Tag: ಆಕ್ರೋಶ

  • ಮತ್ತೆ ದರ್ಶನ್, ಯಶ್ ವಿರುದ್ಧ ಸಿಎಂ ಕುಮಾರಸ್ವಾಮಿ ಕಿಡಿ

    ಮತ್ತೆ ದರ್ಶನ್, ಯಶ್ ವಿರುದ್ಧ ಸಿಎಂ ಕುಮಾರಸ್ವಾಮಿ ಕಿಡಿ

    ರಾಮನಗರ: ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತೊಮ್ಮೆ ನಟರಾದ ದರ್ಶನ್ ಹಾಗೂ ಯಶ್ ವಿರುದ್ಧ ಸಿಡಿದೆದ್ದಿದ್ದಾರೆ.

    ರಾಮನಗರದಲ್ಲಿ ಮಾತನಾಡಿದ ಸಿಎಂ, “ಜನರು ದುಡಿಯುವ ಎತ್ತುಗಳನ್ನು ಉಳಿಸಬೇಕು. ಮೇವು ಹಾಕುವುದು ನಿಮ್ಮ ಕರ್ತವ್ಯ. ಈಗ ಹಲವಾರು ಎತ್ತುಗಳು ಬರುತ್ತೆ ಎಂದು ಹೇಳುತ್ತಾರೆ. ಆದರೆ ಆ ಎತ್ತುಗಳಿಗೆ ಹೊಲ ಉಳುವುದಕ್ಕೆ ಬರುವುದಿಲ್ಲ. ಕಳ್ಳ ಎತ್ತುಗಳು. ನೀವು ಹಾಕಿರುವ ಬೆಳೆಯನ್ನು ತಿಂದುಕೊಂಡು ಹೋಗಲು ಬರುತ್ತಿವೆ. ದುಡಿಯುವ ಎತ್ತುಗಳು ಯಾವುದು ಕಳ್ಳ ಎತ್ತುಗಳ ಯಾವುದು ಎನ್ನುವುದು ನೀವೇ ಯೋಚನೆ ಮಾಡಿ. ಈಗ ನಿಮ್ಮ ಅಭಿವೃದ್ಧಿಗೆ ನಾವು ಒಂದಾಗಿದ್ದೇವೆ. ಇಲ್ಲಿ ಯಾವುದೇ ರಾಜಕೀಯ ಇಲ್ಲ” ಎಂದು ಜೋಡೆತ್ತುಗಳ ವಿರುದ್ಧ ಅಬ್ಬರಿಸಿದ್ದಾರೆ.

    ಬಳಿಕ ಮಾತನಾಡಿದ ಬೆಂಗಳೂರು ಅಭಿವೃದ್ಧಿಗೆ 1 ಲಕ್ಷ ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದೇವೆ. ಆದರೆ ಬೆಂಗಳೂರು ಜನರು ಇನ್ನೂ ಮೋದಿಗೆ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ. ಬೆಂಗಳೂರಿಗಾಗಿ ಎಷ್ಟೇ ಅಭಿವೃದ್ಧಿ ಮಾಡಿದ್ರು ಎಲ್ಲೋ ಒಂದು ಕಡೆ ಮೋದಿ ಬಗ್ಗೆ ಅವರಲ್ಲಿ ಒಲವಿದೆ ಎಂದು ಹೇಳಿದ್ದಾರೆ.

    “ಒಹೋ ಇವು ಜೋಡೆತ್ತುಗಳಂತೆ, ಇವು ಉಳುವ ಎತ್ತುಗಳಲ್ಲ. ರೈತರು ಬೆಳೆದ ಪೈರನ್ನು ಅರ್ಧ ರಾತ್ರಿ ಹೋಗಿ ತಿನ್ನುವ ಎತ್ತುಗಳು. ಜಿಲ್ಲೆಯಲ್ಲಿ ಹಲವು ದುರಂತಗಳು ನಡೆದಾಗ ಎಲ್ಲಿದ್ದರು? ಅಮ್ಮನ ಮೇಲಿನ ಪ್ರೀತಿಯಿಂದ ಅವರನ್ನು ಉಳಿಸಲು ಬಂದಿದ್ದಾರಲ್ಲ. ಅಂದು ನಡೆದ ದುರಂತದಲ್ಲಿ ನೀರಲ್ಲಿ ಬಿದ್ದಿದ್ದ ಶವಗಳನ್ನು ತೆಗೆಯಲು ಅವರು ಬಂದಿದ್ದರಾ” ಎಂದು ಪ್ರಶ್ನಿಸಿ ಮೊನ್ನೆ ಸಿಎಂ ದರ್ಶನ್ ಮತ್ತು ಯಶ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

  • ನಿರ್ಮಾಣ ಮಾಡಿದ್ದ ಒಂದೇ ದಿನಕ್ಕೆ ಕಿತ್ತುಹೋಯ್ತು ರಸ್ತೆ!

    ನಿರ್ಮಾಣ ಮಾಡಿದ್ದ ಒಂದೇ ದಿನಕ್ಕೆ ಕಿತ್ತುಹೋಯ್ತು ರಸ್ತೆ!

    ರಾಯಚೂರು: ಶನಿವಾರದಂದು ಹಾಕಲಾಗಿದ್ದ ಡಾಂಬರ್ ರಸ್ತೆ ಕೇವಲ ಒಂದೇ ದಿನಕ್ಕೆ ಕಿತ್ತುಹೋಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ತೊಂಡೆಹಾಳ ಗ್ರಾಮದಲ್ಲಿ ನಡೆದಿದೆ.

    ನಿನ್ನೆ ಹಾಕಿದ ರಸ್ತೆ ಒಂದೇ ದಿನದಲ್ಲಿ ಕಿತ್ತುಹೋಗಿದೆ. ಈ ರೀತಿ ಕಳಪೆ ಕಾಮಗಾರಿಯಿಂದ ರಸ್ತೆ ಕಿತ್ತು ಬಂದಿರುವುದಕ್ಕೆ ತೊಂಡೆಹಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 48 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಬೇಕಾದ 1 ಕಿ.ಮೀ ಡಾಂಬರ್ ರಸ್ತೆಯನ್ನ ರಾತ್ರೋ ರಾತ್ರಿ ಮಾಡಿ ಮುಗಿಸಿದ್ದಾರೆ.

