Tag: ಆಂಬುಲೆನ್ಸ್

  • ಚುನಾವಣಾ ಅಬ್ಬರದ ನಡುವೆಯೂ ಅಪಘಾತಕ್ಕೀಡಾದವರನ್ನು ಉಪಚರಿಸಿದ ಶಶಿಕಲಾ ಜೊಲ್ಲೆ

    ಚುನಾವಣಾ ಅಬ್ಬರದ ನಡುವೆಯೂ ಅಪಘಾತಕ್ಕೀಡಾದವರನ್ನು ಉಪಚರಿಸಿದ ಶಶಿಕಲಾ ಜೊಲ್ಲೆ

    ಚಿಕ್ಕೋಡಿ: ಚುನಾವಣೆಯ ಪ್ರಚಾರದ ಅಬ್ಬರದ ನಡುವೆಯೂ ರಸ್ತೆ ಅಪಘಾತಕ್ಕೀಡಾಗಿ ಗಾಯಗೊಂಡವರನ್ನು ಉಪಚರಿಸುವ ಮೂಲಕ ಸಚಿವೆ ಶಶಿಕಲಾ ಜೊಲ್ಲೆ ಮಾನವೀಯತೆ ಮೆರೆದಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿ ಮೇಲೆ ಲಾರಿ ಹಾಗೂ ಕಾರು ಅಪಘಾತಕ್ಕೀಡಾಗಿತ್ತು. ಈ ಮಾರ್ಗದಲ್ಲಿ ಸಾಗುತ್ತಿದ್ದ ಸಚಿವೆ ಶಶಿಕಲಾ ಜೊಲ್ಲೆ ತಕ್ಷಣ ತಮ್ಮ ವಾಹನ ನಿಲ್ಲಿಸಿ ಕಾರಿನಲ್ಲಿದ್ದ ಗಾಯಗೊಂಡ ಪ್ರಯಾಣಿಕರಿಗೆ ನೀರು ನೀಡಿ ಉಪಚರಿಸಿದ್ದಾರೆ.

    ಅಂಬುಲೆನ್ಸ್ ಬರುವವರೆಗೂ ಸ್ಥಳದಲ್ಲಿಯೇ ಇದ್ದು, ಗಾಯಾಳುಗಳನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ರವಾನಿಸಿ ನಂತರ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ. ಶಶಿಕಲಾ ಜೊಲ್ಲೆ ಅವರ ಈ ಕಾರ್ಯ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.

  • ಗಣೇಶ ಮೆರವಣಿಗೆ ವೇಳೆ ಅಂಬುಲೆನ್ಸ್‌ಗೆ ದಾರಿ – ಒಂದೇ ಕ್ಷಣದಲ್ಲಿ ಚದುರಿದ ಸಾವಿರಾರು ಜನ

    ಗಣೇಶ ಮೆರವಣಿಗೆ ವೇಳೆ ಅಂಬುಲೆನ್ಸ್‌ಗೆ ದಾರಿ – ಒಂದೇ ಕ್ಷಣದಲ್ಲಿ ಚದುರಿದ ಸಾವಿರಾರು ಜನ

    ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ಗಣೇಶ ವಿಸರ್ಜನೆಯ ಬೃಹತ್ ಮೆರವಣಿಗೆ ಸಂದರ್ಭದಲ್ಲಿ ಅಂಬುಲೆನ್ಸ್ ಗೆ ದಾರಿ ಮಾಡಿಕೊಡುವ ಮೂಲಕ ಭಕ್ತಾದಿಗಳು ಮಾದರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಟ್ವಿಟ್ಟರ್ ನಲ್ಲಿಯೂ ಸಹ ಹಲವು ಗಣ್ಯರು ಈ ವಿಡಿಯೋ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಪುಣೆಯ ಲಕ್ಷ್ಮಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಿಲೋಮೀಟರ್ ಗಟ್ಟಲೇ ಜನಸಾಗರ ತುಂಬಿದ್ದ ಮೆರವಣಿಗೆ ಮಧ್ಯೆ ಅಂಬುಲೆನ್ಸ್ ಗೆ ದಾರಿ ಮಾಡಿ ಕೊಡುವ ಮೂಲಕ ಭಕ್ತರು ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

    ಕಿಲೋಮೀಟರ್ ಗಟ್ಟಲೇ ಸೇರಿದ್ದ ಜನಸಾಗರವನ್ನು ಕೆಲ ಭಕ್ತರು ಚದುರಿಸುವ ಮೂಲಕ ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟಿದ್ದಾರೆ. ಇದರಿಂದ ಅಂಬುಲೆನ್ಸ್ ಸರಾಗವಾಗಿ ಸಂಚರಿಸಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಾಹಾಷ್ಟ್ರದಲ್ಲಿ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮೆರವಣಿಗೆ ಮೂಲಕ ಸಾಗಿ ಸಾವಿರಾರು ಗಣೇಶ ಮೂರ್ತಿಗಳನ್ನು ನದಿ, ಕೆರೆ, ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ.

    ಮಹಾರಾಷ್ಟ್ರದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ 18 ಜನ ಜನ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಪೊಲೀಸ್ ಸರ್ಪಗಾವಲಿನ ಮಧ್ಯೆಯೇ ಮಹಾರಾಷ್ಟ್ರದಲ್ಲಿ ಸಾವಿರಾರು ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಗುತ್ತಿದೆ.

  • ಅಂಬುಲೆನ್ಸ್ ಸಿಗದೆ ಮಗನ ಶವವನ್ನು ಹೆಗಲ ಮೇಲೆ ಹೊತ್ತೊಯ್ದ ತಂದೆ

    ಅಂಬುಲೆನ್ಸ್ ಸಿಗದೆ ಮಗನ ಶವವನ್ನು ಹೆಗಲ ಮೇಲೆ ಹೊತ್ತೊಯ್ದ ತಂದೆ

    ಪಾಟ್ನಾ: ಆಸ್ಪತ್ರೆ ಸಿಬ್ಬಂದಿ ಅಂಬುಲೆನ್ಸ್ ನೀಡದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ 8 ವರ್ಷದ ಮಗನ ಮೃತದೇಹವನ್ನು ಹೆಗಲ ಮೇಲೆ ಹೊತ್ತೊಯ್ದ ಮನಕಲಕುವ ಘಟನೆ ಬಿಹಾರದ ನಳಂದಾ ಜಿಲ್ಲೆಯಲ್ಲಿ ನಡೆದಿದೆ.

    ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ತವರು ಜಿಲ್ಲೆಯ ಸದರ್ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ನಳಂದಾದ ಸೀತಾ ಬಿಘಾ ಪ್ರದೇಶದ ನಿವಾಸಿಯಾಗಿದ್ದ ಸಾಗರ್ ಕುಮಾರ್(8) ಮೃತ ದುರ್ದೈವಿ.

    ಮಂಗಳವಾರ ಬೆಳಿಗ್ಗೆ ಸೈಕ್ಲಿಂಗ್ ಮುಗಿಸಿ ಬಾಲಕ ಮನೆಗೆ ಬಂದ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆಗ ತಕ್ಷಣ ಪೋಷಕರು ಆತನನ್ನು ಸಮೀಪದ ಖಾಸಗಿ ಕ್ಲಿನಿಕ್‍ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಮಗುವನ್ನು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಮಗನನ್ನು ತಂದೆ ತಾಯಿ ಸದರ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ದುರಾದೃಷ್ಟವಶಾತ್ ಆಸ್ಪತ್ರೆಗೆ ಬರುವ ಮೊದಲೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದರು.

    ಮೃತದೇಹ ತೆಗೆದುಕೊಂಡು ಹೋಗಲು ಅಂಬುಲೆನ್ಸ್ ನೀಡಿ ಎಂದು ಪೋಷಕರು ಆಸ್ಪತ್ರೆ ಸಿಬ್ಬಂದಿ ಬಳಿ ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ಆಸ್ಪತ್ರೆಯ ಯಾವ ಸಿಬ್ಬಂದಿಯಾಗಲಿ, ವೈದ್ಯರಾಗಲಿ ಕ್ಯಾರೆ ಅಂದಿಲ್ಲ. ಮೊದಲೇ ಮಗನ ಸಾವಿನಿಂದ ನೊಂದಿದ್ದ ತಂದೆ ಬೇಸತ್ತು ಬೇರೆ ದಾರಿ ಕಾಣದೆ ಮೃತದೇಹವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ.

    ಮೃತದೇಹಗಳನ್ನು ಸಾಗಿಸುವ ಸಲುವಾಗಿ ಸದರ್ ಆಸ್ಪತ್ರೆಗೆ ವಾಹನಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಅಲ್ಲದೆ ಆಸ್ಪತ್ರೆಯಲ್ಲಿ ಮರಣಹೊಂದಿದ ಯಾವುದೇ ರೋಗಿಯ ಮೃತದೇಹವನ್ನು ಸಾಗಿಸಲು ಕುಟುಂಬದವರೊಂದಿಗೆ ಮಾತನಾಡಿ, ವಾಹನವನ್ನು ನೀಡುವುದು ನಿಯೋಜಿತ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ, ಸಾಗರ್‍ನ ತಂದೆ ಮೃತದೇಹವನ್ನು ಭುಜದ ಮೇಲೆ ಹೊತ್ತು ಸಹಾಯಕ್ಕಾಗಿ ಆಸ್ಪತ್ರೆಯ ಆವರಣದಲ್ಲಿ ಗೋಳಾಡಿದರೂ ಆಸ್ಪತ್ರೆಯ ಯಾವುದೇ ಸಿಬ್ಬಂದಿ ಆತನ ಸಹಾಯಕ್ಕೆ ಬಾರದೆ ಅಮಾನವೀಯತೆ ಮೆರೆದಿದ್ದಾರೆ.

    ಈ ಬಗ್ಗೆ ನಳಂದಾ ಜಿಲ್ಲಾಧಿಕಾರಿ (ಡಿಎಂ) ಯೋಗೇಂದ್ರ ಸಿಂಗ್ ಅವರನ್ನು ಪ್ರಶ್ನಿಸಿದಾಗ, ಇದು ಗಂಭೀರ ವಿಷಯವಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದೇನೆ ಎಂದರು. ಅಲ್ಲದೆ ಆಸ್ಪತ್ರೆಯ ಅಧಿಕಾರಿಗೆ ಕೇಳಿದರೆ, ಬಾಲಕನ ಕುಟುಂಬಕ್ಕೆ ವಾಹನದ ಭರವಸೆ ನೀಡಲಾಗಿತ್ತು. ಆದರೆ ಆ ಸಮಯದಲ್ಲಿ ಅಂಬುಲೆನ್ಸ್ ಲಭ್ಯವಿಲ್ಲದ ಕಾರಣ ಕುಟುಂಬವನ್ನು ಕಾಯುವಂತೆ ಹೇಳಿದ್ದೆವು. ಆಗ ತಂದೆ ಮೃತ ದೇಹವನ್ನು ಹೊತ್ತುಕೊಂಡು ಹೊರಟುಹೋದರು ಎಂದು ತಿಳಿಸಿದ್ದಾರೆ.

    ಮಗುವನ್ನು ಆಸ್ಪತ್ರೆಗೆ ಕರೆತರುವ ಮೊದಲೇ ಮಗು ಸಾವನ್ನಪ್ಪಿದೆ. ಈ ಬಗ್ಗೆ ತಿಳಿದ ಬಳಿಕ ಬಾಲಕನ ಪೋಷಕರು ಆತುರದಿಂದ ಮಗನ ಶವವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ರಾಮ್ ಕುಮಾರ್ ಹೇಳಿದ್ದಾರೆ.

    ಈಗಾಗಲೇ ಮೆದುಳಿನ ಉರಿಯೂತ ಕಾಯಿಲೆಗೆ (ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್‍ಗೆ – ಎಇಎಸ್) ಬಿಹಾರ ತತ್ತರಿಸಿ ಹೋಗಿದೆ. ಈವರೆಗೂ ಈ ಕಾಯಿಲೆಗೆ 167 ಮಕ್ಕಳು ಬಲಿಯಾಗಿದ್ದಾರೆ. ಹೀಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿಯೂ ಎಇಎಸ್‍ಗೆ ತುತ್ತಾದ ಮಕ್ಕಳಿಗೆ ಉಚಿತ ಚಿಕಿತ್ಸೆ ಹಾಗೂ ವೈದ್ಯಕೀಯ ವ್ಯವಸ್ಥೆ ನೀಡಬೇಕು ಎಂದು ಸೂಚಿಸಲಾಗಿದೆ.

  • ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹೋದ ಅಂಬುಲೆನ್ಸಿಗೂ ಅಪಘಾತ

    ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹೋದ ಅಂಬುಲೆನ್ಸಿಗೂ ಅಪಘಾತ

    – ಸ್ಥಳೀಯ ಆಟೋಗಳಲ್ಲಿ ಗಾಯಾಳುಗಳ ರವಾನೆ

    ಮಂಗಳೂರು: ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹೋದ ಅಂಬ್ಯುಲೆನ್ಸ್ ಕೂಡ ಅಪಘಾತಕ್ಕಿಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಾರ್ತಿಕಲ್ಲು ಗ್ರಾಮದಲ್ಲಿ ನಡೆದಿದೆ.

    ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸ್ವಿಫ್ಟ್ ಡಿಸೈರ್ ಹಾಗೂ ಧರ್ಮಸ್ಥಳಕ್ಕೆ ಬರುತ್ತಿದ್ದ ಸೆಲೆರಿಯೋ ಕಾರು ಪಾರ್ತಿಕಲ್ಲು ಗ್ರಾಮದಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಪರಿಣಾಮ ಎರಡೂ ಕಾರುಗಳು ಜಖಂಗೊಂಡಿದ್ದು, ಯಮುನಾ (40), ಮುತ್ತಪ್ಪ (45), ಮೋಹಿನಿ (42), ಮೋಕ್ಷಿ (17), ಧನ್ಯ(16) ಸೇರಿದಂತೆ ಹಲವರಿಗೆ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳೀಯರು, ಗಾಯಾಳುಗಳನ್ನು ಕಾರಿನಿಂದ ಹೊರತೆಗೆದು ಅಂಬುಲೆನ್ಸ್ ಗೆ ಕರೆ ಕರೆ ಮಾಡಿದ್ದಾರೆ. ಅಪಘಾತ ಸ್ಥಳಕ್ಕೆ ಬರುತ್ತಿದ್ದ ಆಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಚಾಲಕ ಗಾಯಗೊಂಡಿದ್ದಾನೆ.

    ಅಂಬುಲೆನ್ಸ್ ಅವಘಾತಕ್ಕಿಡಾದ ಮಾಹಿತಿ ಸಿಗುತ್ತಿದ್ದಂತೆ ಸ್ಥಳೀಯ ಆಟೋಗಳಲ್ಲಿ ಆಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • 3 ಟೋಲ್ ಗಳಿದ್ರೂ ತಪ್ಪದ ಪರದಾಟ – ಆಂಬುಲೆನ್ಸ್ ಕೂಡ ಕ್ಯೂನಲ್ಲಿ ನಿಲ್ಬೇಕು!

    3 ಟೋಲ್ ಗಳಿದ್ರೂ ತಪ್ಪದ ಪರದಾಟ – ಆಂಬುಲೆನ್ಸ್ ಕೂಡ ಕ್ಯೂನಲ್ಲಿ ನಿಲ್ಬೇಕು!

    ಬೆಂಗಳೂರು: ಸುಗಮ ಸಂಚಾರಕ್ಕೆ ವಾಹನಗಳಿಗಿಂತ ಉತ್ತಮ ರಸ್ತೆಗಳು ಸಹ ಪೂರಕವಾಗಿರಬೇಕು. ಆದರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ನಿರ್ವಹಣೆ ಮಾಡುವ ಕಂಪನಿಗಳು, ನಿಯಮಗಳನ್ನು ಗಾಳಿಗೆ ತೂರಿ ಮನುಷ್ಯನ ಜೀವದ ಜೊತೆ ಚೆಲ್ಲಾಟವಾಡುತ್ತಿವೆ.

    ನೆಲಮಂಗಲ ತಾಲೂಕಿನಲ್ಲಿ ಸುಮಾರು 17 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ, ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. ಈ ಹೆದ್ದಾರಿಗಳಲ್ಲಿ ಮೂರು ಟೋಲ್ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದೆ. ರಸ್ತೆ ಸುರಕ್ಷತೆ, ತುರ್ತು ಚಿಕಿತ್ಸಾ ಸೇವೆ, ಟ್ರಾಫಿಕ್ ನಿಯಂತ್ರಣ ಇನ್ನಿತರ ಕಾರ್ಯಗಳನ್ನ ಚಾಚು ತಪ್ಪದೆ ನೀಡಬೇಕಿದೆ. ಆದರೆ ಈ ಯಾವ ಕಾರ್ಯಗಳು ಸಮರ್ಪಕವಾಗದೆ ಪ್ರತಿನಿತ್ಯ ವಾಹನ ಸವಾರರು ಪರದಾಡುವಂತಿದ್ದು, ಸವಾರರು ಟೋಲ್ ಕಂಪೆನಿಗಳಿಗೆ ಹಿಡಿಶಾಪವನ್ನ ಹಾಕುವಂತಾಗಿದೆ.

    ನೆಲಮಂಗಲ ತಾಲೂಕಿನ ಟೋಲ್ ಗಳಲ್ಲಿ ಟ್ರಾಫಿಕ್ ಕಿರಿಕಿರಿಯಿಂದ ನಿತ್ಯ ಆಂಬುಲೆನ್ಸ್ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಪ್ರತ್ಯೇಕವಾದ ಆಂಬುಲೆನ್ಸ್ ಮಾರ್ಗವನ್ನು ರೂಪಿಸದ ಟೋಲ್ ಅಧಿಕಾರಿಗಳು, ಇದೀಗ ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ನೆಲಮಂಗಲದ ಜಾಸ್ ಟೋಲ್, ನವಯುಗ ಟೋಲ್ ಹಾಗೂ ಲ್ಯಾಂಕೋ ದೇವಿಹಳ್ಳಿ ಟೋಲ್ ಗಳಲ್ಲಿ ದ್ವಿಚಕ್ರ ವಾಹನ ಸವಾರರ ಜೊತೆ ಆಂಬುಲೆನ್ಸ್ ಗಳು ತೆರಳಲು ತೊಂದರೆ ಪಡುತ್ತಿರುವುದು ಕಾಮನ್ ಆಗಿದೆ. ಅಲ್ಲದೇ ವೀಕೆಂಡ್ ಗಳಲ್ಲಿ ಸಾಲುಗಟ್ಟಿ ನಿಂತ ವಾಹನಗಳಿಂದ ಸವಾರರು ತೊಂದರೆ ಅನುಭವಿಸುತ್ತಾರೆ.

    ಟೋಲ್ ಕಂಪನಿಗಳು ಕೇವಲ ಪ್ರತಿನಿತ್ಯ ಲಕ್ಷಗಟ್ಟಲೆ ಹಣಗಳಿಕೆಯಲ್ಲಿ ಮಾತ್ರ ನಿರತರಾಗಿರುತ್ತಾರೆ ಹೊರತು ಸಂಚಾರ ನಿಯಂತ್ರಣ ಮಾಡುವ ವಿಚಾರದಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

  • ಆಂಬುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಆಂಬುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ

    ಬಳ್ಳಾರಿ: ಗರ್ಭಿಣಿಗೆ ವಿಪರೀತವಾದ ನೋವು ಕಾಣಿಸಿಕೊಂಡ ಕಾರಣ ಆಂಬುಲೆನ್ಸ್ ನಲ್ಲಿಯೇ ವೈದ್ಯರು ಹೆರಿಗೆ ಮಾಡಿಸಿದ್ದಾರೆ.

    ಜಿಲ್ಲೆಯ ಕಂಪ್ಲಿ ತಾಲೂಕಿನ ಕಣವಿತಿಮ್ಮಾಪುರ ಗ್ರಾಮದ ಹುಲಿಗೆಮ್ಮ ಎಂಬವರು ತೀವ್ರ ಹೆರಿಗೆ ನೋವಿನಿಂದ ನರಳುತ್ತಿದ್ದರು. ಕೂಡಲೇ ಅವರನ್ನು ಆಂಬುಲೆನ್ಸ್ ಮೂಲಕ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಗುತ್ತಿತ್ತು.

    ಆದರೆ ದಾರಿಯಲ್ಲಿ ಬರುವಾಗ ಆಂಬುಲೆನ್ಸ್ ನಲ್ಲಿಯೇ ಮಹಿಳೆಗೆ ಹೆರಿಗೆ ನೋವು ಜೋರಾಗಿದೆ. ತಕ್ಷಣ ಅಂಬುಲೆನ್ಸ್ ನಲ್ಲಿದ್ದ ವೈದ್ಯಾಧಿಕಾರಿ ಚಂದ್ರಮೋಹನ್ ಹಾಗೂ ಸಿಬ್ಬಂದಿಗಳಾದ ನೇತ್ರಾ ಹಾಗೂ ಸುರೇಶ್ ಎಂಬವರು ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.

    ನಂತರ ವೈದ್ಯಾಧಿಕಾರಿಗಳು ಹುಲಿಗೆಮ್ಮರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಉಪಚಾರ ಮಾಡಿದ್ದಾರೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ತಾಯಿ ಮತ್ತು ಮಗು ಆರೋಗ್ಯದಿಂದಿದ್ದಾರೆ.

  • ಹೆಚ್ಚು ಗಾಯವಾಗಿಲ್ಲ, ಎದ್ದು ಹೋಗ್ತಾನೆ ಅಂತಾ ಅಪಘಾತಕ್ಕೀಡಾದ ವ್ಯಕ್ತಿಯನ್ನು ಬಿಟ್ಟು ಹೋದ ಆಂಬುಲೆನ್ಸ್ ಸಿಬ್ಬಂದಿ!

    ಹೆಚ್ಚು ಗಾಯವಾಗಿಲ್ಲ, ಎದ್ದು ಹೋಗ್ತಾನೆ ಅಂತಾ ಅಪಘಾತಕ್ಕೀಡಾದ ವ್ಯಕ್ತಿಯನ್ನು ಬಿಟ್ಟು ಹೋದ ಆಂಬುಲೆನ್ಸ್ ಸಿಬ್ಬಂದಿ!

    ಮಂಡ್ಯ: ಅಪಘಾತದಲ್ಲಿ ಗಾಯಗೊಂಡು ಇಡೀ ರಾತ್ರಿ ನರಳಾಡಿದ್ರೂ ಸ್ಥಳಕ್ಕೆ ಬಂದಿದ್ದ ಆಂಬುಲೆನ್ಸ್ ಸಿಬ್ಬಂದಿ ಕೂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯದೇ ಅಮಾನವೀಯವಾಗಿ ವರ್ತಿಸಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.

    ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕ ಸಿಟಿ ಕ್ಲಬ್ ಎದುರು ಅಪರಿಚಿತ ವ್ಯಕ್ತಿಯೊಬ್ಬ ಅಪಘಾತದಲ್ಲಿ ಗಾಯಗೊಂಡು ರಸ್ತೆ ಪಕ್ಕ ಬಿದ್ದಿದ್ದರು. ತಡರಾತ್ರಿ ಅಪಘಾತ ನಡೆದಿದ್ದು, ಸಾರ್ವಜನಿಕರು ಈ ಬಗ್ಗೆ ಆಂಬುಲೆನ್ಸ್ ಗೆ ಮಾಹಿತಿ ನೀಡಿದ್ದಾರೆ.

    ಈ ವೇಳೆ ರಾತ್ರಿಯೇ ಸ್ಥಳಕ್ಕೆ ಬಂದ ಆಂಬುಲೆನ್ಸ್ ಸಿಬ್ಬಂದಿ ಹೆಚ್ಚು ಗಾಯವಾಗಿಲ್ಲ, ಎದ್ದು ಹೋಗುತ್ತಾನೆ ಅಂತಾ ಹೇಳಿ ನಿರ್ಲಕ್ಷ್ಯದಿಂದ ಹೊರಟು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಮುಂಜಾನೆ ಐದೂವರೆ ಸುಮಾರಿಗೆ ವಿಷಯ ತಿಳಿದ ಮಂಡ್ಯ ತಾಲೂಕು ವೈದ್ಯಾಧಿಕಾರಿ ಶಶಿಧರ್ ಸ್ಥಳಕ್ಕೆ ಆಗಮಿಸಿ, ಮತ್ತೆ ಆಂಬುಲೆನ್ಸ್ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಅವರು ಸ್ಥಳಕ್ಕೆ ಬಂದ ನಂತರವೂ ಆಂಬುಲೆನ್ಸ್ ತಡವಾಗಿ ಆಗಮಿಸಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಶಿಧರ್, ನಾನು ಕರೆ ಮಾಡಿದಾಗ ಒಂದು ಆಂಬುಲೆನ್ಸ್ ನಂಬರ್ ಸ್ವಿಚ್ ಆಫ್ ಆಗಿತ್ತು ಹಾಗೂ ರಾತ್ರಿಯೇ ಆಂಬುಲೆನ್ಸ್ ಸ್ಥಳಕ್ಕೆ ಬಂದು ಗಾಯಗೊಂಡಿದ್ದ ವ್ಯಕ್ತಿಯನ್ನು ಇಲ್ಲಿಯೇ ಬಿಟ್ಟು ಹೋದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರು ನೀಡುತ್ತೇನೆ. ಮುಂದೆ ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

  • ಟೈಟ್ ಆದ ಕುಡುಕರ ಸಾಗ ಹಾಕಲು ಆಂಬುಲೆನ್ಸ್ ಬಳಕೆ- ಚಿಕ್ಕೋಡಿಯಲ್ಲಿ ಸರ್ಕಾರದ ಸೇವೆ ದುರ್ಬಳಕೆ

    ಟೈಟ್ ಆದ ಕುಡುಕರ ಸಾಗ ಹಾಕಲು ಆಂಬುಲೆನ್ಸ್ ಬಳಕೆ- ಚಿಕ್ಕೋಡಿಯಲ್ಲಿ ಸರ್ಕಾರದ ಸೇವೆ ದುರ್ಬಳಕೆ

    ಬೆಳಗಾವಿ: ರೋಗಿಗಳಿಗೆ, ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ ಸೇವೆಗಾಗಿ ಇರೋ 108 ಆಂಬುಲೆನ್ಸ್ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣವೊಂದು ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿರುವ ಹುಲಿಗೆಮ್ಮ ಬಾರ್ ಹಾಗೂ ರೆಸ್ಟೋರೆಂಟ್‍ನವರು ಆಂಬುಲೆನ್ಸ್ ಸೇವೆಯನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ. ಬಾರ್ ಗೆ ಬಂದು ಟೈಟ್ ಆಗೋ ಕುಡುಕರನ್ನು ಸಾಗ ಹಾಕಲು ಆಂಬುಲೆನ್ಸ್ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಸೇವೆ ಒದಗಿಸುವ ನಿಟ್ಟಿನಲ್ಲಿ ಆಂಬುಲೆನ್ಸ್ ಸಿಬ್ಬಂದಿ ಅನಿವಾರ್ಯವಾಗಿ ಸೇವೆ ನೀಡುತ್ತಿದ್ದಾರೆ. ವಾರಕ್ಕೆ ಮೂರ್ನಾಲ್ಕು ಬಾರಿ ಈ ರೀತಿ ಮಾಡುತ್ತಿದ್ದು, ಆರೋಗ್ಯ ಇಲಾಖೆ ಹಾಗೂ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇದೀಗ ಅಲ್ಲಿನ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

  • ಅಂಬುಲೆನ್ಸ್ ನಲ್ಲಿ ಮೂತ್ರವಿಸರ್ಜನೆ ಮಾಡಿದ್ದಕ್ಕೆ ಗಾಯಾಳುವನ್ನ ತಲೆಕೆಳಗಾಗಿ ಬಿಟ್ಟ ಚಾಲಕ, ವ್ಯಕ್ತಿ ಸಾವು

    ಅಂಬುಲೆನ್ಸ್ ನಲ್ಲಿ ಮೂತ್ರವಿಸರ್ಜನೆ ಮಾಡಿದ್ದಕ್ಕೆ ಗಾಯಾಳುವನ್ನ ತಲೆಕೆಳಗಾಗಿ ಬಿಟ್ಟ ಚಾಲಕ, ವ್ಯಕ್ತಿ ಸಾವು

    ತಿರುವನಂತಪುರಂ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಆಂಬುಲೆನ್ಸ್ ನಲ್ಲಿ ಮೂತ್ರವಿಸರ್ಜನೆ ಮಾಡಿದರೆಂದು ಅವರನ್ನು ಚಾಲಕ ಸ್ಟ್ರೆಚ್ಚರ್ ಸಮೇತ ತಲೆಕೆಳಗಾಗಿ ಬಿಟ್ಟ ಅಮಾನವೀಯ ಘಟನೆ ಕೇರಳದ ತ್ರಿಶೂರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.

    ಗಾಯಾಳು ಮಲಗಿದ್ದ ಸ್ಟ್ರೆಚ್ಚರನ್ನು ಆಂಬುಲೆನ್ಸ್ ಚಾಲಕ ಆಸ್ಪತ್ರೆಯ ಹೊರಗಡೆ ತಲೆಕೆಳಗಾಗಿ ಬಿಟ್ಟಿದ್ದು, ಬಳಿಕ ಅವರು ಸಾವನ್ನಪ್ಪಿದ್ದಾರೆ. ತಲೆಕೆಳಗಾದ ಸ್ಟೆಚ್ಚರ್‍ನ ಒಂದು ಭಾಗ ನೆಲದ ಮೇಲಿದ್ದು ಮತ್ತೊಂದು ತುದಿ ಆಂಬುಲೆನ್ಸ್ ನಲ್ಲಿತ್ತು. ವ್ಯಕ್ತಿಯ ತಲೆ ನೆಲಕ್ಕೆ ಬಿದ್ದ ಸ್ಥಿತಿಯಲ್ಲಿದ್ದು, ಇದನ್ನ ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವ್ಯಕ್ತಿಯ ಜೀವಕ್ಕೆ ಕುತ್ತು ತಂದ ಆಂಬುಲೆನ್ಸ್ ಚಾಲಕನ ಬೇಜವಾಬ್ದಾರಿ ವರ್ತನೆಗೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಾವನ್ನಪ್ಪಿದ ವ್ಯಕ್ತಿ ಮಾರ್ಚ್ 20ರಂದು ರಸ್ತೆ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದರು. ಅವರ ತಲೆಗೂ ಕೂಡ ಪೆಟ್ಟು ಬಿದ್ದಿತ್ತು. ಮೊದಲಿಗೆ ಅವರನ್ನು ಪಲಕ್ಕಾಡ್‍ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಅದೇ ದಿನ ಹೆಚ್ಚಿನ ಚಿಕಿತ್ಸೆಗೆಂದು ತ್ರಿಶೂರ್‍ಗೆ ರವಾನಿಸಲಾಗಿತ್ತು. ಅಲ್ಲಿ ಸುಮಾರು 8.30ರ ವೇಳೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವ್ಯಕ್ತಿಯ ಜೊತೆ ಅವರ ಕುಟುಂಬ ಸದಸ್ಯರಾಗಲೀ, ಸಂಬಂಧಿಕರಾಗಲಿ ಇಲ್ಲದಿದ್ದ ಕಾರಣ ಪಲಕ್ಕಾಡ್ ಆಸ್ಪತ್ರೆಯ ಸಿಬ್ಬಂದಿಯೇ ಗಾಯಾಳುವನ್ನ ತ್ರಿಶೂರ್ ಆಸ್ಪತ್ರೆಗೆ ಕರೆತಂದಿದ್ದರು. ಸಿಬ್ಬಂದಿ ಗ್ಲೋವ್ಸ್ ತರಲು ಆಸ್ಪತ್ರೆಯ ಒಳಗೆ ಹೋದಾಗ ಚಾಲಕ ಸ್ಟ್ರೆಚ್ಚರ್ ಹೊರಗೆಳೆದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

    ತಲೆಕೆಳಗಾದ ಸ್ಟ್ರೆಚ್ಚರ್ ಮೇಲೆ ಅಸಹಾಯಕರಾಗಿ ಬಿದ್ದಿದ್ದ ಗಾಯಾಳುವನ್ನ ಕೊನೆಗೆ ಆಸ್ಪತ್ರೆಯ ಸಿಬ್ಬಂದಿ ಮೇಲೆತ್ತಿ ವ್ಹೀಲ್‍ಚೇರ್ ಮೇಲೆ ಕೂರಿಸಿದ್ದರು. ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತಾದ್ರೂ ಶನಿವಾರ ಬೆಳಗ್ಗೆ ಕೊನೆಯಿಸಿರೆಳೆದಿದ್ದಾರೆ.

  • ಅಪಘಾತವಾಗಿ ರಸ್ತೆಯಲ್ಲೇ ಬಿದ್ದು 1 ಗಂಟೆ ಒದ್ದಾಡಿದ ಬೈಕ್ ಸವಾರ- ಆಸ್ಪತ್ರೆಗೆ ಸಾಗಿಸುವುದು ತಡವಾಗಿ ಸಾವು

    ಅಪಘಾತವಾಗಿ ರಸ್ತೆಯಲ್ಲೇ ಬಿದ್ದು 1 ಗಂಟೆ ಒದ್ದಾಡಿದ ಬೈಕ್ ಸವಾರ- ಆಸ್ಪತ್ರೆಗೆ ಸಾಗಿಸುವುದು ತಡವಾಗಿ ಸಾವು

    ಬಳ್ಳಾರಿ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರರೊಬ್ಬರು ಪ್ರಾಣ ಉಳಿಸುವಂತೆ ರಸ್ತೆಯಲ್ಲೇ ಒದ್ದಾಡಿ ಗೋಗರೆದು ಕೊನೆಗೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಮೃತ ಸವಾರ ಫಕ್ರುದ್ದೀನ್ ಸಂಡೂರಿನ ನಿವಾಸಿ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಸಂಡೂರಿನಿಂದ ಹೊಸಪೇಟೆಗೆ ತೆರಳುತ್ತಿದ್ದ ಫಕ್ರುದ್ದೀನ್ ಅವರಿಗೆ ಸಂಡೂರಿನ ಕಳ್ಳಹಳ್ಳಿ ಬಳಿ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಫಕ್ರುದ್ದೀನ್ ತನ್ನನ್ನು ಆಸ್ಪತ್ರೆಗೆ ಸೇರಿಸುವಂತೆ ಒಂದು ಗಂಟೆ ಕಾಲ ರಸ್ತೆಯ ಮಧ್ಯೆಯೇ ಬಿದ್ದು ಒದ್ದಾಡಿ ಗೋಗರೆದರೂ ಯಾರೂ ಸಹ ಸಹಾಯ ಮಾಡಲಿಲ್ಲ ಎನ್ನಲಾಗಿದೆ.

    ಕೊನೆಗೆ ಲಾರಿ ಚಾಲಕರೊಬ್ಬರು ಫಕ್ರುದ್ದೀನ್ ಅವರಿಗೆ ನೀರು ಕುಡಿಸಿ ಅಂಬುಲೆನ್ಸ್ ಗೆ ಕರೆ ಮಾಡಿದ್ರು. ಆದ್ರೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವುದು ತಡವಾದ ಪರಿಣಾಮ ಆಸ್ಪತ್ರೆಯಲ್ಲಿ ಫಕ್ರುದ್ದೀನ್ ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬೈಕ್ ಸವಾರ ರಸ್ತೆಯಲ್ಲಿ ಒದ್ದಾಡುವ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿಯುವಲ್ಲಿ ಜನರು ನಿರತರಾಗಿದ್ದರೇ ವಿನಃ ಯಾರಿಬ್ಬರೂ ಸಹಾಯ ಮಾಡಿಲ್ಲ. ಈ ಹಿಂದೆಯೂ ಈ ರೀತಿಯ ಪ್ರಕರಣಗಳು ಬಂದಾಗ ಮಾನವೀಯತೆ ಬಗ್ಗೆ ಸಾಕಷ್ಟು ಸುದ್ದಿಯಾಗಿ ಚರ್ಚೆಯಾಗಿತ್ತು. ಇಷ್ಟೆಲ್ಲ ಆದರೂ ಇನ್ನೂ ಜನರಲ್ಲಿ ಜಾಗೃತಿ ಮೂಡದೇ ಇರುವುದು ದುರಂತವೇ ಸರಿ.