Tag: ಆಂಜನಾದ್ರಿ ಪರ್ವತ

  • ಅಂಜನಾದ್ರಿ ಪರ್ವತ ಸರ್ಕಾರದ ವಶಕ್ಕೆ – ಕಾಣಿಕೆ ಡಬ್ಬಿಯಲ್ಲಿ ಸಿಕ್ಕಿದ್ದು 200 ರೂ., ಅರ್ಧ ಕೆ.ಜಿ ಬೆಳ್ಳಿ!

    ಅಂಜನಾದ್ರಿ ಪರ್ವತ ಸರ್ಕಾರದ ವಶಕ್ಕೆ – ಕಾಣಿಕೆ ಡಬ್ಬಿಯಲ್ಲಿ ಸಿಕ್ಕಿದ್ದು 200 ರೂ., ಅರ್ಧ ಕೆ.ಜಿ ಬೆಳ್ಳಿ!

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕು ಆನೆಗೊಂದಿ ಸಮೀಪದ ಅಂಜನಾದ್ರಿ ಪರ್ವತವನ್ನು ಸರ್ಕಾರ ವಶಕ್ಕೆ ಪಡೆದ ಬೆನ್ನಲ್ಲೇ ಮತ್ತೊಂದು ಚರ್ಚೆ ಆರಂಭವಾಗಿದೆ.

    ಅಂಜನಾದ್ರಿ ಪರ್ವತದಲ್ಲಿನ ಹನುಮಂತನ ದೇವಸ್ಥಾನದ ಮೂರ್ತಿ ಮೇಲೆ ಸಾಕಷ್ಟು ಚಿನ್ನ-ಬೆಳ್ಳಿಯ ಅಭರಣ ಇತ್ತು. ಆದ್ರೆ, ತಹಶೀಲ್ದಾರ್ ಚಂದ್ರಕಾಂತ ದೇವಸ್ಥಾನ ವಶಕ್ಕೆ ಪಡೆಯುವ ವೇಳೆ, ಕಾಣಿಕೆ ಪೆಟ್ಟಿಗೆಯಲ್ಲಿ ಕೇವಲ 200ರೂ. ಪುಡಿಗಾಸು ಮತ್ತು ಅರ್ಧ ಕೆ.ಜಿಯಷ್ಟು ಬೆಳ್ಳಿ ಮಾತ್ರ ವಶಕ್ಕೆ ಪಡೆದಿದ್ದಾರೆ.

    ಆದ್ರೆ, ಮೂರ್ತಿ ಅಲಂಕಾರಕ್ಕೆ ಬಳಸುತ್ತಿದ್ದ ಚಿನ್ನ, ಬೆಳ್ಳಿಯ ಆಭರಣಗಳು ಏನಾದವು ಎಂಬ ಪ್ರಶ್ನೆ ಕಾಡ್ತಿದೆ. ಟ್ರಸ್ಟ್ ಪದಾಧಿಕಾರಿಗಳು ಆಭರಣವನ್ನು ದೋಚಿದ್ರಾ? ಅಥವಾ ವಿದ್ಯಾದಾಸ ಬಾಬ ಕಳ್ಳತನ ಮಾಡಿದ್ದನಾ ಎಂಬ ಅನುಮಾನ ಕಾಡ್ತಿದೆ. ಸಂಪೂರ್ಣ ತನಿಖೆಯಿಂದ ಸತ್ಯಾಂಶ ಹೊರ ಬರಬೇಕಿದೆ.

    ಸರ್ಕಾರದ ವಶಕ್ಕೆ ಯಾಕೆ:
    ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪ ಹನುಮಂತ ಹುಟ್ಟಿದ ಸ್ಥಳ ಎನ್ನಲಾದ ಅಂಜನಾದ್ರಿ ಬೆಟ್ಟವನ್ನು ಪೂಜೆಯ ಹಕ್ಕಿನ ವಿವಾದ ನಡೆದ ಬೆನ್ನಲ್ಲೇ ಮುಜರಾಯಿ ಇಲಾಖೆಗೆ ಪಡೆದುಕೊಳ್ಳುವಂತೆ ಡಿಸಿ ಆದೇಶಿಸಿದ್ದರು. ಕಳೆದ ಎರಡು ವರ್ಷದಿಂದ ಪೂಜೆಯ ವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಅರ್ಚಕ ವಿದ್ಯಾದಾಸ ಬಾಬಾ ಹಾಗೂ ಸ್ಥಳೀಯ ಆಡಳಿತ ಮಂಡಳಿ ನಡುವೆ ಭಿನ್ನಾಭಿಪ್ರಾಯ ತಲೆದೂರಿತ್ತು. ಈ ಕಾರಣಕ್ಕೆ ಕೊಪ್ಪಳ ಡಿಸಿ ಎಂ. ಕನಗವಲ್ಲಿಯವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

    ಅಲ್ಲದೇ ಕಳೆದ 2016 ಮತ್ತು 2018ರಲ್ಲಿ ಉಂಟಾಗಿದ್ದ ವಿವಾದದಿಂದಾಗಿ ಬೆಟ್ಟದಲ್ಲಿ ಕೋಮು-ಗಲಭೆ ಘರ್ಷಣೆಗಳು ನಡೆದಿದ್ದವು. ಈ ಹಿನ್ನೆಲೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿದ್ದು, ಬೆಟ್ಟವನ್ನು ಸರ್ಕಾರದ ಸುಪರ್ದಿಗೆ ಪಡೆಯುವುದು ಸೂಕ್ತ ಎಂದು ಜಿಲ್ಲಾಧಿಕಾರಿಗೆ ಎಸ್ಪಿ ಅನೂಪ್ ಶೆಟ್ಟಿ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಮಾಡಿ ದೇವಸ್ಥಾನವನ್ನು ವಶಕ್ಕೆ ಪಡೆಯುವಂತೆ ತಹಶೀಲ್ದಾರ್ ಚಂದ್ರಕಾಂತ್ ಅವರಿಗೆ ಡಿಸಿ ಎಂ. ಕನಗವಲ್ಲಿ ಆದೇಶಿಸಿದ್ದಾರೆ. ಅಲ್ಲದೇ ದೇವಸ್ಥಾನಕ್ಕೆ ಆಡಳಿತಾಧಿಕಾರಿಯನ್ನಾಗಿ ಹುಲುಗಿ ದೇವಸ್ಥಾನದ ಸಿ.ಎಚ್. ಚಂದ್ರಮೌಳಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.