    20 ವರ್ಷಗಳಿಂದ ರಸ್ತೆಯಿಲ್ಲದ ಗ್ರಾಮಕ್ಕೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆಯಲ್ಲಿ 48 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. ಆದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದ ತೀರಾ ಕಳಪೆ ಮಟ್ಟದ ಡಾಂಬರೀಕರಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಶನಿವಾರ ಹಾಕಿದ್ದ ರಸ್ತೆ ಇಂದು ಬೆಳಗ್ಗೆ ನೋಡಿದಾಗ ಎಲ್ಲವೂ ಕಿತ್ತು ಹೋಗಿತ್ತು. ಈ ರಸ್ತೆಯ ಮೇಲೆ ನಡೆದರೆ ಸಾಕು ಡಾಂಬರ್ ಕಿತ್ತು ಬರುತ್ತಿದೆ. ವರ್ಷಾನೂ ಗಟ್ಟಲೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಈ ಭಾಗದ ಜನರು ಒದ್ದಾಡುತ್ತಿದ್ದರು. ಈಗಲಾದರೂ ರಸ್ತೆ ವ್ಯವಸ್ಥೆ ಆಗುತ್ತಿದೆಯಲ್ಲ ಅಂತ ಖುಷಿ ಪಟ್ಟಿದ್ದರು. ಆದರೆ ತೀರ ಕೆಳಮಟ್ಟದ ಕಾಮಗಾರಿ ಮಾಡಿ ಬೇಜವಾಬ್ದಾರಿ ತೋರಿದಕ್ಕೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ. ಅಲ್ಲದೆ ಕೂಡಲೇ ಪುನಃ ಕಾಮಗಾರಿ ನಡೆಸಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ದೇವೇಗೌಡರ ಕುಟುಂಬದ ವಿರುದ್ಧ ನಿಂತ್ರೆ ಅವರನ್ನು ತುಳಿಯುವ ಕೆಲಸ ಮಾಡ್ತಾರೆ: ಜಗದೀಶ್ ಶೆಟ್ಟರ್

    ದೇವೇಗೌಡರ ಕುಟುಂಬದ ವಿರುದ್ಧ ನಿಂತ್ರೆ ಅವರನ್ನು ತುಳಿಯುವ ಕೆಲಸ ಮಾಡ್ತಾರೆ: ಜಗದೀಶ್ ಶೆಟ್ಟರ್

    ಹುಬ್ಬಳ್ಳಿ: ಸುಮಲತಾ ಅಂಬರೀಶ್ ಬಗ್ಗೆ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಅವರು ಬಹಳ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ದೇವೇಗೌಡರ ಮನೆತನದ ವಿರುದ್ಧ ಯಾರು ಸ್ಪರ್ಧೆ ಮಾಡಿದರು ಅವರನ್ನ ತುಳಿಯುವ ಕೆಲಸ ಮಾಡ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ ಸುಮಲತಾಗೆ ರಾಜಕಾರಣ ಬೇಕಾ ಎಂಬ ರೇವಣ್ಣ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಇದು ಪ್ರಜಾಪ್ರಭುತ್ವ ಸುಮಲತಾ ಅವರಿಗೆ ಸ್ಪರ್ಧೆ ಮಾಡುವ ಹಕ್ಕಿದೆ. ಅವರು ಸ್ಪರ್ಧೆ ಮಾಡುತ್ತಾರೆಂದು ಈ ರೀತಿ ಕೀಳು ಮಟ್ಟದ ಹೇಳಿಕೆ ನೀಡಬಾರದು. ಅವರು ಸ್ಪರ್ಧೆ ಮಾಡಿದರೆ ರೇವಣ್ಣ ಅವರಿಗೆ ಏನೂ ತೊಂದರೆ. ಈ ಮೊದಲು ದೇವೇಗೌಡರು ಮತ್ತು ಅವರ ಮಕ್ಕಳು ರಾಜಕಾರಣದಲ್ಲಿದ್ದರು. ಈಗ ಮೊಮ್ಮಕ್ಕಳು, ಅವರು ಸೊಸೆಯಂದಿರು ರಾಜಕೀಯಕ್ಕೆ ಬಂದಿದ್ದಾರೆ. ಅವರಿಗೆ ಮುಂದಿನ ದಿನಗಳಲ್ಲಿ ಜನರೇ ಉತ್ತರ ನೀಡುತ್ತಾರೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ, ಇದೆಲ್ಲಾ ಬೇಕಾ?: ಸುಮಲತಾ ವಿರುದ್ಧ ರೇವಣ್ಣ ಕಿಡಿ

    ಹೆಣ್ಣುಮಕ್ಕಳ ಬಗ್ಗೆ ಈ ರೀತಿ ಒಬ್ಬ ರಾಜಕಾರಣಿ ಮಾತನಾಡುವುದು ಸರಿಯಲ್ಲ. ಅಂಬರೀಶ್ ಅವರ ಧರ್ಮಪತ್ನಿ ಬಗ್ಗೆ ಈ ರೀತಿ ತಳಮಟ್ಟದ ರಾಜಕಾರಣ ಮಾಡಬಾರದು. ರಾಮನಗರ, ಮಂಡ್ಯ ಸೇರಿದಂತೆ ಕೆಲವು ಜಿಲ್ಲೆಗಳನ್ನ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಜೆಡಿಎಸ್ ಅವರು ಹೊರಟಿದ್ದಾರೆ. ಮಹಿಳಾ ದಿನಾಚರಣೆ ದಿನದಂದೇ ಒಬ್ಬ ಮಹಿಳೆಯ ಬಗ್ಗೆ ಕೀಳು ಮಟ್ಟದ ಭಾಷೆ ಬಳಸಿದ್ದು ಖಂಡನೀಯ. ವಿಧವೆ ಎಂಬುದನ್ನು ನೋಡದೆ ಇಂತಹ ಪದಗಳನ್ನ ಬಳಸಿರುವುದು ಅವರ ಚಾರಿತ್ರ್ಯವನ್ನ ತೋರಿಸುತ್ತದೆ ಎಂದು ರೇವಣ್ಣ ವಿರುದ್ಧ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಲ್ವಾಮಾ ದಾಳಿ ಆಕ್ಸಿಡೆಂಟ್ ಅನ್ನೋದಕ್ಕೆ ನಿಮ್ಮ ಬಳಿ ದಾಖಲೆ ಇದೆಯಾ? ಹುತಾತ್ಮ ಯೋಧನ ಪತ್ನಿ

    ಪುಲ್ವಾಮಾ ದಾಳಿ ಆಕ್ಸಿಡೆಂಟ್ ಅನ್ನೋದಕ್ಕೆ ನಿಮ್ಮ ಬಳಿ ದಾಖಲೆ ಇದೆಯಾ? ಹುತಾತ್ಮ ಯೋಧನ ಪತ್ನಿ

    ಮಂಡ್ಯ: ಪುಲ್ವಾಮಾ ಪ್ರಕರಣ ಒಂದು ಆಕ್ಸಿಡೆಂಟ್ ಎಂದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಹುತಾತ್ಮ ಯೋಧ ಗುರು ಪತ್ನಿ ಕಣ್ಣೀರು ಹಾಕುತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ, ಸೈನಿಕರ ಪ್ರಾಣಕ್ಕೆ ಬೆಲೆಯೇ ಇಲ್ಲವೆ? ಚಳಿ, ಮಳೆ, ಬಿಸಿಲೆನ್ನದೆ, ತಿನ್ನಲು ಊಟ ಇಲ್ಲದೆ ದೇಶ ಕಾಯುತ್ತಾರೆ. ಅಂಥವರ ಪ್ರಾಣಕ್ಕೆ ಬೆಲೆ ಕಟ್ಟಬೇಡಿ. ಯಾವ ಉದ್ದೇಶದಿಂದ ಆಕ್ಸಿಡೆಂಟ್ ಎಂಬ ಪದ ಬಳಸಿದ್ದೀರಿ ಗೊತ್ತಿಲ್ಲ. ನಿಮ್ಮ ಬಳಿ ದಾಖಲೆ ಇದ್ದರೆ ತೋರಿಸಿ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಕಳೆದುಕೊಂಡು ಅವರ ಕುಟುಂಬಗಳು ಎಷ್ಟು ಕಷ್ಟ ಪಡುತ್ತಿದೆ ನಿಮಗೆ ಗೊತ್ತೆ? ಆಪ್ತರನ್ನು ಕಳೆದುಕೊಂಡಿದ್ದರೆ ನಿಮಗೆ ನಮ್ಮ ನೋವು ಗೊತ್ತಾಗುತ್ತಿತ್ತು. ಈ ರೀತಿ ಹೇಳಲು ನಿಮಗೆ ಹೇಗೆ ಧೈರ್ಯ ಬಂತು? ಪುಲ್ವಾಮಾ ದಾಳಿ ಒಂದು ಆಕ್ಸಿಡೆಂಟ್ ಅಂತ ಹೇಳಿ ಯೋಧರ ಸಾವಿಗೆ ಅವಮಾನ ಮಾಡಬೇಡಿ ಎಂದು ದಿಗ್ವಿಜಯ್ ಸಿಂಗ್ ಹೇಳಿಕೆಗೆ ಆಕ್ರೋಶ ಹೊರಹಾಕಿದ್ದಾರೆ.

    ನಮ್ಮ ಪರಿಸ್ಥಿತಿ ಅವರಿಗೆ ಗೊತ್ತಿಲ್ಲ. ನಿಮ್ಮ ಮನೆಯಲ್ಲಿ, ನಿಮ್ಮ ಮನೆ ಮಕ್ಕಳು ಈ ರೀತಿ ಮೃತಪಟ್ಟಿದ್ದರೆ ಏನು ಮಾಡುತ್ತಿದ್ದಿರಿ? ಕಳೆದುಕೊಂಡಿರುವ ನೋವು ನಮಗೆ ಗೊತ್ತು. ದೇಶಕ್ಕಾಗಿ ಪ್ರಾಣ ಕೊಟ್ಟಿರುವುದಕ್ಕೆ ಬೆಲೆಯೇ ಇಲ್ವಾ? ದಯವಿಟ್ಟು ಅಪಪ್ರಚಾರ ಮಾಡಬೇಡಿ. ಸತ್ಯ ತಿಳಿದು ಮಾತನಾಡಿ. ದಯಮಾಡಿ ಆಕ್ಸಿಡೆಂಟ್ ಎಂಬ ಪದ ಬಳಸಬೇಡಿ ಎಂದು ಕಣ್ಣೀರು ಹಾಕುತ್ತ ಕಲಾವತಿ ಅವರು ವಿನಂತಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತದ ರೈತರು ಕೊಟ್ಟ ಶಾಕಿಗೆ ಪಾಕಿನಲ್ಲಿ ಗಗನಕ್ಕೇರಿತು ಟೊಮೆಟೊ ದರ!

    ಭಾರತದ ರೈತರು ಕೊಟ್ಟ ಶಾಕಿಗೆ ಪಾಕಿನಲ್ಲಿ ಗಗನಕ್ಕೇರಿತು ಟೊಮೆಟೊ ದರ!

    ನವದೆಹಲಿ: ಪುಲ್ವಾಮಾ ಭಯಾನಕ ದಾಳಿ ಬಳಿಕ ಪಾಕಿಸ್ತಾನಕ್ಕೆ ಆರ್ಥಿಕ ಹೊಡೆತ ಬೀಳಲು ಆರಂಭವಾಗಿದೆ. ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.

    ಲಾಹೋರ್ ನಲ್ಲಿ ಒಂದು ಕಿಲೋ ಟೊಮೆಟೊ ಬೆಲೆ ಪಾಕ್ ಕರೆನ್ಸಿಯಲ್ಲಿ 180 ರೂಪಾಯಿಯ ಗಡಿ ದಾಟಿದ್ದು, ಇದರಿಂದ ಪಾಕ್ ಗ್ರಾಹಕರು ಕಂಗೆಟ್ಟು ಹೋಗಿದ್ದಾರೆ. ಇದರ ಜೊತೆಯಲ್ಲಿ ಬದನೆಕಾಯಿ, ಮೂಲಂಗಿ, ಕೋಸು, ಹಸಿ ಮೆಣಸಿನಕಾಯಿ ಮುಂತಾದ ತರಕಾರಿ ಹಾಗೂ ಕೆಲವು ಹಣ್ಣುಗಳ ಬೆಲೆಯೂ ಕೂಡ ಸಿಕ್ಕಾಪಟ್ಟೆ ಏರಿದೆ.

    ನಮ್ಮ ಆಹಾರ ತಿಂದು, ನಮ್ಮ ಸೈನಿಕರ ಮೇಲೆ ದಾಳಿ ನಡೆಸುವ ಪಾಕಿಸ್ತಾನಕ್ಕೆ ನಾವು ಬೆಳೆದ ಟೊಮೆಟೋ ಪೂರೈಕೆ ಮಾಡುವುದಿಲ್ಲ. ಪಾಕಿಸ್ತಾನಕ್ಕೂ ಸಹ ಬೇರೆ ಕಡೆಯಿಂದ ತರಕಾರಿಗಳು ರಫ್ತು ಆಗಬಾರದು ಎಂದು ಮಧ್ಯಪ್ರದೇಶದ ಜಭುವಾ ಜಿಲ್ಲೆಯ ರೈತರು ಹೇಳಿದ್ದಾರೆ.

    ದೆಹಲಿಯ ಅಜಾದ್‍ಪುರ ಮಂಡಿಯಿಂದ ಪಾಕಿಸ್ತಾನಕ್ಕೆ ಬಹುತೇಕ ತರಕಾರಿಗಳು ರಫ್ತಾಗುತ್ತಿತ್ತು. ಪ್ರತಿದಿನ 750- 800 ಟ್ರಕ್ ಗಳಲ್ಲಿ ಪಾಕಿಸ್ತಾನಕ್ಕೆ ತರಕಾರಿಗಳು ರಫ್ತಾಗುತಿತ್ತು. ಈಗ ಅಲ್ಲಿಂದ ಸಹ ತರಕಾರಿ ರಫ್ತಾಗುತ್ತಿಲ್ಲ. ಎಲ್ಲ ಕಡೆ ರಫ್ತು ನಿಂತ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ತರಕಾರಿಗಳ ಬೆಲೆ ಏರಿಕೆಯಾಗಿದೆ.

    ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟದ ಸ್ಥಾನವನ್ನು ಭಾರತ ಹಿಂಪಡೆಯಲಾಗಿದ್ದು, ಇದರೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ರಫ್ತು ಆಗುವ ಎಲ್ಲಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇ.200 ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಪಾಕಿಸ್ತಾನ ಆರ್ಥಿಕತೆಗೆ ಭಾರತ ಪೆಟ್ಟು ನೀಡಿದೆ. ಅಕ್ಕಿ, ತರಕಾರಿ, ಪೀಠೋಪಕರಣಗಳು, ಸಿಮೆಂಟ್, ಚರ್ಮದ ಸರಕು, ಜವಳಿ ಬಟ್ಟೆ, ವಿದ್ಯುತ್ ವಸ್ತುಗಳು, ಶಸ್ತ್ರಚಿಕಿತ್ಸೆ ವಸ್ತುಗಳು ಸೇರಿ ಹಲವು ವಸ್ತುಗಳನ್ನು ಪಾಕಿಸ್ತಾನದಿಂದ ಭಾರತ ಆಮದು ಮಾಡಿಕೊಳ್ಳುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕರುನಾಡ ಜೀವನದಿಗೆ ಒಡಲಲ್ಲೇ ಕಂಟಕ – ಕೊಡಗಿನಲ್ಲೇ ವಿಷವಾಗುತ್ತಿದ್ದಾಳೆ ಕಾವೇರಿ!

    ಕರುನಾಡ ಜೀವನದಿಗೆ ಒಡಲಲ್ಲೇ ಕಂಟಕ – ಕೊಡಗಿನಲ್ಲೇ ವಿಷವಾಗುತ್ತಿದ್ದಾಳೆ ಕಾವೇರಿ!

    ಮಡಿಕೇರಿ: ಕಾವೇರಿ ನದಿ ಕೋಟ್ಯಂತರ ಜನರ ಬದುಕನ್ನ ಬಂಗಾರವಾಗಿಸಿರುವ ಜೀವದಾತೆ. ಆದೆ ಕರುನಾಡ ಜೀವನದಿಗೆ ಇದೀಗ ಒಡಲಲ್ಲೇ ಕಂಟಕ ಎದುರಾಗಿದೆ. ಕೋಟ್ಯಂತರ ಜನರ ಪಾಲಿಗೆ ಜೀವಜಲವಾಗಿರುವ ಕಾವೇರಿ ನೀರು ಎಲ್ಲಿ ವಿಷಜಲವಾಗುತ್ತದೋ ಎನ್ನುವ ಭಯ ಆರಂಭವಾಗಿದೆ.

    ಹೌದು, ಇದೀಗ ಕೊಡಗಿನ ಕಾಫಿ ತೋಟಗಳಲ್ಲಿ ಕಾಫಿ ಪಲ್ಪರ್ ನಡೆಯುತ್ತಿದ್ದು, ಕೆಲವು ಕಾಫಿ ತೋಟದ ಮಾಲೀಕರು ಅದರಿಂದ ಬರುವ ತ್ಯಾಜ್ಯವನ್ನ ನೇರವಾಗಿ ಕಾವೇರಿ ನದಿಗೆ ಹರಿಸುತ್ತಿದ್ದಾರೆ. ಇದರಿಂದ ತಲಕಾವೇರಿಯಿಂದ ಪರಿಶುದ್ಧವಾಗಿ ಹರಿದು ಬರುವ ಕಾವೇರಿ, ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಬರುತ್ತಲೇ ಕಲುಷಿತಗೊಳ್ಳುತ್ತಿದ್ದಾಳೆ. ಈ ಭಾಗದಲ್ಲಿರೋ ಕಾಫಿ ತೋಟದ ಮಾಲೀಕರು ನೇರವಾಗಿ ಕಾಫಿ ಪಲ್ಪರ್ ನೀರನ್ನ ಕಾವೇರಿ ನದಿಗೆ ಬಿಡುತ್ತಿದ್ದಾರೆ.

    ಕೆಲವು ಕಾಫಿ ತೋಟದ ಮಾಲೀಕರು ಪ್ರಭಾವಿಗಳಾಗಿರುವುದರಿಂದ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಗ್ರಾಮ ಪಂಚಾಯತಿಯವರು ಮೀನಾಮೇಷ ಎಣಿಸುತ್ತಿದ್ದಾರೆ ಅನ್ನೋ ಆರೋಪ ಕೂಡ ಇದೆ. ಹೀಗೆ ರಾಜರೋಷವಾಗಿ ಕಲುಷಿತ ನೀರು ಕಾವೇರಿ ನದಿಯನ್ನ ಸೇರುತ್ತಿದ್ದರೂ ಸಿದ್ದಾಪುರ ಗ್ರಾಮ ಪಂಚಾಯ್ತಿ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಜಾಣ ಕುರುಡರಾಗಿ ಏನೂ ಗೊತ್ತಿಲ್ಲದಂತೆ ಮೂಕ ಪ್ರೇಕ್ಷಕರಾಗಿದ್ದಾರೆ. ಈ ಬಗ್ಗೆ ಸ್ಥಳೀಯರು ದೂರುಗಳ ಸುರಿಮಳೆಗೈದರೂ ಯಾವುದೇ ಪ್ರಯೋಜನವಾಗ್ತಿಲ್ಲ.

