Tag: ಆಕಾಶ್‌ ದೀಪ್‌

  • ಗಿಲ್‌ ಬದಲು ಆಕಾಶ್‌ ದೀಪ್‌ಗೆ ಪಂದ್ಯಶ್ರೇಷ್ಠ ನೀಡಬೇಕಿತ್ತು: ಅಶ್ವಿನ್‌

    ಗಿಲ್‌ ಬದಲು ಆಕಾಶ್‌ ದೀಪ್‌ಗೆ ಪಂದ್ಯಶ್ರೇಷ್ಠ ನೀಡಬೇಕಿತ್ತು: ಅಶ್ವಿನ್‌

    ಚೆನ್ನೈ: ಇಂಗ್ಲೆಂಡ್‌ (England) ವಿರುದ್ಧ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಶುಭಮನ್‌ ಗಿಲ್‌ ಬದಲು ಆಕಾಶ್‌ ದೀಪ್‌ಗೆ (Akash Deep) ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು ಟೀಂ ಇಂಡಿಯಾದ ಮಾಜಿ ಆಟಗಾರ ಆರ್‌ ಅಶ್ವಿನ್‌ (R Ashwin) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಟೆಸ್ಟ್‌ ಕ್ರಿಕೆಟ್‌ ಜಯದ ಬಗ್ಗೆ ಯೂಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ ಅವರು, ಎಜ್ಬಾಸ್ಟನ್‌ ಮೈದಾನ ಬೌಲರ್‌ಗಳಿಗೆ ನೆರವು ನೀಡಲಿಲ್ಲ. ಅದು ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿತ್ತು. ಇಂಗ್ಲೆಂಡ್‌ ಬೌಲರ್‌ಗಳು ವಿಕೆಟ್‌ ಪಡೆಯಲು ಹೆಣಗಾಡುತ್ತಿದ್ದರು. ಕಠಿಣ ಪಿಚ್‌ ಆಗಿದ್ದರೂ ಆಕಾಶ್‌ ದೀಪ್‌ 10 ವಿಕೆಟ್‌ ಪಡೆದಿದ್ದರು. ಹೀಗಾಗಿ ಅಕಾಶ್‌ದೀಪ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ (Player of the Match) ನೀಡಬಹುದಿತ್ತು ಎಂದಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಆಟಗಾರ ಯಶ್ ದಯಾಳ್ ವಿರುದ್ಧ FIR ಸಂತ್ರಸ್ತೆ ಹೇಳಿಕೆ ದಾಖಲಿಸಿಕೊಂಡ ಬಳಿಕ ಪೊಲೀಸರ ಕ್ರಮ

    ಎರಡನೇ ಟೆಸ್ಟ್‌ ಪಂದ್ಯದಲ್ಲಿ ಬುಮ್ರಾ ಬದಲು ಆಕಾಶ್‌ ದೀಪ್‌ ಕಣಕ್ಕೆ ಇಳಿದಿದ್ದರು. ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಪಡೆದಿದ್ದ ಆಕಾಶ್‌ ದೀಪ್‌ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದಿದ್ದರು.

    ಇಂಗ್ಲೆಂಡ್‌ ವಿರುದ್ಧದ ಈ ಪಂದ್ಯವನ್ನು ಭಾರತ 336 ರನ್‌ಗಳಿಂದ ಜಯಗಳಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 269 ರನ್‌ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 161 ರನ್‌ ಹೊಡೆದ ಗಿಲ್‌ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.

  • ಸ್ಟೋಕ್ಸ್‌ ಪಡೆಗೆ ಭಾರತ ಮಾಸ್ಟರ್‌ ಸ್ಟ್ರೋಕ್‌ – ಒಂದು ಗೆಲುವಿನಲ್ಲಿ ಹತ್ತಾರು ದಾಖಲೆಗಳ ಸುರಿಮಳೆ

    ಸ್ಟೋಕ್ಸ್‌ ಪಡೆಗೆ ಭಾರತ ಮಾಸ್ಟರ್‌ ಸ್ಟ್ರೋಕ್‌ – ಒಂದು ಗೆಲುವಿನಲ್ಲಿ ಹತ್ತಾರು ದಾಖಲೆಗಳ ಸುರಿಮಳೆ

    – ಕೊಹ್ಲಿ, ಗವಸ್ಕಾರ್‌ ಜೊತೆಗೆ ದಿಗ್ಗಜರ ಎಲೈಟ್‌ ಲಿಸ್ಟ್‌ ಸೇರಿದ ಗಿಲ್‌
    – ಒಂದೇ ಪಂದ್ಯದಲ್ಲಿ 1,000ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ 4ನೇ ತಂಡ

    ಎಜ್‌ಬಾಸ್ಟನ್‌: ಇಂಗ್ಲೆಂಡ್‌ ವಿರುದ್ಧ ನಡೆದ 2ನೇ ಟೆಸ್ಟ್‌ ಪಂದ್ಯದಲ್ಲಿ ಯಂಗ್‌ ಕ್ಯಾಪ್ಟನ್‌ ಶುಭಮನ್‌ ಗಿಲ್‌ (Shubman Gill) ನಾಯಕತ್ವದ ಟೀಂ ಇಂಡಿಯಾ (Team India) 336 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ.

    ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸಿದ್ದ ಗಿಲ್‌ ಪಡೆ ಬೌಲಿಂಗ್‌ನಲ್ಲಿ ಎದುರಾಳಿಗಳನ್ನ ಕಟ್ಟಿಹಾಕುವಲ್ಲಿ ಎಡವಿತ್ತು. ಇದರಿಂದ ಇಂಗ್ಲೆಂಡ್‌ (England) ಸುಲಭವಾಗಿ ಗೆಲುವು ಸಾಧಿಸಿತ್ತು. ಅದೇ ರೀತಿ 2ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 407 ರನ್‌ ಬಿಟ್ಟುಕೊಟ್ಟು ಲಯ ತಪ್ಪಿದ್ದ ಗಿಲ್‌ ಪಡೆ 2ನೇ ಇನ್ನಿಂಗ್ಸ್‌ನಲ್ಲಿ ಬಿಗಿ ಹಿಡಿತ ಸಾಧಿಸಿತ್ತು. ಆಕಾಶ್‌ ದೀಪ್‌ ಬೆಂಕಿ ಬೌಲಿಂಗ್‌ ದಾಳಿ ಡ್ರಾ ಮಾಡಿಕೊಳ್ಳಬೇಕೆಂಬ ಇಂಗ್ಲೆಂಡ್‌ ನಿರ್ಧಾರವನ್ನ ಬುಡಮೇಲು ಮಾಡಿತು. ಪರಿಣಾಮ ಫಿನಿಕ್ಸ್ ಹಕ್ಕಿಯಂತೆ ಕಂಬ್ಯಾಕ್ ಮಾಡಿದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿತು. ಇದರೊಂದಿಗೆ ಹಲವು ದಾಖಲೆಗಳನ್ನ ನಿರ್ಮಿಸಿತು. ಅವುಗಳ ಪಟ್ಟಿ ಇಂತಿದೆ…

    ಗಿಲ್ ಮಿಂಚು; ಭಾರತದ ಅಗ್ರ ಆಟಗಾರ
    ಒಂದೇ ಪಂದ್ಯದ 2 ಇನ್ನಿಂಗ್ಸ್ ನಲ್ಲಿ ಶುಭಮನ್ ಗಿಲ್ ಗಳಿಸಿದ 430 ರನ್‌ಗಳು ವಿಶ್ವ ಟೆಸ್ಟ್ ಪಂದ್ಯವೊಂದರ ಇತಿಹಾಸದಲ್ಲಿ 2ನೇ ಅತ್ಯಧಿಕ ರನ್‌ಗಳಾಗಿದ್ದರೆ, ಭಾರತದ ಟೆಸ್ಟ್‌ ಕ್ರಿಕೆಟ್ ಇತಿಹಾಸದಲ್ಲಿ (Test Cricket History) ಮೊದಲ ಅತ್ಯಧಿಕ ರನ್ ಎಂಬ ಕೀರ್ತಿಗೆ ಪಾತ್ರವಾಗಿದೆ. ಈ ಹಿಂದೆ ಸುನಿಲ್ ಗವಾಸ್ಕರ್ ಭಾರತ ಟೆಸ್ಟ್ ಪಂದ್ಯವೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ್ದ ದಾಖಲೆ ಬರೆದಿದ್ದರು. 1971 ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 344 ರನ್‌ಗಳಿಸಿದ್ದು ಭಾರತ ಆಟಗಾರನ ಶ್ರೇಷ್ಠ ಸಾಧನೆಯಾಗಿತ್ತು. ಈಗ ಶುಭಮನ್ ಗಿಲ್ ಈ ದಾಖಲೆ ಅಳಿಸಿ. ಭಾರತ ಮೊದಲ ಆಟಗಾರ, ವಿಶ್ವದ 2ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

    ವಿಶ್ವದ 2ನೇ ಆಟಗಾರ
    ಇದರೊಂದಿಗೆ 1990 ರಲ್ಲಿ ಲಾರ್ಡ್ಸ್‌ನಲ್ಲಿ ಭಾರತ ವಿರುದ್ಧ ಇಂಗ್ಲೆಂಡ್‌ನ ಗ್ರಹಾಂ ಗೂಚ್‌ಗಳಿಸಿದ 456 ರನ್ ವಿಶ್ವ ಕ್ರಿಕೆಟ್ ಪಂದ್ಯ ಒಂದರ ಆಟಗಾರನ ಅತಿ ಹೆಚ್ಚು ರನ್. ಬಳಿಕ ಶುಭಮನ್ ಗಿಲ್ ಗಳಿಸಿದ 430 ರನ್ 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾರ್ಕ್ ಟೈಲರ್ ಪಾಕ್ ವಿರುದ್ಧ 1998 ರಲ್ಲಿ 426 ರನ್, 4ನೇ ಸ್ಥಾನದಲ್ಲಿ ಕುಮಾರ್ ಸಂಗಕ್ಕಾರ 2014 ರಲ್ಲಿ ಬಾಂಗ್ಲಾದೇಶದ ವಿರುದ್ಧ 424 ರನ್, 5ನೇ ಸ್ಥಾನದಲ್ಲಿದ್ದಾರೆ. ಇನ್ನೂ ಇಂಗ್ಲೆಂಡ್ ವಿರುದ್ಧ 2004 ರಲ್ಲಿ ಬ್ರಯನ್ ಲಾರಾ ಕೇವಲ ಒಂದೇ ಇನ್ನಿಂಗ್ಸ್‌ನಲ್ಲಿ 00 ರನ್ ಗಳಿಸಿರೋದು ಅಗ್ರಸ್ಥಾನದಲ್ಲಿದೆ.

