Tag: ಆಂಗ್ಲ ಮಾಧ್ಯಮ

  • ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಿದ್ರೆ ಇಂಗ್ಲೆಂಡಿಗೆ ಹೋಗಲಿ: ಪಾಪು ಆಕ್ರೋಶ

    ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಿದ್ರೆ ಇಂಗ್ಲೆಂಡಿಗೆ ಹೋಗಲಿ: ಪಾಪು ಆಕ್ರೋಶ

    ಧಾರವಾಡ: ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಾದರೆ ಇಂಗ್ಲೆಂಡಿಗೆ ಹೋಗಲಿ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಸಾಹಿತಿಗಳು ಮತ್ತು ಹೋರಾಟಗಾರರು ಧರಣಿ ನಡೆಸಿ ಆಕ್ರೋಶ ಹೋರಹಾಕಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಹಿರಿಯ ಸಾಹಿತಿ ಪಾಟೀಲ್ ಪುಟ್ಟಪ್ಪ ಅವರು, ರಾಜ್ಯ ಸರ್ಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿರುವ ಹಿನ್ನೆಲೆ ಕಿಡಿಕಾರಿದರು. ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್ ಮಾಧ್ಯಮವೇ ಬೇಕಾದರೆ ಇಂಗ್ಲೆಂಡಿಗೆ ಹೋಗಲಿ ಎಂದು ಹರಿಹಾಯ್ದರು.

    ಕನ್ನಡ ಬೇಕು ಎನ್ನುವವರಿಗೆ ಮಾತ್ರ ಇಲ್ಲಿ ಸ್ಥಳ ಇದೆ. ಕನ್ನಡ ಬೇಡ ಎನ್ನುವವರಿಗೆ ಇಲ್ಲಿ ಸ್ಥಳ ಇಲ್ಲ. ಕನ್ನಡ ಯಾರಿಗೆ ಬೇಕಾಗಿದೆ ಅವರು ಕರ್ನಾಟಕದಲ್ಲಿ ಇರುತ್ತಾರೆ. ಯಾರಿಗೆ ಬೇಡವಾಗಿದೆಯೋ ಅವರು ಕರ್ನಾಟಕ ಬಿಟ್ಟು ಇಂಗ್ಲೆಂಡಿಗೆ ಹೋಗಲಿ. ಇನ್ನು ಕನ್ನಡ ತಾಯಿ ಬಗ್ಗೆ ನಾವು ಘೋಷಣೆ ಕೂಗುತ್ತೇವೆ. ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ನಾವು ಸಹಿಸುವುದಿಲ್ಲ ಸರ್ಕಾರದ ಇಂಗ್ಲೀಷ್ ಮಾಧ್ಯಮ ನೀತಿ ವಿರೋಧ ಮಾಡುತ್ತೇವೆ ಎಂದು ಕಿಡಿಕಾರಿದರು.

    ಪ್ರಸಕ್ತ ರಾಜಕೀಯ ವಿದ್ಯಮಾನಗಳ ವಿಚಾರವಾಗಿ ಮಾತನಾಡಿ, ಇವರಿಗೆ ಜನರ ಬಗ್ಗೆ ನಿಷ್ಠೆ ಇದ್ದರೆ ಈಗ ನಡೆದಿರುವುದನ್ನು ಬಿಟ್ಟು ಬಿಡಬೇಕು. ಕನ್ನಡ ಹಾಗೂ ಕರ್ನಾಟಕಕ್ಕಾಗಿ ಹೋರಾಟ ಮಾಡಬೇಕು. ಇಲ್ಲದೇ ಹೋದರೆ ಜನರ ಬಗ್ಗೆ ಕನಿಕರ ಇಲ್ಲ ಅನಿಸುತ್ತದೆ ಎಂದು ಪಾಟೀಲ್ ಪುಟ್ಟಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

  • ಕನ್ನಡ ಸಮ್ಮೇಳನದಲ್ಲಿ ಚಂಪಾ ಹೇಳಿಕೆಗೆ ಸಿಎಂ ಗರಂ!

    ಕನ್ನಡ ಸಮ್ಮೇಳನದಲ್ಲಿ ಚಂಪಾ ಹೇಳಿಕೆಗೆ ಸಿಎಂ ಗರಂ!

    ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ-ಇಂಗ್ಲಿಷ್ ಶಾಲೆಗಳ ಬಗ್ಗೆ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಮಾತಿಗೆ ಸಿಎಂ ಕುಮಾರಸ್ವಾಮಿ ಗರಂ ಆದ ಘಟನೆ ನಡೆದಿದೆ.

    ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಗಳನ್ನ ಹೇಗೆ ಸಬಲೀಕರಣ ಮಾಡಬೇಕು ಅಂತ ಹಿಂದಿನ ಸಿಎಂಗೆ ಹೇಳಿದ್ದೆವು. ಮೈತ್ರಿ ಸರ್ಕಾರಕ್ಕೆ ಮೈತ್ರಿ ಎಂಬ ಧರ್ಮ ಇದ್ದರೆ ಹಳೇ ಯೋಜನೆಗಳನ್ನ ಮುಂದುವರಿಸುವುದು ಧರ್ಮ ಅಂದ್ರು.

    ಇದಕ್ಕೆ ಸಿಡಿಮಿಡಿಗೊಂಡ ಸಿಎಂ, ಮೈತ್ರಿ ಧರ್ಮ ಪಾಲನೆ ಮಾಡಲು ಸಿದ್ಧನಿದ್ದೇನೆ. ಕಂಬಾರರು ಭಾಷಣದಲ್ಲಿ ಕೊಟ್ಟ ಮಾಹಿತಿಯಂತೆ ಭಾಷೆ ರಕ್ಷಣೆಗೆ ನಾನು ಬದ್ಧ. ನಿರ್ಣಯ ಮಾಡಿ, ಕಾನೂನು ತರೋಣ ಎಂದು ಹೇಳಿದರು. ಇದೇ ವೇಳೆ, ಬಡ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ನೀಡುವುದರ ಹಿಂದೆ ಬಡಮಕ್ಕಳ ಬಡತನ ಹೋಗಲಾಡಿಸುವ ಉದ್ದೇಶ ಇದೆ. ಐದಾರು ದಿನಗಳಲ್ಲಿ ಸಮಸ್ಯೆ ಬಗ್ಗೆ ಸಭೆ ಕರೆಯುತ್ತೇನೆ ಎಂದು ಹೇಳಿದರು.

    11 ಗಂಟೆಗೆ ಬರಬೇಕಿದ್ದ ಸಿಎಂ 3 ಗಂಟೆ ತಡವಾಗಿ ಆಗಮಿಸಿದರು. ಇದಕ್ಕೆ ಸಂಸದ ಪ್ರಹ್ಲಾದ್ ಜೋಷಿ ಆಕ್ಷೇಪ ವ್ಯಕ್ತಪಡಿಸಿದ್ರು. ಉದ್ಘಾಟನೆಗೆ ಮುನ್ನ ಸಮ್ಮೇಳನದ ಅಧ್ಯಕ್ಷರಾದ ಚಂದ್ರಶೇಖರ ಕಂಬಾರ ದಂಪತಿ, ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಸುಳ್ವಾಡಿ ವಿಷ ಪ್ರಸಾದ ದುರಂತದಿಂದ ಎಚ್ಚೆತ್ತಿರುವ ಸರ್ಕಾರ ಸಮ್ಮೇಳನದಲ್ಲಿ ಊಟದ ವ್ಯವಸ್ಥೆಯ ಬಗ್ಗೆ ನಿಗಾ ವಹಿಸಿದೆ. ಅಕ್ಷರ ಜಾತ್ರೆಗೆ ಬರುವ ಹೊಸ ಸಾಹಿತ್ಯಾಸಕ್ತರಿಗೆ ನೋಂದಣಿ ಬಂದ್ ಮಾಡಲಾಗಿತ್ತು. ಈ ವಿಚಾರಕ್ಕೆ ಸಾಹಿತ್ಯ ಆಸಕ್ತರು ಪ್ರತಿಭಟಿಸಿದರು.

    ಈ ಮಧ್ಯೆ, ಒಂದು ಸಾವಿರ ಇಂಗ್ಲೀಷ್ ಮಾಧ್ಯಮ ಶಾಲೆ ತೆರೆಯುವ ಪ್ರಸ್ತಾಪ ಸರ್ಕಾರದ ಮುಂದಿದೆ. ಇದಕ್ಕೆ ಸಾಹಿತಿಗಳ ವಿರೋಧ ಇದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿದ್ರೇ ಆಯ್ತಾ? ಉನ್ನತ ಶಿಕ್ಷಣ ಸಚಿವ ಜಿಟಿಡಿ ಪ್ರಶ್ನೆ

    ನಿಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿದ್ರೇ ಆಯ್ತಾ? ಉನ್ನತ ಶಿಕ್ಷಣ ಸಚಿವ ಜಿಟಿಡಿ ಪ್ರಶ್ನೆ

    ಬಳ್ಳಾರಿ: ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಬೇಡ. ಕರ್ನಾಟಕದಲ್ಲಿ ಕನ್ನಡವೇ ಸೌರ್ವಭಾಮ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿರುವ ಸಚಿವ ಜಿಟಿ ದೇವೇಗೌಡರು, ಹಂಪಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರನ್ನು ಪ್ರಶ್ನೆ ಮಾಡಿದ್ದಾರೆ.

    ಹಂಪಿ ವಿವಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಅವರು, ನಿಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ರೆ ಆಯ್ತಾ?. ಸರ್ಕಾರಿ ಶಾಲೆಗೆ ಬರುವ ಮಕ್ಕಳ ಸ್ಥಿತಿ ಏನಾಗಬೇಕು ಎಂದು ಪ್ರಾಧ್ಯಾಪಕರನ್ನು ಪ್ರಶ್ನೆ ಮಾಡಿದರು.

    ಸಿದ್ದರಾಮಯ್ಯ ಅವರಿಗೆ ಇಂಗ್ಲಿಷ್ ಮೇಲೆ ಇರುವ ವ್ಯಾಮೋಹದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವರು ಇಂಗ್ಲಿಷ್ ಪ್ರೇಮದ ಬಗ್ಗೆ ಪ್ರಶ್ನೆ ಮಾಡಿ ಹಳ್ಳಿಗಳಲ್ಲಿನ, ಬಡ ಮಕ್ಕಳ ಸ್ಥಿತಿಯನ್ನು ಪ್ರಸ್ತಾಪ ಮಾಡಿ ಟಾಂಗ್ ನೀಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಪ್ರಾಧ್ಯಾಪರ ಬಗ್ಗೆಯೂ ಅಸಮಾಧಾನ ಹೊರಹಾಕಿದ ಅವರು, ಲಕ್ಷಗಟ್ಟಲೆ ಸಂಬಳ ತೆಗೆದುಕೊಳ್ಳುತ್ತೀರಾ. ನೀವು ಕಲಿತಿದ್ದನ್ನು ಮಕ್ಕಳಿಗೆ ಕಲಿಸ್ರಪ್ಪಾ. ಶಿಕ್ಷಕ ವೃತ್ತಿ ಸಂಬಳಕ್ಕಾಗಿ ಮಾಡೋದಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವಾಗಬೇಕಿದೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಸಮ್ಮಿಶ್ರ ಸರ್ಕಾರದ ಅಸಮಾಧಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕಾಂಗ್ರೆಸ್ ಶಾಸಕ ರಮೇಶ್ ಅವರಿಗೆ ಸದ್ಯ ಸಿಟ್ಟು, ಕೋಪವಿದೆ. ಅದನ್ನು ಶಮನ ಮಾಡುತ್ತೇವೆ. ಒಂದೇ ಪಕ್ಷದ ಸರ್ಕಾರವಿದ್ದಾಗಲೇ ಸಣ್ಣಪುಟ್ಟ ತೊಂದರೆ ಇರುತ್ತವೆ. ಸಮ್ಮಿಶ್ರ ಸರ್ಕಾರದಲ್ಲಿರುವ ಸಮಸ್ಯೆ ಬಗೆಹರಿಸುತ್ತೇವೆ. ಅದೆಲ್ಲವನ್ನು ಕುಮಾರಸ್ವಾಮಿ, ಎಚ್‍ಡಿ ದೇವೇಗೌಡ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಬಗೆಹರಿಸುತ್ತಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv