ಬೆಂಗಳೂರು: ಭಾರೀ ಸುದ್ದಿಯಾಗಿದ್ದ ಆಂಬಿಡೆಂಟ್ ಪ್ರಕರಣದ ಅಸಲಿಯತ್ತು ಗೊತ್ತಿದ್ದರೂ ಸಿಸಿಬಿ ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿಯವರ ತಲೆಗೆ ಕಟ್ಟಿದ್ಯಾಕೆ ಅನ್ನೋ ಪ್ರಶ್ನೆಯೊಂದು ಇದೀಗ ಮೂಡಿದೆ.
ಇಡೀ ಪ್ರಕರಣದ ವಿವರಣೆಯನ್ನು ಆರೋಪಿ ಶಾರೀಖ್ ಸಿಸಿಬಿ ಮುಂದೆ ಹೇಳಿದ್ದಾನೆ. ಹೀಗಾಗಿ ಆಂಬಿಡೆಂಟ್ ಪ್ರಕರಣದಲ್ಲಿ ಇಡಿ ಅಧಿಕಾರಿಗೆ ಡೀಲ್ ಮಾಡಿದ್ರಾ ಎಂಬ ಅನುಮಾನ ಕಾಡುತ್ತಿದೆ.
ಶಾರೀಖ್ ಹೇಳಿದ್ದೇನು..?
ಜನಾರ್ದನ ರೆಡ್ಡಿ ಡೀಲ್ ಮಾಡ್ತೀನಿ ಅಂತ ಹೋಟೆಲ್ ಅಲ್ಲಿ ಹಣ ಪಡೆದು ಕೈಕಟ್ಟಿ ಕುಳಿತು ಬಿಟ್ಟರು. ಆದ್ರೆ, ಆಂಬಿಡೆಂಟ್ ಮಾಲೀಕ ಫರೀದ್, ಜನಾರ್ದನ ರೆಡ್ಡಿಯನ್ನು ಬೆದರಿಸಿ ಕೇಳೋಕೆ ಆಗ್ತಾ ಇರ್ಲಿಲ್ಲ. ಆದ್ದರಿಂದ ಡೀಲ್‍ನ ಮತ್ತೊಂದು ಸುಪಾರಿಯನ್ನು ಅಶ್ರಫ್ ಆಲಿ ಪಡೆದಿದ್ದನು ಎಂದಿದ್ದಾನೆ.
ಬೆಂಗಳೂರಿನ ಅಶ್ರಫ್ ಆಲಿ ಡೀಲ್ ಪಡೆದು ಇಡಿ ಅಧಿಕಾರಿಗಳೊಂದಿಗೆ ವ್ಯವಹಾರ ಕುದುರಿಸಿದ್ದರು. ವುಡ್ ಲ್ಯಾಂಡ್ಸ್ ಹೋಟೆಲ್‍ನಲ್ಲಿ ಅಶ್ರಫ್ ಅಲಿ ಮತ್ತು ಶಾರೀಖ್, ನಿವೃತ್ತ ಇಡಿ ಅಧಿಕಾರಿ ಗಂಗಾಧರಯ್ಯ ಅವರನ್ನು ಭೇಟಿ ಮಾಡಿ ಡೀಲ್ ಮಾಡಿದ್ದರು. ಹೀಗಾಗಿ ನಿವೃತ್ತ ಅಧಿಕಾರಿಯು ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಇಡಿ ಅಧಿಕಾರಿ ನೀರಜ್ ಜೊತೆ ಸಂಪರ್ಕ ಹೊಂದಿದ್ದರು. ಹಾಗೆಯೇ ನೀರಜ್ ನ ಭೇಟಿ ಮಾಡಿ ಫರೀದ್ ಕೇಸ್ ನಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡು ಒಂದೂವರೆ ಕೋಟಿ ಬೇಡಿಕೆಯಿಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಅಶ್ರಫ್ ಅಲಿ ಮತ್ತು ಶಾರೀಖ್ 75 ಲಕ್ಷ ಹಣದೊಂದಿಗೆ ನೀರಜ್ ನ ಭೇಟಿ ಮಾಡಿದ್ದರು. ಈ ವೇಳೆ ಒಂದೂವರೆ ಕೋಟಿ ಡೀಲ್ ಅಲ್ಲಿ 75 ಲಕ್ಷ ಮಾತ್ರ ತಂದಿದ್ದಕ್ಕೆ ನೀರಜ್ ಕುಮಾರ್ ಗರಂ ಆಗಿದ್ದರು. ಹಣ ಪೂರ್ತಿ ಕೊಡದೆ ಯಾವುದೇ ಕೆಲಸ ಮಾಡಿ ಕೊಡೋದಿಲ್ಲ ಎಂದು ಬೆದರಿಕೆ ಹಾಕಿದ್ದರು. ಇಡಿ ಅಧಿಕಾರಿ ಮಾತಿಗೆ ಬೆದರಿದ ಅಶ್ರಫ್ ಅಲಿ ಮತ್ತು ಶಾರೀಖ್ ಮತ್ತೆ ಮಲ್ಲೇಶ್ವರಂನ ನಟರಾಜ್ ಎಂಬವರಿಂದ 75 ಲಕ್ಷ ಹಣ ಪಡೆದಿದ್ದರು.
ಬಳಿಕ ಸನ್ಮಾನ್ ಹೋಟೆಲ್ ಬಳಿ ನೀರಜ್ ಕುಮಾರ್ ಅವರಿಗೆ ಒಂದೂವರೆ ಕೋಟಿ ಹಣ ಸಂದಾಯ ಮಾಡಿದ್ದರು ಅಂತ ಶಾರೀಖ್ ಸಿಸಿಬಿ ಪೊಲೀಸರ ಮುಂದೆ ಇಡಿ ಡೀಲ್ ಬಾಯಿಬಿಟ್ಟಿದ್ದಾನೆ. ಹಣ ಪಡೆದ ನೀರಜ್ ಕುಮಾರ್ ಪ್ರಸ್ತುತ ಗೌಹಾಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತ ಶಾರೀಖ್ ತಿಳಿಸಿರುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಬೆಂಗಳೂರು: ಕಳೆದ ಒಂದು ವಾರದ ಹಿಂದೆ ಆಂಬಿಡೆಂಟ್ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇದೇ ಪ್ರಕರಣದಲ್ಲಿ ಸಿಲುಕಿಕೊಂಡು ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಜಾಮೀನು ಪಡೆದು ಹೊರ ಬಂದರು. ಜೈಲಿನಿಂದ ಹೊರಬಂದ ಜನಾರ್ದನ ರೆಡ್ಡಿ ತಮ್ಮ ಬಂಧನದ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ ಎಂದು ನೇರವಾಗಿಯೇ ಆರೋಪಿಸಿದ್ದರು. ಪ್ರಕರಣದ ತನಿಖೆ ನಡೆಯುತ್ತಿದ್ದು, ಆಂಬಿಡೆಂಟ್ ಕ್ಲಬ್ ತನ್ನ ಫೇಸ್‍ಬುಕ್ ಖಾತೆಯಲ್ಲಿ ತನಿಖಾಧಿಕಾರಿಯಾಗಿದ್ದ ವೆಂಕಟೇಶ್ ಪ್ರಸನ್ನ ವಿರುದ್ಧವೇ ಯುದ್ಧಕ್ಕೆ ಇಳಿದಂತೆ ಕಾಣುತ್ತಿದೆ.
ಈಗ ತನಿಖಾಧಿಕಾರಿ ವಿರುದ್ಧವೇ ಮಹಾದೋಖಾ ಕಂಪನಿ ಗಂಭೀರ ಆರೋಪಗಳನ್ನು ಮಾಡುತ್ತಿದ್ದು, ವೆಂಕಟೇಶ್ ಪ್ರಸನ್ನ ಅವರಿಂದ ತೊಂದರೆ ಆಗಿದ್ದರೆ ಧ್ವನಿ ಎತ್ತಿ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿಕೊಂಡಿದೆ.
ಸಿಸಿಬಿಯಿಂದ ವೆಂಕಟೇಶ್ ಪ್ರಸನ್ನ ಅವರು ವರ್ಗಾವಣೆ ಆಗುತ್ತಿದ್ದಂತೆ ಆಂಬಿಡೆಂಟ್ ಈ ರೀತಿ ಪೋಸ್ಟ್ ಮಾಡಿಕೊಂಡಿದೆ. ತಮ್ಮ ಪೋಸ್ಟ್ ನ್ನು ಎಲ್ಲ ಮಾಧ್ಯಮಗಳಿಗೆ ಮತ್ತು ಬೆಂಗಳೂರು ಸಿಟಿ ಪೊಲೀಸ್ ಪೇಜ್ ಗೆ ಟ್ಯಾಗ್ ಮಾಡಿದೆ.