    ಶತಕ ವೀರರ ಎಲೈಟ್‌ಲಿಸ್ಟ್‌ಗೆ ಗಿಲ್‌
    ಇನ್ನೂ ಗಿಲ್ ಹೆಸರಿಗೆ ಮತ್ತೊಂದು ದಾಖಲೆ ಕೂಡ ಸೇರ್ಪಡೆಯಾಗಿದೆ. ಇಲ್ಲಿ ತನಕ ಒಂದೇ ಟೆಸ್ಟ್‌ನಲ್ಲಿ 9 ಬ್ಯಾಟ್ಸ್‌ಮನ್‌ಗಳು ದ್ವಿಶತಕ ಮತ್ತು ಶತಕ ದಾಖಲಿಸಿದ್ದಾರೆ. ಈ ಪಟ್ಟಿಗೆ ಗಿಲ್ ಸೇರ್ಪಡೆಯಾಗಿದ್ದಾರೆ. 1971 ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಪರ ಸುನಿಲ್ ಗವಾಸ್ಕರ್ ಮಾತ್ರ ಈ ಸಾಧನೆ ಮಾಡಿದ್ದರು ಮತ್ತು ಇದು ಇಂಗ್ಲೆಂಡ್ ವಿರುದ್ಧ ಮೊದಲ ಬಾರಿಗೆ. ಇದಲ್ಲದೇ, 1990 ರಲ್ಲಿ ಲಾರ್ಡ್ಸ್‌ನಲ್ಲಿ ಗೂಚ್ ನಂತರ ಇಂಗ್ಲೆಂಡ್‌ನಲ್ಲಿ ಮತ್ತು ತಂಡದ ನಾಯಕನಾಗಿ ಈ ಸಾಧನೆ ಮಾಡಿದ 2ನೇ ಆಟಗಾರ ಕೂಡ ಗಿಲ್. 1980 ರಲ್ಲಿ ಲಾಹೋರ್‌ನಲ್ಲಿ ಪಾಕಿಸ್ತಾನ ವಿರುದ್ಧ ಅಲನ್ ಬಾರ್ಡರ್ ಮೊದಲ ಇನ್ನಿಂಗ್ಸ್ 150 ಮತ್ತು 2ನೇ ಇನ್ನಿಂಗ್ಸ್ 153 ರನ್ ಗಳಿಸಿದ ನಂತರ, ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ 150 ಸ್ಕೋರ್‌ಗಳನ್ನು ಗಳಿಸಿದ 2ನೇ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ.

    ಕಿಂಗ್‌ ಕೊಹ್ಲಿಗೆ ಸರಿಸಮನಾಗಿ ನಿಂತ ಪ್ರಿನ್ಸ್‌
    ನಾಯಕನಾಗಿ ಗಿಲ್ ತಮ್ಮ ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕಗಳನ್ನು ಗಳಿಸಿದ್ದಾರೆ. ಇದು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಜಂಟಿ ದಾಖಲೆಯಾಗಿದೆ. ವಿರಾಟ್ ಕೊಹ್ಲಿ 2014/15 ರಲ್ಲಿ ಆಸ್ಟ್ರೇಲಿಯಾದಲ್ಲಿ 3 ಶತಕ ಗಳಿಸಿದ್ದರು. ಇತರ 7 ಮಂದಿ ತಲಾ 3 ಶತಕಗಳನ್ನು ಗಳಿಸಿದ್ದಾರೆ. ವಿಜಯ್ ಹಜಾರೆ, ಜಾಕಿ ಮೆಕ್‌ಗ್ಲೆವ್, ಗ್ರೆಗ್ ಚಾಪೆಲ್, ಸುನಿಲ್ ಗವಾಸ್ಕರ್, ಅಲಸ್ಟೈರ್ ಕುಕ್, ಸ್ಟೀವನ್ ಸ್ಮಿತ್ ಮತ್ತು ಧನಂಜಯ ಡಿ ಸಿಲ್ವಾ ಈಗ ಇದೇ ದಿಗ್ಗಜರ ಸಾಲಿಗೆ ಗಿಲ್ ಕೂಡ ಸೇರ್ಪಡೆಯಾಗಿದ್ದಾರೆ.

    ಅಲ್ಲದೇ ಗಿಲ್ ಭಾರತದ ಟೆಸ್ಟ್ ತಂಡದ ನಾಯಕನಾಗಿ ತಮ್ಮ ಚೊಚ್ಚಲ ಸರಣಿಯಲ್ಲಿ ಗಳಿಸಿದ 585 ರನ್‌ಗಳ ದಾಖಲೆಯನ್ನು ಹೊಂದಿದ್ದಾರೆ. ಕೊಹ್ಲಿ ಈ ಹಿಂದೆ ಈ ದಾಖಲೆಯನ್ನು ಹೊಂದಿದ್ದರು. 2014/15 ರಲ್ಲಿ ಆಸ್ಟ್ರೇಲಿಯಾದಲ್ಲಿ ನಾಯಕನಾಗಿ ಎರಡು ಟೆಸ್ಟ್ ಪಂದ್ಯಗಳಲ್ಲಿ 449 ರನ್‌ಗಳಿಸಿದ್ದು ಮೊದಲ ನಾಯಕತ್ವದ ಸರಣಿಯಲ್ಲಿ ಗಳಿಸಿದ್ದ ಅತಿ ಹೆಚ್ಚು ರನ್ ಗಳಾಗಿತ್ತು.

    ಕೊಹ್ಲಿ, ಗವಾಸ್ಕರ್, ಅಜರುದ್ದಿನ್, ದ್ರಾವಿಡ್ ಸಾಲಿಗೆ ಗಿಲ್
    ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ 3ನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. ಈ ಹಿಂದೆ ಗವಾಸ್ಕರ್ ವೆಸ್ಟ್ ಇಂಡೀಸ್ ವಿರುದ್ಧ 1979 ರಲ್ಲಿ, ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 2014 ರಲ್ಲಿ, 1984/85 ರಲ್ಲಿ ಮೊಹಮ್ಮದ್ ಅಜರುದ್ದೀನ್ ಮತ್ತು 2002 ಮತ್ತು 2011 ರಲ್ಲಿ ರಾಹುಲ್ ದ್ರಾವಿಡ್ ನಂತರ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3 ಶತಕಗಳನ್ನು ದಾಖಲಿಸಿದ 3ನೇ ಭಾರತೀಯ ಎಂಬ ಹೆಗ್ಗಳಿಕೆಗೂ ಗಿಲ್ ಪಾತ್ರರಾಗಿದ್ದಾರೆ.

    ಅಷ್ಟೇ ಅಲ್ಲ ಈ ಟೆಸ್ಟ್‌ನಲ್ಲಿ ಗಿಲ್ ಬಾರಿಸಿದ 11 ಸಿಕ್ಸರ್‌ಗಳು ದಾಖಲೆ ಪಟ್ಟಿ ಸೇರಿವೆ. ಈ ಹಿಂದೆ ಭಾರತೀಯರಲ್ಲಿ ರೋಹಿತ್ ಶರ್ಮಾ 2019 ಸೌತ್ ಆಫ್ರಿಕಾ ವಿರುದ್ಧ 13 ಮತ್ತು 2024 ಇಂಗ್ಲೆಂಡ್ ವಿರುದ್ಧವೇ ಯಶಸ್ವಿ ಜೈಸ್ವಾಲ್ 12 ಸಿಕ್ಸ್ ಬಾರಿಸಿದ್ದರು. ಈ ಸಾಲಿಗೆ ಈಗ ಗಿಲ್ ಕೂಡ ಸೇರ್ಪಡೆಯಾಗಿದ್ದಾರೆ.

    ಒಂದೇ ಪಂದ್ಯದಲ್ಲಿ 1,000ಕ್ಕೂ ಅಧಿಕ ರನ್‌
    ಈ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತ ಗಳಿಸಿದ ರನ್ ಗಳು 1014. ಈ ರನ್‌ಗಳು ಪಂದ್ಯವೊಂದರಲ್ಲಿ 4ನೇ ಅತಿ ಹೆಚ್ಚು ರನ್‌ಗಳಾಗಿದೆ, 2003/04 ರಲ್ಲಿ ಸಿಡ್ನಿಯಲ್ಲಿ ಭಾರತ ಗಳಿಸಿದ 916 ರನ್‌ಗಳ ಹಿಂದಿನ ಅತ್ಯುತ್ತಮ ಮೊತ್ತವಾಗಿತ್ತು.

    ಒಂದೇ ಪಂದ್ಯದಲ್ಲಿ ಸಾವಿರ ರನ್ ಗಳಿಸಿದ ತಂಡಗಳು
    ಮೊದಲ ಸ್ಥಾನದಲ್ಲಿ 1930 ರಲ್ಲಿ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಕೆನ್ನಿಂಗ್‌ಸ್ಟನ್‌ನಲ್ಲಿ 1,121 ರನ್ ಗಳಿಸಿತ್ತು. 2ನೇ ಸ್ಥಾನದಲ್ಲಿ ಪಾಕಿಸ್ತಾನ 2006 ರಲ್ಲಿ ಭಾರತದ ವಿರುದ್ಧ ಫೈಸಲಾಬಾದ್‌ನಲ್ಲಿ ಗಳಿಸಿದ್ದ 1,078 ರನ್. 3ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಓವಲ್ ನಲ್ಲಿ 1934 ರಲ್ಲಿ ಗಳಿಸಿದ್ದ 1,028 ರನ್. 4ನೇ ಸ್ಥಾನದಲ್ಲಿ ಈಗ ಭಾರತ ಗಳಿಸಿರುವ 1,014 ರನ್ 5ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ವಿರುದ್ಧ 1969 ಸಿಡ್ನಿಯಲ್ಲಿ 1013 ರನ್ ಗಳಿಸಿತ್ತು.

    4 ಬಾರಿಗೆ ಇನ್ನಿಂಗ್ಸ್‌ವೊಂದರಲ್ಲಿ 400 ರನ್ ಗಳಿಸಿದ ಭಾರತ
    ಇನ್ನೂ ಈ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಭಾರತ 400 ರನ್ ದಾಟಿದೆ. ಇದು ಇತಿಹಾಸದಲ್ಲಿ 4ನೇ ಬಾರಿಗೆ. ಈ ಹಿಂದೆ ಪಾಕಿಸ್ತಾನ ವಿರುದ್ಧ 2004 ಕೋಲ್ಕತ್ತಾದಲ್ಲಿ, ಶ್ರೀಲಂಕಾ ವಿರುದ್ಧ ಅಹಮದಾಬಾದ್, 2009 ರಲ್ಲಿ, ಮತ್ತು ಇಂಗ್ಲೆಂಡ್ ವಿರುದ್ಧ ರಾಜ್‌ಕೋಟ್, 2024 ಅವರು ಈ ಸಾಧನೆ ಮಾಡಿದ್ದರು.

    ಭಾರತ ದಾಖಲೆಗಳ ಜೊತೆಯಾಟ
    ಗಿಲ್ ಟೆಸ್ಟ್ ಪಂದ್ಯವೊಂದರಲ್ಲಿ 4 ಶತಕಗಳ ಜೊತೆಯಾಟದಲ್ಲಿ ಭಾಗಿಯಾದ 5ನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು, ಹನೀಫ್ ಮೊಹಮ್ಮದ್ 1958 ರಲ್ಲಿ ವಿಂಡೀಸ್ ವಿರುದ್ದ, ಇಂಗ್ಲೆಂಡ್ ನ ಗ್ರಹಾಂ ಗೂಚ್ 1990 ರಲ್ಲಿ ಭಾರತ ವಿರುದ್ದ ಲಾರ್ಡ್ಸ್ ನಲ್ಲಿ, ಮಾರ್ಕ್ ಟೇಲರ್ 1998 ರಲ್ಲಿ ಪಾಕ್ ವಿರುದ್ಧ ಮತ್ತು ಜೋ ರೂಟ್ ಪಾಕ್ ವಿರುದ್ದದ 2016 ರಲ್ಲಿ 4 ಶತಕದ ಜೊತೆಯಾಟ ಆಡುವ ಮೂಲಕ ದಾಖಲೆ ಬರೆದಿದ್ದಾರೆ.

  • 536 ರನ್‌ಗಳ ಭರ್ಜರಿ ಮುನ್ನಡೆ – ಭಾರತದ ಬಿಗಿ ಹಿಡಿತದಲ್ಲಿ ಆಂಗ್ಲರ ಒದ್ದಾಟ

    536 ರನ್‌ಗಳ ಭರ್ಜರಿ ಮುನ್ನಡೆ – ಭಾರತದ ಬಿಗಿ ಹಿಡಿತದಲ್ಲಿ ಆಂಗ್ಲರ ಒದ್ದಾಟ

    – ಗೆಲುವಿನ ಸನಿಹದಲ್ಲಿ ಭಾರತ, ಡ್ರಾ ಮಾಡಿಕೊಳ್ಳುವತ್ತ ಇಂಗ್ಲೆಂಡ್‌ ಚಿತ್ತ

    ಎಡ್ಜ್‌ಬಾಸ್ಟನ್‌: ಇಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್‌ ನಡುವಿನ 2ನೇ ಟೆಸ್ಟ್‌ (Test Cricket) ಪಂದ್ಯ ರೋಚಕ ಘಟ್ಟಕ್ಕೆ ತಲುಪಿದೆ. 536 ರನ್‌ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿರುವ ಭಾರತ (Team India) ಉಳಿದ 7 ವಿಕೆಟ್‌ಗಳನ್ನು ಕಿತ್ತು ಗೆಲ್ಲುವ ತವಕದಲ್ಲಿದ್ದರೆ, ಇತ್ತ ವಿಕೆಟ್‌ ಉಳಿಸಿಕೊಂಡು ಪಂದ್ಯ ಡ್ರಾ ಮಾಡಿಕೊಳ್ಳುವತ್ತ ಇಂಗ್ಲೆಂಡ್‌ ಚಿತ್ತ ಹರಿಸಿದೆ.

    244 ರನ್‌ಗಳ ಭರ್ಜರಿ ಮುನ್ನಡೆಯೊಂದಿಗೆ 4ನೇ ದಿನದ ಕ್ರೀಸ್‌ ಆರಂಭಿಸಿದ ಭಾರತ ಒಟ್ಟು 83 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 427 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಈ ಮೂಲಕ ಆತಿಥೇಯ ಇಂಗ್ಲೆಂಡ್‌ಗೆ 608 ರನ್‌ಗಳ ಬೃಹತ್‌ ಟಾರ್ಗೆಟ್‌ ನೀಡಿತ್ತು. ಬಳಿಕ ತನ್ನ 2ನೇ ಇನ್ನಿಂಗ್ಸ್‌ ಶುರು ಮಾಡಿದ ಇಂಗ್ಲೆಂಡ್‌ ಸ್ಫೋಟಕ ಪ್ರದರ್ಶನ ನೀಡುವ ಉತ್ಸಾಹದಲ್ಲಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

    4ನೇ ದಿನದ ಅಂತ್ಯಕ್ಕೆ 16 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡ ಇಂಗ್ಲೆಂಡ್‌ 72 ರನ್‌ಗಳನ್ನಷ್ಟೇ ಗಳಿಸಿತು. ಸದ್ಯ 536 ರನ್‌ಗಳ ಹಿನ್ನಡೆಯಲ್ಲಿರುವ ಇಂಗ್ಲೆಂಡ್‌ ಭಾನುವಾರ ಕೊನೆಯ ದಿನದ ಆಟವಾಡಲಿದೆ. ಓಲ್ಲಿ ಪೋಪ್‌, ಹ್ಯಾರಿ ಬ್ರೂಕ್‌ ಕ್ರೀಸ್‌ ಆರಂಭಿಸಲಿದ್ದಾರೆ.

    ತನ್ನ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ಶುಭಮನ್‌ ಗಿಲ್‌ 161 ರನ್‌ (162 ಎಸೆತ, 8 ಸಿಕ್ಸರ್‌, 13 ಬೌಂಡರಿ) ಗಳಿಸಿದ್ರೆ, ರಿಷಭ್‌ ಪಂತ್‌ 65 ರನ್‌, ರವೀಂದ್ರ ಜಡೇಜಾ ಅಜೇಯ 69 ರನ್‌, ಕೆ.ಎಲ್‌ ರಾಹುಲ್‌‌ 55 ರನ್‌, ಜೈಸ್ವಾಲ್‌ 28 ರನ್‌, ಕರುಣ್‌ ನಾಯರ್‌ 26 ರನ್‌, ನಿತೀಶ್‌ ರೆಡ್ಡಿ 1 ರನ್‌ ಗಳಿಸಿದ್ರೆ ವಾಷಿಂಗ್ಟನ್‌ ಸುಂದರ್‌ 12 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

    ಇನ್ನೂ 2ನೇ ಇನ್ನಿಂಗ್ಸ್‌ ಆಡುತ್ತಿರುವ ಇಂಗ್ಲೆಂಡ್‌ ಪರ ಬೆನ್‌ ಡಕೆಟ್‌ 25 ರನ್‌, ಜೋ ರೂಟ್‌ 6 ರನ್‌ ಗಳಿಸಿ ಔಟಾದ್ರೆ, ಝಾಕ್‌ ಕ್ರಾವ್ಲಿ ಶೂನ್ಯ ಸುತ್ತಿದರು. ಇನ್ನೂ ಪೋಪ್‌ 24 ರನ್‌, ಬ್ರೂಕ್‌ 15 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದಿದ್ದಾರೆ.

  • ಗಿಲ್‌ ಅಮೋಘ ಶತಕ, ಪಂತ್‌, ಜಡ್ಡು ಫಿಫ್ಟಿ – ಇಂಗ್ಲೆಂಡ್‌ಗೆ 608 ರನ್‌ಗಳ ಬೃಹತ್‌ ಗುರಿ ನೀಡಿದ ʻಯುವ ಭಾರತʼ

    ಗಿಲ್‌ ಅಮೋಘ ಶತಕ, ಪಂತ್‌, ಜಡ್ಡು ಫಿಫ್ಟಿ – ಇಂಗ್ಲೆಂಡ್‌ಗೆ 608 ರನ್‌ಗಳ ಬೃಹತ್‌ ಗುರಿ ನೀಡಿದ ʻಯುವ ಭಾರತʼ

    ಎಡ್ಜ್‌ಬಾಸ್ಟನ್‌: ಯುವ ನಾಯಕ ಶುಭಮನ್‌ ಗಿಲ್‌ (Shubman Gill) ಅಮೋಘ ಶತಕ, ಉಪನಾಯಕ ರಿಷಭ್‌ ಪಂತ್‌ ಹಾಗೂ ಕೆ.ಎಲ್‌ ರಾಹುಲ್‌ ಅವರ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ 2ನೇ ಇನ್ನಿಂಗ್ಸ್‌ನಲ್ಲಿ ಭಾರತ 6 ವಿಕೆಟ್‌ಗೆ 427 ರನ್ ‌ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದೆ. ಇದರೊಂದಿಗೆ ಇಂಗ್ಲೆಂಡ್‌ಗೆ 608 ರನ್‌ಗಳ ಬೃಹತ್‌ ಟಾರ್ಗೆಟ್‌ ನೀಡಿದೆ.

    2ನೇ ದಿನ 3 ವಿಕೆಟ್‌ ನಷ್ಟಕ್ಕೆ 77 ರನ್‌ ಗಳಿಸಿದ್ದ ಇಂಗ್ಲೆಂಡ್‌ 3ನೇ ದಿನ 89.3 ಓವರ್‌ಗಳಲ್ಲಿ 407 ರನ್‌ ಗಳಿಸಿ ಆಲೌಟ್‌ ಆಗಿತ್ತು. ಬಳಿಕ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿದ್ದ ಭಾರತ 1 ವಿಕೆಟ್‌ ನಷ್ಟಕ್ಕೆ 64 ರನ್‌ ಗಳಿಸಿ 244 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. 4ನೇ ದಿನ ಆಂಗ್ಲರ ಬೆವರಿಳಿಸಿದ ಯುವ ಪಡೆ 6 ವಿಕೆಟ್‌ ನಷ್ಟಕೆ 427 ರನ್‌ ಗಳಿಸಿ, ಇಂಗ್ಲೆಂಡ್‌ಗೆ 608 ರನ್‌ಗಳ ಬೃಹತ್‌ ಟಾರ್ಗೆಟ್‌ ನೀಡಿದೆ.

    ತನ್ನ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಪರ ಶುಭಮನ್‌ ಗಿಲ್‌ 161 ರನ್‌ (162 ಎಸೆತ, 8 ಸಿಕ್ಸರ್‌, 13 ಬೌಂಡರಿ) ಗಳಿಸಿದ್ರೆ, ರಿಷಭ್‌ ಪಂತ್‌ 65 ರನ್‌, ರವೀಂದ್ರ ಜಡೇಜಾ ಅಜೇಯ 69 ರನ್‌, ಕೆ.ಎಲ್‌ ರಾಹುಲ್‌‌ 55 ರನ್‌, ಜೈಸ್ವಾಲ್‌ 28 ರನ್‌, ಕರುಣ್‌ ನಾಯರ್‌ 26 ರನ್‌, ನಿತೀಶ್‌ ರೆಡ್ಡಿ 1 ರನ್‌ ಗಳಿಸಿದ್ರೆ ವಾಷಿಂಗ್ಟನ್‌ ಸುಂದರ್‌ 12 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರು.

  • ಸಿರಾಜ್‌ ಬೆಂಕಿ ಬೌಲಿಂಗ್‌, 20 ರನ್‌ ಅಂತರದಲ್ಲಿ 5 ವಿಕೆಟ್‌ ಪತನ – 244 ರನ್‌ ಮುನ್ನಡೆಯಲ್ಲಿ ಭಾರತ

    ಸಿರಾಜ್‌ ಬೆಂಕಿ ಬೌಲಿಂಗ್‌, 20 ರನ್‌ ಅಂತರದಲ್ಲಿ 5 ವಿಕೆಟ್‌ ಪತನ – 244 ರನ್‌ ಮುನ್ನಡೆಯಲ್ಲಿ ಭಾರತ

    ಎಜ್ಬಾಸ್ಟನ್‌: ಮೊಹಮ್ಮದ್‌ ಸಿರಾಜ್‌ (Mohammed Siraj) ಮತ್ತು ಆಕಾಶ್‌ ದೀಪ್‌ (Akash Deep) ಅವರ ಉತ್ತಮ ಬೌಲಿಂಗ್‌ ದಾಳಿಯಿಂದ ಇಂಗ್ಲೆಂಡ್‌ (England) ವಿರುದ್ಧ ನಡೆಯುತ್ತಿರವ ಎರಡನೇ ಟೆಸ್ಟ್‌ ಪಂದ್ಯಲ್ಲಿ ಭಾರತ (Team India) 244 ರನ್‌ಗಳ ಮುನ್ನಡೆಯಲ್ಲಿದೆ.

    ಎರಡನೇ ದಿನ 3 ವಿಕೆಟ್‌ ನಷ್ಟಕ್ಕೆ 77 ರನ್‌ ಗಳಿಸಿದ್ದ ಇಂಗ್ಲೆಂಡ್‌ ಇಂದು 89.3 ಓವರ್‌ಗಳಲ್ಲಿ 407 ರನ್‌ ಗಳಿಸಿ ಆಲೌಟ್‌ ಆಯ್ತು. ಹ್ಯಾರಿ ಬ್ರೂಕ್‌ ಮತ್ತು ಜೇಮಿ ಸ್ಮಿತ್‌ ಅವರು 6ನೇ ವಿಕೆಟಿಗೆ 368 ಎಸೆತಗಳಲ್ಲಿ 303 ರನ್‌ ಜೊತೆಯಾಟವಾಡಿದ್ದರಿಂದ ತಂಡದ ಮೊತ್ತ 400 ರನ್‌ಗಳ ಗಡಿ ದಾಟಿತು.

    ಹ್ಯಾರಿ ಬ್ರೂಕ್‌ 158 ರನ್‌ (234 ಎಸೆತ, 17 ಬೌಂಡರಿ, 1 ಸಿಕ್ಸರ್‌) ಹೊಡೆದು ಔಟಾದರೆ ಜೇಮಿ ಸ್ಮಿತ್‌ ಔಟಾಗದೇ 184 ರನ್‌ (207 ಎಸೆತ, 21 ಬೌಂಡರಿ, 4 ಸಿಕ್ಸ್‌) ಹೊಡೆದರು.  ಇದನ್ನೂ ಓದಿ: ಕಾರು ರೇಸ್‌ಗೆ ಕಿಚ್ಚ ಎಂಟ್ರಿ ಬೆಂಗಳೂರು ತಂಡ ಖರೀದಿಸಿದ ಸುದೀಪ್‌

    387 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ 20 ರನ್‌ಗಳಿಸುವಷ್ಟರಲ್ಲೇ 5 ವಿಕೆಟ್‌ ಪತನಗೊಳ್ಳುವ ಮೂಲಕ ಹಿನ್ನಡೆ ಅನುಭವಿಸಿತು. ಸಿರಾಜ್‌ 70 ರನ್‌ ನೀಡಿ 6 ವಿಕೆಟ್‌ ಪಡೆದರೆ ಆಕಾಶ್‌ ದೀಪ್‌ 4 ವಿಕೆಟ್‌ ಪಡೆದು ಇಂಗ್ಲೆಂಡ್‌ ರನ್‌ಗೆ ನಿಯಂತ್ರಣ ಹೇರಿದರು.

    ನಂತರ ಬ್ಯಾಟಿಂಗ್‌ ಮಾಡಿದ ಭಾರತ 1 ವಿಕೆಟ್‌ ನಷ್ಟಕ್ಕೆ 64 ರನ್‌ ಗಳಿಸಿದೆ. ಯಶಸ್ವಿ ಜೈಸ್ವಾಲ್‌ 28 ರನ್‌ ಹೊಡೆದು ಔಟಾದರೆ ಕೆಎಲ್‌ ರಾಹುಲ್‌ (KL Rahul) ಔಟಾಗದೇ 28 ರನ್‌, ಕರುಣ್‌ ನಾಯರ್‌ ಔಟಾಗದೇ 7 ರನ್‌ ಹೊಡೆದು ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

  • ಕೊನೆಯ ದಿನವೂ ಮಳೆಯಾಟ – ಗಬ್ಬಾ ಟೆಸ್ಟ್‌ ಡ್ರಾನಲ್ಲಿ ಅಂತ್ಯ; WTC ಫೈನಲ್‌ ರೇಸ್‌ನಲ್ಲಿ ಉಳಿದ ಭಾರತ

    ಕೊನೆಯ ದಿನವೂ ಮಳೆಯಾಟ – ಗಬ್ಬಾ ಟೆಸ್ಟ್‌ ಡ್ರಾನಲ್ಲಿ ಅಂತ್ಯ; WTC ಫೈನಲ್‌ ರೇಸ್‌ನಲ್ಲಿ ಉಳಿದ ಭಾರತ

    ಬ್ರಿಸ್ಬೇನ್: ಬಾರ್ಡರ್‌ ಗವಾಸ್ಕರ್‌ ಟ್ರೋಫಿ 3ನೇ ಟೆಸ್ಟ್‌ ಪಂದ್ಯದ ಕೊನೆಯ ದಿನವೂ ಮಳೆ ಆಟವೇ ಮುಂದುವರಿದಿದ್ದು, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇದರಿಂದ ಭಾರತಕ್ಕೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಹಾದಿ ಕೊಂಚ ಸುಗಮವಾದಂತಾಗಿದೆ. ಸದ್ಯ ಮೂರು ಪಂದ್ಯಗಳ ಪೈಕಿ 1-1ರಲ್ಲಿ ಸರಣಿ ಸಮಬಲಗೊಂಡಿದೆ. ಉಳಿದ 2 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದರೆ, WTC ಫೈನಲ್‌ ತಲುಪಲಿದೆ.

    ವೂಲೂಂಗಬ್ಬಾದ ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 4ನೇ ದಿನದ ಅಂತ್ಯಕ್ಕೆ ಭಾರತ 9 ವಿಕೆಟ್‌ ನಷ್ಟಕ್ಕೆ 252 ರನ್‌ ಗಳಿಸಿ, ಫಾಲೋ ಆನ್‌ ಭೀತಿಯಿಂದ ಪಾರಾಗಿತ್ತು. ಕೊನೆಯ ಕ್ರೀಸ್‌ ಆರಂಭಿಸಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 260 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ 185 ರನ್‌ಗಳ ಮುನ್ನಡೆಯೊಂದಿಗೆ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್‌ 7 ವಿಕೆಟ್‌ ನಷ್ಟಕ್ಕೆ 89 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು. ಈ ಮೂಲಕ ಭಾರತಕ್ಕೆ 275 ರನ್‌ಗಳ ಗುರಿ ನೀಡಿತು. ಇತ್ತ ಭಾರತ 2.1 ಓವರ್‌ಗಳಲ್ಲಿ 8 ರನ್‌ ಗಳಿಸುತ್ತಿದ್ದಂತೆ ಮಳೆ ಕಾಟ ಶುರುವಾಯಿತು. ನಿರಂತರವಾಗಿ ಸುರಿಯುತ್ತಿದ್ದರಿಂದ ಪಂದ್ಯ ಡ್ರಾನತ್ತ ತಿರುಗಿತು.

    ಭಾರತವನ್ನು ಕಾಪಾಡಿದ ಆಕಾಶ್‌ ದೀಪ್‌:
    ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ 3ನೇ ದಿನ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು 51 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. 4ನೇ ದಿನ ಆರಂಭಿಕ ಕೆ.ಎಲ್ ರಾಹುಲ್ 84 ರನ್, ರವೀಂದ್ರ ಜಡೇಜಾ 77 ರನ್‌ಗಳ ಕೊಡುಗೆ ನೀಡಿದರೂ, ಫಾಲೋ ಆನ್‌ಗೆ ತುತ್ತಾಗುವ ಭೀತಿಯಲ್ಲಿತ್ತು. ಆದ್ರೆ ಕೊನೇ ಕ್ಷಣದಲ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಆಕಾಶ್ ದೀಪ್, ಪ್ಯಾಟ್ ಕಮ್ಮಿನ್ಸ್ ಅವರ ಪಾಲಿನ 21ನೇ ಓವರ್‌ನ 4ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಟೀಂ ಇಂಡಿಯಾವನ್ನು ಫಾಲೋ ಆನ್‌ನಿಂದ ಕಾಪಾಡಿದರು. ಜಸ್ಪ್ರೀತ್ ಬುಮ್ರಾ ಸಹ ಬ್ಯಾಟಿಂಗ್‌ನಲ್ಲಿ ನೆರವಾದರು.

    ಟೀಂ ಇಂಡಿಯಾ ಪರ ಕೆ.ಎಲ್ ರಾಹುಲ್ 84 ರನ್ (139 ಎಸೆತ, 8 ಬೌಂಡರಿ), ರವೀಂದ್ರ ಜಡೇಜಾ 77 ರನ್ (123 ರನ್, 7 ಬೌಂಡರಿ, 1 ಸಿಕ್ಸರ್), ರೋಹಿತ್ ಶರ್ಮಾ 10 ರನ್, ನಿತೀಶ್ ಕುಮಾರ್ ರೆಡ್ಡಿ 16 ರನ್ ಗಳಿಸಿದ್ರೆ ಉಳಿದವರು ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಆಕಾಶ್ ದೀಪ್ 31 ರನ್ ಗಳಿಸಿದ್ರೆ, ಜಸ್ಪ್ರೀತ್ ಬುಮ್ರಾ 10 ರನ್‌ ಗಳಿಸಿದರು.

    ಭಾರತದ WTC ಫೈನಲ್‌ ಹಾದಿ ಹೇಗಿದೆ?
    ಇದೇ ಡಿ.26ರಿಂದ ದಕ್ಷಿಣ ಆಫ್ರಿಕಾ ತಂಡವು ಪಾಕಿಸ್ತಾನದ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಈ ಸರಣಿಯ ಒಂದು ಪಂದ್ಯದಲ್ಲಿ ಪಾಕ್‌ ಗೆಲ್ಲಬೇಕು. ಇದೇ ವೇಳೆ ಆಸೀಸ್‌ ವಿರುದ್ಧ ಸರಣಿಯನ್ನು ಭಾರತ 3-1 ಅಂತರದಲ್ಲಿ ಗೆದ್ದರೆ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಅಥವಾ ಭಾರತವು ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಸರಣಿಯನ್ನು 2-1 ಅಂತರದಲ್ಲಿ ಗೆದ್ದರೆ, ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಆಸೀಸ್‌ 1-1 ಅಥವಾ ಲಂಕಾ 1-0 ಅಂತರದಲ್ಲಿ ಕೊನೆಯಗೊಳ್ಳಬೇಕು. ಅಥವಾ ಭಾರತ ಆಸೀಸ್‌ ವಿರುದ್ಧ 2-2 ಅಂತರಲ್ಲಿ ಗೆದ್ದರೆ, ಲಂಕಾ, ಆಸೀಸ್‌ ಇರುದ್ಧ 1-0 ಅಥವಾ 2-0 ವಿರುದ್ಧ ಗೆದ್ದರೆ ಮಾತ್ರ ಭಾರತ ಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆಗಳಿವೆ.

    ಡ್ರೆಸ್ಸಿಂಗ್ ರೂಮ್‌ನಲ್ಲಿ ಕೊಹ್ಲಿ, ಗಂಭೀರ್ ಸಂಭ್ರಮ:
    213 ರನ್‌ಗಳಿಗೆ ಭಾರತ ತನ್ನ 9ನೇ ವಿಕೆಟ್ ಕಳೆದುಕೊಂಡಿತು. ಇದರಿಂದ ಭಾರತ ಫಾಲೋ ಆನ್‌ಗೆ ತುತ್ತಾಗಿ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಆದ್ರೆ ಕೊನೆಯ ವಿಕೆಟ್‌ಗೆ ಜೊತೆಗೂಡಿದ ಬುಮ್ರಾ, ಆಕಾಶ್‌ದೀಪ್ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದರು. ಪ್ಯಾಟ್ ಕಮ್ಮಿನ್ಸ್ ಅವರ 21ನೇ ಓವರ್‌ನ 4ನೇ ಎಸೆತವನ್ನು ಆಕಾಶ್ ದೀಪ್ ಬೌಂಡರಿಗೆ ಅಟ್ಟುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಹಿರಿಯ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ವಿರಾಟ್ ಕೊಹ್ಲಿ, ಕೋಚ್ ಗೌತಮ್ ಗಂಭೀರ್, ರೋಹಿತ್ ಶರ್ಮಾ, ಪರಸ್ಪರ ಕೈಕುಲುಕಿ ಸಂಭ್ರಮಿಸಿದ್ದರು.