    ಕೇವಲ ಕಾಫಿ ಪಲ್ಪರ್ ನೀರು ಮಾತ್ರವಲ್ಲದೇ ಇಡೀ ಗ್ರಾಮದ ಶೌಚಾಲಯದ ನೀರು ಇದರ ಜೊತೆಗೆ ಪ್ಲಾಸ್ಟಿಕ್ ಸೇರಿದಂತೆ ಕೆಲ ವಿಷತ್ಯಾಜ್ಯಗಳು ನದಿಯ ಒಡಲನ್ನ ನಿರಂತರವಾಗಿ ಸೇರುತ್ತಲೇ ಇದೆ. ಹೀಗೆ ಕಾವೇರಿ ಸಂಪೂರ್ಣ ವಿಷಮಯವಾಗ್ತಿದ್ದು, ಈ ಬಗ್ಗೆ ಗಮನ ಹರಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೊಡಗು ಜಿಲ್ಲಾಡಳಿತ ಇನ್ನಾದರೂ ಇತ್ತ ಗಮನಹರಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದರ ಜೊತೆಗೆ ಜೀವಜಲ ವಿಷಜಲವಾಗುತ್ತಿರುವುದನ್ನು ತಡೆಯಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಣ ಇದ್ದವರು ಕೇಸ್ ಮುಚ್ಚಿಹಾಕ್ತಾರೆ, ನಮ್ಮ ಮಕ್ಕಳ ಸಾವಿಗೆ ನ್ಯಾಯ ಕೊಡಿಸಿ- ಮೃತ ಶಶಿಕುಮಾರ್ ತಂದೆ ಕಣ್ಣೀರು

    ಹಣ ಇದ್ದವರು ಕೇಸ್ ಮುಚ್ಚಿಹಾಕ್ತಾರೆ, ನಮ್ಮ ಮಕ್ಕಳ ಸಾವಿಗೆ ನ್ಯಾಯ ಕೊಡಿಸಿ- ಮೃತ ಶಶಿಕುಮಾರ್ ತಂದೆ ಕಣ್ಣೀರು

    ರಾಮನಗರ: ಶಾಸಕ ಸಿಟಿ ರವಿ ಕಾರು ಅಪಘಾತ ಪ್ರಕರಣ ಸಂಬಂಧ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತ ಶಶಿಕುಮಾರ್ ಅವರ ತಂದೆ ಜಯರಾಮ್ ಅವರು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಭಾನುವಾರ ಪ್ರವಾಸ ಮುಗಿಸಿಕೊಂಡು ಸುನಿಲ್ ಹಾಗೂ ಶಶಿಕುಮಾರ್ ವಾಪಸ್ ಬರುವಾಗ ಈ ಘಟನೆ ನಡೆದಿದೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ನಮಗೆ ಅಪಘಾತದ ವಿಷಯ ತಿಳಿದಿದೆ. ತಾಯಿ ಬಳಿ ನನ್ನ ಮಗ ಫೋನ್‍ನಲ್ಲಿ ಮಾತನಾಡಿದ್ದ. ಬೆಂಗಳೂರು ಸಮೀಪದಲ್ಲೇ ಇದ್ದೇನೆ, ಮನೆಗೆ ಬೇಗ ಬರುತ್ತೇನೆ ಅಂದಿದ್ದ. ಆದ್ರೆ ಈ ರೀತಿ ಮನೆಗೆ ಹೆಣವಾಗಿ ಬರುತ್ತಾನೆ ಅಂತ ಅಂದುಕೊಂಡಿರಲಿಲ್ಲ. ಬಡವರು ಈ ರೀತಿ ಅಪಘಾತ ಮಾಡಿದ್ದರೆ ಬಿಡುತ್ತಿದ್ದರಾ? ಅವರು ರಾಜಕಾರಣಿ ಅಂತ ಸುಮ್ಮನೆ ಆರೋಪಿಗೆ ತಕ್ಕ ಶಿಕ್ಷೆ ನೀಡಿ, ನಮ್ಮ ಮಕ್ಕಳ ಸಾವಿಗೆ ನ್ಯಾಯ ಕೊಡಿಸಿ ಎಂದು ಮೃತ ಶಶಿಕುಮಾರ್ ತಂದೆ ಕಣ್ಣೀರಿಟ್ಟಿದ್ದಾರೆ.

    ನಾವು ಬಡವರು, ಬಹಳ ಕಷ್ಟ ಪಟ್ಟು ಮಕ್ಕಳನ್ನು ಸಾಕಿದ್ದೇವೆ. ಮೂತ್ರವಿಸರ್ಜನೆ ಮಾಡುತ್ತ ನಿಂತಿದ್ದ ಮಕ್ಕಳಿಗೆ ಕಾರು ಡಿಕ್ಕಿ ಹೊಡೆದು ಅವರನ್ನು ರಸ್ತೆಯಲ್ಲೇ ಬಿಟ್ಟು ಸಿ.ಟಿ ರವಿ ಹೋಗಿದ್ದಾನೆ. ಮಗನ ಮದುವೆ ಮಾಡಬೇಕು ಅಂತಿದ್ದೆ. ಎದೆ ಎತ್ತರಕ್ಕೆ ಬೆಳೆದಿದ್ದ ಮಗನನ್ನು ಕಳೆದುಕೊಂಡೆ. ನಮ್ಮ ಮಕ್ಕಳಿಗೆ ನ್ಯಾಯ ಕೊಡಿಸಿ. ನಮಗೂ ವಯಸಾಯ್ತು ಮಗ ನಮಗೆ ಆಧಾರವಾಗಿ ಇರುತ್ತಾನೆ ಅಂದುಕೊಂಡಿದ್ದೆ. ಈಗ ನಮಗೆ ಯಾರು ಗತಿ? ಯಾರು ನಮ್ಮನ್ನು ಸಾಕುತ್ತಾರೆ. ಮಕ್ಕಳೇ ನಮಗೆ ಆಸ್ತಿ, ಅವರನ್ನೇ ಕಳೆದುಕೊಂಡ ಮೇಲೆ ಏನು ಮಾಡಿದರು ಪ್ರಯೋಜನವಿಲ್ಲ ಎಂದು ರೋಧಿಸುತ್ತಿದ್ದಾರೆ.

