Tag: ಆಂಡ್ರಾಯ್ಡ್ ಅಪ್ಲಿಕೇಷನ್

  • ಆಂಡ್ರಾಯ್ಡ್ ಅಪ್ಲಿಕೇಷನ್‍ಗಳಲ್ಲಿ ಭದ್ರತೆ ನಿಯಮ ಉಲ್ಲಂಘಿಸಿದ್ದಕ್ಕೆ ದಾಖಲೆಯ ದಂಡ ತೆತ್ತ ಗೂಗಲ್!

    ಆಂಡ್ರಾಯ್ಡ್ ಅಪ್ಲಿಕೇಷನ್‍ಗಳಲ್ಲಿ ಭದ್ರತೆ ನಿಯಮ ಉಲ್ಲಂಘಿಸಿದ್ದಕ್ಕೆ ದಾಖಲೆಯ ದಂಡ ತೆತ್ತ ಗೂಗಲ್!

    ಲಂಡನ್: ಭದ್ರತಾ ನಿಯಮ ಉಲ್ಲಂಘಿಸಿದ ಗೂಗಲ್ ಕಂಪೆನಿಯ ವಿರುದ್ಧ ಯುರೋಪಿಯನ್ ಒಕ್ಕೂಟ ಸಂಸ್ಥೆಗಳು ದಾಖಲೆಯ ಪ್ರಮಾಣದಲ್ಲಿ ದಂಡ ವಿಧಿಸಿವೆ.

    ಈ ಕುರಿತಂತೆ ಇಂದು ಬೆಳಗ್ಗೆ 6 ಗಂಟೆಗೆ ಯುರೋಪಿಯನ್ ಯೂನಿಯನ್ ಕಮಿಷನರ್ ಗೂಗಲ್ ಕಂಪೆನಿಗೆ 4.3 ಬಿಲಿಯನ್ ಯುರೊ (3 ಲಕ್ಷ 42 ಸಾವಿರ ಕೋಟಿ) ದಂಡ ವಿಧಿಸಿದೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಮೊತ್ತದ ದಂಡ ಇದಾಗಿದೆ. ಇಂದು ಯುರೋಪಿಯನ್ ಒಕ್ಕೂಟ ಸಂಸ್ಥೆ ತನ್ನ ಟ್ವಿಟ್ಟರ್ ನಲ್ಲಿ ಗೂಗಲ್ ದಂಡ ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

    ಗೂಗಲ್ ತನ್ನ ಅಂಡ್ರಾಯ್ಡ್ ಹಾಗೂ ಸರ್ಚ್ ಇಂಜಿನ್ ಗಳಲ್ಲಿ ಭದ್ರತಾ ಲೋಪ ಎಸಗಿರುವುದಲ್ಲದೇ, ತನ್ನ ಅಂಡ್ರಾಯ್ಡ್ ಅಪ್ಲಿಕೇಶನ್‍ಗಳ ಮೂಲಕ ಬಳಕೆದಾರರ ಮಾಹಿತಿಯನ್ನು ಕಾಪಾಡುವಲ್ಲಿ ವಿಫಲವಾಗಿತ್ತು. ಅಲ್ಲದೇ ಮೂರನೇ ವ್ಯಕ್ತಿಗೆ ಗ್ರಾಹಕರ ಮಾಹಿತಿಗಳನ್ನು ರವಾನಿಸಿದ್ದರ ಕುರಿತು ತನಿಖೆಯಲ್ಲಿ ದೃಢಪಟ್ಟಿದೆ.

    ಯುರೋಪ್‍ನಲ್ಲಿ ನೋಕಿಯಾ, ಮೈಕ್ರೋಸಾಪ್ಟ್ ಹಾಗೂ ಒರ್ಯಾಕಲ್ ಕಂಪೆನಿಯ ಹಿಂದಿಕ್ಕುವ ಬರದಲ್ಲಿ ಗೂಗಲ್ ತನ್ನ ಆಂಡ್ರಾಯ್ಡ್ ಓಎಸ್ ಗಳಲ್ಲಿ ಭದ್ರತಾ ಲೋಪ ಎಸಗಿರುವುದು ಕಂಡು ಬಂದಿದೆ. ಅಲ್ಲದೇ ಯುರೋಪಿಯನ್ ದೇಶಗಳಲ್ಲಿ ಏಕಸ್ವಾಮ್ಯತೆ ಪಡೆಯುವ ದೃಷ್ಟಿಯಿಂದ ಈ ರೀತಿ ಮಾಡಿದೆ ಎಂದು ವರದಿಯಾಗಿದೆ. ಇದರಿಂದಾಗಿ ಭಾರೀ ದಂಡಕ್ಕೆ ಗೂಗಲ್ ಗುರಿಯಾಗಿದೆ.

    ಗೂಗಲ್ ಪ್ರತಿಯೊಬ್ಬರಿಗೂ ಆಂಡ್ರಾಯ್ಡ್ ನ ನೂತನ ಫೀಚರ್ ಗಳುಳ್ಳ ಸೌಲಭ್ಯಗಳನ್ನು ಕಡಿಮೆ ದರದಲ್ಲಿ ಪರಿಚಯಿಸಿದೆ. ಯುರೋಪಿಯನ್ ಒಕ್ಕೂಟ ನೀಡಿದ ತೀರ್ಪನ್ನು ಮತ್ತೊಮ್ಮೆ ಮೇಲ್ಮನವಿ ಸಲ್ಲಿಸುವುದಾಗಿ ಗೂಗಲ್ ವಕ್ತಾರರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

    ಈ ಮೊದಲೂ ಸಹ ಯೂರೋಪಿಯನ್ ಒಕ್ಕೂಟ ಸಂಸ್ಥೆಗಳು ಭದ್ರತಾ ವೈಫಲ್ಯದಿಂದ ವಿಶ್ವದ ಹಲವು ಪ್ರಮುಖ ಸಂಸ್ಥೆಗಳಿಂದ ದಂಡ ವಸೂಲಿ ಮಾಡಿತ್ತು. ಈ ಮೊದಲು ಗೂಗಲ್ ಸಂಸ್ಥೆಯೇ ಮೊದಲನೇ ಸ್ಥಾನದಲ್ಲಿತ್ತು. ಈಗ ಮತ್ತೊಮ್ಮೆ ಭಾರಿ ದಂಡಕ್ಕೆ ಗುರಿಯಾಗಿದೆ.

     

    ಯುರೋಪಿಯನ್ ಒಕ್ಕೂಟ ಸಂಸ್ಥೆಗಳು ದಂಡ ವಸೂಲಾತಿ ವರದಿಯ ಪ್ರಕಾರ 2018 ರಲ್ಲಿ ಗೂಗಲ್ 4.3 ಬಿಲಿಯನ್ ಯುರೊ, 2017 ರಲ್ಲಿ ಗೂಗಲ್ 2.4 ಬಿಲಿಯನ್ ಯುರೋ, 2009 ರಲ್ಲಿ ಇಂಟೆಲ್ 1.06 ಬಿಲಿಯನ್ ಯುರೊ, 2008 ರಲ್ಲಿ ಮೈಕ್ರೋಸಾಫ್ಟ್ 899 ಮಿಲಿಯನ್ ಯುರೊ, 2013 ರಲ್ಲಿ ಮೈಕ್ರೋಸಾಪ್ಟ್ 561 ಮಿಲಿಯನ್ ಯುರೋ, 2017 ರಲ್ಲಿ ಫೇಸ್‍ಬುಕ್ 110 ಮಿಲಿಯನ್ ಯುರೊ ದಂಡ ಪಾವತಿಸಿದ ಪ್ರಮುಖ ಸಂಸ್ಥೆಗಳಾಗಿವೆ.