Tag: ಆಂಬ್ಯುಲೆನ್ಸ್

  • ಗಂಡನಿಂದ ದೂರವಾಗಲೂ ಕೊರೊನಾ ಕಿಡ್ನಾಪ್ ಪ್ಲಾನ್- ಇದು ಬೆಂಗ್ಳೂರು ಟು ದೆಹಲಿ ಕಥೆ

    ಗಂಡನಿಂದ ದೂರವಾಗಲೂ ಕೊರೊನಾ ಕಿಡ್ನಾಪ್ ಪ್ಲಾನ್- ಇದು ಬೆಂಗ್ಳೂರು ಟು ದೆಹಲಿ ಕಥೆ

    – ಪರಿಚಿತನ ಸಹಾಯದಿಂದ ಮನೆಯಿಂದ ಎಸ್ಕೇಪ್
    – ಆಂಬ್ಯುಲೆನ್ಸ್ ನಲ್ಲಿ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್

    ಬೆಂಗಳೂರು: ಕೋವಿಡ್ 19 ಆಂಬ್ಯುಲೆನ್ಸ್ ನಿಂದ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಲಾಗಿದೆ ಎಂಬ ಪ್ರರಕಣಕ್ಕೆ ಟ್ವಿಸ್ಟ್ ಲಭಿಸಿದ್ದು, ಪತಿಯಿಂದ ದೂರವಾಗಲೂ ಮಹಿಳೆ ಸ್ವಯಂ ಅಪಹರಣದ ನಾಟಕ ಮಾಡಿದ್ದಳು ಎಂದು ತಿಳಿದುಬಂದಿದೆ. ಸದ್ಯ ಆಕೆ ದೆಹಲಿಯಲ್ಲಿ ಸುರಕ್ಷಿತವಾಗಿದ್ದಾಳೆ ಎಂಬ ಮಾಹಿತಿ ಲಭಿಸಿದೆ.

    ಘಟನೆ ಕುರಿತಂತೆ ಪೊಲೀಸರು ಸ್ಪಷ್ಟನೆ ನೀಡಿದ್ದು, ಬೊಮ್ಮನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೋವಿಡ್ 19 ಪರೀಕ್ಷೆಗೆ ಒಳಗಾಗಿ ಆಂಬ್ಯುಲೆನ್ಸ್ ನಲ್ಲಿ ತೆರಳಿದ್ದ ಯುವತಿ ಕಾಣೆಯಾಗಿದ್ದರು ಎಂದು ಸೆ.11 ರಂದು ಪ್ರತಿಕೆಗಳಲ್ಲಿ ವರದಿ ಪ್ರಕಟವಾಗಿದೆ. ಆದರೆ ಸಾರ್ವಜನಿಕರು ಅನಗತ್ಯವಾಗಿ ಭೀತಿಗೆ ಒಳಗಾಗದೇ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬಹುದು.

    ಕುಟುಂಬದ ವೈಯುಕ್ತಿಕ ಸಮಸ್ಯೆಯಿಂದ ಘಟನೆ ನಡೆದಿದೆ. ಕಾಣೆಯಾದ ಮಹಿಳೆ ತಾನು ಸ್ವ-ಇಚ್ಛೆಯಿಂದ ಪರಿಚಿತರ ಸಹಾಯದೊಂದಿಗೆ ತೆರಳಿರುವುದು ಖಚಿತವಾಗಿದೆ. ಇದಕ್ಕೂ ಕೊರೊನಾ ಪರೀಕ್ಷೆ ನಡೆಸುವ ಬಿಬಿಎಂಪಿ ಅಧಿಕಾರಿ, ಸಿಬ್ಬಂದಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಸಾರ್ವಜನಿಕರು ಆತಂಕ, ಭಯಕ್ಕೊಳಗಾಗದೇ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದು ಬೆಂಗಳೂರು ಪೊಲೀಸರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಏನಿದು ಘಟನೆ: ಸೆ.3 ರಂದು ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಮಹಿಳೆ ಸ್ವತಃ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಸೆ.4 ರಂದು ಆಕೆಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆಂಬ್ಯುನೆಲ್ಸ್ ವ್ಯವಸ್ಥೆ ಮಾಡಿ ಮಹಿಳೆಗೆ ಮಾಹಿತಿ ನೀಡಿದ್ದರು. ಆ ಬಳಿಕ ಯುವತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಪತಿ ಮತ್ತು ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ವರದಿಯಾಗಿತ್ತು.

    ಆದರೆ ಘಟನೆ ಕುರಿತು ಘಟನೆಯ ಕುರಿತು ವರದಿಯಾದ ಬಳಿಕ ಸ್ಪಷ್ಟನೆ ನೀಡಿದ್ದ ಬಿಬಿಎಂಪಿ, ತಾವು ಆ ವ್ಯಾಪ್ತಿಯಲ್ಲಿ ಯಾವುದೇ ಕೋವಿಡ್ ಪರೀಕ್ಷೆ ನಡೆಸಿಲ್ಲ. ಅಲ್ಲದೇ ಆಂಬ್ಯುಲೆನ್ಸ್ ಕೂಡ ಕಳುಹಿಸಿಕೊಟ್ಟಿಲ್ಲ ಎಂದು ಹೇಳಿತ್ತು. ಯಾವುದೇ ರೋಗಿಯ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸದೆ ಅವರನ್ನು ಆಂಬ್ಯುಲೆನ್ಸ್ ಮೂಲಕ ಕರೆತರುವುದಿಲ್ಲ. ಸಂದೇಶದಲ್ಲಿ ಆಂಬ್ಯುಲೆನ್ಸ್ ಚಾಲಕನ ಮೊಬೈಲ್ ಸಂಖ್ಯೆ, ಗುರುತಿನ ಚೀಟಿ ಮಾಹಿತಿ ಇರುತ್ತದೆ. ಅಲ್ಲದೇ ಎಲ್ಲಾ ಆಂಬ್ಯುಲೆನ್ಸ್ ಗಳಿಗೆ ಜಿಪಿಎಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿತ್ತು.

    ಸದ್ಯ ಮಹಿಳೆ ದೆಹಲಿಯ ಪಹರ್ ಗಂಜ್ ಪ್ರದೇಶದಲ್ಲಿ ಇರುವ ಮಾಹಿತಿ ಲಭ್ಯವಾಗಿದ್ದು, ಕಸ್ಟಮರ್ ಸರ್ವಿಸ್ ಎಕ್ಸಿಕ್ಯೂಟಿವ್ ಆಗಿರುವ ಆಕೆ ಪತಿಯೊಂದಿಗೆ ವೈಯುಕ್ತಿಕ ವಿವಾದವಿದ್ದ ಕಾರಣ ಮನೆಯನ್ನು ತೊರೆಯಲು ಪ್ಲಾನ್ ಮಾಡಿ ಸ್ನೇಹಿತನ ಸಹಾಯದಿಂದ ತೆರಳಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವ ಆಕೆ ತಾನು ಸುರಕ್ಷಿತವಾಗಿದ್ದು, ಪತಿಯೊಂದಿಗೆ ಇರುವ ಸಮಸ್ಯೆಯನ್ನು ಮಾತನಾಡಿ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದ್ದಾಳೆ. ಅಲ್ಲದೇ ಆಕೆಯ ಫೋನ್ ಕರೆಯ ಧ್ವನಿಯನ್ನು ರೆಕಾರ್ಡ್ ಮಾಡಿ ಪೊಲೀಸರು ಆಕೆಯ ಪತಿಗೆ ಕೇಳಿಸಿದ್ದು, ಆ ಧ್ವನಿ ತನ್ನ ಪತ್ನಿಯದ್ದು ಎಂದು ಆತ ದೃಢಪಡಿಸಿದ್ದಾನೆ.

    ಇತ್ತ ಸತ್ಯವನ್ನು ಮರೆಮಾಚಿ, ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಕ್ಕಾಗಿ ಕುಟುಂಬದ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವುದಾಗಿ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ವಿಶೇಷ ಅಧಿಕಾರಿ ಪಿ.ಮಣಿವಣ್ಣನ್ ಅವರು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

  • ಮನೆ ವಸ್ತುಗಳನ್ನು ಶಿಫ್ಟ್ ಮಾಡಲು ಆಂಬ್ಯುಲೆನ್ಸ್ ಬಳಸಿದ ಐಪಿಎಸ್ ಅಧಿಕಾರಿ

    ಮನೆ ವಸ್ತುಗಳನ್ನು ಶಿಫ್ಟ್ ಮಾಡಲು ಆಂಬ್ಯುಲೆನ್ಸ್ ಬಳಸಿದ ಐಪಿಎಸ್ ಅಧಿಕಾರಿ

    ಬೆಂಗಳೂರು: ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಮನೆಯ ವಸ್ತುಗಳನ್ನು ಶಿಫ್ಟ್ ಮಾಡಲು ಆಂಬ್ಯುಲೆನ್ಸ್ ಬಳಕೆ ಮಾಡುವ ಮೂಲಕ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ.

    ಬೆಂಗಳೂರಿನ ಕ್ರೈಂ ಡಿಸಿಪಿ ಕುಲದೀಪ್ ಕುಮಾರ್ ಆರ್ ಜೈನ್ ಕೆಎಸ್‍ಆರ್ ಪಿ ವಾಹನದ ಜೊತೆಗೆ ಪೊಲೀಸರಿಗೆ ನೀಡಿರುವ ಆಂಬ್ಯುಲೆನ್ಸ್ ಮನೆ ಸಾಮಾಗ್ರಿಗಳನ್ನು ಸ್ಥಳಾಂತರಿಸಲು ಬಳಸಿಕೊಂಡಿದ್ದಾರೆ. ಕುಲದೀಪ್ ಕುಮಾರ್ ಆರ್ ಜೈನ್ ಸಿಸಿಬಿ ಕ್ರೈಂ ಒನ್ ಡಿಸಿಪಿ ಆಗಿ ವರ್ಗಾವಣೆಗೊಂಡಿದ್ದಾರೆ. ಹೀಗಾಗಿ ಶಿವಾಜಿನಗರದ ಮೋತಿ ಮಸೀದಿ ಪಕ್ಕದಲ್ಲಿರುವ ಸರ್ಕಾರಿ ಬಂಗಲೆಗೆ ಶಿಫ್ಟ್ ಆಗಿದ್ದಾರೆ. ಸರ್ಕಾರಿ ಬಂಗಲೆಗೆ ಮನೆ ವಸ್ತುಗಳನ್ನು ಶಿಫ್ಟ್ ಮಾಡಲು ಸರ್ಕಾರಿ ವಾಹನಗಳನ್ನು ಬಳಸಿಕೊಂಡಿರುವ ದೃಶ್ಯಗಳು ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಜೊತೆಗೆ ಪೊಲೀಸರ ಜೀವ ರಕ್ಷಕ ಆಂಬ್ಯುಲೆನ್ಸ್ ಅನ್ನು ಮನೆ ಶಿಫ್ಟ್ ಮಾಡೊದಕ್ಕೆ ಬಳಸಿಕೊಂಡಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

  • ಜ್ಯೂಸ್ ಎಂದು ನೀಲಗಿರಿ ತೈಲ ಕುಡಿದ ಬಾಲಕಿ ಸಾವು!

    ಜ್ಯೂಸ್ ಎಂದು ನೀಲಗಿರಿ ತೈಲ ಕುಡಿದ ಬಾಲಕಿ ಸಾವು!

    ಮೈಸೂರು: ನೀಲಗಿರಿ ತೈಲವನ್ನು ಮನೆಯಲ್ಲಿ ಎಲ್ಲಂದರಲ್ಲಿ ಇಡುವ ಪೋಷಕರು ಈ ಸುದ್ದಿಯನ್ನು ಓದಲೇ ಬೇಕು. ನೀಲಗಿರಿ ತೈಲ ಕುಡಿದು 5 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಕುಶಾಲನಗರ ತಾಲೂಕು ಕೂಡಿಗೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಕೂಡಿಗೆ ಕೊಪ್ಪಲು ಗ್ರಾಮದ ಪ್ರಸನ್ನ ಕುಮಾರ್ ಎಂಬವರ ಮಗಳು ವರ್ಷಿತ (5) ಸಾವನ್ನಪ್ಪಿದ ದುರ್ದೈವಿ ಬಾಲಕಿ. ಜ್ಯೂಸ್ ಎಂದು ಭಾವಿಸಿ ನೀಲಗಿರಿ ತೈಲ ಕುಡಿದು ಅಸ್ವಸ್ಥಳಾದ ವರ್ಷಿತಾಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವರ್ಷಿತಾ ಸಾವನ್ನಪ್ಪಿದ್ದಾಳೆ.

     

    ನೀಲಗಿರಿ ತೈಲವನ್ನ ಕುಡಿದ ವರ್ಷಿತಾಳನ್ನು ಆಸ್ಪತ್ರೆಗೆ ಕರೆದೊಯ್ಯಲು 108 ಆಂಬ್ಯುಲೆನ್ಸ್ ಕರೆ ಮಾಡಿದ್ದೆ. ಅವರು ಮೈಸೂರಿನ ಆಸ್ಪತ್ರೆಯಿಂದ ಅಂಬುಲೆನ್ಸ್ ಕಳಿಸುವಂತೆ ತಿಳಿಸುತ್ತಾರೆ. ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಗ್ರಾಮಕ್ಕೆ ಬರಲಿಲ್ಲ. ಅಷ್ಟೇ ಅಲ್ಲದೇ ವಾಹನದಲ್ಲಿ ಆಮ್ಲಜನಕ ಸೇರಿದಂತೆ ಸೂಕ್ತ ಸೌಲಭ್ಯಗಳಿರಲಿಲ್ಲ. ಇದರಿಂದಾಗಿ ವರ್ಷಿತಾ ಸಾವು ಬದುಕಿನ ಮಧ್ಯೆ ಹೋರಾಡುವ ಪರಿಸ್ಥಿತಿ ಎದುರಾಯಿತು. ಬಳಿಕ ಆಸ್ಪತ್ರೆಗೆ ತಲುಪಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಮೃತ ಬಾಲಕಿ ತಂದೆ ಪ್ರಸನ್ನಕುಮಾರ್ ಆರೋಪಿಸಿದ್ದಾರೆ.

    ಹೆಸರಿಗೆ ಮಾತ್ರ ಅಂಬುಲೆನ್ಸ್ ವ್ಯವಸ್ಥೆ ಇದೆ. ಅದರಲ್ಲಿ ಅಗತ್ಯ ಚಿಕಿತ್ಸಾ ಸಾಮಗ್ರಿಗಳು ಹಾಗೂ ಆಮ್ಲಜನಕ ಇಟ್ಟಿಲ್ಲ. ಇವರು ರೋಗಿಗಳ ಜೀವನದ ಜೊತೆಗೆ ಆಟವಾಡುತ್ತಿದ್ದಾರೆ ಎಂದು ದೂರಿದರು.

    ಮಗಳಿಗೆ ಗಾಯವಾಗಿತ್ತು. ಅದಕ್ಕೆ ಹಚ್ಚಿಕೊಳ್ಳಲು ನೀಲಗಿರಿ ತೈಲವನ್ನು ಮನೆಯಲ್ಲಿ ಇಡಲಾಗಿತ್ತು. ವರ್ಷಿತಾಗೆ ಜ್ಯೂಸ್ ಅಂದ್ರೆ ತುಂಬಾ ಇಷ್ಟ. ಪ್ರಸನ್ನಕುಮಾರ್ ಮಗಳಿಗೆ ಜ್ಯೂಸ್ ತಂದು ಕೊಡುತ್ತಿದ್ದರು. ಮನೆಯಲ್ಲಿ ಆಟವಾಡುತ್ತಿದ್ದ ವರ್ಷಿತಾಗೆ ಇಂದು ನೀಲಗಿರಿ ಬಾಟಲ್ ನೋಡಿದ್ದಾಳೆ. ಬಾಟಲ್‍ನಲ್ಲಿರುವುದು ಜ್ಯೂಸ್ ಎಂದು ತಿಳಿದು ಕುಡಿದ ಪರಿಣಾಮ ಅಸ್ವಸ್ಥಳಾಗಿ ಬಿದ್ದಿದ್ದಳು. ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ವರ್ಷಿತಾ ಅಜ್ಜಿ ಸುಶೀಲಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೈದ್ಯನಂತೆ ನಟಿಸಿದ ಎಸಿ ಮೆಕ್ಯಾನಿಕ್- ಆಂಬುಲೆನ್ಸ್ ನಲ್ಲೇ ಬಾಲಕನ ಸಾವು

    ವೈದ್ಯನಂತೆ ನಟಿಸಿದ ಎಸಿ ಮೆಕ್ಯಾನಿಕ್- ಆಂಬುಲೆನ್ಸ್ ನಲ್ಲೇ ಬಾಲಕನ ಸಾವು

    ಕೋಲ್ಕತಾ: ಎಸಿ(ಏರ್ ಕಂಡೀಷನರ್) ಮೆಕ್ಯಾನಿಕ್‍ವೊಬ್ಬ ವೈದ್ಯನಂತೆ ನಟಿಸಿ 16 ವರ್ಷದ ಬಾಲಕನ ಸಾವಿಗೆ ಕಾರಣನಾದ ಘಟನೆ ಕೋಲ್ಕತ್ತಾದಲ್ಲಿ ಗುರುವಾರದಂದು ನಡೆದಿದೆ.

    ಅರಿಜಿತ್(16) ಮೃತ ಬಾಲಕ. ವೈದ್ಯನಂತೆ ನಟಿಸಿ ವಂಚಿಸಿದ ಆರೋಪದಡಿ ಎಸಿ ಮೆಕ್ಯಾನಿಕ್ ಸರ್ಫರಾಜ್ ಮತ್ತು ಆಂಬುಲೆನ್ಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

    ಆಂಬುಲೆನ್ಸ್ ನಲ್ಲಿ ಮೆಕ್ಯಾನಿಕ್‍ಗೆ ಲೈಫ್ ಸಪೋರ್ಟಿಂಗ್ ಸಿಸ್ಟಂ ಸರಿಯಾಗಿ ಉಪಯೋಗಿಸಲು ಬರದೇ ಬಾಲಕನ ಪರಿಸ್ಥಿತಿ ಹದಗೆಟ್ಟು ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗಾಗಲೇ ಅರಿಜಿತ್ ಸಾವನ್ನಪ್ಪಿದ್ದ ಎಂದು ಕೊಲ್ಕತ್ತಾದ ವೈದ್ಯರು ದೃಢಪಡಿಸಿದ್ದಾರೆ.

    ಏನಿದು ಘಟನೆ?: ಅರಿಜಿತ್ ತಂದೆ ರಂಜಿತ್ ದಾಸ್ ಅವರು ಸರ್ಫರಾಜ್ ಉದಿನ್‍ಗೆ 8,000 ರೂ. ಹಣ ನೀಡಿ ತನ್ನ ಮಗನನ್ನು ಖಾಸಗಿ ಆಸ್ಪತ್ರೆಯಿಂದ ಕೋಲ್ಕತ್ತಾ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದರು. ಆಂಬುಲೆನ್ಸ್ ನಲ್ಲಿ ಲೈಫ್ ಸಪೋರ್ಟಿಂಗ್ ಸಿಸ್ಟಂ ಹೇಗೆ ಬಳಸಬೇಕೆಂದು ಮೆಕ್ಯಾನಿಕ್ ಗೆ ತಿಳಿದಿರಲಿಲ್ಲ. ಆರಿಜಿತ್ ತಂದೆ ರಂಜಿತ್ ದಾಸ್ ಈ ಕುರಿತು ಪ್ರತಿಕ್ರಿಯಿಸಿದ್ದು, ಅವರೊಬ್ಬ ದೊಡ್ಡ ವೈದ್ಯರು ಎಂದು ಹೇಳಿದ್ರು. ಆಂಬುಲೆನ್ಸ್ ನಲ್ಲಿ ಯಾವುದೇ ಅಡಚಣೆ ಇದ್ದರೆ ಅವರಿಗೆ ಚಿಕಿತ್ಸೆ ಕಷ್ಟವಾಗುತ್ತಾದೆಂದು ಕುಟುಂಬಸ್ಥರನ್ನ ಆಂಬುಲೆನ್ಸ್ ನಲ್ಲಿ ಹೋಗಲು ಅನುಮತಿಸದೆ ನಮ್ಮನ್ನು ಕಾರ್ ನಲ್ಲಿ ಹೋಗುವಂತೆ ಹೇಳಿದರು ಎಂದು ತಿಳಿಸಿದ್ದಾರೆ.

    ರಂಜಿತ್ ದಾಸ್ ಅವರು ಪೂರ್ವ ಜಾದವ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬಳಿಕ 26 ವರ್ಷದ ಮೆಕ್ಯಾನಿಕ್ ನನ್ನು ಬಂಧಿಸಲಾಗಿದೆ. ಬದ್ರ್ವಾನ್ ನ ಆಂಬ್ಯುಲೆನ್ಸ್ ಚಾಲಕ ಮತ್ತು ಅನ್ನಪೂರ್ಣ ನರ್ಸಿಂಗ್ ಹೋಮ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯವರು ವೈದ್ಯ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು ಇದಕ್ಕಾಗಿ 16 ಸಾವಿರ ರೂ. ಹಣ ಪಡೆದಿದ್ದರು ಎಂದು ವರದಿಯಾಗಿದೆ.

    ನಿರ್ಲಕ್ಷ್ಯ ಮತ್ತು ವಂಚನೆ ಆರೋಪದಡಿ ಸರ್ಫರಾಜ್ ಮತ್ತು ಆಂಬುಲೆನ್ಸ್ ಚಾಲಕನನ್ನು ಬಂಧಿಸಿರೋ ಪೊಲೀಸರು ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ. ಇಬ್ಬರು ಆರೋಪಿಗಳನ್ನ ಶುಕ್ರವಾರದಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಹೇಳಿದ್ದಾರೆ.

  • ಸಿಎಂ ಸೆಕ್ಯೂರಿಟಿ ಹೆಸರಲ್ಲಿ ರೋಗಿಯನ್ನ ಆಂಬುಲೆನ್ಸ್ ನಿಂದ ಇಳಿಸಿ ನಡೆಸಿದ್ರು

    ಸಿಎಂ ಸೆಕ್ಯೂರಿಟಿ ಹೆಸರಲ್ಲಿ ರೋಗಿಯನ್ನ ಆಂಬುಲೆನ್ಸ್ ನಿಂದ ಇಳಿಸಿ ನಡೆಸಿದ್ರು

    ಮಂಡ್ಯ: ಸಿಎಂ ಕಾರ್ಯಕ್ರಮದ ಸೆಕ್ಯೂರಿಟಿ ಹೆಸರಲ್ಲಿ ಆಂಬುಲೆನ್ಸ್ ನಿಂದ ರೋಗಿಯನ್ನು ಕೆಳಗಿಳಿಸಿ ನಡೆಸಿ ಕಳುಹಿಸಿದ ಅಮಾನವೀಯ ಘಟನೆ ಮಂಡ್ಯದಲ್ಲಿ ನಡೆದಿದೆ.

    ಜಿಲ್ಲೆಯ ನಾಗಮಂಗಲಕ್ಕೆ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಸೋಮವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸಿದ್ದರು. ಈ ವೇಳೆ ನಾಗಮಂಗಲದಲ್ಲಿ ಸ್ಟೇಡಿಯಂನಲ್ಲಿ ಹೆಲಿಕಾಪ್ಟರ್ ನಲ್ಲಿ ಇಳಿದು ಎದುರಿನ ಸ್ಟೇಜ್ ಗೆ ಹೋಗುವಾಗ ಆಂಬುಲೆನ್ಸ್ ನಲ್ಲಿ ಮಹಿಳಾ ರೋಗಿಯೊಬ್ಬರನ್ನು ಕರೆತರಲಾಗುತ್ತಿತ್ತು.

    ಆದರೆ ಸಿಎಂ ಭದ್ರತೆ ಹೆಸರಲ್ಲಿ ಪೊಲೀಸರು ಹಳ್ಳಿಯಿಂದ ಮಹಿಳಾ ರೋಗಿಯನ್ನು ಕರೆತರುತ್ತಿದ್ದ ಆಂಬುಲೆನ್ಸ್ ಅರ್ಧಕ್ಕೆ ತಡೆದಿದ್ದಾರೆ. ಭದ್ರತೆ ಹೆಸರಲ್ಲಿ ರೋಗಿಯನ್ನು ತಡೆದಿದ್ದರಿಂದ ಮಹಿಳೆಯನ್ನು ನಡೆಸಿಕೊಂಡೇ ಕರೆದುಕೊಂಡು ಹೋಗಿದ್ದಾರೆ. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಮಹಿಳೆಯನ್ನ ನೋಡಿ ಮರುಗಿದ ಜನ ಇಂತಹ ವಿಷಯಗಳ ಬಗ್ಗೆ ಮುಖ್ಯಮಂತ್ರಿಗಳೇ ಪೊಲೀಸರಿಗೆ ತಿಳಿಹೇಳಬೇಕು. ವೇದಿಕೆ ಮೇಲೆ ಅಭಿವೃದ್ಧಿ ಬಗ್ಗೆ ಮಾತನಾಡುವಾಗ ಇಂತಹ ಮಾನವೀಯತೆ ವಿಷಯಗಳ ಬಗ್ಗೆ ಸಿಎಂ ಪಾಠ ಮಾಡಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಬರುತ್ತಿದ್ದ ಆಂಬುಲೆನ್ಸ್ ಪಲ್ಟಿ- ತಪ್ಪಿತು ಭಾರೀ ಅನಾಹುತ

    ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲು ಬರುತ್ತಿದ್ದ ಆಂಬುಲೆನ್ಸ್ ಪಲ್ಟಿ- ತಪ್ಪಿತು ಭಾರೀ ಅನಾಹುತ

    ಬೆಳಗಾವಿ: ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲೆಂದು ಬರುತ್ತಿದ್ದ 108 ಆಂಬುಲೆನ್ಸ್ ಪಲ್ಟಿಯಾದ ಘಟನೆ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಮತ್ತು ಅರಟಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ಆಂಬುಲೆನ್ಸ್ ಅರಟಾಳ ಗ್ರಾಮದ ಭಾಗ್ಯಶ್ರೀ ಢಂಗೆ ಎಂಬವರನ್ನು ಕರೆತರಲು ಬರುತ್ತಿತ್ತು. ಈ ಸಂದರ್ಭದಲ್ಲಿ ಅರಟಾಳ ಮತ್ತು ಹಾಲಳ್ಳಿ ಗ್ರಾಮದ ಮಧ್ಯೆ ಆಂಬುಲೆನ್ಸ್ ಪಲ್ಟಿಯಾಗಿದೆ.

    ಗರ್ಭಿಣಿಯನ್ನು ಕರೆತರಲು ಬರುತ್ತಿದ್ದಾಗ ಈ ಘಟನೆ ನಡೆದದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಆಂಬುಲೆನ್ಸ್ ನ ಟೈರ್ ಸ್ಪೋಟಗೊಂಡಿದ್ದರಿಂದ ಈ ಅವಘಡ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆಯಿಂದ ಅದೃಷ್ಟವಶಾತ್ ಆಂಬುಲೆನ್ಸ್ ಚಾಲಕ ಮತ್ತು ಸ್ಟಾಫ್ ನರ್ಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

  • ಸ್ಪ್ಲೆಂಡರ್, ಬುಲೆಟ್ ನಡುವೆ ಮುಖಾಮುಖಿ ಡಿಕ್ಕಿ – ರಸ್ತೆ ಮಧ್ಯೆ ಗಾಯಾಳುಗಳ ನರಳಾಟ

    ಸ್ಪ್ಲೆಂಡರ್, ಬುಲೆಟ್ ನಡುವೆ ಮುಖಾಮುಖಿ ಡಿಕ್ಕಿ – ರಸ್ತೆ ಮಧ್ಯೆ ಗಾಯಾಳುಗಳ ನರಳಾಟ

    ಚಿಕ್ಕಬಳ್ಳಾಪುರ: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಮೂವರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡು ರಸ್ತೆ ಮಧ್ಯೆ ನರಳಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಏನಿಗದೆಲೆ ಕ್ರಾಸ್ ಬಳಿ ನಡೆದಿದೆ.

    ಬುಲೆಟ್ ಹಾಗೂ ಸ್ಪ್ಲೆಂಡರ್ ನಡುವೆ ಅಪಘಾತ ಸಂಭವಿಸಿದೆ. ಬುಲೆಟ್ ಸವಾರ ಚೇಳೂರು ಗ್ರಾಮದ ಚಂದ್ರಶೇಖರ್ ಹಾಗೂ ಬತ್ತಲಹಳ್ಳಿ ಗ್ರಾಮದವರಾದ ವೆಂಕಟರೋಣಪ್ಪ ಹಾಗೂ ಆತನ ಸ್ನೇಹಿತ ಗಾಯಗೊಂಡಿದ್ದಾರೆ.

    ಅಪಘಾತ ನಂತರ ಆಂಬ್ಯುಲೆನ್ಸ್ ಸಕಾಲಕ್ಕೆ ಬಾರದ ಹಿನ್ನೆಲೆ, ಅರ್ಧ ಗಂಟೆಗೂ ಹೆಚ್ಚು ಕಾಲ ಮೂವರು ಗಾಯಾಳುಗಳು ರಸ್ತೆ ಮಧ್ಯೆ ನರಳಾಡಿದ್ದಾರೆ. ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರ ವಾಹನದಲ್ಲೇ ಗಾಯಾಳುಗಳನ್ನು ರವಾನೆ ಮಾಡಿದ್ದಾರೆ.

    ದುರಾದೃಷ್ಟ ಎಂಬಂತೆ ಪೊಲೀಸ್ ಜೀಪ್ ಕೂಡ ಪಂಕ್ಚರ್ ಆಗಿದ್ದು, ಕೊನೆಗೆ ತಡವಾಗಿ ಬಂದ ಆಂಬ್ಯುಲೆನ್ಸ್ ನಲ್ಲಿ ಮೂವರು ಗಾಯಾಳುಗಳನ್ನು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಈ ಗ್ರಾಮದಲ್ಲಿ ರೋಗಿಗಳನ್ನು ಕೊಂಡೊಯ್ಯೋದಕ್ಕೆ ಆಂಬುಲೆನ್ಸ್ ಗಿಂತ ಮೊದ್ಲು ಟ್ರ್ಯಾಕ್ಟರ್ ಬರ್ಬೇಕು!

    ಈ ಗ್ರಾಮದಲ್ಲಿ ರೋಗಿಗಳನ್ನು ಕೊಂಡೊಯ್ಯೋದಕ್ಕೆ ಆಂಬುಲೆನ್ಸ್ ಗಿಂತ ಮೊದ್ಲು ಟ್ರ್ಯಾಕ್ಟರ್ ಬರ್ಬೇಕು!

    ಧಾರವಾಡ: ತುರ್ತು ಚಿಕಿತ್ಸೆ ಬೇಕಾದಾಗ ಅಥವಾ ಗರ್ಭಿಣಿಗೆಯರಿಗೆ ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ 108ಕ್ಕೆ ಕರೆ ಮಾಡಿ ಅಂಬುಲೆನ್ಸ್ ಕರಿಸೋದು ಸಾಮಾನ್ಯ. ಅಂಬುಲೆನ್ಸ್ ಗೆ ಕರೆ ಮಾಡುವ ಮುಂಚೆ ಒಂದು ಟ್ರ್ಯಾಕ್ಟರ್‍ಗೆ ಕರೆ ಮಾಡಲೇಬೇಕಾದ ಪರಿಸ್ಥಿತಿ ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ ಎದುರಾಗಿದೆ.

    ಹೌದು. ಧಾರವಾಡ ತಾಲೂಕಿನ ಸಿಂಗನಕೊಪ್ಪ ಗ್ರಾಮದಲ್ಲಿ ರಸ್ತೆ ಹಾಳಾಗಿ ಅಂಬುಲೆನ್ಸ್ ಹೋಗೋಕೆ ಆಗಲ್ಲ. ಇನ್ನು ಗ್ರಾಮಕ್ಕೆ ಅಂಬುಲೆನ್ಸ್ ಬಂದರೆ ಅದನ್ನ ಜಗ್ಗೋಕೆ ಒಂದು ಟ್ರ್ಯಾಕ್ಟರ್ ಬೇಕು.

    ಕಳೆದ ಸೆಪ್ಟೆಂಬರ್ 7 ರಂದು ಸಿಂಗನಕೊಪ್ಪ ಗ್ರಾಮದ ಗರ್ಭಿಣಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಅಂಬುಲೆನ್ಸ್ ರಸ್ತೆ ಸರಿ ಇಲ್ಲದ ಕಾರಣ ರಾಡಿಯಲ್ಲಿ ಸಿಲುಕಿಕೊಂಡಿತ್ತು. ಇದನ್ನ ಜಗ್ಗೋಕೆ ಟ್ರ್ಯಾಕ್ಟರ್ ತರಿಸಿದರು.

     

    ಗರ್ಭಿಣಿ ಕೂಡಾ ಅಂಬುಲೆನ್ಸ್‍ಗೆ ಜಗ್ಗುತಿದ್ದ ಟ್ರ್ಯಾಕ್ಟರ್ ಹಿಂದೆ ನಡೆದುಕೊಂಡು ಹೋದ ದೃಶ್ಯವನ್ನ ವಿಡಿಯೋ ಮಾಡಲಾಗಿದೆ. ಈ ರೀತಿ ರಸ್ತೆಗಳು ಹಾಳಾಗಿರೋದು ಸಚಿವ ಸಂತೋಷ್ ಲಾಡ್ ಅವರ ಕ್ಷೇತ್ರದಲ್ಲೇ. ದನ ಕಾಯುವ ಈ ಗವಳಿ ಜನರು ಎಷ್ಟೋ ವರ್ಷಗಳಿಂದ ಇದೇ ರೀತಿ ಪರದಾಟ ನಡೆಸಿದ್ದಾರೆ. ಆದರೆ ಇವರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ.

  • ನಿಂತಿದ್ದ ಲಾರಿಗೆ ಆಂಬುಲೆನ್ಸ್ ಡಿಕ್ಕಿ: ಚಾಲಕ ದುರ್ಮರಣ

    ನಿಂತಿದ್ದ ಲಾರಿಗೆ ಆಂಬುಲೆನ್ಸ್ ಡಿಕ್ಕಿ: ಚಾಲಕ ದುರ್ಮರಣ

    ಮೈಸೂರು: ನಿಂತಿದ್ದ ಲಾರಿಗೆ 108 ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಬಳಿ ನಡೆದಿದೆ.

    30 ವರ್ಷದ ಆಂಬುಲೆನ್ಸ್ ಚಾಲಕ ಲೋಕೇಶ್ ಆರಾಧ್ಯ ಮೃತ ದುರ್ದೈವಿ. ಲೋಕೇಶ್ ಆರಾಧ್ಯ ಪಿರಿಯಾಪಟ್ಟಣ ತಾಲೂಕು ಮಲಗಲಕೆರೆ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಆಂಬುಲೆನ್ಸ್ ಸಿಬ್ಬಂದಿ ಆನಂದ್ ಗೆ ಗಾಯಗಳಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆ ಸಂಬಂಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಖಾಸಗಿ ಬಸ್ ಡಿಕ್ಕಿಯಾಗಿ ಅಂಬುಲೆನ್ಸ್ ಚಾಲಕ, ಸಹಾಯಕ ದುರ್ಮರಣ

    ಖಾಸಗಿ ಬಸ್ ಡಿಕ್ಕಿಯಾಗಿ ಅಂಬುಲೆನ್ಸ್ ಚಾಲಕ, ಸಹಾಯಕ ದುರ್ಮರಣ

    ಕಾರವಾರ: ಖಾಸಗಿ ಬಸ್ ಹಾಗೂ ಅಂಬುಲೆನ್ಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಂಬುಲೆನ್ಸ್ ನ ಚಾಲಕ ಹಾಗೂ ಸಹಾಯಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಸಿದ್ದಾಪುರ ಮೂಲದ ಅಂಬುಲೆನ್ಸ್ ಚಾಲಕ ಬಾಲಕೃಷ್ಣ ನಾಯಕ್, ಸಹಾಯಕ ಜಗದೀಶ್ ಚನ್ನಯ್ಯ ಮೃತ ದುರ್ದೈವಿಗಳು.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಬಿಸಲಕೊಪ್ಪದಲ್ಲಿ ಈ ಅವಘಡ ಸಂಭವಿಸಿದೆ. ಶವವನ್ನು ಸಿದ್ದಾಪುರದಲ್ಲಿರೋ ಗ್ರಾಮಕ್ಕೆ ತಲುಪಿಸಿ ವಾಪಾಸ್ಸಾಗುತ್ತಿದ್ದಾಗ ಅಂಬುಲೆನ್ಸ್ ಗೆ ಹಾವೇರಿ ಕಡೆ ಚಲಿಸುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಂಬುಲೆನ್ಸ್ ಚಾಲಕ ಹಾಗೂ ಸಹಾಯಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.