಹೆಸರು, ಮೆಂತೆ ಬೀಜಗಳ ಮೊಳಕೆ ಅಧ್ಯಯನ ಆಯ್ಕೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಜೈ ಹಿಂದ್‌.. ಜೈ ಭಾರತ್..‌: ಬಾಹ್ಯಾಕಾಶದಿಂದಲೇ ಶುಭಾಂಶು ಶುಕ್ಲಾ ಮೊದಲ ಸಂದೇಶ

    ಮೆಂತೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಎಲುಬಿನ ಆರೋಗ್ಯ ಉತ್ತಮಗೊಳಿಸುತ್ತದೆ. ಮೂತ್ರಕೋಶದಲ್ಲಿ ಕಲ್ಲು ರಚನೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಹೃದಯಸಂಬಂಧಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗಗನಯಾತ್ರಿಗಳ ಆರೋಗ್ಯದ ದೃಷ್ಟಿಯಿಂದ ಸಂಶೋಧನೆಗೆ ಈ ಬೀಜಗಳನ್ನು ಅಯ್ಕೆ ಮಾಡಲಾಗಿದೆ ಎಂದು ಪ್ರೊ.ಪಿ.ಎಲ್.ಪಾಟೀಲ ವಿವರಿಸಿದರು.

  • ನಾಳೆ ಬಾಹ್ಯಾಕಾಶ ಯೋಜನೆಯ ಆಕ್ಸಿಯಮ್ 4 ಉಡಾವಣೆ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಪ್ರಯಾಣ

    ನಾಳೆ ಬಾಹ್ಯಾಕಾಶ ಯೋಜನೆಯ ಆಕ್ಸಿಯಮ್ 4 ಉಡಾವಣೆ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲ ಪ್ರಯಾಣ

    – ರಾಕೇಶ್ ಶರ್ಮಾ ಬಳಿಕ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಲಿರುವ ಎರಡನೇ ಗಗನಯಾತ್ರಿ ಶುಭಾಂಶು ಶುಕ್ಲಾ
    – ಶುಕ್ಲಾಗಿದೆ ಬೆಂಗಳೂರು ಸಂಬಂಧ

    ನವದೆಹಲಿ: ಬಾಹ್ಯಾಕಾಶ ಯೋಜನೆಯ ಪ್ರಮುಖ ಯೋಜನೆ ಆಕ್ಸಿಯಮ್ 4ಕ್ಕೆ (Axiom-4) ಮತ್ತೆ ಮೂಹೂರ್ತ ಫಿಕ್ಸ್ ಆಗಿದೆ. ನಾಳೆ ಮತ್ತೆ ಯೋಜನೆ ಚಾಲನೆಯಾಗಲಿದ್ದು, ಖುದ್ದು ನಾಸಾ (NASA) ಮತ್ತು ಸ್ಪೇಸ್ ಎಕ್ಸ್ (SpaceX)  ಈ ಕುರಿತು ಮಾಹಿತಿ ನೀಡಿದೆ.

    ಈ ಹಿಂದೆ ತಾಂತ್ರಿಕ ದೋಷದಿಂದ ಎರಡು ಬಾರಿ ಮುಂದೂಡಿಕೆಯಾಗಿತ್ತು. ಈ ಬಾರಿ ಮತ್ತೆ ಯಾವುದೇ ಸಮಸ್ಯೆ ಇಲ್ಲದೇ ಯಶಸ್ವಿ ಉಡಾವಣೆಯ ಬಗ್ಗೆ ನಾಸಾ ಕೂಡ ವಿಶ್ವಾಸ ವ್ಯಕ್ತಪಡಿಸಿದೆ. ಇನ್ನೂ ಈ ಬಾರಿಯ ಬಾಹ್ಯಾಕಾಶ ಯೋಜನೆಯಲ್ಲಿ ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ನೇತೃತ್ವ ವಹಿಸಿರೋದು ಮತ್ತೊಂದು ವಿಶೇಷ.

    ತಾಂತ್ರಿಕ ತೊಂದರೆಗಳ ಕಾರಣಕ್ಕೆ ಈಗಾಗಲೇ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಆಕ್ಸಿಯಮ್-4 ಬಾಹ್ಯಾಕಾಶ ಕಾರ್ಯಾಚರಣೆಯನ್ನು, ಎಲ್ಲಾ ತಾಂತ್ರಿಕ ದೋಷಗಳನ್ನು ನಿವಾರಣೆ ಮಾಡಿದ ಬಳಿಕ ಕಾರ್ಯಾಚರಣೆಗೆ ಸಿದ್ಧಪಡಿಸಲಾಗಿದೆ. ಬುಧವಾರ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ನಾಸಾ ಮತ್ತು ಸ್ಪೇಸ್ ಎಕ್ಸ್ ಮೂಲಗಳು ಖಚಿತಪಡಿಸಿವೆ. ಬುಧವಾರ ಮಧ್ಯಾಹ್ನ ಭಾರತೀಯ ಕಾಲಮಾನ 12:01ಕ್ಕೆ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್ ಫಾಲ್ಕನ್-9 ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಚಿಮ್ಮಲಿದೆ.

    ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಉಡಾವಣಾ ಸಂಕೀರ್ಣ 39ಎ ನಿಂದ ಉಡಾವಣೆ ಕಾಣಲಿದೆ. ಫಾಲ್ಕನ್ 9 ರಾಕೆಟ್‌ನಲ್ಲಿ ಉಡಾವಣೆ ಬಳಿಕ ಹೊಸ ಸ್ಪೇಸ್‌ಎಕ್ಸ್ ಡ್ರ‍್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ, ಆಕ್ಸಿಯಮ್-4 ಮಿಷನ್‌ನ ಸಿಬ್ಬಂದಿ ಕಕ್ಷೆಯಲ್ಲಿರುವ ಪ್ರಯೋಗಾಲಯವನ್ನು ತಲುಪಲಿದ್ದಾರೆ. ಉದ್ದೇಶಿತ ಡಾಕಿಂಗ್ ಅನ್ನು ಜೂನ್ 26 ಗುರುವಾರ ಸಂಜೆ ಭಾರತೀಯ ಕಾಲಮಾನ 4:30ಕ್ಕೆ ಕೈಗೊಳ್ಳಲಾಗುವ ಬಗ್ಗೆ ನಾಸಾ ಮಾಹಿತಿ ನೀಡಿದೆ.

    ಈ ಹಿಂದೆ ಎರಡು ಬಾರಿ ಪ್ರಯತ್ನ ವಿಫಲ:
    ಈ ಹಿಂದೆ ಮೊದಲ ಉಡಾವಣೆ ದಿನಾಂಕವನ್ನು ಕಳೆದ ತಿಂಗಳ ಮೇ 29ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಫ್ಲೋರಿಡಾದಲ್ಲಿ ಹವಾಮಾನ ಸಮಸ್ಯೆ ಎದುರಾಗಿದ್ದ ಹಿನ್ನೆಲೆ ಉಡಾವಣೆಯನ್ನು ಮುಂದೂಡಲಾಗಿತ್ತು. ಅದಾದ ಬಳಿಕ ಅಂದರೆ ಜೂನ್ 8, 10, 11, 19 ಮತ್ತು 22 ಕ್ಕೆ ಸತತವಾಗಿ ಮುಂದೂಡಲಾಯಿತು. ಕಾರಣ ಸ್ಪೇಸ್‌ಎಕ್ಸ್ ಫಾಲ್ಕನ್ -9 ರಾಕೆಟ್‌ನ ಮೊದಲ ಹಂತದಲ್ಲಿ ತಾಂತ್ರಿಕ ದೋಷ ಪತ್ತೆಯಾಗಿತ್ತು. ಫಾಲ್ಕನ್ -9 ರಾಕೆಟ್‌ನಲ್ಲಿ ಥ್ರಸ್ಟರ್ ಮತ್ತು ಆಕ್ಸಿಡೈಸರ್ ಸೋರಿಕೆಯ ಸಮಸ್ಯೆಗಳು ಕಂಡುಬಂದಿದ್ದರಿಂದ, ಉಡಾವಣೆಯನ್ನು ಮುಂದೂಡುವ ನಿರ್ಧಾರ ಕೈಗೊಂಡಿದ್ದಾಗಿ ಸ್ಪೇಸ್‌ಎಕ್ಸ್ ತಿಳಿಸಿತ್ತು. ರಾಕೆಟ್‌ನಲ್ಲಿ ದ್ರವ ಆಮ್ಲಜನಕ ಸೋರಿಕೆ ಪರಿಣಾಮವಾಗಿ ರಾಕೆಟ್‌ನ ದುರಸ್ತಿ ಕಾರ್ಯಕ್ಕೆ ಸ್ಪೇಸ್‌ಎಕ್ಸ್ ಮುಂದಾಗಿತ್ತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಇಸ್ರೋ ಅಧ್ಯಕ್ಷ ಡಾ.ವಿ. ನಾರಾಯಣನ್ ನೇತೃತ್ವದ ಭಾರತೀಯ ವಿಜ್ಞಾನಿಗಳ ತಂಡ, ರಾಕೆಟ್‌ನ ಪೂರ್ಣ ದುರಸ್ತಿಯ ದೃಢೀಕರಣವನ್ನು ಬಯಸಿತ್ತು. ಇಸ್ರೋದ ಒತ್ತಡಕ್ಕೆ ಮಣಿದ ಸ್ಪೇಸ್‌ಎಕ್ಸ್ ರಾಕೆಟ್‌ನ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದ್ದು, ಇದೀಗ ಜೂನ್ 25ರಂದು ಅಂದರೆ ನಾಳೆ ಉಡಾವಣೆಗೆ ಸಿದ್ಧತೆ ಮಾಡಿಕೊಂಡಿದೆ.