    ಶ್ರೀಮಂತರು, ರಾಜಕಾರಣಿಗಳು ತಮ್ಮ ಬಲದಿಂದ ನಮ್ಮಂತ ಬಡವರಿಗೆ ಸಹಾಯ ಮಾಡಲು ಬರುವವರನ್ನು ಕೊಂದುಬಿಡುತ್ತಾರೆ. ಬಂದವರಿಗೆ ಬೆಲೆಯಿಲ್ಲ, ನನ್ನ ಮಗ ನನಗೆ ಬೇಕು. ನಮಗೆ ನ್ಯಾಯ ಕೊಡಿಸಿ. ಬಡವರ ಮಕ್ಕಳು ಅಂತ ಈ ಪ್ರಕರಣವನ್ನು ಮುಚ್ಚಿಹಾಕಬೇಡಿ. ಹಣ ಇರುವವರು ತಮ್ಮ ತಪ್ಪಿಗೆ ಯಾರನ್ನೋ ಆರೋಪಿ ಮಾಡಿ ಕೇಸ್ ಮುಚ್ಚಿಹಾಕುತ್ತಾರೆ. ಆಗ ನಾವು ಏನು ಮಾಡೋಕು ಅಗಲ್ಲ. ನಮ್ಮ ನೋವು ಕೇಳೋರು ಯಾರು ಎಂದು ಅಳಲನ್ನು ತೋಡಿಕೊಂಡಿದ್ದಾರೆ.

    ಈಗಾಗಲೇ ಅಪಘಾತದಲ್ಲಿ ಮೃತಪಟ್ಟ ಸುನಿಲ್ ಹಾಗೂ ಶಶಿಕುಮಾರ್ ಅವರ ಮೃತದೇಹವನ್ನು ಅವರ ಸ್ವಗ್ರಾಮದತ್ತ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

    https://www.youtube.com/watch?v=CG4X-v7Ije4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಗ್ರರಿಗೆ ಪಾಠ ಕಲಿಸಿ, ಪಾಕಿಸ್ತಾನವನ್ನು ತುಂಡರಿಸಿ ಮೋದಿ ಹೊಸ ಇತಿಹಾಸ ಸೃಷ್ಟಿಸಬೇಕು: ಅನಂತ್‍ನಾಗ್

    ಉಗ್ರರಿಗೆ ಪಾಠ ಕಲಿಸಿ, ಪಾಕಿಸ್ತಾನವನ್ನು ತುಂಡರಿಸಿ ಮೋದಿ ಹೊಸ ಇತಿಹಾಸ ಸೃಷ್ಟಿಸಬೇಕು: ಅನಂತ್‍ನಾಗ್

    ಮಂಗಳೂರು: ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧರ ಸಾವಿನಿಂದ ಬೇಸರ, ಅಸಹನೆ, ಸಿಟ್ಟು ಉಕ್ಕಿಬರುತ್ತಿದೆ. ಕಾಶ್ಮೀರದ ಪ್ರಜಾಪ್ರಭುತ್ವ ಹೆಸರಲ್ಲಿ ಕೆಟ್ಟ ಜನರಿಗೆ ಬೆಂಬಲ ಕೊಟ್ಟು ಸರ್ಕಾರ ಯೋಧರ ಸಾವಿಗೆ ಕಾರಣವಾಗುತ್ತಿದೆ ಎಂದು ಹಿರಿಯ ನಟ ಅನಂತ್‍ನಾಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯೋಧರು ಅನ್ಯಾಯವಾಗಿ ಸಾಯುವಂತೆ ರಾಜಕಾರಣಿಗಳು ಮಾಡುತ್ತಿದ್ದಾರೆ. ಕಾಶ್ಮೀರದ ಪ್ರಜಾಪ್ರಭುತ್ವ ನೆಪದಲ್ಲಿ ಯೋಧರ ಸಾವಿಗೆ ಕಾರಣರಾಗುತ್ತಿದ್ದಾರೆ. ಪಾಕಿಸ್ತಾನವನ್ನು ತುಂಡರಿಸಿ, ಉಗ್ರರಿಗೆ ಪಾಠ ಕಲಿಸಿ ನರೇಂದ್ರ ಮೋದಿಯವರು ಮತ್ತೊಂದು ಇತಿಹಾಸ ಸೃಷ್ಟಿಸಬೇಕಾಗಿದೆ ಎಂದು ಅನಂತ್ ನಾಗ್ ಹೇಳಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪುಲ್ವಾಮದಲ್ಲಿ ಹುತಾತ್ಮರಾದ ಯೋಧರ ಸಾವಿಗೆ ಸಂತಾಪ ಸೂಚಿಸಿ, ಈ ವಿಚಾರದಲ್ಲಿ ಅಸಹಾಯಕತೆ ನಮ್ಮನ್ನು ಸುತ್ತುವರಿದಿದೆ. ರಾಜಕಾರಣಿಗಳು ಭಾರತದ ಎಡ ಮತ್ತು ಬಲ ಭುಜಗಳನ್ನು ಕತ್ತರಿಸಿದ್ದಾರೆ. ಧರ್ಮದ ಆಧಾರದ ಮೇಲೆ ವಿಭಜನೆಯಾದರೂ, ಸಮಸ್ಯೆಗಳಿಗೆ ಉತ್ತರ ಸಿಕ್ಕಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ 1965ರಲ್ಲಿ ಪಾಕಿಸ್ತಾನದ ಅಯೂಬ್ ಖಾನ್ ಭಾತರದ ಮೇಲೆ ದಾಳಿ ಮಾಡಿದಾಗ, ಅವನಿಗೆ ಪಾಠ ಕಲಿಸಿದ್ದರು. 1971ರಲ್ಲಿ ಇಂದಿರಾ ಗಾಂಧಿ ಅವರು ಪೂರ್ವ ಪಾಕಿಸ್ಥಾನವನ್ನು ಬಾಂಗ್ಲಾದೇಶವನ್ನಾಗಿ ನಿರ್ಮಾಣ ಮಾಡಿ ಕ್ರಮ ತೆಗೆದುಕೊಂಡಿದ್ದರು. ಈಗ ಉಗ್ರರ ದಾಳಿಯಿಂದ ದೇಶದ ಯೋಧರು ಬಲಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇನ್ನು ತಡ ಮಾಡಬಾರದು, ಇಂತಹ ದುಷ್ಕೃತ್ಯ ಮೆರೆದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

    ಕಾಶ್ಮೀರದಂತಹ ಸಣ್ಣ ಜಾಗದಲ್ಲಿ ಇಂತಹ ಘೋರ ಘಟನೆಗಳು ನಡೆಯಲು ಬಿಟ್ಟಿದ್ದೇ ತಪ್ಪಾಗಿದೆ. ಒಂದೆಡೆ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಗಿದೆ, ಇನ್ನೂ ನೆರೆಯ ಪಾಕಿಸ್ಥಾನವನ್ನು ಯಾವ ಸ್ಥಾನ ಮಾಡಬೇಕೆಂದು ಮೋದಿ ಅವರಿಗೆ ಗೊತ್ತಿದೆ. ಪಾಕಿಸ್ತಾನ ಭಯೋತ್ಪಾದಕರ ದೇಶ ಅನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ಬೇರೆ ರಾಷ್ಟ್ರಗಳಿಂದ ಹಣ ಪಡೆದು ಇಂದು ಪಾಕಿಸ್ತಾನ ಬದುಕುತ್ತಿದೆ. ಕಾಶ್ಮೀರಿ ಹುಡುಗನ ಕೈಗೆ 350 ಕೆಜಿಯಷ್ಟು ಸಿಡಿಮದ್ದು ಕೊಟ್ಟವರು ಯಾರು? ಸ್ವಾತಂತ್ರ್ಯ ಸಂದರ್ಭದಲ್ಲಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡುವಂತಾಗಿದೆ ಎಂದು ಅನಂತ್‍ನಾಗ್ ಕಿಡಿಕಾರಿದ್ದಾರೆ.

    ಕಾಶ್ಮೀರವನ್ನು ಪೂರ್ತಿ ಸೇನೆಯ ಕೈಗೆ ಕೊಟ್ಟು ಉಗ್ರರಿಂದ ತಕ್ಕ ಪಾಠ ಕಲಿಸಬೇಕು. ಕಾಶ್ಮೀರದಲ್ಲಿ ಯೋಧರಿಗೆ ಕಲ್ಲು ತೂರುತ್ತಿದ್ದರೂ ಆಡಳಿತ ಸಹಿಸಿಕೊಳ್ತಿರೋದ್ಯಾಕೆ? ಅಲ್ಲಿ ಯೋಧರಿಗೆ ಸ್ವಾತಂತ್ರ್ಯ ನೀಡದಿರುವುದೇ ಇಂಥ ಸ್ಥಿತಿಗೆ ಕಾರಣ ಎಂದು ಹಿರಿಯ ನಟ ಅನಂತ್‍ನಾಗ್ ಅಭಿಪ್ರಾಯ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ನಾಯಕರ ಮೇಲೆ ಪ್ರಜ್ವಲ್ ರೇವಣ್ಣ ಅಭಿಮಾನಿಗಳು ಗರಂ

    ಬಿಜೆಪಿ ನಾಯಕರ ಮೇಲೆ ಪ್ರಜ್ವಲ್ ರೇವಣ್ಣ ಅಭಿಮಾನಿಗಳು ಗರಂ

    ಹಾಸನ: ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಸರ್ಕಾರಿ ಕಾರು ಬಳಕೆ ಮಾಡಿದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರ ವಿರುದ್ಧ ಪ್ರಜ್ವಲ್ ಅಭಿಮಾನಿಗಳು ಗರಂ ಆಗಿದ್ದಾರೆ.

    ಸರ್ಕಾರಿ ಕಾರನ್ನು ತಮ್ಮ ಸ್ವಂತ ಕೆಲಸಕ್ಕೆ ಬಳಸಿಕೊಂಡಿದ್ದಕ್ಕೆ ಪ್ರಜ್ವಲ್ ರೇವಣ್ಣ ಅವರನ್ನು ಬಿಜೆಪಿ ಟೀಕಿಸಿತ್ತು. ಇದರಿಂದ ಸಿಟ್ಟಿಗೆದ್ದ ಪ್ರಜ್ವಲ್ ರೇವಣ್ಣ ಅಭಿಮಾನಿಗಳು ಬಿಜೆಪಿ ಶಾಸಕ ಪ್ರೀತಂ ಗೌಡಗೆ ಅವರ ವಿರುದ್ಧ ಸಿಡಿದೆದ್ದಿದ್ದಾರೆ. ಪ್ರೀತಂ ಗೌಡ ಅವರ ವಿರುದ್ಧ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.

    ಪ್ರಜ್ವಲ್ ರೇವಣ್ಣ ಯೂತ್ ಐಕಾನ್ ಎಂಬ ಫೇಸ್‍ಬುಕ್ ಖಾತೆ ಮೂಲಕ ಬಿಜೆಪಿ ನಾಯಕರನ್ನು ಅಭಿಮಾನಿಗಳು ಟೀಕಿಸಿದ್ದಾರೆ. ಯಾವ ಕಾರನ್ನ ಬಳಸಬೇಕು, ಯಾವುದನ್ನು ಬಳಸಬಾರದು ಎಂಬ ಕನಿಷ್ಟ ಜ್ಞಾನ ನಮಗಿದೆ. ಅದನ್ನ ಮಹಾ ಮೇದಾವಿ(ಮೂದೇವಿ)ಯಿಂದ ಕಲಿಯಬೇಕಿಲ್ಲ. ಕಾರ್ಯಕರ್ತರನ್ನು ಭೇಟಿ ಮಾಡಲು ಬರುವಾಗ ಪ್ರಜ್ವಲ್ ಅವರ ಕಾರು ಕೆಟ್ಟು ಹೋಗಿತ್ತು. ಹಾಗಾಗಿ ಅವರು ಸರ್ಕಾರಿ ಕಾರಲ್ಲಿ ಡ್ರಾಪ್ ಪಡೆದಿದ್ದಾರೆ ಅಷ್ಟೇ. ಅದನ್ನೇ ಬಿಜೆಪಿ ಅವರು ದೊಡ್ಡ ಸುದ್ದಿ ಮಾಡಿದ್ದಾರೆ. ಹಾಸನದ ಶಾಸಕ ಪ್ರೀತಂ ಗೌಡ ಚೀಪ್ ಪಾಲಿಟಿಕ್ಸ್ ಗಿಮಿಕ್ ಮಾಡಿದ್ದಾರೆ ಎಂದು ಪ್ರಜ್ವಲ್ ಅಭಿಮಾನಿಗಳು ಕಿಡಿಕಾರಿದ್ದಾರೆ. ಇದನ್ನೂ ಓದಿ: `ಯಾರದೋ ಟ್ಯಾಕ್ಸ್ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು’

    ಹಾಸನ ಕ್ಷೇತ್ರದ ಅಭಿವೃದ್ಧಿ ಮಾಡುವ ಕಿಂಚಿತ್ತು ನೈತಿಕತೆ ಇಲ್ಲದವರು ಈ ರೀತಿ ಚಿಲ್ಲರೆ ರಾಜಕೀಯಕ್ಕೆ ಇಳಿದಿದ್ದಾರೆ. ಜನರು ನಿಮ್ಮ ಸುಳ್ಳು ಸುದ್ದಿಗಳನ್ನು ನಂಬುವುದಿಲ್ಲ, ನಿಮ್ಮ ಮಾತು ನಿಮಗೆ ತಿರುಗುಬಾಣ ಆಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಜ್ವಲ್ ರೇವಣ್ಣ ಅವರ ಕಾರು ರಿಪೇರಿಗೆ ಬಿಟ್ಟಿರುವ ಫೋಟೋ ಹಾಗು ಜಾಬ್ ಶೀಟ್ ಫೋಟೋ ಹಾಕಿ ಪ್ರೀತಂ ಚೀಪ್ ಪಾಲಿಟಿಕ್ಸ್ ಗಿಮಿಕ್ಸ್ ನಡೆಯಲ್ಲ ಎಂದು ಟೀಕಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ನಾಯಕ ಕಾರು ದುರ್ಬಳಕೆ ಮಾಡಿಲ್ಲ, ಡ್ರಾಪ್ ಪಡೆದಿದ್ದಾರೆ ಎಂದು ಅಭಿಮಾನಿಗಳು ಪ್ರಜ್ವಲ್ ರೇವಣ್ಣ ಅವರ ಪರವಹಿಸಿದ್ದಾರೆ.

    https://www.facebook.com/permalink.php?story_fbid=1479224588874678&id=696208787176266

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅನಂತ್ ಕುಮಾರ್ ಹೆಗ್ಡೆ ಕನಿಷ್ಠ ಪಂಚಾಯತ್ ಸದಸ್ಯರಾಗಲು ಯೋಗ್ಯರಲ್ಲ: ಎಂ.ಬಿ ಪಾಟೀಲ್ ಕಿಡಿ

    ಅನಂತ್ ಕುಮಾರ್ ಹೆಗ್ಡೆ ಕನಿಷ್ಠ ಪಂಚಾಯತ್ ಸದಸ್ಯರಾಗಲು ಯೋಗ್ಯರಲ್ಲ: ಎಂ.ಬಿ ಪಾಟೀಲ್ ಕಿಡಿ

    ಮಂಗಳೂರು: ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಬಗ್ಗೆ ಮಾತನಾಡುವುದೇ ತಪ್ಪೆನಿಸುತ್ತದೆ. ಇಂಥವರು ಕನಿಷ್ಠ ಪಂಚಾಯತ್ ಸದಸ್ಯರಾಗಲೂ ಯೋಗ್ಯರಲ್ಲ ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರಲು ಬಯಸುತ್ತಾರೆ. ಅವರಿಗೆ ಸಂಸತ್ ಹಾಗೂ ಸಂವಿಧಾನದ ಬಗ್ಗೆ ಗೌರವವಿಲ್ಲ. ಸಂವಿಧಾನವನ್ನೇ ಬದಲಾಯಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಇಂಥವರು ಸಂಸತ್ ಸದಸ್ಯರಾಗಲು ಯೋಗ್ಯರಲ್ಲ. ಕನಿಷ್ಠ ಪಂಚಾಯತ್ ಸದಸ್ಯರಾಗಲೂ ಅರ್ಹ ವ್ಯಕ್ತಿಯಲ್ಲ ಎಂದು ಎಂ.ಬಿ ಪಾಟೀಲ್ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಹಿಂದೂ ಹುಡುಗಿಯ ಮೈ ಮುಟ್ಟಿದ ಕೈ ಇರಬಾರದು: ಅನಂತ್ ಕುಮಾರ್ ಹೆಗ್ಡೆ

    ಕೋಮು ಘರ್ಷಣೆ ಆರಂಭಿಸಲು ಇಂಥಹ ಹೇಳಿಕೆಯನ್ನು ಅನಂತ್ ಕುಮಾರ್ ಹೆಗ್ಡೆ ಅವರು ನೀಡುತ್ತಾರೆ. ಸಂವಿಧಾನಕ್ಕೆ ಗೌರವಿಸದವರಿಗೆ ಲೋಕಸಭೆ ಚುನಾವಣೆಯಲ್ಲಿ ಜನರೇ ಪಾಠ ಕಲಿಸುತ್ತಾರೆ ಎಂದರು. ಇದನ್ನೂ ಓದಿ: ಟ್ವಿಟ್ಟರ್ ವಾರ್- ವೈಯಕ್ತಿಕ ನಿಂದನೆ ವಿರುದ್ಧ ಗುಡುಗಿದ ದಿನೇಶ್ ಗುಂಡೂರಾವ್

    ಭಾನುವಾರದಂದು ಮಡಿಕೇರಿಯಲ್ಲಿ ಪರಿವರ್ತನಾ ಟ್ರಸ್ಟ್, ಹಿಂದೂ ಜಾಗರಣ ವೇದಿಕೆ ನಡೆಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಜಾತಿ ವಿಷಬೀಜ ಸಮಾಜದಲ್ಲಿ ಸೇರಿಕೊಂಡ ಬಳಿಕ ನಾವು ನಿರ್ಮಾಣ ಮಾಡಿದ್ದನ್ನು ನಮ್ಮದು ಎಂದು ಹೇಳಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ಹಿಂದೂಗಳು ಒಗ್ಗಟ್ಟಾಗಿ ನಿಲ್ಲದೇ ಇದ್ದರೆ ಏನಾಗುತ್ತದೆ ಎಂಬುವುದನ್ನು ಇತಿಹಾಸ ನೋಡಿದರೆ ನಮಗೆ ಅರಿವಾಗುತ್ತದೆ. ಆದ್ದರಿಂದ ಜಾತಿ ಪ್ರಶ್ನೆ ಇಲ್ಲದೆ ಹಿಂದೂ ಹುಡುಗಿಯ ಕೈ ಮುಟ್ಟಿದರೆ ಆ ಕೈ ಇರಬಾರದು ಎಂದು ಹೇಳಿಕೆ ನೀಡಿದ್ದರು.

    https://www.youtube.com/watch?v=Qixi3UPIbZQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv