Tag: ಆಂಧ್ರ ಪ್ರದೇಶ

  • ಹಾಡಹಗಲೇ ಮಹಿಳೆಯ ಮೇಲೆ ಹಲ್ಲೆ ಮಾಡಿ, ಬಟ್ಟೆ ಹರಿದ 7 ಜನರ ಬಂಧನ

    ಹಾಡಹಗಲೇ ಮಹಿಳೆಯ ಮೇಲೆ ಹಲ್ಲೆ ಮಾಡಿ, ಬಟ್ಟೆ ಹರಿದ 7 ಜನರ ಬಂಧನ

    ಹೈದರಾಬಾದ್: ಹಾಡಹಗಲೇ ನಡು ರಸ್ತೆಯಲ್ಲಿ 8 ಜನರು ಮಹಿಳೆ ಮೇಲೆ ಹಲ್ಲೆ ಮಾಡಿ ಆಕೆಯ ಬಟ್ಟೆಯನ್ನು ಹರಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಜೆರ್ರಿಪೋಥಾಪಾಲೆಮ್ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಮಂಗಳವಾರ ಪೆಂಡುರ್ತಿ ಮಂಡಲ್ ನಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳಲ್ಲಿ 7 ಜನರನ್ನು ಆಂಧ್ರ ಪೋಲಿಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?: ಸುಮಾರು ವರ್ಷಗಳ ಹಿಂದೆ ರಾಜ್ಯ ಸರ್ಕಾರದ ಎನ್.ಟಿ.ಆರ್ ಹೌಸಿಂಗ್ ಯೋಜನೆ ಅಡಿಯಲ್ಲಿ ಭೂಮಿಯನ್ನು ದಲಿತರಿಗೆ ಹಂಚಲಾಗಿತ್ತು. ಆದ್ದರಿಂದ ಅಲ್ಲಿ ದಲಿತರ ಕುಟುಂಬಗಳು ವಾಸಿಸುತ್ತಿದ್ದವು. ಆದರೆ ಮಂಗಳವಾರ ಈ ಭೂಮಿಯಲ್ಲಿ ಮನೆ ನಿರ್ಮಿಸಲು ಅಡಿಪಾಯ ಹಾಕಲು ತೆಲುಗು ದೇಶಂ ಪಕ್ಷಕದ ಕಾರ್ಯಕರ್ತರು ಜೆಸಿಬಿ ತಂದು ಅಲ್ಲಿ ಬೆಳೆದಿದ್ದ ಬೆಳೆಗಳನ್ನು ನಾಶ ಮಾಡಲು ಮುಂದಾಗಿದ್ದಾರೆ.

    ಈ ಸಂದರ್ಭದಲ್ಲಿ ಸಂತ್ರಸ್ತೆ ದುರ್ಗಮ್ಮ ಮತ್ತು ಆಕೆಯ ತಾಯಿ ಅಂಕಾಮ್ಮ ಅದನ್ನು ಆಕ್ಷೇಪಿಸಿದ್ದಾರೆ. ಆದರೆ ಈ ವೇಳೆ ಇಬ್ಬರ ನಡುವೆ ಜಗಳ ಉಂಟಾಗಿದೆ. ಆದರೂ ಅಗೆಯುವುದನ್ನು ಆರಂಭಿಸಿದ್ದಾರೆ. ಆಕೆ ಮತ್ತೆ ಅದನ್ನು ತಡೆಗಟ್ಟಲು ಯತ್ನಿಸಿದಾಗ ಕಾರ್ಯಕರ್ತರು ಆಕೆಯನ್ನು ಎಳೆದಾಡಿ ಬಟ್ಟೆಯನ್ನ ಹರಿದು ದೌರ್ಜನ್ಯ ಮಾಡಿದ್ದಾರೆ.

    ಸಂತ್ರಸ್ತೆ ಮತ್ತು ತಾಯಿ ಕಾರ್ಯಕರ್ತರಾದ ಮದಕ ಅಪ್ಪಾಲು ರಾಜು, ವಿ.ಶ್ರೀನು, ಸಲಾಪು ಜೋಗ ರಾವ್, ರಾಪರ್ತಿ ಗಂಗಾರಾಜ್, ಮದಕಾ ಪಾರ್ವತಿ, ಎಸ್. ಗಂಗಮ್ಮ ಮತ್ತು ಎಂ. ರಾಮ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ.

    ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 447, 354, 323 ಹಾಗೂ ಎಸ್‍ಸಿ ಎಸ್‍ಟಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಆಂಧ್ರ ಪ್ರದೇಶದ ಎಸ್‍ಸಿ.ಎಸ್‍ಟಿ ಆಯೋಗದ ಮುಖ್ಯಸ್ಥ ಕೆ. ಶಿವಾಜಿ ಈ ಪ್ರಕರಣದ ಬಗ್ಗೆ ತನಿಖೆ ಮಾಡುವಂತೆ  ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಗೆ  ಆದೇಶಿಸಿದ್ದಾರೆ.

    ಇದೊಂದು ಭೂಮಿಯ ವಿವಾದವಾಗಿ ನಡೆದ ಗಲಾಟೆ ಆಗಿದೆ, ಜಾತಿ ಆಧಾರಿತವಲ್ಲ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು.

  • ರಾಜಮೌಳಿಯ ಅಮರಾವತಿ ವಿನ್ಯಾಸ ತಿರಸ್ಕರಿಸಿದ ಚಂದ್ರಬಾಬು ನಾಯ್ಡು

    ರಾಜಮೌಳಿಯ ಅಮರಾವತಿ ವಿನ್ಯಾಸ ತಿರಸ್ಕರಿಸಿದ ಚಂದ್ರಬಾಬು ನಾಯ್ಡು

    ಹೈದರಾಬಾದ್ : ಆಂಧ್ರ ಪ್ರದೇಶ ಪ್ರತ್ಯೇಕ ರಾಜ್ಯ ರಚನೆ ನಡೆದು ಹೊಸದಾಗಿ ನಿರ್ಮಿಸಲಾಗುತ್ತಿರುವ ರಾಜಧಾನಿ ಅಮರಾವತಿಯಲ್ಲಿ ಸರ್ಕಾರದ ಕಟ್ಟಡಗಳು ನಿರ್ಮಾಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ದೇಶಕ ರಾಜಮೌಳಿ ಅವರ ವಿನ್ಯಾಸವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರಸ್ಕರಿಸಿದ್ದಾರೆ.

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಬಾಹುಬಲಿ ಸಿನಿಮಾದಲ್ಲಿನ ಮಾಹಿಷ್ಮತಿ ಸಾಮ್ರಾಜ್ಯ ಕಲ್ಪನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಇದನ್ನು ಸ್ವತಃ ಇಷ್ಟ ಪಟ್ಟು ಮೆಚ್ಚುಗೆ ಸೂಚಿಸಿದ್ದ ಸಿಎಂ ಚಂದ್ರಬಾಬು ನಾಯ್ಡು, ಅಮರಾವತಿ ರಾಜಧಾನಿ ನಿರ್ಮಾಣಕ್ಕೆ ವಿನ್ಯಾಸ ರೂಪಿಸಲು ರಾಜಮೌಳಿ ಅವರನ್ನು ಕೇಳಿಕೊಂಡಿದ್ದರು.

    ಇದರಂತೆ ರಾಜಮೌಳಿ ಅವರು ತೆಲುಗು ಸಂಸ್ಕøತಿಗೆ ಅನುಗುಣವಾಗಿ ನೂತನ ರಾಜಧಾನಿ ನಿರ್ಮಾಣದ ವಿನ್ಯಾಸವನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ನಿರ್ದೇಶಕರ ವಿನ್ಯಾಸಗಳು ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಇಷ್ಟವಾಗಿಲ್ಲ ಎನ್ನಲಾಗಿದೆ. ಈ ಕುರಿತು ಸ್ವತಃ ರಾಜಮೌಳಿ ಅವರು ಟ್ವೀಟ್ ಮಾಡಿ ತಮ್ಮ ವಿನ್ಯಾಸದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ರಾಜಧಾನಿಯ ಕಟ್ಟಡ ವಿನ್ಯಾಸ ರೂಪಿಸಲು ಅವಕಾಶ ನೀಡಿದ ಆಂಧ್ರ ಪ್ರದೇಶ ಸರ್ಕಾರಕ್ಕೆ ತಮ್ಮ ಧನ್ಯವಾದ ಸೂಚಿಸಿದ್ದು, ಬ್ರಿಟನ್ ವಿನ್ಯಾಸಕಾರರು ನೀಡಿದ್ದ ವಿನ್ಯಾಸಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.

    ರಾಜಮೌಳಿ ಅವರು ಸಿದ್ಧಪಡಿಸಿರುವ ವಿನ್ಯಾಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜಮೌಳಿ ಟ್ವೀಟ್ ಮಾಡಿರುವ ವಿಡಿಯೋದಲ್ಲಿನ ಕಟ್ಟಡ ವಿನ್ಯಾಸ ಪ್ರಾಚೀನ ಭಾರತದ ಖಗೋಳಶಾಸ್ತ್ರ ಮತ್ತು ವಾಸ್ತು ಶಾಸ್ತ್ರ ತಂತ್ರಜ್ಞಾನವನ್ನು ಆಧಾರಿಸಿ ಆಧುನಿಕತೆಯೊಂದಿಗೆ ಸಿದ್ಧಪಡಿಸಲಾಗಿದೆ. ಪ್ರತಿವರ್ಷ ನಿರ್ದಿಷ್ಟ ಸಮಯದಲ್ಲಿ ಸೂರ್ಯನ ಕಿರಣಗಳು ದೇವಾಲಯದ ವಿಗ್ರಹವನ್ನು ಪ್ರವೇಶಿಸುವಂತೆ ಈ ಕಟ್ಟಡ ವಿನ್ಯಾಸವನ್ನು ಸಿದ್ಧಪಡಿಸಲಾಗಿದೆ. ರಾಜ್ಯ ಸಭೆಯ ಕಟ್ಟಡದ ಮಧ್ಯಭಾಗದಲ್ಲಿ ಸ್ಥಾಪನೆ ಮಾಡಲಾಗುವ ತೆಲುಗು ಮಾತೆಯ ವಿಗ್ರಹದ ಮೇಲೆ ಸೂರ್ಯನ ಬೆಳಕು ಬಿಳುವಂತೆ ವಿನ್ಯಾಸ ಮಾಡಲಾಗಿದೆ.

    ರಾಜಮೌಳಿ ಅವರ ವಿನ್ಯಾಸವನ್ನು ಸರ್ಕಾರ ತಿರಸ್ಕರಿಸಿಲ್ಲ. ರಾಜಧಾನಿಯಲ್ಲಿ ಮಾಧ್ಯಮ ನಗರವೊಂದು ನಿರ್ಮಾಣವಾಗಲಿದೆ. ಈ ಮಾಧ್ಯಮ ನಗರ ನಿರ್ಮಾಣಕ್ಕೆ ರಾಜಮೌಳಿ ಅವರ ವಿನ್ಯಾಸವನ್ನು ಬಳಸಲಾಗುವುದು ಎಂದು ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದಾರೆ.

    ಸರ್ಕಾರ ತನ್ನ  APCRDA ವೆಬ್‍ಸೈಟ್ ನಲ್ಲಿ ಎರಡು ವಿನ್ಯಾಸದ ಮಾದರಿ ವಿಡಿಯೋವನ್ನು ಅಪ್ಲೋಡ್ ಮಾಡಿ ಅಭಿಪ್ರಾಯವನ್ನು ಸಂಗ್ರಹಿಸಲು ಆರಂಭಿಸಿದೆ. ಅಂತಿಮವಾಗಿ ಅತಿ ಹೆಚ್ಚು ಜನರ ಮೆಚ್ಚುಗೆಗೆ ಪಾತ್ರವಾದ ವಿನ್ಯಾಸವನ್ನು ಆಯ್ಕೆ ಮಾಡಲಾಗುತ್ತದೆ.

    ರಾಜಮೌಳಿ ಕಲ್ಪನೆಯ ವಿಡಿಯೋ ನೋಡಿ….

    https://www.youtube.com/watch?time_continue=6&v=4F3fS075fsk

    ಸರ್ಕಾರ ವೆಬ್‍ಸೈಟ್ ನಲ್ಲಿನ ಎರಡು ವಿನ್ಯಾಸದ ಮಾದರಿ :

    https://www.youtube.com/watch?v=Ozmk8lCRsk0

    https://www.youtube.com/watch?v=CkW9G1LBSlg

  • ಸಂಪೂರ್ಣ ಮದ್ಯ ನಿಷೇಧ ಸಾಧ್ಯವೇ ಅಥವಾ ಇಲ್ಲವೇ ಎಂಬುವುದರ ಚರ್ಚೆಯ ಸಂಪೂರ್ಣ ಮಾಹಿತಿ

    ಸಂಪೂರ್ಣ ಮದ್ಯ ನಿಷೇಧ ಸಾಧ್ಯವೇ ಅಥವಾ ಇಲ್ಲವೇ ಎಂಬುವುದರ ಚರ್ಚೆಯ ಸಂಪೂರ್ಣ ಮಾಹಿತಿ

    ಬೆಳಗಾವಿ: ಸಂಪೂರ್ಣ ಮದ್ಯ ನಿಷೇಧ ಕುರಿತು ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಆರಂಭವಾದ ಚರ್ಚೆಯಿಂದ ಕಲಾಪದಲ್ಲಿ ಬೇರಾವುದೇ ಪ್ರಮುಖ ವಿಚಾರ ಚರ್ಚೆಯಾಗದೆ ಕಲಾಪ ಅಂತ್ಯಗೊಂಡಿತು. ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಅಂತ 3 ದಿನಗಳ ಹಿಂದೆ ಪಬ್ಲಿಕ್‍ ಟಿವಿ ಪ್ರಸಾರ ಮಾಡಿದ್ದ ವರದಿ ಮಂಗಳವಾರ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.

    ಮಂಗಳವಾರ ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮದ್ಯ ನಿಷೇಧದ ವಿಷಯ ಪ್ರಸ್ತಾಪಿಸಿದರು. ಶೆಟ್ಟರ್ ಅವರಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸಂಪೂರ್ಣ ಮದ್ಯ ನಿಷೇಧ ಸಾಧ್ಯವೇ ಇಲ್ಲ’. ‘ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಂಪೂರ್ಣ ಮದ್ಯ ನಿಷೇಧ ಇನ್ನೂ ಸಾಧ್ಯವಾಗಿಲ್ಲ. ಈ ಕುರಿತು ಕೇಂದ್ರ ಸರ್ಕಾರ ನ್ಯಾಷನಲ್ ಪಾಲಿಸಿ ಆಗಬೇಕು. ಇಡೀ ದೇಶದಲ್ಲಿ ಮದ್ಯ ನಿಷೇಧ ಮಾಡಲು ನಿಮ್ಮ ಪ್ರಧಾನಿ ಮೋದಿ ಅವರಿಗೆ ಹೇಳಿ, ಆವಾಗ ನಾವೂ ಸಪೋರ್ಟ್ ಮಾಡುತ್ತೇವೆ’ ಅಂದರು. ಅಲ್ಲದೇ ನಿಮ್ಮ ಸರ್ಕಾರ ಇದ್ದಾಗ ಏಕೆ ಮಾಡಲಿಲ್ಲ. ಮದ್ಯ ನಿಷೇಧಕ್ಕೆ ಒತ್ತಾಯಿಸುತ್ತಿರುವ ನಿಮಗೆ ಸಂಸ್ಕೃತಿ -ಸಂಸ್ಕಾರ ಇದೆಯಾ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

    ಸಿಎಂ ಅವರ ಹೇಳಿಕೆಗೆ ಕೋಪಗೊಂಡ ಬಿಜೆಪಿ ನಾಯಕರು ಸದನದ ಬಾವಿಗಿಳಿದು ಧರಣಿ ನಡೆಸಿ, ಅಸಂವಿಧಾನಿಕ ಪದಗಳನ್ನು ಕಡತದಿಂದ ತೆಗೆಯುವಂತೆ ಆಗ್ರಹಿಸಿದರು. ಇದಕ್ಕೆ ಸ್ಪೀಕರ್ ಒಪ್ಪದಿದ್ದಾಗ ಕಲಾಪದಲ್ಲಿ ಕೋಲಾಹಲ ಉಂಟಾಗಿ ಸದನವನ್ನು ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗ ರೂಲಿಂಗ್ ಪರಿಶೀಲಿಸುವುದಾಗಿ ಸ್ಪೀಕರ್ ಭರವಸೆ ನೀಡಿದ್ದರಿಂದ, ಬಿಜೆಪಿ ಸದಸ್ಯರು ಧರಣಿ ವಾಪಸ್ ಪಡೆದರು.

    ಈ ಹಿಂದೆ ಸುಪ್ರೀಂಕೋರ್ಟ್ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ನೀಡಿದಾಗ ಕರ್ನಾಟಕ ಸೇರಿದಂತೆ ರಾಜ್ಯಗಳು ಹೆದ್ದಾರಿಗಳನ್ನೇ ಡಿನೋಟಿಫೈಗೇ ಮುಂದಾಗಿದ್ದವು. ಅಲ್ಲದೇ ಸುಪ್ರೀಂ ಆದೇಶದಿಂದ ಬೊಕ್ಕಸಕ್ಕೆ ನಷ್ಟ ಆಗುತ್ತೆ ಎಂದು ಹೇಳಿದ್ದವು.

    ಇನ್ನು ನಮ್ಮ ರಾಜ್ಯ ಸರ್ಕಾರದ ಮದ್ಯ ಮಾರಾಟದಿಂದ ಲಭ್ಯವಾಗುವ ಆದಾಯ ಸುಮಾರು 11,000 ಕೋಟಿ ರೂ. ಇದ್ದು, ಈ ವರ್ಷದ ಆದಾಯವನ್ನು 18,000 ಕೋಟಿ ರೂ. ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

    ರಾಜ್ಯದಲ್ಲಿ ಸಂಪೂರ್ಣ ಸಾರಾಯಿ ನಿಷೇಧ ಅಸಾಧ್ಯ ಅಂತ ಸಿಎಂ ಹೇಳಿದ್ದಾರೆ. ಹಾಗಾದ್ರೆ ದೇಶದ ಎಲ್ಲೆಲ್ಲಿ ಸಾರಾಯಿ ನಿಷೇಧ ಮಾಡಲಾಗಿದೆ. ನಿಷೇಧದ ಕಸರತ್ತು ನಡೆದಿದೆ ಅನ್ನೋದರ ಡೀಟೇಲ್ಸ್ ಇಲ್ಲಿದೆ.

    – ಗುಜರಾತ್ ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಲಾಗಿದ್ದು, ಮದ್ಯ ಮಾರಾಟ ಮಾಡಿದರೆ ಮರಣ ದಂಡನೆ ಶಿಕ್ಷೆ ನೀಡಬಹುದಾಗಿದೆ. ಅಲ್ಲದೇ ಮದ್ಯವನ್ನು ಮನೆಯಲ್ಲೂ ತಯಾರಿ ಮಾಡುವವರು ಶಿಕ್ಷೆಗೆ ಗುರಿ ಆಗಬೇಕಾಗುತ್ತದೆ.

    – ಬಿಹಾರ 2016ರಲ್ಲಿ ಮದ್ಯ ಮಾರಾಟ ನಿಷಿದ್ಧ ಕಾನೂನು ಜಾರಿ. ಮದ್ಯ ಮಾರಿದರೆ ಜಾಮೀನು ರಹಿತ ವಾರೆಂಟ್. ಕಾನೂನು ಬಾಹಿರ ಮದ್ಯ ಕೇಸಿನ ವಿಚಾರಣೆಗೆ ವಿಶೇಷ ಕೋರ್ಟ್ ರಚನೆ ಮಾಡಲಾಗಿದೆ.

    – ಲಕ್ಷದ್ವೀಪ ಮದ್ಯಕ್ಕೆ ಅಲ್ಪ ನಿರ್ಬಂಧ – ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಸಂಪೂರ್ಣ ನಿಷೇಧವಿಲ್ಲ. ಆದರೆ ದ್ವೀಪಪ್ರದೇಶ ಬಂಗಾರಂನಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

    – ಕೇರಳ ಮದ್ಯ ನಿಷೇಧಿಸಿ ಆದೇಶ ವಾಪಸ್? 2014ರಲ್ಲಿ ಕೇರಳ ಸರ್ಕಾರದಿಂದ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಜಾರಿ ಮಾಡಲಾಗಿತ್ತು. ಆದರೆ 2017ರಲ್ಲಿ ಸಂಪೂರ್ಣ ನಿಷೇಧ ಆದೇಶ ತೆರವು ಮಾಡಿ ಹೋಟೆಲ್, ಬಾರ್, ಏರ್ ಪೋರ್ಟ್ ನಲ್ಲಿ ಮಾರಾಟ ವ್ಯವಸ್ಥೆ ಆರಂಭ ಮಾಡಲಾಗಿದೆ.

    – ಕೇರಳ ರಾಜ್ಯದಂತೆ ಆಂಧ್ರಪ್ರದೇಶ ರಾಜ್ಯದಲ್ಲಿಯೂ ಮದ್ಯ ನಿಷೇಧ ಜಾರಿ ಮಾಡಿ ಆದೇಶವನ್ನು ಹಿಂಪಡೆಯಲಾಯಿತು. 1994ರಲ್ಲಿ ಎನ್.ಟಿ. ರಾಮರಾವ್ ನೇತೃತ್ವದ ಸರ್ಕಾರ ಮದ್ಯ ನಿಷೇಧ ಮಾಡಿದರೆ. 1997ರಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಆದೇಶವನ್ನು ಹಿಂಪಡೆಯಿತು.

  • ವಿಡಿಯೋ: ನೋಡ ನೋಡುತ್ತಿದ್ದಂತೆ ಕುಸಿದ 3 ಅಂತಸ್ತಿನ ಕಟ್ಟಡ

    ವಿಡಿಯೋ: ನೋಡ ನೋಡುತ್ತಿದ್ದಂತೆ ಕುಸಿದ 3 ಅಂತಸ್ತಿನ ಕಟ್ಟಡ

    ಗುಂಟೂರು: ನೋಡ ನೋಡುತ್ತಿದ್ದಂತೆ 3 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, ಜನರು ಬೆಚ್ಚಿ ಬಿದ್ದಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    ಈ ಕಟ್ಟಡ ನಂದಿವೇಲುಗು ರಸ್ತೆಯ ಮಣಿ ಹೋಟೆಲ್ ಸೆಂಟರ್ ನ ಸಮೀಪದಲ್ಲಿದೆ. ಈ ಕಟ್ಟಡ ನರಸಿಂಹ ರಾವ್ ಎಂಬವರ ಒಡೆತನದಲ್ಲಿದ್ದು, ಇದನ್ನು ನಿರ್ಮಿಸಿ ಸುಮಾರು 12 ವರ್ಷಗಳಾಗಿದೆ. ಗುಂಟೂರು ಮುನ್ಸಿಪಲ್ ಕಾರ್ಪೋರೇಷನ್ (ಜಿಎಂಸಿ) ಕಟ್ಟಡ ಸಮೀಪದಲ್ಲಿ ರಸ್ತೆಯನ್ನು ಅಗಲೀಕರಣದ ಕಾಮಗಾರಿಯನ್ನು ಒಂದು ತಿಂಗಳ ಹಿಂದೆಯೇ ಕೈಗೊಳ್ಳಲಾಗಿತ್ತು. ಅಷ್ಟೇ ಅಲ್ಲದೇ ಆ ಕಟ್ಟಡವನ್ನು ಉರುಳಿಸುವಂತೆ ಮಾಲೀಕರಿಗೂ ನೋಟಿಸ್ ಕಳುಹಿಲಾಗಿತ್ತು ಎಂದು ತಿಳಿದು ಬಂದಿದೆ.

    ವಿಡಿಯೋದಲ್ಲಿ ಪಿಂಕ್ ಮತ್ತು ಗ್ರೀನ್ ಪೇಂಟ್ ಇರುವ ಕಟ್ಟಡ ಶನಿವಾರ ಸುಮಾರು 4.30 ಗಂಟೆಗೆ ಒಂದೇ ಸೆಕೆಂಡಿನಲ್ಲಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸಮೀಪದಲ್ಲಿದ್ದ ಕೆಲವು ಸ್ಥಳೀಯರು ಅಸಹಾಯಕರಾಗಿ ನಿಂತು ನೋಡುತ್ತಿದ್ದಾರೆ. ಅದೃಷ್ಟವಶಾತ್ ಕಟ್ಟಡದಲ್ಲಿ ಇದ್ದ ಎಲ್ಲ ಜನರನ್ನು ಕೆಲವು ದಿನಗಳ ಹಿಂದೆಯಷ್ಟೇ ಬೇರೆಡೆ ಸ್ಥಳಾಂತರಿಸಲಾಗಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ.

    ಕಟ್ಟಡದ ಕುಸಿತಕ್ಕೆ ಸ್ಥಳೀಯರು ಜಿಎಂಸಿ ನೇಮಿಸಿದ್ದ ಗುತ್ತಿಗೆದಾರರನ್ನು ಆರೋಪಿಸುತ್ತಿದ್ದಾರೆ. ಇನ್ನೂ ಘಟನೆ ನಡೆದ ಸ್ಥಳಕ್ಕೆ ಎಂಜಿಯರಿಂಗ್ ತಂಡವು ಭೇಟಿ ನೀಡಿ ಪರೀಶೀಲನೆ ಮಾಡಿದ್ದು, ಕಟ್ಟಡದ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಈ ಕಟ್ಟಡದ ಅಡಿಪಾಯ ಸುರಕ್ಷಿತವಾಗಿರಲಿಲ್ಲ ಆದ್ದರಿಂದ ಕುಸಿದಿದೆ ಎಂದು ಮುನ್ಸಿಪಲ್ ಕಮಿಷನರ್ ಸಿ. ಅನುರಾಧಾ ತಿಳಿಸಿದ್ದಾರೆ.

    ಈ ಕಟ್ಟಡ ಕುಸಿತ ಪ್ರಕರಣ ಒಂದು ಕ್ಷಣ ಇಡೀ ನಗರವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಕಟ್ಟಡ ಕುಸಿಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

     

  • ಬಾಹುಬಲಿ ಸಿನಿಮಾ ನೋಡುತ್ತಲೇ ಆಪರೇಷನ್ ಮಾಡಿಸಿಕೊಂಡ ಯುವತಿ

    ಬಾಹುಬಲಿ ಸಿನಿಮಾ ನೋಡುತ್ತಲೇ ಆಪರೇಷನ್ ಮಾಡಿಸಿಕೊಂಡ ಯುವತಿ

    ಹೈದರಾಬಾದ್: ಲ್ಯಾಪ್‍ಟಾಪ್‍ನಲ್ಲಿ ಬಾಹುಬಲಿ ಸಿನಿಮಾವನ್ನು ನೋಡುತ್ತಲೇ ಬ್ರೇನ್ ಆಪರೇಷನ್ ಮಾಡಿಸಿಕೊಂಡಿರುವ ಅಪರೂಪದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

    ಆಪರೇಷನ್‍ಗೆ ಒಳಗಾಗಿರುವ ಯುವತಿಯನ್ನು ವಿನಯಕುಮಾರಿ ಎಂದು ಗುರುತಿಸಲಾಗಿದೆ. ಈಕೆ ಇತ್ತೀಚಿಗೆ ಮೂರ್ಛೆ ರೋಗದಿಂದ ಬಳಲುತ್ತಿದ್ದಳು. ಎಂಆರ್‍ಐ ಸ್ಕ್ಯಾನ್ ಮಾಡಿಸಿದಾಗ ತಲೆಯಲ್ಲಿ ದುರ್ಮಾಂಸ ಬೆಳೆದಿರೋದು ಗೊತ್ತಾಗಿತ್ತು. ಇದರಿಂದ ಸರ್ಜರಿ ಮಾಡಲು ವೈದ್ಯರು ಸೂಚಿಸಿದ್ದರು. ಇದರಂತೆ ಇಂಟ್ರಾ ಆಪರೇಟಿಂಗ್ ನ್ಯಾವಿಗೇಷನ್ ವಿಧಾನದ ಮೂಲಕ ಆಪರೇಷನ್ ಕೈಗೊಂಡ ವೈದ್ಯರು ಯುವತಿಗೆ ಇಷ್ಟವಾದ ಬಾಹುಬಲಿ ಸಿನಿಮಾವನ್ನು ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೇ ಆಪರೇಷನ್ ವೇಳೆ ಯುವತಿ ವೈದ್ಯರ ಜೊತೆ ನಿರಂತರವಾಗಿ ಮಾತನಾಡುತ್ತಿದ್ದಳು ಎಂದು ತಿಳಿದು ಬಂದಿದೆ.

    ಒಟ್ಟಾರೆ ಐವರು ತಜ್ಞ ವೈದ್ಯರ ತಂಡ ಸುಮಾರು ಒಂದೂವರೆ ಗಂಟೆಗಳ ಕಾಲ ಸರ್ಜರಿಯನ್ನು ನಡೆಸಿ ದುರ್ಮಾಂಸವನ್ನು ತೆಗೆದುಹಾಕಿದ್ದಾರೆ. ಆಪರೇಷನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಯುವತಿ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  • ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ಮಗಳಿಗೆ ಮೆಡಿಕಲ್ ಸೀಟ್ ಕೊಡಿಸ್ತೀನೆಂದು ವಂಚನೆ

    ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ಮಗಳಿಗೆ ಮೆಡಿಕಲ್ ಸೀಟ್ ಕೊಡಿಸ್ತೀನೆಂದು ವಂಚನೆ

    ಹೈದರಾಬಾದ್: ಮೆಡಿಕಲ್ ಸೀಟ್ ಕೊಡಿಸ್ತೀನಿ ಅಂತಾ ಯಾರಾದ್ರು ನಿಮ್ಮನ್ನ ಕೇಳಿದ್ದಾರಾ? ಹಾಗಿದ್ರೆ ಹುಷಾರಾಗಿರಿ. ಮೆಡಿಕಲ್ ಸೇಟ್ ಕೊಡಿಸ್ತೀನಿ ಅಂತ ಹೇಳಿ, 40 ಲಕ್ಷ ರೂ. ಹಣ ಪಡೆದು ಪರಾರಿಯಾಗಿದ್ದ ಕಳ್ಳ ಈಗ ಪೊಲೀಸರು ಅಥಿತಿಯಾಗಿದ್ದಾನೆ.

    ಆರೋಪಿ ರೂಪೇಂದ್ರ ಕುಮಾರ್, ಆಂಧ್ರ ಪ್ರದೇಶದ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರ ಮಗಳಿಗೆ ಬೆಂಗಳೂರಿನಲ್ಲಿ ಸೀಟ್ ಕೊಡಿಸುವುದಾಗಿ ಹೇಳಿದ್ದಾನೆ. ನಂತರ ಸೀಟ್‍ಗಾಗಿ 40 ಲಕ್ಷ ರೂ. ಹಣವನ್ನು ಪಡೆದುಕೊಂಡು ಕರ್ನಾಟಕ ರಾಜ್ಯಪಾಲ ವಾಜುಭಾಯ್ ವಾಲಾ ಅವರ ನಕಲಿ ಶಿಫಾರಸು ಪತ್ರವನ್ನು ಅವರಿಗೆ ವಾಟ್ಸಾಪ್ ಮೂಲಕ ಕಳುಹಿದ್ದಾನೆ. ಹಣ ಕೈಗೆ ಬಂದ ತಕ್ಷಣ ಕುಮಾರ್ ಪರಾರಿಯಾಗಿದ್ದಾನೆ.

    ನಂತರ ಪ್ರಾಂಶುಪಾಲರು ಕುಮಾರ್ ವಿರುದ್ಧ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆಯೋಪಿಯನ್ನು ಹುಡುಕಿ ಬಂಧಿಸಿದ್ದಾರೆ. ಆರೋಪಿ ಬಳಿ ಇದ್ದ ರಾಜ್ಯಪಾಲರ ಹೆಸರಿನ ನಕಲಿ ವಿಸಿಟಿಂಗ್ ಕಾರ್ಡ್, ಹಾರ್ಡ್ ಡಿಸ್ಕ್, ಮೊಬೈಲ್ ಮತ್ತು ಕೆಲವು ಪೆನ್ ಡ್ರೈವ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.