    ಕ್ರ‍್ಯೂ ಮೆಂಬರ್ಸ್:
    ಪೆಗ್ಗಿ ವಿಟ್ಸನ್, ಪೈಲಟ್ ಶುಭಾಂಶು ಶುಕ್ಲಾ, ಮತ್ತು ಸ್ಲಾವೋಸ್ಜ್ ಉಜ್ನಾನ್ಸ್ಕಿ ವಿಸ್ನಿವ್ಸ್ಕಿ ಮತ್ತು ಟಿಬೋರ್ ಕಮು, ಸೇರಿದಂತೆ ಮಿಷನ್ ತಜ್ಞರು ಮತ್ತು ಸಿಬ್ಬಂದಿ ಫ್ಲೋರಿಡಾದಲ್ಲಿ ಕ್ವಾರಂಟೈನ್‌ನಲ್ಲಿರಲಿದ್ದಾರೆ. ಬಾಹ್ಯಾಕಾಶಕ್ಕೆ ಹೊರಟ ಸಿಬ್ಬಂದಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 14 ದಿನಗಳವರೆಗೆ ಇರಲಿದ್ದು, ವೈಜ್ಞಾನಿಕ ಪ್ರಯೋಗಗಳನ್ನು ಮಾಡಲಿದ್ದಾರೆ.

    ಶುಭಾಂಶು ಶುಕ್ಲಾ ಹಿನ್ನೆಲೆ:
    ಭಾರತೀಯ ಗಗನಯಾತ್ರಿ ರಾಕೇಶ್ ಶರ್ಮಾರ 1984ರ ಕಾರ್ಯಾಚರಣೆಯ ಬಳಿಕ ಬಾಹ್ಯಾಕಾಶಕ್ಕೆ ಪ್ರಯಾಣಿಸಲಿರುವ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಶುಕ್ಲಾ ಪಾತ್ರರಾಗಲಿದ್ದಾರೆ.

    39 ವರ್ಷದ ಶುಕ್ಲಾ ಮೂಲತಃ ಉತ್ತರಪ್ರದೇಶದ ಲಕ್ನೋದವರು. ಅಲಿಗಂಜ್‌ನ ಮಾಂಟೆಸ್ಸರಿ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. 1999ರ ಕಾರ್ಗಿಲ್ ಯುದ್ಧದಿಂದ ಪ್ರೇರಿತರಾದ ಶುಕ್ಲಾರವರು, ಸ್ವತಂತ್ರವಾಗಿ ಯುಪಿಎಸ್‌ಸಿ ಎನ್‌ಡಿಎ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಉತ್ತೀರ್ಣರಾಗಿದ್ದರು. ಬಳಿಕ ಮಿಲಿಟರಿ ತರಬೇತಿಯನ್ನು ಪೂರ್ಣಗೊಳಿಸಿ 2005ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದರು.

    ಬಳಿಕ ಅವರು ಫ್ಲೈಯಿಂಗ್ ಬ್ರಾಂಚ್‌ಗೆ ಆಯ್ಕೆಯಾದರು ಮತ್ತು ಭಾರತೀಯ ವಾಯುಪಡೆ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಜೂನ್ 2006ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ಫ್ಲೈಯಿಂಗ್ ಆಫೀಸರ್ ಆಗಿ ನಿಯೋಜನೆಯಾದರು.

    ಶುಕ್ಲಾ ಭಾರತೀಯ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕಾಗಿ, ಭಾರತೀಯ ವಾಯುಪಡೆಯ ಸಂಸ್ಥೆಯಾದ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್‌ಗೆ 2019ರಲ್ಲಿ ಶುಕ್ಲಾ ಅವರನ್ನು ಗಗನಯಾತ್ರಿಯಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಸೇರಿಸಿಕೊಂಡಿತು. ನಂತರ, ಅವರನ್ನು ಐಎಎಂ ಮತ್ತು ಇಸ್ರೋ ಅಂತಿಮ ನಾಲ್ಕರಲ್ಲಿ ಸೇರಿಸಿತು. ಬಳಿಕ 2020ರಲ್ಲಿ, ರಷ್ಯಾದ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಇತರ ಮೂವರು ಆಯ್ದಾ ಗಗನಯಾತ್ರಿಗಳೊಂದಿಗೆ ಮೂಲಭೂತ ತರಬೇತಿಗಾಗಿ ತೆರಳಿದ್ದರು. 2021ರಲ್ಲಿ ತರಬೇತಿ ಪೂರ್ಣಗೊಂಡಿತು. ನಂತರ ಭಾರತಕ್ಕೆ ಮರಳಿದ ಶುಕ್ಲಾ ಬೆಂಗಳೂರಿನಲ್ಲಿರುವ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು, ಇದೇ ಅವಧಿಯಲ್ಲಿ, ಬೆಂಗಳೂರಿನ ಐಐಎಸ್ಸಿಯಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು.

    ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನಕ್ಕಾಗಿ ತಿರುವನಂತಪುರಂನಲ್ಲಿರುವ ಇಸ್ರೋದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾತ್ರಿ ತಂಡದ ಸದಸ್ಯರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ 2024 ಫೆಬ್ರವರಿ 27 ರಂದು ಘೋಷಿಸಿದಾಗ, ಗಗನಯಾತ್ರಿ ತಂಡದ ಸದಸ್ಯರಾಗಿ ಅವರ ಹೆಸರನ್ನು ಮೊದಲು ಅಧಿಕೃತವಾಗಿ ಸಾರ್ವಜನಿಕವಾಗಿ ಘೋಷಿಸಲಾಯಿತು.

    ಭಾರತೀಯ ವಾಯುಪಡೆ ಪೈಲಟ್ ಅಗಿರುವ ತಂಡದ ಕ್ಯಾಪ್ಟನ್ ಶುಭಾಂಶು ಶುಕ್ಲಾ ಈ ಹಿಂದೆ ಭಾರತೀಯ ವಾಯುಪಡೆಯಲ್ಲಿ ಮಿಗ್ -29 ಮತ್ತು ಸು -30, ಎಂಕೆಐನಂತಹ ಜೆಟ್‌ಗಳಲ್ಲಿ 2000ಕ್ಕಿಂತಲೂ ಹೆಚ್ಚು ಗಂಟೆಗಳ ಕಾಲ ಹಾರಟ ನಡೆಸಿದ ಅನುಭವ ಹೊಂದಿದ್ದು, ಈ ಬಾರಿಯ ಬಾಹ್ಯಾಕಾಶದ ಯೋಜನೆಯಲ್ಲಿ ಮಿಷನ್ ಪೈಲಟ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

    ಶುಕ್ಲಾದಂತ ವೈದ್ಯರಾಗಿರುವ ಡಾ.ಕಮ್ನಾ ಮಿಶ್ರಾರನ್ನ ವಿವಾಹವಾಗಿದ್ದು, ಕಮ್ನಾ ಮಿಶ್ರ ಶುಕ್ಲಾರ ಬಾಲ್ಯ ಗೆಳತಿ ಕೂಡ. ದಂಪತಿಗೆ ಒಬ್ಬ ಮಗನಿದ್ದಾನೆ. ಶುಕ್ಲಾ ತಂದೆ ಶಂಭು ದಯಾಳ್ ಶುಕ್ಲಾ ನಿವೃತ್ತ ಸರ್ಕಾರಿ ಅಧಿಕಾರಿ, ತಾಯಿ ಆಶಾ ಶುಕ್ಲಾ ಗೃಹಿಣಿ. ಶುಕ್ಲಾರ ಅಕ್ಕ ನಿಧಿ ಎಂಬಿಎ ಪದವಿ ಪಡೆದಿದ್ದಾರೆ. ಇನ್ನೊಬ್ಬ ಅಕ್ಕ ಸುಚಿ ಮಿಶ್ರಾ ಶಾಲಾ ಶಿಕ್ಷಕಿಯಾಗಿದ್ದು, ಶುಕ್ಲಾ ಕಿರಿಯ ಮಗ.