ಆಂಬಿಡೆಂಟ್ ಕ್ಲಬ್ ತನ್ನ ಖಾತೆಯಲ್ಲಿ ಆಡಿಯೋ ಕ್ಲಿಪ್ ಅಪ್ಲೋಡ್ ಮಾಡಿಕೊಂಡಿದೆ. ಆ ಆಡಿಯೋ ಕ್ಲಿಪ್ ಕೆಳಗಿನಂತಿದೆ.
ಬೆಂಗಳೂರು: ಆಂಬಿಡೆಂಟ್ ಹಗರಣದ ಡೀಲ್ ಮಾಸ್ಟರ್, ಗಣಧಣಿ-ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸಿಸಿಬಿ ಪೊಲೀಸರಿಗೆ ಇನ್ನೂ ಚಳ್ಳೆಹಣ್ಣು ತಿನ್ನಿಸ್ತಲೇ ಇದ್ದಾರೆ. ರೆಡ್ಡಿ ಬೇಟೆಗೆ ಸಿಸಿಬಿ ತಂಡಗಳಾಗಿ ಬೆಂಗಳೂರು, ಬಳ್ಳಾರಿ, ಚಿತ್ರದುರ್ಗದ ಮೊಳಕಾಲ್ಮೂರು, ದೂರದ ಹೈದ್ರಾಬಾದ್‍ಗೆ ತೆರಳಿದ್ದರೂ ಸಣ್ಣ ಸುಳಿವೂ ಸಿಕ್ಕಿಲ್ಲ. ಹಾಗಾಗಿ, ರೆಡ್ಡಿ ತಲಾಶ್‍ಗೆ ಹೈದರಾಬಾದ್ ಪೊಲೀಸರ ಮೊರೆ ಹೋಗಿದ್ದಾರೆ.
ಮೊಬೈಲ್ ಟ್ರಾಪ್ ಪ್ಲಾನ್ ಮಾಡಿದರೂ ಸಿಸಿಬಿ ಸೋತಿದೆ. ಮೊಳಕಾಲ್ಮೂರಿನಲ್ಲೇ ರೆಡ್ಡಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಜ್ಞಾತ ಸ್ಥಳದಿಂದಲೇ ಶುಕ್ರವಾರ ಸಿಟಿ ಸಿವಿಲ್ ಕೋರ್ಟ್ ನಲ್ಲಿ ರೆಡ್ಡಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಈ ಮಧ್ಯೆ, ಜಾರಿ ನಿರ್ದೇಶನಾಲಯ ಎಂಟ್ರಿ ಸಾಧ್ಯತೆ ದಟ್ಟವಾಗಿದ್ದು, ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಕೋರಿದೆ. ಜನವರಿಯಲ್ಲಿ ಫರೀದ್ ಅಹ್ಮದ್, ಮಗ ಅಫಾಕ್ ಅಹ್ಮದ್ ವಿಚಾರಣೆಗೆ ಒಳಪಡಿಸಿದ್ದಾಗ 1.97 ಕೋಟಿ ರೂ. ನಗದು ಸಿಕ್ಕಿತ್ತು. ಸಾರ್ವಜನಿಕರಿಗೆ ಶೇ.12ರಷ್ಟು ಬಡ್ಡಿ ಸಮೇತ ಕೊಡೋದಾಗಿ ಆಮಿಷವೊಡ್ಡಿ 954 ಕೋಟಿ ಸಂಗ್ರಹಿಸಿದ್ದಾರೆ. ಇದು ನಕಲಿ ಕಂಪನಿ ಅಂತ ಆರ್‌ಬಿಐಗೂ ಪತ್ರ ಬರೆದಿದ್ದೇವೆ ಅಂತ ಪತ್ರಿಕಾ ಪ್ರಕಟಣೆಯಲ್ಲಿ ಜಾರಿ ನಿರ್ದೇಶನಾಲಯ ಹೇಳಿದೆ.
ಬಳ್ಳಾರಿಯ ಅಹಂಬಾವಿಯಲ್ಲಿರುವ ರೆಡ್ಡಿ ನಿವಾಸ ಕುಟೀರಾ ದೇಶದ ಎಲ್ಲಾ ತನಿಖಾ ಸಂಸ್ಥೆಗಳಿಂದ ದಾಳಿಗೊಳಗಾದ ಏಕೈಕ ನಿವಾಸ ಎಂಬ ಕುಖ್ಯಾತಿಯನ್ನು ಈಗ ಪಡೆದುಕೊಂಡಿದೆ. ಸಿಸಿಬಿ ಪೊಲೀಸರು ರೆಡ್ಡಿ ಕೇಸನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಈಗಾಗಲೇ ಅಲಿಖಾನ್ ಜಾಮೀನು ಪಡೆದುಕೊಂಡಿರುವುದರಿಂದ ಜನಾರ್ದನ ರೆಡ್ಡಿಗೆ ನಾಳೆ ನಿರೀಕ್ಷಣಾ ಜಾಮೀನು ಸಿಗುವ ಸಾಧ್ಯತೆ ಇದೆ ಎಂಬುದಾಗಿ ಹೇಳಲಾಗುತ್ತಿದೆ. ಹೀಗಾಗಿ ಸಿಸಿಬಿ ಪೊಲೀಸರು ಹಲವು ಕಡೆ ಮಹಜರು ಮಾಡಿದ್ದರು. ಡೀಲ್ ನಡೆದ ಬೆಂಗಳೂರಿನ ತಾಜ್‍ವೆಸ್ಟ್ ಎಂಡ್‍ನಲ್ಲಿ ಆರೋಪಿ ಫರೀದ್‍ರನ್ನ ನಿನ್ನೆ ಸ್ಥಳಕ್ಕೆ ಕರೆದೊಯ್ದಿದ್ದ ಪೊಲೀಸರು ಇವತ್ತು, ಬಳ್ಳಾರಿಯ ರೆಡ್ಡಿ ನಿವಾಸ ಕುಟೀರ, ಒಎಂಸಿ ಕಂಪನಿಯನ್ನು ಮಹಜರು ನಡೆಸಿದರು. ರೆಡ್ಡಿ ಸಿಗದ ಕಾರಣ ಮಾವ ಪರಮೇಶ್ವರ್ ರೆಡ್ಡಿ, ಅತ್ತೆ ನಾಗಲಕ್ಷ್ಮಮ್ಮ ಅವರನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿತು.
ರೆಡ್ಡಿ ಆಪ್ತರ ಮನೆ ಮೇಲೆ ರೇಡ್ ಮಾಡಿದ ಸಿಸಿಬಿ ಅಧಿಕಾರಿಗಳ ತಂಡಕ್ಕೆ ನಾಗಲಕ್ಷ್ಮಮ್ಮ ಅವರು ಆವಾಜ್ ಹಾಕಿದ್ದರು. ನೀವ್ಯಾರು? ಅಳಿಯ, ಮಗಳು ಇಲ್ಲದ ವೇಳೆ ಏಕೆ ಬಂದಿದ್ದೀರಿ ಎಂದು ಕಿರುಚಾಡಿದರು. ಇದರಿಂದ ಬೇಸತ್ತ ಅಧಿಕಾರಿಗಳು ಕೊನೆಗೆ ಮಹಿಳಾ ಅಧಿಕಾರಿಯನ್ನು ಕರೆಸಿ ನಾಗಲಕ್ಷ್ಮಮ್ಮರನ್ನ ಸಿಸಿಬಿ ವಶಕ್ಕೆ ಪಡೆದುಕೊಂಡರು. ಬಳಿಕ ಬೆಡ್ ರೂಂ, ಬಾತ್‍ರೂಮ್, ಗೋಡೆ, ಸಿಂಟೆಕ್ಸ್, ಸಂಪ್ ಎಲ್ಲಾ ಕಡೆ ಚಿನ್ನಕ್ಕಾಗಿ 8 ಗಂಟೆಗಳ ನಿರಂತರ ಶೋಧ ನಡೆಸಿದರು. ಇದರ ಜೊತೆಗೆ ಮನೆಯಲ್ಲಿದ್ದ ಎಲ್ಲಾ ದಾಖಲೆಗಳನ್ನು ಕೊಂಡೊಯ್ದರು.
ಡೀಲ್ ನಡೆದ ತಾಜ್ ವೆಸ್ಟ್ ಎಂಡ್‍ನಲ್ಲಿ ಆಂಬಿಡೆಂಟ್ ಮಾಲೀಕ ಫರೀದ್ ಅವರನ್ನ ಸಿಸಿಬಿ ಪೊಲೀಸರು ಮಹಜರು ಮಾಡಿದಾಗ, ಅಲ್ಲಿ ನಡೆದ ಸಂಭಾಷಣೆ ಮಾಧ್ಯಮಗಳಿಗೆ ಲಭ್ಯವಾಗಿದೆ. ಫರೀದ್ ಮಹಜರು ವೀಡಿಯೋ ಮಾಧ್ಯಮಗಳಿಗೆ ಲೀಕ್ ಆಗಿರುವುದಕ್ಕೆ ಸಿಸಿಬಿ ಚೀಫ್ ಅಲೋಕ್ ಕುಮಾರ್ ಅಧಿಕಾರಿಗಳ ಮೇಲೆ ಗರಂ ಆದರು. ಅಲ್ಲದೇ ಅಲಿಖಾನ್ ನಿವಾಸಕ್ಕೆ ತೆರಳಿದ್ದ ತಂಡದ ಜೊತೆ ತುರ್ತು ಸಭೆ ನಡೆಸಿ, ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ವೇಳೆ ಅಧಿಕಾರಿಗಳಿಗೆ ಕೋರ್ಟ್‍ಗೆ ಹಾಜರು ಪಡಿಸುವ ಮುನ್ನ, ಯಾವುದೇ ದಾಖಲೆ ಸೋರಿಕೆ ಮಾಡುವಂತಿಲ್ಲ. ಆದರೂ ಸಹ ಇದು ಹೇಗೆ ಲೀಕ್ ಆಯ್ತು? ಕಣ್ಣಾ ಮುಚ್ಚಾಲೆ ನನ್ನ ಹತ್ತಿರ ನಡೆಯಲ್ಲ. ಹಗಲು-ರಾತ್ರಿ ಒದ್ದಾಡಿ ಮಾಡುತ್ತಿರುವ ಕೆಲಸವನ್ನು ಮುಗಿಸುವ ಯತ್ನ ಮಾಡುತ್ತಿದ್ದೀರಾ? ನಮ್ಮವರಲ್ಲದೇ ಬೇರೆ ಯಾರು ಮಾಧ್ಯಮಕ್ಕೆ ವಿಡಿಯೋ ಕೊಟ್ಟವರು? ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದರ ಬೆನ್ನಲ್ಲೆ, ಜನಾರ್ದನ ರೆಡ್ಡಿ ಪ್ರಕರಣದ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಮಾಹಿತಿ ಪಡೆದಿದ್ದು, ಶ್ರೀರಾಮುಲು ಸೇರಿದಂತೆ ಬಿಜೆಪಿಯ ಯಾವೊಬ್ಬ ನಾಯಕರೂ ಹೇಳಿಕೆ ಕೊಡಬಾರದೆಂದು ವಾರ್ನಿಂಗ್ ಕೊಟ್ಟಿರುವುದಾಗಿ ಮಾಹಿತಿ ಲಭಿಸಿದೆ. ಹೀಗಾಗಿ ರೆಡ್ಡಿ ಆಪ್ತ ರಾಮುಲುಗೆ ಧರ್ಮಸಂಕಟ ಎದುರಾಗಿದೆ.
ಈ ಬಗ್ಗೆ ಕಾನೂಕು ಕ್ರಮ ತೆಗೆದುಕೊಳ್ಳುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಇದರ ಜೊತೆ ಬಿಜೆಪಿ ಎಂಎಲ್‍ಸಿ ರವಿಕುಮಾರ್ ಚಿತ್ರದುರ್ಗದಲ್ಲಿ ಮಾತನಾಡಿ, ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲವೆಂದು ಹೇಳಿದ್ದರೆ, ಮೊಳಕಾಲ್ಮೂರು ಪರಾಜಿತ ಅಭ್ಯರ್ಥಿ ತಿಪ್ಪೇಸ್ವಾಮಿ ನನಗೆ ಟಿಕೆಟ್ ತಪ್ಪಿಸಿದ್ದೇ ರೆಡ್ಡಿ ಅಂತ ಕಿಡಿಕಾರಿದರು. ಇದು ರಾಜ್ಯ ಸರ್ಕಾರದ ಪಿತೂರಿ ಅಲ್ಲ. ಜನರ ದುಡ್ಡು ತಿಂದೋವರ ಮೇಲೆ ಕಾನೂನು ಕ್ರಮ ತೆಗೆದುಕೊಂಡಿದೆ ಎಂದು ಸಂಸದ ಉಗ್ರಪ್ಪ ಸ್ಪಷ್ಟಪಡಿಸಿದರು.