Tag: ಆಂಧ್ರ ಪ್ರದೇಶ

  • ಜಾತ್ರೆಯಂತಾದ ರಾಯಚೂರು ಎಪಿಎಂಸಿ: ಆಂಧ್ರ ಪ್ರದೇಶ ರೈತರಿಂದ ತುಂಬಿದ ಮಾರುಕಟ್ಟೆ

    ಜಾತ್ರೆಯಂತಾದ ರಾಯಚೂರು ಎಪಿಎಂಸಿ: ಆಂಧ್ರ ಪ್ರದೇಶ ರೈತರಿಂದ ತುಂಬಿದ ಮಾರುಕಟ್ಟೆ

    – ಕೊರೊನಾ ಭೀತಿ ಮಧ್ಯೆ ಕೃಷಿ ಉತ್ಪನ್ನ ಮಾರಾಟ

    ರಾಯಚೂರು: ಈಗ ಕೃಷಿ ಚಟುವಟಿಕೆಗಳು ಗರಿಗೆದರುವ ಸಮಯವಾಗಿರುವುದರಿಂದ ರಾಯಚೂರು ಜಿಲ್ಲಾಡಳಿತ ಲಾಕ್‍ಡೌನ್‍ನಲ್ಲಿ ಸ್ವಲ್ಪ ಸಡಲಿಕೆ ನೀಡಿದೆ. ಸರ್ಕಾರದ ಸೂಚನೆಯಂತೆ ಕೃಷಿ ಮಾರುಕಟ್ಟೆಗಳು ಸಹ ವ್ಯಾಪಾರ ಆರಂಭಿಸಿವೆ. ಆದರೆ ಎಪಿಎಂಸಿಗಳಲ್ಲಿ ಜನ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುತ್ತಿಲ್ಲ. ಇಡೀ ಕೃಷಿ ಉತ್ಪನ್ನ ಮಾರುಕಟ್ಟೆ ಜಾತ್ರೆಯಂತಾಗಿದೆ.

    ರೈತರ ಸಂಖ್ಯೆ ಹೆಚ್ಚಾಗಿದ್ದರಿಂದ ತುಂಬಾ ಜನ ವ್ಯಾಪಾರಿಗಳು, ದಲ್ಲಾಳಿಗಳು ತಮ್ಮ ಅಂಗಡಿಗಳನ್ನೇ ತೆರೆಯುತ್ತಿಲ್ಲ. ರೈತರು, ಹಮಾಲಿಗಳು ಗುಂಪುಗುಂಪಾಗಿ ಬರುತ್ತಿರುವುದರಿಂದ ಸಾಮಾಜಿಕ ಅಂತರ ಎನ್ನುವುದೇ ಕಾಣುತ್ತಿಲ್ಲ. ಭತ್ತ, ಈರುಳ್ಳಿ, ಶೇಂಗಾ ಬೆಳೆದ ರೈತರು ವ್ಯಾಪಾರಕ್ಕಾಗಿ ಗುಂಪುಗುಂಪಾಗೆ ಓಡಾಡುತ್ತಿದ್ದಾರೆ.

    ಅವಶ್ಯಕ ವಸ್ತುಗಳ ಸಾಗಾಣಿಕೆಗೆ ಕೇಂದ್ರ ಸರ್ಕಾರವೇ ಅನುಮತಿ ನೀಡಿರುವುದರಿಂದ ಅಂತರರಾಜ್ಯದಿಂದ ಭತ್ತ, ಈರುಳ್ಳಿ ಬರುತ್ತಿದೆ. ಆಂಧ್ರ ಪ್ರದೇಶದಿಂದಲೇ ಶೇ.70ರಷ್ಟು ಭತ್ತ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುತ್ತಿದೆ. ಹೊರ ರಾಜ್ಯದಿಂದ ಬರುವ ರೈತರು ಸಹ ಯಾವುದೇ ಸುರಕ್ಷತೆ ಕಾಪಾಡಿಕೊಳ್ಳುತ್ತಿಲ್ಲ, ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವನ್ನೂ ಕಾಪಾಡುತ್ತಿಲ್ಲ. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಆತಂಕವಾಗಿದೆ.

    ಜಿಲ್ಲೆಯ ರೈತರು ಈರುಳ್ಳಿ, ಶೇಂಗಾ ಹೆಚ್ಚು ಪ್ರಮಾಣದಲ್ಲಿ ಮಾರುಕಟ್ಟೆಗೆ ತರುತ್ತಿದ್ದಾರೆ. ರೈತರಿಗೂ ಯಾವುದೇ ಸುರಕ್ಷತೆ ಇಲ್ಲಾ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಯಾವುದೇ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದೆ ವ್ಯಾಪಾರ ಆರಂಭಿಸಲಾಗಿದೆ. ಹೀಗಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಸುರಕ್ಷಿತ ಕ್ರಮಗಳೊಂದಿಗೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನ ಮಾರಾಟ ಮಾಡಲು ಅನುವುಮಾಡಿಕೊಡಬೇಕಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

  • ಮೂರನೇ ಹಂತಕ್ಕೆ ತಲುಪಿತಾ ಭಾರತ?- ಉಡಾಫೆ ಜನರೇ ಎಚ್ಚರ, ಎಚ್ಚರ

    ಮೂರನೇ ಹಂತಕ್ಕೆ ತಲುಪಿತಾ ಭಾರತ?- ಉಡಾಫೆ ಜನರೇ ಎಚ್ಚರ, ಎಚ್ಚರ

    – ಮಣಿಪಾಲದ ಕೆಎಂಸಿ ಆಸ್ಪತ್ರೆಯ ಒಪಿಡಿ ಬಂದ್

    ಬೆಂಗಳೂರು: ಹೆಮ್ಮಾರಿ, ಡೆಡ್ಲಿ ವೈರಸ್ ಕೊರೊನಾ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ಬುಧವಾರ 51 ಇದ್ದ ಕೊರೊನಾ ಪ್ರಕರಣ ಗುರುವಾರ ದಿಢೀರ್ 55ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ನಾಲ್ಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

    ವಿವಿಧ ರಾಜ್ಯಗಳಲ್ಲಿ ನಿತ್ಯವೂ ಸೋಂಕಿತರ ಸಂಖ್ಯೆ ಏರುವುದನ್ನು ಗಮನಿಸಿದರೆ ದೇಶದಲ್ಲಿ ಕೊರೊನಾ 3ನೇ ಹಂತಕ್ಕೆ ಕಾಲಿಟ್ಟಿದೇಯಾ ಎಂಬ ಅನುಮಾನ ಮೂಡಲು ಶುರುವಾಗಿದೆ. ಕರ್ನಾಟಕ, ತೆಲಂಗಾಣ ಮತ್ತು ದೆಹಲಿಯಲ್ಲಿ ಗುರುವಾರ ತಲಾ 4 ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಕೊರೊನಾ ಥರ್ಡ್ ಸ್ಟೇಜ್‍ಗೆ ಲಗ್ಗೆ ಇಟ್ಟಿದೇಯಾ? ಸಮುದಾಯಕ್ಕೆ ಕೊರೊನಾ ಹಬ್ಬುತಿದೇಯಾ ಎಂಬ ಅನುಮಾನಕ್ಕೆ ಕಾರಣ ಆಗಿದೆ.

    ಮಣಿಪಾಲ:
    ಮಣಿಪಾಲದ ಕೆಎಂಸಿ ಆಸ್ಪತ್ರೆ ಇಂದಿನಿಂದ ಏಪ್ರಿಲ್ 15 ರವರೆಗೆ ತನ್ನ ಎಲ್ಲಾ ಒಪಿಡಿ ಸೇವೆಯನ್ನು ಸ್ಥಗಿತಗೊಳಿಸಿದೆ. ತುರ್ತು ಚಿಕಿತ್ಸೆ ಮತ್ತು ಎಮರ್ಜೆನ್ಸಿ ಸೇವೆ ಮಾತ್ರ ಮಣಿಪಾಲ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ಸಿಗಲಿದೆ ಎಂದು ವೈದ್ಯಕೀಯ ಅಧೀಕ್ಷಕರು ಪ್ರಕಟಣೆ ಹೊರಡಿಸಿದ್ದಾರೆ.

    ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವ್ಯಕ್ತಿಗೆ ಕೆಎಂಸಿಯಲ್ಲಿ ಚಿಕಿತ್ಸೆ ಸಿಗುತ್ತಿರುವುದರಿಂದ ಒಪಿಡಿ ರೋಗಿಗಳಿಗೆ ಯಾವುದೇ ಸಮಸ್ಯೆಗಳು ಆಗಬಾರದು ಎನ್ನುವ ಉದ್ದೇಶದಿಂದ ಕೆಎಂಸಿಯ ವೈದ್ಯಕೀಯ ಅಧೀಕ್ಷಕರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

    ಕೊಡಗು ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹರಡದಂತೆ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗಿದೆ. ಮಡಿಕೇರಿಯಲ್ಲಿ ತರಕಾರಿ ಹಾಗೂ ಅಗತ್ಯ ವಸ್ತುಗಳ ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ ಮತ್ತು ಅಂಗಡಿ ಮುಂಗಟ್ಟುಗಳ ಮುಂದೆ ಖುದ್ದು ಪೊಲೀಸರೇ ಲ್ಯಾಂಡ್ ಮಾಕ ಮಾಡಿದ್ದಾರೆ. ಜನರು ಅಂತರಕಾಯ್ದುಕೊಂಡು ವಹಿವಾಟು ನಡೆಸುವಂತೆ ಸೂಚಿಸಿದ್ದಾರೆ.

    ಮೈಸೂರಿನಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕಿರಾಣಿ ಅಂಗಡಿ ಮಾಲೀಕರು ತಮ್ಮ ಅಂಗಡಿಯನ್ನು ಗಾಜಿನಲ್ಲಿ ಕವರ್ ಮಾಡಿದ್ದಾರೆ. ಮೈಸೂರಿನ ಇಟ್ಟಿಗೆಗೂಡಿನ ರಿಷಭ್ ಬಂಢಾರ್ ದಿನಸಿ ಅಂಗಡಿಯನ್ನು ಮಾಲೀಕರು ಗಾಜಿನಲ್ಲಿ ಮುಚ್ಚಿ ಅಂಗಡಿ ಪಕ್ಕ ಚಿಕ್ಕದೊಂದು ಜಾಗದ ತೆರೆದು ಅಲ್ಲಿಂದ ದಿನಸಿ ಪದಾರ್ಥ ವಿತರಣೆ ಮಾಡುತ್ತಿದ್ದಾರೆ. ಅಂಗಡಿಯ ಹೊರಗೆ ಸರತಿ ಸಾಲಿನಲ್ಲಿ ಮೂರು ಅಡಿ ಅಂತರದಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ಪದಾರ್ಥ ನೀಡಲಾಗುತ್ತಿದೆ.

  • ಹಾಲಶ್ರೀ ಸ್ವಾಮೀಜಿಗಳು ಪ್ರಯಾಣಿಸುತ್ತಿದ್ದ ಕಾರು ಅಪಘಾತ

    ಹಾಲಶ್ರೀ ಸ್ವಾಮೀಜಿಗಳು ಪ್ರಯಾಣಿಸುತ್ತಿದ್ದ ಕಾರು ಅಪಘಾತ

    ಬಳ್ಳಾರಿ: ಆಂಧ್ರ ಪ್ರದೇಶದ ಗುತ್ತಿ-ಅನಂತಪುರಂ ರಾಷ್ಟ್ರೀಯ ಹೆದ್ದಾರಿ ಬಳಿ ಹಾಲು ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ.

    ಜಿಲ್ಲೆಯ ಹುವಿನಹಡಗಲಿ ತಾಲೂಕಿನ ಹಿರೇ ಹಡಗಲಿಯಲ್ಲಿ ಹಾಲು ಮಠವಿದ್ದು, ಕೆಲಸದ ನಿಮಿತ್ತವಾಗಿ ಕಳೆದ ಎರಡು ದಿನಗಳ ಹಿಂದೆ ಹೈದರಾಬಾದ್‍ಗೆ ಸ್ವಾಮೀಜಿ ಅವರು ತೆರಳಿದ್ದರು. ಇಂದು ಬೆಳಗಿನ ಜಾವ ಕೆಲಸ ಮುಗಿಸಿಕೊಂಡು ಬಳ್ಳಾರಿಗೆ ಮರಳಿ ಬರುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸ್ವಾಮೀಜಿಯವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸ್ವಾಮೀಜಿ ಅವರ ಕಾರು ಚಾಲಕ ಗಂಭೀರ ಗಾಯಗೊಂಡಿದ್ದು, ಸ್ವಾಮೀಜಿ ಹಾಗೂ ಚಾಲಕ ಹೈದರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಅಪಘಾತಕ್ಕೆ ಲಾರಿ ಚಾಲಕನ ಅಜಾಗರುಕತೆಯೇ ಕಾರಣ ಎಂದು ತಿಳಿದು ಬಂದಿದ್ದು, ಅನಂತಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಂಧ್ರ, ತೆಲಂಗಾಣ ರೈತರಿಂದ ರಾಜ್ಯದ ಕೃಷಿ ಕೂಲಿ ಕಾರ್ಮಿಕರ ಹೈಜಾಕ್

    ಆಂಧ್ರ, ತೆಲಂಗಾಣ ರೈತರಿಂದ ರಾಜ್ಯದ ಕೃಷಿ ಕೂಲಿ ಕಾರ್ಮಿಕರ ಹೈಜಾಕ್

    – ರಾಯಚೂರು ರೈತರಿಗೆ ಕೂಲಿಕಾರರಿಲ್ಲದೆ ಎದುರಾಗಿದೆ ಸಂಕಷ್ಟ

    ರಾಯಚೂರು: ಪ್ರತಿ ವರ್ಷ ಅತೀವೃಷ್ಠಿ ಅನಾವೃಷ್ಠಿಗಳಿಗೆ ತುತ್ತಾಗಿ ಒದ್ದಾಡುತ್ತಿದ್ದ ಬಿಸಿಲನಾಡು ರಾಯಚೂರಿನ ರೈತರು ಈ ಬಾರಿ ಹೊಸ ಸಮಸ್ಯೆಗೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಮಳೆ ಉತ್ತಮವಾಗಿರುವ ಪರಿಣಾಮ ಹತ್ತಿ ಇಳುವರಿ ಭರ್ಜರಿಯಾಗಿದೆ. ಮೆಣಸಿನಕಾಯಿ, ಜೋಳ ಕೂಡ ಉತ್ತಮವಾಗಿದೆ. ಆದರೆ ಬೆಳೆ ಕಟಾವಿಗೆ ಬಂದು ನಿಂತಿದ್ದು ಬೆಳೆಯನ್ನ ಬಿಡಿಸಿಕೊಳ್ಳಲು ರೈತರಿಗೆ ಕಷ್ಟವಾಗುತ್ತಿದೆ. ಕಾರಣ ಕೃಷಿ ಕೂಲಿಕಾರರ ಸಮಸ್ಯೆ. ಸ್ಥಳೀಯವಾಗಿ ಕೂಲಿಕಾರರು ಸಿಗದೆ ರೈತರು ಕಂಗಾಲಾಗಿದ್ದಾರೆ. ಇನ್ನೂ ಸ್ವಲ್ಪ ದಿನ ಕಳೆದರೆ ಜಮೀನಿನಲ್ಲೇ ಬೆಳೆಗಳು ಹಾಳಾಗುವ ಭೀತಿ ಎದುರಾಗಿದೆ.

    ಇಲ್ಲಿ ಹತ್ತಿ ಬಿಡಿಸಲು ಕೂಲಿಯಾಳು ಸಿಗದೆ ರೈತರು ಪರದಾಡುತ್ತಿದ್ದರೆ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ರೈತರು ಇಲ್ಲಿನ ಕೂಲಿಕಾರರನ್ನು ದುಬಾರಿ ಕೂಲಿ ಹಣ ಕೊಟ್ಟು ತಮ್ಮತ್ತ ಸೆಳೆಯುತ್ತಿದ್ದಾರೆ. ಕಡಿ ಪ್ರದೇಶದಲ್ಲಿ ದಿನಕ್ಕೆ 150 ರೂ. ಕೂಲಿ ನೀಡುತ್ತಿದ್ದರೆ ಆಂಧ್ರ, ತೆಲಂಗಾಣದಲ್ಲಿ 250 ರೂ. ನೀಡಲಾಗುತ್ತಿದೆ. ಅದರ ಜೊತೆಗೆ ಕರೆದೊಯ್ಯಲು ಪ್ರತಿ ವ್ಯಕ್ತಿಗೆ 50 ರೂ. ಆಟೋ ವೆಚ್ಚ ನೀಡಲಾಗುತ್ತಿದೆ. ಈಗ ಆಂಧ್ರ, ತೆಲಂಗಾಣದಲ್ಲಿ ಬೇಸಿಗೆ ಬೆಳೆಗೆ ನಾಟಿ ಕಾರ್ಯ ಶುರುವಾಗಿದ್ದು ಕೂಲಿಕಾರರಿಗೆ ಎಲ್ಲಿಲ್ಲದ ಬೇಡಿಕೆ ಇದೆ.

    ಜಿಲ್ಲೆಯಲ್ಲಿ 74,654 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಕೇಳಿದಷ್ಟು ಹಣ ಕೊಡುತ್ತೇವೆಂದರೂ ಹತ್ತಿ ಬಿಡಿಸಲು ಕೂಲಿಕಾರರು ಸಿಗುತ್ತಿಲ್ಲ. ಮೊದಲೆಲ್ಲ ಹತ್ತಿ ಬಿಡಿಸಲು ದಿನಕ್ಕೆ ಇಂತಿಷ್ಟು ಎಂದು ಕೂಲಿ ನೀಡಲಾಗುತ್ತಿತ್ತು. ಆದರೆ ಈಗ ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಹತ್ತಿ ಬೇಕಾದರೂ ಬಿಡಿಸಲಿ. ಕೆಜಿಗೆ 8 ರೂ. ನೀಡುತ್ತಿದ್ದೇವೆ ಎನ್ನುತ್ತಾರೆ ರೈತರು. ಹೀಗಾಗಿ ಒಬ್ಬ ಮಹಿಳೆ 50-60 ಕೆಜಿ ಹತ್ತಿ ಬಿಡಿಸುತ್ತಾಳೆ. ಇದು ರೈತರಿಗೆ ಹೊರೆಯಾದರೂ ಬೇರೆ ದಾರಿ ಕಾಣದಾಗಿದೆ. 30-40 ಕಿಮೀ ದೂರದವರೆಗೂ ಹೋಗಿ ಕರೆ ತರುವ ಸ್ಥಿತಿ ಇದೆ. ಬೆಳಗ್ಗೆ ಕರೆದುಕೊಂಡು ಹೋಗಿ ಸಂಜೆ ಕರೆ ತರಬೇಕೀದೆ. ಇದಕ್ಕೆಲ್ಲಾ ಸರ್ಕಾರವೇ ಹೊಣೆ ಅಂತ ರೈತ ಮುಖಂಡ ಲಕ್ಷ್ಮಣ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಮಾರುಕಟ್ಟೆ ನಾನಾ ಭಾಗಗಳಿಂದ ಹತ್ತಿ ಲಗ್ಗೆ ಇಡುತ್ತಿದೆ. ಇದರಿಂದ 4,400ರಿಂದ 5,250 ರೂ.ವರೆಗೆ ದರ ಇದೆ. ಹತ್ತಿ ಖರೀದಿ ಕೇಂದ್ರಗಳಲ್ಲಿ 5,550 ರೂ.ಗೆ ಒಬ್ಬ ರೈತರಿಂದ 40 ಕ್ವಿಂಟಲ್ ಖರೀದಿಸಲಾಗುತ್ತಿದೆ. ಸರ್ಕಾರ ತನ್ನ ಖರೀದಿ ಮಿತಿ ಮುಗಿದ ಬಳಿಕ ಯಾವಾಗ ಬೇಕಾದರೂ ಕೇಂದ್ರ ಸ್ಥಗಿತ ಮಾಡಬಹುದು ಎಂಬ ಆತಂಕ ರೈತರನ್ನ ಕಾಡುತ್ತಿದೆ.

  • 13ರ ಬಾಲಕಿಯನ್ನು 10 ದಿನಗಳಿಂದ 6 ಬಾರಿ ರೇಪ್‍ಗೈದ ಮೆಕ್ಯಾನಿಕ್

    13ರ ಬಾಲಕಿಯನ್ನು 10 ದಿನಗಳಿಂದ 6 ಬಾರಿ ರೇಪ್‍ಗೈದ ಮೆಕ್ಯಾನಿಕ್

    – ಬಾಲಕಿಯನ್ನು ಮನೆಗೆ ಕರೆತಂದು ವಿಕೃತಿ ಮೆರೆದ
    – ಅತ್ಯಾಚಾರದ ಬಗ್ಗೆ ಬಾಯಿ ಬಿಡದಂತೆ ಬೆದರಿಕೆ

    ಹೈದರಾಬಾದ್: ಕಾಮುಕನೋರ್ವ 13 ವರ್ಷದ ಬಾಲಕಿಯನ್ನು ಕಳೆದ 10 ದಿನಗಳಿಂದ 6 ಬಾರಿ ಅತ್ಯಾಚಾರ ಮಾಡಿ ವಿಕೃತಿ ಮೆರೆದ ಘಟನೆ ಆಂಧ್ರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

    ಆರೋಪಿಯನ್ನು ಎಂ.ಎಸ್ ಮಕ್ತಾ(35) ಎಂದು ಗುರುತಿಸಲಾಗಿದೆ. ಪಂಜಗುಟ್ಟದ ನಿವಾಸಿಯಾದ ಮೆಕ್ತಾ ಮೆಕ್ಯಾನಿಕ್ ಆಗಿದ್ದು, ತನ್ನ ಪಕ್ಕದ ಮನೆಯ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಆರೋಪಿಗೆ ಈಗಾಗಲೇ ಮದುವೆ ಆಗಿದ್ದು, ಪತ್ನಿ ಮನೆಯಲ್ಲಿ ಇಲ್ಲದ ವೇಳೆ ಬಾಲಕಿಯನ್ನು ಮನೆಗೆ ಕರೆಸಿಕೊಳ್ಳುತ್ತಿದ್ದನು. ಬಳಿಕ ಆಕೆಯ ಮೇಲೆ ಅತ್ಯಾಚಾರವೆಸೆಗಿ ವಿಕೃತಿ ಮೆರೆಯುತ್ತಿದ್ದನು. ಹೀಗೆ ಕಳೆದ 10 ದಿನಗಳಿಂದ ಆರೋಪಿ 6 ಬಾರಿ ಬಾಲಕಿಯನ್ನು ಅತ್ಯಾಚಾರಗೈದಿದ್ದಾನೆ.

    ಅಲ್ಲದೇ ಈ ಬಗ್ಗೆ ತಂದೆ-ತಾಯಿಗೆ ಹೇಳಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಬಾಲಕಿಯನ್ನು ಹೆದರಿಸಿದ್ದನು. ಕಾಮುಕನ ವಿಕೃತಿಗೆ ಬೆದರಿದ ಬಾಲಕಿ ಯಾರ ಬಳಿಯೂ ತನ್ನ ಮೇಲೆ ನಡೆಯುತ್ತಿದ್ದ ಅತ್ಯಾಚಾರದ ಬಗ್ಗೆ ಬಾಯಿಬಿಟ್ಟಿರಲಿಲ್ಲ. ಇದನ್ನೇ ದುರುಪಯೋಗ ಮಾಡಿಕೊಂಡ ಕಾಮುಕ 10 ದಿನಗಳಲ್ಲಿ 6 ಬಾರಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಮಂಗಳವಾರ ಕೂಡ ಆರೋಪಿ ಬಾಲಕಿಯನ್ನು ಮನೆಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದನು. ಆದರೆ ಸಂಜೆ ಕೆಲಸ ಮುಗಿಸಿಕೊಂಡು ತಂದೆ, ತಾಯಿ ಮನೆಗೆ ಬಂದಾಗ ಮಗಳು ಮಂಕಾಗಿ ಕೂತಿರುವುದನ್ನು ಗಮನಿಸಿ, ಏನಾಯಿತು ಎಂದು ವಿಚಾರಿಸಿದ್ದಾರೆ.

    ಈ ವೇಳೆ ಬಾಲಕಿ ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ. ಈ ಬಗ್ಗೆ ತಿಳಿದ ತಕ್ಷಣ ಪೋಷಕರು ಆರೋಪಿ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಗಳವಾರ ರಾತ್ರಿಯೇ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

  • ಕನ್ನಡ ಶಾಲೆಗಳ ಹಿತಕ್ಕಾಗಿ ಕಡ್ಡಾಯ ಭಾಷೆ ಕಲಿಕೆ ಆದೇಶ ಕೈ ಬಿಡಿ: ಆಂಧ್ರ ಸಿಎಂಗೆ ಸುರೇಶ್ ಕುಮಾರ್ ಪತ್ರ

    ಕನ್ನಡ ಶಾಲೆಗಳ ಹಿತಕ್ಕಾಗಿ ಕಡ್ಡಾಯ ಭಾಷೆ ಕಲಿಕೆ ಆದೇಶ ಕೈ ಬಿಡಿ: ಆಂಧ್ರ ಸಿಎಂಗೆ ಸುರೇಶ್ ಕುಮಾರ್ ಪತ್ರ

    ಬೆಂಗಳೂರು : ಆಂಧ್ರ ಪ್ರದೇಶದಲ್ಲಿ ಇಂಗ್ಲಿಷ್, ತೆಲುಗು, ಉರ್ದು ಮಾತ್ರ ಕಡ್ಡಾಯವಾಗಿ ಕಲಿಯಬೇಕು ಅನ್ನೋ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ನಿರ್ಧಾರಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಂಧ್ರ ಸಿಎಂಗೆ ಪತ್ರ ಬರೆದಿರುವ ಸುರೇಶ್ ಕುಮಾರ್, ತಮ್ಮ ನಿರ್ಧಾರ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಗಡಿಯಲ್ಲಿನ ಕನ್ನಡ ಶಾಲೆಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈ ಬಿಡಬೇಕು ಅಂತ ಪತ್ರದಲ್ಲಿ ಒತ್ತಾಯಿಸಿದ್ದಾರೆ.

    ಇತ್ತೀಚೆಗಷ್ಟೆ ಆಂಧ್ರ ಸಿಎಂ ಜಗನ್ ಎಲ್ಲಾ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಕಲಿಸಲಾಗುತ್ತೆ. ಅಲ್ಲದೆ ತೆಲುಗು ಮತ್ತು ಉರ್ದುವನ್ನ ಆಂಧ್ರದಲ್ಲಿ ಕಡ್ಡಾಯವಾಗಿ ಕಲಿಯಬೇಕು ಎಂದು ಆದೇಶ ಹೊರಡಿಸಿದ್ದರು. ಜಗನ್ ಈ ನಿರ್ಧಾರದಿಂದ ಗಡಿಯಲ್ಲಿರೋ ಕನ್ನಡ ಶಾಲೆಗಳ ಮೇಲೆ ಪರಿಣಾಮ ಬೀರುತ್ತೆ. ಕನ್ನಡ ಕಲಿಕೆಯೇ ಕೈಬಿಡೋ ಸಾಧ್ಯತೆಯೂ ಹೆಚ್ಚಾಗಿದೆ. ಹೀಗಾಗಿ ಸಿಎಂ ಜಗನ್ ಗೆ ಪತ್ರ ಬರೆದಿರೋ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.

    ಸುರೇಶ್ ಕುಮಾರ್ ಪತ್ರದ ಸಾರಾಂಶ ಹೀಗಿದೆ:
    ಕರ್ನಾಟಕ ಮತ್ತು ಆಂಧ್ರಪದೇಶ ರಾಜ್ಯಗಳ ಸಂಬಂಧ ಐತಿಹಾಸಿಕವಾದುದು. ಕೃಷ್ಣದೇವರಾಯನ ಕಾಲಕ್ಕಿಂತಲೂ ಮೊದಲಿನಿಂದಲೂ ಈ ಎರಡೂ ರಾಜ್ಯಗಳು ಯಾವಾಗಲೂ ಸಹೋದರ ಸಂಬಂಧದಲ್ಲೇ ನಡೆದುಕೊಂಡು ಬರುತ್ತಿವೆ. ಭಾಷೆ ಸೇರಿದಂತೆ ಎಲ್ಲ ವಿಷಯಗಳಲ್ಲೂ ನಮ್ಮೆರಡು ರಾಜ್ಯಗಳು ಪರಸ್ಪರ ಸೌಹಾರ್ದದಿಂದಲೇ ಇವೆ. ಇದು ಎರಡೂ ರಾಜ್ಯಗಳಿಗೂ ಅಭಿಮಾನದ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಆಂಧ್ರ ಪ್ರದೇಶ ಸರ್ಕಾರ ಸೀಮಾಂಧ್ರದಲ್ಲಿನ ಎಲ್ಲ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನಾಗಿ ಪರಿವರ್ತಿಸುವ ಹಾಗೆಯೇ ಪ್ರತಿ ವಿದ್ಯಾರ್ಥಿಯನ್ನು ತೆಲುಗು ಇಲ್ಲವೇ ಉರ್ದು ಭಾಷೆ ಕಲಿಯಬೇಕೆಂಬ ನಿರ್ಧಾರ ಕೈಗೊಂಡಿರುವುದು ನಮ್ಮೆರಡು ರಾಜ್ಯಗಳ ನಡುವಿನ ಸೌಹಾರ್ದಕ್ಕೆ ಧಕ್ಕೆಯಾದಂತಾಗಿದೆ.

    ಇದು ಆಂಧ್ರಪ್ರದೇಶದ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರ ಮನೋಸ್ಥೈರ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಸಾಂಸ್ಕೃತಿಕ ಸಂಘರ್ಷ ಇತರೆ ಯಾವುದೇ ಸಾಮಾಜಿಕ ಸಂಘರ್ಷಗಳಿಗಿಂತಲೂ ತೀವ್ರ ನೋವಿನ ಸಂಗತಿಯಾಗಿದೆ. ನಮ್ಮ ರಾಜ್ಯದ ಉದಾರ ಮತ್ತು ಸಮಗ್ರ ಆಡಳಿತ ಕಾರ್ಯ ವಿಧಾನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹತ್ತಾರು ತೆಲುಗು ಮಾಧ್ಯಮ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಆಂಧ್ರಪ್ರದೇಶ ಕೈಗೊಂಡ ನಿರ್ಧಾರ ಕನ್ನಡ ಭಾಷಾ ಶಿಕ್ಷಕರ ಜೀವನವನ್ನು ಅಪಾಯಕ್ಕೆ ಸಿಕ್ಕಿಸುವುದು ಮಾತ್ರವೇ ಅಲ್ಲ, ಕರ್ನಾಟಕ ಹೊರಗೆ ವಾಸಿಸುತ್ತಾರೆಂಬ ಒಂದೇ ಕಾರಣಕ್ಕಾಗಿ ಕನ್ನಡಿಗರ ಮಕ್ಕಳು ತಮ್ಮ ಮಾತೃಭಾಷೆಯಿಂದ ವಂಚಿತವಾಗಬೇಕಾಗುತ್ತದೆ. ಹಾಗಾಗಿ ಕನ್ನಡವನ್ನು ಭಾಷೆಯಾಗಿ ಇಲ್ಲವೇ ಮಾಧ್ಯಮವಾಗಿ ಕಲಿಸುವ ಅಲ್ಪಸಂಖ್ಯಾತ ಭಾಷಾ ಶಾಲೆಗಳನ್ನು ಮುಂದುವರಿಸುವ ಮೂಲಕ ತಮ್ಮ ರಾಜ್ಯದಲ್ಲಿ ವಾಸಿಸುವ ಕನ್ನಡಿಗರ ಹಿತಾಸಕ್ತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಚಿವ ಸುರೇಶ್ ಕುಮಾರ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

  • ಸಿಎಂ ಜಗನ್ ಮೋಹನ್‍ರೆಡ್ಡಿ ಮತ್ತೊಂದು ವಿವಾದಾತ್ಮಕ ನಿರ್ಧಾರ

    ಸಿಎಂ ಜಗನ್ ಮೋಹನ್‍ರೆಡ್ಡಿ ಮತ್ತೊಂದು ವಿವಾದಾತ್ಮಕ ನಿರ್ಧಾರ

    ಅಮರಾವತಿ: ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್‍ರೆಡ್ಡಿ ಮತ್ತೊಂದು ವಿವಾದಾತ್ಮಕ ನಿರ್ಧಾರ ತೆಗೆದುಕೊಂಡಿದ್ದಾರೆ.

    ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ವಿಧಾನ ಪರಿಷತ್ ಅನ್ನು ರದ್ದುಪಡಿಸುವ ನಿರ್ಣಯಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದ್ದಾರೆ. ದಿನಪೂರ್ತಿ ಚರ್ಚೆ ಬಳಿಕ 130-0 ಮತದ ಅಂತರದಲ್ಲಿ ನಿರ್ಣಯಕ್ಕೆ ಅನುಮೋದನೆ ಸಿಕ್ಕಿದೆ.

    ಆಂಧ್ರಕ್ಕೆ ಮೂರು ರಾಜಧಾನಿ ಮತ್ತು ಆಂಧ್ರ ಪ್ರದೇಶ ಕ್ಯಾಪಿಟಲ್ ರೀಜಿನ್ ಡೆವಲಪ್‍ಮೆಂಟ್ ಅಥಾರಿಟಿ ರದ್ದಿಗೆ ಪರಿಷತ್‍ನಲ್ಲಿ ಭಾರೀ ಹಿನ್ನಡೆಯಾಗಿತ್ತು. ಇದರಿಂದ ರೊಚ್ಚಿಗೆದ್ದಿರೋ ಜಗನ್‍ಮೋಹನ್ ರೆಡ್ಡಿ ಈಗ ಪರಿಷತ್ತನ್ನೇ ತೆಗೆದು ಹಾಕ್ತಿದ್ದಾರೆ. ವಿಧಾನಸಭೆಯಲ್ಲಿ ವೈಎಸ್‍ಆರ್ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಇರೋ ಕಾರಣ ಸುಲಭವಾಗಿ ಅನುಮೋದನೆ ಸಿಕ್ಕಿದೆ. ಈಗ ಸಂಸತ್‍ಗೆ ಕಳಿಸಬೇಕಿದೆ.

    ಮಸೂದೆಗಳಿಗೆ ಅಡ್ಡಿಪಡಿಸ್ತಾ ಹೋದರೆ ಪ್ರತಿವರ್ಷ 60 ಕೋಟಿಯಂತೆ 5 ವರ್ಷಕ್ಕೆ 300 ಕೋಟಿ ವ್ಯರ್ಥವಾಗುತ್ತೆ ಎಂಬುವುದು ಜಗನ್ ಪ್ರತಿಪಾದನೆಯಾಗಿದೆ. ಜಗನ್ ನಡೆಗೆ ಟಿಡಿಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸದ್ಯ ದೇಶದಲ್ಲಿ ಆಂಧ್ರ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಬಿಹಾರ 6 ರಾಜ್ಯಗಳಲ್ಲಿ ಮಾತ್ರ ವಿಧಾನಪರಿಷತ್ ಇದೆ.

  • ಪಾಕಿಸ್ತಾನದ ಹನಿಟ್ರ್ಯಾಪ್‍ಗೆ ಸಿಲುಕಿದ್ದ ಮೂವರು ನೌಕಾ ಅಧಿಕಾರಿಗಳ ಬಂಧನ

    ಪಾಕಿಸ್ತಾನದ ಹನಿಟ್ರ್ಯಾಪ್‍ಗೆ ಸಿಲುಕಿದ್ದ ಮೂವರು ನೌಕಾ ಅಧಿಕಾರಿಗಳ ಬಂಧನ

    ಕಾರವಾರ: ಮೋಹಕ ಜಾಲದಲ್ಲಿ ಬಿದ್ದು ಪಾಕಿಸ್ತಾನಕ್ಕೆ ಭಾರತೀಯ ಯುದ್ಧ ನೌಕೆಗಳ ಚಲನ ವಲನ ಮಾಹಿತಿ ನೀಡುತ್ತಿದ್ದ ಪ್ರಕರಣದ ಸಂಬಂಧ ಮೂವರು ನೌಕಾ ಅಧಿಕಾರಿಗಳನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ಪಾಕಿಸ್ತಾನದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಧಿಸಿದಂತೆ ಕೇಂದ್ರ ಗುಪ್ತಚರ ಸಂಸ್ಥೆಗಳೊಂದಿಗೆ ಆಂಧ್ರಪ್ರದೇಶದ ಪೊಲೀಸರು ತನಿಖೆ ನಡೆಸುತ್ತಿದೆ. ಹೀಗಾಗಿ ವಿಶಾಖಪಟ್ಟಣದಲ್ಲಿರುವ ಈಸ್ಟರ್ನ್ ಕಮಾಂಡ್‍ಗೆ ಸೇರಿದ ರಾಜೇಶ್, ಲೋಕಂಡ್ ಮತ್ತು ನಿರಂಜನ ಎಂಬವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ

    ಹನಿಟ್ರ್ಯಾಪ್ ಪ್ರಕರಣದಲ್ಲಿ ಈ ಹಿಂದೆ ನೌಕಾ ನೆಲೆಯ ಎಂಟು ಮಂದಿ ಸೇಲರ್‌ಗಳು ಸಿಕ್ಕಿಬಿದ್ದಿದ್ದರು. ಈ ಪೈಕಿ ಇಬ್ಬರು ಕಾರವಾರದಲ್ಲಿರುವ ನೌಕಾನೆಲೆಗೆ ಸೇರಿದ್ದರು. ಈಗ ಮತ್ತೆ ಇಬ್ಬರು ಅಧಿಕಾರಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‍ಐ) ಸಾಮಾಜಿಕ ಜಾಲತಾಣದ ಮೂಲಕ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಮೋಹಕ ಜಾಲದಲ್ಲಿ ಸಿಲುಕಿಸಿತ್ತು. ಬಳಿಕ ಭಾರತದ ನೌಕಾನೆಲೆ ಹಾಗೂ ಯುದ್ಧ ನೌಕೆಗಳ ಮಾಹಿತಿಯನ್ನು ಪಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿರುವ ತನಿಖಾ ಸಂಸ್ಥೆ ಮೂವರನ್ನು ವಶಕ್ಕೆ ಪಡೆದಿದೆ.

    ನೌಕಾದಳದ ಮಾಹಿತಿ ಸೋರಿಕೆ ಹಿನ್ನೆಲೆ ಕಾರವಾರ ಕದಂಬ ನೌಕಾನೆಲೆಯಲ್ಲಿ ಆ್ಯಂಡ್ರಾಯ್ಡ್ ಫೋನ್‍ಗಳನ್ನು ನಿಷೇಧಿಸಲಾಗಿತ್ತು. ಅಷ್ಟೇ ಅಲ್ಲದೆ ಕಾರವಾರ ಕದಂಬ ನೌಕಾನೆಲೆಯಲ್ಲಿ ಗುಪ್ತ ಮಾಹಿತಿ ಹಂಚಿಕೆ ಸಂಬಂಧ ತನಿಖೆ ಸಹ ನಡೆಸಲಾಗುತ್ತಿದೆ.

  • ಕಮಲದ ಕೈಹಿಡಿದ ಪವನ್ ಕಲ್ಯಾಣ್- ಆಂಧ್ರ ಮೈತ್ರಿಯ ಸೂತ್ರಧಾರ ಪ್ರಭಾವಿ ಕನ್ನಡಿಗ!

    ಕಮಲದ ಕೈಹಿಡಿದ ಪವನ್ ಕಲ್ಯಾಣ್- ಆಂಧ್ರ ಮೈತ್ರಿಯ ಸೂತ್ರಧಾರ ಪ್ರಭಾವಿ ಕನ್ನಡಿಗ!

    ನವದೆಹಲಿ: ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಆಂಧ್ರಪ್ರದೇಶದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ಬಿಜೆಪಿಯನ್ನು ಅರಳಿಸಲು ಮುಂದಾಗಿರುವ ನಾಯಕರು ಜನಸೇನಾದೊಂದಿಗೆ ಮೈತ್ರಿಗೆ ಮುಂದಾಗಿದ್ದು, ಈ ಮೈತ್ರಿಯಲ್ಲಿ ಕನ್ನಡಿಗ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಬಿ.ಎಲ್.ಸಂತೋಷ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

    ಪವನ್ ಕಲ್ಯಾಣ್, ಕಮಲ ಮೈತ್ರಿಯ ಪ್ರಮುಖ ಸೂತ್ರಧಾರ ಬಿ.ಎಲ್.ಸಂತೋಷ್ ಎನ್ನಲಾಗಿದ್ದು, ಇಂದು ಪವನ್ ಹಾಗೂ ಸಂತೋಷ್ ಅವರು ಮೈತ್ರಿಯ ಅಂತಿಮ ಮಾತುಕತೆ ನಡೆಸಿ ಅಧಿಕೃತವಾಗಿ ಘೋಷಣೆ ಮಾಡಿದರು. ಬಿಜೆಪಿಗೆ ನೆಲೆ ಇಲ್ಲದ ಆಂಧ್ರದಲ್ಲಿ ಸಂತೋಷ್ ಮಾಸ್ಟರ್ ಪ್ಲ್ಯಾನ್ ವರ್ಕ್ ಆಗುತ್ತಾ ಎಂಬ ಕುತೂಹಲ ಮೂಡಿಸಿದ್ದು, ಆಂಧ್ರದ ಮುಂದಿನ ಸಿಎಂ ಪವನ್ ಕಲ್ಯಾಣ್ ಆಗುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

    ಮೈತ್ರಿ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಟ ಪವನ್ ಕಲ್ಯಾಣ್ ಅವರು, ಆಂಧ್ರ ಪ್ರದೇಶದ ಭವಿಷ್ಯಕ್ಕಾಗಿ ಎರಡು ಪಕ್ಷಗಳು ಯಾವುದೇ ಷರತ್ತುಗಳಿಲ್ಲದೆ ಮೈತ್ರಿ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದೊಂದಿಗೆ ಜನಸೇನಾ ಪಕ್ಷ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಆಂಧ್ರಪ್ರದೇಶ ಸ್ಥಳೀಯ ಹಾಗೂ 2024ರ ವಿಧಾನಸಭೆ ಚುನಾವಣೆಯಲ್ಲಿ ಎರಡು ಪಕ್ಷಗಳು ಮೈತ್ರಿಯೊಂದಿಗೆ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.

    ನಟ ಪವನ್ ಕಲ್ಯಾಣ್ ಅವರು 2014ರಲ್ಲಿ ಜನಸೇನಾ ಪಕ್ಷವನ್ನು ಸ್ಥಾಪಿಸಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಜನಸೇನಾ ಸ್ಪರ್ಧೆ ನಡೆಸಿರಲಿಲ್ಲ. ಆದರೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಟಿಡಿಪಿ ಮೈತ್ರಿಗೆ ಬೆಂಬಲ ನೀಡಿದ್ದರು. ಪಕ್ಷ ಸ್ಥಾಪನೆಗೂ ಮುನ್ನ ಸಹೋದರ, ನಟ ಚಿರಂಜೀವಿ ಅವರ ಪ್ರಜಾರಾಜ್ಯಂ ಪಕ್ಷದ ಪರ ರಾಜಕೀಯದಲ್ಲಿ ಭಾಗವಹಿಸಿದ್ದರು. ಆದರೆ ಆ ಪಕ್ಷ ಕಾಂಗ್ರೆಸ್‍ನೊಂದಿಗೆ ವಿಲೀನರಾದ ಬಳಿಕ ಜನಸೇನಾ ಪಕ್ಷವನ್ನು ಸ್ಥಾಪಿಸಿದ್ದರು.

    2019ರ ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ ಮತ್ತು ಬಿಜೆಪಿಗೆ ಬೆಂಬಲ ನೀಡಿದ ಜನಸೇನಾ ಪಕ್ಷ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಆದರೆ ಈ ಚುನಾವಣೆಯಲ್ಲಿ ಜನಸೇನಾ ಮೈತ್ರಿಗೆ 1 ಸ್ಥಾನವೂ ಲಭಿಸಿರಲಿಲ್ಲ. ಆದರೆ ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿಗೆ ಬೆಂಬಲ ನೀಡದೆ ಸ್ಪರ್ಧೆ ನಡೆಸಿದ್ದ ಜನಸೇನಾ ಪಕ್ಷ ಕೇವಲ 1 ಸ್ಥಾನವನ್ನು ಮಾತ್ರ ಪಡೆದಿತ್ತು. ವಿಶೇಷ ಎಂದರೇ ಸ್ವತಃ ಪವನ್ ಕಲ್ಯಾಣ್ ತಾವು ಸ್ಪರ್ಧಿಸಿದ 2 ಕ್ಷೇತ್ರಗಳಲ್ಲಿ ಸೋತು ಹೋಗಿದ್ದರು.

    ಸದ್ಯ ಆಂಧ್ರ ಪ್ರದೇಶ ರಾಜಕಾರಣದಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಮುಂದಾಗಿರುವ ಪವನ್ ಕಲ್ಯಾಣ್ ಅವರು, ಬಿಜೆಪಿಯೊಂದಿಗೆ ಮತ್ತೊಮ್ಮೆ ಮೈತ್ರಿ ಮಾಡಿಕೊಂಡಿದ್ದಾರೆ. ಇದುವರೆಗೂ ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಆಸ್ಥಿತ್ವದಲ್ಲಿ ಇಲ್ಲದ ಬಿಜೆಪಿ ದಕ್ಷಿಣದ ರಾಜ್ಯಗಳಲ್ಲಿ ಪಕ್ಷವನ್ನು ಬಲಗೊಳಿಸಲು ಮುಂದಾಗಿದೆ.

  • ಹೈದರಾಬಾದ್ ವಿರುದ್ಧ ಘರ್ಜಿಸಿದ ಕರ್ನಾಟಕ ಬಾಯ್ಸ್- 7 ವಿಕೆಟ್‍ಗಳ ಗೆಲುವು

    ಹೈದರಾಬಾದ್ ವಿರುದ್ಧ ಘರ್ಜಿಸಿದ ಕರ್ನಾಟಕ ಬಾಯ್ಸ್- 7 ವಿಕೆಟ್‍ಗಳ ಗೆಲುವು

    ಬೆಳಗಾವಿ: ಶಿವಕುಮಾರ್ ಯು.ಬಿ. ಆಕರ್ಷಕ ಶತಕ ಹಾಗೂ ಎನ್.ಜಯೇಶ್ ಅರ್ಧ ಶತಕದ ನೆರವಿನಿಂದ ಕರ್ನಾಟಕ ತಂಡವು ಆಂಧ್ರ ಪ್ರದೇಶದ ವಿರುದ್ಧ 7 ವಿಕೆಟ್‍ಗಳ ಗೆಲುವು ಸಾಧಿಸಿದೆ.

    ಇಲ್ಲಿನ ಕೆಎಸ್‍ಸಿಎ ಮೈದಾನದಲ್ಲಿ ಆಂಧ್ರ ಪ್ರದೇಶದ ವಿರುದ್ಧದ ನಡೆದ 23 ವರ್ಷದೊಳಗಿನ ಸಿ.ಕೆ.ನಾಯ್ಡು ಟ್ರೋಫಿಯ ‘ಎ’ ಗುಂಪಿನ ನಾಲ್ಕು ದಿನದ ಆಟದಲ್ಲಿ ಕರ್ನಾಟಕ ಭರ್ಜರಿ ಗೆಲುವು ಕಂಡಿದೆ.

    187 ರನ್‍ಗಳ ಮುನ್ನಡೆಯೊಂದಿಗೆ ಬುಧವಾರ ಬೆಳಗ್ಗೆ ನಾಲ್ಕನೇ ದಿನದಾಟ ಆರಂಭಿಸಿದ ಆಂಧ್ರ ಪ್ರದೇಶದ ತಂಡವು ಅಂತಿಮವಾಗಿ 228 ರನ್‍ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಆಂಧ್ರ ಪ್ರದೇಶ ನೀಡಿದ್ದ 242 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡವು ಆರಂಭಿಕ ಬ್ಯಾಟ್ಸ್‌ಮನ್‌ ಶಿವಕುಮಾರ್.ಯು.ಬಿ 111 ರನ್ ಹಾಗೂ ಎನ್.ಜಯೇಶ್ ಅಜೇಯ 57 ರನ್‍ಗಳ ಕಾಣಿಕೆ ನೀಡಿದರು. ಈ ಮೂಲಕ ಕರ್ನಾಟಕವು 60.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 247 ರನ್‍ಗಳಿಸಿ ಜಯ ಗಳಿಸಿ 6 ಅಂಕ ಸಂಪಾದಿಸಿದೆ.

    ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿವಕುಮಾರ್.ಯು.ಬಿ ಹಾಗೂ ಅಂಕಿತ್ ಉಡಪಾ ಮೊದಲ ವಿಕೆಟ್‍ಗೆ 81 ರನ್‍ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಎರಡನೇ ವಿಕೆಟ್‍ಗೆ ಶಿವಕುಮಾರ್ ಜೊತೆಯಾದ ಎನ್.ಜಯೇಶ್ ರಕ್ಷಾಣ್ಮಾತಕ ಆಟಕ್ಕೆ ಮೊರೆಹೋಗಿ ಒಂಟಿ ರನ್‍ಗಳನ್ನು ಕದಿಯುತ್ತಾ ಶಿವಕುಮಾರ್ ಅವರಿಗೆ ಸಾಥ್ ನೀಡಿದರು.

    ಶಿವಕುಮಾರ್ 49 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ನಂತರ 134 ಎಸೆತಗಳಲ್ಲಿ ಶತಕ ದಾಖಲಿಸಿದರು. ಬಳಿಕ ಬಿರುಸಿನ ಬ್ಯಾಟಿಂಗ್ ಆರಂಭಿಸಿದ ಅವರು 146 ಎಸೆತಗಳಲ್ಲಿ 111 ರನ್ (15 ಬೌಂಡರಿ) ಗಳಿಸಿ ಕೆ.ಮಹೀಪ್ ಕುಮಾರ್ ಅವರಿಗೆ ವಿಕೆಟ್ ಒಪ್ಪಿಸಿ, ಪೆವಿಲಿಯನ್ ಸೇರಿದರು. ಶಿವಕುಮಾರ್ ಹಾಗೂ ಎನ್.ಜಯೇಶ್ ಜೋಡಿಯು ಎರಡನೇ ವಿಕೆಟ್‍ಗೆ 30 ಓವರ್‍ಗಳಲ್ಲಿ 102 ರನ್‍ಗಳ ಜೊತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ಆಂಧ್ರ ಪ್ರದೇಶದ ಬಾಲರ್‍ಗಳು ಪರದಾಡಿದರು.

    ಗೆಲುವಿಗೆ 46 ರನ್‍ಗಳ ಅಗತ್ಯವಿದ್ದಾಗ ಮೈದಾಕ್ಕಿಳಿದ ಕರ್ನಾಟಕ ತಂಡದ ಉಪನಾಯಕ ಸುಜಯ ಸಾತೇರಿ ಬಿರುಸಿನ ಬ್ಯಾಂಟಿಂಗ್ ನಡೆಸಿದರು. 23 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 39 ರನ್ ಗಳಿಸಿದ ಎನ್. ಜಯೇಶ್ ಜೊತೆಗೆ 4ನೇ ವಿಕೆಟ್‍ಗೆ 51 ರನ್‍ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಆಂಧ್ರ ಪ್ರದೇಶದ ಬೌಲರ್ ಎ.ಪ್ರಣಯ್‍ಕುಮಾರ್ ಎರಡು ವಿಕೆಟ್ ಪಡೆದುಕೊಂಡರು.

    ಸ್ಕೋರ್ ವಿವರ:
    ಆಂಧ್ರ ಪ್ರದೇಶ 281 ರನ್ (ಮೊದಲ ಇನ್ನಿಂಗ್ಸ್), 228 (ಎರಡನೇ ಇನ್ನಿಂಗ್ಸ್)
    ಕರ್ನಾಟಕ 268 ರನ್ (ಮೊದಲ ಇನ್ನಿಂಗ್ಸ್), 247 (ಎರಡನೇ ಇನ್ನಿಂಗ್ಸ್)
    ಶಿವಕುಮಾರ್ ಯು.ಬಿ 111 ರನ್
    ಎನ್.ಜಯೇಶ್ ಅಜೇಯ 57 ರನ್
    ಸುಜಯ ಸಾತೇರಿ ಅಜೇಯ 39 ರನ್
    (ಎ.ಪ್ರಣಯ ಕುಮಾರ್ 30  ಓವರ್‌ಗೆ 2 ವಿಕೆಟ್ ಹಾಗೂ ಕೆ.ಮಹೀಪ್ ಕುಮಾರ್ 16 ಓವರ್‌ಗೆ 1 ವಿಕೆಟ್)