Tag: ಆಂಧ್ರ ಪ್ರದೇಶ

  • ಟಿಟಿಡಿ ಅಧ್ಯಕ್ಷರಾಗಿ ಆಂಧ್ರ ಸಿಎಂ ಜಗನ್ ಚಿಕ್ಕಪ್ಪ ಆಯ್ಕೆ

    ಟಿಟಿಡಿ ಅಧ್ಯಕ್ಷರಾಗಿ ಆಂಧ್ರ ಸಿಎಂ ಜಗನ್ ಚಿಕ್ಕಪ್ಪ ಆಯ್ಕೆ

    ಅಮರಾವತಿ: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸರ್ಕಾರ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಮಂಡಳಿಯ ಅಧ್ಯಕ್ಷರನ್ನಾಗಿ ತಮ್ಮ ಚಿಕ್ಕಪ್ಪ ವೈಎಸ್‍ಆರ್ ಕಾಂಗ್ರೆಸ್ ಪಕ್ಷ (ವೈಎಸ್‍ಆರ್‍ಸಿಪಿ)ದ ಮುಖಂಡ ವೈ.ವಿ.ಸುಬ್ಬಾರೆಡ್ಡಿ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.

    ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯ ಅಧ್ಯಕ್ಷರನ್ನಾಗಿ ವೈ.ವಿ.ಸುಬ್ಬಾ ರೆಡ್ಡಿ ಅವರನ್ನು ನೇಮಕ ಮಾಡಿರುವ ಕುರಿತು ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ಮನ್ ಮೋಹನ್ ಸಿಂಗ್ ಆದೇಶ ಹೊರಡಿಸಿದ್ದಾರೆ.

    ಜಗನ್ ಚಿಕ್ಕಪ್ಪ ವೈ.ವಿ.ಸುಬ್ಬಾರೆಡ್ಡಿ ಅವರು ವೈಎಸ್‍ಆರ್‍ಸಿಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಇಂದು ಟಿಟಿಡಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಟಿಟಿಡಿ ಮಂಡಳಿಯ ಉಳಿದ ಸದಸ್ಯರನ್ನು ಶೀಘ್ರದಲ್ಲೇ ನೇಮಿಸಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.

    ತಿರುಮಲ ತಿರುಪತಿ ಒಂದು ದೇವಸ್ವ ಮಂಡಳಿಯಾಗಿದ್ದು, ತಿರುಪತಿ ವೆಂಕಟೇಶ್ವರ ದೇವಸ್ಥಾನದ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ಆಂಧ್ರ ಪ್ರದೇಶದಲ್ಲಿ ಟಿಟಿಡಿ ಅಧ್ಯಕ್ಷ ಸ್ಥಾನ ತುಂಬಾ ಪ್ರಭಾವಿಯಾಗಿದ್ದು, ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸುವ ಕ್ಯಾಬಿನೆಟ್ ಸಚಿವರು ಹಾಗೂ ಇತರ ಗಣ್ಯರು ಟಿಟಿಡಿ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿ ನಂತರ ದೇವರ ದರ್ಶನ ಪಡೆಯುವುದು ವಾಡಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

    ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದ ಪುಟ್ಟ ಸುಭಾಕರ್ ರೆಡ್ಡಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವೈ.ವಿ.ಸುಬ್ಬಾರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ನಾಲ್ಕು ದಿನಗಳಲ್ಲಿ ದೇವಸ್ಥಾನದ ಆಡಳಿತ ಮಂಡಳಿಯನ್ನು ಪುನರ್ ರಚನೆ ಮಾಡುವಂತೆ ವೈಎಸ್‍ಆರ್ ಸರ್ಕಾರ ಸೂಚಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಟಿಟಿಡಿ ಅಧ್ಯಕ್ಷರನ್ನಾಗಿ ಸುಬ್ಬಾರೆಡ್ಡಿ ಅವರನ್ನು ಆಯ್ಕೆ ಮಾಡಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮಮತಾ ಬ್ಯಾನರ್ಜಿ ಬಳಿಕ ಚಂದ್ರಬಾಬು ನಾಯ್ಡುಗೆ ಅಮಿತ್ ಶಾ’ಕ್’

    ಮಮತಾ ಬ್ಯಾನರ್ಜಿ ಬಳಿಕ ಚಂದ್ರಬಾಬು ನಾಯ್ಡುಗೆ ಅಮಿತ್ ಶಾ’ಕ್’

    -ಟಿಡಿಪಿ ರಾಜ್ಯಸಭಾ ಸದಸ್ಯರು ಬಿಜೆಪಿಗೆ ಜಂಪ್

    ನವದೆಹಲಿ: ಟಿಡಿಪಿ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ವಿದೇಶಿ ಪ್ರವಾಸದಲ್ಲಿರುವಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೇಜರ್ ಸರ್ಜರಿ ಮಾಡಿದ್ದು, ನಾಲ್ವರು ಟಿಡಿಪಿ ರಾಜ್ಯಸಭಾ ಸದಸ್ಯರನ್ನು ಕಮಲದ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಇತ್ತೀಚೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷದಿಂದ ಒರ್ವ ಶಾಸಕ ಸೇರಿ 14 ಜನ ಕಾರ್ಪೋರೇಟರ್‍ಗಳು ಬಿಜೆಪಿ ಸೇರುವ ಮೂಲಕ ಟಿಎಂಸಿಗೆ ಶಾಕ್ ನೀಡಿದ್ದರು. ಇದೀಗ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಮಾಜಿ ಕೇಂದ್ರ ಸಚಿವ ಹಾಗೂ ಸಂಸದೀಯ ನಾಯಕ ವೈ.ಎಸ್.ಚೌಧರಿ ಸೇರಿದಂತೆ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿದ್ದು, ಈ ಮೂಲಕ ಮೇಲ್ಮನೆಯಲ್ಲಿ ಟಿಡಿಪಿ ಬಲ ಕೇವಲ 2 ಸ್ಥಾನಕ್ಕೆ ಕುಸಿದಿದೆ.

    ಚೌಧರಿ ಅವರು ಬಿಜೆಪಿ ಸೇರುವ ಕುರಿತು ಖಚಿತಪಡಿಸಿದ್ದು, ಅವರೊಂದಿಗೆ ಇನ್ನೂ ಮೂವರು ಸದಸ್ಯರಾದ ಟಿ.ಜಿ.ವೆಂಕಟೇಶ್, ಜಿ.ಮೋಹನ್ ರಾವ್, ಸಿ.ಎಂ.ರಮೇಶ್ ಹಾಗೂ ವೆಂಕಟೇಶ್ ಸಹ ಬಿಜೆಪಿ ಸೇರುವ ಕುರಿತು ಖಚಿತಪಡಿಸಿದ್ದಾರೆ. ಚೌಧರಿ ಅವರು ಈ ಹಿಂದೆ ಎಬಿವಿಪಿ ಹಾಗೂ ಬಿಜೆಪಿ ಯುವ ಮೋರ್ಚಾದ ಸದಸ್ಯರಾಗಿದ್ದರು ಹೀಗಾಗಿ ಈ ನಡೆ ಸಹಜ ಎಂದು ಹೇಳಲಾಗುತ್ತಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ, ರಾಷ್ಟ್ರದ ಒಟ್ಟಾರೆ ಹಿತದೃಷ್ಟಿಯಿಂದ ಹಾಗೂ ಪ್ರಧಾನಿ ಮೋದಿ ಅವರು ಅನುಸರಿಸುತ್ತಿರುವ ಅಭಿವೃದ್ಧಿ ರಾಜಕಾರಣದಿಂದ ಪ್ರಭಾವಿತರಾಗಿ ತಕ್ಷಣದಿಂದಲೇ ಬಿಜೆಪಿ ಸೇರುತ್ತಿದ್ದೇವೆ ಎಂದು ಚೌಧರಿ ಅವರು ಸಹಿ ಮಾಡಿ ರಾಜ್ಯಸಭೆಗೆ ನೀಡಿರುವ ಟಿಡಿಪಿಯ ಶಾಸಕಾಂಗ ಪಕ್ಷದ ನಿರ್ಣಯವನ್ನು ಓದಿದ್ದಾರೆ.

    ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ವಿವಿಧ ಪಕ್ಷಗಳ ನಾಯಕರು ಬಿಜೆಪಿ ಸೇರಲು ಇಚ್ಛಿಸಿದ್ದು, ಅಂತಹ ನಾಯಕರನ್ನು ನಾವು ಸ್ವಾಗತಿಸುತ್ತೇವೆ. ಈ ಮೂಲಕ ಪಕ್ಷದ ಬಲವರ್ಧನೆಯಾದಂತಾಗುತ್ತದೆ ಎಂದು ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ತಿಳಿಸಿದ್ದಾರೆ.

    ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರು ವಿದೇಶದಲ್ಲಿದ್ದು, ಸಂಸದರು ಬಿಜೆಪಿ ಸೇರುತ್ತಿರುವ ಸುದ್ದಿಯನ್ನು ತಿಳಿದು ಚೌಧರಿ ಅವರೊಂದಿಗೆ ಈ ಕುರಿತು ಮಾತನಾಡಿದ್ದಾರೆ. ಪಕ್ಷದಿಂದ ಹೊರ ನಡೆಯದಂತೆ ಚಂದ್ರಬಾಬು ನಾಯ್ಡು ಮನವಿ ಮಾಡಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಪಕ್ಷ ಸೋಲುಂಡಿರುವುದೇ ನಾಯಕರು ಪಕ್ಷ ತೊರೆಯಲು ಕಾರಣ ಎಂದು ಹೇಳಲಾಗುತ್ತಿದೆ.

    ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ 126 ಸ್ಥಾನಗಳಿಂದ 23 ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಿದೆ. ಚಂದ್ರಬಾಬು ನಾಯ್ಡು ಅವರ ಮಗ ನಾರಾ ಲೋಕೇಶ್ ಸೇರಿದಂತೆ ವಿವಿಧ ಪ್ರಮುಖ ನಾಯಕರು ಸೋಲನುಭವಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 15 ಸ್ಥಾನಗಳಿಂದ ಕೇವಲ ಮೂರು ಸ್ಥಾನಕ್ಕೆ ಟಿಡಿಪಿ ಕುಸಿದಿದೆ.

    ಬಿಜೆಪಿ ನೂತನ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಂತರ ಮಾತನಾಡಿದ ಜೆಪಿ ನಡ್ಡಾ, ಟಿಡಿಪಿ ನಾಯಕರ ಪ್ರಸ್ತಾವವನ್ನು ಒಪ್ಪಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಅಂದಹಾಗೇ ವೈ.ಎಸ್. ಚೌಧರಿ ಅವರು 2014ರಲ್ಲಿ ಮೋದಿ ಸಂಪುಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2018ರಲ್ಲಿ ಚಂದ್ರಬಾಬು ನಾಯ್ಡು ಎನ್‍ಡಿಎ ಕೂಟ ತೊರೆದ ಬಳಿಕ ಚೌಧರಿ ರಾಜೀನಾಮೆ ಕೊಟ್ಟಿದ್ದರು. ಲೋಕಸಭೆ ಬಳಿಕ ರಾಜ್ಯಸಭೆಯಲ್ಲೂ ಸದಸ್ಯ ಬಲ ಹೆಚ್ಚಳ ಆಗುತ್ತಿರುವುದು ಮೋದಿ ಸರ್ಕಾರಕ್ಕೆ ವರವಾಗಲಿದೆ. ರಾಜ್ಯ ಸಭೆಯಲ್ಲಿ ಸಂಖ್ಯಾಬಲ ಹೆಚ್ಚಾಗುವುದರಿಂದ ಪ್ರಮುಖ ಮಸೂದೆಗಳನ್ನು ಜಾರಿಗೆ ಬೆಂಬಲ ಪಡೆಯಲು ಸಹಕಾರಿ ಆಗಲಿದೆ. ಹಾಗಾಗಿಯೇ ರಾಜ್ಯಸಭೆಯಲ್ಲಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವತ್ತ ಬಿಜೆಪಿ ಗಮನ ಹರಿಸಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸುಷ್ಮಾ ಸ್ವರಾಜ್ ಆಂಧ್ರ ಪ್ರದೇಶದ ಗವರ್ನರ್?

    ಸುಷ್ಮಾ ಸ್ವರಾಜ್ ಆಂಧ್ರ ಪ್ರದೇಶದ ಗವರ್ನರ್?

    ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸಚಿವ ಹರ್ಷ ವರ್ಧನ್ ಟ್ವೀಟ್ ಮೂಲಕ ಬಹಿರಂಗಪಡಿಸಿ ಶುಭಕೋರಿದ್ದರು. ಆದ್ರೆ ಕೆಲವೇ ಕ್ಷಣಗಳಲ್ಲಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.

    2014ರ ಮೋದಿ ಸರ್ಕಾರದಲ್ಲಿ ಸುಷ್ಮಾ ಸ್ವರಾಜ್ ಕೇಂದ್ರ ಸಚಿವೆಯಾಗಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಚುನಾವಣೆಯಿಂದ ದೂರ ಉಳಿದುಕೊಂಡಿದ್ದ ಸುಷ್ಮಾ ಸ್ವರಾಜ್ ಸಂಪುಟದಿಂದಲೂ ಹೊರ ಬಂದು ಸಂಪೂರ್ಣ ವಿಶ್ರಾಂತಿಯಲ್ಲಿದ್ದಾರೆ. ಇ.ಎಸ್.ಎಲ್.ನರಸಿಂಹನ್ ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದಾರೆ.

    ಕೇಂದ್ರದಲ್ಲಿ ಹೊಸ ಸರ್ಕಾರ ರಚನೆ ಮಾಡಿರುವ ಬಿಜೆಪಿ ರಾಜ್ಯಪಾಲರಗಳನ್ನು ಬದಲಾಯಿಸಲು ಮುಂದಾಗುತ್ತಿದೆ ಎಂಬ ಮಾತುಗಳು ದೆಹಲಿ ಅಂಗಳದಲ್ಲಿ ಹರಿದಾಡುತ್ತಿವೆ. ಕರ್ನಾಟಕದಲ್ಲಿ ವಜೂಬಾಯಿ ವಾಲಾರನ್ನು ಬದಲಿಸುವ ಬಿಜೆಪಿ ಪಡಸಾಲೆಯಲ್ಲಿ ಚರ್ಚೆಗಳು ನಡೆದಿವೆ.

  • ಪ್ರವಾಸಿ ಬಸ್-ಕ್ರೂಸರ್ ಮುಖಾಮುಖಿ ಡಿಕ್ಕಿ: 13 ಸಾವು

    ಪ್ರವಾಸಿ ಬಸ್-ಕ್ರೂಸರ್ ಮುಖಾಮುಖಿ ಡಿಕ್ಕಿ: 13 ಸಾವು

    ಹೈದರಾಬಾದ್: ಖಾಸಗಿ ಪ್ರವಾಸಿ ಬಸ್ ಹಾಗೂ ಕ್ರೂಸರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 13 ಜನ ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ಇಂದು ಸಂಜೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

    ಕರ್ನೂಲ್ ಜಿಲ್ಲೆಯ ವೆಲ್‍ದುರ್ತಿಯಲ್ಲಿ ಎಸ್‌ಆರ್‌ಎಸ್‌ ಟ್ರಾವೆಲ್ಸ್ ಬಸ್ ಹಾಗೂ ಕ್ರೂಸರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಚಾಲಕ ಸೇರಿದಂತೆ ಕ್ರೂಸರ್ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಕೆಲ ಪ್ರಯಾಣಿಕರು ವಾಹನಗಳನ್ನು ನಿಲ್ಲಿಸಿ ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮರೆದಿದ್ದಾರೆ. ಘಟನೆಯಿಂದಾಗಿ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ, ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

    ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎಂದು ಕರ್ನೂಲ್ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

  • ‘ಫನಿ’ ಚಂಡಮಾರುತ ಏಫೆಕ್ಟ್ – ದಕ್ಷಿಣ ಕರ್ನಾಟಕಕ್ಕಿಲ್ಲ ಆತಂಕ, ಉತ್ತರದಲ್ಲಿ ವಹಿಸಿ ಎಚ್ಚರ

    ‘ಫನಿ’ ಚಂಡಮಾರುತ ಏಫೆಕ್ಟ್ – ದಕ್ಷಿಣ ಕರ್ನಾಟಕಕ್ಕಿಲ್ಲ ಆತಂಕ, ಉತ್ತರದಲ್ಲಿ ವಹಿಸಿ ಎಚ್ಚರ

    ಬೆಂಗಳೂರು: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಈಗ ಫನಿ ಚಂಡಮಾರುತ ಪ್ರಭಾವ ಹೆಚ್ಚಾಗಿದ್ದು, ಪುದುಚೇರಿ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ತೀರ ಪ್ರದೇಶಗಳಲ್ಲಿ ಭಾರೀ ಮಳೆಯ ಆತಂಕ ಸೃಷ್ಟಿಸಿದೆ. ಹಿಂದೂ ಮಹಾಸಾಗರ-ಬಂಗಾಳಕೊಲ್ಲಿಯ ಸಮನಾಂತರ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಫನಿ ಚಂಡಮಾರುತ ಈಗ ಶ್ರೀಲಂಕಾದ ಟ್ರಿಂಕೋಮಲಿಯಿಂದ 550 ಕಿ.ಮೀ. ದೂರಕ್ಕೂ ಚೆನ್ನೈನ ಆಗ್ನೇಯ ದಿಕ್ಕಿನಿಂದ 820 ಕಿ.ಮೀ. ದೂರದಲ್ಲಿ ಬರುತ್ತಿದೆ.

    ಫನಿ ಚಂಡಮಾರುತ ಆರಂಭವಾದಾಗ ಅಂದರೆ ಏಪ್ರಿಲ್ 25ರ ಆಸುಪಾಸಿನಲ್ಲಿ ಶ್ರೀಲಂಕಾದ ಅರ್ಧ ಉತ್ತರಭಾಗವನ್ನು ಆಕ್ರಮಿಸಿ, ಅಲ್ಲಿಂದ ಪುದುಚೇರಿ, ತಮಿಳುನಾಡಿನ ದಕ್ಷಿಣಭಾಗ ಸೇರಿ ಚೆನ್ನೈ ಆಂಧ್ರ ಪ್ರದೇಶದ ಮಚಿಲಿಪಟ್ಟಣದ ಮಧ್ಯೆ ಭರ್ಜರಿಯಾಗಿ ಅಪ್ಪಳಿಸುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಇದರಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಭಾಗ, ಮಲೆನಾಡು, ಕರಾವಳಿಯಲ್ಲಿ ಭಾರೀ ಮಳೆಯಾಗುತ್ತೆ ಎಂದು ಅಂದಾಜಿಸಲಾಗಿತ್ತು. ಆದರೆ ಏಪ್ರಿಲ್ 27ರ ಮಧ್ಯಭಾಗದಿಂದ ಚಂಡಮಾರುತ ದಿಕ್ಕು ಬದಲಿಸುತ್ತಿದ್ದು, ತಿರುವು ಪಡೆದು ದಕ್ಷಿಣದ ಚೆನ್ನೈನಿಂದ ಉತ್ತರದ ಕಡೆ ಅಂದರೆ ಆಂಧ್ರ ಪ್ರದೇಶದ ಮಚಲಿಪಟ್ಟಣ, ಉತ್ತರ ಕರಾವಳಿ, ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕಡೆ ಮುನ್ನುಗ್ತಿದೆ.

    ಸದ್ಯದ ಮಾಹಿತಿ ಅನ್ವಯ ಆಂಧ್ರ-ಒಡಿಶಾದ ಮಧ್ಯ ಕರಾವಳಿ ಭಾಗದಲ್ಲಿ ಚಂಡಮಾರುತದ ಪ್ರಭಾವ ಬೀರುವ ಅವಕಾಶ ಹೆಚ್ಚಾಗಿದ್ದು, ಚಂಡಮಾರುತ ವೇಗ ಮತ್ತಷ್ಟು ಹೆಚ್ಚಾದರೆ ಖಂಡಿತಾ ಒಡಿಶಾದಲ್ಲಿ ಹೆಚ್ಚಿನ ಅವಘದ ಸಂಭವಿಸಲಿದೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿದಂತೆ ಎಚ್ಚರಿಕೆ ನೀಡಲಾಗಿದೆ. ಎನ್‍ಡಿಆರ್‍ಎಫ್, ಕೋಸ್ಟ್‍ಗಾರ್ಡ್‍ಗೆ ಹೈ ಅಲರ್ಟ್‍ನಲ್ಲಿರುವಂತೆ ಸೂಚಿಸಲಾಗಿದೆ. ಒಡಿಶಾದ 28 ಜಿಲ್ಲೆಗಳ ಡಿಸಿಗಳಿಗೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಆಂಧ್ರ-ಒಡಿಶಾದ ಕರಾವಳಿ ಜನರನ್ನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗುತ್ತಿದ್ದು, ಕೇಂದ್ರ ಗೃಹ ಸಚಿವಾಲಯ ಹೆಚ್ಚಿನ ನಿಗಾ ವಹಿಸಿದೆ.

    ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೆ ಕಡಿಮೆ ಪ್ರಮಾಣದಲ್ಲಿ ಆಗಲಿದ್ದು, ಇದಕ್ಕೆ ಪ್ರಮುಖ ಕಾರಣ ಗಾಳಿಯ ವೇಗ ಹೆಚ್ಚಾಗಿರುವುದರಿಂದ ಫನಿ ಚಂಡಮಾರುತ ತನ್ನ ದಿಕ್ಕು ಬದಲಿಸಿದೆ. ಚೆನ್ನೈ ಮೇಲೆ ಮೋಡಗಳು ಆವರಿಸಿದರೆ ಬೆಂಗಳೂರು, ಮೈಸೂರು ಭಾಗದಲ್ಲಿ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಕೇರಳದಲ್ಲೂ ಮಳೆ ಆಗುವ ಸಾಧ್ಯತೆ ಕಡಿಮೆ ಇದೆ. ಆದರೆ ಆಂಧ್ರದ ಉತ್ತರ ಭಾಗಕ್ಕೆ ಚಂಡಮಾರುತದ ಪ್ರಭಾವ ಶಿಫ್ಟ್ ಆಗುತ್ತಿರುವುವರಿಂದ ಉತ್ತರ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.

  • ಪ್ರಧಾನಿ ಮೋದಿ ಸೂಚನೆಯಂತೆ ಚುನಾವಣಾ ಆಯೋಗ ಕಾರ್ಯನಿರ್ವಹಣೆ: ಚಂದ್ರಬಾಬು ನಾಯ್ಡು

    ಪ್ರಧಾನಿ ಮೋದಿ ಸೂಚನೆಯಂತೆ ಚುನಾವಣಾ ಆಯೋಗ ಕಾರ್ಯನಿರ್ವಹಣೆ: ಚಂದ್ರಬಾಬು ನಾಯ್ಡು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಚುನಾವಣಾ ಆಯೋಗವು ಕಾರ್ಯನಿರ್ವಹಿಸುತ್ತಿದೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗಂಭೀರವಾಗಿ ಆರೋಪಿಸಿದ್ದಾರೆ.

    ದೆಹಲಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಅವರು, ಆಂಧ್ರ ಪ್ರದೇಶದಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣಾ ಮತದಾನದಲ್ಲಿ ಶೇ.30ರಿಂದ 40ರಷ್ಟು ಮತ ಯಂತ್ರಗಳು (ಇವಿಎಂ) ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಈ ಸಂಬಂಧ ಚುನಾವಣಾ ಆಯೋಗ ಸೂಕ್ತ ಪ್ರತಿಕ್ರಿಯೆ ನೀಡದಿದ್ದರೆ ಧರಣಿ ನಡೆಸುತ್ತೇವೆ ಎಂದು ಹೇಳಿದರು.

    ಇವಿಎಂ ಕಾರ್ಯನಿರ್ವಹಣೆಯಲ್ಲಿ ಲೋಪದೋಷ ಕಂಡುಬಂದಿದೆ. ಹೀಗಾಗಿ ಸುಮಾರು 150 ಮತ ಗಟ್ಟೆಗಳಲ್ಲಿ ಮರು ಮತದಾನ ನಡೆಸಬೇಕು ಎಂದು ಆಗ್ರಹಿಸಿದರು.

    ಚುನಾವಣಾ ಆಯೋಗ ವಿರುದ್ಧ ಗಂಭೀರ ಆರೋಪ ಮಾಡಿದ ಚಂದ್ರಬಾಬು ನಾಯ್ಡು ಅವರು, ಚುನಾವಣಾ ಆಯೋಗವು ನಮ್ಮೊಂದಿಗೆ ಸಹಕರಿಸುತ್ತಿಲ್ಲ. ಸ್ವಾಯತ್ತ ಸಂಸ್ಥೆಯಾಗಿರುವ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ತಿಳಿಸಿದಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.

    ಮತದಾರರಿಗೆ ಭಾರೀ ಪ್ರಮಾಣದಲ್ಲಿ ಮೋಸ ಮಾಡಲಾಗುತ್ತಿದೆ. ಗೊಂದಲ ಸೃಷ್ಟಿಸಲಾಗಿದೆ. ಅಧಿಕಾರಗಳ ಮೂಲದ ಪ್ರಕಾರ 4,583 ಇವಿಎಂ ಸಮಸ್ಯೆಯಾಗಿದ್ದು, ಇದು ದೇಶದ ದುರಂತ ಎಂದು ದೂರಿದರು.

  • ಸಿಮೆಂಟ್ ಬ್ಯಾಗ್‍ನಲ್ಲಿ ಸಿಕ್ತು 1.90 ಕೋಟಿ ರೂ.

    ಸಿಮೆಂಟ್ ಬ್ಯಾಗ್‍ನಲ್ಲಿ ಸಿಕ್ತು 1.90 ಕೋಟಿ ರೂ.

    – ಅಕ್ರಮ ಹಣ ಸಾಗಣೆ, ಚಾಲಕ ಅರೆಸ್ಟ್

    ಹೈದರಾಬಾದ್: ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ಕಾವು ರಂಗೇರುತ್ತಿದ್ದಂತೆ ಆಂಧ್ರಪ್ರದೇಶದಲ್ಲಿ ಕುರುಡು ಕಾಂಚಾಣ ಜೋರಾಗಿಯೇ ಕುಣಿಯುತ್ತಿದೆ ಎನ್ನುವ ಅನುಮಾನಗಳು ಹುಟ್ಟು ಹಾಕಿದೆ. ಇದಕ್ಕೆ ಪೂರಕವೆಂಬಂತೆ ದಾಖಲೆ ಇಲ್ಲದೆ ಲಾರಿಯೊಂದರಲ್ಲಿ ಸಾಗಿಸುತ್ತಿದ್ದ 1.90 ಕೋಟಿ ರೂ. ಪತ್ತೆಯಾಗಿದೆ.

    ಕೃಷ್ಣಾ ಜಿಲ್ಲೆಯ ಚೆಕ್‍ಪೋಸ್ಟ್ ನಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ ಸಿಮೆಂಟ್ ಬ್ಯಾಗ್ ಸಾಗಿಸುತ್ತಿದ್ದ ಲಾರಿಯೊಂದರಲ್ಲಿ ಹಣ ಇರುವ ಶಂಕೆ ವ್ಯಕ್ತವಾಗಿತ್ತು. ತಕ್ಷಣವೇ ಪರಿಶೀಲನೆ ನಡೆಸಿದಾಗ ಸಿಮೆಂಟ್ ಬ್ಯಾಗ್‍ನಲ್ಲಿ 500 ಹಾಗೂ 2,000 ರೂ. ಮುಖ ಬೆಲೆಯ ನೋಟುಗಳು ಪತ್ತೆಯಾಗಿದ್ದು, ಅದರ ಒಟ್ಟು ಮೊತ್ತ 1.90 ಕೋಟಿ ರೂ. ಎಂದು ವರದಿಯಾಗಿದೆ.

    ಲಾರಿಯಲ್ಲಿ ಸಾಗಿಸುತ್ತಿದ್ದ ಹಣಕ್ಕೆ ಸೂಕ್ತ ದಾಖಲೆ ಸಿಕ್ಕಿಲ್ಲ. ಹೀಗಾಗಿ ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ತಿಳಿಸಿದ್ದಾರೆ.

    ಆಂಧ್ರಪ್ರದೇಶದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಒಂದೇ ಅವಧಿಯಲ್ಲಿ ನಡೆಯುತ್ತಿದೆ. ಅಕ್ರಮವಾಗಿ ಹಣ, ಮದ್ಯ, ಉಡುಗೊರೆ ಸಾಗಿಸದಂತೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಕ್ರಮಕೈಗೊಳ್ಳುತ್ತಿದ್ದಾರೆ. ಪ್ರಮುಖ ಚೆಕ್ ಪೋಸ್ಟ್ ಗಳಲ್ಲಿ ವಾಹನ ಪರಿಶೀಲನೆ ಮಾಡಲಾಗುತ್ತಿದೆ.

  • ಪ್ರಧಾನಿ ಹುದ್ದೆಗೆ ಚಂದ್ರಬಾಬು ನಾಯ್ಡು ಹೆಸರು ತೇಲಿಬಿಟ್ಟ ಎಚ್‍ಡಿಡಿ

    ಪ್ರಧಾನಿ ಹುದ್ದೆಗೆ ಚಂದ್ರಬಾಬು ನಾಯ್ಡು ಹೆಸರು ತೇಲಿಬಿಟ್ಟ ಎಚ್‍ಡಿಡಿ

    – ಎಲ್ಲ ವಿಪಕ್ಷಗಳನ್ನು ನಾಯ್ಡು ಸಂಘಟಿಸುವಲ್ಲಿ ಯಶಸ್ವಿಯಾಗಿದ್ದಾರೆ
    – ನಾನು ಪ್ರಧಾನಿ ಸ್ಥಾನದ ಆಕಾಂಕ್ಷಿಯಲ್ಲ: ನಾಯ್ಡು

    ಅಮರಾವತಿ: ಮಹಾಘಟಬಂಧನ್ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಈ ಮಧ್ಯೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರ ಹೆಸರನ್ನು ಪ್ರಧಾನಿ ಹುದ್ದೆಗೆ ತೇಲಿಬಿಟ್ಟಿದ್ದಾರೆ.

    ಆಂಧ್ರ ಪ್ರದೇಶದ ತಿರುವೂರಿನಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಮಾತನಾಡಿದ ಅವರು, ಚಂದ್ರಬಾಬು ನಾಯ್ಡು ಅತ್ಯಂತ ಕಠಿಣ ಸನ್ನಿವೇಶದಲ್ಲಿ ಮಹತ್ವದ ಜವಾಬ್ದಾರಿ ಹೊರಲು ಒಪ್ಪಿಕೊಂಡಿದ್ದಾರೆ. ಅವರು ಯಾಕೆ ದೇಶದ ಪ್ರಧಾನಿಯಾಗಬಾರದು ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಚಂದ್ರಬಾಬು ನಾಯ್ಡು ಅವರು, ನಾನು ಪ್ರಧಾನಿ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟನೆ ನೀಡಿದರು.

    ಎಚ್.ಡಿ.ದೇವೇಗೌಡ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಒಡ್ಡುವ ಬಲಿಷ್ಠ ನಾಯಕ ಯಾರು ಎನ್ನುವುದೇ ಪ್ರಶ್ನೆಯಾಗಿದೆ. ಮಾಧ್ಯಮಗಳಲ್ಲಿ ಇದೇ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಹೀಗಾಗಿ ಮೋದಿ ಅವರಿಗೆ ಪ್ರಬಲ ಪ್ರತಿಸ್ಪರ್ಧೆ ನೀಡಲು ಚಂದ್ರಬಾಬು ನಾಯ್ಡು ಸಮರ್ಥ ನಾಯಕರಾಗಿದ್ದಾರೆ ಎಂದು ಹೇಳಿದರು.

    ಪ್ರಧಾನಿ ಮೋದಿ ಪ್ರಜಾಪ್ರಭುತ್ವವನ್ನು ನಾಶ ಮಡಲು ಯತ್ನಿಸುತ್ತಿದ್ದಾರೆ. ಆದರೆ ಚಂದ್ರಬಾಬು ನಾಯ್ಡು ಅವರು ಪ್ರಜಾಸತ್ತಾತ್ಮಕ ರೀತಿಯಲ್ಲಿ ಮೋದಿ ಅವರನ್ನು ಎದುರಿಸಲು ಮುಂದಾಗಿದ್ದಾರೆ. ಇದರಿಂದಾಗಿ ಚಂದ್ರಬಾಬು ನಾಯ್ಡು ಪ್ರಧಾನಿಯಾಗಲು ಸಮರ್ಥರು ಎಂದು ತಿಳಿಸಿದರು.

    ಪ್ರಾದೇಶಿಕ ಪಕ್ಷಗಳು ಸ್ವಾರ್ಥ- ಸ್ವಹಿತಾಸಕ್ತಿ ಹೊಂದಿದ್ದು, ಒಗ್ಗೂಡುವುದು ಸುಲಭವಲ್ಲ ಎಂದು ಬಿಜೆಪಿಯವರು ದೂರುತ್ತಿದ್ದಾರೆ. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ 23 ಪಕ್ಷಗಳನ್ನು ಸೇರಿಸಿ ಎನ್‍ಡಿಎ ಮೈತ್ರಿಕೂಟ ಮುನ್ನಡೆಸಿದ್ದರು. ಆ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಕಾರ್ಗಿಲ್ ಯುದ್ಧವನ್ನೂ ವಾಜಪೇಯಿ ಗೆದ್ದರು. ಆದರೆ ಪ್ರಧಾನಿ ಮೋದಿ ಪ್ರಾದೇಶಿಕ ಪಕ್ಷಗಳ ಒಕ್ಕೂಟದ ಬಗ್ಗೆ ತಪ್ಪಾಗಿ ಬಿಂಬಿಸುತ್ತಿದ್ದಾರೆ ಎಂದು ದೂರಿದರು.

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನನ್ನು ಸೋಲಿಸಲು ಚಂದ್ರಬಾಬು ನಾಯ್ಡು ಅವರು ಅನೇಕ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದರು. ಈ ನಿಟ್ಟಿನಲ್ಲಿ ಮಹಾಘಟಬಂಧನ್ ರೂಪಿಸಲಾಗಿತ್ತು. ಆದರೆ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದನ್ನು ನಾಯಕರು ಸ್ಪಷ್ಟಪಡಿಸಿಲ್ಲ. ಬಿಎಸ್‍ಪಿ ನಾಯಕಿ ಮಯಾವತಿ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಸರುಗಳು ಪ್ರಧಾನಿ ರೇಸ್‍ನಲ್ಲಿ ಕೇಳಿ ಬರುತ್ತಿವೆ.

    ಆಂಧ್ರ ಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಸ್ಥಾನಗಳಿದ್ದು, ಒಂದೇ ಹಂತದಲ್ಲಿ ಏಪ್ರಿಲ್ 11ರಂದು ಮತದಾನ ನಡೆಯಲಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರ ವೈಎಸ್‍ಆರ್ ಪಕ್ಷವು 8 ಹಾಗೂ ಬಿಜೆಪಿ 2 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು.

  • ಚುನಾವಣಾ ಪ್ರಚಾರದಲ್ಲಿ ಗಲಾಟೆ: ಅಭ್ಯರ್ಥಿ ಕಾಲು ಸೀಳಿದ ಅಂಗರಕ್ಷಕನ ಗುಂಡು

    ಚುನಾವಣಾ ಪ್ರಚಾರದಲ್ಲಿ ಗಲಾಟೆ: ಅಭ್ಯರ್ಥಿ ಕಾಲು ಸೀಳಿದ ಅಂಗರಕ್ಷಕನ ಗುಂಡು

    ಕರ್ನೂಲ್: ಚುನಾವಣಾ ಪ್ರಚಾರದ ವೇಳೆ ಗಲಾಟೆ ಸಂಭವಿಸಿದ್ದಕ್ಕೆ ಅಂಗರಕ್ಷಕ ನೆಲಕ್ಕೆ ಹಾರಿಸಿದ ಗುಂಡು ಅಭ್ಯರ್ಥಿ ಹಾಗೂ ವ್ಯಕ್ತಿಯೊಬ್ಬರಿಗೆ ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕಗ್ಗಲ್ ಗ್ರಾಮದಲ್ಲಿ ನಡೆದಿದೆ.

    ತೆಲುಗುದೇಶಂ ಪಕ್ಷದ (ಟಿಡಿಪಿ) ತಿಕ್ಕಾರೆಡ್ಡಿ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಅಭ್ಯರ್ಥಿ. ಮಂತ್ರಾಲಯ ವಿಧಾನಸಭಾ ಕ್ಷೇತ್ರದಿಂದ ತಿಕ್ಕಾರೆಡ್ಡಿ ಅವರು ಇಂದು ಕಗ್ಗಲ್ ಗ್ರಾಮದಲ್ಲಿ ಪ್ರಚಾರ ನಡೆಸಿದ್ದರು. ಈ ವೇಳೆ ಘಟನೆ ಸಂಭವಿಸಿದೆ.

    ಆಗಿದ್ದೇನು?:
    ಮಂತ್ರಾಲಯ ವಿಧಾನಸಭಾ ಕ್ಷೇತ್ರದ ಮತದಾನ ಏಪ್ರಿಲ್ 11ಕ್ಕೆ ನಡೆಯಲಿದೆ. ಹೀಗಾಗಿ ಟಿಡಿಪಿ ಕಾರ್ಯಕರ್ತರು ಹಾಗೂ ಅಭ್ಯರ್ಥಿ ತಿಕ್ಕಾರೆಡ್ಡಿ ಪ್ರಚಾರ ಮಾಡುತ್ತಿದ್ದರು. ಈ ವೇಳೆ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಟಿಡಿಪಿ ಬಾವುಟಗಳನ್ನು ಕಿತ್ತು ಹಾಕಿದ್ದಾರೆ. ಇದರಿಂದಾಗಿ ಎರಡೂ ಪಕ್ಷಗಳ ಕಾರ್ಯಕರ್ತರ ಮಧ್ಯೆ ಜಗಳವಾಗಿದೆ.

    ಟಿಡಿಎಸ್ ಅಭ್ಯರ್ಥಿ ತಿಕ್ಕಾರೆಡ್ಡಿ ಜಗಳವನ್ನ ಬಿಡಿಸಲು ಹೋದಾಗ ಪರಸ್ಥಿತಿ ಕೈಮೀರಿತ್ತು. ತಕ್ಷಣವೇ ತಿಕ್ಕಾರೆಡ್ಡಿ ಅಂಗರಕ್ಷಕ ಎರಡು ಸುತ್ತು ಗಾಳಿಯಲ್ಲಿ ಹಾಗೂ ಮೂರು ಸುತ್ತು ನೆಲಕ್ಕೆ ಗುಂಡು ಹಾರಿಸಿದ್ದಾರೆ. ನೆಲಕ್ಕೆ ಹಾರಿಸಿದ ಗುಂಡುಗಳು ತಿಕ್ಕಾರೆಡ್ಡಿ ಹಾಗೂ ಎಎಸ್‍ಐ ವೇಣುಗೋಪಾಲ್ ಅವರಿಗೆ ತಗುಲಿ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಈ ಘಟನೆಯಿಂದಾಗಿ ಕಗ್ಗಲ್ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸ್ ಬಿಗಿಬಂದೋಬಸ್ತ್ ಒದಗಿಸಲಾಗಿದೆ. ಈ ಸಂಬಂಧ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೈಎಸ್ ಜಗನ್ ಚಿಕ್ಕಪ್ಪ ಬರ್ಬರ ಹತ್ಯೆ

    ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೈಎಸ್ ಜಗನ್ ಚಿಕ್ಕಪ್ಪ ಬರ್ಬರ ಹತ್ಯೆ

    ಹೈದರಾಬಾದ್: ಆಂಧ್ರ ಪ್ರದೇಶದ ಮಾಜಿ ಸಿಎಂ ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಕಿರಿಯ ಸಹೋದರ ವೈ.ಎಸ್.ವಿವೇಕಾನಂದ ರೆಡ್ಡಿ (68) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಡೆದಿದೆ.

    ವೈಎಸ್‍ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಚಿಕ್ಕಪ್ಪ ವೈ.ಎಸ್.ವಿವೇಕಾನಂದ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಪುಲಿವೆಂಡುಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈಗ ಲಭ್ಯವಾಗಿರುವ ವಿಧಿವಿಜ್ಞಾನ ಪರೀಕ್ಷೆಯ ಫಲಿತಾಂಶದಲ್ಲಿ ವೈ.ಎಸ್.ವಿವೇಕಾನಂದ ಅವರನ್ನು ಕೊಲೆ ಮಾಡಿರುವುದು ಸ್ಪಷ್ಟವಾಗಿದೆ.

    ವೈ.ಎಸ್.ವಿವೇಕಾನಂದ ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಕೊಲೆಯಾದ ಮನೆಯ ಬೆಡ್‍ರೂಮ್ ಹಾಗೂ ಸ್ನಾನದ ಕೋಣೆಯಲ್ಲಿ ರಕ್ತ ಬಿದ್ದಿದ್ದು, ಕೊಲೆ ಶಂಕೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಮೃತ ದೇಹದ ತಲೆಯ ಮೇಲೆ 2 ಹಾಗೂ ದೇಹದ ಮೇಲೆ 7 ಗಾಯಗಳಾಗಿದ್ದು ಮರಣೋತ್ತರ ಪರೀಕ್ಷೆ ವೇಳೆ ಬೆಳಕಿಗೆ ಬಂದಿದೆ.

    ಆಗಿದ್ದೇನು?:
    ವೈ.ಎಸ್.ವಿವೇಕಾನಂದ ರೆಡ್ಡಿ ಅವರ ಪತ್ನಿ ಅಮೆರಿಕದಲ್ಲಿರುವ ಮಗಳು ಹಾಗೂ ಅಳಿಯನ ಜೊತೆಗೆ ಇದ್ದಾರೆ. ಹೀಗಾಗಿ ವಿವೇಕಾನಂದ ಅವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ವೈ.ಎಸ್.ವಿವೇಕಾನಂದ ಅವರು ವೈಎಸ್‍ಆರ್ ಅಭ್ಯರ್ಥಿ ಎಸ್.ರಘುರಾಮಿ ರೆಡ್ಡಿ ಪರವಾಗಿ ಪ್ರಚಾರ ಮಾಡಲು ಮೈದುಕೂರು ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ತೆರಳಿದ್ದರು. ಪ್ರಚಾರ ಮುಗಿಸಿಕೊಂಡು ಬಂದು ರಾತ್ರಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ದೃಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

    ವಿವೇಕಾನಂದ ರೆಡ್ಡಿ ಅವರ ಸೋದರಳಿಯ ಹಾಗೂ ಮಾಜಿ ಶಾಸಕ ಐ.ಎಸ್.ಅವಿನಾಶ್ ರೆಡ್ಡಿ ಮಾತನಾಡಿ, ಇದು ಅನುಮಾನಾಸ್ಪದ ಸಾವಾಗಿದೆ. ದೇಹದಲ್ಲಿ ಹರಿತವಾದ ಚಾಕುವಿನಿಂದ ಇರಿದಿರುವ ಗಾಯಗಳು ಕಂಡು ಬಂದಿವೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.

    ವಿವೇಕಾನಂದ ರೆಡ್ಡಿ ಅವರ ಮೃತ ದೇಹದಲ್ಲಿ 7 ಇರಿದ ಗಾಯಗಳು ಹಾಗೂ ತಲೆಯಲ್ಲಿ 2 ಗಾಯಗಳು ಪತ್ತೆಯಾಗಿವೆ. ಇದು ಸಹಜ ಸಾವಲ್ಲ ಹತ್ಯೆ ಎಂಬುದನ್ನು ಕಡಪ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇಶ್ ಶರ್ಮಾ ಖಚಿತಪಡಿಸಿದ್ದರು. ಕೊಲೆ ತನಿಖೆ ನಡೆಸಲು ಆಂಧ್ರಪ್ರದೇಶ ಸರ್ಕಾರವು ಹಿರಿಯ ಪೊಲೀಸ್ ಅಧಿಕಾರಿ ಅನಿತ್ ಗಾರ್ಗ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv